ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಮೇಳ, ಚೌಕಿ ಮತ್ತು ರಂಗಸ್ಥಳ

ಲೇಖಕರು :
ಪ್ರಭಾಕರ ಶಿಶಿಲ
ಮ೦ಗಳವಾರ, ಜನವರಿ 12 , 2016

ಯಕ್ಷಗಾನ ಮೇಳ

ಯಕ್ಷಗಾನ ಮೇಳವೆಂದರೆ ಯಕ್ಷಕಲಾವಿದರ ಗುಂಪು ಎಂದರ್ಥ. ಸಾಮಾನ್ಯವಾಗಿ ‘ಮೇಳ’ವನ್ನು ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡ ವೃತ್ತಿ ಕಲಾವಿದರ ಸಮೂಹ ಅಥವಾ ತಂಡವೆಂದು ವ್ಯಾಖ್ಯಾನಿಸಲಾಗುತ್ತದೆ. ಯಕ್ಷಗಾನ ಮೇಳವು ಯಕ್ಷ ಕಲಾವಿದರನ್ನು ಮಾತ್ರವಲ್ಲದೆ ಸಹಾಯಕರನ್ನೂ ಒಳಗೊಂಡಿರುತ್ತದೆ. ಸ್ಥೂಲ ಅರ್ಥದಲ್ಲಿ ‘ಮೇಳ’ ಎಂಬ ಪದವು ವೃತ್ತಿ ಪರರ ಗುಂಪನ್ನು ಮಾತ್ರವಲ್ಲದೆ ಹವ್ಯಾಸಿಗಳ ಗುಂಪನ್ನೂ ಒಳಗೊಂಡಿದೆ. ಆದರೆ ಹೆಚ್ಚಾಗಿ ಯಕ್ಷಗಾನ ಮೇಳ ಎಂಬ ಪದವು ಒಂದು ವಾಣಿಜ್ಯ ವ್ಯವಹಾರವನ್ನು ಒಳಗೊಂಡ ಬದುಕಿಗಾಗಿ ಯಕ್ಷಗಾನ ಆಯ್ಕೆ ಮಾಡಿಕೊಂಡ ಒಂದು ಶ್ರೇಣೀಕೃತ ತಂಡವನ್ನು ಅಥವಾ ಗುಂಪನ್ನು ಸಂಕೇತಿಸುತ್ತದೆ.

1. ಮೇಳದ ಶ್ರೇಣೀಕೃತ ವ್ಯವಸ್ಥೆ ಹೀಗಿದೆ :

ಮೇಳದ ಮುಖ್ಯಸ್ಥನನ್ನು ಯಜಮಾನರು, ಧನಿಗಳು, ಖಾವಂದರು, ಎಂದು ಸಂಬೋಧಿಸಲಾಗುತ್ತದೆ. ಆತನ ಸಹಾಯಕ್ಕೆ ಮೇಳದ ಮೇನೇಜರ್‌ ಮತ್ತು ಅಸಿಸ್ಟಂಟ್‌ ಮೇನೇಜರುಗಳಿರುತ್ತಾರೆ. ಯಜಮಾನನು ಕಲಾವಿದರ ಮತ್ತು ಕಾರ್ಮಿಕರ ಸಂಬಳ ನಿಗದಿ ಮಾಡುತ್ತಾನೆ. ಅದರ ವಿತರಣೆ ಮತ್ತು ಲೆಕ್ಕಪತ್ರ ವ್ಯವಸ್ಥೆಯು ಮೆನೇಜರ ಮತ್ತು ಅಸಿಸ್ಟಂಟ್‌ ಮೆನೇಜರರುಗಳದ್ದಾಗಿರುತ್ತದೆ. ದೇವಸ್ಥಾನದಿಂದ ಹೊರಡುವ ಮೇಳಗಳಿಗೆ ಮೊಕ್ತೇಸರ ಅಥವಾ ಧರ್ಮಾಧಿಕಾರಿ ಯಜಮಾನನಾಗಿರುವುದುಂಟು. ಅಂತಹ ಮೇಳಗಳ ತಿರುಗಾಟದ ಸಂಪೂರ್ಣ ಜವಾಬ್ದಾರಿಯನ್ನು ಮೆನೇಜರ ಮತ್ತು ಅವನ ಸಹಾಯಕ ಹೊರಬೇಕಾಗುತ್ತದೆ.

ಯಕ್ಷಗಾನದ ಒಂದು ಆಧಾರಗ್ರಂಥವೆನಿಸಿರುವ ಸಭಾಲಕ್ಷಣದಲ್ಲಿ ಮೇಳವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ:

ನರ್ತಕೋ ನಾಟಕಾರಶ್ಚ ಮರ್ದಲಂ ಶ್ರುತಿ ಹಾಸ್ಯಕೇ
ಗಾಯಕಶ್ಚ ಷಡಂಗಾನೀ ಇತ್ಯೇತ್ಮನ್ಮೇಳ ಲಕ್ಷಣಂ
[ಸಭಾಲಕ್ಷಣ, ಪಾವಂಜೆ ಪ್ರತಿ, 1980 ಪುಟ 13]


ಸಭಾ ಲಕ್ಷಣವು ನರ್ತಕ, ನಾಟಕಾರ, ಮೃದಂಗ ವಾದಕ, ಶ್ರುತಿಕಾರ, ಹಾಸ್ಯ ಮತ್ತು ಗಾಯಕ ಇವರನ್ನು ಮೇಳದ ಆರು ಅಂಗ ಗಳೆಂದು ಪರಿಗಣಿಸುತ್ತದೆ. ಇದು ಯಕ್ಷಗಾನವನ್ನು ಮಾತ್ರ ಉದ್ದೇಶಿಸಿ ಸೂಚಿಸಿದ ಲಕ್ಷಣವಲ್ಲ. ಎಲ್ಲಾ ಪ್ರಕಾರದ ನಾಟಕಗಳಿಗೆ ಅನ್ವಯವಾಗುವ ಲಕ್ಷಣವಿದು. ಸ್ಥೂಲ ಅರ್ಥದಲ್ಲಿ ಯಕ್ಷಗಾನವನ್ನು ಒಂದು ನಾಟಕವೆಂದು ಪರಿಭಾವಿಸಿದರೆ ಅಲ್ಲಿ ಕಲಿಕೆಯ ಹಂತದ ಕಲಾವಿದರು (ನರ್ತಕ} ಕಲಿತ ಕಲಾವಿದರು (ನಾಟಕಾರ) ಮೃದಂಗವಾದಕ (ಮರ್ದಲಂ) ಶ್ರುತಿಕಾರ, (ಹಾಸ್ಯ ಕಲಾವಿದ) ಮತ್ತು ಭಾಗವತ (ಗಾಯಕ) ಮುಖ್ಯರಾಗುತ್ತಾರೆ. ಇಲ್ಲಿ ಚೆಂಡೆಯ ಪ್ರಸ್ತಾಪ ವಿಲ್ಲ. ಚೆಂಡೆ ಇಲ್ಲದೆಯೂ ಯಕ್ಷಗಾನವನ್ನು ಪ್ರದರ್ಶಿಸಬಹುದು. ಅಂತಹ ಹೊಂದಾಣಿಕೆಗೆ ಯಕ್ಷಗಾನ ಪರಿಭಾಷೆಯಲ್ಲಿ ‘ಆಟವನ್ನು ಸುಧಾರಿಸಿಕೊಂಡು ಹೋಗುವುದು’ ಎನ್ನಲಾಗುತ್ತದೆ.

