ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ತೆ೦ಕು ತಿಟ್ಟಿನ ಹಿರಿಯ ಹಾಸ್ಯರತ್ನ ಮಿಜಾರು ಅಣ್ಣಪ್ಪ ಅಸ್ತ೦ಗತ

ಲೇಖಕರು :
ಎಂ. ಶಾಂತಾರಾಮ ಕುಡ್ವ
ಮ೦ಗಳವಾರ, ಏಪ್ರಿಲ್ 5 , 2016

ಮಂಗಳೂರು ತಾಲೂಕಿನ ಮೂಡಬಿದಿರೆ ಸಮೀಪದ ಊರಾದ ``ಮಿಜಾರು ``ಮೂರು ವಿಷಯಗಳಿಂದ ಪ್ರಸಿಧ್ಧಿ ಹೊಂದಿದೆ. ಕೈ ಮಗ್ಗದ ಸೀರೆ, ``ಕಾಡು ಹೀರೆ ``( ಪಾಗೀಳ್) ಎಂಬ ಔಷಧಿಯುಕ್ತ ತರಕಾರಿ, ಯಕ್ಷರಂಗದ ಸುಪ್ರಸಿಧ್ಧ ಹಾಸ್ಯ ಕಲಾವಿದ ಶ್ರೀ ಮಿಜಾರು ಅಣ್ಣಪ್ಪರಿಂದಾಗಿ. ತನ್ನ ವ್ಯಕ್ತಿತ್ವದಿಂದಾಗಿ ತಾನು ಹುಟ್ಟಿದ ಊರಿನ ಹೆಸರನ್ನೇ ಎಲ್ಲೆಡೆ ಪಸರಿಸಿದ 93 ವರ್ಷ ವಯಸ್ಸಿನ ಮಿಜಾರು ಅಣ್ಣಪ್ಪರು, ಈಗ ಯಕ್ಷಗಾನದಿಂದ ನಿವೃತ್ತರಾದರೂ, ಅವರು ಯಕ್ಷಗಾನಕ್ಕೆ ಕೊಟ್ಟ ಅಮೂಲ್ಯ ಕೊಡುಗೆ ಮರೆಯುವಂತಿಲ್ಲ. ಅಪಾರ ಪೌರಾಣಿಕ ಜ್ಞಾನ, ಸಂದರ್ಭೋಚಿತವಾದ ಹಾಸ್ಯ, ಸಹಕಲಾವಿದರೊಂದಿಗೆ ಹೊಂದಿಕೊಂಡು ಹೋಗುವ ಚಾತುರ್ಯಗಳೊಂದಿಗೆ ಲಕ್ಷಾಂತರ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಗಳಿಸಿದವರು ಅಣ್ಣಪ್ಪರು.

ತುಳು ಪ್ರಸಂಗಗಳಲ್ಲಿ ಅಣ್ಣಪ್ಪರಷ್ಟು ವಿಜ್ರಂಭಿಸಿದವರು ಯಾರೂ ಇರಲಿಕ್ಕಿಲ್ಲ. ಕೋಟಿ ಚೆನ್ನಯದ ಪಯ್ಯ ಬೈದ್ಯ, ಜ್ಯೋತಿಷಿ , ದೇವುಪೂಂಜದ ಲಿಂಗಪ್ಪ ಆಚಾರಿ, ಕೋರ್ದಬ್ಬು ಬಾರಗದ ಕೋರ್ದಬ್ಬುವಿನ ಸಖನ ಪಾತ್ರ ಮುಂತಾದವೆಲ್ಲಾ ಅಣ್ಣಪ್ಪರಿಂದಲೇ ಸೃಷ್ಟಿಸಲ್ಪಟ್ಟ ಪಾತ್ರಗಳು. ``ಹಾಸ್ಯಚಕ್ರವರ್ತಿ ``, ``ಅಭಿನವ ತೆನಾಲಿ ``ಎಂದೆಲ್ಲಾ ರಸಿಕರಿಂದ ನೆಗಳ್ತೆಗೆ ಪಾತ್ರರಾದ ಅಣ್ಣಪ್ಪರು , ಯಕ್ಷಗಾನದ ಹಿನ್ನೆಲೆ ಇಲ್ಲದ ಕುಟುಂಬದಲ್ಲಿ ಜನಿಸಿಯೂ ಆಗಸದೆತ್ತರಕ್ಕೆ ಕೀರ್ತಿಪತಾಕೆ ಹಾರಿಸಿದ ಅಪ್ರತಿಮ ಯಕ್ಷ ಕಲಾವಿದರು. 68 ವರ್ಷಗಳ ಕಾಲ ಯಕ್ಷರಂಗವನ್ನು ಹಾಸ್ಯದ ಮೂಲಕ ಆಳಿದ ಈ ಶತಮಾನದ ಅಪೂರ್ವ ಕಲಾವಿದರು.

