ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ  

ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ಜೂನ್ 10 , 2016

``ಪದಯಾನ``ದ ಉಲ್ಲೇಖಾರ್ಹ ಪುರಸ್ಕಾರ

ಮಂಗಳೂರು : ಸಮರ್ಥ ಭಾಗವತ ಪದ್ಯಾಣ ಗಣಪತಿ ಭಟ್ಟರ ಹಿಂದೆ ಹಲವರ ಪ್ರೋತ್ಸಾಹವನ್ನು ಕಂಡ "ಪದಯಾನ' ಅಭಿನಂದನಾ ಸಮಿತಿ ಮಾದರಿಯಾದ ಪುರಸ್ಕಾರವನ್ನು ಮಾಡಿದೆ. ಮಂಗಳೂರು ಪುರಭವನದಲ್ಲಿ ಜೂನ್‌ 5ರಂದು ಜರಗಿದ ಪದ್ಯಾಣ ಪದಯಾನದ ಗೌರವಗಳು ಮಹತ್ವಪೂರ್ಣ. ಅಗರಿ ರಘುರಾಮ ಭಾಗವತರಿಗೆ ಪದ್ಯಾಣ ಪ್ರಶಸ್ತಿ (ಪುಟ್ಟುನಾರಾಯಣ ಭಟ್ಟ ಪ್ರಶಸ್ತಿ) ನೀಡಲಾಯಿತು.

ಮಾಂಬಾಡಿ ಭಾಗವತರ ನೆನಪಿಗಾಗಿ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್‌, ಡಾ| ಶೇಣಿ ಗೋಪಾಲಕೃಷ್ಣ ಭಟ್ಟರ ನೆನಪಿನಲ್ಲಿ ಯುವ ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್‌, ದಾಸರಬೈಲು ಚನಿಯ ನಾಯ್ಕರ ನೆನಪಿನಲ್ಲಿ ಅವರ ಪುತ್ರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ನೆನಪಿನಲ್ಲಿ ಅವರ ಪುತ್ರ, ಕಡಬ ನಾರಾಯಣ ಆಚಾರ್ಯರ ನೆನಪಿನಲ್ಲಿ ಅವರ ಪತ್ನಿ ಹಾಗೂ ಅವರ ಪುತ್ರ ಯುವ ಮದೆÉಗಾರ ವಿನಯ ಆಚಾರ್ಯ ಇವರನ್ನೆಲ್ಲ ಗುರುತಿಸಿದ್ದು ಅರ್ಥಪೂರ್ಣ. ಸಮುತ್ತರಣದಲ್ಲಿ ಟಿ. ಶ್ಯಾಮ ಭಟ್‌, ಕೆ. ವರದರಾಯ ಪೈ, ಕುಂಬ್ಳೆ ಸುಂದರ್‌ ರಾವ್‌, ಕಿಶನ್‌ ಕುಮಾರ್‌ ಹೆಗ್ಡೆ,, ಪುತ್ತೂರು ಶ್ರೀಧರ ಭಂಡಾರಿ ಇವರನ್ನು ಪದ್ಯಾಣರು ಗೌರವಿಸಿದ್ದು ಗಮನೀಯ.

ಸಂಕ್ರಮಣದಲ್ಲಿ ಪದ್ಯಾಣ ಗಣಪತಿ ಭಟ್ಟರು ತಮ್ಮ ಹಿರಿಯ-ಕಿರಿಯ ಕಲಾವಿದರನ್ನು ಗೌರವಿಸಿದರು. ತನಗೆ ಪ್ರೋತ್ಸಾಹವನ್ನಿತ್ತ ಪ್ರತಿಯೊಬ್ಬ ಸಹ ಕಲಾವಿದ, ಯಜಮಾನ, ಪ್ರೇಕ್ಷಕರನ್ನು ಸಮ್ಮಾನಿಸಲು ಯಾವುದೇ ಕಲಾವಿದನಿಗೆ ಅಸಾಧ್ಯ. ಹಾಗಿದ್ದರೂ ನೆರವಾದ ಕಲಾಸೇವಕರನ್ನು ಮರೆಯದ ಪದ್ಯಾಣ ಭಾಗವತರು ಯುವ ಕಲಾವಿದರಿಗೆ ಮಾದರಿ.

ಕೃಪೆ : udayavani
ಮೇ 31 , 2016

ತಾಳಮದ್ದಲೆಯಿಂದ ಭಾಷಾ ಪ್ರೌಢಿಮೆ: ಪೇಜಾವರ ಶ್ರೀ

ಉಡುಪಿ : ತಾಳಮದ್ದಲೆಯಿಂದ ಭಾಷಾ ಪ್ರೌಢಿಮೆ, ಭಾಷೆಯ ಮೇಲೆ ಹಿಡಿತ, ವಾದಕೌಶಲ, ಪುರಾಣಗಳ ಸೂಕ್ಷ್ಮ ಅಧ್ಯಯನ ಸಾಧ್ಯವಾಗುತ್ತಿದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.

ರವಿವಾರ ಪರ್ಯಾಯ ಶ್ರೀ ಪೇಜಾವರ ಮಠ, ಕನ್ನಡ ಸಂಸ್ಕೃತಿ ಇಲಾಖೆ, ಕರ್ಣಾಟಕ ಬ್ಯಾಂಕ್‌ ಸಹಯೋಗದಲ್ಲಿ ಯಕ್ಷಗಾನ ಕಲಾರಂಗ ರಾಜಾಂಗಣದಲ್ಲಿ ಆಯೋಜಿಸಿದ "ಶಾಪಾನುಗ್ರಹ' ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಗೃಹಸ್ಥ-ಬ್ರಹ್ಮಚರ್ಯ: ವ್ಯಾಖ್ಯಾನ

