ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹೃನ್ಮನಗಳನ್ನು ಸೂರೆಗೊಳ್ಳಬಲ್ಲ ಅನನ್ಯ ಭಾಗವತ : ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಮಾರ್ಚ್ 6 , 2016

ಅಪೂರ್ವ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಶ್ತ್ರಿಯವರ ಒಮ್ಮೆಗೇ ಹೃನ್ಮನಗಳನ್ನು ಸೂರೆಗೊಳ್ಳಬಲ್ಲ ಇವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡ ಅನನ್ಯ ಭಾಗವತ. ಶೃಂಗಾರ, ಕರುಣ ದು:ಖ ರಸದ ಪದ್ಯಗಳನ್ನು ಮನಮುಟ್ಟುವಂತೆ ಹಾಡುವ ಇವರು ತಮ್ಮ ವಿಶಿಷ್ಟ ಶೈಲಿಯಿಂದಾಗಿಯೇ ಕಲಾರಸಿಕರನ್ನು ಮತ್ತೆ ಮತ್ತೆ ಹಿತವಾಗಿ ಕಾಡುತ್ತಾರೆ ! ಶಾಸ್ತ್ರಿಯವರ ಉಲ್ಲಸದಾಯಕ ಮನಸ್ಸು ಜೊತೆ ಸೇರಿದರೆ ಅವರ ಶೈಲಿಯ ಉತ್ತುಂಗ ಸ್ಥಿತಿಯ ಅನಾವರಣವಾಗುತ್ತದೆ. ಅದರ ಸಹಜ ಸೌ೦ದರ್ಯವನ್ನು ಕಂಡ ಎಂಥ ಪ್ರೇಕ್ಷಕನೇ ಆದರೂ ಸೈ ಅನ್ನಲೇಬೇಕು.

ದಕ್ಷಾಧ್ವರ ಗಿರಿಜಾಕಲ್ಯಾಣ , ಇಂದ್ರಜಿತು ಕಾಳಗ , ತುಳಸಿ ಜಲಂಧರ , ಕಂಸವಧೆ ,ಕರ್ಣಪರ್ವ ,ಸುಧನ್ವ ಮೋಕ್ಷ , ಪಟ್ಟಾಭಿಷೇಕ , ವಿದ್ಯುನ್ಮತಿ ಕಲ್ಯಾಣ ,ಶರಸೇತು ಬಂಧನ ಮುಂತಾದ ಯಾವುದೇ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಮೆರೆಸಬಲ್ಲ ಇವರೊಬ್ಬ ಅನನ್ಯ ಭಾಗವತ.

ಬಾಲ್ಯ , ಶಿಕ್ಷಣ ಹಾಗೂ ಕಲಾಸೇವೆ

1944ರಲ್ಲಿ ತೆಂಕಬೈಲು ಕೃಷ್ಣ ಶಾಸ್ತ್ರಿ- ಸಾವಿತ್ರಿಯಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿಯವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲು ಎಂಬಲ್ಲಿ ವಾಸವಾಗಿದ್ದಾರೆ. ಅವರಿಗೆ ಎಳವೆಯಲ್ಲೇ ಸಂಗೀತದಲ್ಲಿ ಆಸಕ್ತಿ. ಜತೆಗೆ ಕಲಾವಿದ ಮನೆತನದಲ್ಲಿ ಹುಟ್ಟಿದ್ದರಿಂದ ಕಲೆಯತ್ತ ಇವರು ಸಹಜವಾಗಿ ಆಕರ್ಷಿತರಾದರು. ಸೋದರ ಮಾವ ನಾರಾಯಣ ಭಟ್ ಅವರಿಂದ ಮೊದಲಿಗೆ ಮದ್ದಳೆಯನ್ನು ಕಲಿತರೂ, ಅದರಲ್ಲಿ ಮುಂದುವರಿಯಲಿಲ್ಲ. ಬಜಕ್ಕಳ ಗಣಪತಿ ಭಟ್ ಅವರಲ್ಲಿ ಸಂಗೀತಾಭ್ಯಾಸ ಮಾಡಿದ್ದರಿಂದ ಭಾಗವತಿಕೆಯತ್ತ ಗಮನ ಹರಿಸಿದರು. ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಭಾಗವತಿಕೆ ಅಭ್ಯಾಸ. ಜತೆಗೆ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರಿಂದ ವೇದವನ್ನು ಕಳಿತದ್ದೂ ಇವರಿಗೆ ಪ್ಲಸ್ ಪಾಯಿಂಟ್ ಆಯಿತು.

