ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಲಾರಾಧಕ ರಾಕೇಶ್ ರೈ ಅಡ್ಕ

ಲೇಖಕರು :
ಶ್ರುತಿ ತುಂಬ್ರಿ
ಶನಿವಾರ, ಸೆಪ್ಟೆ೦ಬರ್ 19 , 2015

ನೋಡಿದನು ಕಲಿ ರಕ್ತಬೀಜನು.... ಎನ್ನುತ್ತಾ ಪಟ್ಲರು ಅತ್ತ ತಮ್ಮಿಷ್ಟದ ಪದ್ಯವನ್ನು ಭಕ್ತಿಭಾವ ಪರವಶರಾಗಿ ಹಾಡುತ್ತಿದ್ದರೆ ಇತ್ತ ರಕ್ತಬೀಜನ ಭಕ್ತಿಯ ಪರಾಕಾಷ್ಠೆ ಎಂತವರನ್ನೂ ಕ್ಷಣಕಾಲ ಹಿಡಿದಿಡುವಂತೆ ಮಂತ್ರಮುಗ್ಧರಾಗಿಸುವ ಚತುರತೆಯುಳ್ಳ, ಪಾತ್ರದಲ್ಲಿ ಬಹುವಾಗಿ ನಿಷ್ಠೆಹೊಂದಿ ಅದರಲ್ಲೇ ಆಳವಾಗಿ ಪಾತ್ರವೇ ತಾನಾಗಿ ಶಕ್ತಿಮೀರಿ ನ್ಯಾಯ ಒದಗಿಸಿ ತಾನೂ ಸಾರ್ಥಕ್ಯ ಮನೋಭಾವನೆ ಹೊಂದುವ ಕಲಾವಿದರು ಈ ನಮ್ಮ ರಾಕೇಶ್ ರೈ...!

ಬಾಲ್ಯ ಹಾಗೂ ಶಿಕ್ಷಣ

1981 ನೇ ಇಸವಿಯಲ್ಲಿ ದಿ| ಕೃಷ್ಣ ರೈ ಮತ್ತು ಪಾರ್ವತಿಯವರ ಪುತ್ರನಾಗಿ ಜನಿಸಿದ ರಾಕೇಶ್ ರಿಗೆ ಮನೆಯ ವಾತಾವಾರಣ ಯಕ್ಷಗಾನದಿಂದ ಹೊರತಾಗಿ ಕೂಡಿದುದಾಗಿದ್ದರೂ ಸಮಾಜಮುಖಿಯಾದ ವಾತಾವಾರಣದಿಂದ ಕೂಡಿರಲು ಕಾರಣ ರಾಕೇಶ್ ರ ಅಜ್ಜಿ ಕಲ್ಯಾಣಿ ಶೆಟ್ಟಿ. ಅಜ್ಜಿಯೋ ಆಗಿನ ಕಾಲದಲ್ಲಿ ಸಮಾಜಸೇವಕಿ ಅಂದಮೇಲೆ ಕೊಂಚ ರಾಜಕೀಯ ಹಿನ್ನೆಲೆಯೂ ಇತ್ತು ರಾಜಕೀಯ, ಸಮಾಜಮುಖಿ ವಾತಾವರಣದಲ್ಲಿ ಬೆಳೆದ ರಾಕೇಶಣ್ಣನವರು ಯಕ್ಷಗಾನದತ್ತ ಅಚಾನಕ್ ಆಗಿ ಬಂದವರೆಂದರೆ ಬಹುಶಃ ತಪ್ಪಾಗಲಾರದು. ಮನೆಯಲ್ಲಿ ಕೂಡ ಯಾರಿಗೂ ಇಷ್ಟವಿರಲಿಲ್ಲ, ಬಹುವಾಗಿ ನೋಡುತ್ತಲೂ ಇರಲಿಲ್ಲ.

