ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ  

ಮು೦ದಿನ 10 ಸುದ್ದಿಗಳು


ಸೆಪ್ಟೆ೦ಬರ್ 10 , 2016

ಮಂದಾರ್ತಿಯಲ್ಲಿ ಗುರುವಂದನೆ ಮತ್ತು ಕಲಾವಂದನೆ

ಮಂದಾರ್ತಿ : ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿ ಮತ್ತು ನೀರಜಾ ಉದಯಕುಮಾರ್ ದಂಪತಿಗಳ ವೈವಾಹಿಕ ಜೀವನದ ರಜತ ಸಂಭ್ರಮದಂದು ಈರ್ವರು ಅದ್ಯಾಪಕರಿಗೆ ಗುರುವಂದನೆ, ಮತ್ತು ಮೂವರು ಕಲಾಸಾದಕರನ್ನು ಗೌರವಿಸಲಾಯಿತು. ಗೌರಿ ಚತುರ್ಥಿಯ ಶುಭದಿನದಂದು ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಪೂರ್ವಾಹ್ನ ಪ್ರಧಾನ ಅರ್ಚಕ ಶ್ರೀಪತಿ ಅಡಿಗರ ನೇತೃತ್ವದಲ್ಲಿ ಚಂಡಿಕಾಯಾಗ ಸಂಪನ್ನಗೊಂಡಿತು. ಅಪರಾಹ್ನ ಶ್ರೀ ಕ್ಷೇತ್ರದ ಧರ್ಮದರ್ಶಿ ಎಚ್ ಧನಂಜಯ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಗುರುವಂದನೆ-ಕಲಾವಂದನೆ, ಗೃಹಿಣಿಯರಿಗೆ ಗೌರವಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ನೆರವೇರಿತು.

ಮಂದಾರ್ತಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ನಿವೃತ್ತ ಕನ್ನಡ ಅಧ್ಯಾಪಕ ಕೆ. ಬಲರಾಮ ಕಲ್ಕೂರ ಮತ್ತು ಗಣಿತ ಅದ್ಯಾಪಕ ಸುಬ್ರಹ್ಮಣ್ಯ ಪಡಿತ್ತಾಯ ಇವರನ್ನು ಉದಯ ಕುಮಾರ ಶೆಟ್ಟರ ಪರವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕೋಟ ಶ್ರೀಧರ ಹಂದೆಯವರು ಸನ್ಮಾನಿಸಿದರು. ಯಕ್ಷಗಾನ ಕಲಾಸಂಘಟಕ ಎಸ್. ವಿಶ್ವೇಶ್ವರ ಭಟ್, ಶ್ರೀ ಮಂದಾರ್ತಿ ಮೇಳದ ಹಿರಿಯ ಕಲಾವಿದ ಆಜ್ರಿ ಗೋಪಾಲ ಗಾಣಿಗ ಮತ್ತು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನರನ್ನು, ಕ್ರಮವಾಗಿ ಶ್ರೀ ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಳ್ಳಿ ಕಿಷನ್ ಹೆಗ್ಡೆ, ಶ್ರೀ ಕೆ. ಎಂ. ಉಡುಪ ಮತ್ತು ತಲ್ಲೂರು ಶಿವರಾಮ ಶೆಟ್ಟರು ಸನ್ಮಾನಿಸಿ ಕಲಾಗೌರವ ನೀಡಿದರು.

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅಭಿನಂದನಾ ಬಾಷಣ ಮಾಡಿದರು. ರಾಜ್ಯ ಬಿ. ಜೆ. ಪಿ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್ ಮತ್ತು ಸುಪ್ರಿಯಾ ಸದಾನಂದ ಪಾಟೀಲ್ ಇವರಿಗೆ ಮುತ್ತೈದೆ ಬಾಗಿನ ನೀಡಿ ಗೌರವಿಸಲಾಯಿತು. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಸಂಸ್ಕ್ರತದಲ್ಲಿ ಶೇ. 100 ಅಂಕಗಳಿಸಿದ ಪಿ. ಯು. ಸಿಯಲ್ಲಿ ಶೇ. 97 ಅಂಕ ಪಡೆದ ಬೀಜಾಪುರ ಮೂಲದ ಮೂಲಭೂತ ಸೌಕರ್ಯವಿಲ್ಲದೆ ವಿದ್ಯಾಭ್ಯಾಸ ಮಾಡುತ್ತಿರುವ ಕು. ಮಂಜುಳಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರ್ನಾಟಕ ನೀರಾವರಿ ನಿಗಮದ ಸಿ. ಏ. ಓ. ಶಾನಾಡಿ ಅಜಿತ ಕುಮಾರ ಹೆಗ್ಡೆಯವರು ಶುಭಾಶಂಸನೆ ಮಾಡಿದರು.

ಮಣಿಪಾಲ ಎಂ. ಐ. ಟಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ/ ಕೆ. ಜಗನ್ನಾಥ್, ಅಮೃತೇಶ್ವರಿ ಕ್ಷೇತ್ರದ ಆನಂದ ಕುಂದರ್. ಕಮಲಶಿಲೆ ಕ್ಷೇತ್ರದ ಪ್ರಸಾದ್ ಛಾತ್ರ, ಗೋಳಿಗರಡಿ ಕ್ಷೇತ್ರದ ವಿಠಲ ಪೂಜಾರಿ, ಮಣಿಪಾಲದ ಉದ್ಯಮಿ ಜಯರಾಜ ಹೆಗ್ಡೆ, ಉಡುಪಿ ಜಿಲ್ಲಾ ಬಿ. ಜೆ. ಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ. ರಾಜ್ಯ ಬಿ. ಜೆ. ಪಿ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಆಡಿಗರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರರು ಉದಯಕುಮಾರ್ ಶೆಟ್ಟಿ ದಂಪತಿಗಳಿಗೆ ಗಾನಾಭಿವಂದನೆ ಸಲ್ಲಿಸಿ ಸನ್ಮಾನಿಸಿದರು. ಕಾರ್ಯಕ್ರಮ ನಿರೂಪಣೆ ಮಾಡಿದ ಸದಾನಂದ ಪಾಟೀಲ್ ಮತ್ತು ಬಸವರಾಜ ಶೆಟ್ಟಿಗಾರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಘಟಿಸಿದ ಎಸ್. ವಿ ಉದಯಕುಮಾರ ಶೆಟ್ಟಿ ಸ್ವಾಗತಿಸಿದರು ಮಯೂರ್.ಯು.ಶೆಟ್ಟಿ ಮತ್ತು ಮಾಣಿಕ್ಯ.ಯು.ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ನೀರಜಾ ಉದಯ ಕುಮಾರ ಶೆಟ್ಟಿ ಧನ್ಯವಾದ ನೀಡಿದರು. ಬಳಿಕ ಪ್ರಸಿದ್ದ ಕಲಾವಿದರಿಂದ ``ಮಹಾಸತಿ ಮಂಡೋದರಿ`` ಯಕ್ಷಗಾನ ತಾಳಮದ್ದಳೆ ನೆರವೇರಿತು.








