ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿಯವರಿಗೆ ಅಭಿಮಾನಿಗಳ ಅಭಿನಂದನೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಮಾರ್ಚ್ 22 , 2016
ಬಡಗುತಿಟ್ಟಿನ ರಾಜಹಾಸ್ಯ ಎಂದು ಗುರುತಿಸಲ್ಪಟ್ಟ ಹಳ್ಳಾಡಿ ಜಯರಾಮ ಶೆಟ್ಟರಿಗೆ ಈಗ ವರುಷ ಅರವತ್ತರ ಹರೆಯ ಹಾಗೂ ಐವತ್ತರ ಯಕ್ಷಗಾನ ತಿರುಗಾಟ. ಇದನ್ನು ಅರ್ಥಪೂರ್ಣಗೊಳಿಸಲು ಅವರ ಅಭಿಮಾನಿಗಳು ಎಪ್ರಿಲ್ 17 ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಇರಿಸಿಕೊಂಡಿದ್ದಾರೆ. ಬಳಿಕ ಖ್ಯಾತ ಕಲಾವಿದರಿಂದ ಚಂದ್ರಾವಳಿ ವಿಲಾಸ ಎಂಬ ಹಾಸ್ಯ ಪ್ರಸಂಗದ ಪ್ರದರ್ಶನವಿದೆ.

ಬಡಗುತಿಟ್ಟು ಯಕ್ಷಲೋಕದಲ್ಲಿ ಯಕ್ಷಗಾನ ಹಾಸ್ಯಪ್ರಿಯರಿಗೆ ಹಳ್ಳಾಡಿ ಎಂಬ ಊರು ಐತಿಹಾಸಿಕವಾಗಿ ತೆನ್ನಾಲಿ ಎಂಬಷ್ಟೆ ಚಿರಪರಿಚಿತ. ತನ್ನ ಶ್ರುತಿಬದ್ದ ಹಾಸ್ಯಮಿಶ್ರಿತ ಮಾತುಗಾರಿಕೆಯಿಂದ ಯಕ್ಷಗಾನದ ಗಂಭೀರ ರಾಜ ಹಾಸ್ಯ ಎಂದು ಗುರುತಿಸಿಕೊಂಡ ಅಪ್ರತಿಮ ಕಲಾಪ್ರತಿಭೆ ಹಳ್ಳಾಡಿ ಜಯರಾಮ ಶೆಟ್ಟರು ಕುಂಜಾಲು ರಾಮಕೃಷ್ಣ ಹಾಸ್ಯಗಾರರ ಹಾದಿಯಲ್ಲೆ ಕ್ರಮಿಸಿ ಯಶಸ್ಸು ಕಂಡವವರು. ಸಭ್ಯತೆಯ ಎಲ್ಲೆಯನ್ನು ಮೀರದೆ ಸುಸಂಸ್ಕೃತವಾಗಿ ಪಾತ್ರ ಪೋಷಣೆ ಮಾಡುತ್ತಾ ಪೌರಾಣಿಕ ಪ್ರಸಂಗದ ಹಾಸ್ಯಗಳಿಗೆ ಯತೋಚಿತ ನ್ಯಾಯ ಒದಗಿಸಿದ ಇವರನ್ನು ಹಾಸ್ಯ ಚಕೃವರ್ತಿ ಎಂದು ಕರೆಯಲಾಗುತ್ತಿದೆ.

ತನ್ನ ಹಾಸ್ಯಪಾತ್ರಗಳಲ್ಲಿ ಹಾಲಾಡಿ ಕೊರ್ಗು ಹಾಸ್ಯಗಾರ್, ಕುಂಜಾಲು ರಾಮಕೃಷ್ಣ, ವಿಟ್ಲ ಗೋಪಾಲಕೃಷ್ಣ ಜೋಶಿ ಮತ್ತು ಸಾಲ್ಕೋಡು ಗಣಪತಿ ಹೆಗಡೆಯವರನ್ನು ನೆನಪಿಸುತ್ತಾರೆ. ಈ ಮೂವರ ಪ್ರಭಾವವನ್ನು ಇವರ ಹಾಸ್ಯ ಪಾತ್ರಗಳಲ್ಲಿ ಗಮನಿಸಬಹುದಾಗಿದೆ. ಕೊರ್ಗು ಹಾಸ್ಯಗಾರರ ಜಾಪು, ಕುಂಜಾಲರ ರೂಪ, ಜೋಶಿಯವರ ನೆನಪು ಇವರ ಹಾಸ್ಯ ಪಾತ್ರಗಳಲ್ಲಿ ಪಡಿಮೂಡಿದೆ. ಸದ್ಯ ಅರವತ್ತರ ಸಂವತ್ಸರಕ್ಕೆ ಕಾಲಿಡುತ್ತಿರುವ ಇವರು ಯಕ್ಷಲೋಕದಲ್ಲಿ ಐವತ್ತು ವರ್ಷ ಮಿಂಚಿದ್ದು ಒಂದು ದಂತಕಥೆ.