ಆಗಿನ್ನು ರಾಕೇಶಣ್ಣ ಮೂರನೇ ತರಗತಿಯ ಪುಟ್ಟ ಕಂದ. ಆಗಲೇ ಚಿಕ್ಕಮ್ಮನವರೊಂದಿಗೆ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೊದಲಬಾರಿ ಯಕ್ಷಗಾನ ನೋಡುವ ಭಾಗ್ಯ ಆಗಲೇ ಬಣ್ಣ ಬಣ್ಣದ ವೇಷಗಳು, ಅದರ ಗತ್ತು, ಗಾಂಭೀರ್ಯಗಳು ರಾಕೇಶಣ್ಣನವರನ್ನು ಬಹುವಾಗಿ ಆಕರ್ಷಿಸಿ 5ನೇ ತರಗತಿಗೇ ಅನಿರುದ್ಧನ ಪಾತ್ರದಲ್ಲಿ ಪಾತ್ರಕ್ಕೆ ಬೇಕಾದ ನಾಟ್ಯ, ಅರ್ಥ ಕಲಿತು ರಂಗಪ್ರವೇಶ ಮಾಡಿಯೇ ಬಿಟ್ಟರು. 6,7, ಹೀಗೇ ಸಿಕ್ಕಪಾತ್ರಕ್ಕೆ ತೃಪ್ತಿ ಪಟ್ಟುಕೊಂಡ ಇವರು ಎಂಟನೇ ತರಗತಿಗೆಂದು ಆನಂದಾಶ್ರಮ ಹೈಸ್ಕೂಲಿಗೆ ಸೇರಿದ ರಾಕೇಶಣ್ಣನಿಗೆ ಅಲ್ಲಿ ಯಕ್ಷಗಾನಾಸಕ್ತಿ ಕೊಂಚ ಗರಿಗೆದರಿತ್ತು.

