ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಭಾಗವತನ ಗುಣ ಲಕ್ಷಣಗಳು

ಲೇಖಕರು :
ಪ್ರಭಾಕರ ಶಿಶಿಲ
ಭಾನುವಾರ, ಫೆಬ್ರವರಿ 28 , 2016

ಹಿಮ್ಮೇಳ ಎಂದರೇನು?

ಹಾಡು, ಚೆಂಡೆ, ಮದ್ದಳೆ ಮತ್ತು ಶ್ರುತಿ ಇವನ್ನು ಒಟ್ಟಾಗಿ ಯಕ್ಷಗಾನದ ಹಿಮ್ಮೇಳ ಎಂದು ಕರೆಯಲಾಗುತ್ತದೆ. ಹಿಮ್ಮೇಳದವರು ಎಂದರೆ ಯಕ್ಷಗಾನದಲ್ಲಿ ಭಾಗವತರು, ಚೆಂಡೆಯವರು, ಮದ್ದಲೆಯವರು ಮತ್ತು ಶ್ರುತಿಕಾರರು ಎಂದರ್ಥ. ತೆಂಕಿತಿಟ್ಟಿನ ಹಿಮ್ಮೇಳದಲ್ಲಿ ಈ ನಾಲ್ವರೊಡನೆ ಚಕ್ರತಾಳದವರೂ ಸೇರ್ಪಡೆಯಾಗುತ್ತಾರೆ. ಕರಾವಳಿ ಯಕ್ಷಗಾನದಲ್ಲಿ ಲಯವಾದ್ಯಗಳು ಮಾತ್ರ ಬಳಕೆಯಾಗುತ್ತವೆ. ಉದಾತ ಚೆಂಡೆ ಮತ್ತು ಮದ್ದಳೆ. ಸ್ವರವಾದ್ಯಗಳಾದ ಮುಖವೀಣೆ, ಪಿಟೀಲು, ನಾಗಸ್ವರ ಇತ್ಯಾದಿಗಳು ಬಳಕೆ ಯಾಗುವುದಿಲ್ಲ. ಹಾರ್ಮೋನಿಯಂಅನ್ನು ಅದನ್ನು ಶ್ರುತಿಗೆ ಮಾತ್ರ ಬಳಸಿಕೊಳ್ಳಲಾಗು ತ್ತದೆ. ಸ್ವರದ ಏರಿಳಿತಗಳಿಗನುಗುಣವಾಗಿ ಅಥವಾ ಸ್ವರ ಪ್ರಸ್ತಾರಕ್ಕನುಣವಾಗಿ ಯಕ್ಷಗಾನ ದಲ್ಲಿ ಹಾರ್ಮೋನಿಯಂ ಬಳಕೆಯಾಗುವುದಿಲ್ಲ.

ಪೂರ್ವಂ ಗಾನ ತತೋವಾದ್ಯಂ| ತತಂ ನೃತ್ತಂ ಪ್ರಯೋಜಯೇತ್‌

ಗೀತಂ ವಾದ್ಯಾಂಗ ಸಂಯೋಗತ | ಪ್ರಯೋಗ ಇತಿ ಸಂತತ

ಎಂದು ‘ನಾಟ್ಯಶಾಸ್ತ್ರಂ’ ಹೇಳುತ್ತದೆ. ಮೊದಲು ಗಾಯನ, ಅದರ ಜತೆಯಲ್ಲಿ ವಾದ್ಯ ಮತ್ತು ಆ ಬಳಿಕ ನರ್ತನ ಇದುವೇ ರಂಗ ಪ್ರಯೋಗ. ನರ್ತನ ಮುಮ್ಮೇಳವಾದೆ ಗಾನ ಮತ್ತು ವಾದ್ಯ ಹಿಮ್ಮೇಳವಾಗಿರುತ್ತದೆ.

ತೆಂಕುತಿಟ್ಟಿನವರ ತಾಳ, ಸಣ್ಣ ಜಾಗಟೆ
ಯಕ್ಷಗಾನದ ಹಿಮ್ಮೇಳವಾದ್ಯಗಳು ವಿಶಿಷ್ಟ ಬಗೆಯವು. ಅವುಗಳ ನಾದ ವೀರತ್ವ ಪ್ರಧಾನವಾದುದು. ಬಹಳ ಕಷ್ಟಪಟ್ಟು ಅವುಗಳನ್ನು ಭಕ್ತಿ ಮತ್ತು ಶೃಂಗಾರ ರಸಗಳಿಗೆ ಒಗ್ಗಿಸಬೇಕಾಗುತ್ತದೆ. ಯಕ್ಷಗಾನವು ವೀರ ಯುಗದಲ್ಲಿ ಬೆಳೆದ ಕಲಾಪ್ರಕಾರ. ಯಕ್ಷಗಾನದ ಅನೇಕ ಸ್ತ್ರೀಪಾತ್ರಗಳು ಪುರುಷ ಪಾತ್ರಗಳಂತೆ ನರ್ತಿಸುತ್ತವೆ.