ಬಾಲ್ಯ, ಶಿಕ್ಷಣ ಮತ್ತು ಕಲಾಸೇವೆ

ಕೊರಗ ಗೌಡ - ಪಾರ್ವತಿ ದಂಪತಿಯ ಪುತ್ರರಾಗಿರುವ ಮಿಜಾರು ಅಣ್ಣಪ್ಪ ಅವರು 1923ರಲ್ಲಿ ಮಿಜಾರು ಗ್ರಾಮದ ಕಿಂಡೇಲುವಿನಲ್ಲಿ ಜನಿಸಿದರು. ಅಶ್ವತ್ಥಪುರದ ಶ್ರೀ ವಾಣಿವಿಲಾಸ ಹಿರಿಯ ಪ್ರಾಥಮಕ ಶಾಲೆಯಲ್ಲಿ 6ನೇ ತರಗತಿವರೆಗೆ ವಿದ್ಯಾಭ್ಯಾಸವನ್ನು ಪಡೆದು ನಂತರ 10ವರ್ಷ ಕೈಮಗ್ಗದ ಕೆಲಸದಲ್ಲಿ ತೊಡಗಿಸಿಕೊಂಡು ಮುಂದೆ ಹವ್ಯಾಸದಿಂದ ಕಲೆಗೆ ಆಕರ್ಷಿತರಾಗಿ ಸಣ್ಣಪ್ಪರಾಯರ ಗರಡಿಯಲ್ಲಿ ಒಂದು ವರ್ಷದ ನಾಟ್ಯ ಹಾಗೂ ಅರ್ಥಗಾರಿಕೆಯನ್ನು ಅಭ್ಯಾಸ ಮಾಡಿದ್ದರು.

ಬೆಳ್ತಂಗಡಿ ಪಟೇಲರು ನಡೆಸುತ್ತಿದ್ದ ಕೂಡ್ಲು ಮೇಳದಲ್ಲಿ 1940ರಲ್ಲಿ ಕಲಾಸೇವೆಗೆ ಪಾದಾರ್ಪಣೆ ಮಾಡಿದ ಅಣ್ಣಪ್ಪ ಅವರು ಪ್ರಸಿದ್ಧ ವಿದ್ವಾಂಸ ಕೂಡ್ಲು ಸುಬ್ರಾಯ ಶ್ಯಾನುಭೋಗರಿಂದ ಮಾರ್ಗದರ್ಶನವನ್ನು ಪಡೆದರು. 1941ರಿಂದ ಕಟೀಲು ಮೇಳಕ್ಕೆ ಸೇರ್ಪಡೆಗೊಂಡು ಎರಡು ವರ್ಷಗಳ ತಿರುಗಾಟ, ಇರಾ ಸೋಮನಾಥೇಶ್ವರ ಮೇಳದಲ್ಲಿ 10 ವರ್ಷ, ಕರ್ನಾಟಕ ಮೇಳದಲ್ಲಿ 38ವರ್ಷ, ಕೊನೆಯ ಎರಡು ವರ್ಷ ಮತ್ತೆ ಕಟೀಲು ಮೇಳದಲ್ಲಿ ಸೇವೆಗೈದಿರುವ ಇವರು ವಿವಿಧ ಶ್ರೇಷ್ಠ ಘಟಾನುಘಟಿ ಯಕ್ಷ ಕಲಾವಿದರಾದ ಒಡನಾಟದಲ್ಲಿ ಸೈ ಎನಿಸಿಕೊಂಡು 88ರ ಹರೆಯದಲ್ಲಿ ಕೊನೆಗೆ ವೃದ್ಧ ಬ್ರಾಹ್ಮಣ ಪಾತ್ರದ ಮೂಲಕ ರಂಗದಿಂದ ನಿವೃತ್ತಿ ಹೊಂದಿದರು.