"ಊರ್ವಶಿ ಶಾಪ' ಪ್ರಸಂಗದಲ್ಲಿ ಅರ್ಜುನ ತಾಯಿ ಸಮಾನಳಾದ ಊರ್ವಶಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಹೀಗೆ ಒಳ್ಳೆಯತನಕ್ಕಾಗಿ ಶಾಪ ಪಡೆದರೂ ಮುಂದೆ ಒಳ್ಳೆಯದೇ ಆಯಿತು. ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ ವೇದವ್ಯಾಸರು ಅದನ್ನು ಹಿಂದಕ್ಕೆ ಪಡೆಯಲು ಸೂಚಿಸಿದರು. ಆದರೆ ಅಶ್ವತ್ಥಾಮನಿಗೆ ಹಿಂದೆ ಪಡೆಯಲು ಆಗಲಿಲ್ಲ. ಅರ್ಜುನ ಅದನ್ನು ಸಾಧಿಸಿದ. ಬ್ರಹ್ಮಧಿಚರ್ಯ ಇದ್ದವರಿಗೆ ಇದು ಸಾಧ್ಯವಿತ್ತು. ಅಶ್ವತ್ಥಾಮ ಬ್ರಹ್ಮಚಾರಿ, ಅರ್ಜುನ ಮದುವೆಯಾದವ. ಆದರೆ ಅರ್ಜುನ ಬ್ರಹ್ಮಾಸ್ತ್ರವನ್ನು ಹಿಂದಕ್ಕೆ ಪಡೆದ. ಇದೇನಿದು? ದುರ್ಯೋಧನ ಸಾಯುವಾಗ ತನ್ನ ಪತ್ನಿಯಿಂದ ಸಂತಾನ ಪಡೆದು ಹಸ್ತಿನಾವತಿಯ ಪಟ್ಟ ಕಟ್ಟು ಎಂದು ಅಶ್ವತ್ಥಾಮನಿಗೆ ಹೇಳಿದಾಗ ಮಾನಸಿಕವಾಗಿ ಒಪ್ಪಿದ್ದರಿಂದ ಬ್ರಹ್ಮಚರ್ಯ ಹೋಯಿತು. ಅರ್ಜುನ ಮದುವೆಯಾಗಿದ್ದರೂ ಪರಸ್ತ್ರೀಯರನ್ನು ಗೌರವ ಭಾವದಿಂದ ಕಾಣುತ್ತಿದ್ದ. ಇಂದು ಗೃಹಸ್ಥರಾದರೂ ಪರಸ್ತ್ರೀಯರ ಮೇಲೆ ಗೌರವ ತಾಳಿ ಬ್ರಹ್ಮಚಾರಿಗಳಾಗಬೇಕಾಗಿದೆ ಎಂದು ಶ್ರೀಗಳು ಹೇಳಿದರು.

ಸಜ್ಜನರ ಕಾಲಯಾಪನೆಗೆ ತಾಳಮದ್ದಲೆ ಉತ್ತಮ ಉದಾಹರಣೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಕರ್ಣಾಟಕ ಬ್ಯಾಂಕ್‌ ಮಹಾಪ್ರಬಂಧಕ ಸುಭಾಶ್ಚಂದ್ರ ಪುರಾಣಿಕ್‌, ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿಪ್ರಸಾದ ಅಸ್ರಣ್ಣ ಅಭ್ಯಾಗತರಾಗಿದ್ದರು. ಕಲಾರಂಗದ ಅಧ್ಯಕ್ಷ ಗಣೇಶ ರಾವ್‌ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು. ಬರೆ ಕೇಶವ ಭಟ್‌ ತಾಳಮದ್ದಲೆ ಅವಲೋಕನ ನಡೆಸಿದರು. ಉಪಾಧ್ಯಕ್ಷರಾದ ಎಂ. ಗಂಗಾಧರ ರಾವ್‌, ಎಸ್‌.ವಿ. ಭಟ್‌ ಉಪಸ್ಥಿತರಿದ್ದರು.

"ಜಂಟ್ಲಮನ್‌ ಕಲಾವಿದ'ನಿಗೆ ಪ್ರಶಸ್ತಿ

ಕೊಲ್ಲೂರು ದೇವಳದ ಧರ್ಮದರ್ಶಿಯಾಗಿದ್ದ ಕೃಷ್ಣಪ್ರಸಾದ ಅಡ್ಯಂತಾಯರು ಗುರು ಪೆರ್ಲ ಕೃಷ್ಣ ಭಟ್ಟರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಯನ್ನು ಪೇಜಾವರ ಶ್ರೀಗಳಿಂದ ಪ್ರೊ| ಎಂ.ಎಲ್‌. ಸಾಮಗರು ಸ್ವೀಕರಿಸಿದರು. ಹಿಂದೊಮ್ಮೆ ಪಂಡಿತ ವಿಶೇಷಣದ ಪೆರ್ಲ ಕೃಷ್ಣ ಭಟ್ಟರು ಪ್ರೊ| ಸಾಮಗರನ್ನು ಇತರರಿಗೆ ಪರಿಚಯಿಸುವಾಗ "ಜಂಟ್ಲಮನ್‌ ಕಲಾವಿದ' ಎಂದು ಸಂಬೋಧಿಸಿದ್ದರು. "ಈಗ ಪ್ರಶಸ್ತಿಗಳ ಸರಮಾಲೆಯೇ ಕಂಡುಬರುತ್ತಿದೆ. ಮುಂದೆ ಯಾರಿಗೆ ಪ್ರಶಸ್ತಿ ಬಂದಿಲ್ಲ ಎಂದು ಹುಡುಕುವ ಕಾಲ ಬರಬಹುದು. ನಾನು ಪ್ರಶಸ್ತಿಯನ್ನು ಅಪೇಕ್ಷೆ ಪಟ್ಟವನಲ್ಲ. ಕೃಷ್ಣ ಭಟ್ಟರ ಹೆಸರಿನ ಪ್ರಶಸ್ತಿಯಿಂದ ಸಂತಸವಾಗಿದೆ' ಎಂದು ಪ್ರೊ| ಸಾಮಗ ಹೇಳಿದರು.