ವಿದ್ಯಾಭ್ಯಾಸವನ್ನು 8ನೇ ತರಗತಿಗೇ ಮುಕ್ತಾಯಗೊಳಿಸಿದ ಇವರು ನಂತರ ಭಾಗವತಿಕೆಯತ್ತ ವಾಲಿದರು. ಮೊದಲೇ ಹೇಳಿದಂತೆ ಕಲಾವಿದರ ಮನೆತನವಾದ್ದರಿಂದ ಮನೆಯವರ ಪ್ರೋತ್ಸಾಹವೂ ದೊರೆಯಿತು. ಮೊದಲಿಗೆ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಭಾಗವತಿಕೆ ವೃತ್ತಿ ಆರಂಭಿಸಿದ ಶಾಸ್ತ್ರಿಗಳು ಬಳಿಕ ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಸುಮಾರು 20 ವರ್ಷ ವೃತ್ತಿಪರ ಭಾಗವತರಾಗಿದ್ದರು. ಆದರೆ ಕೌಟುಂಬಿಕ ಸಮಸ್ಯೆಗಳಿಂದಾಗಿ ಅದರಲ್ಲಿ ಮುಂದುವರಿಯಲಾಗಲಿಲ್ಲ.

ಪುಸ್ತಕ ನೋಡದೆ ಭಾಗವತಿಕೆ

ಆದರೂ ಹವ್ಯಾಸಿ ಭಾಗವತರಾಗಿ ಇಂದಿಗೂ ಮುಂದುವರಿಸಿದ್ದಾರೆ. ಸಂಘ-ಸಂಸ್ಥೆಗಳು ಯಕ್ಷಗಾನ ತಾಳಮದ್ದಳೆ ಅಥವಾ ಪ್ರದರ್ಶನಕ್ಕೆ ಆಹ್ವಾನ ನೀಡಿದರೆ, ಭಾಗವತಿಕೆ ಮಾಡುತ್ತಾರೆ. ಜತೆಗೆ ಪೆರ್ಲ ಮೊದಲಾದೆಡೆ ಭಾಗವತಿಕರ ತರಗತಿಗಳನ್ನೂ ನಡೆಸುತ್ತಿದ್ದಾರೆ. ಯಾವುದೇ ಪ್ರಸಂಗವಿರಲಿ, ಅದನ್ನು ಮೊದಲು ಅಧ್ಯಯನ ನಡೆಸಿ, ಪಂದ್ಯಗಳನ್ನು ಬಾಯಿಪಾಠ ಮಾಡಿ, ಬಳಿಕವಷ್ಟೇ ವೇದಿಕೆ ಏರುತ್ತಾರೆ. ಆದರೆ ಭಾಗವತಿಕೆ ಸಂದರ್ಭ ಪುಸ್ತಕ ನೋಡದೆ ಪದ್ಯ ಹೇಳುವುದು ಇವರ ವಿಶೇಷತೆ. ಪ್ರಸಂಗದ ಪದ್ಯದ ಮೊದಲ ಒಂದು ಲೈನನ್ನು ಚೀಟಿಯಲ್ಲಿ ಬರೆದುಕೊಂಡು, ಅದನ್ನು ಮಾತ್ರ ನೋಡಿ ಭಾಗವತಿಕೆ ಮಾಡುತ್ತಾರೆ.

ಒಬ್ಬ ಉತ್ತಮ ಭಾಗವತನಿಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಗುಣ ಅತ್ಯಗತ್ಯ. ಎಲ್ಲದಕ್ಕಿಂತ ಮೊದಲು ಸಂಗೀತ ಜ್ಞಾನ, ತಶಾಳ ಜ್ಞಾನ, ಪುರಾಣ ಜ್ಞಾನ ಹೊಂದಿರಬೇಕು. ಅಗತ್ಯ ಬಿದ್ದರೆ ಪ್ರಸಂಗವನ್ನು ಕಿರಿದುಗೊಳಿಸುವ ಅಂತೆಯೇ ಹಿರಿದುಗೊಳಿಸುವ ತಾಕತ್ತು ಅತ್ಯಗತ್ಯ ಎನ್ನುತ್ತಾರೆ ಶಾಸ್ತ್ರಿಗಳು.