ತುಳು ಪ್ರಸ೦ಗಗಳ ಆಕರ್ಷಣೆಯ ಕೇ೦ದ್ರ ಬಿ೦ದು

ತುಳು ಯಕ್ಷಗಾನವು ಆ ಕಾಲದಲ್ಲಿ ಯಶಸ್ಸು ಕಾಣುವಲ್ಲಿ ಹಾಸ್ಯ ಕಲಾವಿದರ ಪಾತ್ರ ಹಿರಿದು ಮಿಜಾರು ಅಣ್ಣಪ್ಪರದ್ದು ಸಹಜ ಲಾಲಿತ್ಯದ ಹಾಸ್ಯ. ಪಾತ್ರದ ಗುಣ ಸ್ವಭಾವ ಅರಿತು ನಟಿಸುವ ಕಲಾ ನೈಪುಣ್ಯತೆಯನ್ನು ರೂಡಿಸಿಕೊಂಡಿದ್ದರು. ಕರ್ನಾಟಕ ಮೇಳದಲ್ಲಿ ಪುಳಿಂಚ ರಾಮಯ್ಯ ರೈ ಎಂಬವರೂ ಪ್ರಮುಖ ಹಾಸ್ಯ ವೇಷಧಾರಿ. ಆದರೆ ಅಣ್ಣಪ್ಪರಿಗೆ ಹೆಚ್ಚಾಗಿ ಸಾತ್ವಿಕ ಗುಣವಿರುವ ಹಾಸ್ಯಪಾತ್ರವೇ ದೊರೆಯುತಿತ್ತು. ಅನಂತ ರಾಂ ಬಂಗಾಡಿಯವರ ``ಬೊಳ್ಳಿಗಿಂಡೆ`` ಪ್ರಸಂಗದಲ್ಲಿ ಬರುವ ಕೇಚುವಿನ ಪಾತ್ರ ಎಂತವರ ಮನಸ್ನಾನ್ನಾದರೂ ತಟ್ಟಬಲ್ಲದು. ಅತ್ತಿಗೆಯ ಮೋಸ ವಂಚನೆಗೆ ಗುರಿಯಾಗಿ ರಾಜಕುಮಾರನಾದರೂ ಕಷ್ಟಕ್ಕೆ ಈಡಾಗುವ ಅರಮನೆಯಿಂದ ಬೀದಿಗೆ ಬರುವ ಮಾಧ್ಯಮ ಬುದ್ಧಿಯ ಕೇಚುವಿನ ಅಭಿನಯ ಮನೋಜ್ಞವಾದುದು.

ಜಾನಪದ ಮೂಲದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದಾದ ``ಕೋಟಿ-ಚೆನ್ನಯ``ದ ಪಯ್ಯ ಬೈದ್ಯ ಅಣ್ಣಪ್ಪರ ಯಶಸ್ವಿ ಪಾತ್ರಗಳಲ್ಲಿ ಒಂದು. ``ಕಾಡಮಲ್ಲಿಗೆ`` ಎಂಬ ಜನಪ್ರಿಯ ಪ್ರಸಂಗದಲ್ಲಿ ಅಣ್ಣಪ್ಪರ ಪಾತ್ರವು ಕೇವಲ ಹಾಸ್ಯಪಾತ್ರವಾಗಿ ಉಳಿಯದೆ ಇಡೀ ಪ್ರಸಂಗಕ್ಕೆ ಪೋಷಕ ಪಾತ್ರವಾಗಿ ಉಳಿದಿದೆ. ``ಕಚ್ಚೂರಮಾಲ್ದಿ``ಯಲ್ಲಿ ಬರುವ ರಾಜು ಮುಗೇರ ಮಾನವತೆಯ ನಿಧಿಯಾಗಿ ಮೂಡಿ ಬರುತ್ತಾನೆ. ಉಳ್ಳವರ ವಂಚನೆಗೆ ತುತ್ತಾದ ರಾಜಕುಮಾರ-ಕುಮಾರಿಯರಿಗೆ ಆಶ್ರಯದಾತ ಅಜ್ಜನಾಗಿಯೇ ಮಿಜಾರ್ ಅವರ ಪಾತ್ರ ಮೂಡಿ ಬಂದಿದೆ. ಕೃಷ್ಣನ ಜೊತೆಗಿರುವ ಮಕರಂದನಾಗಿಯೂ ಇವರು ಯಶಸ್ಸು ಕಂಡವರು. ಅಣ್ಣಪ್ಪರ ವೃದ್ಧ ಬ್ರಾಹ್ಮಣವನ್ನು ನೋಡದ ಕಲಾರಸಿಕರೇ ವಿರಳ.