ಸಿದ್ಧಕಟ್ಟೆಯಲ್ಲಿ ಪ್ರಶಸ್ತಿ ಪ್ರದಾನ

ಮಟ್ಟಿ ಮುರಲೀಧರ ರಾವ್‌ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸಿದ್ಧಕಟ್ಟೆಗೆ ತೆರಳಿ ಅಜ್ಜಿಬೆಟ್ಟು ನಿವಾಸದಲ್ಲಿ ಹಿರಿಯ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಸದಸ್ಯ ಪಿ. ಕಿಶನ್‌ ಹೆಗ್ಡೆಯವರು ಅಭಿನಂದಿಸಿದರು. ಕಲಾರಂಗದ ಕೆ.ಗಣೇಶ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌, ಎಂ. ಗಂಗಾಧರ ರಾವ್‌, ವಿ.ಜಿ. ಶೆಟ್ಟಿ, ಭುವನಪ್ರಸಾದ್‌ ಹೆಗ್ಡೆ, ಪೃಥ್ವಿರಾಜ ಕವತ್ತಾರ್‌ ಉಪಸ್ಥಿತರಿದ್ದರು. ಜಯಂತಿ ವಿಶ್ವನಾಥ ಶೆಟ್ಟಿಯವರನ್ನು ಶಿಲ್ಪಾ ಕಿಶನ್‌ ಹೆಗ್ಡೆ ಗೌರವಿಸಿದರು. ರಾಜಾಂಗಣದಲ್ಲಿ ನಡೆಯಬೇಕಾದ ಪ್ರಶಸ್ತಿ ಪ್ರದಾನ ವಿಶ್ವನಾಥ ಶೆಟ್ಟಿಯವರ ಮನೆಯಲ್ಲಿ ನಡೆಯಿತು.ಕೃಪೆ : udayavani
ಮೇ 31 , 2016

ಸ್ತ್ರೀ ವೇಷಧಾರಿ ಎಂ. ಎ. ನಾಯ್ಕರಿಗೆ ಸನ್ಮಾನ

ಮಾರಣಕಟ್ಟೆ : ಬಡಗುತಿಟ್ಟಿನ ಖ್ಯಾತ ಹಾಸ್ಯಗಾರ ಮಂದಾರ್ತಿ ಮೇಳದ ಹಾಸ್ಯಕಲಾವಿದ ಕಡಬ ಪೂವಪ್ಪನವರ 25 ವರ್ಷಗಳ ಸಾರ್ಥಕ ಯಕ್ಷ ತಿರುಗಾಟದ ಪ್ರಯುಕ್ತ ಮಂದಾರ್ತಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕರನ್ನು ಸನ್ಮಾನಿಸಲಾಯಿತು.

ಶ್ರೀ ಕ್ಷೇತ್ರ ಮಂದಾರ್ತಿಯ ಆಡಳಿತ ಮಂಡಳಿಯ ಅದ್ಯಕ್ಷ ಎಚ್. ದನಂಜಯ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಅಭಿನಂದನಾ ಬಾಷಣ ಮಾಡಿದ ಮಣಿಪಾಲ ಎಂ. ಐ. ಟಿ. ಯ ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು `` ಯಕ್ಷಗಾನದ ಗರತಿ ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಎಂ. ಎ. ನಾಯ್ಕರು ಬಡಗುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀ ವೇಷಧಾರಿಗಳಲ್ಲಿ ಒಬ್ಬರು ಎಂದರು``. ಮುಖ್ಯ ಅತಿಥಿಗಳಾಗಿ ವಿ. ಎಸ್. ಎಸ್. ಶಾಲೆ ಮುದ್ದೂರು ಇದರ ಅದ್ಯಕ್ಷ ದಿನೇಶ ಶೆಟ್ಟಿ, ಉದ್ಯಮಿಗಳಾದ ಮಂದಾರ್ತಿ ಗಂಗಾಧರ ಶೆಟ್ಟಿ, ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಕಡಬ ಪೂವಪ್ಪನವರು ಸ್ವಾಗತಿಸಿ, ಪ್ರಸಾದ್ ಕುಮಾರ್ ಮಂದರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಮೇ 31 , 2016

ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಯ ಒತ್ತಾಯ ಅರ್ಥಹೀನ : ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ

ಮಾರಣಕಟ್ಟೆ : ``ಹಿಂದೆ ಯಕ್ಷಗಾನವು ಜಾನಪದ ಅಕಾಡೆಮಿಯೊಂದಿಗೆ ವಿಲೀನವಾಗಿದ್ದು ಸದ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಎಂದು ಪ್ರತ್ಯೇಕ ಅಸ್ತಿತ್ವಹೊಂದಿದೆ. ಈಗ ಪುನಹ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಬೇಕು ಎಂಬ ಕೂಗು ಸಮಂಜಸವಲ್ಲ. ಸರಕಾರ ಪ್ರತಿಯೊಂದು ಕಲೆಗೂ ಹೀಗೆ ಅಕಾಡೆಮಿ ಸ್ಥಾಪಿಸುತ್ತಾ ಹೋಗುವುದು ಅಸಾದ್ಯ. ಇದರಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಬೀಳುವುದರೊಂದಿಗೆ ಮುಂದೊಂದು ದಿನ ತೆಂಕಿಗೆ ಬೇರೆ ಬಡಗುತಿಟ್ಟಿಗೆ ಬೇರೆ ಹೀಗೆ ಪ್ರತಿಯೊಂದು ತಿಟ್ಟಿಗೂ ಅಕಾಡೆಮಿ ಬೇಕು ಎಂಬ ಕೂಗು ಬರಬಹುದು`` ಎಂದು ಮಣಿಪಾಲ ಎಂ. ಐ. ಟಿ. ಪ್ರಾಧ್ಯಾಪಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.

ಅವರು ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ಕೊನೆಯ ದೇವರಸೇವೆ ಆಟದ ರಂಗಸ್ಥಳದಲ್ಲಿ ನಿವೃತ್ತ ಕಲಾವಿದರನ್ನು ಮೇಳದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ``ಈಗಾಗಲೇ ಅಕಾಡೆಮಿಯಲ್ಲಿ ಪ್ರತಿಷ್ಟಿತ ಪಾರ್ತಿಸುಬ್ಬ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳಿದ್ದು, ಮುಂದೊಂದು ದಿನ ಪಾರ್ತಿಸುಬ್ಬ ಪ್ರಶಸ್ತ್ತಿಯಂತ ಪ್ರಶಸ್ತಿ ಪಡೆಯಲು ಅರ್ಹತೆ ಉಳ್ಳವರು ಸಿಗುವುದೇ ಕಷ್ಟಸಾದ್ಯವಾಗ ಬಹುದು`` ಎಂದು ಹೇಳಿದರು. ಶ್ರೀ ಕ್ಷೇತ್ರದ ಅನುವಂಶಿಕ ಮುಖ್ತೇಸರ ಸಿ. ಸೀತಾರಾಮ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಹಿರಿಯ ಸ್ತ್ರೀ ವೇಷಧಾರಿ ಬೇಳಂಜೆ ಜಯಂತ ನಾಯಕ್. ಚೆಂಡೆವಾದಕ ಗೋಳಿಹೊಳೆ ಸದಾನಂದ ಪ್ರಭು, ಮೇಳದ ಸಿಬ್ಬಂದಿ ಮಂಜು ದೇವಾಡಿಗ ಇವರನ್ನು ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಕೆಂಚನೂರು ಶಂಕರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ ಆಗಮಿಸಿದ್ದರು. ಚಿತ್ತೂರು ರಘುರಾಮ ಶೆಟ್ಟಿ ಸ್ವಾಗತಿಸಿ ಮಹಾಬಲ ಶೆಟ್ಟಿ ವಂದಿಸಿದರು. ಬಳಿಕ ಎರಡೂ ಮೇಳಗಳ ದೇವರಸೇವೆ ನಡೆಯಿತು. ಶೆಟ್ಟಿ, ಎಂ.ಬಿ. ಪುರಾಣಿಕ್‌, ಎ. ಸದಾನಂದ ಶೆಟ್ಟಿ, ಐಕಳ ಗಣೇಶ್‌, ಡಾ. ಸತೀಶ್‌ ಭಂಡಾರಿ, ಡಾ. ಪದ್ಮನಾಭ ಕಾಮತ್‌, ರವಿಶೆಟ್ಟ ಮೂಡಂಬೈಲು ಮತ್ತಿತರರು ಉಪಸ್ಥಿತರಿದ್ದರು.