ಅಪೂರ್ವ ರಾಗಗಳ ಸಂಗ್ರಹ

ಅವರ ಶೈಲಿಯನ್ನು ಅನುಕರಿಸುವುದು ಅಸಾಧ್ಯ. ಅಪ್ಪನ ಶೈಲಿಯನ್ನು ಮಕ್ಕಳು ಅನುಸರಿಸುವುದು ಹಿರಿಯ ಭಾಗವತರ ಮನೆತನದಲ್ಲಿ ಕಾಣುತ್ತೇವೆ. ಅವರ ಶೈಲಿಯ ಉತ್ತರಾಧಿಕಾರಿಗಳು ಅದನ್ನು ಸಮರ್ಥವಾಗಿ ಕಲಿತರೆ ಪ್ರೇಕ್ಷಕನಿಗಾಗುವ ಲಾಭ ಅಪರಿಮಿತ. ದ್ವಂದ್ವ ಕಾರ್ಯಕ್ರಮ, ಯಕ್ಷ ಸಂಗೀತ ಕಾರ್ಯಕ್ರಮಗಳಲ್ಲಿ ಎದ್ದು ಕಾಣಿಸುವ ಇವರ ಬತ್ತಳಿಕೆಯಲ್ಲಿ ಅಪೂರ್ವ ರಾಗಗಳ ಸಂಗ್ರಹವೇ ಇದೆ. ಪ್ರಸಂಗವನ್ನು ಸರಿಯಾಗಿ ಅಧ್ಯಯನ ಮಾಡಿಯೇ ರಂಗವೇರುವ ಇವರು ಸದಾ ಮನಸೂರೆಗೊಳ್ಳುವ ಭಾಗವತರಲ್ಲಿ ಪ್ರಮುಖರು.

ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ನೆಲೆಯಾಗಿರುವ ಇವರಿಗೆ ಹೆಚ್ಚಿನ ಅವಕಾಶ, ಪ್ರಚಾರಗಳು ದೊರಕದಿದ್ದರೂ, ಕೇಳುಗರ ಮನದಲ್ಲಿ "ಹಿತವಾಗಿ ಗಿರಕಿ ಹೊಡೆಯುವ " ಅಪೂರ್ವ ಕಲೆಗಾರಿಕೆ ಹೊಂದಿದ ಇವರ ಕಂಠದಲ್ಲಿ ಮೂಡಿ ಬಂದ ದೇವಿ ಮಹಾತ್ಮೆಯ "ನೋಡಿದನು ಕಲಿ ರಕ್ತಬೀಜನು. ...." ರಾವಣವಧೆಯ " ಕಂಡನು ದಶವದನ. ..." ದಕ್ಷಾಧ್ವರದ "ಯಾತಕೆ ಬಂದೆನು ತಾನೇ ಪಾತಕಿ ಮಾಡುವ. ..." ಜಲಂಧರನ ಕಾಳಗದ " ಕೇಳು ಶ್ರೀರಮೆ . .. ಕರುಣ ಸಾಗರೆ " ಕರ್ಣ ಪರ್ವದ "ಭಾನುಸುತ ರಥವಿಳಿದು. ..." ಮುಂತಾದ ಪದಗಳು ಮತ್ತೆ ಮತ್ತೆ ಕೇಳುವಂತೆ ಮಾಡಿ ತಲೆಯಲ್ಲಿ ಹಿತವಾಗಿ ಸುತ್ತುತ್ತಾ , ಬಾಯಿಯಲ್ಲಿ ಗುನುಗುನಿಸುತ್ತಾ " ಕೊಂಡಾಟದ " ಅನುಭವವನ್ನು ನೀಡುತ್ತದೆ.

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
ಜನನ : 1944
ಜನನ ಸ್ಥಳ : ತೆಂಕಬೈಲು, ಕರೋಪಾಡಿ ಗ್ರಾಮ
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಸುಮಾರು 20 ವರ್ಷ ವೃತ್ತಿಪರ ಭಾಗವತರಾಗಿ ಸೇವೆ ಸಲ್ಲಿಸಿದ, ಯಾವುದೇ ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ಮೆರೆಸಬಲ್ಲ ಅನನ್ಯ ಭಾಗವತ.