ಮಿಜಾರು ಅಣ್ಣಪ್ಪ
ಜನನ : 1923
ಜನನ ಸ್ಥಳ : ಕಿಂಡೇಲು, ಮಿಜಾರು ಗ್ರಾಮ
ಮೂಡಬಿದಿರೆ, ಮ೦ಗಳೂರು
ಕರ್ನಾಟಕ ರಾಜ್ಯ

ಕಲಾಸೇವೆ:
ತೆ೦ಕು ತಿಟ್ಟಿನ ಕಟೀಲು, ಇರಾ, ಕರ್ನಾಟಕ ಮೇಳಗಳಲ್ಲಿ ಸುಮಾರು 68 ವರ್ಷಗಳ ಕಾಲ ಕನ್ನಡ ಹಾಗೂ ವಿಶೇಷವಾಗಿ ತುಳು ಪ್ರಸ೦ಗಗಳಲ್ಲಿ ಅಜರಾಮರ ಪಾತ್ರಗಳನ್ನು ಚಿತ್ರಿಸಿದ ಮಹಾನ್ ಹಾಸ್ಯ ಕಲಾವಿದ.

ಪ್ರಶಸ್ತಿಗಳು:
  • ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 1996-97 ಸಾಲಿನ ಗೌರವ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ
  • ಶ್ರೀಕೃಷ್ಣ ಮಠದ ರಾಜಾಂಗಣದ ಗೌರವ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


ಮರಣ ದಿನಾ೦ಕ : ಎಪ್ರಿಲ್ 3, 2016

ನವಿರಾದ ಸಹಜ ಹಾಸ್ಯ ರಸಾಭಾವ

ನಾನು ಚಿಕ್ಕಂದಿನಲ್ಲಿ ತುಳು ಪ್ರಸಂಗ ನೋಡಲು ಮನೆಯಲ್ಲಿ ನನಗೆ ತಂದೆಯವರ ನಿರ್ಭಂಧವಿತ್ತು. ಆದರೂ ನಾನೊಮ್ಮೆ ತಂದೆಯವರ ಕಣ್ಣು ತಪ್ಪಿಸಿ ಕರ್ಣಾಟಕ ಮೇಳದವರ ಆಟಕ್ಕೆ ಹೋದೆ. ಮಧ್ಯರಾತ್ರಿ ಸಮಯ ಒಬ್ಬರ ಹಾಸ್ಯದ ಪ್ರವೇಶ. ಪರದೆ ಎತ್ತಿದ ಕೂಡಲೇ ಆ ಹಾಸ್ಯಗಾರರು ``ವಾ ಒಂಜಿ ಚಳಿ ಮಾರಾಯ್ರೇ ( ಎಂಥಹ ಚಳಿ ಮಾರಾಯ್ರೇ ) ಎಂದದ್ದೇ ತಡ ಇಡೀ ಸಭೆಯೇ ನಕ್ಕು ಚಪ್ಪಾಳೆ ತಟ್ಟಲಾರಂಭಿಸಿತು. ನಿಜವಾಗಿಯೂ ನನಗೆ ಇದರಲ್ಲೇನೂ ಹಾಸ್ಯ ಕಾಣಲಿಲ್ಲ. ಆದರೂ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಯಾಕೆ ನಕ್ಕಿದ್ದೆಂದು ನನಗೆ ತುಂಬಾ ಆಶ್ಚರ್ಯವಾಯಿತು. ನನ್ನ ಪಕ್ಕದಲ್ಲಿ ಕುಳಿತವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು. ``ಅವರು ಸುಪ್ರಸಿಧ್ಧ ಹಾಸ್ಯಗಾರರಾದ ಮಿಜಾರು ಅಣ್ಣಪ್ಪರು. ಅವರು ಈಗ ಹೇಳಿದ್ದು ಹಾಸ್ಯವಲ್ಲದಿರಬಹುದು. ಆದರೆ, ಮುಂದೆ ಅವರಿಂದ ಬರುವ ಹಾಸ್ಯಗಳಿಗೆ ಜನರ ಮೆಚ್ಚುಗೆ ಇದು`` ಎಂದರು. ಅಣ್ಣಪ್ಪರ ಪ್ರವೇಶಕ್ಕೇ ಪ್ರೇಕ್ಷಕರ ಸ್ಪಂದನೆಯಿದು. ನಾನು ಅಣ್ಣಪ್ಪರ ಹೆಸರು ಕೇಳಿದ್ದರೂ ಅವರ ಪಾತ್ರ ಅಂದೇ ಪ್ರಥಮವಾಗಿ ನೋಡಿದ್ದು. ನಂತರ ಅಣ್ಣಪ್ಪರಿಂದ ಹಾಸ್ಯದ ಹೊನಲೇ ಹರಿಯಿತು. ನಾನೂ ಅವರ ಅಭಿಮಾನಿಯಾದೆ. ಕರ್ಣಾಟಕ ಮೇಳದ ಆಟಗಳ ಖಾಯಾಂ ಪ್ರೇಕ್ಷಕನಾದೆ. ಮೆಲ್ಲಗೇ ಚೌಕಿಗೆ ಹೋಗಿ ಅಣ್ಣಪ್ಪರ ಪರಿಚಯ ಮಾಡಿಕೊಂಡೆ. ಕಾಲ ಕ್ರಮೇಣ ಅಣ್ಣಪ್ಪರೂ ನಾನೂ ತುಂಬಾ ಆಪ್ತರಾದೆವು.