ಮೇಳವನ್ನು ಹಿಮ್ಮೇಳ ಮತ್ತು ಮುಮ್ಮೇಳ ಎಂದು ಎರಡು ಭಾಗ ಮಾಡಲಾಗುತ್ತದೆ. ಹಿಮ್ಮೇಳವು ಭಾಗವತ, ಚೆಂಡೆ ವಾದಕ, ಮದ್ದಲೆವಾದಕ, ಶ್ರುತಿಕಾರ ಮತ್ತು ಚಕ್ರತಾಳದವ ಎಂಬ ಐವರು ಕಲಾವಿದರನ್ನು ಒಳಗೊಂಡಿರುತ್ತದೆ. ಬಡಗು ತಿಟ್ಟಿನಲ್ಲಿ ಭಾಗವತರು ಸಣ್ಣ ಚಕ್ರತಾಳ ಬಳಸುತ್ತಾರೆ. ಆ ಕಲಾಪ್ರಕಾರದಲ್ಲಿ ಪ್ರತ್ಯೇಕ ಚಕ್ರತಾಳದ ಬಳಕೆ ಇಲ್ಲ. ಹಾಗಾಗಿ ಬಡಗುತಿಟ್ಟು ಹಿಮ್ಮೇಳ ಕಲಾವಿದರ ಸಂಖ್ಯೆ ನಾಲ್ಕು ಮಾತ್ರ.

ಮುಮ್ಮೇಳದಲ್ಲಿ ಉದಯೋನ್ಮುಖ ಕಲಾವಿದರು ಮತ್ತು ಅನುಭವಿ ಕಲಾವಿದರು ಎಂಬ ಎರಡು ವರ್ಗದ ನಟರು ಇರುತ್ತಾರೆ. ಉದಯೋನ್ಮುಖ ಕಲಾವಿದರನ್ನು ಹೊರತು ಪಡಿಸಿದರೆ ಮುಮ್ಮೇಳದಲ್ಲಿ ಏಳು ಮಂದಿ ವೇಷಧಾರಿಗಳು ಮತ್ತು ಇಬ್ಬರು ಸ್ತ್ರೀ ವೇಷಧಾರಿ ಗಳು ಇರುವುದು ವಾಡಿಕೆ. ಕಲಾವಿದ ಹಾರಾಡಿ ಮಹಾಬಲ ಗಾಣಿಗರ ಪ್ರಕಾರ ಬಡಗು ತಿಟ್ಟಿನ ಮೇಳದಲ್ಲಿ ಹಿಂದೆ ಇದ್ದದ್ದು ಏಳು ವೇಷಧಾರಿಗಳು, ಹಿಮ್ಮೇಳದವರು ಮತ್ತು ಒಂದಷ್ಟು ಹುಡುಗರು. ಮುಳಿಯ ಮಹಾಬಲ ಭಟ್ಟರ ಪ್ರಕಾರ ತೆಂಕುತಿಟ್ಟಿನ ಮೇಳದಲ್ಲಿ ಹಿಂದೆ ಇದ್ದವರು ‘ಏಳು ಮಂದಿ ವೇಷಧಾರಿಗಳು, ಇಬ್ಬರು ಸ್ತ್ರೀ ವೇಷಧಾರಿಗಳು, ಒಬ್ಬ ಹಾಸ್ಯಗಾರ ಮತ್ತು ಉಳಿದವರು ಹುಡುಗರು.’ [ನಂಬಿಯಾರ್‌ಹಿಮ್ಮೇಳ, ಪುಟ 80]

ಯಕ್ಷಗಾನವು ವಾಣಿಜ್ಯೀಕರಣ ಪ್ರಕ್ರಿಯೆಗೊಳಪಟ್ಟ ಬಳಿಕ ಕಲಾವಿದರು ಮಾತ್ರವಲ್ಲದೆ ಕಾರ್ಮಿಕರು ಕೂಡಾ ಮೇಳದ ಭಾಗವಾದರು. ದೇವರ ಸೇವೆ, ಅಡುಗೆ ಪರಿಕರ್ಮ, ರಂಗ ಮತ್ತು ಚೌಕಿ ನಿರ್ಮಾಣ, ಟೆಂಟು ಹಾಕಿ ಆಸನಗಳನ್ನು ಇರಿಸುವುದು, ಟೆಂಟು ಬಿಚ್ಚಿ ಆಸನ ಸಹಿತ ಲಾರಿಗಳಿಗೆ ಏರಿಸುವುದು, ವಾಹನ ಚಾಲನೆ ಮತ್ತು ದುರಸ್ತಿ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇತ್ಯಾದಿಗಳು ಕಾರ್ಮಿಕರ ಕೆಲಸ. ಈಗ ಟೆಂಟಿನ ಆಟಗಳು ಬಹಳ ಅಪೂರ್ವವಾಗಿ ಬಿಟ್ಟಿವೆ. ಆದರೆ ಉಳಿದೆಲ್ಲಾ ಕೆಲಸಗಳು ಇದ್ದೇ ಇರುತ್ತವೆ. ಹಾಗಾಗಿ ಕಲಾವಿದರ ಪರಿಶ್ರಮದಷ್ಟೇ ಮಹತ್ವ ಕಾರ್ಮಿಕರ ಪರಿಶ್ರಮಕ್ಕೂ ಇದೆ.

ಕರಾವಳಿ ಕರ್ನಾಟಕದಲ್ಲಿ ಸುಮಾರು 40 ಯಕ್ಷಗಾನ ಮೇಳಗಳಿವೆ. ಅವುಗಳಲ್ಲಿ ಧರ್ಮಸ್ಥಳ, ಕಟೀಲು, ಮಂಗಳಾದೇವಿ, ಮಾರಣ ಕಟ್ಟೆ, ಕೂಡ್ಲು, ಮಂದಾರ್ತಿ, ಸಾಲಿಗ್ರಾಮ ಮುಂತಾದವುಗಳು ಬಹಳ ಪ್ರಸಿದ್ಧಿ ಪಡೆದ ಮೇಳಗಳಾಗಿದ್ದು ಭವ್ಯ ಇತಿಹಾಸವನ್ನು ಹೊಂದಿವೆ.

