ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಮಂಗಲ ಮಾನಸದ ಮಾನನಿಧಿ ಶ್ರೀಹರಿ ಆಸ್ರಣ್ಣ

ಲೇಖಕರು : ವಾದಿರಾಜ ಕಲ್ಲೂರಾಯ
ಶುಕ್ರವಾರ, ಜನವರಿ 29 , 2016

ತೆಂಕುತಿಟ್ಟು ಯಕ್ಷಗಾನವನ್ನು ಪ್ರೀತಿಸುವ, ಸತ್ಯೋಪಾಸಕನ ನಿರ್ಭಯತೆ ಮತ್ತು ಮಾತೆಯ ಮಮತೆ ಸಮರಸವಾಗಿ ಸಂಗಮಗೊಂಡ, ಮೊಗೆದಷ್ಟೂ ಮತ್ತೆ ಮತ್ತೆ ಜಿನುಗಿ ಚಿಮ್ಮುವ ನಲುನುಡಿಯ ನೀರೂಟೆಯಾಗಿ ಯಕ್ಷಗಾನ ಉಪಾಸನೆಯನ್ನು ಜೀವನವ್ರತವನ್ನಾಗಿ ಮಾಡಿಕೊಂಡ, ಸಾಹಿತ್ಯ ಅಧ್ಯಯನದ ಆಪ್ತಾಚಲವಾಗಿ ಸಹೃದಯ ಶಿವಶಿಖೆಯಲ್ಲಿ ಸ್ಥಾನ ಪಡೆದ ವಿರಾಟ್‌ ವ್ಯಕ್ತಿತ್ವ ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ ಅವರದು.

ಪರಂಪರೆ -ಪರಿಸರ ಎರಡೂ ಪ್ರಭಾವಶಾಲಿಯಾಗಿದ್ದರೆ ಪ್ರತಿಭೆ -ಪಾಂಡಿತ್ಯಗಳು ವಿಜೃಂಭಿಸುತ್ತವೆ ಎನ್ನುವುದಕ್ಕೆ ಶ್ರೀಹರಿ ಆಸ್ರಣ್ಣರು ಸಾಕ್ಷಿ. ಯಕ್ಷಗಾನ ಪ್ರೀತಿ ಇವರಿಗೆ ಪ್ರತ್ಯಕ್ಷ ಸಂಪತ್ತು. ತಂದೆ ಸದಾನಂದ ಆಸ್ರಣ್ಣರು ಯಕ್ಷಗಾನ ಉಪಾಸಕರು. ತಾಯಿ ರುಕ್ಮಿಣೀ ಅಮ್ಮನಿಗೆ ಸಾವಿರಕ್ಕೂ ಹೆಚ್ಚು ದಾಸರ ಪದಗಳು ಕಂಠಸ್ಥ. ಕಟೀಲು ಪರಿಸರದಲ್ಲಿ ಗೆಜ್ಜೆ ಶಬ್ದದ ಉಲಿಹದೊಂದಿಗೆ ಬೆಳೆದ ಆಸ್ರಣ್ಣ ರಿಗೆ ಯಕ್ಷಗಾನ ವೆಂದರೆ ಅಂತರಂಗದ ವಿಕಾಸದೆಡೆಗೆ ಸಾಗುವ ರಸೋಜ್ವಲವಾದ ವೇದಾಂತ ಯಾನ.

