ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಐರೋಡಿ ಗೋವಿಂದಪ್ಪನವರಿಗೆ ಗುರು ವೀರಭದ್ರ ನಾಯಕ್ ಸಂಸ್ಮರಣೆ ಪ್ರಶಸ್ತಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಫೆಬ್ರವರಿ 25 , 2016
ಬಡಗು ತಿಟ್ಟಿನ ಬ್ರಹ್ಮಾವರ ವಲಯದ ಪ್ರಭಲ ಎರಡು ಶೈಲಿಗಳಲ್ಲಿ ಒಂದಾದ ಮಟ್ಪಾಡಿ ಶೈಲಿಯ ಪ್ರಾತಿನಿದಿಕ ಕಲಾವಿದ ದಶಾವತಾರಿ ವೀರಭದ್ರ ನಾಯಕರು ಜನಿಸಿ ವರ್ಷ ನೂರ ಹತ್ತು ಸಂದಿದೆ. ಕಳೆದ ವರ್ಷಗಳಲ್ಲಿ ಅವರ ಜನ್ಮಶತಮಾನೋತ್ಸವ ಅಲ್ಲಲ್ಲಿ ಅಚರಣೆ ಆಗಿದೆ. ಈ ವರ್ಷ ಅವರ ಹುಟ್ಟೂರು ಮಟಪಾಡಿ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ ಆಗುತ್ತಿದೆ ಈ ಸಂದರ್ಭದಲ್ಲಿ ನಾಯ್ಕರ ಸಂಸ್ಮರಣೆ ಮತ್ತು ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರಿಗೆ ವೀರಭದ್ರ ನಾಯ್ಕ್ ಸಂಸ್ಮರಣಾ ಪ್ರಶಸ್ತಿ ನೀಡಲಾಗುತ್ತದೆ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಫ಼ೆಬ್ರವರಿ 27ರಂದು ಮಟಪಾಡಿಯಲ್ಲಿ ನೆರವೇರಲಿದೆ.ಈ ಸಂದರ್ಬದಲ್ಲಿ ಇದೊಂದು ಅ ಮಹಾನ್ ಕಲಾವಿದರಿಗೆ ಅರ್ಪಿಸುವ ನುಡಿ ನಮನ.

ಹಿರಿಯರು ಹೊತ್ತ ಹರಕೆಯ ಮೇರೆಗೆ ಹಿರಿಯಡಕ ವೀರಭದ್ರ ದೇವರ ಸನ್ನಿದಿಯಲ್ಲಿ "ಗೆಜ್ಜೆ ಸೇವೆ" ಸಲ್ಲಿಸಿದ ಬ್ರಹ್ಮಾವರ ಸಮೀಪದ ಮಟ್ಪಾಡಿಯ ವೀರಭದ್ರ ನಾಯಕರು "ಬಡಗುತಿಟ್ಟಿಗೊಬ್ಬರೆ ವೀರಭದ್ರ" ಎನ್ನುವಷ್ಟರ ಮಟ್ಟಿಗೆ ಬೆಳೆದದ್ದು ರಾಷ್ಟ್ರ ಪ್ರಶಸ್ತಿ ಪಡೆದದ್ದು, ಕಾಯವಲಿದರೂ ನೆನಪಳಿಯದ ಯಕ್ಶಗಾನ ರಂಗದ ದ್ರುವತಾರೆಯಾಗಿ ಮಿನುಗಿದ್ದು ಎಲ್ಲವೂ ಈಗ ಇತಿಹಾಸ.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಕುಟು೦ಬ

ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿಯ ಮಟ್ಪಾಡಿಯಲ್ಲಿ 1906ರಲ್ಲಿ ಜನಿಸಿದ ನಾಯಕರಿಗೆ ಬದುಕಿದರೆ ಈಗ 107 ವರ್ಷ. ಸಮಕಾಲೀನ ಗಣ್ಯರಿಂದ "ದಶಾವತಾರಿ" ಎಂದು ಕರೆಸಿಕೊಂಡವರು. ಹಾಗೆ ಹೇಳಿಸಿ ಕೊಳ್ಳಲು ಒಬ್ಬನಿಗೆ ಬೇಕಾದುದು ಭಾಗವತಿಕೆ, ಮದ್ದಳೆ, ಚೆ೦ಡೆ ವಾದನ, ಎರಡನೆ ವೇಷ, ಮೂರನೇ ವೇಷ, ಬಣ್ಣ, ಸ್ತ್ರೀವೇಷ, ಹಾಸ್ಯ ಇತ್ಯಾದಿ ರಂಗದ ಎಲ್ಲ ಅಂಗಗಳಲ್ಲಿ ಪರಿಣತಿ. ವೀರಭದ್ರ ನಾಯಕರು ಈ ಎಲ್ಲಾ ಅಂಗಗಳಲ್ಲಿ ಗುರು ಆಗಿ ಮೆರೆದವರು. ದಿ. ಹೆರಂಜಾಲು ವೆಂಕಟರಮಣ ಗಾಣಿಗರು ಬಡಗುತಿಟ್ಟಿನ ಇನ್ನೊಬ್ಬ ದಶಾವತಾರಿ. ನಾಯಕರ ತಂದೆ ನಾರಾಯಣ ನಾಯಕ್'ರೂ ಸಹ ವೇಷಧಾರಿ. ನರ್ತನದಲ್ಲಿ ಇವರು ಪಾಂಡೇಶ್ವರ ಪುಟ್ಟಯ್ಯನವರಿಗೆ ಸರಿಸಾಟಿಯಾಗಿದ್ದರಂತೆ. ಇವರೇ ನಾಯಕರಿಗೆ ಮೊದಲ ಗುರು. ಅವರಿಂದಲೆ ತಾಳ ಹೆಜ್ಜೆಗಳ ಪಾಠ ಮಾಡಿಸಿಕೊಂಡವರು. ಶಾಲೆಯಲ್ಲಿ ಕಲಿತದ್ದು ಏಳನೆ ತರಗತಿವರೆಗೆ ಮಾತ್ರ. ಮುಂದೆ ಶೇಷಗಿರಿ ಭಾಗವತರ ಶಿಷ್ಯನಾಗಿ ವೇಷಗಾರಿಕೆ ರಂಗಸ್ಠಳದ ಅನುಭವ ಮುಂತಾದುದನ್ನು ಕಲಿತರು.

1921ರಲ್ಲಿ ಮಾರಣಕಟ್ಟೆ ಮೇಳದಲ್ಲಿ ತನ್ನ 14ರ ಹರೆಯದಲ್ಲಿ ಬಾಲಕಲಾವಿದರಾಗಿ ಗೆಜ್ಜೆ ಕಟ್ಟಿಕೊಂಡು ತಿರುಗಾಟ ಆರ೦ಭಿಸಿದ ನಾಯಕರಿಗೆ ರಂಗಕಲೆ ರಕ್ತಗತ ವಿದ್ಯೆ. ತಂದೆ ನಾರಾಯಣ ನಾಯಕರು ಅಪ್ರತಿಮ ವೇಷಧಾರಿ, ಚಿಕ್ಕಪ್ಪ ಚಂದು ನಾಯಕರು ಹಾಸ್ಯಗಾರರು. ಇನ್ನೊಬ್ಬರು ಮುಕುಂದ ನಾಯಕರು ಪುರುಷ ವೇಷಧಾರಿ. ಅವರ ಕರ್ಣಾರ್ಜುನ ಕಾಳಗದ ಮೊದಲ ಸಂದಿಯ ಅರ್ಜುನ, ಪಟ್ಟಾಬಿಷೇಕದ ದಶರಥ , ಭರತ, ಶಂಬರಾಸುರ ಕಾಳಗದ ಕೃಷ್ಣ, ಮೊದಲಾದವುಗಳು ಅತ್ಯುತ್ತಮ ಪಾತ್ರಗಳೆಂದು ಪರಿಗನಿಸಲ್ಪಿಪಟ್ಟಿವೆ. ಮುಕುಂದ ನಾಯಕರಮಗ ಖ್ಯಾತ ಪುರುಷ ವೇಷಧಾರಿ ಶ್ರೀನಿವಾಸ ನಾಯಕರು. ಬಡಗು ತಿಟ್ಟಿನ ಸ್ತ್ರೀವೇಷಧಾರಿ ಅರಾಟೆ ಮಂಜುನಾಥರು ಇವರ ಶಿಷ್ಯರು. ವೀರಭದ್ರ ನಾಯಕರ ಸಮೂಹದಲ್ಲಿ ಇತರ ಪಾತ್ರಗಳನ್ನು ಮಾಡುತಿದ್ದ ನೆಲ್ಲಿಗದ್ದೆ ಅನಂತ ನಾಯಕ್, ಮಟ್ಟಾಡಿ ಶೀನ ನಾಯಕ್, ಮಂಜುನಾಥ ನಾಯಕ್, ಹಂದಾಡಿ ರಾಮದಾಸ ನಾಯಕ್ ಮುಂತಾದವರು ನಾಯಕರ ಬಳಗಕ್ಕೆ ಸೇರಿದವರು. ಪ್ರಸಿದ್ದ ಸ್ತ್ರೀವೇಷಧಾರಿ ರಾಮ ನಾಯರಿ ಮತ್ತು ಉಡುಪಿ ಯಕ್ಷಗಾನ ಕೇಂದ್ರದಗುರು ಸಂಜೀವ ಸುವರ್ಣರು ವೀರಭದ್ರನಾಯಕರ ನೂರಾರು ಶಿಷ್ಯರಲ್ಲಿ ಪ್ರಮುಖರು.