ಉಪ್ಪಳ ಕೃಷ್ಣ ಮಾಸ್ತರರಿ೦ದ ನಾಟ್ಯಾಭ್ಯಾಸ

ದಿ| ಜಲಂಧರ ರೈಯವರು ಸ್ಪೂರ್ತಿಯೂ ಆಗಿ ಉಪ್ಪಳ ಕೃಷ್ಣ ಮಾಸ್ತರರನ್ನ ಕರೆಸಿ ವಿದ್ಯಾರ್ಥಿಗಳಿಗೆ ಪ್ರಸಂಗದ ಕುರಿತು ನೀಡುವ ನಾಟ್ಯಾಭ್ಯಾಸದ ತರಬೇತಿಯಲ್ಲಿ ಮನೆಯವರ ಕಣ್ಣು ತಪ್ಪಿಸಿ ಪಾಲ್ಗೊಂಡು ಒಂದು ಹಂತಕ್ಕೆ ತಮ್ಮನ್ನ ತಾವು ಸಂಪೂರ್ಣವಾಗಿ ಯಕ್ಷಗಾನಕ್ಕೆ ಅರ್ಪಿಸಿಕೊಂಡು ಎಂಟನೇ ತರಗತಿಯಲ್ಲಿ ಶಂಖದುರ್ಗಪಾತ್ರವನ್ನು ನಿರ್ವಹಿಸಿದ್ದರು. ಒಂಭತ್ತನೆಯ ತರಗತಿಯಲ್ಲಿ ಕಲಾಗಂಗೋತ್ರಿ ಸಂಘದಲ್ಲಿ ಅಲ್ಲಿವರೆಗೆ ಮೂರು ವರ್ಷಗಳ ಕಾಲ ಬರೀ ನೋಡುಗರಾಗಿಯೇ ಇದ್ದ ಸಂದರ್ಭದಲ್ಲಿಯೂ ಸಹ ತನಗೆ ಪಾತ್ರ ನೀಡಲಿಲ್ಲವೆಂದು ಯಕ್ಷಗಾನವನ್ನ ಅತೀವವಾಗಿ ಪ್ರೀತಿಸುತ್ತಿದ್ದ ರಾಕೇಶ್ ಸಹಜವಾಗಿಯೇ ಸಿಟ್ಟುಗೊಂಡು ಸಭೆಯಿಂದ ಸೀದಾ ಚೌಕಿಗೆ ಹೋಗಿ ಆ ದಿನದ ಪ್ರಸಂಗವನ್ನೂ ಸಹ ಗಣನೆಗೆ ತೆಗೆದುಕೊಳ್ಳದೆ ಹಾಸ್ಯಗಾರನ ಕೊರಳ ಹಾರವನ್ನೂ, ಟೋಪಿಯನ್ನೂ ಧರಿಸಿ ಇನ್ನು ನಿಲ್ಲಲು ಸಾಧ್ಯವೇ ಇಲ್ಲ ಎನ್ನುವಂತೆ ಯಾರನ್ನೂ ಹೇಳದೆ, ಕೇಳದೆ ರಾಕೇಶಣ್ಣನ ರಂಗಪ್ರವೇಶ ಸದ್ದಿಲ್ಲದಂತೆ ನಡೆದೇ ಬಿಟ್ಟಿತ್ತು. ಆಗ ಎಲ್ಲರಿಗೂ ಧಿಗ್ಭ್ರಮೆ, ಹೇಗೆ ಬಂದ ಯಾಕೆ ಬಂದ ಎನ್ನುವಂತೆ ಮತ್ತೆ ಗದರಿಸಿ ಚೌಕಿಮನೆಗೆ ಕಳಿಸಿದಾಗ ಮತ್ತೆ ಸಪ್ಪೆ ಮೋರೆ.
ರಾಕೇಶ್ ರೈ, ಅಡ್ಕ
ಜನನ : ನವೆ೦ಬರ್ 6, 1981
ಜನನ ಸ್ಥಳ : ಅಡ್ಕ ಗ್ರಾಮ
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
300ಕ್ಕೂ ಮಿಕ್ಕಿ ಶಿಷ್ಯರಿಗೆ ಯಕ್ಷಶಿಕ್ಷಣ ಕೊಡುತ್ತಿರುವ, ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ತೆ೦ಕು ತಿಟ್ಟಿನ ಯುವ ಕಲಾವಿದ.ಒಂಭತ್ತನೆಯ ತರಗತಿಯ ಶಾಲಾ ವಾರ್ಷಿಕೋತ್ಸವದಲ್ಲಿ ರುಕ್ಮನಾಗಿ ಮೆಚ್ಚುಗೆ ಗಳಿಸಿಕೊಂಡ ರಾಕೇಶ್, ಇದೇ ವರ್ಷದ ಇನ್ನೊಂದು ಘಟನೆಯೆಂದರೆ ಮನೆಯಲ್ಲಿ ಅಪ್ಪ ಆಟಕ್ಕೆ ಹೋಗಲು ಬಿಡಲಿಲ್ಲವೆಂದು ರೋಡಲ್ಲಿ ಅಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಆಟಕ್ಕೆ ಓಡಿದ ಪುಣ್ಯಾತ್ಮರು ನಮ್ಮ ರಾಕೇಶಣ್ಣ. ಅಂದರೆ ಅಂಗಿ ಧರಿಸುವಷ್ಟೂ ಪುರ್ಸೊತ್ತು ಇರಲಿಲ್ಲ ಮತ್ತೆ ಅಪ್ಪ ಬಿಡದಿದ್ದರೆ ಎಂಬ ಭಯ ಅಷ್ಟೇ....!!