ಮೇಧಾವೈಶಾಲ್ಯದ ಮಹಾ ವಿದ್ವಾಂಸರಾದ ಎನ್‌. ಲಕ್ಷ್ಮೀನಾರಾಯಣ ಭಟ್ಟ ಹಾಗೂ ವೇದವ್ಯಾಸ ತಂತ್ರಿಗಳ ಬಳಿ ಶಿಷ್ಯತ್ವ ಸ್ವೀಕಾರ ಮಾಡಿ, ತನ್ಮೂಲಕ ಆ ಎತ್ತರ ಬಿತ್ತರಗಳ ಸಾಕ್ಷಾತ್ಕಾರ ಮಾಡಿಕೊಂಡರು. ಸಹೋದರ ಪ್ರಸಾದ ಆಸ್ರಣ್ಣರಿಂದ ವೇದಾಂತ ದರ್ಶನ, ವಾಸುದೇವ ರಂಗಭಟ್ಟರ ಸಾಹಚರ್ಯದಿಂದ ಬಲಿಷ್ಠಗೊಂಡು ಕಲಾಸೇವೆಯ ಪ್ರಾರಂಭವಾಯಿತು.
ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ
ಬಗೆಯಲ್ಲಿ ಬಾಲ್ಯ, ಕಲಾಕೈಂಕರ್ಯದಲ್ಲಿ ಕೌಮಾರ, ವಾಗ್ವಾಪಾರದಲ್ಲಿ ಯೌವ್ವನ, ಅರಿವಿನಲ್ಲಿ ವಾರ್ಧಕ್ಯ - ಜಡತೆಗೆ ಎಡೆಯೇ ಇಲ್ಲ. ಬಾಳಿನ ಬೇರಿರುವುದು ಭೂಮಿಯಲ್ಲಿ ಅಲ್ಲ, ಬಾನಿನಲ್ಲೂ ಅಲ್ಲ; ಭಾವದಲ್ಲಿ ಎಂದರಿತು ಸಾಹಿತ್ಯ ಸೌರಭದ ಸಂಗೀತ ಸುಗಂಧದ ಸಂಗಮ ಸ್ಥಲವಾದ ಸಹೃದಯ ಸುಹೃತ್ತಾಗಿ ಪ್ರಸಿದ್ಧರು. ವ್ಯಾಕರಣದ ಒಪ್ಪ ಓರಣ, ಅಲಂಕಾರಗಳ ತೋರಣ, ಶಾಸ್ತ್ರಾರ್ಥ ಚಿಂತನದ ಹೂರಣ- ಹೀಗೆ ಹರಿ ಅಸ್ರಣ್ಣರ ಮಾತೆಂದರೆ ಮೂರೆಳೆಯ ಮುತ್ತಿನ ಹಾರ.

ಕಾವ್ಯಾನುಸಂಧಾನ, ನಿರಂತರಾಧ್ಯಯನ, ಶಾಸ್ತ್ರಜಿಜ್ಞಾಸೆಗಳ ಜತೆಜತೆಗೆ ದುರ್ಗಾಮಕ್ಕಳ ಮೇಳ ಸ್ಥಾಪನೆ, ಸುಹೃತ್‌ ಸಮ್ಮಾನ, ತಾಳಮದ್ದಳೆ ಸಪ್ತಾಹ ಸಂಘಟನೆ, ಯಕ್ಷಮಿತ್ರ ನಮ್ಮ ವೇದಿಕೆಯ ಸ್ಥಾಪಕ ಸದಸ್ಯರಾಗಿ ನಿರಂತರ ಕಲಾಪೂಜೆ, ಆನುವಂಶಿಕ ಅರ್ಚಕರಾಗಿ ಶ್ರೀದೇವಿಯ ನಿತ್ಯಾರಾಧನೆಯಿಂದ ಯಕ್ಷಗಾನ ಕಲಾಂಬಿಕೆಯ ಸಾರಸ್ವತ ಸಾಮ್ರಾಜ್ಯ ವಿಸ್ತಾರಗೊಳಿಸಿದ ತಪಸ್ವಿ. ಇಂಥ ಶ್ರೀಹರಿನಾರಾಯಣದಾಸ ಆಸ್ರಣ್ಣರಿಗೆ ಕಾರ್ಕಳ ಹಿರ್ಗಾನದ ಕುಂದೇಶ್ವರ ದೇವಳದಲ್ಲಿ ಈ ಬಾರಿಯ "ಕುಂದೇಶ್ವರ ಸಮ್ಮಾನ' ಗೌರವ ನೀಡಿ ಜ.23ರಂದು ಅಭಿವಂದಿಸಲಾಯಿತು.

**********************

ಕೃಪೆ : http://www.udayavani.com



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