ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಬಾಹುಕನ ಭಾವುಕ ಅಂತರಂಗ

ಲೇಖಕರು :
ನಾ.ಕಾರ೦ತ, ಪೆರಾಜೆ
ಮ೦ಗಳವಾರ, ಮಾರ್ಚ್ 15 , 2016

"ನಳಚರಿತ್ರೆ ಸಿನೆಮಾದಲ್ಲಿ ನಟ ಕೆಂಪೇಗೌಡರ 'ಬಾಹುಕ' ಪಾತ್ರ ನನ್ನನ್ನು ಆಕರ್ಶಿಸಿತು. ಪಾತ್ರದ ನಡೆ, ಗೂನು ಬೆನ್ನು, ಮುಖದ ಭಾವ, ವೇಷ ಮತ್ತು ನಟನೆಗೆ ಮಾರುಹೋದೆ. ಅಭ್ಯಾಸ ಮಾಡಲೆಂದೇ ಹಲವು ಬಾರಿ ಸಿನಿಮಾ ನೋಡಿದೆ. ಅವರಂತೆ ಅಲ್ಲದಿದ್ದರೂ ಆ ಪಾತ್ರದ ಹಾಗೆ ಬಾಹುಕನನ್ನು ಚಿತ್ರಿಸಲು ಯತ್ನಿಸಿದೆ," ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರು 'ಬಾಹುಕ'ನನ್ನು ತಾನು ಚಿತ್ರಿಸಿದ್ದ ಆರಂಭದ ದಿವಸಗಳನ್ನು ನೆನಪಿಸಿಕೊಂಡರು.

ಸಾ೦ದರ್ಭಿಕ ಚಿತ್ರ : ಗೋವಿ೦ದ ಭಟ್ಟರು ಬಾಹುಕನ ಪಾತ್ರದಲ್ಲಿ
ನಾರಾಯಣ ಭಟ್ಟರು ಶ್ರೀ ಧರ್ಮಸ್ಥಳ ಮೇಳದ (ಸುಮಾರು 1940-45) ತಿರುಗಾಟದಲ್ಲಿದ್ದರು. ಮೇಳದ ಪ್ರಧಾನ ಹಾಸ್ಯಗಾರರಾದ ಕಿಟ್ಟಪ್ಪ ಹಾಸ್ಯಗಾರರ ಸೂಚನೆ, ಮಾರ್ಗದರ್ಶನದಂತೆ ಚಿಕ್ಕಪುಟ್ಟ ಪಾತ್ರಗಳ ನಿರ್ವಹಣೆ. ಒಂದು ದಿನ ಕಿಟ್ಟಪ್ಪರು ನಾಪತ್ತೆ! ಅಂದು ಮುಡಿಪಿನಲ್ಲಿ ಆಟ. ಪ್ರಸಂಗ 'ನಳ ಚರಿತ್ರೆ'. ಕೈರಂಗಳ ಈಶ್ವರ ಭಟ್, ತೋಡುಗುಳಿ ಶಂಕರ ಭಟ್ಟರ ಹಿರಿತನ. ಚೌಕಿಯಲ್ಲಿ ಸ್ವಲ್ಪ ಹೊತ್ತು ಗೊಂದಲವಾಯಿತು. ಅದುವರೆಗೆ ಪ್ರಸಂಗವನ್ನು ಓದಲೂ ಇಲ್ಲ, ವೇಷವನ್ನು ಮಾಡಿದ್ದೂ ಅಲ್ಲ. ಕೈಕಾಲು ನಡುಗುವ ಹೊತ್ತು!

