ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮರೆಯಾದ ಯಕ್ಷ ರಸಿಕರ ಕಣ್ಮಣಿ : ಕಣ್ಣಿಮನೆ ಗಣಪತಿ ಭಟ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಫೆಬ್ರವರಿ 19 , 2016

ಬಡಗುತಿಟ್ಟು ಮುಮ್ಮೇಳದಲ್ಲಿ ಕ್ರಾಂತಿ ಮೂಡಿಸಿ ಅಪೂರ್ವ ಪುರುಷವೇಷ ಹಾಗೂ ಪುಂಡು ವೇಷಧಾರಿಯಾಗಿ ತಮ್ಮ ವಿಶಿಷ್ಟ ನೃತ್ಯ ಶೈಲಿಯಿಂದ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಕಣ್ಣಿಮನೆ ಗಣಪತಿ ಭಟ್ ಇನ್ನಿಲ್ಲ. ಬಡಗುತಿಟ್ಟು ಏಕತಾನತೆಯಿಂದ ನರಳುತಿದ್ದಾಗ ಕಣ್ಣಿಯವರ ಪ್ರೇವೇಶವಾಯಿತು. ವಿಶಿಷ್ಟ ಶೈಲಿಯ‌ ಅಭಿನಯ ಅಭಿವ್ಯಕ್ತಿಗಳಿಂದ ಯಕ್ಷಗಾನಕ್ಕೆ ಹೊಸ ಸಂಚಲನ ಮೂಡಿಸಿದ ಅವರು ಯಕ್ಷಗಾನದ ಹೊಸ ಪೀಳಿಗೆಯ ಪ್ರೇಕ್ಷಕರ ಪಾಲಿಗೆ ಅವರು ಕಣ್ಣಿ ಎಂದೇ ಪ್ರಸಿದ್ಧ. ಹೊಸ ಪ್ರೇಕ್ಷಕರ ಸೃಷ್ಟಿಯೊಂದಿಗೆ ಹೊಸ ಯುಗದ ಪ್ರಾರಂಭವಾಯಿತು. ಅಷ್ಟೇ ಬೇಗ ಅಂತ್ಯವಾಯಿತು. ಅತ್ಯಲ್ಪ ಕಾಲದಲ್ಲಿ ಯಕ್ಷರಂಗದಲ್ಲಿ ಕ್ರಾಂತಿ ಮೂಡಿಸಿದ ಕೆರೆಮನೆ ಗಜಾನನ ಹೆಗಡೆ, ಗುಂಡ್ಮಿ ಕಾಳಿಂಗ ನಾವಡ, ರಾಮ ನಾಯರಿ, ಸಿದ್ದಕಟ್ಟೆ ಚನ್ನಪ್ಪ ಶೆಟ್ಟರ ಹಾಗೆ ಕಣ್ಣಿಯವರ ಹೆಸರು ಇತಿಹಾಸಕ್ಕೆ ಸರಿಯಿತು.

ಬಾಲ್ಯ, ಶಿಕ್ಷಣ ಹಾಗೂ ಪ್ರಭಾವ ಬೀರಿದ ಕಣ್ಣಿ ಸ್ಟೈಲ್

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಣ್ಣಿಮನೆ ಎನ್ನುವ ಪುಟ್ಟ ಗ್ರಾಮದಲ್ಲಿ 1969ರಲ್ಲಿ ಮಂಜುನಾಥ ಭಟ್ ಸರಸ್ವತಿ ಅಮ್ಮನವರ ಪುತ್ರನಾಗಿ ಜನಿಸಿದ ಅವರಿಗೆ ನಿಧನರಾಗುವಾಗ ಕೇವಲ 47 ವರ್ಷ. ಹತ್ತನೇ ತರಗತಿವರೆಗೆ ಶೈಕ್ಷಣಿಕ ಅರ್ಹತೆ ಪಡೆದ ಅವರು ಹದಿನಾರನೇ ವಯಸ್ಸಿನಲ್ಲಿ ಯಕ್ಷಗಾನದ ದೀಕ್ಷೆ ಪಡೆದರು . ವಿಶೇಷವೆಂದರೆ ಇಂದು ಯಕ್ಷಗಾನ ನೃತ್ಯಲೋಕದಲ್ಲಿ ವಿನೂತನತೆಯ ಹೆಜ್ಜೆ ಮೂಡಿಸಿದ ಕಣ್ಣಿಯವರಿಗೆ ನಾಟ್ಯವೆನ್ನುವುದು ಉಳಿದ ಕಲಾವಿದರ ಹಾಗೆ ಗುರು ಮುಖೇನ ಸಿದ್ಧಿಸಿದ್ದಲ್ಲ.