ಸಭ್ಯತೆಯ ಸುಸಂಸ್ಕೃತ ಹಾಸ್ಯ ಚಕ್ರವರ್ತಿ

ಯಕ್ಷಗಾನ ಹಾಸ್ಯಗಾರರಲ್ಲಿ ಎರಡು ವಿಧ. ಏಕನೇಣಾ ಪ್ರಕರೇಣ ಎಂಬಂತೆ ಏನಾದರೂ ಮಾಡಿ ಪ್ರೇಕ್ಷಕರನ್ನು ನಗಿಸಬೇಕು ಎಂಬ ಧೋರಣೆಯಿಂದ ಅಶ್ಲೀಲ ಮಾತುಗಳನ್ನೇ ಆಡುತ್ತ ಯಕ್ಷಗಾನಕ್ಕೆ ಹೊರತಾದ ಭಂಗಿಗಳನ್ನು ಪ್ರದರ್ಶಿಸುವವರು ಒಂದು ವರ್ಗವಾದರೆ, ಸಭ್ಯತೆಯ ಎಲ್ಲೆಯನ್ನು ಮೀರದೆ, ಅಶ್ಲೀಲತೆಯನ್ನು ಪ್ರದರ್ಶಿಸದೆ, ಸುಸಂಸ್ಕೃತವಾಗಿ ತಾನು ನಗದೆ ಇತರರನ್ನು ನಗಿಸುವವರು ಇನ್ನೊಂದು ವರ್ಗ ಈ ವರ್ಗಕ್ಕೆ ಸೇರಿದ ಕೆಲವೇ ಕೆಲವು ಕಲಾವಿದರಲ್ಲಿ ಹಳ್ಳಾಡಿಯವರು ಒಬ್ಬರು.

ಹಳ್ಳಾಡಿ-ಶಿರಿಯಾರ ಪರಿಸರದ ಕಲಾವಿದರಿಗೆ ಹುಟ್ಟಿನಿಂದ ಬಂದ ಶ್ರುತಿ ಬದ್ದತೆ ಇವರ ಆಸ್ತಿ. ಎಂತಹ ಹಾಸ್ಯ ಸನ್ನಿವೇಶವೇ ಇರಲಿ ಅವರ ಮಾತು ಶ್ರುತಿ ಒಳಗೇ ಇರುತ್ತದೆ. ಮಾತ್ರವಲ್ಲ ಚೆಂಡೆಮದ್ದಳೆಯವರು ಕೂಡ ಅವರ ಮಾತಿನಲ್ಲಿ ಶ್ರುತಿ ಹೊಂದಿಸಬಹುದಾದ ಖಚಿತ ಶ್ರುತಿ ಅವರದ್ದು. ಹಾಸ್ಯಕ್ಕೆ ಬೇಕಾದ ಮಾತುಗಾರಿಕೆ ಅಪಾರ ಪ್ರತ್ಯುತ್ಪನ್ನ ಮತಿತ್ವ ಗಂಭೀರವದನ ತುಂಬು ಶರೀರ, ಶಾರೀರ, ಅಪಾರ ವಿಷಯಸಂಪತ್ತು, ನಿರರ್ಗಳವಾಗಿ ನಿರಾಯಾಸವಾಗಿ ನಿರಂತರವಾಗಿ ಪುಂಖಾನುಪುಂಖವಾಗಿ ಹರಿದು ಬರುವ ಮಾತುಗಾರಿಕೆ, ಧ್ವನಿವರ್ಧಕವಿಲ್ಲದೆಯೂ ಬಹುದೂರ ಕೇಳಿಸಬಹುದಾದ ತುಂಬು ಕಂಠ ಪೌರಾಣಿಕ ಹಾಸ್ಯ ಪಾತ್ರಗಳಲ್ಲಿ ಇವರಿಗೆ ಇರುವ ಹಿಡಿತ ಇವೇ ಕೆಲವು ಅಂಶಗಳು ಯಕ್ಷಲೋಕ ಇವರನ್ನು ಹಾಸ್ಯ ಚಕ್ರವರ್ತಿ ಎಂದು ಗುರುತಿಸಿದೆ.