ಬಣ್ಣದ ಮಾಲಿಂಗನವರಿಂದ ಮೆಚ್ಚುಗೆ

ಯಕ್ಷಗಾನದ ನಂಟಿನ ಜೊತೆ ಜೊತೆಗೆ ಈಗ ಹತ್ತನೆಯ ತರಗತಿಯ ಪಯಣ..! ಆದರೇನಂತೆ ಮನೆಯಲ್ಲಿ ವಿಶೇಷ ತರಗತಿಯ ನೆಪದಲ್ಲಿಯೂ ರಾಕೇಶಣ್ಣನ ಯಕ್ಷಗಾನಾಭ್ಯಾಸ ಸದ್ದಿಲ್ಲದಂತೆ ಸಾಗಿ, ಅಂತೂ ಹತ್ತನೆಯ ತರಗತಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಡಿದ ಅಭಿಮನ್ಯು ಪಾತ್ರಕ್ಕಾಗಿ ಬಣ್ಣದ ಮಾಲಿಂಗನವರಿಂದ ಮೆಚ್ಚುಗೆಯ ಮಹಾಪೂರದ ಜೊತೆಗೆ 60 ರೂಪಾಯಿಯ ( ಆ ಕಾಲಕ್ಕೆ ಅದೇ ಹೆಚ್ಚು) ಪ್ರೋತ್ಸಾಹಧನವನ್ನೂ ಪಡೆದು ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಿಸಿಕೊಂಡು ಅಂತೂ ಹತ್ತನೆಯ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಇತರರಿಗೂ ಮಾದರಿ ಎನಿಸಿ ಪಿ.ಯು.ಸಿ. ವಿದ್ಯಾಭ್ಯಾಸಕ್ಕಾಗಿ ಬೆಸೆಂಟ್ ಸಂಜೆ ಕಾಲೇಜಿಗೆ ಸೇರಿದರು.

ಪಿಯುಸಿ ಯಲ್ಲಿ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡ ರಾಕೇಶಣ್ಣನವರಿಗೆ ಯಕ್ಷಗಾನ ಅದಾಗಲೇ ಅವಿಭಾಜ್ಯ ಅಂಗವಾಗಿ ರೂಪುಗೊಂಡಿತ್ತು. ಕಾಲೇಜು ದಿನಗಳಲ್ಲಿಯೇ ಸಿಕ್ಕ ಎಲ್ಲಾ ಅವಕಾಶವನ್ನೂ ತನ್ನದಾಗಿಸಿಕೊಂಡು ಪ್ರಥಮ ಪಿಯುಸಿಯಲ್ಲಿ ತಮ್ಮ ಸೀನಿಯರ್ ಆದ ವಿದ್ಯಾ ಕೋಳ್ಯೂರ್ ರ ಚಿತ್ರಾಂಗದೆಗೆ ಬಭ್ರುವಾಹನ ಪಾತ್ರ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡು,ಸಾಂಸ್ಕೃತಿಕವಾಗಿಯೂ, ಕಲಿಕೆಯಲ್ಲಿಯೂ ಕಾಲೇಜಿಗೆ ಮೊದಲಿಗರಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಡಿಗ್ರಿಗೆ ಬಡ್ತಿ ಪಡೆದುಕೊಂಡು ಕಾಲೇಜಿನ ಬಹುಮುಖ ಪ್ರತಿಭೆಯಾಗಿ ಕಾಲೇಜು ಬಿಟ್ಟುಕೊಡದ ಸ್ವತ್ತಿನ ಹಾಗೇ ಸಂಪನ್ಮೂಲ ವಿದ್ಯಾರ್ಥಿಯಾಗಿ ಅಲ್ಲಿಯೇ ಡಿಗ್ರಿಗೂ ಸೇರಿ ಪದವಿ ಶಿಕ್ಷಣದಲ್ಲಿ ಬಿ.ಕಾಂ. (ಬ್ಯಾಚುಲರ್ ಆಪ್ ಕಾಮರ್ಸ್) ಅನ್ನು ಆಯ್ದುಕೊಂಡರು.