ಅಣ್ಣಪ್ಪರಿಗೆ ವಿಜಯ, ಮಕರಂದ, ದಾರುಕ, ಬಾಹುಕ, ಮುಂತಾದ ಪೌರಾಣಿಕ ಪಾತ್ರಗಳು ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟರೂ, ಅಣ್ಣಪ್ಪರಿಗೆ ಪ್ರಸಿಧ್ಧಿಯನ್ನು ತಂದದ್ದು ತುಳು ಪ್ರಸಂಗಗಳ ವಿಭಿನ್ನ ಪಾತ್ರಗಳು. ಕೋಟಿ-ಚೆನ್ನಯ, ದೇವುಪೂಂಜ ಪ್ರತಾಪ, ಕಾಂತಾಬಾರೆ ಬುದಬಾರೆ, ಕೋರ್ದಬ್ಬು ಬಾರಗ, ಜಾಲಕೊರತಿ ಮುಂತಾದ ತುಳುನಾಡಿನ ಜಾನಪದ ಆಧಾರಿತ ಪ್ರಸಂಗಗಳ ಎಲ್ಲಾ ಹಾಸ್ಯ ಪಾತ್ರಗಳಿಗೆ ಮೂಲಚಿತ್ರಣ ಕೊಟ್ಟವರೇ ಅಣ್ಣಪ್ಪರು. ಉಳಿದ ಮೇಳಗಳ ಹಾಸ್ಯಗಾರರೆಲ್ಲಾ ಅಣ್ಣಪ್ಪರ ಚಿತ್ರಣವನ್ನೇ ಅನುಕರಿಸಿಕೊಂಡು ಹೋದದ್ದೆಂಬುದು ಸತ್ಯ. ಕಾಲ್ಪನಿಕ ತುಳು ಪ್ರಸಂಗಗಳಾದ ಕಾಡಮಲ್ಲಿಗೆಯ ಚೋಂಕ್ರ, ದಳವಾಯಿ ದುಗ್ಗಣ್ಣದ ಕಂಪಣ ಮೂಲ್ಯ, ಕೌಡೂರ ಬೊಮ್ಮೆಯ ಬೊಮ್ಮ, ಬೊಳ್ಳಿಗಿಂಡೆಯ ಹೆಡ್ಡ ಕೇಚು ಬಲ್ಲಾಳ ಮುಂತಾದ ಪಾತ್ರಗಳು ಅಣ್ಣಪ್ಪರನ್ನು ಉತ್ತುಂಗ ಶಿಖರಕ್ಕೇರಿಸಿದ ಪಾತ್ರಗಳು.

68 ವರ್ಷಗಳ ಸುದೀರ್ಘ ತಿರುಗಾಟ

ಶುಧ್ಧ ತುಳು ಭಾಷೆಯನ್ನೇ ಆಡುವ ಕೆಲವೇ ಬೆರಳೆಣಿಕೆಯ ಕಲಾವಿದರಲ್ಲಿ ಅಣ್ಣಪ್ಪರೂ ಓರ್ವರೆಂಬುದು ಉಲ್ಲೇಖನೀಯ. ಸಾಮಗ, ಕೊಳ್ಯೂರು ಹಾಗೂ ಅಣ್ಣಪ್ಪರ ಜೋಡಿ ಅತ್ಯಂತ ಪ್ರಸಿಧ್ಧ. ಕರ್ಣಾಟಕ ಮೇಳ ಪ್ರಸಿಧ್ಧಿ ಪಡೆಯಲು ಮಿಜಾರು ಅಣ್ಣಪ್ಪರ ಕೊಡುಗೆಯೂ ಅಪಾರ. ತಮ್ಮ 68 ವರ್ಷಗಳ ಸುದೀರ್ಘ ತಿರುಗಾಟದಲ್ಲಿ 60 ವರ್ಷಗಳನ್ನು ಒಂದೇ ಮನೆತನದ , ಮೂರು ತಲೆಮಾರಿನ ಯಜಮಾನರಲ್ಲೇ ಕಳೆದಿರುವದು, ಇವರ ಸ್ವಾಮಿನಿಷ್ಟೆಗೆ ಉತ್ತಮ ಉದಾಹರಣೆ. ( ದಿ. ಕೊರಗ ಶೆಟ್ಟಿ, ದಿ. ವಿಟ್ಟಲ ಶೆಟ್ಟಿ ಹಾಗು ದೇವಿಪ್ರಸಾದ್ ಶೆಟ್ಟಿ. )

