ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹಿರಿಯ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕರಿಗೆ ಅರಾಟೆ ಮಂಜುನಾಥ ಸಂಸ್ಮರಣಾ ಪ್ರಶಸ್ತಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಜನವರಿ 24 , 2016

ಬಡಗುತಿಟ್ಟಿನಲ್ಲಿ ಸಿಧ್ದಿ ಹಾಗೂ ಪ್ರಸಿಧ್ದಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಸ್ತ್ರೀ ವೇಷಧಾರಿ, ಸುಧೀರ್ಘ ಕಾಲ ಬಡಗುತಿಟ್ಟಿನ ಡೇರೆ ಹಾಗೂ ಬಯಲಾಟದಲ್ಲಿ ಸ್ತ್ರೀ ವೇಷಧಾರಿಯಾಗಿ ಗುರುತಿಸಲ್ಪಟ್ಟ, ದಿ. ಅರಾಟೆ ಮಂಜುನಾಥನವರ ಸಮಕಾಲಿನರಾದ ಎಂ. ಎ. ನಾಯ್ಕರಿಗೆ, ಅರಾಟೆ ಮಂಜುನಾಥನವರ ಪ್ರಥಮ ಸಂಸ್ಮರಣಾ ಪ್ರಶಸ್ತಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಜ. 30ರಂದು ಕುಂದಾಪುರದಲ್ಲಿ ನೀಡಲಾಗುತ್ತದೆ. ಈ ಅದ್ದೂರಿ ಸಮಾರಂಭದ ಬಳಿಕ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ಬೀಷ್ಮ ವಿಜಯ-ಚೂಡಾಮಣಿ-ಕುಶಲವ ಎಂಬ ಪ್ರಸಂಗಗಳ ಬಯಲಾಟ ನೆರವೇರಲಿದೆ. ಪ್ರಶಸ್ತಿ ಪುರಸ್ಕ್ರತ ಎಂ. ಎ. ನಾಯ್ಕರು ಚೂಡಾಮಣಿ ಪ್ರಸಂಗದಲ್ಲಿ ಅಶೋಕವನದ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಂದಾರ್ತಿ ಅಣ್ಣು ನಾಯಕ್ ಯಾನೆ ಎಂ. ಎ. ನಾಯ್ಕರು ಬಡಗುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀ ವೇಷಧಾರಿಗಳಲ್ಲಿ ಒಬ್ಬರು. ಸ್ತ್ರೀವೇಷಕ್ಕೆ ಬೇಕಾದ ಒನಪು ವೈಯ್ಯಾರ ಶರೀರ ಶಾರೀರ ಸ್ವರಭಾರ, ಹೀಗೆ ಸ್ತ್ರೀ ವೇಷಕ್ಕೆ ಬೇಕಾದ ಸರ್ವ ಅಂಗಗಳಲ್ಲೂ ಪರಿಪೂರ್ಣರಾದ ಇವರು ಬಡಗುತಿಟ್ಟಿನ ಸಾಂಪ್ರದಾಯದ ಕಲಾವಿದರಾದ ಹಾರಾಡಿ ನಾರಾಯಣ ಗಾಣಿಗ, ಕೋಟ ವೈಕುಂಠ, ಅರಾಟೆ ಮಂಜುನಾಥ, ದಯಾನಂದ ನಾಗೂರರ ಸಾಲಿನಲ್ಲಿ ಗುರುತಿಸಲ್ಪಟ್ಟ ಕಲಾವಿದರು. ಬಡಗುತಿಟ್ಟಿನ ಮೇರು ಕಲಾವಿದರ ಸಾಲಿನಲ್ಲಿ ಗುರುತಿಸಲ್ಪಡುವ ಇವರು ಯಕ್ಷಲೋಕಕ್ಕೆ ನೀಡಿದ ಕೊಡುಗೆ ಅಪಾರ.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಬಡಗುತಿಟ್ಟಿನ ಯಕ್ಷಗಾನದ ತವರೂರು ಮಂದಾರ್ತಿಯಲ್ಲಿ ಕರಿಯ ಮರಕಾಲ ಮತ್ತು ಬುಡ್ಡು ದಂಪತಿಗಳ ಪುತ್ರನಾಗಿ ಜನಿಸಿದ ಇವರು ಬಾಲ್ಯದಲ್ಲಿ ಬಡತನದಿಂದ 6ನೇ ತರಗತಿಗೆ ವಿದಾಯ ಹೇಳಿ ಸುತ್ತಮುತ್ತಲು ದನಕಾಯುವ ಕಾಯಕ ಕೈಗೊಂಡಿದ್ದರು. ರಾತ್ರಿ ಸುತ್ತಮುತ್ತ ಮಂದಾರ್ತಿ ಮೇಳದ ಚೆಂಡೆ ಶಬ್ದ ಕೇಳಿ ಹರಕೆ ಆಟ ನೋಡಿ ಅಲ್ಲಿ ಶಿರಿಯಾರ ಮಂಜು ನಾಯಕ್ , ಕೋಟ ವೈಕುಂಠ, ಅರಾಟೆ ಮಂಜುನಾಥ ಮುಂತಾದವರ ವೇಷ, ಕೊರಗಪ್ಪ ಹಾಸ್ಯಗಾರರ ಹಾಸ್ಯ ನೋಡಿ ಆಕರ್ಷಿತರಾದ ಇವರನ್ನು ಹಿರಿಯ ಕಲಾವಿದ ಸುರ್ಗಿಕಟ್ಟೆ ಹೆರಿಯ ಗಾಣಿಗರು 1968ರಲ್ಲಿ ಅಮೃತೇಶ್ವರಿ ಮೇಳಕ್ಕೆ ಸೇರಿಸಿದರು.