ಡಿಗ್ರಿಯ ಮೊದಲ ವರ್ಷದಲ್ಲೇ ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಗಿರಿಜಾಕಲ್ಯಾಣದ ಮನ್ಮಥನ ಪಾತ್ರವನ್ನು ನಿರ್ವಹಿಸಿದ ರಾಕೇಶಣ್ಣರಿಗೆ ಹಿಮ್ಮೇಳಕ್ಕೆ ಸಾಥ್ ಕೊಟ್ಟದ್ದು ಆಗಿನ್ನೂ ಮೇಳಕ್ಕೆ ಸೇರದ ಸತೀಶ್ ಪಟ್ಲರ ಪದ್ಯ. ಈ ಸ್ಪರ್ಧೆಯಲ್ಲಿ ಇವರ ತಂಡವು ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತ್ತು. ಅದೇ ವರ್ಷದಲ್ಲಿ Indian Culture and Tourism Department ನವರು ಭಾರತದ ಎಲ್ಲಾ ಕಡೆಗಳಿಂದ ವಿವಿಧ ಪ್ರಕಾರದ ಸ್ಪರ್ಧೆಗೆ ಆಹ್ವಾನ ನೀಡಿ 10,000/- ವಿದ್ಯಾರ್ಥಿಗಳಲ್ಲಿ 'ದಿ ಬೆಸ್ಟ್' 300 ಮಂದಿಯನ್ನು ಆರಿಸಲು ನಡೆಸುವ ಕಾರ್ಯಕ್ರಮದಲ್ಲಿ ಪದವಿ ಶಿಕ್ಷಣದ ಮೊದಲ ಮತ್ತು ದ್ವಿತೀಯ ವರ್ಷದ Performance ನ ಆಧಾರದ ಮೇಲೆ ಯಕ್ಷಗಾನ ವಿಭಾಗದಲ್ಲಿ ಕುಂಬ್ಳೆ ಸುಂದರ್ ರಾವ್ ಮತ್ತು ಕೆರೆಮನೆ ಶಂಭು ಹೆಗ್ಡೆ ನೇತೃತ್ವದ ತಂಡ ರಾಕೇಶಣ್ಣನ ಪ್ರತಿಭೆಯನ್ನು ಮೆಚ್ಚಿ 48,000/- ರುಪಾಯಿ ಪ್ರೋತ್ಸಾಹ ಧನಕ್ಕೆ ರಾಕೇಶಣ್ಣನವರನ್ನ ಸೂಚಿಸಿತ್ತು. 10,000 ಮಂದಿಯಲ್ಲಿ ಆರಿಸಿ ಬರುವುದೆಂದರೆ ತಮಾಷೆಯ ಮಾತೇ....??!

ಮು೦ಬಯಿಯಲ್ಲೂ ಬಿಡದ ಯಕ್ಷಗಾನದ ತುಡಿತ

ಇನ್ನು ಊರಲ್ಲಿದ್ದರೆ ಮಗ ಯಕ್ಷಗಾನವನ್ನೇ ವೃತ್ತಿಯಾಗಿ ಆರಿಸಿಕೊಂಡಾನು ಎಂಬ ಭಯದಿಂದ ಇವರ ತಂದೆಯವರು, ಮಾವನವರ ಆಧಾರದ ಮೇಲೆ ಬಾಂಬೆಗೆ ಕಳಿಸಿದರು. ಬಿ.ಕಾಂ. ಪದವೀಧರರಾದ ರಾಕೇಶಣ್ಣನವರು Saviraj Refreshments ಎನ್ನುವಲ್ಲಿ ಮ್ಯಾನೇಜರ್ ಹುದ್ದೆಯನ್ನೇನೋ ಗಿಟ್ಟಿಸಿಕೊಂಡರು ಆದರೆ ಯಕ್ಷಗಾನದ ರುಚಿ ಬಿಡಬೇಕಲ್ಲ...? ಅಲ್ಲಿಯೂ ಹೇಗೋ ಯಾರನ್ನೋ ಸಂಪರ್ಕಿಸಿ 'ಗೀತಾಂಬಿಕಾ ಯಕ್ಷಗಾನ ಮಂಡಳಿ'ಯನ್ನು ಪತ್ತೆ ಹಚ್ಚಿಯೇ ಬಿಟ್ಟರು ಅದರಲ್ಲಿ ಭಾಗವಹಿಸಿ ಕೆಲಸ ಮಾಡುತ್ತಲೇ ಸುಮಾರು 25-30ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದರು.