ಬಾಲ್ಯದಲ್ಲಿ ನಟ ಸಾಮ್ರಾಟ ಚಿಟ್ಟಾಣಿಯವರ ವೇಷಗಳ ಆಕರ್ಷಣೆಯೇ ಇವರ ಕಲಾ ಬದುಕಿಗೆ ಪ್ರೇರಣೆಯಾದದ್ದು ಬಿಟ್ಟರೆ ಮತ್ತೆಲ್ಲವೂ ಅವರ ಏಕಲವ್ಯ ಸಾದನೆ. ಈ ನಿಟ್ಟಿನಲ್ಲಿ ಯಾವುದೇ ಗುರು ಇಲ್ಲದೆ ಬೆಳೆದ ಹಳೆಯ ಕಲಾವಿದರ ಸಾಲಿಗೆ ಅವರನ್ನು ಸೇರಿಸ ಬಹುದಾಗಿದೆ. ಯಕ್ಷಗಾನದಲ್ಲಿ ಹೇಗೆ ಚಿಟ್ಟಾಣಿ ಸ್ಟೈಲ್ ಪ್ರಸಿದ್ದವೋ ಹಾಗೆಯೇ ಕಣ್ಣಿ ಸ್ಟೈಲ್ ಎನ್ನುವುದು ಅನೇಕ ಯುವ ಕಲಾವಿದರಿಗೆ ಸ್ಫೂರ್ತಿಯಾಯಿತು. ಇಂದು ಬಹುತೇಕ ಯುವ ಕಲಾವಿದರು ಅವರನ್ನು ಅನುಸರಿಸುವುದನ್ನು ನೋಡಿದಾಗ ಅವರ ಪ್ರಭಾವ ಬಡಗುತಿಟ್ಟಿನ ನೃತ್ಯದ ಮೇಲೆ ಎಷ್ಟು ಪ್ರಭಾವ ಬೀರಿದೆ ಅನ್ನುವುದು ಮನದಟ್ಟಾಗುತ್ತದೆ.

ವೈಶಿಷ್ಟ್ಯಪೂರ್ಣ ನೃತ್ಯಕ್ಕೆ ಕಣ್ಣಿಯವರಿಗೆ ಕಣ್ಣಿಯವರೇ ಸಾಟಿ

ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದ ಕಣ್ಣಿಯವರು ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಸಿರಸಿ ಮೇಳಗಳಲ್ಲಿ 26 ವರ್ಷ ಕಲಾಸೇವೆ ಮಾಡಿದ್ದಾರೆ. ಮಂದಾರ್ತಿ ಬಯಲಾಟ ಮೇಳದಲ್ಲಿ ಅವರ ವೇಷಗಳಿಗೆ ಸರಿಯಾಗಿ ಪ್ರಸಂಗ ನಿರ್ಣಯವಾಗುತಿತ್ತು. ಚಂದ್ರಾವಳಿ, ಕನಕಾಂಗಿ , ಜಾಂಬವತಿ, ಸುಭದ್ರಾ ಕಲ್ಯಾಣಗಳ ಕೃಷ್ಣನ ವೇಷದ ಸಹಿತ ಯಾವುದೇ ಪ್ರಸಂಗದ ಕೃಷ್ಣನ ವೇಷವಿರಲಿ ಅಲ್ಲಿ ಕಣ್ಣಿಯವರಿಗೆ ಕಣ್ಣಿಯವರೇ ಸಾಟಿ. ದೇವವ್ರತ, ಸಾಲ್ವ ಮತ್ತು ಸುಧನ್ವನ ವೇಷಗಳು ಅವರಿಗೆ ಅಪಾರ ಜನಮನ್ನಣೆ ತಂದಿತ್ತಿವೆ.