ಆಗಸ್ಟ್ 3 , 2016

``ಉಡುಪಿ ಕ್ಷೇತ್ರ ಮಹಾತ್ಮೆ`` ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ

ಉಡುಪಿ : ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಯಕ್ಷಗಾನ ಮಂಡಳಿಯ ನೂತನ ರಂಗಸ್ಥಳದ ಉದ್ಘಾಟನೆ ಹಾಗೂ ನೂತನ ಪ್ರಸಂಗ ಉಡುಪಿ ಕ್ಷೇತ್ರ ಮಹಾತ್ಮೆಯನ್ನು ಪರ್ಯಾಯ ಶ್ರೀ ಪೇಜಾವರ ಮಠಾದೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಬಿಡುಗಡೆ ಮಾಡಿದರು.

ಶ್ರೀ ವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು. ಉಭಯ ಶ್ರೀಗಳು ನೂತನ ಪ್ರಸಂಗಕ್ಕೆ ಶುಭ ಹಾರೈಸಿದರು. ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ದರ್ಮದರ್ಶಿ ವಿಜಯ ಬಲ್ಲಾಳರು ಅದ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟರು ಶುಬಾಶಂಸನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿ ಎಜಿ‌ಎಂ. ವಿದ್ಯಾಲಕ್ಷ್ಮಿ, ವಾರ್ತಾ ಇಲಾಖಾದಿಕಾರಿ ರೋಹಿಣಿ, ಕಿದಿಯೂರು ಉದಯ ಕುಮಾರ ಶೆಟ್ಟಿ, ನಗರಸಭೆ ಸ್ಥಾಯೀ ಸಮಿತಿ ಸದಸ್ಯ ಪ್ರಶಾಂತ ಭಟ್. ಜಿಲ್ಲಾ ಬಿ. ಜೆ. ಪಿ ಉಪಾದ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ಪ್ರಕಾಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ಸಂಘದ ಅದ್ಯಕ್ಷ ದಾಮೋದರ ಭಟ್ ಸ್ವಾಗತಿಸಿ ಮಹಾಬಲ ಕುಂದರ್ ದನ್ಯವಾದವಿತ್ತರು. ಬಳಿಕ ಮಂಡಳಿಯ ಕಲಾವಿದರು ಮತ್ತು ಅತಿಥಿ ಕಲಾವಿದರಾದ ಬಾಗವತ ಎಸ್. ವಿ. ಉದಯಕುಮಾರ್ ಶೆಟ್ಟಿ. ಕಲಾವಿದರಾದ ಎಂ. ಎಲ್. ಸಾಮಗರ ಕೂಡುವಿಕೆಯಿಂದ ಉಡುಪಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಪ್ರದರ್ಶನ ನೆರವೇರಿತು. ಉಭಯ ಶ್ರೀಗಳು ಪ್ರದರ್ಶನವನ್ನು ಸಂಪೂರ್ಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.








ಜುಲೈ 23 , 2016

ಹಿರಿಯ ಯಕ್ಷಗಾನ ತಜ್ಞ - ಯಕ್ಷಾನುಭವಿ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ

ಬ್ರಹ್ಮಾವರ : ಬಡಗುತಿಟ್ಟು ಅದರಲ್ಲೂ ಮಟ್ಪಾಡಿ ಹಾರಾಡಿ ತಿಟ್ಟನ್ನು ವಿಶೇಷವಾಗಿ ಕರಗತ ಮಾಡಿಕೊಂಡು ಹಿರಿಯ ತಲೆಮಾರಿನ ಖ್ಯಾತ ವಿಮರ್ಶಕರಾಗಿ ಗುರುತಿಸಿಕೊಂಡ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ.

ಬಿಳಿಯ ಅಂಗಿ, ಮುಂಡು ಪಂಚೆ ಮೈಮೇಲೆ ಶಾಲು ತಾಂಬೂಲ ಸವಿದ ಬಾಯಿ ಸಣಕಲು ಶರೀರದ ಸುಬ್ಬಣ್ಣ ಭಟ್ಟರನ್ನು ಅರಿಯದವರು ಯಕ್ಷಗಾನ ರಂಗದಲ್ಲಿ ಬಹುತೇಕ ವಿರಳ ಎನ್ನಬಹುದು. ಹಾರಾಡಿ ಮಟ್ಪಾಡಿ ತಿಟ್ಟು ಮಟ್ಟುಗಳ ಬಗ್ಗೆ ಅಧಿಕಾರವಾಣಿಯಿಂದ ಹೇಳಬಲ್ಲ ದಿವಂಗತ ಎಂ. ಎಂ. ಹೆಗ್ಡೆ, ಪ್ರೋ. ಬಿ. ವಿ. ಆಚಾರ್ಯರ ನಂತರ ಇನ್ನೊಬ್ಬರೆಂದರೆ ಅದು ಸುಬ್ಬಣ್ಣ ಭಟ್ಟರು. ಯಾವುದೇ ಪ್ರಚಾರ ಬಯಸದೆ ತೆರೆಯ ಹಿಂದೆ ಇದ್ದು ಸುಮಾರು ಮುಕ್ಕಾಲು ಶತಮಾನಗಳ ಕಾಲ ಬಡಗುತಿಟ್ಟು ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಅಪಾರ.