ಉದಾ : ಪ್ರಮೀಳೆ, ದ್ರೌಪದಿ ಪ್ರತಾಪದ ಸುಭದ್ರೆ ಮತ್ತು ದ್ರೌಪದಿ ಇತ್ಯಾದಿ. ಯಕ್ಷಗಾನ ಹುಟ್ಟಿಕೊಂಡಾಗ ಪ್ರಾಯತ ಎಲ್ಲಾ ಸ್ತ್ರೀವೇಷಗಳೂ ಪ್ರಮೀಳೆಯಂತೆ ನರ್ತಿಸುತ್ತಿದ್ದವೋ ಏನೊ? ಚೆಂಡೆ ಮದ್ದಳೆಗಳನ್ನು ಶೇಣಿ ಗೋಪಾಲಕೃಷ್ಣ ಭಟ್ಟರು ರಣವಾದ್ಯಗಳೆಂದು ಹೇಳಿದ್ದಾರೆ. ಸುಳ್ಯದ ತೆಂಕುತಿಟ್ಟು ಹಿತರಕಣಾ ವೇದಿಕೆ ಏರ್ಪಡಿಸಿದ ಸಾಂಪ್ರದಾಯಿಕ ಭಾಗವತಿಕೆ ಕಮ್ಮಟದಲ್ಲಿ ಶಾಸ್ತ್ರೀಯ ಸಂಗೀತದ ಪ್ರಭಾವದಿಂದ ಯಕ್ಷಗಾನದ ಭಾಗವತಿಕೆಯಲ್ಲಿ ಲಾಲಿತ್ಯ ಕಾಣಿಸಿಕೊಂಡಿರುವುದು ಸತ್ಯ. ಆದರೆ ಹಿಮ್ಮೇಳ ಪರಿಕರಗಳು ಬಹುತೇಕವಾಗಿ ಬದಲಾಗದೆ ಉಳಿದುಕೊಂಡಿವೆ.

ಯಕ್ಷಗಾನ ಭಾಗವತ

ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಕಡತೋಕ ಮಂಜುನಾಥ ಭಾಗವತರು ಹೇಳುವಂತೆ ‘ಈ ಯಕ್ಷಗಾನ ಪ್ರದರ್ಶನದ ಕೇಂದ್ರ ವ್ಯಕ್ತಿ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳ ಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ.[ ಯಕ್ಷಗಾನ ಮಕರಂದ, 1980, ಪು. 212]

ಸಭಾಲಕ್ಷಣದಲ್ಲಿ ಭಾಗವತನ ಸಲ್ಲಕ್ಷಣಗಳನ್ನು ಹೀಗೆ ಹೇಳಲಾಗಿದೆ:

ಭಕಾರೋ ಭಗವದ್ಭಕ್ತಃ | ಗ ಕಾರೋ ಗರ್ವವರ್ಜಿತ||

ವಕಾರೋ ವಾಕ್ಯಪಾಠೀಚ| ತಕಾರಸ್ತತ್ತ್ವ ನಿರ್ಣಯಃ||

[ಸಭಾಲಕ್ಷಣ, ಪಾವಂಜೆ ಪ್ರತಿ, 1980 ಪುಟ 10]

ಯಕ್ಷಗಾನಕ್ಕೆ ದೇವಾಲಯ ಮೂಲಕಲೆ. ಎಲ್ಲಾ ಯಕ್ಷಗಾನ ಪ್ರಸಂಗಗಳು ಭಗವಂತನ ಆರಾಧನೆಯನ್ನು ಸಮರ್ಥಿಸುತ್ತವೆ. ಭಕ್ತಿ ಎಂದರೆ ಭಗವಂತನಲ್ಲಿಟ್ಟಿರುವ ಪ್ರೇಮ. ಭಗವಂತನು ಐಶ್ವರ್ಯ, ವೀರ್ಯ, ಯಶಸ್ಸು, ಸಿರಿ, ಜ್ಞಾನ ಮತ್ತು ವೈರಾಗ್ಯಗಳೆಂಬ ಆರು ಗುಣಗಳ ಪ್ರತೀಕ. ಯಕ್ಷಗಾನ ಭಾಗವತನಲ್ಲಿ ಈ ಗುಣಗಳಿರಬೇಕು ಎನ್ನುವುದು ವಿದ್ವಾಂಸರ ಅಭಿಮತ.

ಭಗವದ್ಭಕ್ತ :

ಭಗವಂತನು ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಮ, ಈಶತ್ವ, ವಶಿತ್ವ ಎಂಬ ಅಷ್ಟ ಸಿದ್ಧಿಗಳನ್ನು ಹೊಂದಿರುತ್ತಾನೆ.

ಆತನೆದುರು ಮಾನವ ಎಂದೂ ಕುಬ್ಜನೇ. ಭಗವದ್ಭಕ್ತಿ ಮಾನವನ ಅಹಂಕಾರವನ್ನು ಕಡಿಮೆ ಮಾಡುತ್ತದೆ ಮತ್ತು ವಿನಯವನ್ನು ಬೆಳೆಸುತ್ತದೆ. ವಿದ್ಯಾ ವಿನಯೇನ ಶೋಭತೇ, ವಿದ್ವಾನ್‌ ಸರ್ವತ್ರ ಪೂಜ್ಯತೇ. ವಿದ್ಯೆಯು ವಿನಯಿದಂದ ಶೋಭಿಸುತ್ತದೆ. ವಿನಯವುಳ್ಳ ವಿದ್ವಾಂಸನು ಎಲ್ಲರಿಂದಲೂ ಪೂಜಿಸಲ್ಪಡುತ್ತಾನೆ. ಭಾಗವತನು ವಿನಯವುಳ್ಳ ವಿದ್ಯಾವಂತನಾಗಿರಬೇಕು.