ಪ್ರಶಸ್ತಿಗಳು:
  • 2003ರಲ್ಲಿ ಪಟ್ಟಾಜೆ ಪ್ರಶಸ್ತಿ
  • 2006ರಲ್ಲಿ ದಿವಾಣ ಪ್ರಶಸ್ತಿ
  • 2008ರಲ್ಲಿ ಗಡಿನಾಡ ಉತ್ಸವ
  • 2011ರಲ್ಲಿ ಯಕ್ಷಗಾನ ಕಲಾರಂಗದ, ಪಡಾರು ನರಸಿಂಗ ಶಾಸ್ತ್ರಿ ಪ್ರಶಸ್ತಿ
  • 2011ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • 2012ರಲ್ಲಿ ಸೂಡ ಸುಬ್ರಹ್ಮಣ್ಯ ಯಕ್ಷ ಕಲಾಭಾರತಿಯ ತುಳುನಾಡ ಸಿರಿ ಪ್ರಶಸ್ತಿ
  • 2012ರಲ್ಲಿ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ
  • ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ
  • ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಸನ್ಮಾನ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ, ಪುರಸ್ಕಾರಗಳು

ದಾರಿ ತಪ್ಪಿದ ಯುವ ಪೀಳಿಗೆಯ ಬಗ್ಗೆ ಬೇಸರ

ಇಂದಿನ ಯುವ ಪೀಳಿಗೆಗೆ ಪುರಾಣದ ಕಥೆಗಳು ತಿಳಿದಿಲ್ಲ. ಮಹಾಭಾರತ, ರಾಮಾಯಣಗಳ ಬಗ್ಗೆ ಯಾವುದೇ ಜ್ಞಾನ ಇಲ್ಲ. ಹಾಗಾಗಿ ಅವರಿಗೆ ಯಕ್ಷಗಾನ ಪ್ರಸಂಗಗಳನ್ನು ಅರ್ಥೈಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುವ ಶಾಸ್ತ್ರಿಗಳು, ಮನೆಯಲ್ಲಿ ಹೆತ್ತವರು ಕೂಡ ಮಕ್ಕಳಿಗೆ ಯಕ್ಷಗಾನದ ಬಗ್ಗೆ ತಿಳಿಯಲು ಅಥವಾ ಪ್ರೋತ್ಸಾಹ ನೀಡಲು ಮುಂದೆ ಬರುತ್ತಿಲ್ಲ. ಟಿವಿ ಸೀರಿಯಲ್ಗಳು, ಕ್ರಿಕೆಟ್ನಿಂದಾಗಿ ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗುತ್ತಿದ್ದಾರೆ. ಟಿಕೆಟ್ ಕೊಟ್ಟು ನೋಡುವ ಟೆಂಟ್ ಆಟಗಳು ಇಂದು ನಶಿಸುವ ಹಂತದಲ್ಲಿದೆ. ಸೇವಯಾಟಗಳನ್ನು ಬೆಳಗ್ಗಿನ ವರೆಗೆ ನೋಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಯಕ್ಷಗಾನವನ್ನು ಮುಂಜಾವಿನ ವರೆಗೆ ಕುಳಿತು ನೋಡುವ ತಾಳ್ಮೆ ಜನರಲ್ಲಿಲ್ಲ. ಹಾಗಾಗಿ ಯಕ್ಷಗಾನವನ್ನು ಕಾಲಮಿತಿಗೆ ಇಳಿಸಲಾಗುತ್ತಿದೆ. ಇದರಿಂದಾಗಿ ಪ್ರಸಂಗವನ್ನು ಓಡಿಸುವ ಅಥವಾ ಅರ್ಥವನ್ನು ಕಿರಿದುಗೊಳಿಸುವ ಪ್ರಮೇಯ ಎದುರಾಗುತ್ತದೆ. ಜತೆಗೆ ಜನರಿಂದು ಟೈಂಪಾಸ್ಗಾಗಿ ಯಕ್ಷಗಾನ ನೋಡಲು ಆಗಮಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಯಾವುದೇ ಪ್ರಸಂಗವನ್ನು ವೇದಿಕೆ ಮೇಲೆ ಪ್ರದರ್ಶಿಸುವ ಮೊದಲು ಹಿಮ್ಮೇಳ-ಮುಮ್ಮೇಳ ಕಲಾವಿದರು ಜತೆ ಸೇರಿ ಆ ಪ್ರಸಂಗದ ಬಗ್ಗೆ ಚರ್ಚಿಸುವುದು ಅಗತ್ಯ ಎನ್ನುವ ಶಾಸ್ತ್ರಿಗಳು, ಇಂದು ಯಕ್ಷಗಾನ ವ್ಯಾಪಾರೀಕರಣಗೊಳ್ಳುತ್ತಿರುವುದರಿಂದ ಕಲಾವಿದರು ಸಮಯಕ್ಕೆ ಬಂದು, ತಮ್ಮ ಪಾತ್ರ ನಿರ್ವಹಿಸಿ, ತೆರಳುತ್ತಾರೆ. ಇತ್ತೀಚೆಗೆ ಒಬ್ಬ ಕಲಾವಿದ ಒಂದಿರುಳಿನಲ್ಲಿ ಎರಡು-ಮೂರು ಬಯಲಾಟಗಳಲ್ಲಿ ಪಾತ್ರ ನಿರ್ವಹಿಸುತ್ತಿರುವುದೂ ಕಂಡುಬರುತ್ತಿದೆ. ಇದರಿಂದಾಗಿ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗುತ್ತಿಲ್ಲ. ಪೂರ್ವ ತಯಾರಿಯೂ ನಡೆಯುತ್ತಿಲ್ಲ. ಹಾಗಾಗಿ ಯಕ್ಷಗಾನ ಹಾಳಾಗುತ್ತಿದೆ ಎನ್ನುತ್ತಾರೆ ಶಾಸ್ತ್ರಿಗಳು.