ಯಕ್ಷಗಾನಕ್ಕೆ ಸಂಬಂದಪಟ್ಟ ಯಾವುದೇ ಗೋಷ್ಟಿ, ವಿಚಾರ ಸಂಕಿರಣ ಪ್ರಯೋಗವಿರಲಿ ಅಲ್ಲಿ ಭಟ್ಟರು ಅನಿವಾರ್ಯ. ಅಲ್ಲಿಯೂ ಕೂಡ ಅವರ ಮಾತಿಗೆ ಮಾನ್ಯತೆ. ಬಣ್ಣದ ಕಮ್ಮಟ, ವೇಷ ಹಂಚುವಿಕೆ, ಜೋಡಾಟ ಇಲ್ಲಿ ಎಲ್ಲಿಯೂ ಸುಬ್ಬಣ್ಣ ಭಟ್ಟರನ್ನು ಮೀರಿ ನಡೆದವರಿಲ್ಲ. ಶ್ರೇಷ್ಠ ಮದ್ದಳೆಗಾರರಾದ ಇವರು ಜಾನುವಾರುಕಟ್ಟೆ ಭಾಗವತರು, ನೀಲಾವರ ರಾಮಕೃಷ್ಣಯ್ಯ, ಮರವಂತೆ ದಾಸರ ಪದ್ಯಕ್ಕೆ ಮದ್ದಳೆ ನುಡಿಸಿದ್ದಾರೆ. ಶ್ರೇಷ್ಠ ವಿಮರ್ಶಕರಾದ ಇವರು ಹವ್ಯಾಸಿ ರಂಗಭೂಮಿ ಕಂಡ ಸವ್ಯಸಾಚಿ ಕಲಾವಿದರು. ಬಡಗುತಿಟ್ಟಿನ ಎಲ್ಲಾ ವಿಬಾಗದಲ್ಲಿ ಆಳವಾದ ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದ ಇವರು ದೇಶ ವಿದೇಶಗಳಲ್ಲಿ ಆ ಕಾಲದಲ್ಲಿ ಯಕ್ಷಗಾನದ ಕಂಪನ್ನು ಮೂಡಿಸಿದವರು. ಸ್ವತ ಹೆಸರಿಗೆ ತಕ್ಕ ಒಳ್ಳೇಯ ಬಣ್ಣಗಾರಿಕೆಯಲ್ಲಿ ಪಳಗಿ ಶ್ರೇಷ್ಠ ಪ್ರಸಾದನ ತಜ್ಞರೆಂದು ಗುರುತಿಸಿಕೊಂಡಿದ್ದಾರೆ.

ಯಕ್ಷಗಾನದ ವಿವಿದ ಮಜಲುಗಳಲ್ಲಿ ಕೈಯಾಡಿಸಿ ಜೋಡಾಟದ ತೀರ್ಪುಗಾರರಾಗಿಯೂ ಪರಿಣತಿ ಪಡೆದ ಇವರನ್ನು ಹಲವಾರು ಸಂಘಸಂಸ್ಥೆಗಳು ಸನ್ಮಾನಿಸಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬದ ಪ್ರಶಸ್ತಿ, ಅಜಪುರ ಕರ್ನಾಟಕ ಸಂಘದ ಸುವರ್ಣ ಪ್ರಶಸ್ತಿ, ಗುಂಡ್ಮಿ ಕಾಳಿಂಗ ನಾವಡರ ದಶಮ ಪುಣ್ಯತಿಥಿ ಸನ್ಮಾನ ಸಹಿತ ಹಲವಾರು ಸನ್ಮಾನಗಳು ಅವರಿಗೆ ಸಂದಿದೆ. ಹರಾಡಿ ಮಟ್ಪಾಡಿತಿಟ್ಟುಗಳಬಗ್ಗೆ ಅದಿಕಾರವಾಣಿಯಿಂದ ಮಾತನಾಡಬಲ್ಲ ಭಟ್ಟರ ನಿದನದಿಂದ ಬಡಗುತಿಟ್ಟು ಯಕ್ಷಗಾನ ವಿಮರ್ಶಾಕ್ಷೇತ್ರ ಬಡವಾಗುವುದರೊಂದಿಗೆ ಈ ಪಾರಂಪರಿಕ ತಿಟ್ಟಿನ ಬಗ್ಗೆ ಅದಿಕಾರವಾಣಿಯಿಂದ ಮಾತನಾಡಬಲ್ಲ ಇನ್ನೊಬ್ಬ ವ್ಯಕ್ತಿ ಇಲ್ಲವೆನ್ನಬಹುದಾಗಿದೆ.






ಜುಲೈ 21 , 2016

ಪೆರುವೊಡಿ ನಾರಾಯಣ ಭಟ್ಟರಿಗೆ ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ

ಮ೦ಗಳೂರು : ಲಲಿತ ಕಲೆಗಳಲ್ಲಿ ವೈವಿ ಧ್ಯಮಯ ಆಸಕ್ತಿ ಇರುವ ಕಲಾವಿದರ ಅಭಿರುಚಿಯನ್ನು ತಣಿಸಬಲ್ಲ ಸಾಮರ್ಥ್ಯ ಯಕ್ಷಗಾನಕ್ಕೆ ಇದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಹೇಳಿದರು.

ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರದ ವತಿ ಯಿಂದ ಯಕ್ಷಗಾನ ಕ್ಷೇತ್ರದ ಹಿರಿಯ ಹಾಸ್ಯ ಕಲಾವಿದ ಪೆರುವೊಡಿ ನಾರಾ ಯಣ ಭಟ್‌ ಅವರಿಗೆ ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ರಾತ್ರಿ ಪೂರ್ತಿ ನಡೆಯುವ ಯಕ್ಷ ಗಾನ ಕಾರ್ಯಕ್ರಮದಲ್ಲಿ ಕಲಾರಸಿಕರಿಗೆ ಎಲ್ಲ ರೀತಿಯ ರಸವನ್ನೂ ಅಸ್ವಾದಿಸುವ ಅವಕಾಶ ಇರುತ್ತದೆ. ಕೋಳ್ಯೂರು ರಾಮ ಚಂದ್ರ ರಾಯರ ದಮಯಂತಿ ಪಾತ್ರ ವನ್ನು ನೋಡುವ ಕಣ್ಣಲ್ಲಿ ನೀರು ಹಾಕುವ ಸಾವಿರಾರು ಪ್ರೇಕ್ಷಕರಿದ್ದಾರೆ. ಅದೇ ರೀತಿ ಹಾಸ್ಯ, ವೀರ, ಶೃಂಗಾರ ರಸ, ನಾಟ್ಯ, ಗಾನವನ್ನು ಆಸ್ವಾದಿಸುವ ಅವಕಾಶವಿದೆ. ಹೀಗೆ ರಾತ್ರಿ ಪೂರಾ ನಡೆಸುವ ಮತ್ತೊಂದು ಕಲೆ ಜಗತ್ತಿನಲ್ಲಿಯೇ ಇಲ್ಲ ಎಂದು ಅವರು ಹೇಳಿದರು.

ಹಾಸ್ಯವನ್ನು ಅಶ್ಲೀಲಗೊಳಿಸಿ ಹೇಳುವ ಸಂದರ್ಭಗಳೇ ಹೆಚ್ಚು. ಆದರೆ ಪೆರುವೊಡಿ ನಾರಾಯಣ ಭಟ್‌ ಅವರು ಹಾಸ್ಯವನ್ನು ಸುಸಂಸ್ಕೃತ ರೀತಿಯಲ್ಲಿ ರಂಗಸ್ಥಳದಲ್ಲಿ ಪ್ರಸ್ತುತಪಡಿಸುತ್ತಿದ್ದರು ಎಂದು ಅವರು ಹೇಳಿದರು.