2. ಮೇಳದ ಆಚರಣ ಅನುಕ್ರಮಣಿಕೆ :

 • ಆಟ ಆಡಿಸುವವರ ಸ್ಥಳಕ್ಕೆ ತಲುಪಿದೊಡನೆ ತಾಳಮದ್ದಳೆ ಹಾಕುವುದು. ಈ ಪದ್ಧತಿ ಈಗ ಬಹುತೇಕವಾಗಿ ಲುಪ್ತವಾಗಿದೆ.
 • ರಂಗಸ್ಥಳ ಮತ್ತು ಚೌಕಿ ನಿರ್ಮಾಣ ಮಾಡಿ, ಚೌಕಿಯಲ್ಲಿ ಆಟದ ಸಾಮಗ್ರಿ ಬಿಡಿಸಿ ಇಡುವುದು.
 • ಸಂಜೆ ಸುಮಾರು ಆರುಏಳರ ನಡುವೆ ಕೇಳಿ ‘ಅಬ್ಬರ ತಾಳ’ ಬಾರಿಸುವುದು. ಎತ್ತರದ ಸ್ಥಳದಲ್ಲಿ ನಿಂತು ಕೇಳಿ ಬಾರಿಸುವುದರಿಂದ ಇದಕ್ಕೆ ಗುಡ್ಡದ ಕೇಳಿ ಎಂಬ ಹೆಸರಿದೆ.
 • ಚೌಕಿಯಲ್ಲಿ ಗಣಪತಿಯನ್ನು ಹೂಡುವುದು.
 • ರಾಧಾಕೃಷ್ಣ ಅಥವಾ ಸ್ತ್ರೀವೇಷಗಳು ಹಿಮ್ಮೇಳದೊಂದಿಗೆ ದೇವಾಲಯಕ್ಕೆ ಹೋಗಿ ದೇವರೆದುರು ಕುಣಿದು ಬರುವುದು.
 • ಚೌಕಿಯಲ್ಲಿ ‘ಗಜಮುಖಾದವಗೆ’ ಸ್ತುತಿ ಹಾಡಿ ಗಣಪತಿಯನ್ನು ಪೂಜಿಸುವುದು.
 • ಕೋಡಂಗಿಗಳು ಮತ್ತು ಹಿಮ್ಮೇಳದವರು ದೀವಟಿಗೆ ಸಹಿತ ರಂಗಸ್ಥಳಕ್ಕೆ ಹೋಗುವುದು.
 • ಪೂರ್ವರಂಗ ಆರಂಭ. ಕೋಡಂಗಿ ಕುಣಿತ.
 • ಬಾಲಗೋಪಾಲ ವೇಷಗಳ ಕುಣಿತ.
 • ಷಣ್ಮುಖ ಸುಬ್ಬರಾಯ ವೇಷಕುಣಿತ. ಈಗ ಇದು ಅಪೂರ್ವವಾಗಿದೆ.
 • ಅರ್ಧನಾರೀ ವೇಷ. ಇದೀಗ ಲುಪ್ತವಾಗಿದೆ.
 • ಕಟ್ಟು ಹಾಸ್ಯ. ಉದಾತ ಬ್ರಾಹ್ಮಣ, ಬೈರಾಗಿ, ಕೊಕ್ಕೆಚಿಕ್ಕ ಇತ್ಯಾದಿ. ಇದು ಈಗ ಲುಪ್ತವಾಗಿದೆ.
 • ಅರೆಪ್ಪಾವಿನಾಟ ಅಥವಾ ಚಪ್ಪರ ಮಂಚದ ಆಟ. ಇದು ಕೂಡಾ ಈಗ ಲುಪ್ತವಾಗಿದೆ.
 • ಚಂದಭಾಮಾ ಸ್ತ್ರೀ ವೇಷಗಳ ಕುಣಿತ
 • ಮುಖ್ಯ ಸ್ತ್ರೀವೇಷದ ಕುಣಿತ ಮತ್ತು ಹಾಸ್ಯಗಾರನ ಹೊಗಳಿಕೆ.
 • ಪೀಠಿಕೆ ಬಾರಿಸುವುದು.
 • ಪೀಠಿಕೆ ಸ್ತ್ರೀ ವೇಷ ಕುಣಿತ.
 • ಕಥಾನುಸಾರ ಭಾಗವತರು ಪ್ರಸಂಗ ಕಥೆಯನ್ನು ಸಂಕಿಪ್ತವಾಗಿ ತಿಳಿಸುವುದು. ಇದೀಗ ಲುಪ್ತವಾಗಿದೆ.
 • ಒಡ್ಡೋಲಗ 20 ಪ್ರಸಂಗಾಭಿನಯ.
 • ಆಟದ ಸಮಾಪನರಂಗಸ್ಥಳದಲ್ಲಿ ಸ್ತ್ರೀವೇಷದಿಂದ ಆರತಿ
 • ಸ್ತ್ರೀವೇಷಪಗಡಿವೇಷ ಸಹಿತ ಭಾಗವತರು ದೇವಾಲಯಕ್ಕೆ ಹೋಗಿ ಸ್ತುತಿನಾಟ್ಯ ಮುಗಿಸಿ ಮಂಗಲ ಹಾಡುವುದು.
 • ಚೌಕಿಯಲ್ಲಿ ‘ಕರದೊಳು ಪರಶು’ ಹಾಡಿ ಆಟ ಕೊನೆಗೊಳಿಸುವುದು.