ಅಲ್ಲಿರುತ್ತಲೇ ಮಾವನವರು ನೋಡಿದ ಊರಿನವರಾದರೂ ಅಲ್ಲೇ ಹುಟ್ಟಿ ಬೆಳೆದ ಅಲ್ಲಿನ ಬೆಡಗಿ ಚೇತನಾ ರೈ ಯವರನ್ನು ಕೈ ಹಿಡಿದು ಮುದ್ದಿನ ಮಗಳು ಸಾನ್ವಿಯನ್ನ ಪಡೆದು ಸಂಸಾರಸ್ಥ ಎನಿಸಿಕೊಂಡರು. ಮಗಳೋ ನೃತ್ಯದತ್ತ ಅತೀವ ಆಸಕ್ತಿ ಹೊಂದಿದಾಕೆ, ಸಮಯ ಬಂದಾಗ ಮಗಳಿಗೂ ಯಕ್ಷಗಾನ ಕಲಿಸುವೆ ಎನ್ನುವ ಇವರಿಗೆ ಯಕ್ಷಗಾನವೆಂದರೆ ಏನೆಂದು ತಿಳಿಯದ ಪತ್ನಿಯಿಂದಲೂ ಅಭೂತಪೂರ್ವ ಮೆಚ್ಚುಗೆಯ ಜೊತೆಗೆ ಉತ್ತಮ ಪ್ರೋತ್ಸಾಹ ದೊರಕಿದೆಯಂತೆ.

ಬಾಂಬೆಯಲ್ಲಿದ್ದರೂ ಇವರ ಯಕ್ಷಗಾನದ ಆಸಕ್ತಿ ಕಡಿಮೆಯಾಗದ್ದನ್ನು ಕಂಡ ತಂದೆಯವರು ಮರಳಿ ಊರಿಗೆ ಕರೆಸಿದರು. ಮರಳಿ ಊರಿಗೆ ಬಂದೊಡನೆಯೇ Best Coast Agency ಯಲ್ಲಿ Cashier ಆಗಿ ಕೆಲಸ ಆರಂಭಿಸಿದ ಇವರು ಯಕ್ಷಗಾನ ತರಬೇತಿಯ ಕ್ಲಾಸ್ ಗಳನ್ನೂ ಆರಂಭಿಸಿ ಇವರೂ ಹಾಗು ಇವರ ಶಿಷ್ಯವೃಂದದವರನ್ನ ಒಳಗೊಂಡ ತಂಡವೊಂದು Colors ಚಾನೆಲ್ ನವರ India Got Talents Show ನ ಅಡಿಷನ್ ನಲ್ಲಿ ಪ್ರವೇಶ ಪಡೆದು ಮುಂದಿನ ಸುತ್ತಿಗೆ ಆಯ್ಕೆಯಾಗಿತ್ತು ಆದರೆ ಅವರ ಶೀಷ್ಯಂದಿರಲ್ಲಿ ಹಲವರಿಗೆ ಆಗಲೇ ಎಕ್ಸಾಂ ಭೂತವಿದ್ದುದರಿಂದ ಸಿಕ್ಕ ಅವಕಾಶವನ್ನ ಕೈ ಚೆಲ್ಲಿ ಬರಬೇಕಾಯಿತು.