ಅಭಿನಂದನ ಭಾಷಣ ಮಾಡಿದ ಸರ್ಪಂಗಳ ಈಶ್ವರ ಭಟ್‌ ಮಾತನಾಡಿ, ಪೆರುವೊಡಿ ನಾರಾಯಣ ಭಟ್ಟರ ವಿಕ್ರ ಮಾದಿತ್ಯನ ಪಾತ್ರವನ್ನು ಸ್ಮರಿಸಿಕೊಂ ಡರು. ಸುರತ್ಕಲ್‌ ಮೇಳದಲ್ಲಿದ್ದಾಗ ಅವ ರು ವಿಕ್ರಮಾದಿತ್ಯನ ಪಾತ್ರಕ್ಕೆ ಹೊಸತನ ವನ್ನೇ ತುಂಬಿದ್ದರು. ಹಾಸ್ಯ ರಸಕ್ಕೆ ಹೊಸ ಆಯಾಮವನ್ನು ನೀಡಿದ್ದರಿಂದಲೇ ಅವ ರಿಗೆ ಗೌರವ ಸನ್ಮಾನಗಳು ಸಂದಿವೆ ಎಂದರು.

ಹತ್ತು ಸಾವಿರ ರೂಪಾಯಿ ಗೌರವ ನಿಧಿ, ಶಾಲು, ಫಲಕಗಳನ್ನು ನೀಡಿ ನಾರಾಯಣ ಭಟ್ಟರನ್ನು ಗೌರ ವಿಸಲಾಯಿತು. ಅವಧಾನಿ ಡಾ. ಬಾಲ ಕೃಷ್ಣ ಭಾರದ್ವಾಜ ಕಬ್ಬಿನಾಲೆ, ತುಳುಕೂ ಟದ ಚಂದ್ರ ಹಾಸ ದೇವಾಡಿಗ, ಆಕಾಶ ವಾಣಿಯ ಡಾ. ಸದಾನಂದ ಪೆರ್ಲ, ರಾಮಚಂದ್ರ ಬೈಕಂ ಪಾಡಿ, ದಾಮೋ ದರ ನಿಸರ್ಗ, ಸುಧಾಕರ ರಾವ್‌ ಪೇಜಾ ವರ, ಮಾಜಿ ಶಾಸಕ ಕುಂಬಳೆ ಸುಂದರ ರಾವ್‌, ವಿ.ಜಿ. ಪಾಲ್‌ ಇದ್ದರು. ದಯಾನಂದ ಕಟೀಲ್‌ ನಿರೂಪಿಸಿದರು.



ಕೃಪೆ : prajavani




ಜುಲೈ 16 , 2016

ಪೆರುವೊಡಿ ನಾರಾಯಣ ಭಟ್ಟರಿಗೆ ದೋಗ್ರ ಪೂಜಾರಿ ಪ್ರಶಸ್ತಿ

ಮ೦ಗಳೂರು : ಯಕ್ಷಗಾನದಲ್ಲಿ ರಾಜ ಹಾಸ್ಯಗಾರರೆಂದೇ ಖ್ಯಾತರಾದ ಪೆರುವೊಡಿ ನಾರಾಯಣ ಭಟ್ಟರಿಗೆ ಈ ವರ್ಷದ ದೋಗ್ರ ಪೂಜಾರಿ ಪ್ರಶಸ್ತಿ.

ಯಕ್ಷಗಾನ ಸಂಘಟಕ, ಮೇಳಗಳ ವ್ಯವಸ್ಥಾಪಕರಾಗಿದ್ದ ಕೀರ್ತಿಶೇಷ ಕಲಾಗ್ರಣಿ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪಾತ್ರರ ಆಯ್ಕೆ ಪ್ರತಿ ವರ್ಷ ಮಹತ್ವದಿಂದ ಕೂಡಿರುತ್ತದೆ. 36ನೇ ವರ್ಷದ ಈ ಪುರಸ್ಕಾರಕ್ಕೆ ಹಿರಿಯ ಸಾಹಿತಿ ಡಾ| ಅಮೃತ ಸೋಮೇಶ್ವರರ ನೇತೃತ್ವದ ಸಮಿತಿ ಸೂಕ್ತ ವ್ಯಕ್ತಿಯೊಬ್ಬರನ್ನು ಹೆಸರಿಸಿದ್ದು ಆ ನಿಟ್ಟಿನಲ್ಲಿ ಕಲಾಭಿಮಾನಿಗಳಿಗೆ ಪರಿಚಿತರಾದ ನಾರಾಯಣ ಭಟ್ಟರ ಸಾಧನೆಯ ಮುಖ್ಯಾಂಶ ಇಲ್ಲಿದೆ.

ಪದ್ಯಾಣ ಭೀಮ ಭಟ್‌ ಮತ್ತು ಗುಣವತಿ ಅಮ್ಮ ಅವರ ಮಗನಾಗಿ 28-5-1927ರಲ್ಲಿ ಪದ್ಯಾಣದಲ್ಲಿ ಜನನ. ಬಾಲ್ಯದಲ್ಲಿ ಅಜ್ಜನ ಮನೆ ಪೆರುವೊಡಿಯಲ್ಲಿ ಬೆಳೆದ ಕಾರಣ ಪೆರುವೊಡಿ ನಾರಾಯಣ ಭಟ್ಟ ಎಂದು ಹೆಸರು ಬಂತು. 6ನೇ ತರಗತಿಯವರೆಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಕಲಾಸಕ್ತಿ ಮೂಡಿ ಕುರಿಯ ವಿಠಲ ಶಾಸಿŒಗಳಿಂದ ಯಕ್ಷಗಾನ ಪಾಠ. ಕುಂಬಳೆ ರಾಮಚಂದ್ರ, ಕರ್ಗಲ್ಲು ಸುಬ್ಬಣ್ಣ ಭಟ್ಟರಿಂದಲೂ ನಾಟ್ಯಾಭ್ಯಾಸ ಮಾಡಿದ ನಾರಾಯಣ ಭಟ್ಟರು 17ನೇ ವಯಸ್ಸಿಗೆ ಯಕ್ಷಗಾನ ವೃತ್ತಿಗೆ ತೊಡಗಿದರು. ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್‌, ನಂದಾವರ, ಕುಂಬಳೆ, ಕದ್ರಿ, ಅಳದಂಗಡಿ ಇತ್ಯಾದಿ ಮೇಳಗಳಲ್ಲಿ 50 ವರ್ಷಗಳ ಕಾಲ ಯಕ್ಷಗಾನ ಕಲಾವಿದನಾಗಿ ಸೇವೆ.