ಮೇ 23 , 2016

ಯಕ್ಷಗಾನ ಸೇವೆಯಲ್ಲಿ ಭಕ್ತಿಯೇ ಪ್ರಧಾನ : ಹರಿನಾರಾಯಣದಾಸ ಅಸ್ರಣ್ಣರು

ಮಂಗಳೂರು : ಯಕ್ಷಗಾನ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಯಕ್ಷಧ್ರುವ ಪಟ್ಲ ಸಂಭ್ರಮ 2016 ಭಾನುವಾರ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ವೈವಿಧ್ಯಮಯವಾಗಿ ನಡೆಯಿತು.

ಸಮಾರಂಭದಲ್ಲಿ ಮುಖ್ಯವಾಗಿ ಕಲಾವಿದರ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ತುರ್ತು ಚಿಕಿತ್ಸೆಯ ನೆರವು ಮತ್ತು ದುರ್ಮರಣಕ್ಕೆ ಈಡಾದ ಕಲಾವಿದರ ಕುಟುಂಬಗಳಿಗೆ ನೆರವು ವಿತರಿಸಲಾಯಿತು. ಇದರೊಂದಿಗೆ ಗಾನ ವೈಭವ, ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನದೊಂದಿಗೆ ದಿನವಿಡೀ ಕಲಾ ಸಕ್ತರು ಮೆಚ್ಚುವ ಕಾರ್ಯಕ್ರಮಗಳು ನಗರದ ಪುರಭನವನದಲ್ಲಿ ನಡೆದವು.

ಪಟ್ಲ ಸಂಭ್ರಮವನ್ನು ಉದ್ಘಾಟಿಸಿದ ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ರಾದ ಹರಿನಾರಾಯಣದಾಸ ಅಸ್ರಣ್ಣರು, ಯಕ್ಷಗಾನವು ಭಕ್ತಿ ರಸವನ್ನು ಉದ್ದೀಪಿಸಬೇಕೇ ಹೊರತು ಅಶ್ಲೀಲ ಹಾಸ್ಯದ ಮೂಲಕ ಜನಪ್ರಿಯತೆಯನ್ನು ಪಡೆಯುವ ಉದ್ದೇಶ ಹೊಂದಿರಬಾರದು ಎಂದು ಅವರು ಕಿವಿಮಾತು ಹೇಳಿದರು.

ಕಟೀಲು ಮೇಳವು ಭಕ್ತಿ ಪ್ರಧಾನವಾದ ಪ್ರಸಂಗಗಳನ್ನೇ ಆಡುತ್ತ ಬಂದಿದ್ದು, ಪರಂಪರೆಗೆ ಹೆಚ್ಚು ಒತ್ತು ನೀಡುತ್ತದೆ. ಆದ್ದರಿಂದ ಆಶ್ಲೀಲತೆಗಾಗಲೀ, ಯಕ್ಷಗಾನೀಯವಲ್ಲದ ಕುಣಿತಕ್ಕಾಗಲೀ ಅವಕಾಶ ನೀಡದೇ ಪ್ರೇಕ್ಷಕರ ಮನಸ್ಸನ್ನು ಭಗವಂತನತ್ತ ಕೊಂಡೊಯ್ಯುವ ಕೆಲಸ ವನ್ನು ಭಾಗವತರಾದವರು ಮಾಡಬೇಕು. ಸೇವೆಯ ಆಟದಲ್ಲಿ ಭಕ್ತಿಯೇ ಮುಖ್ಯವಾಗಬೇಕೇ ಹೊರತು ಅಶ್ಲೀಲತೆ ಅಥವಾ ಜನಪ್ರಿಯತೆ ಮುಖ್ಯವಾಗಬಾರದು. ಇಂತಹ ಪರಂಪರೆಯನ್ನು ಉಳಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಪಟ್ಲ ಸತೀಶ್‌ ಶೆಟ್ಟಿ ಅವರು ಸಮಾಜಮುಖಿಯಾಗಿ ನಡೆಸುವ ಕೆಲಸವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.

ಡಾ. ಶಾಂತಾರಾಮ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಾದದ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಬಲಿಪ ನಾರಾಯಣ ಭಾಗವತರು, ಸವಣೂರು ಸೀತಾರಾಮ ಶೆಟ್ಟಿ, ಎಂ.ಬಿ. ಪುರಾಣಿಕ್‌, ಎ. ಸದಾನಂದ ಶೆಟ್ಟಿ, ಐಕಳ ಗಣೇಶ್‌, ಡಾ. ಸತೀಶ್‌ ಭಂಡಾರಿ, ಡಾ. ಪದ್ಮನಾಭ ಕಾಮತ್‌, ರವಿಶೆಟ್ಟ ಮೂಡಂಬೈಲು ಮತ್ತಿತರರು ಉಪಸ್ಥಿತರಿದ್ದರು.