ಸವ್ಯಸಾಚಿ ವೇಷಧಾರಿ

ತನ್ನ ತಂದೆ, ಚಿಕ್ಕಪ್ಪಂದಿರ ಜೊತೆಗೆ ಆ ಕಾಲದ ಮಹಾನ್ ಕಲಾವಿದರಾಗಿದ್ದ ಬಾಗವತ ವಳ್ತೂರು ಮರ್ತ್ಪಪ್ಪಯ್ಯ, ಉಪ್ರಳ್ಳಿ ಶೇಷಪ್ಪಯ್ಯ, ಭಡಾಕೆರೆ ರಾಮಪ್ಪ ಅಡಿಗರು ಕುಂಜಾಲು ಶೇಷಗಿರಿ ಕಿಣಿ , ಜಾನುವಾರುಕಟ್ಟೆ ಬಾಗವತರಿಂದ ಬಹಳಷ್ಟು ಕಲಿತುಕೊಂಡರು. ನಾಯಕರಿಗೆ ಗಣಪತಿ ಪ್ರಭುಗಳು ಮೆಚ್ಚಿನ ಗುರುವಾದರು. ಎತ್ತರದ ನಿಲುವು, ಕೆಂಪು ಮುಖ, ದಪ್ಪ ಹುಬ್ಬುಗಳು, ಕಟ್ಟುಮಸ್ತಾದ ತುಂಬಿದ ಶರೀರ, ಸೂಕ್ಷ್ಮವಾದ ಶ್ರವಣ ಶೆಕ್ತಿ, ವೇಷಧಾರಿಗೆ ಬೇಕಾದ ಪ್ರಾಕೃತಿಕ ಸಂಪತ್ತೆಲ್ಲ ಇದ್ದರೂ, ಕಂಠ ಮಾತ್ರ ದೊರಗಾಗಿತ್ತು. ಆದರೆ ಕಿರೀಟದ ವೇಷವಿರಲಿ, ಮುಂಡಾಸಿರಲಿ, ಅವರ ನಾಟ್ಯದ ಶೈಲಿಯೇ ಬೇರೆ. ಬಲು ಲೀಲಾಜಾಲವಾದ ಅಂಗಾಂಗ ಚಲನೆ, ಕುಣಿತದ ಯಾವ ಭ೦ಗಿಯಲ್ಲೂ ಅಲ್ಲದ ಕೋನಗಳಲ್ಲಿ ಮೈ, ಕೈಗಳು ಕಾಣಿಸವು. ಎಡ ಹಸ್ತದಿಂದ ಬಲ ಹಸ್ತ ತಲುಪುವುದರೊಳಗೆ ದೃಷ್ಟಿ ಒಮ್ಮೆ ಬಾನನ್ನು ಹಾಯ್ದು ಹೋಗುತ್ತದೆ. ಅವರ ವೇಷದ ನಿಲುವಿನಲ್ಲಿ ತೆಂಕು ಮತ್ತು ಬಡಗು ತಿಟ್ಟುಗಳ ಭೇದ ಕಡಿಮೆ ಎಣಿಸುತಿತ್ತು. ಗಣಪತಿ ಪ್ರಭು, ನರಸಿಂಹ ಕಾಮತ್, ಮೊದಲಾದವರ ನಾಟ್ಯವನ್ನು ನಮ್ಮ ಕಾಲಕ್ಕೆ ತಲುಪಿಸಿದವರವರು.