ಬೇರೆ ದಾರಿಯಿಲ್ಲ. ಮುಖ್ಯ ಹಾಸ್ಯಗಾರರು ಬರುವ ಲಕ್ಷಣವಿಲ್ಲ. ಬಾಹುಕ ನೀವೇ ಮಾಡಬೇಕಷ್ಟೇ, ಮೇಳದ ಹಿರಿಯರು ಪ್ರೋತ್ಸಾಹಿಸಿದರು. ಒಲ್ಲೆ ಎಂದರೂ ಮಾಡುವುದು ಅನಿವಾರ್ಯವಾಗಿತ್ತು. ಅಂದು ಕೋಳ್ಯೂರು ನಾರಾಯಣ ಭಟ್ಟರ 'ನಳ', ಕುರಿಯ ವಿಠಲ ಶಾಸ್ತ್ರಿಗಳ 'ಶುಕ' ಪಾತ್ರಗಳನ್ನು ಮಾಡಿದ್ದರು. ಬಾಹುಕ ಪಾತ್ರ ಪಾಲಿಗೆ ಬಂದಾಗ ಅಧೀರರಾದರು. ನಾನು ಬೇರೆ ಯಾರದ್ದೇ ಪಾತ್ರವನ್ನು ನೋಡಿಲ್ಲ. ಪಾತ್ರದ ಕಲ್ಪನೆಯೂ ಇಲ್ಲ. ವೇಷಗಾರಿಕೆಯ ಸ್ವರೂಪವೂ ಗೊತ್ತಿಲ್ಲ. ಕಳ್ಳನ ಹಾಸ್ಯ, ಕಟ್ಟುಹಾಸ್ಯಕ್ಕೆ ಧರಿಸುವ ಮಂಕಿಟೊಪ್ಪಿಯನ್ನು ಹೋಲುವ ಟೊಪ್ಪಿಗೆಯನ್ನು ಧರಿಸಿದೆ. ಮುಖವನ್ನು ಸ್ವಲ್ಪ ವಿಕಾರ ಮಾಡಿದೆ. ಅಂದು ಹೇಗೋ ಅಧೈರ್ಯದಿಂದ ಅಭಿನಯಿಸಿದೆ. ಪಾತ್ರ ಮುಗಿಯುವಾಗ ಬದುಕಿದೆಯಾ ಬಡಜೀವವೇ ಎಂಬಂತಾಯಿತು, ಮೊದಲ ದಿನದ ಅಸಹಾಯಕತೆಯನ್ನು ವಿವರಿಸುತ್ತಾರೆ.

ನಂತರ ಅಧ್ಯಯನ ಶುರು. ದೇರಾಜೆಯವರ 'ಪುನರ್ಮಿಲನ' ಕೃತಿಯು ಪಾತ್ರಚಿತ್ರಣಕ್ಕೆ ಸಹಕಾರಿಯಾಯಿತು. ಮುಖ ಓರೆ ಕಾಣುವಂತೆ ಚಿತ್ರಿಸಿದರು. ಮೂಲ್ಕಿ ಮೇಳದಲ್ಲಿ ಹಿರಿಯ ಕಲಾವಿದ ಸಣ್ಣ ತಿಮ್ಮಪ್ಪ (ಪಂಜಿ ತಿಮ್ಮಪ್ಪ) ಅವರಿಂದ ಮಾರ್ಗದರ್ಶನ. ರಂಗದಲ್ಲಿ ಹೇಗೆ, ಎಲ್ಲಿ ನಿಲ್ಲಬೇಕೆನ್ನುವ ಮಾಹಿತಿ. ರಂಗಪ್ರವೇಶ, ಪತ್ರ ಓದುವಿಕೆ, ಚಲನೆಗಳ ಸೂಕ್ಷ್ಮ ಪಾಠಗಳ ಆರ್ಜನೆ. ಬಾಲ್ಯದಲ್ಲಿದ್ದಾಗ ಬಣ್ಣದ ಅಯ್ಯಪ್ಪು ಅವರ ವೇಷವನ್ನು ಭಟ್ಟರ ಅಮ್ಮ ನೋಡಿದ್ದರಂತೆ. ಅವರಿಂದ ಪಡೆದ ಮಾಹಿತಿಯೂ ಪಾತ್ರಭಿವ್ಯಕ್ತಿಗೆ ಪೂರಕವಾಯಿತು. ಆಗ ಬಡಗಿನಲ್ಲಿ ಕೊಗ್ಗು ಹಾಸ್ಯಗಾರರು ಓರೆಮೋರೆ ವೇಷ ಮಾಡಿಕೊಂಡಿದ್ದರಂತೆ.