ಕೃಪೆ : prajavani
ಮೇ 23 , 2016

ಕಲಾವಿದರ ಸಾಮೂಹಿಕ ಪರಿಶ್ರಮವೇ ಪ್ರಸಂಗದ ಯಶಸ್ಸಿಗೆ ಕಾರಣ

ಸಾಸ್ತಾನ : ಯಕ್ಷಗಾನ ಕಲಾವಿದರು ಹಿಮ್ಮೇಳ ಮುಮ್ಮೇಳದ ಸಾಂಗತ್ಯದಲ್ಲಿ ಸಾಮೂಹಿಕ ಪರಿಶ್ರಮಪಟ್ಟಲ್ಲಿ‌ಆದುನಿಕ ಪ್ರಸಂಗಗಳು ಯಶಸ್ವಿಯಾಗಬಲ್ಲವು. ಕೇವಲ ಪ್ರಸಂಗಕರ್ತರೊಬ್ಬರಿಂದಲೇ ಪ್ರಸಂಗ ಯಶಸ್ವಿಯಾಗದು. ಮೇಳದ ವ್ಯವಸ್ಥಾಪಕರು ಮತ್ತು ಕಲಾವಿದರ ಹೊಣೆಗಾರಿಕೆಯೂ ಅಷ್ಟೇ ಮುಖ್ಯ. ಗೋಳಿಗರಡಿ ಮೇಳದ ದಕ್ಷ ಯಜಮಾನರಾದ ವಿಠಲ ಪೂಜಾರಿಯವರ ನೇತ್ರತ್ವದಲ್ಲಿ ಮೂರು ಹೊಸ ಪ್ರಸಂಗಗಳು ಯಶಸ್ವಿಯಾದದ್ದು ಮೇಳಕ್ಕೂ ಕಲಾವಿದರಿಗೂ ಘನತೆಯನ್ನು ತಂದಿದೆ ಎಂದು ಯಕ್ಷಗಾನ ವಿಮರ್ಶಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.

ಅವರು ಶ್ರೀ ಗೋಳಿಗರಡಿ ಮೇಳದ ಕೊನೆಯ ದೇವರಸೇವೆಯಂದು ಮೇಳಕ್ಕೆ ಪ್ರಸಂಗಗಳನ್ನು ನೀಡಿದ ಕೊಡವೂರು ದಿನೇಶ ಸುವರ್ಣ,ಯಕ್ಷಾನಂದಕುತ್ಪಾಡಿಯವರನ್ನು ಮೇಳದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ಗೋಳಿಗರಡಿ ಮೇಳದ ಯಜಮಾನರಾದ ಜಿ. ವಿಠಲ ಪೂಜಾರಿ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾವಿದ ಐರೋಡಿ ಗೋವಿಂದಪ್ಪ ಆಗಮಿಸಿದ್ದರು. ಗರಡಿಯ ಪಾತ್ರಿ ಶಂಕರ ಪೂಜಾರಿ,ಸಮಿತಿಯ ಸದಸ್ಯರಾದ ಗಣಪಯ್ಯ ಆಚಾರ್ಯ,ಕೇಶವ ಆಚಾರ್ಯ,ಶಂಕರ ಕುಲಾಲ್,ರಾಜು ಪೂಜಾರಿ ಉಪಸ್ಥಿತರಿದ್ದರು. ಶ್ರೀ ಗಣೇಶ ಪಾಂಡೇಶ್ವರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಮೇ 23 , 2016

ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾಯರಿಗೆ ತೊಂಬತ್ತೇಳರ ಸಂಭ್ರಮ

ಹಿರಿಯಡ್ಕ : ಬಡಗುತಿಟ್ಟು ಯಕ್ಷಗಾನದ ಮದ್ದಳೆ ಮಾಂತ್ರಿಕ, ಏರು ಮದ್ದಳೆಯ ಜನಕ ಶ್ರೀ ಮಂದಾರ್ತಿ ಮೇಳವೊಂದರಲ್ಲೇ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮಗಾಣಿಗರೊಂದಿಗೆ ದೀರ್ಘ ಕಾಲ ತಿರುಗಾಟ ಮಾಡಿದ ಹಿರಿಯಡ್ಕ ಗೋಪಾಲ ರಾವ್ ಅವರಿಗೆ ಈಗ ವಯಸ್ಸು 97ರ ಹರೆಯ. ಅವರ ಶಿಷ್ಯರು, ಕಾಜಾರಗುತ್ತು ಯಕ್ಷಗಾನ ಮಂಡಳಿಯ ಸದಸ್ಯರು. ವಿದೇಶದಿಂದ ಬಂದು ಆ ಕಾಲದಲ್ಲಿ ಗೋಪಾಲ ರಾಯರಲ್ಲಿ ಯಕ್ಷಗಾನ ಕಲಿತು ಡಾಕ್ಟರೇಟ್ ಮಾಡಿದ ಅವರ ಶಿಷ್ಯೆ ಅಮೇರಿಕಾದ ಮಾರ್ಥಾ ಆಸ್ಟನ್ ಅವರ ಉಪಸ್ಥಿತಿಯಲ್ಲಿ ಮೇ 18ರಂದು ಹಿರಿಯಡ್ಕದಲ್ಲಿ ಅಭಿನಂದನಾ ಕಾರ್ಯಕ್ರಮ‌ ಇರಿಸಿಕೊಂಡಿದ್ದರು.

ದೊಂದಿ ಬೆಳಕಿನ ಪೂರ್ವರಂಗದೊಂದಿಗೆ ಪರಂಪರೆಯ ಶೈಲಿಯ ಬಾಣಾಸುರ ಕಾಳಗ ಪ್ರಸಂಗದ ಪ್ರದರ್ಶನವೂ ಅಂದಿನ ವಿಶೇಷ ಕಾರ್ಯಕ್ರಮವಾಗಿತ್ತು. ಕೇಂದ್ರ ಸಂಸ್ಕತಿ ಇಲಾಖೆ, ಇನ್ನುಳಿದ ಸಂಸ್ಥೆಗಳ ಸಹಯೋಗದಲ್ಲಿ ದಾಖಲೀಕರಣಗೊಂಡ ಈ ಕಾರ್ಯಕ್ರಮ ಪೂರ್ವರಂಗ ಬಾಲಗೋಪಾಲ, ಅರ್ದನಾರೀಶ್ವರ ಒಡ್ಡೊಲಗ ಸಹಿತ ಅಳಿವಿನ ಅಂಚಿನಲ್ಲಿರುವ ಬಡಗುತಿಟ್ಟಿನ ಇತಿಹಾಸದ ಅಪೂರ್ವ ದೊಂದಿಬೆಳಕಿನ ಪೂರ್ವರಂಗದ ದಾಖಲೀಕರಣವಾಗಿದೆ.