ದಮಯಂತಿ ಪುನಃ ಸ್ವಯಂವರದ ಬಾಹುಕ, ಕಂಸವಧೆಯ ಅಗಸ, ಶ್ರೀಕೃಷ್ಣಲೀಲೆಯ ಪಂಡಿತ, ವಿಜಯ, ಅತಿಕಾಯ ದೂತ, ಗಿರಿಜಾ ಕಲ್ಯಾಣದ ಭೈರಾಗಿ, ದಕ್ಷಯಜ್ಞದ ಬ್ರಾಹ್ಮಣ, ದೇವಿ ಮಹಾತ್ಮೆಯ ಸುಗ್ರೀವ ಇತ್ಯಾದಿ ವೇಷಗಳ ನಿರ್ವಹಣೆಯಲ್ಲಿ ನಿಸ್ಸೀಮರಾಗಿ ಪೆರುವೊಡಿ ಯವರು ಗುರುತಿಸಲ್ಪಟ್ಟರು. ಗುಣಸುಂದರಿ ಪಾಪಣ್ಣ ವಿಜಯದ ಪಾಪಣ್ಣ ಇವರಿಗೆ ಖ್ಯಾತಿಯ ಉತ್ತುಂಗವನ್ನು ತಂದುಕೊಟ್ಟಿತು. ಶನಿಗ್ರಹಚಾರದ ಫ‌ಲವಾಗಿ ಕಂಗೆಟ್ಟ ನಳನ ಪಾತ್ರವನ್ನು ಬಾಹುಕನ ವೇಷಕ್ಕೆ ತಂದು ಕೊಡುವಾಗ ಒಳ್ಳೆಯ ಮುಖ ವರ್ಣಿಕೆಯನ್ನು ಪ್ರಕಟಿಸಿದರು. ಬಡಗುತಿಟ್ಟಿನ ಅಮೃತೇಶ್ವರಿ ಮೇಳದಲ್ಲಿಯೂ ತಿರುಗಾಟ ಮಾಡಿದ ಇವರದು ವೈವಿಧ್ಯಮಯ ಹಾಸ್ಯ.

ಮೂಲ್ಕಿ ಮೇಳ ನಡೆಸುತ್ತಿದ್ದ ಇವರ ಅಣ್ಣ ಪದ್ಯಾಣ ಕೃಷ್ಣ ಭಟ್ಟರ ಜತೆಗೆ ನಾರಾಯಣ ಭಟ್ಟರೂ ವ್ಯವಸ್ಥಾಪಕತ್ವಕ್ಕೆ ಕೈ ಜೋಡಿಸಿದರು. ಕಡತೋಕ ಮಂಜುನಾಥ ಭಾಗವತರನ್ನು ತೆಂಕುತಿಟ್ಟಿಗೆ ಮೂಲ್ಕಿ ಮೇಳದ ಮುಖೇನ ಪರಿಚಯಿಸಿದರು. ಮುಂದೆ ಧರ್ಮಸ್ಥಳ ಮೇಳ ಸೇರಿದ ಕಡತೋಕ ಭಾಗವತರ ಭಾಗವತಿಕೆಯನ್ನು ಪೆರುವೊಡಿಯವರು ಚೆನ್ನಾಗಿ ಮೆಚ್ಚಿಕೊಳ್ಳುತ್ತಾರೆ. ತಮ್ಮ ತಾರುಣ್ಯದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಾಗಿದ್ದಾಗಿನ ಕಲಾ ಚಟುವಟಿಕೆಗಳನ್ನು ನೆನಪಿಸಿಕೊಳ್ಳುತ್ತಾರೆ. ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆ, ನೆಡ್ಲೆ ನರಸಿಂಹ ಭಟ್ಟ ಮತ್ತು ಮಳಿ ಜಿ. ಶ್ಯಾಮ ಭಟ್ಟರ ಚೆಂಡೆ ಮದ್ದಳೆ ಹಿಮ್ಮೇಳ ವಾದನವನ್ನೂ ಜ್ಞಾಪಿಸಿಕೊಳ್ಳುತ್ತಾರೆ. ಹಿರಿಯ ಭಾಗವತ ಉಪ್ಪೂರು ನಾರಾಯಣ ಭಾಗವತ, ಹಿರಿಯ ಬಲಿಪ ಭಾಗವತರು, ಶೇಣಿ-ಸಾಮಗ, ಪಾತಾಳ ವೆಂಕಟರಮಣ ಭಟ್‌, ಪುತ್ತೂರು ನಾರಾಯಣ ಹೆಗ್ಡೆ, ಕುಂಬಳೆ ಸುಂದರ ರಾವ್‌ ಇವರನ್ನೆಲ್ಲ ಉಲ್ಲೇಖೀಸುತ್ತಾರೆ.

ಪೆರುವೊಡಿ ಅವರಿಗೆ ದೊರೆತ ಸಮ್ಮಾನಗಳು ಹಲವಾರು. ಇದೀಗ ಪ್ರತಿಷ್ಠಿತ ದೋಗ್ರ ಪೂಜಾರಿ ಪ್ರಶಸ್ತಿ ದೊರೆಯುತ್ತಿದೆ. ಪುತ್ತೂರಿನ ಬಪ್ಪಳಿಕೆಯ ನೂಜಿಯಲ್ಲಿ ವಾಸ್ತವ್ಯ. ಪತ್ನಿ ಸಾವಿತ್ರಿ, ಮೂವರು ಪುತ್ರಿಯರ ಸಂಸಾರ ಇವರದು. ಸಾತ್ವಿಕ ಸ್ವಭಾವದ ಹಿರಿಯ ಯಕ್ಷಗಾನ ಕಲಾವಿದ 89ರ ಹರೆಯದ ಪೆರುವೊಡಿ ನಾರಾಯಣ ಭಟ್ಟರಿಗೆ ದೋಗ್ರ ಪೂಜಾರಿ ಪ್ರಶಸ್ತಿ ಅರ್ಹ ಪುರಸ್ಕಾರ.