ಅತ್ಯಂತ ಬಡತನದಲ್ಲಿ ಕುಡುಬಿ ಜನಾಂಗದಲ್ಲಿ ಹುಟ್ಟಿ ಜೀವನೋಪಾಯಕ್ಕಾಗಿ ಯಕ್ಷಗಾನವನ್ನೇ ಅವಲಂಬಿಸಿದವರು ಅಣ್ಣಪ್ಪರು. ಕರ್ಣಾಟಕ ಮೇಳ ಸೇರಿದ ಪ್ರಾರಂಭದಲ್ಲಿ ರಾಕ್ಷಸ ಪಾತ್ರ ಮಾಡುತ್ತಿದ್ದ ಅಣ್ಣಪ್ಪರು, ದಿ. ಕೊರಗಶೆಟ್ಟರ ಒತ್ತಾಯದ ಮೇರೆಗೆ ಹಾಸ್ಯಪಾತ್ರ ಮಾಡಲು ತಯಾರಾದರು. ಅದರಲ್ಲಿ ಯಶಸ್ವಿಯೂ ಆದರು. ಹೀಗೆ ದಿ. ಕೊರಗ ಶೆಟ್ಟರ ದೂರದರ್ಶಿತ್ವದಿಂದಾಗಿ ಯಕ್ಷರಂಗಕ್ಕೆ ಅನರ್ಘ್ಯ ಹಾಸ್ಯಗಾರರೊಬ್ಬರ ಸೃಷ್ಟಿಯಾಯಿತು. ಅಣ್ಣಪ್ಪರು ಯಾವದೇ ದುಶ್ಚಟಗಳನ್ನು ಹೊಂದದ ಕಾರಣ ದುಡಿಮೆಯಿಂದಲೇ ಆಸ್ತಿ ಗಳಿಸಿ ಉತ್ತಮ ಕೃಷಿಕರೆಂಬ ಪ್ರಸಿಧ್ಧಿಯನ್ನೂ ಹೊಂದಿದವರು. ಲಕ್ಷಾಂತರ ಅಭಿಮಾನಿಗಳ ಕಣ್ಮಣಿಯಾದ ಅಣ್ಣಪ್ಪರು ಸಾವಿರಾರು ಸಂಮಾನ ಪಡೆದವರು.