ವೀರಭದ್ರ ನಾಯಕರು ದೀವಟಿಗೆ ಬೆಳಕಲ್ಲಿ ಬಹುಕಾಲ ವೇಷಮಾಡಿ ಆಧುನಿಕ ಬೆಳಕನ್ನು ಕಂಡವರು. ಹಾಗಾಗಿ ಅವರ ಮುಖವರ್ಣಿಕೆ ಹಳೆದು ಹೊಸದರ ಮದ್ಯದಲ್ಲಿತ್ತು. ದೀವಟಿಗೆಯ ಪಳೆಯುಳಿಕೆಯನ್ನು ಅವರ ವೇಷಗಳಲ್ಲಿ ಕಾಣಬಹುದಿತ್ತು. "ರತ್ನಾವತಿ ಕಲ್ಯಾಣ" ದ ಭದ್ರಸೇನ, "ಚಿತ್ರಸೇನ ಕಾಳಗ"ದ ಚಿತ್ರಸೇನ ಎರಡೂ ಕೆಂಪು ಮುಂಡಾಸೆ ಆದರೂ ಅವರು ಚಿತ್ರಿಸುತ್ತಿದ್ದ ರೀತಿಯೇ ಬೇರೆ ಬೇರೆಯಾಗಿತ್ತು. ಮುಂಡಾಸಿನಲ್ಲೂ ಕೀರೀಟದಲ್ಲೂ ಅವರು ಬಿಗಿದ ಕಟ್ಟು ಮೀಸೆ ಎದ್ದು ಕಾಣುತ್ತಿತ್ತು. ಮೈರಾವಣ, ಅತಿಕಾಯ ಸಹ ಕೀರ್ತಿ ತಂದುಕೊಟ್ಟ ಪಾತ್ರಗಳು. ಪರಿಣತಿಯ ನೆಲೆಯಲ್ಲಿ ಹಾರಾಡಿ ರಾಮಗಾಣಿಗರಿಗಿಂತ ನಾಯಕರಿಗೆ ಅನೇಕರು ಮಾನ್ಯತೆ ನೀಡುವುದನ್ನು ನೋಡುತ್ತೆವೆ. ಈ ಸ್ಪರ್ಧಿಗಳಲ್ಲಿ ರಾಮಗಾಣಿಗರೇ ಹೆಚ್ಚು ಜನಮನವನ್ನು ಸೂರೆಗೊಂಡಿದ್ದಾರೆ.