ಹಿರಿಯಡ್ಕ ಗೋಪಾಲರಾಯರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿ ವರ್ಷ 47 ಸಂದಿದೆ. 97 ವರ್ಷದ ಈ ಹಿರಿಯರು ಉಡುಪಿ ಪರಿಸರದಲ್ಲಿ ಯಕ್ಷಗಾನ ಹಾಗಲ್ಲದೆ ಸಾಹಿತ್ಯದ ಕುರಿತು ವಿಚಾರ ಸಂಕಿರಣ ಸಭೆ ಸಮಾರಂಭದಲ್ಲಿ ತಪ್ಪದೆ ಕಂಡು ಬರುವ ವ್ಯಕ್ತಿ. ದಶಕಗಳಿಂದ ಕಾಣುತ್ತಿರುವ ನಮ್ಮ ಮುಂದಿರುವ ಒಂದು ಬಿಳಿ ತಲೆ. ಯಕ್ಷಗಾನ ಲೋಕದ ಜೀವಂತ ದಂತ ಕಲೆಯಾಗಿರುವ ಇವರು ಸಂಘ ಸಂಸ್ಥೆಯವರು ಆಸಕ್ತರು ಕರೆದರೆ ಹೋಗಿ ತಮ್ಮ ಅನುಭವ ಪೂರ್ಣ ಮಾಹಿತಿ ತರಬೇತಿ ನೀಡುತ್ತಾರೆ. ಭಾಗವತ ಕುಂಜಾಲು ಶೇಷಗಿರಿ ಕಿಣಿ, ಹಾರಾಡಿ ರಾಮಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಶಿರಿಯಾರ ಮಂಜುನಾಕ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೊಳ್ಕೆಬೈಲು ಶೀನ ನಾಯ್ಕ, ಕೊಕ್ಕರ್ಣೆ ನರಸಿಂಹ ಕಾಮತ್ ಮುಂತಾದವರನ್ನು ಒಳಗೊಂಡ ಬಡಗುತಿಟ್ಟು ಯಕ್ಷಗಾನದ ಸುವರ್ಣಯುಗದ ಓರ್ವ ಪ್ರತಿನಿಧಿಯಾಗಿ ನಮ್ಮೊಂದಿಗಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಗೋಪಾಲರಾಯರು ಒಬ್ಬರು. ಮದ್ದಳೆ ವಾದನದ ಗಂಟು ಉರುಳಿಕೆ, ಏರುಮದ್ದಳೆ, ಅಲ್ಲದೆ ಆಧುನಿಕ ಶಿಕ್ಷಣ ಪದ್ಧತಿಯು ಬಡಗುತಿಟ್ಟು ಯಕ್ಷಗಾನಕ್ಕೆ ರಾಯರ ಮೂರು ಮುಖ್ಯ ಕೊಡುಗೆಗಳು.

ಗೋಪಾಲರಾಯರ ಕಿರೀಟಕ್ಕೊಂದು ಗರಿ ಮೂಡಿದಂತೆ ಶತಮಾನಕ್ಕೆ ಹತ್ತಿರವಿರುವ ಈ ಇಳಿ ವಯಸ್ಸಿನ ಹಿರಿಯರಿಗೆ ಸಲ್ಲುತ್ತಿರುವ ಈ ಅಭಿನಂದನಾ ಗೌರವ ಬಡಗುತಿಟ್ಟಿನ ಹಿರಿಯ ಕೀರ್ತಿಶೇಷ ಕಲಾವಿದರಿಗೆ ಸಲ್ಲುತ್ತಿರುವ ಗೌರವ ಎನ್ನಬಹುದು.

ಮೇ 10 , 2016

ಯಕ್ಷದೇಗುಲ ತಂಡದ “ಕೌಸಲ್ಯಾ ವಿವಾಹ” ಹೊಸ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ

ಕೆಂಜೂರು : “ಪೌರಾಣಿಕ ಪ್ರಸಂಗಗಳು ಭಾರತೀಯ ಸಂಸ್ಕೃತಿ ಸಂಪ್ರದಾಯಗಳು, ಆಚಾರ-ವಿಚಾರಗಳು, ವಿದ್ಯಾಭ್ಯಾಸ, ಶಾಸ್ತ್ರಾಭ್ಯಾಸ ಮುಂತಾದವುಗಳಿಗೆ ಸಂಬಂಧಿಸಿದವುಗಳಾಗಿರುವುದರಿಂದ ಜನಗಳಲ್ಲಿ ಸಚ್ಚಾರಿತ್ರ್ಯ, ನೈತಿಕ-ಮೌಲ್ಯಗಳು, ಸರಳಜೀವನ, ಸದ್ಗುಣಗಳಂಥ ಆದರ್ಶಗಳನ್ನು ಬೆಳೆಸುವುದೇ ಗುರಿಯಾಗಿದೆ ಹೀಗಾಗಿ ವೈಚಾರಿಕತೆ ಜನರ ಮನರಂಜನೆಗೆ ಪೂರಕ ಉದ್ದೇಶಗಳಾಗಿವೆ. ಈ ನಿಟ್ಟಿನಲ್ಲಿ ಸದಾ ಬೆಂಗಳೂರಿನ ಯಕ್ಷದೇಗುಲ ತಂಡವು ಒಂದಲ್ಲಾವೊಂದು ಚಟುವಟಿಕೆಯಿಂದಿರುವ ಪ್ರತಿವರ್ಷವು ಹಲವು ಪೌರಾಣಿಕ ಹೊಸ ಪ್ರಸಂಗವನ್ನೂ ಜನರಿಗೆ ನೀಡುತ್ತಿದೆ. ಅಲ್ಲದೇ ಶಾಲಾ, ಕಾಲೇಜುಗಳಲ್ಲಿ ಯಕ್ಷಗಾನದ ಪ್ರಾತ್ಯಕ್ಷಿತೆ ನಡೆಸುವ ಮೂಲಕ ಮಕ್ಕಳಲ್ಲಿ ಆಸಕ್ತಿ ತೋರಿಸುವಲ್ಲಿ ಯಕ್ಷದೇಗುಲ ತಂಡದ ಸಾಧನೆ ಮೆಚ್ಚುವಂತಿದೆ. ಇಂದು ಪ್ರದರ್ಶನಗೊಳ್ಳುವ ``ಕೌಸಲ್ಯಾ ವಿವಾಹ`` ಪ್ರಸಂಗ ಹಲವು ಪ್ರದರ್ಶನ ಕಂಡು ಯಶಸ್ವಿಯಾಗಲಿ” ಎಂದು 08-05-2016ರಂದು ಕೋಟ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನದ ರಥೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿವರ್ಷ ನೂತನ ಪೌರಾಣಿಕ ಪ್ರಸಂಗ ಪ್ರದರ್ಶನ ನಡೆಸುವ ಬೆಂಗಳೂರಿನ ಯಕ್ಷದೇಗುಲ ತಂಡದವರು ಪ್ರಸ್ತುತ ವರ್ಷ ಮಹಾಬಲೇಶ್ವರ ಬರವಣಿ ವಿರಚಿತ “ಕೌಸಲ್ಯಾ ವಿವಾಹ” ಯಕ್ಷಗಾನ ಪ್ರದರ್ಶನದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಚಾಲನೆ ನೀಡಿ ಮಾತನಾಡಿದರು. ಹಾಗೆ ವೇದಿಕೆಯಲ್ಲಿ ಹಂದೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅಮರ ಹಂದೆ ಮತ್ತು ಹಂದಟ್ಟು ಅಭಿಮಾನ್ ಫ್ರೆಂಡ್ಸ್‌ನ ಸದಸ್ಯರಾದ ಮಂಜುನಾಥ ಉರಾಳರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನರಸಿಂಹ ತುಂಗ ನಿರೂಪಿಸಿದರು.