ಯಕ್ಷಗಾನದಲ್ಲಿ ಕುಂದಗನ್ನಡದ ಸೊಗಸು ಮೇಳೈಸಿದ ಕಲಾವಿದ

ಭೀಷ್ಮವಿಜಯದ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ಬಲರಾಮ ದೂತ, ರಕ್ಕಸದೂತ, ಸಮುದ್ರ ಮಥನದ ಮೂಖಾಸುರ, ಕಾರ್ತವೀರ್ಯದ ಮೂಗ, ಮಂಥರೆ, ಕಂದರ ಬಾಹುಕ ಪಾತ್ರಗಳು ಇವರದ್ದೇ ಮರುಸೃಷ್ಟಿ ಎನ್ನಬಹುದಾಗಿದೆ. ಯಕ್ಷಗಾನ ಹಾಸ್ಯಪಾತ್ರಗಳಲ್ಲಿ ಕುಂದಾಪುರ ಆಡುಗನ್ನಡ ಬಳಸಿ ಕುಂದಗನ್ನಡವನ್ನು ಜನರಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭೀಷ್ಮಪ್ರತಿಜ್ಞೆಯ ಕಂದರ ಮತ್ತು ಹೊಸ ಸಾಮಾಜಿಕ ಪ್ರಸಂಗ ಈಶ್ವರಿ-ಪರಮೇಶ್ವರಿಯ ಕೋಳಿಪಡೆ ಕುಷ್ಟ ಈ ಎರಡೆ ಪಾತ್ರಗಳು ಸಾಕು ಅವರಿಗೆ ಕುಂದಾಪುರ ಕನ್ನಡದಲ್ಲಿ ಇರುವ ಹಿಡಿತವನ್ನು ತಿಳಿಯಲು. ಹಲವಾರು ಧ್ವನಿಸುರುಳಿಗಳಲ್ಲಿ ಅವರ ಕುಂದಗನ್ನಡದ ಸೊಗಸು ಮೇಳೈಸಿದೆ. ಕುಂದಗನ್ನಡಕ್ಕೆ ಯಕ್ಷಗಾನದಲ್ಲಿ ವಿಶೇಷ ಸ್ಥಾನ ಲಭಬಿಸುವಲ್ಲಿ ಇವರ ಕೊಡುಗೆ ಗಮನಾರ್ಹ

ಬಾಲ್ಯ, ಶಿಕ್ಷಣ ಮತ್ತು ಪಾದಾರ್ಪಣೆ

ಕುಂದಾಪುರ ತಾಲೂಕಿನ ಯಕ್ಷಗಾನದ ತವರೂರು ಮೇರು ಕಲಾವಿದರು ಜನ್ಮ ತಾಳಿದ ಶಿರಿಯಾರ ಸಮೀಪ ಹಳ್ಳಾಡಿ ಎಂಬಲ್ಲಿ, ಮದ್ಯಮ ವರ್ಗದ ಬಂಟ ಸಮಾಜದಲ್ಲಿ 1956ರಲ್ಲಿ ಜನಿಸಿದ‌ ಇವರು ಅಕ್ಕಮ್ಮ ಶೆಡ್ತಿ ಮತ್ತು ಅಣ್ಣಪ್ಪ ಶೆಟ್ಟಿ ದಂಪತಿಗಳ ಸುಪುತ್ರರು. ಎಳವೆಯಲ್ಲಿಯೇ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡ ಶೆಟ್ಟರು ಐದನೇ ತರಗತಿಗೆ ಮಂಗಳ ಹಾಡಿ ತನ್ನ 12ನೇ ವಯಸ್ಸಿಗೆ ಕಲಾಜೀವನ ಪ್ರಾರಂಭಿಸಿ ಸುಮಾರು 48 ವರ್ಷ ವೃತ್ತಿ ಕಲಾವಿದರಾಗಿ ದುಡಿಯುತಿದ್ದಾರೆ. ಅಮಾಸೆಬೈಲು ಕಿಟ್ಟಪ್ಪ ಹೆಬ್ಬಾರರು ಇವರನ್ನು ಮೇಳಕ್ಕೆ ಪರಿಚಯಿಸಿದರೆ ಹಿರಿಯ ಕಲಾವಿದ ಹಳ್ಳಾಡಿ ಮಂಜಯ್ಯ ಶೆಟ್ಟರು ಮೇಳದಲ್ಲಿ ಇವರಿಗೆ ಗುರುಗಳಾಗಿ ದೊರೆತರು .