ಯಕ್ಷಗಾನಕ್ಕೆ ಅದರದ್ದೇ ಆದ ಶೈಲಿ ಇದೆ. ಅದರಂತೆ ಸಾಗಿದರೆ ಅದು ಚೆನ್ನ. ಆದರಿಂದು ಈ ಕಲೆಯಲ್ಲಿ ಮಾರ್ಪಾಟು ಗಳಾಗುತ್ತಿದ್ದು, ಸಿನಿಮಾ ಕಥೆಗಳು, ಹಾಡುಗಳು ಯಕ್ಷಗಾನವನ್ನು ಪ್ರವೇಶಿಸುತ್ತಿದೆ. ಇದರಿಂದಾಗಿ ಯಕ್ಷಗಾನದ ಮೂಲ ಉದ್ದೇಶವನ್ನು ಹಾಳು ಮಾಡುತ್ತಿವೆ. ಇಂತಹ ಪ್ರಯೋಗಗಳು ಯಕ್ಷಗಾನಕ್ಕೆ ಸೂಕ್ತವಲ್ಲ. ಯಕ್ಷಗಾನ ಕಥೆಗಳು ಪೌರಾಣಿಕವಾಗಿದ್ದು, ಜನರಿಗೆ ನೀತಿ ಪಾಠದಂತಿರಬೇಕೇ ವಿನಃ ಸಿನಿಮೀಯವಾಗಿರಬಾರದು. ಜತೆಗೆ ಯಕ್ಷಗಾನ ಕಲೆಗೆ ರಾಜಾಶ್ರಯದ ಅಗತ್ಯವಿದೆ. ಸರಕಾರದಿಂದಲೂ ಪ್ರೋತ್ಸಾಹ ಅಗತ್ಯವಿದೆ ಎಂಬುದು ಇವರ ಅಭಿಪ್ರಾಯ.

ಇಂದು ಮೇಳವನ್ನು ನಡೆಸುವುದು ಕೂಡ ಕಷ್ಟವಾಗುತ್ತಿದೆ. ವೇಷಭೂಷಣದ ಖರ್ಚು ಜಾಸ್ತಿಯಾಗುತ್ತಿವೆ. ಜತೆಗೆ ಬಣ್ಣಗಾರಿಕೆಯೂ ಹಿಂದೆ ಬೀಳುತ್ತಿದೆ. ಹಿಂದೆ ಬಣ್ಣದ ವೇಷ ಹಾಕಲು ಗಂಟೆಕಟ್ಟಲೆ ಸಮಯ ವ್ಯಯಿಸುತ್ತಿದ್ದರೆ, ಇಂದು ಎಲ್ಲವೂ ರೆಡಿಮೇಡ್ ಆಗಿ ಸಿಗುತ್ತಿರುವುದರಿಂದ ಕೆಲವೇ ಗಂಟೆಗಳಲ್ಲಿ ಬಣ್ಣಂದ ವೇಷ ಸಿದ್ಧಗೊಳ್ಳುತ್ತದೆ. ಜತೆಗೆ ಯುವಕರು ಯಕ್ಷಗಾನಕ್ಕೆ ಇನ್ನಷ್ಟು ಬರಬೇಕಾಗಿದ್ದು, ಈ ಕಲೆಯನ್ನು ಮುಂದಿನ ತಲೆಮಾರಿಗೂ ಪಸರಿಸುವ ಕೆಲಸವಾಗಬೇಕಿದೆ ಎನ್ನುತ್ತಾರೆ.