ಅವರ ಲಯಗಾರಿಕೆಯೆಂಬುದು ವಿಶೇಷ, ಪ್ರಸಂಗ ಪದ್ಯಗಳ ಕುಣಿತಾಭಿನಯದಲ್ಲಿ ಕಾಣಿಸುವ ನಾಟ್ಯಯುಕ್ತ ದೈಹಿಕ ಬಾಗು ವಿಶಿಷ್ಟವಾಗಿದ್ದು, ಪಾತ್ರೋಚಿತ ಅಭಿನಯ ಗುಣ ಅವರಲ್ಲಿತ್ತು. ವೇಷಗಳ ವಯಸ್ಸು ವರ್ಚಸ್ಸುಗಳ ಭೇದ ಚೆನ್ನಾಗಿ ತಿಳಿದ ಅವರು ಕೀಚಕ, ಸಾಲ್ವನಂತ ಪಾತ್ರಗಳು ಹಾಗೂ ಸುಧನ್ವ, ಅರ್ಜುನನಂತ ಪಾತ್ರಗಳಲ್ಲಿ ಭಿನ್ನ ಭಿನ್ನ ರಸೋತ್ಪಣ್ಣ ಮಾಡಬಲ್ಲವರು. ಚಕ್ರವ್ಯೂಹದ ಅಭಿಮನ್ಯು ಅವರಿಗೆ ವಿಶೇಷ ಕೀರ್ತಿ ತಂದ ವೇಷ. ಡೇರೆ ಮೇಳಗಳಲ್ಲಿ ಅವರ ಭಾವ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರ ಸ್ತ್ರೀವೇಷಕ್ಕೆ ಇವರ ಜೋಡಿ ವೇಷ ಬಹು ಪ್ರಸಿದ್ದಿ ಪಡೆದಿದ್ದವು.

ಕಣ್ಣಿಮನೆ ಗಣಪತಿ ಭಟ್
ಜನನ : 1969
ಜನನ ಸ್ಥಳ : ಕಣ್ಣಿಮನೆ ಗ್ರಾಮ
ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದ ಕಣ್ಣಿಯವರು ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಸಿರಸಿ ಮೇಳಗಳಲ್ಲಿ 26 ವರ್ಷ ಕಲಾಸೇವೆ ಮಾಡಿದ್ದಾರೆ. ಪು೦ಡುವೇಷಗಳಲ್ಲಿ ಕೋಲ್ಮಿ೦ಚು ಹರಿಸಿದ ಕಣ್ಣಿಯವರ ವೈಶಿಷ್ಯಪೂರ್ಣ ನೃತ್ಯಕ್ಕೆ ಮನಸೋಲದ ಕಲಾಭಿಮಾನಿಗಳಿಲ್ಲ.
ಮರಣ ದಿನಾ೦ಕ : ಫೆಬ್ರವರಿ 18, 2016
ಡೇರೆ ಮೇಳಗಳಲ್ಲಿ ಹೊಸ ಪ್ರಸಂಗಳ ನಾಯಕ ಹಾಗೂ ಖಳ ನಾಯಕನ ಪಾತ್ರಗಳಲ್ಲಿ ಮಿಂಚಿದ ಅವರ ಸ್ತ್ರೀಭೂಮಿಕೆಗಳೂ ಅಷ್ಟೇ ಪ್ರಸಿದ್ದ. ಚಿಟ್ಟಾಣಿಯವರ ನಂತರ ಬೆಂಗಳೂರು ಮುಂಬೈಯಂತಹ ನಗರಗಳಲ್ಲಿ ಕಣ್ಣಿಯವರ ಪಾತ್ರಕ್ಕೆ ಎಲ್ಲಿಲ್ಲದ ಮನ್ನಣೆ. ಸುಂದರವಾದ ‌ಆಳಂಗ, ಪರಿಶೋಭಿತ ವೇಷ ವೈಭವ, ಅಪೂರ್ವ ಶ್ರುತಿಬದ್ದತೆ, ಪ್ರಮಾಣಯುಕ್ತ ನೃತ್ಯ ವೈವಿಧ್ಯ, ಪರಿಣಾಮಕಾರಿ ಪಾತ್ರ ಪೋಷಣೆ, ಪರಿದಿ ಮೀರದ ರಂಗ ವೈಖರಿ, ಪರಿಪೂರ್ಣ ಪುರಾಣ ಪಾಂಡಿತ್ಯ, ವಿಶಿಷ್ಟವಾದ ಅರ್ಥಗಾರಿಕೆಯಿಂದ ತನ್ನದೇ ಛಾಪನ್ನು ಮೂಡಿಸಿದ ಕಣ್ಣಿಯವರು ಸಹಕಲಾವಿದರ ಅಚ್ಚುಮೆಚ್ಚು. ಎಂದೂ ಯಾರನ್ನೂ ನೋಯಿಸುವ ಜಾಯಮಾನದವರೂ ಅಲ್ಲ. ಯಜಮಾನರಿಗೂ ಸಹಕಲಾವಿದರಿಗೂ ಪ್ರೀತಿಪಾತ್ರರಾಗಿದ್ದರು.