ಉಳಿದದ್ದೆಲ್ಲ ಕಂಡು ಕೇಳಿ ಕಲಿತದ್ದೇ ಹೆಚ್ಚು. ಸತತ ಪ್ರಯತ್ನ, ಸ್ವಯಂ ಪ್ರತಿಭೆಯಿಂದ ರಂಗದಲ್ಲಿ ಸಾರ್ಥಕ ಯಶಸ್ಸುಕಂಡ ಹಳ್ಳಾಡಿಯವರು ನಾರ್ಣಪ್ಪ ಉಪ್ಪೂರರ ನಿರ್ದೇಶನದಲ್ಲಿ ಮೊದಲು ಹಾಸ್ಯ ಭೂಮಿಕೆ ನಿರ್ವಹಿಸಿ ಗೆಲವು ಕಂಡವರು. ಅಮೃತೇಶ್ವರಿ ಮೇಳದಲ್ಲಿ ಸಾಲ್ಕೋಡು ಗಣಪತಿ ಹೆಗಡೆಯವರ ಅನಿವಾರ್ಯ ಗೈರುಹಾಜರಿಯಲ್ಲಿ ಗುರು ನಾರ್ಣಪ್ಪ ಉಪ್ಪೂರರು ಇವರಲ್ಲಿ ಆ ಪಾತ್ರ ಮಾಡಿಸಿ ಅವರಿಂದ ಪ್ರಶಂಸೆ ಪಡೆದು ಮುಂದೆ ಹಾಸ್ಯಗಾರರಾಗಿ ಉತ್ತುಂಗಕ್ಕೆ ಏರಿದ್ದು ಈಗ ದಂತಕಥೆ. ಮುಂದೆ ನಿರಂತರ ಆರು ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.

ನಿರಂತರ 24 ವರ್ಷ ಸಾಲಿಗ್ರಾಮ ಮೇಳದಲ್ಲಿ ಸೇವೆ

ಸಾಕಷ್ಟು ಹರಕೆ ಆಟ ಸಿಗದೆ ‌ಆಧುನಿಕ ಹೊಸ ಪ್ರಸಂಗಗಳನ್ನು ಸಹ ಆಡುತಿದ್ದ ಆಗಿನ ಮಂದಾರ್ತಿ ಮೇಳದಲ್ಲಿ ನೆಲ್ಲೂರು ಮರಿಯಪ್ಪ ಆಚಾರ್ ರವರ ಹಿಮ್ಮೇಳದಲ್ಲಿ ಶ್ರೀ ದೇವಿ ಬನಶಂಕರಿಯ ಕಂಚೂಕಿ ಎಂಬ ಹಾಸ್ಯಪಾತ್ರ ಇವರಿಗೆ ಅಪಾರ ಜನಮನ್ನಣೆ ನೀಡಿತು. ದುರುಳನ ಅಟ್ಟಹಾಸಕ್ಕೆ ಹಾಸ್ಯಪಾತ್ರವೊಂದರ ದಾರುಣ ಅಂತ್ಯ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತಿತ್ತು. ಪೇತ್ರಿ ಮಾದುನಾಯ್ಕರ ಖಳನಾಯಕ ಚಮೂರ ಶೆಟ್ಟರ ಕಂಚುಕಿ ಜೋಡಿವೇಷದ ಈ ಪ್ರಸಂಗ ಬೋಜರಾಜ ಹೆಗ್ಡೆಯವರ ಮಂದಾರ್ತಿ ಮೇಳದಲ್ಲಿ ಜಯಬೇರಿ ಪಡೆದಿತ್ತು. ಮಂದಾರ್ತಿ ಮೇಳದಲ್ಲಿ ಇವರಿಗೆ ಕೀರ್ತಿ ತಂದುಕೊಟ್ಟ ಇನ್ನೊಂದು ಪಾತ್ರ ಕುಂಜಾಲರ ಪಡಿಯಚ್ಚು ಬೇಡರ ಕಣ್ಣಪ್ಪದ ಕಾಶೀಮಾಣಿಯ ಪಾತ್ರ.