ಕಟೀಲು ಮೇಳಕ್ಕೆ ಸೇರ್ಪಡೆ

ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಬಪ್ಪನಾಡು ಮೇಳಕ್ಕೆ ಅತಿಥಿಯಾಗಿ ಹೋಗಿ ಭಾಗವಹಿಸುತ್ತಿದ್ದ ರಾಕೇಶಣ್ಣ 5ನೇ ವರ್ಷಕ್ಕೆ ಪಟ್ಲರಿಂದ ಬಂದ ಕರೆಯೊಂದು ಕಟೀಲು ಐದನೇ ಮೇಳಕ್ಕೆ ಆಹ್ವಾನವಿತ್ತಿತ್ತು. ಆಗಲೇ ಪಟ್ಲರ ನೋಡಿದನು ಕಲಿರಕ್ತಬೀಜನು ಪದ್ಯ ಬಹುವಾಗಿ ಮನಕೆಣಕಿದ್ದರಿಂದ ಇವರ ಬೇಡಿಕೆಯೂ ಅದೇ ಪಾತ್ರವಾಗಿತ್ತು. ಸುಧನ್ವ, ಕೌರವ, ರಕ್ತಬೀಜ ಬಹು ಇಷ್ಟದ ವೇಷವಾಗಿದ್ದ ರಾಕೇಶಣ್ಣರಿಗೆ ಅಂತೂ ಮೇಳಕ್ಕೆ ಸೇರಿದಾಗ ತಾ ಮೆಚ್ಚಿದ ರಕ್ತಬೀಜನ ಪಾತ್ರವೇ ದೊರಕಿ ಕಟೀಲಮ್ಮನ ಸೇವೆ ಮಾಡುವ ಭಾಗ್ಯ ದೊರೆತದ್ದು ನನ್ನ ಭಾಗ್ಯವೆಂದು ದೀನರಾಗಿ ನುಡಿಯುತ್ತಾರೆ.

ಮೊದಲ ಇಂಗ್ಲಿಷ್ ಯಕ್ಷಗಾನ

ರಾಕೇಶಣ್ಣರಿಗಿರುವ ಶಿಷ್ಯವೃಂದವೋ ಬಹುದೊಡ್ಡದು. ಮಂಗಳೂರಿನ ಹಲವೆಡೆಗಳಲ್ಲಿ 12 ರಿಂದ 13 ತರಗತಿಗಳನ್ನು ಹೊಂದಿರುವ ಈ ಅಸಾಮಾನ್ಯ ಪ್ರತಿಭೆಗೆ ಸುಮಾರು 300 ಕ್ಕೂ ಹೆಚ್ಚಿನ ಶಿಷ್ಯಂದಿರನ್ನ ಹೊಂದಿದ ಸಾರ್ಥಕತೆಯಿದೆ. ಮೇಳಕ್ಕೆ ಸೇರಿದ ಎರಡು ವರ್ಷದಲ್ಲಿ ಎರಡು ದೇಶದಲ್ಲಿ (ಲಂಡನ್, ಅಮೇರಿಕಾ) ಪ್ರದರ್ಶನನೀಡುವ ಅವಕಾಶ ಗಿಟ್ಟಿಸಿಕೊಂಡಿರುವ ಇವರು ತನ್ನ ವೇಷದ ಸುಧಾರಣೆಯ ವಿಷಯದಲ್ಲಿ, ಬಹುವಾಗಿ ಬೆಂಬಲಿಸಿದ ಪಟ್ಲರನ್ನು, ಹಾಗೂ ಆ ಕಾಲದಲ್ಲಿಯೇ ತನಗೆ ಬೆಂಬಲ ಸೂಚಿಸಿ ಊರಿನಲ್ಲಿಯೇನು ಯಕ್ಷಗಾನದಲ್ಲೇ ಮೊದಲ ಇಂಗ್ಲಿಷ್ ಯಕ್ಷಗಾನ ಮಾಡಲು ಪ್ರೋತ್ಸಾಹ ಸಹಕಾರ ನೀಡಿದ ಊರಿನ ಹಿರಿಯರೂ, ಸಾಹಿತಿಗಳೂ ಆದ ಅಮೃತ್ ಸೋಮೇಶ್ವರರನ್ನು ನಾನು ಎಂದಿಗೂ ಮರೆಯಲಾರೆ ಎನ್ನುತ್ತಾರೆ.