ಆಧಾರ : ರಾಘವ ನಂಬಿಯಾರ್‌ತ ಹಿಮ್ಮೇಳ, ಪುಟ 116-117

ಯಕ್ಷಗಾನದ ಚೌಕಿ

ಕಲಾವಿದರು ಯಕ್ಷಪಾತ್ರಗಳಾಗಿ ಪರಿವರ್ತನೆ ಹೊಂದುವ ಪ್ರಸಾಧನ ಗೃಹ ಅಥವಾ ಬಣ್ಣದ ಮನೆಯೇ ಚೌಕಿ. ಅದು ಆಯಾತಾಕಾರದಲ್ಲಿದ್ದರೂ ನಾಲ್ಕು ಭಾಗಗಳಿರುವುದರಿಂದ ಚೌಕಿ ಎಂಬ ಹೆಸರು. ಚೌಕಿಯಲ್ಲಿ ದೇವರ ಚೌಕಿ, ಅಡ್ಡ ಚೌಕಿ, ಬಲ ಚೌಕಿ, ಮತ್ತು ಎಡ ಚೌಕಿ ಎಂಬ ನಾಲ್ಕು ಭಾಗಗಳಿವೆ. ಈ ನಾಲ್ಕು ಭಾಗಗಳಿಂದಾಗಿ ಬಣ್ಣದ ಮನೆಗೆ ಚೌಕ ಎಂಬ ಹೆಸರು ಬಂದಿದೆ. ಚೌಕಿಯಲ್ಲಿ ಒಂದು ತುದಿಯಲ್ಲಿ ದೇವರನ್ನು ಇರಿಸಲಾಗುತ್ತದೆ. ದೇವರನ್ನು ಇರಿಸುವ ಭಾಗ ದೇವರ ಚೌಕಿ. ಅದರ ಎದುರು ದೂರದಲ್ಲಿ ಹಾಸ್ಯಗಾರ ಬಣ್ಣ ಬಳಿಯಲು ಕೂರುವ ಸ್ಥಳ ಅಡ್ಡ ಚೌಕಿ. ದೇವರ ಎಡಭಾಗ ಎಡಚೌಕಿ ಮತ್ತು ಬಲಭಾಗ ಬಲಚೌಕಿ ಎನಿಸಿಕೊಳ್ಳುತ್ತದೆ. ದೇವರ ಹಿಂಬದಿಯಲ್ಲಿ ಯಜಮಾನ, ಭಾಗವತ ಮುಂತಾದ ಪ್ರಮುಖರು ವಿಶ್ರಾಂತಿ ಪಡೆಯುತ್ತಾರೆ. ಹಾಸ್ಯಗಾರನ ಬಲ ಬದಿಯಲ್ಲಿ ಹಿಮ್ಮೇಳ ಪರಿಕರ ಗಳಿರುತ್ತವೆ. ಎಡ ಬದಿಯು ರಂಗಸ್ಥಳದ ಪ್ರವೇಶ ದ್ವಾರವಾಗಿರುತ್ತದೆ.

ಯಕ್ಷಗಾನ ಚೌಕಿಯ ಒಂದು ಸರ್ವಸಾಧಾರಣ ಸ್ವರೂಪ ಹೀಗಿದೆ.

ಯಕ್ಷಗಾನದಲ್ಲಿ ಮೊದಲ ಪ್ರಾಶಸ್ತ್ಯ ಬಣ್ಣದ ವೇಷಗಳಿವೆ. ಬಣ್ಣದ ವೇಷಗಳು ಬಹುತೇಕ ರಕ್ಕಸ ಅಥವಾ ತಾಮಸ ಪ್ರವೃತ್ತಿಯ ಪಾತ್ರಗಳಾಗಿರುತ್ತವೆ. ರಾವಣಮಹಿರಾವಣ ಪ್ರಸಂಗದಲ್ಲಿ ರಾವಣನ ಪಾತ್ರ ಮೊದಲನೆಯ ಬಣ್ಣವಾದರೆ ಮಹಿರಾವಣನದು ಎರಡನೆಯ ಬಣ್ಣವಾಗಿರುತ್ತದೆ. ಪ್ರಸಂಗದ ಆರಂಭದಲ್ಲಿ ಬರುವುದು ಪೀಠಿಕೆ ವೇಷಗಳಾಗಿರುತ್ತವೆ. ಉದಾ : ಅರ್ಜುನ, ದೇವೇಂದ್ರ, ಶತ್ರುಘ್ನ, ರಾಮ, ಕೃಷ್ಣ ಇತ್ಯಾದಿ. ಇಂದ್ರಜಿತು, ತಾಮ್ರಧ್ವಜ, ಅತಿಕಾಯ, ದಕ್ಷ ಇತ್ಯಾದಿಗಳು ಎದುರು ವೇಷಗಳು. ಪಂಚವಟಿಯ ಸೀತೆ ಮೊದಲನೆಯ ಸ್ತ್ರೀ ವೇಷವಾದರೆ ವಾಲಿವಧೆಯ ತಾರೆ ಎರಡನೆಯ ಸ್ತ್ರೀ ವೇಷವಾಗುತ್ತಾಳೆ. ಪೀಠಿಕೆಯ ಬಳಿಕಿನ ರಾಜವೇಷಗಳು ಕಟ್ಟು ವೇಷಗಳೆನಿಸುತ್ತವೆ. ಧರ್ಮರಾಯ ಸುಗ್ರೀವರಂತಹ ಪಾತ್ರಗಳನ್ನು ಏಳನೆಯ ಕಟ್ಟುವೇಷವೆಂದು ಕರೆಯಲಾಗುತ್ತದೆ. ಕಂಸವಧೆಯ ಕೃಷ್ಣ ಒಂದನೇ ಪುಂಡುವೇಷವಾದರೆ ಬಲರಾಮ ಎರಡನೆಯ ಪುಂಡುವೇಷವೆನಿಸುತ್ತಾನೆ.

ಚೌಕಿಯ ಬಗ್ಗೆ ರಾಘವ ನಂಬಿಯಾರರು ಕೆಲವು ಅಗತ್ಯ ಮಾಹಿತಿಗಳನ್ನು ಪ್ರಸ್ತುತ ಪಡಿಸಿದ್ದಾರೆ. ಚೌಕಿ ಎಂಬುದು ಒಂದು ತಾತ್ಕಾಲಿಕ ಆರಾಧನಾ ಗೃಹ. ಮೇಳದವರು ಚೌಕಿಗೆ ಬಂದೊಡನೆ ಮಾಡುವ ಮೊದಲ ಕೆಲಸ ದೇವರ ಪೆಟ್ಟಿಗೆ ಮೇಲೆ ರಾಮಲಕ್ಮಣರ ಕಿರೀಟ ಗಳನ್ನಿರಿಸಿ ಗಣಪತಿಯನ್ನು ಸಂಕಲ್ಪಿಸುವುದು. ಚೌಕಿಯು ರಂಗಸ್ಥಳದ ಬಲಭಾಗದಲ್ಲಿ ಭಾಗವತರ ಪದ್ಯ ಸ್ಫುಟವಾಗಿ ಕೇಳಿಸುವಷ್ಟು ದೂರದಲ್ಲಿ ಇರುತ್ತದೆ. ರಂಗದ ಹಿಂದೆ ಯಾವತ್ತೂ ಕತ್ತಲಿರಬೇಕು. ಬಣ್ಣದ ವೇಷಗಳು ರಂಗಕ್ಕೆ ಬರುವ ಮೊದಲು ಮೂರು ಅಟ್ಟಹಾಸ ಕೊಡಬೇಕು. ಮೊದಲನೆಯದು ವೇಷ ಕಟ್ಟಿದಲ್ಲಿಂದ, ಎರಡನೆಯದು ಚೌಕಿ ಮತ್ತು ರಂಗಗಳ ನಡುವಿನಿಂದ ಮತ್ತು ಮೂರನೆಯದು ರಂಗಸ್ಥಳದ ಪ್ರವೇಶ ದ್ವಾರದಿಂದ. ಹಾಗಾಗಿ ಚೌಕಿ ಯನ್ನು ರಂಗದಿಂದ ಸ್ವಲ್ಪ ದೂರದಲ್ಲೇ ನಿರ್ಮಿಸಲಾಗುತ್ತದೆ. [ಹಿಮ್ಮೇಳ, ಪುಟ 85]

