ಮಾತಿನ ಮಲ್ಲ ಹಿರಿಯ ಕಲೋಪಾಸಕ - ಉದ್ಯಾವರ ವಾಮನ ಮಾಸ್ತರ್
ಲೇಖಕರು : ಗಣೇಶ್ ಬಿ. ಕುಂಜತ್ತೂರು
ಭಾನುವಾರ, ಸೆಪ್ಟೆ೦ಬರ್ 13 , 2015
|
ಯಕ್ಷಗಾನ ಕಲೆಯನ್ನು ಆರಾಧನೆ ಎಂದು ಭಾವಿಸಿ ಆಸಕ್ತಿ ಮತ್ತು ಶ್ರದ್ಧೆಯಿಂದ ಪಂಚಪ್ರಾಣವೆಂದು ತಿಳಿದು ಶ್ರಮಿಸುತ್ತ ಬೆಳೆದು ಬಂದವರು ವಾಮನ ಮಾಸ್ತರ್. ಪುರಾಣದ ಅಧ್ಯಯನ, ವಿಮರ್ಶೆ, ತರ್ಕ, ವಾದ, ವಿವಾದ, ವಿತರ್ಕ ಈ ಎಲ್ಲ ಅಂಶಗಳಲ್ಲಿ ಪ್ರತ್ಯುತ್ಪನ್ನಮತಿತ್ವವನ್ನು ತೋರಿ ಯಕ್ಷಗಾನ ತಾಳಮದ್ದಳೆಯಲ್ಲಿ ಮೆರೆದ ಹೆಚ್ಚುಗಾರಿಕೆ ಇವರದು. ಮುಖ್ಯವಾಗಿ ಸಂಘ ಸಂಸ್ಥೆಗಳ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಪುರಾಣಕೋಶ, ಮಾತಿನ ಮಲ್ಲ ಎಂಬ ನೆಗಳ್ತೆಗೆ ಪಾತ್ರರಾದ ವಾಮನ ಮಾಸ್ತರ್ ಇನ್ನಿಲ್ಲ ಎಂಬುದು ವಿಷಾದ.
|
ಉದ್ಯಾವರ ವಾಮನರ ತಂದೆ ಕುಚ್ಚಿ ಮೇಸ್ತ್ರಿ, ತಾಯಿ ಕಲ್ಯಾಣಿ, ಮಂಜೇಶ್ವರದಲ್ಲಿ ಜನಿಸಿ ವಿದ್ಯಾಭ್ಯಾಸ ಇಲಾಖೆಯಲ್ಲಿ ವೃತ್ತಿ ಜೀವನ ನಡೆಸಿದರು. ಪ್ರವೃತ್ತಿಯಾಗಿ ಯಕ್ಷಗಾನ ಕಲೆಯಲ್ಲಿ ತೊಡಗಿಕೊಂಡಿದ್ದರು. ಎಂಬತ್ತೈದರ ಮಾಗಿದ ವಯಸ್ಸಿನಲ್ಲಿಯೂ ತಾಳಮದ್ದಳೆಯನ್ನು ಬಿಟ್ಟವರಲ್ಲ. ಕಡಂಬಾರು ಕೊರಗಪ್ಪ ಮಾಸ್ಟರ್ ಹಾಗೂ ಜಪ್ಪು ಪಕೀರ ಬಂಗೇರರ ಮಾರ್ಗದರ್ಶನದಲ್ಲಿ ಪ್ರಥಮ ಬಾರಿಗೆ ಶೂರ ಪದ್ಮಾಸುರ ಕಾಳಗದ ಭಾನುಕನ ಪಾತ್ರ ವಹಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಅವಕಾಶವೇ ವಾಮನ ಮಾಸ್ತರರಲ್ಲಿ ಕಲಾ ಪ್ರತಿಭೆಯ ಮೊಳಕೆಯಾಗಿ ಹೆಮ್ಮರವಾಯಿತು. 1951ನೇ ಇಸವಿಯಲ್ಲಿ ಉದ್ಯಾವರ ಮೇಳದಲ್ಲಿ ತಿರುಗಾಟ ನಡೆಸಿದ ಇವರು ಕೂಡ್ಲು, ಬಪ್ಪನಾಡು ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ ಅತಿಥಿ ಕಲಾವಿದರಾಗಿ, ಕರ್ನೂರು ಕೊರಗಪ್ಪ ರೈಯವರ ಕಲಾ ಸಂಘದಲ್ಲಿ ಖಾಯಂ ಕಲಾವಿದರಾಗಿ ಕಲಾಪ್ರತಿಭೆ ಮೆರೆಸಿದ್ದರು.