ಮೂಲ್ಕಿ ಮೇಳದಲ್ಲಿ ’ನಳ ಚರಿತ್ರ” ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು. ಮೊದಲಿಗೆ ಸಣ್ಣ ತಿಮ್ಮಪ್ಪ ಅವರ ಋತುಪರ್ಣ, ನಂತರ ಕಡಾರು ನಾರಾಯಣ ಭಟ್, ಪುತ್ತೂರು ನಾರಾಯಣ ಹೆಗಡೆಯವರ 'ಋತುಪರ್ಣ' ಜತೆಗಾರಿಕೆಯು ಖ್ಯಾತಿ ಪಡೆಯಿತು. ಆಗ ಈಶ್ವರಪ್ಪಯ್ಯ ಭಾಗವತ. ತಲೆಂಗಳ ಶಂಭಟ್ಟರ ಭಾಗವತಿಕೆ . ಕತೆಯ ಕರುಣ, ದುಃಖ ರಸಗಳ ಓಟವು ಪ್ರೇಕ್ಷಕರನ್ನು ಹಿಡಿದಿಡುತ್ತಿತ್ತು. ದಮಯಂತಿ, ನಳ ಅತ್ತಾಗ ಪ್ರೇಕ್ಷಕರೂ ಕಣ್ಣೀರು ಹಾಕುತ್ತಿದ್ದರಂತೆ!

ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರು
ಬಾಹುಕ - ರೂಪಾಂತರವನ್ನು ಹೊಂದಿದ ನಳ ಎನ್ನುವ ಪ್ರಜ್ಞೆ ಪೆರುವೋಡಿಯವರ ಬಾಹುಕನಲ್ಲಿತ್ತು. ಆ ಪ್ರಜ್ಞೆಯೇ ತಾರಾಮೌಲ್ಯ ತಂದು ಕೊಟ್ಟಿತು. ಪ್ರಸಂಗದ ಕೊನೆಯ ಭಾಗದಲ್ಲಿ ಬಾಹುಕ ಮತ್ತು ದಮಯಂತಿಯರ ಮಿಲನದ ಸಂದರ್ಭ. ಈ ಸನ್ನಿವೇಶದ ಅರ್ಥಗಾರಿಕೆಯನ್ನು ಪರಿಣಾಮಕಾರಿಯಾಗಿ ರೂಪಿಸಿದ್ದರು. ಬಾಹುಕ ಜೊಲ್ಲು ಸುರಿಸುತ್ತಾ ರಂಗ ಪ್ರವೇಶ ಮಾಡುವ ದೃಶ್ಯ ಅಬ್ಬಾ...! ರಂಗಪ್ರವೇಶಕ್ಕಿಂತ ಮೊದಲು ಮಸಿಯನ್ನು ಅಗಿಯುತ್ತಿದ್ದರಂತೆ. ಜೊಲ್ಲನ್ನು ಕಡೆವಾಯಲ್ಲಿ ಬಿಟ್ಟಾಗ ವಿಷ ಹೊರಬಂದಂತೆ ತೋರುತ್ತಿತ್ತು! ಪ್ರೇಕ್ಷಕರು ನಿಬ್ಬೆರಗಾಗುತ್ತಿದ್ದರು. ಮುಂದೆ ಮಸಿ ಅಗಿಯುವುದು ಅಸಹ್ಯವಾಗಿ ಬಿಟ್ಟುಬಿಟ್ಟರಂತೆ!

ಮೂಲ್ಕಿ ಮೇಳದಲ್ಲಿ ದಿವಾಕರ ಭಟ್ಟರಿಗೆ ದಮಯಂತಿಯ ಪಾತ್ರ. ನಮ್ಮೊಳಗೆ ಹೊಂದಾಣಿಕೆ ಮತ್ತು ಮನೋಧರ್ಮಗಳು ಹೊಂದುತ್ತಿದ್ದುದರಿಂದ ಸನ್ನಿವೇಶ ಭಾವನಾತ್ಮಕವಾಗಿ ಮೂಡುತ್ತಿದ್ದುವು. ವಿದ್ಯಾವಂತರೂ ಮೆಚ್ಚಿಕೊಂಡರು. ಕಲಾವಿದರೂ ಸ್ಪಂದಿಸುತ್ತಿದ್ದರು. ಕೆಲವೊಮ್ಮೆ 'ಎಲ್ಲ ಸಮಯ ಅವರೇ ತಿಂದ್ರು' ಎಂಬ ಗೊಣಗಾಟವೂ ಇತ್ತೆನ್ನಿ, ಪೆರುವೋಡಿಯವರು ಕಳೆದ ಕಾಲದ ಬಾಹುಕನನ್ನು ನೆನದು ಭಾವುಕರಾಗುತ್ತಾರೆ.