ಯಕ್ಷಗಾನದ ವೇಷಗಳು ಪೂರ್ಣಗೊಂಡ ಮೇಲೆ ಚೌಕಿಯಿಂದ ಸ್ವಲ್ಪ ದೂರದಲ್ಲಿ ಕುಳಿತು ಕೊಳ್ಳುತ್ತವೆ. ಅಂತಹ ಜಾಗವನ್ನು ಅಡ್ಡ ಚೌಕಿ ಎಂದು ಕರೆಯುವ ಪರಿಪಾಠವಿತ್ತು. ಈಗ ಅಡ್ಡ ಚೌಕಿ ಎಂದರೆ ಹಾಸ್ಯಗಾರ ಕುಳಿತುಕೊಳ್ಳುವ ಸ್ಥಳ. ದೇವರ ವಿರುದ್ಧ ದಿಕ್ಕಿನಲ್ಲಿ ಹಾಸ್ಯಗಾರ ಕುಳಿತುಕೊಳ್ಳುವುದು ಆತನಿಗೆ ಪ್ರಸಂಗದಲ್ಲಿರುವ ಮಹತ್ವವನ್ನು ತಿಳಿಸುತ್ತದೆ. ಹಾಸ್ಯಗಾರ ದೇವರನ್ನೂ ಹಾಸ್ಯಕ್ಕೆ ಈಡು ಮಾಡಬಲ್ಲ! ದೇವರು ಪೂರ್ವ ಪಕ್ಷವಾದರೆ (Thesis) ಹಾಸ್ಯಗಾರ ಪ್ರತಿಪಕ್ಷ [Anti thesis]. ಆತ ಯಾವುದೇ ಪಾತ್ರಕ್ಕೂ ಸಿದ್ಧನಿರಬೇಕಾಗು ತ್ತದೆ. ಬ್ರಹ್ಮ, ನಾರದರಂತಹ ಪಾತ್ರಗಳನ್ನು ಯಕ್ಷಗಾನದಲ್ಲಿ ಹಾಸ್ಯಗಾರನೇ ನಿಭಾಯಿಸು ವುದು. ಆದುದರಿಂದ ಆತ ಒಂದು ಬಗೆಯ ಸಮನ್ವಯಕಾರ. ರಾತ್ರಿಯಿಡೀ ನಿದ್ದೆಗೆಟ್ಟು ಕಲಾಸ್ವಾದನೆ ಮಾಡುವ ಪ್ರೇಕ್ಷಕ ಗಡಣವನ್ನು ಹಾಸ್ಯಗಾರ ಉಲ್ಲಸಿತವನ್ನಾಗಿ ಇರಿಸಬೇಕಾಗು ತ್ತದೆ. ಹಿಂದೆ ಹಾಸ್ಯಗಾರನಿಗೆ ಚೆಂಡೆಮದ್ದಳೆಗಳಲ್ಲಿ ಪ್ರಾಮೀಣ್ಯ ಇರಬೇಕು. ಅವನು ನೃತ್ಯ ಬಾರದವರಿಗೆ ಕಲಿಸಿಕೊಡುವಷ್ಟು ನೈಪುಣ್ಯ ಹೊಂದಿರಬೇಕು ಎಂಬ ಅಲಿಖಿತ ನಿಯಮ ವೊಂದು ಜಾರಿಯಲ್ಲಿ ಇತ್ತು. ಹಾಗಾಗಿ ಹಾಸ್ಯ ಪಾತ್ರಕ್ಕೆ ವಿಶೇಷ ಮಹತ್ವ ಲಭ್ಯವಾಗಿತ್ತು.

ಹಾಸ್ಯಗಾರನ ಹಿಂಬದಿಯಲ್ಲಿ ಹಿಮ್ಮೇಳ ಪರಿಕರಗಳನ್ನು ಇರಿಸುವ ಸ್ಥಳವಿದೆ. ಚೆಂಡೆ ಮತ್ತು ಮದ್ದಳೆಗಳು ಶ್ರುತಿಗೆ ಹೊಂದಿಕೊಳ್ಳುತ್ತವೆಯೇ ಎಂಬುದನ್ನು ರಂಗಸ್ಥಳಕ್ಕೆ ಹೋಗುವ ಮುನ್ನ ಹಿಮ್ಮೇಳ ಕಲಾವಿದರು ಪರಿಶೀಲಿಸುತ್ತಾರೆ. ಚೆಂಡೆಯ ಹಗ್ಗಗಳನ್ನು ಎಳೆದು ಸ್ವರವನ್ನು ಶ್ರುತಿಗೆ ಹೊಂದಿಸಲಾಗುತ್ತದೆ. ಮದ್ದಳೆಯ ಎರಡೂ ಬದಿಗಳಿಗೆ ಕೋಲಿ ನಿಂದ ಅಥವಾ ಕಬ್ಬಿಣದ ಸಣ್ಣ ಸುತ್ತಿಗೆಯಿಂದ ಕುಟ್ಟಿ ಶ್ರುತಿ ಬದ್ಧವನ್ನಾಗಿಸುತ್ತಾರೆ. ಹಾಗೆ ಮಾಡುವುದಕ್ಕೆ ‘ಸುಲ್ತಾನ್‌ ಮಾಡುವುದು’ ಎಂದು ಹೆಸರು.

ಚೌಕಿಯಲ್ಲಿ ದೇವರ ಹಿಂಬದಿಯಲ್ಲಿ ಬಲ ಪಾರ್ಶ್ವದಲ್ಲಿ ಭಾಗವತನಿರುತ್ತಾನೆ. ಕಥಾ ಪ್ರಸಂಗದ ಬಗ್ಗೆ ಗೊಂದಲಗಳಿದ್ದರೆ ವೇಷಧಾರಿಗಳು ಅಲ್ಲಿಗೆ ಬಂದು ಭಾಗವತನಲ್ಲಿ ಮಾತಾಡಿ ಸಂಶಯ ನಿವಾರಿಸಿಕೊಳ್ಳುತ್ತಾರೆ. ಮೇಳದ ಯಜಮಾನನಿಗೂ ಅದೇ ವಿಶ್ರಾಂತಿ ತಾಣ. ಕಲಾವಿದರು ತಮ್ಮ ಆರ್ಥಿಕ ಸಂಕಷ್ಟಗಳನ್ನು ಅಲ್ಲೇ ತೋಡಿಕೊಂಡು ಯಜಮಾನ ರಿಂದ ಸಾಂತ್ವನ ಪಡೆಯುತ್ತಾರೆ.