ಕೃಪೆ : udayavani




ಜುಲೈ 16 , 2016

ರಜತ ಸಂಭ್ರಮದಲ್ಲಿ ``ಇಂದ್ರ ನಾಗ``

ಬೆ೦ಗಳೂರು : ಶ್ರೀ ಮಣೂರು ವಾಸುದೇವ ಮಯ್ಯರವರು ರಚಿಸಿದ ‘ಇಂದ್ರ ನಾಗ’ ಯಕ್ಷಗಾನ ಪ್ರಸಂಗ, ಹಿಮಾಚಲ ಪ್ರದೇಶದ ಒಂದು ದೇವಾಲಯ 'ಧರ್ಮಶಾಲಾ' ಸ್ಥಳ ಪುರಾಣಕ್ಕೆ ಸಂಬಂಧಿಸಿದ ಕಥೆ. ಶ್ರೀ ಪೆರ್ಡೂರು ಮೇಳದಿಂದ ಆಗಸ್ಟ್ 8, 2015ರಂದು ಬೆಂಗಳೂರಿನಲ್ಲಿ ಅದ್ದೂರಿ ಯಶಸ್ವೀ ಪ್ರಥಮ ಪ್ರದರ್ಶನ ಕಂಡ ನಂತರ ಮೇಳದ ಪ್ರದರ್ಶನವಾಗಿ ಹೋದಲ್ಲೆಲ್ಲ ಯಕ್ಷ ಪ್ರೇಕ್ಷಕರ ಮನ ಗೆದ್ದು, ರಜತ ಸಂಭ್ರಮದತ್ತ ದಾಪುಗಾಲಿಡುತ್ತಿದೆ. ಶ್ರೀ ರಮೇಶ್ ಬೇಗಾರ್ ಶೃಂಗೇರಿ ಯವರ ರಂಗರೂಪ-ಸಂಯೋಜನೆ, ಪದ್ಯರಚನೆ ಶ್ರೀ ಪ್ರಸಾದ್ ಮೊಗೆಬೆಟ್ಟು ರವರದ್ದು, ದಕ್ಷ ನಿರ್ವಹಣೆ-ಭಾಗವತ ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆಯವರಿಂದ.

ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವ ಸೇವೆಯಲ್ಲಿ ನಿರತವಾಗಿರುವ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ದ ಆಶ್ರಯದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ ದಿನಾಂಕ 18.07.2016ರ ಸೋಮವಾರದಂದು ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 'ಇಂದ್ರ ನಾಗ'ದ 26ನೇ ಪ್ರದರ್ಶನವನ್ನು ಶ್ರೀ ಕಾಳಿಂಗ ನಾವಡ ಪ್ರತಿಷ್ಥಾನ-ಶೃಂಗೇರಿಯ ಸಂಸ್ಥಾಪಕ, ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ರಮೇಶ್ ಬೇಗಾರ್ ಶೃಂಗೇರಿಯರವರ ಸಾರಥ್ಯದ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಜಾನಪದ ಅಧ್ಯಯನ ಕೇಂದ್ರ ಆಯೋಜಿಸಿದೆ. ಇದು ರಮೇಶ್ ಬೇಗಾರ್ ರವರ 30ನೇ ವರ್ಷದ ಯಕ್ಷಸಂಘಟನೆಯ ಪರ್ವಕಾಲದ ವಿನೂತನ ಆಯೋಜನೆ. ಈ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಗುವುದು.

ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಶ್ರೀ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ', ಇದೀಗ 'ಇಂದ್ರ ನಾಗ'ದ ರಜತೋತ್ಸವಕ್ಕೆ ಹೆಗಲು ನೀಡಿದೆ.

ಈ ಬಾರಿ ಭಾರತದ ಪುರಾತನ ಕಲೆ ಧನುರ್ವಿದ್ಯೆಯ ಪ್ರಾತ್ಯಕ್ಷಿಕ ಸಾಕ್ಷಾತ್ ಪ್ರದರ್ಶನವನ್ನು ಅಳವಡಿಸಿದೆ ! ಮತ್ಸ್ಯಯಂತ್ರ ಬೇಧನ, ಶಬ್ಧವೇದಿ ವಿದ್ಯೆ, ಸಪ್ತ ತಾಳಾವೃಕ್ಷ ಛೇಧನ, ಸರ್ವಾಂಗಾಸನ ಬಾಣಪ್ರಯೋಗ... ಮುಂತಾದವುಗಳನ್ನು ಪ್ರತ್ಯಕ್ಷ ತೋರಿಸಬಲ್ಲ ಭಾರತದ ಏಕೈಕ ಧನುರ್ವಿದ್ಯಾ ಪ್ರವೀಣ ಆಂಧ್ರಪ್ರದೇಶದ ಲಿಂಗಂಗುಂಟ್ಳು ಸುಬ್ಬಾರಾವ್ ಪ್ರದರ್ಶಿಸಲಿದ್ದಾರೆ. ವಿದ್ವಾನ್ ದತ್ತಮೂರ್ತಿ ಭಟ್ ಇವರ ಪರಿಕಲ್ಪನೆ ಮತ್ತು ಸ್ವತಃ ವಿವರಣೆಯ ಸೊಗಸಿನೊಂದಿಗೆ ಈ ಐತಿಹಾಸಿಕ ವಿದ್ಯಮಾನ ಈ ಯಕ್ಷಗಾನ ಪ್ರದರ್ಶನದಲ್ಲಿ ನಡೆಯಲಿದೆ. ಧನುರ್ವಿದ್ಯಾ ಕಲೆಯನ್ನು ಗುರುಕುಲ ಮಾದರಿಯಲ್ಲಿ ಯಕ್ಷಗಾನಕ್ಕೆ ಪರಿಚಯಿಸಿದ ಕೀರ್ತಿ ವಿದ್ವಾನ್ ದತ್ತಮೂರ್ತಿ ಭಟ್ ರವರಿಗೆ ಸಲ್ಲುತ್ತದೆ. ಪ್ರೇಕ್ಷಕರಿಗೆ ಯಕ್ಷಗಾನದ ನೆಪದಲ್ಲಿ ಬಹು ಅಪರೂಪದ ಮತ್ತು ಜೀವಮಾನದಲ್ಲಿ ಮರೆಯಲಾಗದ ನೆನಪನ್ನು ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಅಚ್ಚಾಗುವುದರಲ್ಲಿ ಸಂಶಯವಿಲ್ಲ.