ಕಮಲಶಿಲೆ ಪೆರ್ಡೂರು ಮುಲ್ಕಿ ಮುಂತಾದ ಮೇಳಗಳಲ್ಲಿ ಸೇವೆಸಲ್ಲಿಸಿದ ಇವರು ದೀರ್ಘಕಾಲ ಸೇವೆಸಲ್ಲಿಸಿದ ಇವರ ಬಹುಪಾಲು ತಿರುಗಾಟ ಬಡಗುತಿಟ್ಟಿನ ಪ್ರಸಿದ್ದ ಡೇರೆಮೇಳವಾದ ಸಾಲಿಗ್ರಾಮದಲ್ಲಿ ಹಳ್ಳಾಡಿಯವರಿಗೂ ಸಾಲಿಗ್ರಾಮ ಮೇಳಕ್ಕೂ ಅವಿನಾಭಾವ ಸಂಬಂದ. ನಿರಂತರ 24 ವರ್ಷ ಸಾಲಿಗ್ರಾಮ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಕಾಳಿಂಗ ನಾವಡ, ಜಲವಳ್ಳಿ ವೆಂಕಟೇಶ ರಾವ್ ಅರಾಟೆ ಮಂಜುನಾಥ, ರಾಮನಾಯರಿ, ಐರೋಡಿ ಗೋವಿಂದಪ್ಪ, ‌ಬಳ್ಕೂರ ಕೃಷ್ಣಯಾಜಿ, ಕೊಂಡದಕುಳಿಯವರ ದೀರ್ಘಕಾಲದ ಒಡನಾಡಿ. ಕಾಳಿಂಗ ನಾವಡರ ಅಪೂರ್ವ ಹಿಮ್ಮೇಳದಲ್ಲಿ ಬೆಳಿಯೂರು ಕೃಷ್ಣಮೂರ್ತಿಯೊಂದಿಗೆ ಇವರು ನಿರ್ವಹಿಸಿದ ಜೋಡಿ ಹಾಸ್ಯ ಪಾತ್ರಗಳು ಅಪಾರ ಯಶಸ್ಸುಗಳಿಸಿವೆ. ನಾಗಶ್ರೀ, ಚೆಲುವೆ ಚಿತ್ರಾವತಿ, ರತಿರೇಖ, ಚೈತ್ರಪಲ್ಲವಿ, ಈಶ್ವರಿ-ಪರಮೇಶ್ವರಿ ಪ್ರಸಂಗದ ಇವರ ಹಾಸ್ಯಪಾತ್ರಗಳು ಬಳ್ಕೂರು ಕೃಷ್ಣಯಾಜಿಯವರೊಂದಿಗಿನ ಜೋಡಿ ಪಾತ್ರಗಳು ಅಪಾರ ಯಶಸ್ಸು ಪಡೆದಿದ್ದವು.