ಕೋಡಂಗಿ ಕಟ್ಟುವೇಷ ನಂತರ ಪೀಠೀಕಾ ಸ್ತ್ರೀವೇಷ ನಂತರ ಸಖಿವೇಷಕ್ಕೆ ತಯಾರದ ಸಂದರ್ಭದಲ್ಲಿ ಅಮೃತೇಶ್ವರಿ ಮೇಳ ಡೇರೆಮೇಳವಾಗಿ ಹೊಸದಾಗಿ ತಿರುಗಾಟಕ್ಕೆ ಹೊರಟಿತ್ತು. ಇದೇ ವೇಳೆ ಅಲ್ಲಿ ಮುಖ್ಯ ಸ್ತ್ರೀ ವೇಷಧಾರಿಯಾಗಿದ್ದ ಕೋಟ ವೈಕುಂಠ ಅವರು ದರ್ಮಸ್ಥಳ ಮೇಳಕ್ಕೆ ಹೋದಾಗ ಸ್ತ್ರೀವೇಷದ ಕೊರತೆಯಾಗಿ ಯಜಮಾನರಾದ ಪಾರಂಪಳ್ಳಿ ಹಂದೆಯವರು ಅಣ್ಣು ನಾಯ್ಕರನ್ನು ಎಂ. ಎ ನಾಯ್ಕ್ ಎಂದು ಪುನರ್ ನಾಮಕರಣಮಾಡಿ ಅಮೃತೇಶ್ವರಿ ಮೇಳದ ಮುಖ್ಯ ಸ್ತ್ರೀ ವೇಷಧಾರಿಯಾಗಿ ಮಾಡಿದರು. ಒಮ್ಮೆಲೆ ದೊರೆತ ಮುಖ್ಯ ಸ್ತ್ರೀ ವೇಷಧಾರಿಯ ಸ್ಥಾನ ತನ್ನ ಬದುಕಿನ ಮರೆಯಲಾಗದ ಕ್ಷಣ ಎಂದು ಹಂದೆಯವರನ್ನು ನಾಯ್ಕರು ಇಂದಿಗೂ ನೆನಪಿಸುತ್ತಾರೆ.

ಎಂ. ಎ. ನಾಯ್ಕ
ಜನನ ಸ್ಥಳ : ಮಂದಾರ್ತಿ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಅಮೃತೇಶ್ವರಿ, ಮೂಲ್ಕಿ, ಪಂಚಲಿಂಗೇಶ್ವರ , ಸಿರಸಿ ಮತ್ತು ಮಂದಾರ್ತಿ ಮೇಳಗಳಲ್ಲಿ ಅಪ್ರತಿಮ ಸ್ತ್ರೀ ಪಾತ್ರಧಾರಿಯಾಗಿ ಕಲಾಕೃಷಿ.