ಬಡಗು ತಿಟ್ಟಿನವರ ತಾಳ, ಸಣ್ಣ ಜಾಗಟೆ

ಗರ್ವವರ್ಜಿತ :

ಭಾಗವತನಲ್ಲಿ ಆಗಾಗ ಬೇರೆ ಬೇರೆ ಕಾರಣಗಳಿಗಾಗಿ ಗರ್ವ ಅಥವಾ ಅಹಂಕಾರ ಹುಟ್ಟಿಕೊಳ್ಳಬಹುದು. ಕೆಲವು ಮೇಳಗಳಲ್ಲಿ ಭಾಗವತನೇ ಯಜಮಾನ ನಾಗಿರುವುದೂ ಇದೆ. ಆತ ಯಕ್ಷಗಾನದ ನಿರ್ದೇಶಕನಾಗಿ ಮೇಳದ ನಾಯಕನಾಗಿರುತ್ತಾನೆ. ಸುಶ್ರಾವ್ಯ ಶಾರೀರದ ಭಾಗವತನ್ನ್ನು ಯಶಸ್ಸು, ಕೀರ್ತಿ ಮತ್ತು ಸಂಪತ್ತು ಹಿಂಬಾಲಿಸಿಕೊಂಡು ಬರುತ್ತವೆ. ಇವು ಭಾಗವತನ ತಲೆ ತಿರುಗಿಸಬಾರದು. ಅವನು ಸ್ಥಿತಪ್ರಜ್ಞನಂತಿರಬೇಕು.

ವಾಕ್ಯಪಾಠೀ :

ಭಾಗವತನಲ್ಲಿ ತುಂಬಾ ಓದುವ ಹವ್ಯಾಸ ಮತ್ತು ತಪ್ಪಿಲ್ಲದೆ ಪಠನ ಮಾಡುವ ಸಾಮರ್ಥ್ಯವಿರಬೇಕು.’ವಾಕ್ಯಪಾಠ’ಎನ್ನುವುದನ್ನು ರಾಘವ ನಂಬಿಯಾರರು ವಿಶಾಲವಾದ ಓದು, ಆಸ್ವಾದನ ಶಕ್ತಿ, ಆಶುಪದ ರಚನಾ ಕುಶಲತೆ ಮತ್ತು ವಾಕ್ಪಟುತ್ವ ವೆಂದು ಅರ್ಥೈಸಿದ್ದಾರೆ. ಅವರು ಭಾಗವತನನ್ನು ಒಬ್ಬ ಪಾಠಕನೆಂದು ಪರಿಗಣಿಸಿ ಆತನ ಗುಣ ದೋಷಗಳು ಯಾವುವೆಂದು ಹೇಳಿದ್ದಾರೆ.

ಭಾಗವತನ ಗುಣ ದೋಷಗಳು

ಗುಣಗಳು ದೋಷಗಳು
ಇಂಪಾದ ರಾಗ ಗದ್ಯವನ್ನು ರಾಗವಾಗಿ ಎಳೆದು ಮಾತಾಡುವುದು
ಸ್ಫುಟವಾದ ಅಕ್ಷರೋಚ್ಚಾರಣೆ ಪದ್ಯವನ್ನು ತ್ವರೆಯಿಂದ ಹೇಳುವುದು
ಅರ್ಥವಾಗುವಂತೆ ಪದ ವಿಭಾಗ ತಲೆಯನ್ನು ಅಲ್ಲಾಡಿಸಿಕೊಂಡಿರುವುದು
ಕೇಳುವಷ್ಟು ಗಟ್ಟಿಯಾದ ದನಿ ತಪ್ಪುಗಳನ್ನು ತಿದ್ದದೆ ಓದುವುದು
ಸಭಾಕಂಪನವಿಲ್ಲದಿರುವಿಕೆ ಕುಗ್ಗಿದ ದನಿಯಲ್ಲಿ ಹಾಡುವುದು
ಲಯಬದ್ಧತೆ ಅರ್ಥ ತಿಳಿದುಕೊಳ್ಳದೆ ಪದ್ಯ ಹೇಳುವುದು
ಆಧಾರ : ರಾಘವ ನಂಬಿಯಾರ್‌ ``ಹಿಮ್ಮೇಳ``, 2007, ಪುಟ 94


ತತ್ತ್ವ ನಿರ್ಣಯ :

ಪಾತ್ರಧಾರಿಗಳ ಅಜ್ಞಾನ ಅಥವಾ ಶುಷ್ಕ ಪಾಂಡಿತ್ಯದಿಂದ ಪ್ರಸಂಗದ ಕತೆಗೆ ಅಥವಾ ಆಶಯಕ್ಕೆ ಭಂಗವುಂಟಾದಾಗ ಖಚಿತ ತೀರ್ಮಾನಗಳನ್ನು ತೆಗೆದುಕೊಂಡು ಪ್ರಸಂಗ ಮುಂದುವರಿಸುವುದೇ ತತ್ತ್ವ ನಿರ್ಣಯ. ಉದಾಹರಣೆ:

ಕಡತೋಕಾ ಮಂಜುನಾಥ ಭಾಗವತರು
‘ಸುಧನ್ವಾರ್ಜುನ ‘ದಲ್ಲಿ ತನ್ನ ಭಕ್ತನಾದ ಸುಧನ್ವನನ್ನು ಕೊಲ್ಲುವುದನ್ನು ಕೃಷ್ಣ ಒಡಂಬಡದಿದ್ದರೂ ಭಾಗವತ ಸುಧನ್ವನನ್ನು ಕೊಲ್ಲಬೇಕು. ಮಾರೀಚ ತನ್ನ ವಾಕ್ಚಾತುರ್ಯದಿಂದ ರಾವಣನನ್ನು ಸೋಲಿಸಿದರೂ ಭಾಗವತ ಮುಂದಿನ ಪದ ಎತ್ತಿ ಮಾರೀಚನನ್ನು ಮಾಯಮೃಗವನ್ನಾಗಿಸಬೇಕು. ಕೆಲವೊಮ್ಮೆ ರಂಗದಲ್ಲಿ ವರ್ಣ, ಜಾತಿ, ಸ್ತ್ರೀ ಸ್ವಾತಂತ್ರ್ಯಇತ್ಯಾದಿಗಳ ಬಗ್ಗೆ ಬಿಸಿಬಿಸಿ ತರ್ಕಗಳು ಏಳಬಹುದು. ಅದರಿಂದ ಪ್ರಸಂಗ ಕತೆಗೆ ತೊಂದರೆಯಾಗದಂತೆ ಭಾಗವತ ನೋಡಿಕೊಳ್ಳಬೇಕು. ತತ್ತ್ವ ನಿರ್ಣಯವೆಂದರೆ ಪ್ರಸಂಗಕ್ಕೆ ಬದ್ಧತೆ ಎಂದರ್ಥವೇ ಹೊರತು ಭಾಗವತನ ಮನೋಧರ್ಮಕ್ಕೆ ಬದ್ಧತೆ ಎಂದಲ್ಲ.

ಕಡತೋಕಾ ಮಂಜುನಾಥ ಭಾಗವತರ ಪ್ರಕಾರ ‘ಯಕ್ಷಗಾನ ಪ್ರದರ್ಶನದುದ್ದಕ್ಕೂ ಪ್ರಸಂಗದ ಪದ್ಯಗಳನ್ನು ವಿವಿಧ ರಸರಾಗಗಳಲ್ಲಿ ಹಾಡುತ್ತ, ನಟರನ್ನು ಕುಣಿಸಿ, ಮಾತಾಡಿಸಿ, ಸದಾ ಜಾಗೃತನಾಗಿದ್ದು ಆಟವನ್ನು ಸುಸೂತ್ರವಾಗಿ ನಡೆಯಿಸುವ ಜೀವಂತ ಶಕ್ತಿಯಾಗಿ ದುಡಿಯಬೇಕಾದ ಭಾಗವತನ ಜವಾಬ್ದಾರಿ ಬಲು ದೊಡ್ಡದು. ಭಾಗವತಿಕೆ ಎಂಬುದು ಸತತವಾದ ಪರಿಶ್ರಮ, ದೃಢ ಆರೋಗ್ಯ ಮತ್ತು ಉನ್ನತ ಮಟ್ಟದ ಪ್ರತಿಭೆಯನ್ನು ಬಯಸುವ ಕಲಾಕೇತ್ರ. ಯಕ್ಷಗಾನ ಪ್ರದರ್ಶನದ ಯಶಸ್ಸು ಅಪಯಶಸ್ಸುಗಳ ಬಲು ದೊಡ್ಡ ಅಂಶ ಭಾಗವತನದು. ಹಾಗಾಗಿ ಈತನ ಸ್ಥಾನ ಮಾನವೂ ದೊಡ್ಡದು ಹೊಣೆಯೂ ಹಿರಿದು. ರಂಗದ ಮೇಲೆ ಮತ್ತು ರಂಗದ ಹೊರಗೆ ಭಾಗವತನ ಕೆಲಸದ ಮುಖಗಳು ಹಲವಿವೆ. ಮತ್ತು ಈ ಎಲ್ಲಾ ಅಂಶಗಳನ್ನು ಅವಲಂಬಿಸಿಯೇ ಭಾಗವತನ ಯೋಗ್ಯತೆಯೂ, ಅವನಾಡಿಸುವ ಆಟದ ಯಶಸ್ಸೂ ನಿರ್ಣಯಿಸಲ್ಪಡುತ್ತದೆ.’

ಯಕ್ಷಗಾನ ಭಾಗವತನ ಪಾತ್ರ ಹೀಗಿದೆ :

ನಿರ್ದೇಶನ :

ಭಾಗವತ ಪ್ರಸಂಗದ ನಿರ್ದೇಶಕನಾಗಿರುತ್ತಾನೆ. ಕತೆಯ ಮೂಲ ಆಶಯಕ್ಕೆ ತೊಂದರೆಯಾಗದಂತೆ ಅದನ್ನು ಮುಂದೊಯ್ಯಬೇಕಾದದ್ದು ಅವನ ಕಾರ್ಯ. ಕಲಾವಿದರಿಗೆ ಪ್ರಸಂಗಜ್ಞಾನ ಮತ್ತು ರಂಗಮಾಹಿತಿ ಇಲ್ಲದಿರುವಾಗ ಅವನ್ನು ನೀಡಬೇಕಾದದ್ದು ಭಾಗವತನ ಜವಾಬ್ದಾರಿ. ಪ್ರಸಂಗದ ಪಾತ್ರಗಳನ್ನು ಹಂಚುವವನೂ ಕೂಡಾ ಅವನೇ.