ನಿಸ್ವಾರ್ಥ ಮನೋಭಾವದಿಂದ ಮೂರ್ನಾಲ್ಕು ದಶಕಗಳ ತನಕ ವಾರದ ಕೂಟಗಳಲ್ಲಿ ಇವರು ಮಾಡಿರುವ ಸೇವೆ ಅನನ್ಯವಾದುದು. ಮಂಗಳೂರು ಬೋಳಾರ ಮಾರಿಗುಡಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರುಮಂದಿರ, ಉದ್ಯಾವರ ಅರಸು ಮಂಜಿಷ್ಠಾರ್ ದೈವಸ್ಥಾನ ಮೊದಲಾದೆಡೆ ನಡೆಯುತ್ತಿದ್ದ ವಾರದ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತ, ಜ್ಞಾನದಾಹಿಗಳಿಗೆ ಉಪದೇಶ ಮಾಡುತ್ತ ಹೃದಯವಂತರಾಗಿ ಬಾಳಿದವರು. ಶ್ರೀ ಚಾಮುಂಡೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾ ಸಂಘ, ಪಾವೂರು ಪೊಯೆ ಇದರ ಸ್ಥಾಪಕ ಅಧ್ಯಕ್ಷರಾಗಿ ಸಂಸ್ಥೆಯನ್ನು ಬೆಳೆಸಿದ್ದಾರೆ.
|
ಉದ್ಯಾವರ ವಾಮನ ಮಾಸ್ತರ್ |
 |
ಜನನ ಸ್ಥಳ |
: |
ಮಂಜೇಶ್ವರ, ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ
|
ಕಲಾಸೇವೆ:
ಅಪ್ರತಿಮ ತಾಳದದ್ದಳೆ ಅರ್ಥಧಾರಿ, ಸೌಮ್ಯ ಪಾತ್ರಗಳಿಗೆ ಪ್ರಸಿಧ್ಧಿಯಾದ ಮಾಸ್ತರರು ಉದ್ಯಾವರ, ಬಪ್ಪನಾಡು, ಸುಂಕದಕಟ್ಟೆ ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ.
|
ಮರಣ ದಿನಾ೦ಕ |
: |
ಸೆಪ್ಟೆ೦ಬರ್, 2015 |
|
|
ಶೇಣಿಯವರ ಗುರುತ್ವದ ಒಡನಾಟದಲ್ಲಿ ಬೆಳೆದು ಗಟ್ಟಿ ಯಾದ ವಾಮನ ಮಾಸ್ತರರು ತಮ್ಮ ಮಾತಿನ ಮುಖೇನ ವೃತ್ತಿ ಕಲಾವಿದರಿಗೂ ಸಿಂಹಸ್ವಪ್ನರಾಗಿ ತರ್ಕಮಂಡನೆ ಮಾಡುತ್ತಿದ್ದರು. ಶೇಣಿಯವರ ಸ್ವರ ಗಾಂಭೀರ್ಯ, ಮಾತಿನ ಶೈಲಿ ಇವರಲ್ಲಿ ರೂಢವಾಗಿತ್ತು. ಬಪ್ಪ ಬ್ಯಾರಿಯ ಪಾತ್ರವನ್ನು ನಿರ್ವಹಿಸಿ ಶೇಣಿಯವರಿಂದಲೇ ಪ್ರಶಂಸೆ ಪಡೆದವರು ಇವರು. 500ಕ್ಕೂ ಹೆಚ್ಚು ಬಾರಿ ಬಪ್ಪಬ್ಯಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಖಳ ಪಾತ್ರಗಳನ್ನೂ ಸಾತ್ವಿಕ ಪಾತ್ರಗಳನ್ನೂ ಅರ್ಥಗಾರಿಕೆಯಲ್ಲಿ ನಿರ್ವಹಿಸುತ್ತಿದ್ದರು. ತಿರುಪತಿ ಕ್ಷೇತ್ರ ಮಹಾತೆಯ ಮಾಧವ ಭಟ್ಟ, ಕೋಟಿ ಚೆನ್ನಯದ ಬುದ್ಧಿವಂತ, ದೇವುಪೂಂಜದ ಕಾಂತಣ್ಣ ಅತಿಕಾರಿ, ಅಮರಶಿಲ್ಪಿಯ ವಿಶ್ವರೂಪ ಇತ್ಯಾದಿ ಪಾತ್ರ ಗಳನ್ನು ಅವಿಸ್ಮರಣೀಯವಾಗಿ ನಿರ್ವಹಿಸಿದ್ದಾರೆ.
ಕಲಾಸಕ್ತರಿಗೆ ಉಪದೇಶ ಮಾಡುತ್ತ ವಾಮನ ಮಾಸ್ತರ ರೆಂದೇ ಪ್ರಸಿದ್ಧರಾಗಿದ್ದುದು ಇವರ ಹಿರಿಮೆ. ಇವರ ಅಗಲುವಿಕೆ ಯಿಂದ ಗುರುತ್ವದ ಕೊಂಡಿಯೊಂದು ಕಳಚಿದಂತಾಗಿದೆ. ಕಲಾಸಾಧನೆಯ ಚರಿತ್ರೆಯನ್ನು ಸ್ಥಾಯಿಯಾಗಿಸಿದ ಹಿರಿಯ ಚೇತನಕ್ಕೆ ಭಾವಪೂರ್ಣ ನಮನಗಳು.
****************
ಕೃಪೆ :
udayavani
|
|
|