ಯಕ್ಷಗಾನ ರಂಗಸ್ಥಳ

ಯಕ್ಷಗಾನ ಪ್ರದರ್ಶನ ನಡೆಯುವ ವೇದಿಕೆಗೆ ರಂಗಸ್ಥಳವೆಂದು ಹೆಸರು. ಅದನ್ನು ಯಕ್ಷಗಾನ ಪ್ರದರ್ಶನ ವೇದಿಕೆಯೆಂದು ಕರೆಯಲಾಗುತ್ತದೆ. ರಂಗಸ್ಥಳದ ಸ್ವರೂಪ ಕಾಲ ದಿಂದ ಕಾಲಕ್ಕೆ ಅಥವಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ.

1960ರ ದಶಕದವರೆಗಿದ್ದ ರಂಗಸ್ಥಳದ ವಿವರಗಳನ್ನು ರಾಘವ ನಂಬಿಯಾರ್‌ ಹೀಗೆ ದಾಖಲಿಸಿದ್ದಾರೆ: ‘ರಂಗಸ್ಥಳವೆಂಬುದು ನೆಲದಲ್ಲಿ ಹುಗಿದ ನಾಲ್ಕು ಬಿದಿರು ಅಥವಾ ಕಂಗಿನ ಕಂಬಗಳಿಂದ ಆಗುವ ಒಂದು ಚೌಕಾಕೃತಿಯ ಆವರಣ. ಸುಮಾರು ಏಳೂವರೆ ಅಡಿಗಳ ನೆಲದ ಚೌಕ ಇದು. ಹತ್ತುಹನ್ನೆರಡು ಅಡಿಗಳ ಎತ್ತರದಲ್ಲಿ ಈ ಕಂಬಗಳನ್ನು ಜೋಡಿಸಿ ಮಾವಿನ ಸೊಪ್ಪಿನ ತೋರಣಗಳಿಂದ ಅಲಂಕರಿಸುವುದು ಇದೆ. ರಂಗಸ್ಥಳದ ಕೆಳಗಡೆ ಸುಮಾರು ಒಂದು ಅಡಿ ಎತ್ತರಕ್ಕೆ ಮೂರು ಅಂಚುಗಳಲ್ಲಿ ತೋರಣ ಇರುತ್ತದೆ. ರಂಗಸ್ಥಳದ ಹಿಂದುಗಡೆಯ ಅಂಚಿನ ಬಳಿ ಸುಮಾರು ಎರಡೂವರೆ ಅಡಿ ಚೌಕ ಹಾಗೂ ಅಷ್ಟೇ ಎತ್ತರದ ಮರದ ಕಟ್ಟು ರಥವೊಂದು ಇರುತ್ತದೆ. ಒಡ್ಡೋಲಗದಲ್ಲಿ ವಿರಾಜಿಸುವ ರಾಜವೇಷಕ್ಕೆ ಸಿಂಹಾಸನ, ಪ್ರಯಾಣಕ್ಕೆಯುದ್ಧಕ್ಕೆ ಬಳಕೆಯಾಗುವ ರಥ, ಬೆಟ್ಟವೇರಬೇಕಾದಾಗ ಬೆಟ್ಟ, ತ್ರಿಮೂರ್ತಿಗಳಲ್ಲಿ ಯಾರಾದರೂ ಪ್ರತ್ಯಕ್ಷವಾಗಬೇಕಾದಾಗ ಅಂತರಿಕ ಇವೆಲ್ಲಕ್ಕೂ ಈ ಕಟ್ಟು ರಥ ಅವಲಂಬನವಾಗಿ ಒದಗುತ್ತಿತ್ತು’ [ದೀವಟಿಗೆ 2003, ಪುಟ 22].

ಸಭಾಲಕ್ಷಣದ ಪ್ರಕಾರ ರಂಗಸ್ಥಳ ಹೀಗಿರಬೇಕು : ಪಂಚ ಹಸ್ತೇನ ವಿಸ್ತೀರ್ಣಂ| ದಶಹಸ್ತೇನ ಉನ್ನತಂ||
ಅರ್ಧಚಂದ್ರ ಪ್ರಮಾಣೇನ| ತಿಷ್ಠತೇ ರಂಗಮಂಡಂಪಂ ||


[ಸಭಾಲಕ್ಷಣ, ಪಾವಂಜೆ ಪ್ರತಿ 1980, ಪುಟ 9]

ರಂಗಮಂಟಪವು ಐದು ಹಸ್ತ ಉದ್ದ, ಐದು ಹಸ್ತ ಅಗಲ ಮತ್ತು ಹತ್ತು ಹಸ್ತ ಎತ್ತರವಿರಬೇಕೆಂದು ಸಭಾಲಕ್ಷಣ ಹೇಳುತ್ತದೆ. ಈ ಅಳತೆ ಪ್ರಮಾಣವನ್ನು ರಾಘವ ನಂಬಿಯಾರರು ಹೀಗೆ ವಿಶ್ಲೇಷಿಸಿದ್ದಾರೆ: ಇದರ ಪ್ರಕಾರ ರಂಗಸ್ಥಳ ಚೌಕಾಕೃತಿಯದು. ಅದರ ಅಳತೆ 5 ಹಸ್ತ x 5 ಹಸ್ತ. ಎತ್ತರ ಮಾತ್ರ 10 ಹಸ್ತ. ಒಂದು ಹಸ್ತವೆಂದರೆ 24 ಅಂಗುಲ ಅಥವಾ 18 ಇಂಚು ಎಂದು ಅಪ್ಟೆ ಅವರ ಸಂಸ್ಕೃತ ಹಿಂದಿ ಶಬ್ದಕೋಶ ಹೇಳುತ್ತದೆ. ಹಸ್ತವೆಂಬುದಕ್ಕೆ ಕಿಟ್ಟೆಲ್‌ ನಿಘಂಟು ಮೊಣಕೈ ಎಲುಬಿನಿಂದ ಮಧ್ಯ ಬೆರಳ ತುದಿಯವರೆಗಿನ ಒಂದು ಮಾಪನವೆಂದು ಅರ್ಥ ನೀಡಿದೆ. ಇದರ ಪ್ರಕಾರವೂ ‘ಹಸ್ತ’ ಎಂದರೆ ಒಂದೂವರೆ ಅಡಿ ಆಗುತ್ತದೆ ಮತ್ತು ರಂಗಸ್ಥಳದ ಅಳತೆ 7.5 ಅಡಿ 7.5 ಅಡಿ 15 ಅಡಿ ಆಗಿರುತ್ತದೆ.[ ಹಿಮ್ಮೇಳ, ಪುಟ 87]