ಪು೦ಡುವೇಷಗಳಲ್ಲಿ ಕೋಲ್ಮಿ೦ಚು ಹರಿಸಿದ ಕಣ್ಣಿ

ಲವ-ಕುಶ ಕಾಳಗದ ಲವನ ಪಾತ್ರ, ಪಟ್ಟಾಭಿಷೇಕ ಪ್ರಸಂಗದ ಲಕ್ಷ್ಮಣ, ಭೀಷ್ಮ ಪರ್ವದ ಕಥೆಯಲ್ಲಿ ಬರುವ ಅಭಿಮನ್ಯು ಹೀಗೆ ಸಣ್ಣ ಪಾತ್ರಗಳಲ್ಲೂ ಅದ್ಭುತ ಅಭಿನಯ ನೀಡುತ್ತಿದ್ದರು. ಭೀಷ್ಮ ಪರ್ವದ ಅಭಿಮನ್ಯುವಿಗೆ ಸಿಗುವ ಮೂರೇ ಪದ್ಯಗಳಲ್ಲಿ ಅವರು ಅಪೂರ್ವ ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ಮುತ್ತಜ್ಜ ಭೀಷ್ಮನೊಂದಿಗೆ ವಾದಕ್ಕೆ ಬೀಳುವ ಚಿತ್ರಣ ಕಣ್ಣಿಗೆ ಕಟ್ಟಿದಂತದ್ದು.

ದೇವವೃತ, ಸಾಲ್ವ, ಕೀಚಕ, ಸುಧನ್ವ ಹೀಗೆ ಪುಂಡು ವೇಷ, ಪುರುಷ ವೇಷಗಳಲ್ಲಿ ರಸ ಚಕ್ರವರ್ತಿಯಾಗಿ ಮಿಂಚಿದ ಅವರು ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದಲ್ಲಿ ವಹಿಸಿದ ಶಿಥಿಲನ ಮಾತ್ರ ಅತ್ಯಂತ ಜನಪ್ರಿಯವಾಗಿತ್ತು. ಕಣ್ಣಿಮನೆ ಕಳೆದ ಕೆಲವು ವರ್ಷಗಳಿಂದ ಯಾವುದೇ ಮೇಳದಲ್ಲಿರಲಿಲ್ಲ. ಹವ್ಯಾಸಿಯಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ತೆ೦ಕು ತಿಟ್ಟಿನ ಅಭಿಮಾನಿಗಳನ್ನೂ ಮನಸೂರೆಗೈದ ಕಲಾವಿದ

ಪುಂಡು ಪಾತ್ರದ ಕುಣಿತ-ದಣಿತದೊಂದಿಗೆ ಅರ್ಥಗಾರಿಕೆಯಲ್ಲೂ ಕಣ್ಣಿಮನೆ ಅಷ್ಟೇ ಚುರುಕು. ಪರಿಮಿತ ಪ್ರತ್ಯುತ್ಪನ್ನ ಮತಿತ್ವ ಹೊಂದಿದ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರಾಗಿದ್ದರು. ಕೃಷ್ಣ, ಅಭಿಮನ್ಯು, ಮನ್ಮಥನಂತಹ ಸುಂದರ-ಸುಬುಗ ಕೇದಿಗೆ ಮುಂದಲೆಯ ವೇಷಗಳೇ ಕಣ್ಣಿ ಅವರಿಗೆ ಅಪಾರ ಹೆಸರು ತಂದು ಕೊಟ್ಟಿತ್ತು. ಕಣ್ಣಿಮನೆ ಬಡಗುತಿಟ್ಟಿನಲ್ಲಿ ಉತ್ತರ ಕನ್ನಡದ ಅಭಿನಯ ಪ್ರಧಾನ ಶೈಲಿಯವರಾದರೂ ತೆಂಕುತಿಟ್ಟಿನ ಪ್ರದೇಶ ಒಳಗೊಂಡಂತೆ ಇಡೀ ಯಕ್ಷಗಾನ ಸೀಮೆಯನ್ನು ಪ್ರಭಾವಿಯಾಗಿ ಆವರಿಸಿಕೊಂಡಿದ್ದರು.