ಪ್ರಶಸ್ತಿ, ಪುರಸ್ಕಾರಗಳು

70 ವರ್ಷ ತುಂಬಿದ ಶಾಸ್ತ್ರಿಗಳು ಯಕ್ಷಗಾನ ರಂಗದಲ್ಲಿ 50 ವರ್ಷ ಪೂರೈಸಿದ್ದು, ಇಂದು ಕೂಡ ಆಸಕ್ತರಿಗೆ ಭಾಗವತಿಕೆ ಹೇಳಿಕೊಡುತ್ತಾರೆ. ಮುಂಬಯಿ, ತಮಿಳುಣಾಡು, ಆಂಧ್ರಪ್ರದೇಶ, ಕೇರಳಗಳಲ್ಲಿ ತಿರುಗಾಟ ನಡೆಸಿದ ಇವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ, ಹಲವು ಸನ್ಮಾನಗಳನ್ನೂ ಸ್ವೀಕರಿಸಿದ್ದಾರೆ.

ಮುಖ್ಯವಾಗಿ 2003ರಲ್ಲಿ ಪಟ್ಟಾಜೆ ಪ್ರಶಸ್ತಿ, 2006ರಲ್ಲಿ ದಿವಾಣ ಪ್ರಶಸ್ತಿ, 2011ರಲ್ಲಿ ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ಕೊಡಮಾಡಿದ ಪಡಾರು ನರಸಿಂಗ ಶಾಸ್ತ್ರಿ ಪ್ರಶಸ್ತಿ, 2011ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಸೂಡ ಸುಬ್ರಹ್ಮಣ್ಯ ಯಕ್ಷ ಕಲಾಆಭಾರತಿ ಕೊಡಮಾಡಿದ ತುಳುನಾಡ ಸಿರಿ ಪ್ರಶಸ್ತಿ, 2012ರಲ್ಲಿ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಇವರಿಗೆ ಸಂದಿವೆ ಜತೆಗೆ 2008ರಲ್ಲಿ ಗಡಿನಾಡ ಉತ್ಸವ, ಪಡ್ರೆ ಯಕ್ಷಮಿತ್ರರು ವತಿಯಿಂದ ಸನ್ಮಾನ, ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಗಂಡುಕಲೆ ಯಕ್ಷಗಾನ ಉಳಿಯಬೇಕಾದರೆ ರಾಜಾಶ್ರಯ ಅಗತ್ಯ. ಆದರಿಂದು ಯಕ್ಷಗಾನ ವಾಣಿಜ್ಯೀಕರಣಗೊಳ್ಳುತ್ತಿರುವುದು ಬೇಸರದ ಸಂಗತಿ. ಇದು ಹವ್ಯಾಸಿ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರ ಅಭಿಪ್ರಾಯ. ಹಲವು ಪ್ರಶಸ್ತಿ ಸನ್ಮಾನಗಳನ್ನು ಪಡೆದ ಇವರು ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

****************

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು










****************

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರ ಕೆಲವು ಛಾಯಾ ಚಿತ್ರಗಳು

( ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )







****************

ಕೃಪೆ : ವಿದ್ಯಾ ಮಂಗಳೂರು ಲಿಖಿತ vaarte.com ಲೇಖನ, ಸುಬ್ರಹ್ಮಣ್ಯ ಭಟ್ ಲಿಖಿತ ballirenayya.blogspot ಲೇಖನ ಹಾಗೂ ಅ೦ತರ್ಜಾಲದಲ್ಲಿ ಲಭಿಸಿದ ಇತರ ಮಾಹಿತಿಗಳಿ೦ದ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