ಟೆಂಟು ಮೇಳಗಳು ಎತ್ತರದ ಹಲಿಗೆಯ ರಂಗಮಂಟಪವನ್ನು ಯಕ್ಷಗಾನ ಪ್ರದರ್ಶನ ಕ್ಕಾಗಿ ನಿರ್ಮಿಸುತ್ತಿದ್ದವು. ಬಯಲಾಟದ ಮೇಳಗಳು ಸಮತಟ್ಟಾದ ನೆಲ ಅಥವಾ ಗದ್ದೆ ‘ಬಯಲು’ಮೈದಾನದಲ್ಲಿ ಸರಿ ಸುಮಾರು ಸಭಾಲಕ್ಷಣದಲ್ಲಿ ಉಲ್ಲೇಖಿತವಾದ ಅಳತೆಯ ರಂಗವನ್ನು ನಿರ್ಮಿಸುತ್ತಿದ್ದವು. ರಂಗಸ್ಥಳದ ಎತ್ತರ ಮಾತ್ರ ಸುಮಾರು ಹತ್ತಡಿ ಮಾತ್ರ ವಾಗಿತ್ತು. ಆದರೆ ಕಾಲಕ್ರಮೇಣ ರಂಗಸ್ಥಳದ ಅಳತೆ ವಿಶಾಲವಾಗುತ್ತಾ ಹೋಯಿತು. 9ಅಡಿ ಉದ್ದ 7ಅಡಿ ಅಗಲ 10ಅಡಿ ಎತ್ತರದಿಂದ ಆರಂಭವಾಗಿ 16ಅಡಿ ಉದ್ದ 12ಅಡಿ ಅಗಲ ಮತ್ತು 12ಅಡಿ ಎತ್ತರದವರೆಗೆ ಅದು ಬದಲಾಗುತ್ತಾ ಬಂದಿದೆ. ನಾಲ್ಕು ಕಂಭಗಳ ಬದಲು ಆರು ಕಂಭಗಳು ಬಂದವು. ರಥದ ಬದಲು ಸಿಂಹಾಸನ ಬಳಕೆಗೆ ಬಂತು. ಕಂಭಗಳೇ ಇಲ್ಲದ ಅರ್ಧ ಚಂದ್ರಾಕೃತಿಯ ರಂಗಸ್ಥಳಗಳೂ ನಿರ್ಮಾಣವಾದವು. ಈ ಬದಲಾವಣೆಗಳನ್ನು ಬಯಲಾಟದ ಮೇಳಗಳು ಮಾಡಿದ್ದಲ್ಲ. ಟೆಂಟು ಮೇಳಗಳಿಂದಾದ ಈ ಆವಿಷ್ಕಾರಗಳು ಪ್ರೇಕಕರನ್ನು ಸೆಳೆಯುವ ತಂತ್ರಗಳಾಗಿದ್ದವು.

ರಂಗಸ್ಥಳದ ಉದ್ದವು ಅಗಲಕ್ಕಿಂತ ಸ್ವಲ್ಪ ಹೆಚ್ಚಿರಬೇಕು. ಹಿಮ್ಮೇಳ ಮತ್ತು ಸಿಂಹಾಸನ ಗಳು ಸ್ವಲ್ಪ ಸ್ಥಳವನ್ನು ಆಕ್ರಮಿಸುವುದರಿಂದ ಇದು ಅನಿವಾರ್ಯ. ಬಹುತೇಕ ಕಲಾವಿದರು 12ಅಡಿ ಉದ್ದ 10ಅಗಲ ಮತ್ತು 12ಅಡಿ ಎತ್ತರದ ರಂಗಸ್ಥಳ ಪ್ರದರ್ಶನದ ಪರಿಣಾಮಕ್ಕೆ ಅತ್ಯುತ್ತಮವೆಂದು ಅಭಿಪ್ರಾಯ ಪಡುತ್ತಾರೆ.

ರಂಗಸ್ಥಳ ನಿರ್ಮಾಣ ಮಾಡುವಾಗ ರಾಹು ಎಲ್ಲಿರುತ್ತಾನೆ ಎಂಬುದನ್ನು ನೋಡುವ ಸಂಪ್ರದಾಯವಿದೆ. ರಾಹುವಿಗೆ ಅಭಿಮುಖವಾಗಿ ರಂಗಸ್ಥಳ ನಿರ್ಮಾಣ ಮಾಡಬಾರದು ಎಂಬುದೊಂದು ಅಲಿಖಿತ ನಿಯಮ. ನಂಬಿಕೆಯ ಪ್ರಕಾರ ರಾಹುವಿನ ಉಪಸ್ಥತಿಯ ದಿಕ್ಕಿನ ವಿವರ ಹೀಗಿದೆ: ರವಿವಾರ ಮತ್ತು ಗುರುವಾರ ಪೂರ್ವ, ಮಂಗಳವಾರ ಪಶ್ಚಿಮ, ಸೋಮವಾರ ಮತ್ತು ಶುಕ್ರವಾರ ದಕ್ಷಿಣ, ಬುಧವಾರ ಮತ್ತು ಶನಿವಾರ ಉತ್ತರ ರಾಹು ಇರುವ ದಿಕ್ಕು. ಬಯಲಾಟವಾಡುವ ದಿನಗಳಲ್ಲಿ ರಾಹುವಿರುವ ದಿಕ್ಕಿಗೆ ಮುಖಮಾಡಿ ರಂಗಸ್ಥಳ ನಿರ್ಮಿಸ ಬಾರದೆಂದು ರೂಢಿ. ಅನಿವಾರ್ಯ ಸಂದರ್ಭಗಳಲ್ಲಿ ಓಕುಳಿ ಚೆಲ್ಲಿ, ರಾಹುವನ್ನು ಪ್ರಾರ್ಥಿಸಿ ಕಾಯಿ ಒಡೆದು ಆಟ ಆಡಬಹುದು ಎಂದು ಸಭಾಲಕ್ಷಣದಲ್ಲಿ ಪ್ರತಿವಿಧಿಯನ್ನು ಸೂಚಿಸಲಾಗಿದೆ.

ಒಂದು ಮಾದರಿ ರಂಗಸ್ಥಳವನ್ನು ಹೀಗೆ ತೋರಿಸಬಹುದು.

ಚಿತ್ರದಲ್ಲಿ ತೋರಿಸಿರುವುದು ತೆಂಕುತಿಟ್ಟು ಯಕ್ಷಗಾನದ ಒಂದು ಮಾದರಿ ರಂಗಸ್ಥಳ.