15 ವರ್ಷಗಳ ಹಿಂದೆ ಬೆಂಗಳೂರಿನ ಜಡ್ಜ್ ಓರ್ವರು, ಮಂಗಳೂರಿನಿಂದ ಮೂಡಬಿದಿರೆಯ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದರು. ದಾರಿಯಲ್ಲಿ ಮಿಜಾರು ತಲುಪಿದಾಗ ಪ್ರತಿಷ್ಟಿತ ಬಂಟ ಸಮಾಜದ ಆ ಜಡ್ಜ್ ರವರು, ಸುಪ್ರಸಿಧ್ಧ ಹಾಸ್ಯಗಾರ ಅಣ್ಣಪ್ಪರ ಊರಲ್ಲವೇ ಇದು ? ``ಎಂದು ತಮ್ಮ ಕಾರಿನ ಚಾಲಕರಲ್ಲಿ ವಿಚಾರಿಸಿ ಹೌದೆಂದು ಗೊತ್ತಾದ ಕೂಡಲೇ ನೇರವಾಗಿ ಅಣ್ಣಪ್ಪರ ಮನೆಗೇ ತೆರಳಿ ಅಣ್ಣಪ್ಪರ ಯೋಗಕ್ಷೇಮ ವಿಚಾರಿಸಿ, ಮುಂದಿನ ತಿಂಗಳಲ್ಲಿ ತಮ್ಮ ಮನೆಯಲ್ಲಿ ಜರಗಲಿರುವ ಖಾಸಗೀ ಸಮಾರಂಭಕ್ಕೆ ಬರಲೇಬೇಕೆಂದು ಆಹ್ವಾನಿಸಿದರು. ಮೂಡಬಿದಿರೆಯ ತಮ್ಮ ಸಂಬಂದಿಕರಲ್ಲೂ ಈ ವಿಷಯ ತಿಳಿಸಿ, ಅಣ್ಣಪ್ಪರನ್ನು ಬೆಂಗಳೂರಿಗೆ ಕರೆತರುವ ವ್ಯವಸ್ತೆಯನ್ನೂ ಮಾಡಿದರು. ಬೆಂಗಳೂರಿನಲ್ಲಿ ಅಣ್ಣಪ್ಪರಿಗೆ ಪಂಚತಾರಾ ಹೊಟೇಲಲ್ಲಿ ಉಳಕೊಳ್ಳುವ ವ್ಯವಸ್ತೆ ಮಾಡಿ, ಸಾಯಂಕಾಲದ ಸಮಾರಂಭದಂದು ಅಣ್ಣಪ್ಪರನ್ನು ವೇದಿಕೆಯಲ್ಲೇ ಕುಳ್ಳಿರಿಸಿ ಅದ್ದೂರಿ ಸಂಮಾನದೊಂದಿಗೆ ಅಲ್ಲಿ ನೆರೆದ ಅತಿಥಿಗಳಿಗೆ ಪರಿಚಯಿಸಿ ₹ 10,000/ ನಗದು ನೀಡಿದರು. ಆ ಕಾಲದಲ್ಲಿ ಇದು ದೊಡ್ಡ ಮೊತ್ತ ಎಂಬುದು ಗಮನಾರ್ಹ. ಇದಾಗಿ ಪ್ರತೀ ವರ್ಷ ಅಣ್ಣಪ್ಪರನ್ನು ಬೆಂಗಳೂರಿಗೆ ಕರೆಸಿ ಸಂಮಾನಿಸುತ್ತಿದ್ದರು. ( ಈ ವಿಷಯವನ್ನು ಅಣ್ಣಪ್ಪರೇ ನನಗೆ ತಿಳಿಸಿದ್ದರು )

ಸರಳಬದುಕಿನ ಹಸನ್ಮುಖದ ನಿಗರ್ವಿ ವ್ಯಕ್ತಿ

ಅಣ್ಣಪ್ಪರೊಂದಿಗೆ ನನಗೆ ಸುಮಾರು 30 ವರ್ಷಗಳ ಒಡನಾಟ. ಸುಪ್ರಸಿಧ್ದ ಕಲಾವಿದರಾದರೂ ನಿಗರ್ವಿ, ಸರಳಬದುಕಿನ ಹಸನ್ಮುಖದ ವ್ಯಕ್ತಿ. ಸದಾ ಬಿಳಿಪಂಚೆ ಹಾಗೂ ಶರ್ಟ್ ಧರಿಸುವ ಜೀವನಶೈಲಿ. ನಿಜ ಜೀವನದಲ್ಲೂ ಹಾಸ್ಯ ಪ್ರವೃತ್ತಿ ಉಳ್ಳವರು. ನನ್ನನ್ನು ``ಧನಿಗಳೇ ಎಂದು ಸಂಬೋಧಿಸುವಾಗ ನಾನು ಎಷ್ಟೋ ಸಲ ಆಕ್ಷೇಪಿಸಿ ನಿಮ್ಮಂಥಹ ಶ್ರೇಷ್ಟ ಕಲಾವಿದರು ಆ ರೀತಿ ಕರೆಯುವದು ನನಗೆ ಮುಜುಗರಕ್ಕೆ ಕಾರಣವಾಗುತ್ತದೆ ಎಂದರೂ, ಆ ``ಚಾಳಿ ಬಿಟ್ಟವರೇ ಅಲ್ಲ. ಉತ್ತಮ ಕೃಷಿಕರಾದ ಅಣ್ಣಪ್ಪರು, ತಮ್ಮ ಮನೆಯಲ್ಲಿ ಬೆಳೆಸುತ್ತಿದ್ದ ``ಕಾಡುಹೀರೆ ``ಯನ್ನು ವರ್ಷಕ್ಕೆರಡು ಭಾರಿ, ನನ್ನ ಅಂಗಡಿಗೆ ತಂದು ``ಧನಿಗಳಿಗೆ ಬುಲೆ ಕಾಣಿಕೆ ``ಎಂದು ತಂದು ಕೊಡುತ್ತಿದ್ದರು. ( ತಮ್ಮ ಯಜಮಾನರಾದ ವಿಟ್ಟಲ ಶೆಟ್ಟಿ, ನಿಟ್ಟೆ ಭಾಸ್ಕರ ಶೆಟ್ಟಿ ಹಾಗು ನನಗೆ ಮಾತ್ರ ಇದನ್ನು ನೀಡುತ್ತಿರುವದು ಎಂದು ನನ್ನಲ್ಲಿ ತಿಳಿಸಿದ್ದರು )