ದಿಗ್ಗಜರ ಒಡನಾಟ

ಉಡುಪಿ ಕೇಂದ್ರಕ್ಕೆ ಗುರುವಾಗಿ ನೇಮಕಗೊಳ್ಳುವ ಮೊದಲೇ ಅನೇಕ ಮಕ್ಕಳಿಗೆ ನಾಟ್ಯ ತರಬೇತಿ ನೀಡಿದ ನಾಯಕರು, ಮಹಿಳೆಯರು ಯಕ್ಷಗಾನದಲ್ಲಿ ಬಾಗವಹಿಸಲು ಬೇಕಾದ ತರಬೇತಿಯನ್ನು ನಾವು ಕೊಟ್ಟಿದ್ದೇವೆಂದು ಈಗ ಹೇಳುತ್ತಿರುವವರಿಗೆ ಸವಾಲಾಗಿಯೋ ಎಂಬಂತೆ 50 ವರ್ಷದ ಕೆಳಗೆ ನಾಯಕರು ಮಹಿಳೆಯೊಬ್ಬರನ್ನು ಅರ್ಥದಾರಿಯನ್ನಾಗಿ ಮಾಡಿಸಿದ್ದರು. ಆಕೆ ಮುಂದೆ ಖ್ಯಾತ ಅರ್ಥದಾರಿಯಾಗಿ ಆರೂರು ಸರ್ವೋತ್ತಮ ಶೇಠರೊಂದಿಗೆ ಭೀಮ ಸುದನ್ವನಂತಹ ಪಾತ್ರಗಳಿಗೆ ಅರ್ಥ ಹೇಳುತಿದ್ದರು. ಇಪ್ಪತ್ತನೆ ಶತಮಾನದ 50ರ ದಶಕಗಳ ಆಟದಲ್ಲಿ ಮಾತುಗಾರಿಕೆ ಬೆಳೆಯಲು ತೊಡಗಿದ ಕಾಲಘಟ್ಟ, ಓದುವುದು ಅನಿವಾರ್ಯ ಎಂದುಕೊಂಡ ನಾಯಕರು ಓದಿಗಾಗಿ ಪುಸ್ತಕದ ವ್ಯಾಪರಿಯಾದರು. ಪುಸ್ತಕ ಖರೀದಿಸಲು ಬಹುಮಾನ ಬಂದ ಚಿನ್ನದ ಕಡಗವನ್ನೇ ಮಾರಾಟ ಮಾಡಿದರು. ಡಾ. ರಾಜಕುಮಾರರವರ ಅಭಿನಯಕ್ಕೆ ಮರುಳಾಗಿ "ಬೇಡರ ಕಣ್ಣಪ್ಪ"ನನ್ನು ಹೊಸ ಪ್ರಸಂಗವಾಗಿ ರಂಗಕ್ಕೆ ತಂದರು. ಸಾಲಿಗ್ರಾಮ ಮೇಳದಲ್ಲಿ ಪ್ರಸಂಗ ಜಯಬೇರಿ ಬಾರಿಸಿತು. ಯಕ್ಷಲೋಕದ ಅತಿರಥ ಮಹಾರಥರಿದ್ದ ಸಾಲಿಗ್ರಾಮ ಮೇಳದಲ್ಲಿ "ಚಂದ್ರಹಾಸ" ಬೇಡರ ಕಣ್ಣಪ್ಪ ಜೋಡಿ ಪ್ರಸಂಗವಾಗಿ ಮೆರೆದಿತ್ತು.. ವೀರಭದ್ರ ನಾಯಕರು ಶಂತನು ಹಾಗು ಪರ್ವದ ಭೀಷ್ಮನಾಗಿ, ಶಿರಿಯಾರ ಮಂಜು ನಾಯಕರು ಕೃಷ್ಣ ಮತ್ತು ದೇವವ್ರತನಾಗಿ, ಕರೆಮನೆ ಮಹಾಬಲ ಹೆಗಡೆಯವರು ವಿಜಯದ ಬೀಷ್ಮನಾಗಿ, ಶಂಭು ಹೆಗಡೆಯವರು ಸಾಲ್ವನಾಗಿ, ಶಂಕರನಾರಾಯಣ ಸಾಮಗರು ಪರಶುರಾಮನಾಗಿ ಅ೦ಬೆಯಾಗಿ ಕೆರೆಮನೆ ಗಜಾನನ ಹೆಗಡೆ, ಯೋಜನಾಗ೦ಧಿಯಾಗಿ ಅರಾಟೆ ಮಂಜುನಾಥ, ಕಂದರನಾಗಿ ಕುಂಜಾಲು ರಾಮಕೃಷ್ಣರು ಪ್ರದರ್ಶಿಸುತ್ತಿದ್ದ "ಸಮಗ್ರ ಭೀಷ್ಮ" ಶ್ರೀ ಸಾಲಿಗ್ರಾಮೆ ಮೇಳದಲ್ಲಿ ತಿರುಗಾಟವಿಡೀ ಪ್ರದರ್ಶನಗೊಳ್ಳುತ್ತಿತ್ತು.