ಹಿಮ್ಮೇಳ - ಮುಮ್ಮೇಳ ಗುರು

ಹಾಡುಗಾರಿಕೆ ಮಾತ್ರವಲ್ಲದೆ ಚೆಂಡೆ, ಮದ್ದಳೆ ಮತ್ತು ನೃತ್ಯ ಪರಿಜ್ಞಾನ ಇರುವವನೇ ನಿಜವಾದ ಭಾಗವತ. ಅಗತ್ಯ ಬಿದ್ದಾಗ ಅವನು ಚೆಂಡೆಮದ್ದಳೆಯವರಿಗೆ ನಿರ್ದೇಶನ ನೀಡಬೇಕು ಮತ್ತು ಪಾಠ ಹೇಳಿಕೊಡಬೇಕು. ಹಿಂದೆ ಚೆಂಡೆ ಮತ್ತು ಮದ್ದಳೆಗಳನ್ನು ಶ್ರುತಿ ಬದ್ಧಗೊಳಿಸುವುದು ಭಾಗವತನ ಕೆಲಸವಾಗಿತ್ತು. [ಹಿಮ್ಮೇಳ 2007, ಪುಟ 95] ಪಾತ್ರಧಾರಿಗಳಿಗೆ, ಮುಖ್ಯವಾಗಿ ತೆರೆಕಲಾಸ, ಸಭಾಕಲಾಸ, ಒಡ್ಡೋಲಗ, ಯುದ್ದ, ಬೇಟೆ, ಜಲಕೇಳಿ ಇತ್ಯಾದಿ ಸಂದರ್ಭಗಳಲ್ಲಿ ಭಾಗವತ ನಿರ್ದೇಶನ ನೀಡುತ್ತಾನೆ ಅಥವಾ ನೀಡಬೇಕಾಗುತ್ತದೆ.

ಪ್ರದರ್ಶನದ ಯಶಸ್ಸಿಗೆ ಕಾರಣ

ಯಕ್ಷಗಾನ ಪ್ರದರ್ಶನದ ಯಶಸ್ಸು ಭಾಗವತನ್ನ್ನು ಅವಲಂಬಿಸಿದೆ. ಕಲಾವಿದರ ಶಕ್ತಿಯನ್ನು ಅರಿತು ಅದನ್ನು ರಂಗದಲ್ಲಿ ಉದ್ದೀಪನಗೊಳಿಸುವುದು ಅವನ ಕರ್ತವ್ಯ. ಹಾಗೆಯೇ ಆತನಿಗೆ ಕಲಾವಿದರ ದೌರ್ಬಲ್ಯಗಳ ಅರಿವಿರಬೇಕು. ಗಿರ್ಕಿ ಹೊಡೆಯಲಾಗದ ಕಲಾವಿದರಿಗೆ ಪದ್ಯದ ಬಿಡ್ತಿಗೆ ನೀಡದೆ ಆಟದ ಯಶಸ್ಸಿಗೆ ಅವನು ಕಾರಣನಾಗಬೇಕು. ಭಾಗವತರು ಅಭಿನಯ ಮಾಡಲು ಸಾಧ್ಯವಾಗದ ಪದ್ಯದ ಸಾಲುಗಳನ್ನು ಪುನರಾವರ್ತಿಸಬಾರದು. ಎರಡು ಪಾತ್ರಗಳು ರಂಗದಲ್ಲಿರುವಾಗ ಒಬ್ಬನಿಗೆ ಕುಣಿತ ಚೆನ್ನಾಗಿ ಬಂದರೂ, ಇನ್ನೊಬ್ಬನಿಗೆ ಬಾರದಿದ್ದರೆ ಸಮತೋಲನ ಕಾಯ್ದುಕೊಳ್ಳಲು ಭಾಗವತನಿಗೆ ಸಾಧ್ಯವಾಗಬೇಕು. ಯಕ್ಷಗಾನ ಏಕವ್ಯಕ್ತಿ ಪ್ರದರ್ಶನವಲ್ಲದ ಅದೊಂದು ಸಾಮುದಾಯಿಕ ಕಲೆ ಎಂಬ ಅರಿವಿರುವವನೇ ಒಳ್ಳೆಯ ಭಾಗವತನಾಗಲು ಸಾಧ್ಯ.


ಸಣ್ಣ ಬಲಿಪ ನಾರಾಯಣ ಭಾಗವತರು

ಸಮನ್ವಯ ಸಾಧನೆ :

ಯಕ್ಷಗಾನ ಮೇಳದಲ್ಲಿ ಅನೇಕ ಜನರಿರುತ್ತಾರೆ. ಅವರ ನಡುವೆ ವಿಭಿನ್ನ ಕಾರಣಗಳಿಂದಾಗಿ ಭಿನ್ನಾಭಿಪ್ರಾಯ ತಲೆದೋರುತ್ತಿರುತ್ತದೆ. ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಬೇಕಾದರೆ ಮೇಳದವರು ಯುದ್ಧಸ್ಫೂರ್ತಿಯಿಂದ ದುಡಿಯ ಬೇಕಾಗುತ್ತದೆ. ಅದಕ್ಕೆ ಭಾಗವತ ಸಮನ್ವಯ ಕಾರನಂತೆ ಕಾರ್ಯ ನಿರ್ವಹಿಸಬೇಕು. ಹಾಗಾಗಿ ಭಾಗವತನ ಕೆಲಸ ಬಹಳ ದೊಡ್ಡದು.
ಭಾಗವತನ ಲಕ್ಷಣಗಳು

ಈವರೆಗಿನ ವಿಶ್ಲೇಷಣೆಯ ಆಧಾರದಲ್ಲಿ ಭಾಗವತನ ಗುಣಲಕ್ಷಣಗಳನ್ನು ಹೀಗೆ ಕ್ರೋಢೀಕರಿಸಬಹುದು:

 • ಭಾಗವತನಲ್ಲಿ ನಾಯಕತ್ವದ ಗುಣವಿರಬೇಕು.
 • ಆತನಿಗೆ ಸಂಗೀತ, ರಾಗ, ತಾಳ, ಲಯ, ನಾಟ್ಯಜ್ಞಾನವಿರಬೇಕು.
 • ಆತನಿಗೆ ಚೆಂಡೆಮದ್ದಳೆ ಜ್ಞಾನವಿರಬೇಕು.
 • ಆತನಿಗೆ ಪ್ರಸಂಗ ಜ್ಞಾನದೊಡನೆ ಖಚಿತ ರಂಗ ಮಾಹಿತಿ ಇರಬೇಕು.
 • ಅವನ ಸ್ವರ ಸುಶ್ರಾವ್ಯವಾಗಿದ್ದು ಸ್ಪಷ್ಟವಾಗಿ ಕೇಳಿಸುವಂತಿರಬೇಕು.
 • ರಸಜ್ಞಾನದೊಡನೆ ಆತನಲ್ಲಿ ಅನ್ವಯಿಕ ಗುಣವಿರಬೇಕು.
 • ಆತನಲ್ಲಿ ಸಮಯ ಪ್ರಜ್ಞೆ ಮತ್ತು ಸಮಚಿತ್ತತ್ವ ಇರಬೇಕು.
 • ಯಕ್ಷಗಾನದ ಮಟ್ಟಿಗೆ ಅವನು ಸರ್ವಜ್ಞನಾಗಿರಬೇಕು.
 • ಸಂಪ್ರದಾಯ ಬದ್ಧತೆಯೊಡನೆ ಆತನಲ್ಲಿ ಆವಿಷ್ಕಾರಿಕ ಗುಣವಿರಬೇಕು.
 • ಆತನಲ್ಲಿ ಸಂದರ್ಭಶೀಲತೆ ಮತ್ತು ಕಾಲಬದ್ಧತೆ ಇರಬೇಕು.
 • ಆತನಿಗೆ ಪೂರ್ವ ರಂಗದ ಖಚಿತ ಜ್ಞಾನವಿರಬೇಕು.
 • ಆತನಲ್ಲಿ ಸಮನ್ವಯಕಾರನ ಗುಣವಿರಬೇಕು.
 • ಆತ ರಾಜಕೀಯ, ಜಾತಿಮತ, ಕೋಮು ಭಾವಗಳಿಂದ ಮುಕ್ತನಾಗಿರಬೇಕು.
 • ಎಲ್ಲಾ ಕಲಾವಿದರನ್ನು ಅವನು ಸಮಾನವಾಗಿ ಕಾಣಬೇಕು.
 • ಆತನಿಗೆ ಕಲಾವಿದರ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಇರಬೇಕು.
 • ಆತನಲ್ಲಿ ಸಾಕಷ್ಟು ವ್ಯವಹಾರ ಜ್ಞಾನವಿರಬೇಕು.
 • ಅವನು ಕಲಾವಿದರ ಆರ್ಥಿಕ ಸಾಮಾಜಿಕ ಶೋಷಣೆಯಾಗದಂತೆ ನೋಡಿಕೊಳ್ಳಬೇಕು.
 • ಆತನಲ್ಲಿ ಯಾವುದೇ ದುಶ್ಚಟಗಳಿರಬಾರದು.
ಕಡತೋಕಾ ಮಂಜುನಾಥ ಭಾಗವತರ ಪ್ರಕಾರ ‘ಭಾಗವತನಿಗೆ ಯಕ್ಷಗಾನದ ಹಾಡುಗಾರಿಕೆಗೆ ಒಪ್ಪುವ ಸತ್ತ್ವಯುತ ಕಂಠ, ಸುದೃಢ ಆರೋಗ್ಯಗಳೊಂದಿಗೆ, ಸ್ವರಶುದ್ಧಿ, ರಾಗಶುದ್ಧಿಗಾಗಿ ಶಾಸ್ತ್ರೀಯ ಸಂಗೀತದ ಸಾಮಾನ್ಯ ಪರಿಚಯವಾದರೂ ಬೇಕು. ಕನ್ನಡ ಭಾಷೆಯ ಮೇಲೆ ಒಳ್ಳೆಯ ಹಿಡಿತವಿರಬೇಕು. ಭಾರತ, ಭಾಗವತಾದಿಗಳ ಜ್ಞಾನ ಇದ್ದು, ಅವುಗಳನ್ನು ರಂಗದಲ್ಲಿ ತರುವ ತಂತ್ರದ ಅರಿವು, ಅವುಗಳಲ್ಲಿ ಬರುವ ಸನ್ನಿವೇಶಗಳನ್ನು, ಪಾತ್ರಗಳನ್ನು ಅರ್ಥವಿಸುವ ಪ್ರತಿಭೆ, ಪುರಾಣಲೋಕವನ್ನು ಒಳಹೊಕ್ಕು ನೋಡುವ ದೃಷ್ಟಿ ಅವಶ್ಯ. ನಾಟಕಶಾಸ್ತ್ರ, ಅಲಂಕಾರಶಾಸ್ತ್ರ, ವ್ಯಾಕರಣಗಳನ್ನು ತಕ್ಕಷ್ಟು ಮಟ್ಟಿಗಾದರೂ ಭಾಗವತ ಅಭ್ಯಸಿಸುವುದು ಸೂಕ್ತ.[ ಯಕ್ಷಗಾನ ಮಕರಂದ, 1980, ಪುಟ 212]