ಜನಪ್ರಿಯತೆ, ಜನಪ್ರೀತಿಯಿದ್ದರೂ ಕೇದಿಗೆ ಮುಂದಲೆ ಪಾತ್ರ ಹೊರತು ಪಡಿಸಿ ಕಿರೀಟ ವೇಷದ ಮಟ್ಟಕ್ಕೆ ಕಣ್ಣಿ ಬೆಳೆಯಲೇ ಇಲ್ಲ. ಅದು ಅವರ ಶರೀರಕ್ಕೆ ಒಗ್ಗುತ್ತಲೂ ಇರಲಿಲ್ಲ. ಅಲ್ಲದೆ, ಶ್ರದ್ಧೆಯಿಂದ ಮುಖವರ್ಣಿಕೆ ಮಾಡಿಕೊಳ್ಳುವ ಹಾಗೂ ಚೆಂದವಾಗಿ ವೇಷ ಕಟ್ಟಿಕೊಳ್ಳುವ ವ್ಯವಧಾನ ಯಾವತ್ತೂ ಅವರಿಗೆ ಇರಲಿಲ್ಲ. ಈ ನಡುವೆಯೂ ರಂಗಸ್ಥಳಕ್ಕೆ ಬಂದರೆ ಕಣ್ಣಿ ಮನೆ ಪಾತ್ರ ನೋಡಲು ಬಲು ಚೆಂದವೇ!

ಸಮಕಾಲೀನ ರಸಿಕ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡ ಅವರು ಕಾಳಿಂಗ ನಾವಡರ ನಂತರ ಹೊಸ ಪ್ರೇಕ್ಷಕರನ್ನು ಸೃಷ್ಟಿಸಿದ್ದರೂ ಕೂಡ ಸಾಂಪ್ರದಾಯವಾದಿಗಳ ಕೆಂಗಣ್ಣಿಗೂ ಬಲಿಯಾಗಿದ್ದರು. ಟೀಕೆ ಟಿಪ್ಪಣಿಗಳನ್ನೂ ಸಮನಾಗಿ ಸ್ವೀಕರಿಸಿದ ಅವರ ದೇವವ್ರತ, ಸುಧನ್ವನಂತ ವೇಷಗಳಲ್ಲಿ ಬಡಗಿನ ಈರ್ವರು ಪ್ರಸಿದ್ದ ಕಲಾವಿದರಾದ ಕೆರೆಮನೆ ಮಹಾಬಲ ಹೆಗಡೆ ಮತ್ತು ಶಿರಿಯಾರ ಮಂಜುನಾಯ್ಕರ ರಂಗನೆಡೆಯನ್ನು ಗುರುತಿಸ ಬಹುದಾಗಿದೆ.

ಚೆಂಡೆಯ ಬಿಡ್ತಿಗೆ ಅಬ್ಬರ ಪಡೆದುಕೊಳ್ಳುವ ಮುನ್ನವೇ ವೇಷ ಕಳಚಿಟ್ಟ ಕಣ್ಣಿ

ಕೆಲಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಮಣಿಪಾಲ್ ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಬುಧವಾರವಷ್ಟೇ ಅವರನ್ನು ಬೆಂಗಳೂರಿನ ಆಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಇನ್ನೂ 25 ವ್ರರ್ಷ ಬಡಗುತಿಟ್ಟನ್ನು ಆಳಬಹುದಾಗಿದ್ದ ಕಣ್ಣಿಯವರ ನಿಧನದಿಂದ ಬಡಗುತಿಟ್ಟು ಅದರಲ್ಲೂ ಬಡಾಬಡಗುತಿಟ್ಟು ಬಡವಾಗಿದೆ.

ಪ್ರಸಿದ್ಧ ಕಲಾವಿದನೆನ್ನುವ ಅಹಂಭಾವ, ಸ್ಟಾರ್ ವ್ಯಾಲ್ಯೂ ಕಾರಣದಿಂದ ಧಿಮಾಕು ತೋರದ ಕಣ್ಣಿಮನೆ ಅವರನ್ನು ಬಡ ಪರದೇಶಿಯೆಂದೇ ಪ್ರೀತಿಯಿಂದ ಜನರು ಕರೆಯುತ್ತಿದ್ದುದೂ ಉಂಟು. ಅಷ್ಟೇ ಹೃದಯವಂತ, ಯಾರ ಬಗ್ಗೆಯೂ ಯಾರೊಂದಿಗೂ ಕೊಂಕು ನುಡಿಯದ ಗುಣಾಢ್ಯರೂ ಆಗಿದ್ದರು. ಐವತ್ತರ ಗಡಿಯಲ್ಲಿದ್ದರೂ ಎಳೆಯ ಪ್ರಾಯದ ಪೋರನಂತೆ ತೋರುತ್ತಿದ್ದ ಅವರು ಚೆಂಡೆಯ ಬಿಡ್ತಿಗೆ ಅಬ್ಬರ ಪಡೆದುಕೊಳ್ಳುವ ಮುನ್ನವೇ ವೇಷ ಕಳಚಿಟ್ಟ ಕಣ್ಣಿ ಮೊಗೆದಷ್ಟೂ ಸಿಗುವಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.