ನಂತರ ಕೆ.ಮೋಹನ್ ನಿರ್ದೇಶನದಲ್ಲಿ ನಡೆದ “ಕೌಸಲ್ಯಾ ವಿವಾಹ” ಯಕ್ಷಗಾನದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ದೇವರಾಜ್ ದಾಸ್, ಮದ್ದಲೆಯಲ್ಲಿ ಗಣಪತಿ ಭಟ್, ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ಶಿವಾನಂದ ಕೋಟ, ಮಾಧವ ಮಣೂರು ಮತ್ತು ಬಾಲ ಕಲಾವಿದರಾಗಿ ಸುದೀಪ ಉರಾಳ ಹಾಗೂ ವಾಗ್ವೀಲಾಸ ಭಾಗವಹಿಸಿದರು. ಮುಮ್ಮೇಳದಲ್ಲಿ ಭಾನುಮಂತನಾಗಿ ಗಣೇಶ ಉಪ್ಪುಂದ, ಮಂತ್ರಿಯಾಗಿ ರಾಘವೇಂದ್ರ ತುಂಗ, ದಶರಥನಾಗಿ ಸುಜಯೀಂದ್ರ ಹಂದೆ, ಬ್ರಹ್ಮನಾಗಿ ಮನೋಜ್ ಭಟ್, ರಾವಣನಾಗಿ ತಮ್ಮಣ್ಣ ಗಾಂವ್ಕರ್. ಕೌಸಲ್ಯೆಯಾಗಿ ಕಡ್ಲೆ ಗಣಪತಿ ಹೆಗಡೆ, ಸಖಿಯರಾಗಿ ಕಿರಾಡಿ ವಿಶ್ವನಾಥ ಹಾಗೂ ಶ್ರೀಕಾಂತ ಭಾಗವಹಿಸಿದರು. ಸಂಯೋಜನೆಯನ್ನು ಯಕ್ಷದೇಗುಲದ ಸುದರ್ಶನ ಉರಾಳರು ಮಾಡಿದರು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಉತ್ತರಹಳ್ಳಿಯ RNSIT ಇಂಜಿನಿಯರಿಂಗ್ ಕಾಲೇಜ್ ಹತ್ತಿರವಿರುವ “ಅತ್ರಿ ವೆಜ್ ರೆಸ್ಟೋರೆಂಟ್”ರವರು ಸಹಕಾರ ನೀಡಿದರು.


ಮೇ 7 , 2016

ಗೋವಿಂದ ಭಟ್ಟರು ಸಿದ್ಧಿಯಿಂದ ಪ್ರಸಿದ್ಧಿಗೇರಿದ ಶ್ರೇಷ್ಟ ಕಲಾವಿದ : ಎಸ್. ವಿ. ಉದಯಕುಮಾರ ಶೆಟ್ಟಿ

ಕೆಂಜೂರು : “ವಿದ್ಯೆ ಮತ್ತು ವಿನಯತೆ ಒಬ್ಬ ವ್ಯಕ್ತಿಯಲ್ಲಿ ಹಾಸುಹೊತ್ತಾದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ತೆಂಕು ಬಡಗುತಿಟ್ಟಿನ ಕಲಾವಿದರಿಗೆ ಆದರ್ಶ ಮಾದರಿಯಾಗಬಲ್ಲ ಕೆ. ಗೋವಿಂದ ಭಟ್ಟರು ತನ್ನ ವಿಧೇಯತೆ ವಿನಯತೆಗಳಿಂದ ಕಲಾಭಿಮಾನಿಗಳ ಮನಸ್ಸನ್ನು ಗೆದ್ದವರು. ತನ್ನ ಪ್ರಾಮಾಣಿಕ ಪರಿಶ್ರಮದಿಂದ ಎಪ್ಪತ್ತೈದರ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸಬಲ್ಲ ಅಭಿನಯದಲ್ಲಿ ಯಕ್ಷಗಾನ ರಂಗದಲ್ಲಿ ಮೇರು ಕಲಾವಿದರಾಗಿ ಗುರುತಿಸಿಕೊಂಡವರು. ಸಿದ್ಧಿಯಿಂದ ಪ್ರಸಿದ್ಧಿಗೇರಿದ ತೆಂಕುತಿಟ್ಟಿನ ದಶಾವಾತಾರಿ ಎಂದು ಅವರನ್ನು ಗುರುತಿಸಬಹುದು“ ಎಂದು ಮಣಿಪಾಲ ಎಂ. ಐ. ಟಿ ಪ್ರಾಧ್ಯಾಪಕ, ಯಕ್ಷಗಾನ ಚಿಂತಕ ಪ್ರೊ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.