ಯಕ್ಷಗಾನ ಭಾಗವತಿಕೆ ಒಂದು ವಿಶಿಷ್ಟ ಕಲೆ. ಅದು ಹೇಗಿರಬೇಕೆಂದು ಎಂ. ರಾಜಗೋಪಾಲಾಚಾರ್ಯರು ಸೂಚಿಸಿದ್ದಾರೆ:

 • ಹೆಚ್ಚು ಸಂಗತಿಗಳಿರಬಾರದು.
 • ಸಾಮಾನ್ಯವಾದ ರಕ್ತಿ ರಾಗಗಳೇ ಇರಬೇಕು
 • ಸರಳವಾದ ತಾಳಲಯಗಳಿರಬೇಕು
 • ಸಾಹಿತ್ಯದ ಅಕರಗಳನ್ನು ರಾಗಕ್ಕಾಗಿ ಎಳೆಯಕೂಡದು
 • ಅರ್ಥ ಕೆಡದಂತೆ ಹಾಡಬೇಕು
 • ಎತ್ತುಗಡೆಯಲ್ಲೇ ಭಾವವ್ಯಂಜಕವಾಗುವಂತಹ ರಾಗಸಂಚಾರವಿರಬೇಕು.
 • ಹಾಡು, ಶ್ರುತಿ ಬಿಡದೆ ಮಧ್ಯತಾರಸ್ಥಾಯಿಗಳಲ್ಲಿ ಮಿತವಾಗಿರಬೇಕು.
‘ಯಕ್ಷಗಾನ ಪ್ರಸಂಗಗಳನ್ನು ಅಲ್ಲಿ ಬಳಸಿದ ಛಂದಸ್ಸುಗಳಲ್ಲೇ ಹಾಡಬೇಕೆಂದಿಲ್ಲ. ಆದರೆ ಛಂದಸ್ಸಿನ ಪರಿಚಯದಿಂದ ಹಾಡಿಕೆಯಲ್ಲಿ ಒಂದು ಬಿಗು, ಸೊಗಸು ಉಂಟಾಗುತ್ತದೆ. ಅಲ್ಲದೆ ಪ್ರಸಂಗದ ಪದ್ಯಗಳು ಕೆಲವೊಮ್ಮೆ ತಾಳಕ್ಕೆ ಬಾರದಿದ್ದಾಗ ಅಕರಗಳನ್ನು ಸೇರಿಸಿಯೋ, ತೇಲಿಸಿಯೋ ಹಾಡಬೇಕಾದ ಸಂದರ್ಭವಿರುತ್ತದೆ. ಅಲ್ಲಿಯೂ ಛಂದಸ್ಸಿನ ಜ್ಞಾನ ನೆರವಾಗ ಬಹುದು. ಈ ದೃಷ್ಟಿಯಿಂದ ಯಕ್ಷಗಾನದ ನಿಜವಾದ ಧಾಟಿಯನ್ನು ಛಂದಸ್ಸಿನ ಮೂಲಕ ಕಂಡುಹಿಡಿದು ಅದಕ್ಕೆ ತಕ್ಕ ರಾಗವನ್ನು ಬಳಸಿ ಹಾಡುವುದರಿಂದ ಪರಿಣಾಮ ಇನ್ನೂ ಹೆಚ್ಚಾಗಬಹುದೆಂದು ಕಾಣುತ್ತದೆ.’ [ಯಕ್ಷಗಾನ ಮಕರಂದ, 1980, ಪುಟ 87]

ಮರವಂತೆ ನರಸಿಂಹದಾಸ್‌ ಭಾಗವತರು
ಭಾಗವತನ ಲಯವಾದ್ಯಕ್ಕೆ ‘ತಾಳ’ ಎಂದು ಹೆಸರು. ಬಡಗುತಿಟ್ಟಿನವರು ಸಣ್ಣ ಚಕ್ರತಾಳವನ್ನು ‘ತಾಳ’ ಸಾಧನವಾಗಿ ಬಳಸುತ್ತಾರೆ. ತೆಂಕುತಿಟ್ಟಿನವರು ಸಣ್ಣ ಜಾಗಟೆಯನ್ನು ಬಳಕೆ ಮಾಡುತ್ತಾರೆ. ಲಯವಾದ್ಯವಾಗಿ ಬಳಕೆಯಾಗುವ ತಾಳವು ಲೋಹದಿಂದ ಮಾಡಲ್ಪಟ್ಟಿ ರುತ್ತದೆ ಮತ್ತು ಅದು ಶ್ರುತಿ ಬದ್ಧವಾಗಿರುತ್ತದೆ. ತೆಂಕುತಿಟ್ಟಿನಲ್ಲಿ ಜಾಗಟೆ ಕೋಲಾಗಿ ಜಿಂಕೆ ಅಥವಾ ರಾಸುಗಳ ಕೋಡುಗಳನ್ನು ಬಳಸುವ ಪರಿಪಾಠವಿತ್ತು. ಈಗ ಮರದ ಕೋಲು ಗಳನ್ನೇ ಬಳಸಲಾಗುತ್ತದೆ.