****************

ಕಣ್ಣಿಮನೆ ಗಣಪತಿ ಭಟ್ ರವರ ಕೆಲವು ವಿಡಿಯೊಗಳು

2014ರಲ್ಲಿ ಸುಳ್ಯದ ಸ೦ಪಾಜೆ ಯಕ್ಷೋತ್ಸವದಲ್ಲಿ ದೇವವ್ರತನಾಗಿ
ಸಾಮಾಜಿಕ ಪ್ರಸ೦ಗದಲ್ಲಿ ಕಣ್ಣಿಯವರ ಅಮೋಘ ನೃತ್ಯ
ಬಡಗು ತಿಟ್ಟಿನ ದಿಗ್ಗಜ ಚಿಟ್ಟಾಣಿಯರೊ೦ದಿಗೆ
ಯಕ್ಷಗಾನದ ``ಸ್ಟಾರ್ ಜೋಡಿ``ಯೆಣಿಸಿಕೊ೦ಡ ಭಾವ ಯಲಗುಪ್ಪನವರೊ೦ದಿಗೆ
****************ಕಣ್ಣಿಮನೆ ಗಣಪತಿ ಭಟ್ ರವರ ಕೆಲವು ಛಾಯಾ ಚಿತ್ರಗಳು ( ಕೃಪೆ : ಸ೦ತೋಷ್ ವೈದ್ಯ, ಮುರಳಿ ರಾಯರಮನೆ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು )

ವೈಶಿಷ್ಯಪೂರ್ಣ ನಾಟ್ಯಯುಕ್ತ ದೈಹಿಕ ಬಾಗುಯಕ್ಷಗಾನದ ``ಸ್ಟಾರ್ ಜೋಡಿ``ಯೆಣಿಸಿಕೊ೦ಡ ಭಾವ ಯಲಗುಪ್ಪನವರೊ೦ದಿಗೆದಿಗ್ಗಜ ಕಲಾವಿದ ಬಳ್ಕೂರು ಕೃಷ್ಣಯಾಜಿಯವರೊ೦ದಿಗೆ

ಬಡಗು ತಿಟ್ಟಿನ ದಿಗ್ಗಜ ಚಿಟ್ಟಾಣಿಯರೊ೦ದಿಗೆ****************
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Shankar Shetty(2/20/2016)
while nobody can mitigate the sense of loss felt by his family, Yakshagana lovers can atleast help to reduce a bit of their burden by sending some monitory contribution: Nataraja Upadhya ಯಕ್ಷ ಕಣ್ಮಣಿ ಕಣ್ಣಿಮನೆ ಅಸ್ತಂಗತ; ಅಪಾರ ಅಭಿಮಾನಿಗಳ ಕಿ೦ಚಿತ್ ಸಹಾಯ ಅಭೂತಪೂರ್ವವಾಗಿ ಕಣ್ಣಿಮನೆ ಸ೦ಸಾರ (ಧರ್ಮ ಪತ್ನಿ, ಪಿ ಯು ಸಿ ಯಲ್ಲಿ ಮಗ, ೮ನೇ ತರಗತಿಯಲ್ಲಿ ಮಗಳು)ಕ್ಕೆ ಆಧಾರ! ಕಣ್ಣಿಮನೆಯವರ ಅಕೌ೦ಟ್; ಅವರ ಧರ್ಮಪತ್ನಿಯ ಜೊತೆಗೆ ಕೂಡು ಖಾತೆ, ಮೊದಲು ಕೊಟ್ಟ ಅಕೌಂಟ್ ನ೦ಬರಿನಲ್ಲಿ ತಪ್ಪಿ Lalitha G Bhat SBM Honnavar Branch Ac no- 64077487770 IFSC Code - SBMY0040560.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