ಬಡಗಿನ ಅಮೃತೇಶ್ವರಿ ಮೇಳದಲ್ಲಿ ತಿರುಗಾಟದಲ್ಲಿದ್ದಾಗಲೂ ನಳಚರಿತ್ರೆಯ ಪ್ರಸಂಗ ಪ್ರದರ್ಶನವಾಗಿತ್ತು. ಉಪ್ಪೂರು ಭಾಗವತರು ಪ್ರಸಂಗವನ್ನು ಅಚ್ಚುಕಟ್ಟಾಗಿ ಆಡಿಸುತ್ತಿದ್ದರು. ಸನ್ನಿವೇಶವನ್ನು ಯಥಾವತ್ ಆಗಿ ತೋರಿಸುವ ಸಾಮಥ್ರ್ಯ ಬಡಗಿನ ಕಲಾವಿದರಲ್ಲಿ ಹೆಚ್ಚಿದೆ. ಅಲ್ಲಿ ಬಾಹುಕನನ್ನು ತುಂಬಾ ಅನುಭವಿಸಿದ್ದೇನೆ. ಬಡಗಿನ ಅಭಿಮಾನಿಗಳು ಹಾರ್ದಿಕವಾಗಿ ಸ್ವೀಕರಿಸಿದ್ದಾರೆ. ಕರ್ಕಿ, ಇಡಗುಂಜಿ ಮೇಳದವರು ಮೆಚ್ಚಿಕೊಂಡಿದ್ದಾರೆ. 'ನೈಜ ಭಾವ, ಸಹಜಾಭಿನಯ' ಎನ್ನುವ ಹೊಗಳಿಕೆಯನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ನಾರಾಯಣ ಭಟ್ಟರ ಬಾಹುಕ ದಕ್ಷಿಣೋತ್ತರ ಜಿಲ್ಲೆಗಳ ರಂಗದಲ್ಲಿ ಮೂಡಿಸಿದ ದೊಡ್ಡ ಹೆಜ್ಜೆಯಿದು.

ಪಾಪಣ್ಣ ಮತ್ತು ಬಾಹುಕ - ಈ ಎರಡೂ ಪಾತ್ರಗಳ ನಡೆ, ಸ್ವಾಭಾವಗಳು ವಿಭಿನ್ನ. ಒಂದರಂತೆ ಇನ್ನೊಂದಿಲ್ಲ. ಪೆರುವೋಡಿಯವರ ಅಭಿವ್ಯಕ್ತಿಯಲ್ಲಿ ಇವೆರಡೂ ಬೇರೆ ಬೇರೆಯಾಗಿ ಗೋಚರವಾಗುತ್ತಿದ್ದುವು. ಕಾರ್ಕೋಟಕ ಕಚ್ಚಿದುದರಿಂದ ನಳನಿಗೆ ಪರಿಭವ. ಪಾಪಣ್ಣ ಹಾಗಲ್ಲ. ಅದು ಕೃತಕ ನಾಟಕ. ಪಾಪಣ್ಣನ ಹಿನ್ನೆಲೆಯಲ್ಲಿ ಸುಂದರ ರೂಪವಿದೆ ಎನ್ನುವ ಪ್ರಜ್ಞೆ ಪಾತ್ರಧಾರಿಯಲ್ಲಿದ್ದರೆ ಒಳ್ಳೆಯದು, ಕಿವಿಮಾತು.

ಪೆರುವೋಡಿಯವರ 'ಬಾಹುಕ' ಒಂದು ಕಾಲಘಟ್ಟದಲ್ಲಿ ಯಕ್ಷರಂಗದಲ್ಲಿ ಸಂಚಲನ ಮೂಡಿಸಿತ್ತು. ಬದುಕಿನಲ್ಲಿ ರಸ, ಭಾವಗಳು ಶುಷ್ಕವಾಗಿರುವಾಗ ಇಂತಹ ಪ್ರಸಂಗಗಳನ್ನು ಸ್ವೀಕರಿಸುವ ಪ್ರೇಕ್ಷಕರು ಎಷ್ಟಿದ್ದಾರೆ, ಎಂದು ಪ್ರಶ್ನಿಸುವ ಪೆರುವೋಡಿ ನಾರಾಯಣ ಭಟ್ಟರಿಗೆ ಈಗ ಎಂಭತ್ತೆಂಟರ ಹರೆಯ. (ಜನನ : 28-5-1927) ಉಮೇದು ಬಂದರೆ ಈಗಲೂ ಬಾಹುಕ, ಪಾಪಣ್ಣನಾಗುತ್ತಾರೆ!

*********************


ಲೇಖನ ಕೃಪೆ : yakshamatu.blogspot


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