ತೆಂಕು ಮತ್ತು ಬಡಗು ತಿಟ್ಟಿನ ಕೆಲವು ಪ್ರಸಿದ್ಧ ಭಾಗವತರುಗಳು ಇವರು :

ದೊಡ್ಡ ಬಲಿಪ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು. ತಲೆಂಗಳ ಶಂಭಟ್ಟರು, ಇರಾ ಗೋಪಾಲಕೃಷ್ಣ ಭಾಗವತರು, ಸರವು ಕೃಷ್ಣಭಟ್ಟರು, ಸಣ್ಣ ಬಲಿಪ ಭಾಗವತು, ದಾಮೋದರ ಮಂಡೆಚ್ಚರು ಪುತ್ತಿಗೆ ರಾಫೆರಾಮ ಹೊಳ್ಳ, ಪದ್ಯಾಣ ಗಣಪತಿ ಭಟ್ಟ, ದಿನೇಶ ಅಮ್ಮಣ್ಣಾಯ, ದಾಸರಬೈಲು ಚನಿಯ ನಾಯ್ಕ ಮುಂತಾದವರು ಇವರೆಲ್ಲಾ ತೆಂಕುತಿಟ್ಟು ಸಂಪ್ರದಾಯದವರು. ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್‌, ಮರವಂತೆ ನರಸಿಂಹದಾಸ್‌, ಗುಂಡ್ಮಿ ರಾಮಚಂದ್ರ ನಾವಡ, ನಾರಣಪ್ಪ ಉಪ್ಪೂರು, ನೆಬ್ಬೂರು ನಾರಾಯಣ ಭಾಗವತರು, ನೀಲಾವರ ರಾಮಕೃಷ್ಣಯ್ಯ, ಗುಂಡ್ಮಿ ಕಾಳಿಂಗ ನಾವಡ, ಕೆರೆಮನೆ ಮಹಾಬಲ ಹೆಗ್ಡೆ ಇವರೆಲ್ಲಾ ಬಡಗು ತಿಟ್ಟು ಸಂಪ್ರದಾಯದವರು. ಕಡತೋಕಾ ಮಂಜುನಾಥ ಭಾಗವತರು ತೆಂಕು ಬಡಗು ಸವ್ಯಸಾಚಿ.

ಸಂಗೀತಗಾರ ಮತ್ತು ಶ್ರುತಿಕಾರ : ಪೂರ್ವರಂಗದ ಹಾಡುಗಳನ್ನು ಹಾಡುವ ಭಾಗವತ ನನ್ನು ಸಂಗೀತಗಾರ ಎಂದು ಕರೆಯುವ ರೂಢಿಯಿದೆ. ಸಭಾಲಕ್ಷಣವನ್ನು ಹಾಡಬಲ್ಲವನೇ ಸಂಗೀತಗಾರ. ಆತ ನಿಪುಣನಾದರೆ ಕೆಲವು ಪದ್ಯಗಳನ್ನು ಹಾಡುವ ಅವಕಾಶ ಅವನಿಗೆ ಸಿಗುತ್ತದೆ. ಸಂಗೀತಗಾರನನ್ನು ಉಪ ಭಾಗವತ ಎಂದು ಕರೆಯಬಹುದು. ಪ್ರಧಾನ ಭಾಗವತ ರಂಗದ ಪಡಿಮಂಚವೇರಿ ಕುಳಿತ ಬಳಿಕ ಸಂಗೀತಗಾರ ಚಕ್ರತಾಳ ಬಾರಿಸುತ್ತಾನೆ. ಬಡಗು ತಿಟ್ಟಿನಲ್ಲಾದರೆ ಭಾಗವತರ ಹತ್ತಿರವೇ ನಿಂತು ಭಾಗವತಿಕೆ ಮತ್ತು ರಂಗಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ. ಚಕ್ರತಾಳ ಬಾರಿಸುವುದೂ ಒಂದು ಕಲೆಯೇ. ತಾಳ ಮತ್ತು ಲಯದ ಖಚಿತ ಜ್ಞಾನ ಇಲ್ಲದವರು ಚಕ್ರತಾಳ ಬಾರಿಸುವಂತಿಲ್ಲ, ಬಾರಿಸಕೂಡದು.

ಭಾಗವತರು ಹಾಡಿಗೆ ಆಧಾರವಾಗಿ ರಾಗದಸ್ತರ ಉಳಿಸಿಕೊಳ್ಳಲು ಶ್ರುತಿಯನ್ನು ಬಳಸುತ್ತಾರೆ. ಶ್ರುತಿಯ ಸಾಧನವಾಗಿ ಬಹುತೇಕವಾಗಿ ಹಾರ್ಮೋನಿಯಂ ಬಳಕೆಯಾಗುತ್ತದೆ. ಇತ್ತೀಚೆಗೆ ಎಲೆಕ್ಟ್ರಾನಿಕ್‌ ಶ್ರುತಿಪೆಟ್ಟಿಗೆ ಬಳಕೆಗೆ ಬಂದಿದೆ. ಇದರಲ್ಲಿ ಸ್ವರಗಳ ಆಯ್ಕೆಗೆ ಅಪರಿಮಿತ ಅವಕಾಶವಿದೆ. ಇದನ್ನು ಒಯ್ಯುವುದೂ ಕೂಡಾ ಸುಲಭ. ಭಾಗವತನೇ ಇದನ್ನು ನಿಯಂತ್ರಿಸುವುದರಿಂದ ಪ್ರತ್ಯೇಕ ಶ್ರುತಿಕಾರನ ಅಗತ್ಯವಿರುವುದಿಲ್ಲ.

********************


ಲೇಖನ ಕೃಪೆ : www.chilume.com

ಚಿತ್ರಗಳ ಕೃಪೆ : ಅ೦ತರ್ಜಾಲದಲ್ಲಿ ಯಕ್ಷಗಾನಾಭಿಮಾನಿಗಳಿ೦ದ ಪ್ರಕಟಿಸಲ್ಪಟ್ಟ ಸ೦ಗ್ರಹದಿ೦ದ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