ಸಂಖ್ಯೆ 1 ಪ್ರವೇಶ ದ್ವಾರವಾಗಿರುತ್ತದೆ
ಸಂಖ್ಯೆ 3 ನಿರ್ಗಮನ ದ್ವಾರವಾಗಿರುತ್ತದೆ.
ಸಂಖ್ಯೆ 2 ವೇಷವು ಅರ್ಧಚಂದ್ರಾಕಾರವಾಗಿ ಚಲಿಸುವುದನ್ನು ಸೂಚಿಸುತ್ತದೆ.

ಸಭಾಲಕ್ಷಣದಲ್ಲಿ ಹೇಳುವ ‘ಅರ್ಧಚಂದ್ರ ಪ್ರಮಾಣೇನ’ ಎಂಬ ಪದಗಳಿಗೆ ಅರ್ಧಚಂದ್ರಾಕೃತಿಯ ಚಲನೆ ಎಂಬ ಅರ್ಥವನ್ನು ವಿದ್ವಾಂಸರು ನೀಡಿದ್ದಾರೆ.

ಸಂಖ್ಯೆ 4 ವೇಷಗಳು ಕುಳಿತುಕೊಳ್ಳುವ ಪೀಠ.
ಅದರ ಹಿಂದೆ ಮೇಜಿನಲ್ಲಿ ಭಾಗವತ ಸಂಖ್ಯೆ[ 5 ಮತ್ತು ಆತನ ಎಡಭಾಗದಲ್ಲಿ ಮದ್ದಳೆಗಾರ ಸಂಖ್ಯೆ 6] ಕೂತಿರುತ್ತಾರೆ.
ಸಂಖ್ಯೆ 7 ಶ್ರುತಿಯನ್ನು ಸೂಚಿಸುತ್ತದೆ. ಶ್ರುತಿ ಹಾರ್ಮೋನಿಯಂ] ಮೇಜಿನ ಮೇಲೆ ಭಾಗವತಮದ್ಲೆಗಾರನ ಮಧ್ಯದಲ್ಲಿರುತ್ತದೆ. ಶ್ರುತಿಕಾರ ಕುರ್ಚಿಯಲಿ ಕೂತು ಶ್ರುತಿವಾದನ ಮಾಡುತ್ತಾನೆ.

ಸಂಖ್ಯೆ 8 ಚಕ್ರತಾಳದವನ ಸ್ಥಾನ. ಆತ ನಿಂತಿರುತ್ತಾನೆ.
ಪ್ರವೇಶದ್ವಾರದ ಎಡಬದಿಯ ಸಂಖ್ಯೆ 9 ಚೆಂಡೆಯವನ ಸ್ಥಾನವಾಗಿದೆ. ಆತ ಪ್ರದರ್ಶನದುದ್ದಕ್ಕೂ ನಿಂತಿರುತ್ತಾನೆ.
10 ಮತ್ತು 11 ಧ್ವನಿಬೆಳಕುಗಳಿರಬೇಕಾದ ಸ್ಥಾನವನ್ನು ಸೂಚಿಸುತ್ತದೆ.

ಬಡಗು ತಿಟ್ಟಿನಲ್ಲಿ ಚೆಂಡೆಯವ ಸಂಖ್ಯೆ 3ರ ಬಳಿ ಕುಳಿತಿರುತ್ತಾನೆ.
ಬಡಗುತಿಟ್ಟಿನಲ್ಲಿ ಸಂಖ್ಯೆ 8 ಅಂದರೆ ಚಕ್ರತಾಳದವ ಇರುವುದಿಲ್ಲ.
ಉಳಿದೆಲ್ಲಾ ವಿವರಗಳಲ್ಲಿ ತೆಂಕುಬಡಗಿನ ನಡುವೆ ಯಾವುದೇ ಭೇದ ಇರುವುದಿಲ್ಲ.

ರಂಗಸ್ಥಳ ಮತ್ತು ಚೌಕಿಯಲ್ಲಿ ಟ್ಯೂಬು ಲೈಟು, ಬಣ್ಣಬಣ್ಣದ ಲೈಟು ಮತ್ತು ಡಿಸ್ಕೋ ಲೈಟು ಬಳಸಬಾರದು. ದೊಂದಿ ಬೆಳಕಿನ ಬಣ್ಣದ ಕೆಂಪುಮಿಶ್ರಿತ ಹಳದಿ ಬಣ್ಣದ ಲೈಟುಗಳನ್ನೇ ಬಳಸಬೇಕು. ಟ್ಯೂಬು ಲೈಟು ಮುಖವರ್ಣಿಕೆಯ ಅಂದವನ್ನು ಕೆಡಿಸುತ್ತದೆ ಮತ್ತು ಭಾವಾಭಿವ್ಯಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದಕ್ಕಾಗಿ ಚೌಕಿ ಮತ್ತು ರಂಗದಲ್ಲಿ ಹ್ಯಾಲೋಜಿನ್‌ ದೀಪಗಳನ್ನು ಬಳಸಬೇಕು. ಆ ದೀಪಗಳ ಬೆಳಕಲ್ಲಿ ಮುಖವರ್ಣಿಕೆ ಮತ್ತು ವೇಷಭೂಷಣಗಳು ರಮ್ಯಾಧಿತ ಲೋಕವೊಂದನ್ನು ಸೃಷ್ಟಿಸುತ್ತವೆ. ರಂಗದಲ್ಲಿ ಎತ್ತರದ ಕೋಲು ಧ್ವನಿ ವರ್ಧಕದ ಬದಲು ಹ್ಯಾಲೋಜಿನ್‌ ಲೈಟಿನ ಅಕ್ಕಪಕ್ಕಗಳಲ್ಲಿ ಧ್ವನಿವರ್ಧಕಗಳನ್ನು ನೆಲದಲ್ಲಿ ಇರಿಸಬೇಕು. ಎಡ ಮತ್ತು ಬಲಬದಿಗಳಲ್ಲೂ ಅಂತಹದೇ ದೀಪ ಮತ್ತು ಧ್ವನಿವರ್ಧಕಗಳನ್ನು ನೆಲದಲ್ಲಿ ಸ್ಥಾಪಿಸಬೇಕು. ಆಗ ಯಕ್ಷಗಾನ ಪ್ರದರ್ಶನವು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬರುತ್ತದೆ.

********************


ಲೇಖನ ಕೃಪೆ : www.chilume.com

ಚಿತ್ರಗಳ ಕೃಪೆ : ಅ೦ತರ್ಜಾಲದಲ್ಲಿ ಯಕ್ಷಗಾನಾಭಿಮಾನಿಗಳಿ೦ದ ಪ್ರಕಟಿಸಲ್ಪಟ್ಟ ಸ೦ಗ್ರಹದಿ೦ದ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