ಇವನೇನು ಮಾಡಬಹುದು ಎಂದು ಮಾನಸಿಕವಾಗಿ ಅಧೈರ್ಯ ತೋರುತ್ತಿದ್ದವರ ಎದುರು ನನ್ನಮೇಲೆ ನಂಬಿಕೆಯಿಟ್ಟು ಪಾತ್ರ ನೀಡಿದ ಸತೀಶಣ್ಣರನ್ನು ನೆನೆಯುವ ಜೊತೆಗೆ ಮೇಳದ ಕಲಾವಿದರ ಸಹಕಾರವನ್ನೂ ಮನಸಾ ನೆನೆಯುತ್ತಾರೆ. ಕಲಾವಿದರ ಅನುಪಸ್ಥಿತಿಯ ಸಂದರ್ಭದಲ್ಲಿ ಸ್ತ್ರೀ ವೇಷಕ್ಕೂ ಸೈ ಎನ್ನುವಂತೆ ಸೈರಿಣಿಯಂತ ಪಾತ್ರವನ್ನೂ ಮಾಡಿ ಅಧ್ಭುತ ಎನಿಸಿಕೊಂಡವರು. ನನ್ನ ಉಳಿದ ವೇಷಗಳಿಗೆ ತೊಂದರೆ ಆಗುವುದಾದರೆ ಇನ್ನು ಸ್ತ್ರೀ ವೇಷ ಮಾಡಲಾರೆ ಎಂದು ನಕ್ಕು ನುಡಿಯುವ ಇವರಿಂದ ಯಕ್ಷಗಾನ ರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲುವುದರ ಮೂಲಕ ಇನ್ನೂ ಅನೇಕ ಶಿಷ್ಯಂದಿರು ರೂಪುಗೊಳ್ಳಲಿ ಆ ಶ್ರೀದೇವಿ ಯು ಹೆಚ್ಚಿನ ಆಯುರಾರೋಗ್ಯ, ನೆಮ್ಮದಿ ಐಶ್ವರ್ಯವನ್ನಿತ್ತು ಸಲಹಲಿ ಎಂದು ಆಶೀಸೋಣವಂತೆ.....!!!


************************


****************

ರಾಕೇಶ್ ರೈ, ಅಡ್ಕರವರ ಕೆಲವು ದೃಶ್ಯಾವಳಿಗಳು

ರಕ್ತಬೀಜಾಸುರನ ಪಾತ್ರದಲ್ಲಿ
ಸುದರ್ಶನನ ಪಾತ್ರದಲ್ಲಿ
ಕೌರವನ ಪಾತ್ರದಲ್ಲಿ
ಜಾ೦ಬವ೦ತನ ಪಾತ್ರದಲ್ಲಿ

ರಾಕೇಶ್ ರೈ, ಅಡ್ಕರವರ ಕೆಲವು ಛಾಯಾ ಚಿತ್ರಗಳು

( ಕೃಪೆ : ಕಿರಣ್ ವಿಟ್ಲ , ಸ೦ದೀಪ್, ಹಾಗೂ ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )

ಪಟ್ಲ ಸತೀಶ್ ಶೆಟ್ಟಿ ಹಾಗೂ ಕಟೀಲು ಮೇಳದ ಯುವ ಸ್ತ್ರೀ ವೇಷಧಾರಿ ನೆಲ್ಯಾಡಿ ಪ್ರಶಾ೦ತ್ ಶೆಟ್ಟಿಯವರೊ೦ದಿಗೆ
ಸಮಾರ೦ಭವೊ೦ದರಲ್ಲಿ ಸನ್ಮಾನಿಸಲ್ಪಡುತ್ತಿರುವ ರಾಕೇಶ್
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಜಯ್ ರೈ(9/19/2015)
ಲೇಖನ ತುಂಬಾ ಸೊಗಸಾಗಿದೆ:.good Information....
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