ಮೇರು ಕಲಾವಿದರೊ೦ದಿಗೆ ಒಡನಾಟ

ಚಿಟ್ಟಾಣಿ, ಆಕ್ಟರ್ ಜೋಶಿ, ನಗರ ಜಗನ್ನಾಥ ಶೆಟ್ತಿ, ವಾಸುದೇವ ಸಾಮಗ, ಶಿರಿಮಠಪಂಜು, ಚಂದ್ರಭಟ್, ಮುಂತಾದವರ ಮುಮ್ಮೇಳ, ನಾರ್ಣಪ್ಪ‌ ಉಪ್ಪೂರ್, ಮದ್ದಳೆಗಾರ ತಿಮ್ಮಪ್ಪ ನಾಯ್ಕ್ , ದುರ್ಗಪ್ಪ ಗುಡಿಗಾರ್, ಹೊಳೆಗದ್ದೆ ಗಜಾನನರ ಹಿಮ್ಮೇಳದಲ್ಲಿ ಅಮೃತೇಶ್ವರಿ ಮೇಳ ಗಜಗಟ್ಟಿ ಮೇಳವಾಗಿ ಗುರುತಿಸಲ್ಪಟ್ಟಿತ್ತು. `ಯಕ್ಷಲೋಕ ವಿಜಯ`ದ ಸುಮಗಂಧಿಯ ಪಾತ್ರ ಇವರಿಗೆ ಅಪಾರ ಹೆಸರು ತಂದುಕೊಟ್ಟಿತ್ತು. ಯಕ್ಷಲೋಕ ವಿಜಯ ಆ ಕಾಲದ ಮೊದಲ ಆಧುನಿಕ ಪ್ರಸಂಗದ ಮೂಲಕ ನಾಯ್ಕರು ಹೊಸ ಪ್ರಸಂಗಗಳಲ್ಲಿ ವೇಷ ಮಾಡಲು ಪ್ರಾರಂಭಿಸಿದರು.

ಸತತ 13 ವರ್ಷ ಅಮೃತೇಶ್ವರಿ ಮೇಳದಲ್ಲಿ ಚಕ್ರ ಚಂಡಿಕೆ, ರಾಜ ಬೃಹದ್ರತ, ಮಾಯಾ ಮೃಗಾವತಿ ಮುಂತಾದ ಆ ಕಾಲದ ಹೊಸ ಪ್ರಸಂಗದ ಪಾತ್ರ ನಿರ್ವಹಿಸಿ ಸೇವೆಸಲ್ಲಿಸಿದ ಇವರು ಹಿರಿಯ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥರೊಂದಿಗೆ ಮೂಲ್ಕಿ ಮೇಳ ಸೇರಿದರು. ಯಕ್ಷಗಾನ ಮೇಳದ ವ್ಯವಸ್ಥಾಪಕತ್ವವನ್ನೂ ನಿರ್ವಹಿಸಿದ ಇವರು ಕೋಟ ವೈಕುಂಠರೊಂದಿಗೆ ಅಮೃತೇಶ್ವರಿ ಮೇಳವನ್ನು 3 ವರ್ಷ ನಡೆಸಿದರು. ಬಳಿಕ ಪಂಚಲಿಂಗೇಶ್ವರ ಮತ್ತು ಸಿರಸಿ ಮೇಳ ಸೇರಿದ ಅವರು ನಿವೃತ್ತಿಯವರೆಗೂ ತವರು ಮೇಳ ಮಂದಾರ್ತಿಯಲ್ಲಿ 15 ವರ್ಷ ತಿರುಗಾಟ ನಡೆಸಿದರು. ಕೇವಲ ಪೌರಾಣಿಕ ಪ್ರಸಂಗಗಳಿಗೆ ಸುದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಜೀವತುಂಬಿದ್ದಾರೆ.

ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದ ಇವರು ಕೆ. ಎಸ್. ಉಪಾದ್ಯರ ಗಣೇಶ ಯಕ್ಷಗಾನ ಮಂಡಳಿಯೊಂದಿಗೆ 2 ಬಾರಿ ಸ್ವಿಜರ್ಲೇಂಡ್, ಹಾಂಕಾಂಗ್, ಜರ್ಮನಿ, ಪೋಲೆಂಡ್ ಮುಂತಾದ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

ಸೌಮ್ಯ ಪಾತ್ರಗಳಲ್ಲಿ ಮಿ೦ಚಿದ ನಾಯ್ಕರು

ಸೌಮ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತ ಶರೀರ ಶಾರೀರ ಹೊಂದಿರುವ ಇವರ ಚಂದ್ರಮತಿ, ದಮಯಂತಿ, ಸೀತೆ ಸಾವಿತ್ರಿ ಮಂಡೋದರಿ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. ವೀರ ರಸದ ಕಸೆ ಪಾತ್ರಗಳಿಗೆ ಅರಾಟೆಯವರು ಸೌಮ್ಯ ಪಾತ್ರಗಳಿಗೆ ಎಂ. ಎ ನಾಯ್ಕರು ಎನ್ನುವುದು ಯಕ್ಷಗಾನ ವಲಯದಲ್ಲಿ ಜನಜನಿತವಾಗಿತ್ತು. ಮೂಲ್ಕಿ ಮೇಳದಲ್ಲಿ ನಗರ ಜಗನ್ನಾಥ ಶೆಟ್ಟರ ರಾಮ, ಕುಮ್ಟಾ ಗೋವಿಂದ ನಾಯ್ಕರ ಹನುಮಂತ, ಎಂ. ಎ. ನಾಯ್ಕರ ಸೀತೆ ಪಾತ್ರಗಳು ರಾಮಾಂಜನೇಯ ಪ್ರಸಂಗವನ್ನು ರಂಜಿಸಿತ್ತು. ನಗರದವರ ಉಗ್ರಸೇನ ನಾಯ್ಕರ ರುಚಿಮತಿ ಮೇಳದ ಇನ್ನೊಂದು ಪ್ರಮುಖ ಆಕರ್ಷಣೆಯಾಗಿತ್ತು.

ಶಿರಿಯಾರ ಮಂಜು ನಾಯ್ಕ್, ಅರಾಟೆ ಮಂಜುನಾಥ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಚಿಟ್ಟಾಣಿಯವರು, ಕುಂಜಾಲು ರಾಮಕೃಷ್ಣ, ಸಾಲ್ಕೋಡು ಗಣಪತಿ ಹೆಗಡೆ, ಮೊಳಹಳ್ಲಿ ಹೆರಿಯ ನಾಯ್ಕ, ಕೋಳ್ಯೂರು ರಾಮಚಂದ್ರ ರಾವ್, ಎಂ. ಕೆ ರಮೇಶಾಚಾರ್ಯ ಮುಂತಾದ ಹಿರಿಯ ಕಲಾವಿದರನ್ನು ಸ್ಮರಿಸುವ ಇವರು ಪಾರಂಪಳ್ಳಿ ಶ್ರೀದರ ಹಂದೆಯವರ ಯಜಮಾನಿಕೆ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ತೃಪ್ತಿ ತಂದ ತಿರುಗಾಟ ಮಂದಾರ್ತಿ ಮೇಳದಲ್ಲಿ ಎನ್ನುವ ಇವರು ಅನಾರೋಗ್ಯದಿಂದ ನಿವೃತ್ತಿಯಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿದ ಇವರು ಕಲಾವಲಯದಲ್ಲಿ ಎಲ್ಲರಿಗೂ ಆದರಣಿಯರಾಗಿದ್ದಾರೆ. ಅರಾಟೆಯವರ ಸಮಕಾಲಿನರಾದ ಇವರಿಗೆ ಅರಾಟೆ ಸಂಸ್ಮರಣೆಯಂದು ನೀಡಲಾಗುವ ಪ್ರಥಮ ಸಂಸ್ಮರಣಾ ಪ್ರಶಸ್ತಿ ಯೋಗ್ಯವಾಗಿಯೇ ನೀಡಲ್ಪಡುತ್ತಿದೆ.**************Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