ಮೂರುತಿಟ್ಟುಗಳ ಮೇಳಗಳಲ್ಲಿ ತಿರುಗಾಟ

ತೆಂಕಿನ ಕುಂಬಳೆ ಮೇಳದಲ್ಲೂ ತಿರುಗಾಟ ಮಾಡಿದ ಇವರು ಮೂರುತಿಟ್ಟುಗಳ ಕಲಾವಿದರೊಂದಿಗೆ ಹೊಂದಾಣಿಕೆಯಿಂದ ತಿರುಗಾಟ ಮಾಡಿದವರು. ಯಾಜಿಯವರ ಮತ್ತು ಹಳ್ಳಾಡಿಯವರ ಅಪೂರ್ವ ಹೊಂದಾಣಿಕೆಯ ಪೌರಾಣಿಕ ಮತ್ತು ಆದುನಿಕ ಪ್ರಸಂಗಗಳ ಜೋಡಿವೇಷಗಳು ಸಾಲಿಗ್ರಾಮ ಮೇಳಕ್ಕೆ ಹೊಸ ಪ್ರೇಕ್ಷಕರನ್ನೇ ಸ್ರಷ್ಟಿ ಮಾಡಿದೆ. ಯಾಜಿಯವರ ಬಲರಾಮನಿಗೆ ದೂತ ದೇವವ್ರತನಿಗೆ ಕಂದರ, ಕಂಸನಿಗೆ ರಜಕ, ದುಷ್ಟಬುದ್ದಿಗೆ ಕಪ್ಪದ ದೂತ ಇನ್ನೆಷ್ಟೋ ವೇಷಗಳು ಕಲಾರಸಿಕರು ಮರೆಯಲಾರದ್ದಾಗಿದೆ. ಸುಮಾರು ಮೂರು ತಲೆಮಾರಿನ ಹಿರಿಯ ಕಿರಿಯ ಭಾಗವತರು ಮತ್ತು ಸಹಕಲಾವಿದರೊಂದಿಗೆ ರಂಗಸ್ಥಳ ಹಂಚಿಕೊಂಡ ಮೇರು ಕಲಾವಿದನಾದರೂ, ಎನಗಿಂತ ಕಿರಿಯರಿಲ್ಲ ಎನ್ನುವ ಮನೋದರ್ಮದವರು. ಏಕಕಾಲದಲ್ಲಿ ಕಲಾವಿದನೂ ವಿಮರ್ಶಕನೂ ಆಗಬಲ್ಲ ವಿಚಕ್ಷಣಮತಿ.

ಪರಿಶುದ್ದ ಪಾರಂಪರಿಕ ಸೊಗಡಿನ ನೈಚ್ಯವಿಲ್ಲದ ಪರೀಷ್ಕೃತ ವ್ವಾಕರಣಬದ್ದ ವಾಗ್ಸರಣಿ, ಸುಸಂಸ್ಕೃತ ನೃತ್ಯಾಭಿನಯ ಖಚಿತ ಲಯಗಾರಿಕೆ ಪರಂಪರೆಯ ರಾಜ ಹಾಸ್ಯದ ಹೆಜ್ಜೆಗಾರಿಕೆ. ಅಪೂರ್ವವಾದ ಶ್ರುತಿಬದ್ದತೆ ಮುಂತಾದ ಯಕ್ಷ ಸಲ್ಲಕ್ಷಣಗಳಿಂದ ಪರಿಪಕ್ವಗೊಂಡ ಹಳ್ಳಾಡಿಯವರು ಯಕ್ಷಗಾನ ವಿಮರ್ಶಕರಿಂದ ರಾಜ ಹಾಸ್ಯಗಾರ ಎಂಬ ಬಿರುದನ್ನು ಪಡೆದವರು. ನೂರಾರು ಧ್ವನಿಸುರುಳಿ ವಿಡಿಯೋದಲ್ಲಿ ತನ್ನ ಹಾಸ್ಯಪಾತ್ರವನ್ನು ರಂಜಿಸಿದ ಇವರು ಮುಂಬೈ ಬಂಟರ ಸಂಘ, ಕರ್ನಾಟಕ ರಕ್ಷಣಾವೇದಿಕೆ ಸಹಿತ ನೂರಾರು ಸಂಘಸಂಸ್ಥೆಗಳಿಂದ ಸನ್ಮಾನಕ್ಕೆ ಬಾಜನರಾದವರು. ಮಡದಿ ರೇಣುಕಾ ಇಬ್ಬರು ಮಕ್ಕಳೊಂದಿಗೆ ಹಳ್ಳಾಡಿಯಲ್ಲಿ ವಾಸಿಸುತ್ತಿರುವ ಶೆಟ್ಟರು, ಐವತ್ತರ ಯಕ್ಷಗಾನ ತಿರುಗಾಟದ ಈ ಸಂದರ್ಭದಲ್ಲಿ ಅಭಿಮಾನಿಗಳು ಅಭಿನಂದನೆಗೆ ಸಜ್ಜಾಗುತ್ತಿರುವುದು ಸಮಯೋಚಿತವಾಗಿದೆ

*********************Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