ಅಪಾರ ಶಿಷ್ಯ ವರ್ಗ ಹಾಗೂ ಪ್ರಶಸ್ತಿಗಳು

ಛಾಲು ಕುಣಿತದ ಸೃಷ್ಟಿಕರ್ತರು ತಾವಾದರೂ ಸಿಕ್ಕಸಿಕ್ಕಲ್ಲಿ ಛಾಲು ಕುಣಿತವನ್ನು ಅವರು ತುರುಕಿಸುತ್ತಿರಲಿಲ್ಲ. ಇಡೀ ವಾಕ್ಯವನ್ನು ಅವಶ್ಯವಿರುವಲ್ಲಿ ಒಂದೋ ಎರಡೋ ಬಾರಿ ಪುನರಾವರ್ತನೆ ಸಹಿಸುತಿದ್ದ ಅವರು ಸಿಕ್ಕಾಪಟ್ಟೆ ಪುನರುಕ್ತಿಗಳಿಗೆ ಟೀಕೆ ಮಾಡುತ್ತಲೆ ಇದ್ದರು. ಹಾಡುಗಾರಿಕೆಗೆ ಬೇಕಾದ ಸ್ವರವಿರುತ್ತಿದ್ದರೆ ಹಾರಾಡಿ ಕಲಾವಿದರ ಹಾಗೆ ಪದವನ್ನು ತಾನೆ ಎತ್ತಿಕೊಂಡು ಭಾಗವತರ ಜೊತೆ ಹಾಡುತ್ತಿದ್ದರೊ ಏನೋ. ಗುರುವಿನ ಅನುಸರಣೆಯಿಂದ ಮಾಹಿತಿ ದಾಟಬೇಕೆಂದು ಬಲವಾಗಿ ನಂಬಿದ ಅವರು ಹೇಳಿದ ಹಾಗೆ ವೇಷಮಾಡುವುದು, ವೇಷವಿಲ್ಲದಿದ್ದರೆ ರಂಗಸ್ಥಳದ ಎದುರು ಕುಳಿತು ಆಟ ನೋಡುವುದು, ಗ್ರಹಿಸುವುದು, ಗುರು ಸಾಗಿದಂತೆ ಸಾಗುವುದು, ಇವೆಲ್ಲ ಅವರು ಅನೇಕ ಶಿಷ್ಯರನ್ನು ತಯಾರಿಸಿದ ಬಗೆ. ಮಾತುಗಾರಿಕೆಯಲ್ಲೂ ಎಳೆಯರನ್ನು ಪಳಗಿಸುವ ಕಲೆ ಅವರಿಗೆ ವಿಶೇಷವಾಗಿ ಸಿಧ್ಧಿಸಿತ್ತು. ಬಡಗುತಿಟ್ಟಿನ ನಾಟ್ಯ ಸಂಪತ್ತಿನ ಕಣಜವಾಗಿದ್ದ ಅವರು ತನ್ನನ್ನು ವಿಧೇಯತೆಯಿಂದ ಅನುಸರಿಸಿದ ವಿದ್ಯಾರ್ಥಿಗಳಿಗೆ ನಿರ್ಮತ್ಸರವಾಗಿ ಅದನ್ನು ಬಿಟ್ಟು ಕೊಟ್ಟಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಈ ನಾಟ್ಯಸಂಪತ್ತನ್ನು ಗುರುತಿಸಬಹುದು. ರಾಮ ನಾಯರಿಯಂತ ಪಾಪದ ಹುಡುಗನೊಬ್ಬ ಅಸಾಮಾನ್ಯ ಸ್ತ್ರೀವೇಷಧಾರಿಯಾಗಿ ಮೆರದದ್ದು ಗುರುವಿನ ಕೃಪೆ ಶಿಷ್ಯನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಸೂಚಿಸುತ್ತದೆ.

ತನ್ನ ಕಾಲದಲ್ಲಿ ತಾನೆ ದಂತಕಥೆಯಾದ ನಾಯಕರಿಂದ ತೆರವಾದ ಸ್ಥಾನ ಇನ್ನೊಬ್ಬರಿಂದ ಭರ್ತಿಯಾಗಿಲ್ಲ ಎನ್ನುವುದು ಬಡಗುತಿಟ್ಟಿನ ಸುತ್ತ ಒಮ್ಮೆ ಕಣ್ಣಾಡಿಸಿದರೆ ತಿಳಿದೀತು. ಆ ಕಾಲದ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ನಾಡಿನ ಹಲವೆಡೆ ಸನ್ಮಾನಗೊಂಡ ಇವರನ್ನು ಇವತ್ತಿಗೂ ಅಭಿಮಾನದಿಂದ ನೆನೆಯುವವರು ಹಲವಾರು ಮಂದಿ. 1978ರಲ್ಲಿ ರಾಷ್ಟ ಪ್ರಶಸ್ತಿ ಪುರಸ್ಕ್ರತರಾದ ಇವರು 1982ರಲ್ಲಿ ಇಹಲೋಕದ ಯಾತ್ರೆ ಮುಗಿಸಿದರು.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