ಅತಿಥಿ ಕಲಾವಿದರಾದ ತೀರ್ಥಹಳ್ಳಿ ಗೋಪಾಲ ಆಚಾರ್ ಹಾಗೂ ಸೀತಾರಾಮ ಕುಮಾರ್ ಕಟೀಲು, ಶ್ರೀ ಪೆರ್ಡೂರು ಮೇಳದ ಕಲಾವಿದರಾದ ರಾಘವೇಂದ್ರ ಆಚಾರ್ ಜನ್ಸಾಲೆ, ಬ್ರಹ್ಮೂರು ಶಂಕರ ಭಟ್, ಸುನಿಲ್ ಭಂಡಾರಿ ಕಡತೋಕ, ಶ್ರೀನಿವಾಸ ಪ್ರಭು, ಥಂಡಿಮನೆ ಶ್ರೀಪಾದ ಹೆಗಡೆ, ಕಡಬಾಳ ಉದಯ ಹೆಗಡೆ, ನೀಲ್ಕೋಡು ಶಂಕರ ಹೆಗಡೆ, ರವೀಂದ್ರ ದೇವಾಡಿಗ, ವಿಶ್ವನಾಥ ಆಚಾರ್ಯ ತೊಂಬಟ್ಟು, ಕಿರಾಡಿ ಪ್ರಕಾಶ, ವಿಜಯ ಗಾಣಿಗ ಮುಂತಾದ ಕಲಾವಿದರು ಬಣ್ಣ ಹಚ್ಚಲಿದ್ದಾರೆ.

ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ ಶೃಂಗೇರಿ - 94481 01708






ಜುಲೈ 15 , 2016

ಉಡುಪಿ ರಾಜಾಂಗಣದಲ್ಲಿ ಧಾರೇಶ್ವರ ಬಳಗದ ಶ್ರೀ ಕೃಷ್ಣ ಅಷ್ಟಾಹದ ಸಮಾರೋಪ

ಉಡುಪಿ : ಶ್ರೀ ಧಾರೇಶ್ವರ ಯಕ್ಷಗಾನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ರಾಜಾಂಗಣದಲ್ಲಿ ಎಂಟು ದಿನ ಪರ್ಯಂತ ಶ್ರೀ ಕೃಷ್ಣ ಪುರಾಣ ಆದಾರಿತ ಎಂಟು ಪ್ರಸಂಗಗಳ ಪ್ರದರ್ಶನದ ಸಮಾರೋಪ ಸಮಾರಂಭ ಉಡುಪಿಯಲ್ಲಿ ಪರ್ಯಾಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳ ಆಶೀರ್ವಚನದೊಂದಿಗೆ ಸಮಾಪನಗೊಂಡಿತು. ಪೂಜ್ಯ ಶ್ರೀಗಳು ಆಶೀರ್ವಚನ ನೀಡಿ ಹಿಮ್ಮೇಳ ಮುಮ್ಮೇಳ ಹೀಗೆ ಸರ್ವ ಅಂಗಗಳಲ್ಲು ಇದೊಂದು ಯಶಸ್ವಿ ಪ್ರಯೋಗ ಎಂದು ತಿಳಿಸಿ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಸನ್ಮಾನಿಸಿದರು. ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು.

ಯಕ್ಷಗಾನ ವಿಮರ್ಶಕ ಮಣಿಪಾಲ ಎಂ. ಐ. ಟಿ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟರು ಎಂಟೂ ದಿನದ ಕಾರ್ಯಕ್ರಮ ವೀಕ್ಷಿಸಿ ಅವಲೋಕನದ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಜ್ಯೋತಿಸಿ ಕಬ್ಯಾಡಿ ಜಯರಾಮ ಆಚಾರ್ಯ, ಮತ್ತು ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಮುರಳಿ ಕಡೆಕಾರ್ ಸ್ವಾಗತಿಸಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ಸಂಯ್ಯೋಜನೆ ಮಾಡಿದರು. ಬಳಿಕ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ನೆರವೇರಿತು. ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ, ತೀರ್ಥಳ್ಳಿ ಗೋಪಾಲ ಆಚಾರ್ಯ, ಯಲ್ಗುಪ್ಪ ಸುಬ್ರಮಣ್ಯ ಹೆಗಡೆ ಮುಂತಾದವರು ವಿವಿಧ ದಿನಗಳಲ್ಲಿ ಭಾಗವಹಿಸಿದ್ದರು.






ಜುಲೈ 14 , 2016

ಯಕ್ಷಗಾನ ಕಲಾರಂಗದ ಅವಳಿ ಕಾರ್ಯಕ್ರಮಗಳ ಅವಲೋಕನ

ಉಡುಪಿ : ಯಕ್ಷಗಾನ ಕಲಾರಂಗ (ರಿ. ) ಉಡುಪಿ ಇದರ ಮಳೆಗಾಲದ ತೆಂಕು ಮತ್ತು ಬಡಗುತಿಟ್ಟುಗಳ ಎರಡು ಕಾರ್ಯಕ್ರಮಗಳ ಅವಲೋಕನೆ ಮತ್ತು ವಿಮರ್ಶಾ ಕಾರ್ಯಕ್ರಮ ಕಲಾರಂಗದ ಕಛೇರಿಯಲ್ಲಿ ನೆಡೆಯಿತು. ತೆಂಕುತಿಟ್ಟಿನ ಕಲಾವಿದರು ಪ್ರದರ್ಶಿಸಿದ ``ನಳ ದಮಯಂತಿ`` ಕಾರ್ಯಕ್ರಮದ ವಿಮರ್ಶೆಯನ್ನು ಸಂಗೀತ ವಿಮರ್ಶಕಿ ಪ್ರತಿಭಾ ಎಂ. ಎಲ್. ಸಾಮಗ ಮತ್ತು ಬಾಯಾರು ಗುರುರಾಜ ಹೊಳ್ಳರು ನೆರವೇರಿಸಿದರು.

ಬಡಗುತಿಟ್ಟಿನ ``ವೀರ ದಶರಥ ನೃಪತಿ`` ಪ್ರಸಂಗವನ್ನು ಹಿರಿಯ ವಿಮರ್ಶಕ ಮಣಿಪಾಲದ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ನೆರವೇರಿಸಿದರು. ಮೂವರು ವಿಮರ್ಶಕರು ಎರಡು ಕಾರ್ಯಕ್ರಮಗಳ ಒಳಿತು ಕೆಡುಕುಗಳ ಬಗ್ಗೆ ಬೆಳಕು ಚೆಲ್ಲಿದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕಾರ್ಯಕ್ರಮ ಸಂಯ್ಯೋಜಿಸಿದರು. ಅನೇಕ ಯಕ್ಷಗಾನಾಭಿಮಾನಿಗಳು ಚರ್ಚೆಯಲ್ಲಿ ಪಾಲ್ಗೊಂಡರು.