ಅವರು ಕೆಂಜೂರು ಬಲ್ಲೆಬೈಲುನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ವೇದಿಕೆಯಲ್ಲಿ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಮತ್ತು ಮೇಳದ ಪ್ರಭಂದಕ ಗಿರೀಶ್ ಹೆಗ್ಡೆಯವರ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಮಾತನ್ನಾಡಿದರು. ಸನ್ಮಾನ ನೆರವೇರಿಸಿ ಮಾತನಾಡಿದ ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಿ. ಕಿಷನ್ ಹೆಗ್ಡೆಯವರು ಕಲಾವಿದರೊಂದಿಗೆ ಮೇಳದ ಸಿಬ್ಬಂದಿ ವರ್ಗವನ್ನು ಗುರುತಿಸುವುದು ಅರ್ಥಪೂರ್ಣ ಎಂದರು.

ಕಾರ್ಯಕ್ರಮ ವ್ಯವಸ್ಥಾಪಕ ಶೇಖರ ಶೆಟ್ಟಿಯವರು ಹಿರಿಯ ಕಲಾವಿದರಾದ ಕುಂಬ್ಳೆ ಶ್ರೀಧರ ರಾವ್ ಮತ್ತು ಕೆದಿಲ ಜಯರಾಮ ಭಟ್ಟರನ್ನು ಸನ್ಮಾನಿಸಿದರು. ನಾಲ್ಕೂರು ಇಂಗ್ಲೀಷ್ ಮೀಡಿಯಮ್ ಶಾಲೆಯ ಅದ್ಯಕ್ಷ ದಿನೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು. ಬಳಿಕ ಶ್ರೀ ಧರ್ಮಸ್ಥಳ ಮೇಳದವರಿಂದ ``ಧರ್ಮಸ್ಥಳ ಕ್ಷೇತ್ರ ಮಹಾತ್ಮೆ `` ಯಕ್ಷಗಾನ ನೆರವೇರಿತು.ಎಪ್ರಿಲ್ 15 , 2016

ರಾಮಕೃಷ್ಣ ಮಂದಾರ್ತಿಯವರದ್ದು ಸಾಹಿತ್ಯ ಶುದ್ಧತೆಯ ವಾದನ ಶೈಲಿ : ಎಸ್. ವಿ. ಉದಯಕುಮಾರ ಶೆಟ್ಟಿ

ಕುಂಬಾಶಿ : “ಪದ್ಯದ ಸಾಹಿತ್ಯಕ್ಕೆ ಭಂಗಬರದ ರೀತಿಯಲ್ಲಿ ಮೃದುವಾದ ನುಡಿತದ, ಛಂದಸ್ಸಿಕ್ಕಣುಗುಣವಾದ ವಾದನ ಶೈಲಿಯನ್ನು ಮೈಗೂಡಿಸಿಕೊಂಡ ರಾಮಕೃಷ್ಣ ಮಂದಾರ್ತಿಯವರು ಚೆಂಡೆಯ ಮಾಂತ್ರಿಕ ಕೆಮ್ಮಣ್ಣು ಆನಂದರ ಉತ್ತರಾಧಿಕಾರಿಯಾಗಿ ಗುರುತಿಸಿ ಕೊಂಡವರು. ಭಾರತೀಯ ಸಂಗೀತ ಉಪಕರಣಗಳಲ್ಲಿ ಚೆಂಡೆಯು ಸ್ವತಂತ್ರ ವಾದನೋಪಕರಣವಾಗಿರದೆ, ಮದ್ದಳೆಯ ಗುಂಪು ಛಾಪಿನೊಂದಿಗೆ ಚೆಂಡೆಯ ನಾದ ಸೇರಿಕೊಂಡಾಗ ಮಾತ್ರ ಕರ್ಣಾನಂದಕರವಾದ ನಾದ ಹೊರಹೊಮ್ಮುತ್ತದೆ ಎಂಬ ಸೂಕ್ಷ್ಮ ಅರಿತ ಇವರ ವಾದನ ಶೈಲಿ ಇಂದಿನ ಕಿರಿಯ ಕಲಾವಿದರಿಗೆ ಅನುಕರಣೆಯೋಗ್ಯ ಎಂದು ಮಣಿಪಾಲ ಎಂ. ಐ. ಟಿ. ಪ್ರಾಧ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟಿಯವರು ಅಭಿಪ್ರಾಯಪಟ್ಟರು.

ಅವರು ಕುಂಬಾಶಿಯಲ್ಲಿ ಹಾಕಿದ ಶ್ರೀ ಸಾಲಿಗ್ರಾಮ ಮೇಳದ ವೇದಿಕೆಯಲ್ಲಿ ಹಿರಿಯ ಚೆಂಡೆವಾದಕ ರಾಮಕೃಷ್ಣ ಮಂದಾರ್ತಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಕಿಷನ್ ಹೆಗ್ಡೆಯವರು ಮಾತನಾಡಿ ರಾಮಕೃಷ್ಣ ಮಂದಾರ್ತಿಯವರು ಚೆಂಡೆವಾದನದಲ್ಲಿ ಶಿಷ್ಯರನ್ನು ಅಣಿಗೊಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ ಕೋಟ ಗೀತಾನಂದ ಪೌಂಡೇಷನ್ ಅದ್ಯಕ್ಷ ಆನಂದ ಸಿ. ಕುಂದರ್ ಅವರು ಮಂದಾರ್ತಿಯವರನ್ನು ಪಲಪುಷ್ಫ ಅರ್ಪಿಸಿ ಸ್ಮರಣಿಕೆ ಸನ್ಮಾನ ಪತ್ರ ಅರ್ಪಿಸಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಕುಂಬಾಶಿ ಗ್ರಾಮ ಪಂಚಾಯತ್ ಅದ್ಯಕ್ಷೆ ಶ್ರೀಮತಿ ವಾಣಿ ಅಡಿಗ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ಮೊಗವೀರ ಸಂಘ ಬೆಂಗಳೂರು ಅದ್ಯಕ ಬಿ. ಎನ್. ನರಸಿಂಹ, ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ ಕಾಂಚನ್, ಉದ್ಯಮಿ ಆನಗಳ್ಳಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕ ಬೆಂಗಳೂರಿನ ಉದ್ಯಮಿ ಸುದಾಕರ ಭಂಗೇರ ಸ್ವಾಗತಿಸಿದರು. ಶಿವರಾಮ ಅಮೀನ್ ಕೋಟ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು. ಬಳಿಕ ಸಾಲಿಗ್ರಾಮ ಮೇಳದವರಿಂದ ವಜ್ರಮಾನಸಿ ಎಂಬ ಆಖ್ಯಾನದ ಪ್ರದರ್ಶನ ನೆರವೇರಿತು.ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