ಜುಲೈ 12 , 2016

ಹೊರ ಜಿಲ್ಲೆಗಳಲ್ಲಿ ಯಕ್ಷಗಾನದ ಕಂಪನ್ನು ಹರಡುವಲ್ಲಿ ಪ್ರವಾಸಿ ಯಕ್ಷಗಾನ ಮೇಳಗಳ ಜವಬ್ದಾರಿ ಹೆಚ್ಚಿನದ್ದು

ಕೊಕ್ಕರ್ಣೆ : `` ಉಡುಪಿ ಸಹಿತ ಕರ್ನಾಟಕದ ಕೇವಲ ಮೂರು ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಯಕ್ಷಗಾನ ಕಲೆಯನ್ನು ಹೊರಜಿಲ್ಲೆಯ ಸಹಿತ ಕರ್ನಾಟಕದ ಮೂಲೆ ಮೂಲೆಗಳಿಗೆ ಪಸರಿಸುವಲ್ಲಿ ಮಳೆಗಾಲದಲ್ಲಿ ನೆಡೆಯುವ ಪ್ರವಾಸಿ ಮೇಳಗಳ ಕೊಡುಗೆ ಗಣನೀಯವಾದದ್ದು. ಈ ಹಿಂದೆ ದಿ. ಅರಾಟೆ ಮಂಜುನಾಥ ಮುಂತಾದ ಹಿರಿಯ ಕಲಾವಿದರು ಇದರಲ್ಲಿ ಯಶಸ್ಸನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಾಗವತ ಸದಾಶಿವ ಅಮೀನರ ಈ ಹೊಸ ಸಂಸ್ಥೆ ನಾಡಿನಾದ್ಯಂತ ಯಕ್ಷಗಾನದ ಕಂಪನ್ನು ಹರಡಲಿ. ಅನೇಕ ಕಲಾವಿದರಿಗೆ ಮಳೆಗಾಲದಲ್ಲಿ ಈ ಸಂಸ್ಥೆ ಆಶ್ರಯ ತಾಣವಾಗಲಿ `` ಎಂದು ಯಕ್ಷಗಾನದ ಹಿರಿಯ ವಿಮರ್ಶಕ ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.

ಅವರು ಕೊಕ್ಕರ್ಣೆ ಮೊಗವೀರಪೇಟೆಯಲ್ಲಿ ನೂತನವಾಗಿ ಪ್ರಾರಂಭವಾದ ಕಪ್ಪಣ್ಣಸ್ವಾಮಿ ಪ್ರವಾಸಿ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಿ ಭಾಗವತ ಸದಾಶಿವ ಅಮೀನರನ್ನು ಸನ್ಮಾನಿಸಿ ಶುಬಾಶಂಸನೆಯ ಮಾತನಾಡಿದರು. ಉದ್ಯಮಿ ಉಡುಪಿಯ ಪ್ರಸಾದರಾಜ್ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾಪಂಚಾಯತ್ ಸದಸ್ಯ ಮೈರ್ಮಾಡಿ ಸುದಾಕರ ಶೆಟ್ಟಿಯವರು ವಹಿಸಿದ್ದರು. ಭಾಗವತ ಸದಾಶಿವ ಅಮೀನರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಗುಣಕರ ರಾವ್, ಭುಜಂಗ ಶೆಟ್ಟಿ, ದೇವಕಿ ಕೋಟ್ಯಾನ್ ಆಗಮಿಸಿದ್ದರು. ಪ್ರವಾಸಿ ಮೇಳದ ಪಾಲುದಾರರಾದ ಸುದೇಶ ಶೆಟ್ಟಿ, ರಘು ಕುಂದರ್ ಉಪಸ್ಥಿತರಿದ್ದರು. ದೇವಸ್ಥಾನದ ಮುಖ್ತೇಸರ ಆನಂದ ಸ್ವಾಗತಿಸಿ ನಾಗೇಶ ಗುರಿಕಾರ್ ವಂದಿಸಿದರು. ಬಳಿಕ ಖ್ಯಾತ ಕಲಾವಿದರಿಂದ ಮೊಗವೀರ ಬಾಲೆ ಎಂಬ ಯಕ್ಷಗಾನ ನೆರವೇರಿತು.






ಜುಲೈ 6 , 2016

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಕ್ಷಗಾನ ಕಲಾವಿದರಿಗೆ ಅವಮಾನ

ಬೆಂಗಳೂರು : ಬುಧವಾರ ನಡೆಯಬೇಕಿದ್ದ ಯಕ್ಷಗಾನ ವಿಚಾರ ಸಂಕಿರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರದ್ದು ಮಾಡಿ ಯಕ್ಷಗಾನ ಕಲಾವಿದರಿಗೆ ಅವಮಾನ ಮಾಡಿದೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದಿನಿಂದ ಭಾನುವಾರದವರೆಗೆ ಜಾನಪದ ಯಕ್ಷಗಾನ ವಿಚಾರ ಸಂಕಿರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿತ್ತು. ಆದರೆ ಮಂಗಳವಾರ ರಾತ್ರಿ ಇಲಾಖೆಯ ಅಧಿಕಾರಿಯೊಬ್ಬರು ಕರೆ ಮಾಡಿ ಬೇರೆ ದಿನ ಆಯೋಜನೆ ಮಾಡಿ ಎಂದು ಹೇಳಿ ಕಾರ್ಯಕ್ರಮವನ್ನು ರದ್ದು ಮಾಡಿ ಎಂದು ತಿಳಿಸಿದ್ದಾರೆ.

ಎಂಬತ್ತು ವರ್ಷದ ಹಿರಿಯ ಯಕ್ಷಗಾನ ಕಲಾವಿದರಾದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ರಾಜ್ಯ ಪ್ರಶಸ್ತಿ ವಿಜೇತ ಗೋವಿಂದ ಭಟ್ ಸೇರಿದಂತೆ ಹಲವು ಕಲಾವಿದರು, ಯಕ್ಷಗಾನ ವಿದ್ವಾಂಸರು ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು.

ಈಗಾಗಲೇ ಎರಡು ಬಾರಿ ಈ ಕಾರ್ಯಕ್ರಮ ರದ್ದು ಮಾಡಿದ್ದು, ಈಗ ಮೂರನೇ ಬಾರಿ ರದ್ದು ಮಾಡಿರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ. ಯಕ್ಷಗಾನ, ದೊಡ್ಡಾಟ, ಮೂಡಲಪಾಯ, ಗೊಂಬೆಯಾಟ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಪ್ರರ್ದಶನ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಎಲ್ಲ ಸಿದ್ಧತೆ ಮಾಡಲಾಗಿತ್ತು. ರದ್ದಾದ ಹಿನ್ನಲೆಯಲ್ಲಿ ಸಂಜೆ ಕಲಾಕ್ಷೇತ್ರದಲ್ಲಿ ಯಕ್ಷಗಾನ ಕಲಾವಿದರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಕೃಪೆ : publictv




ಮು೦ದಿನ 10 ಸುದ್ದಿಗಳು


ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