ನಾನು ಹಿಂದೊಮ್ಮೆ ``ಹೊಸದಿಗಂತ ``ಪತ್ರಿಕೆಯಲ್ಲಿ ಅವರ ಸಂಪೂರ್ಣ ವ್ಯಕ್ತಿ ಪರಿಚಯದ ಲೇಖನ ಬರೆದಿದ್ದೆ. ಅಣ್ಣಪ್ಪರ ಸಮಗ್ರ ಪರಿಚಯವನ್ನು ಬರೆದಿದ್ದೆ. ಅಣ್ಣಪ್ಪರು ಆ ಪತ್ರಿಕೆಯನ್ನು ಜತನದಿಂದ ತೆಗೆದಿಟ್ಟು ಎಲ್ಲರಿಗೂ ಓದಲು ಕೊಟ್ಟು ``ಇದನ್ನು ಬರೆದದ್ದು , ನಮ್ಮ ಕುಡ್ವರು`` ಎಂದು ಸಂಭೃಮಿಸಿದ್ದದ್ದು ನನಗೆ ಈಗಲೂ ನೆನಪಿದೆ. ಮಳೆಗಾಲದಲ್ಲಿ ಯಾವಾಗಲೂ ನನ್ನ ಅಂಗಡಿಯಲ್ಲಿ ನಾಲ್ಕೈದು ಘಂಟೆಗಳ ಕಾಲ ನನ್ನೊಂದಿಗೆ ಮಾತಾಡುವ ಪರಿಪಾಠ ಹೊಂದಿದ್ದರು. ``ಗುರುಗಳೇ, ನಿಮಗೇನು ತರಲಿ ಎಂದು ಕೇಳಿದರೆ ``ಮೂರು ಬೀಡಾ ಹಾಗೂ ಎರಡು ಲಿಂಬೆಯ ಚಾಕಲೇಟ್ ತರಿಸಿ ``ಎಂದು ಮುಗ್ಧತೆಯಿಂದ ಎನ್ನುತ್ತಿದ್ದರು. ಒಮ್ಮೆ ಅಣ್ಣಪ್ಪರೊಂದಿಗೆ ತಮಾಷೆಗಾಗಿ ಅಭ್ಯಾಸವಿಲ್ಲದಿದ್ದರೂ ಹೊಗೆಸೊಪ್ಪು ಮಿಶ್ರಿತ ಬೀಡಾ ತಿಂದು ತಲೆಸುತ್ತು ಬಂದಾಗ ಅಣ್ಣಪ್ಪರೇ ನನ್ನನ್ನು ಸಂಭಾಳಿಸಿ ಇನ್ನು ಮುಂದೆ ನೀವು ಬೀಡಾ ತಿನ್ನ ಬಾರದು ಎಂದು ಆಜ್ಞಾಪಿಸಿದ್ದರು.

ಮರೆಯಲಾರದ ತುಳು ಪ್ರಸ೦ಗಗಳ ಶ್ರೇಷ್ಠ ಪಾತ್ರಗಳು

ಅಣ್ಣಪ್ಪರ ಎಲ್ಲಾ ಹಾಸ್ಯಪಾತ್ರಗಳೂ ಶ್ರೇಷ್ಡ ಮಟ್ಟದ್ದೇ. ಆದರೂ ನನಗೆ ಅತ್ಯಂತ ಇಷ್ಟವಾದದ್ದು ``ದಳವಾಯಿ ದುಗ್ಗಣ್ಣ``ದ ಕಂಪಣಮೂಲ್ಯ ಅಮಾಯಕ ಮುಗ್ಧನ ಪಾತ್ರವದು. ಕಂಪಣನ ಮುಗ್ಧತೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದರು. ಈ ಪ್ರಸಂಗ ನೋಡಲು ನಾನು ಎಷ್ಟೇ ದೂರವಾದರೂ ಹೋಗುತ್ತಿದ್ದೆ, ಅಣ್ಣಪ್ಪರ ``ಕಂಪಣ ಮೂಲ್ಯ ``ಪಾತ್ರ ನೋಡಲು. ಆ ಪಾತ್ರ ನನ್ನನ್ನು ಅಷ್ಟು ವಶೀಕರಿಸಿತ್ತು. ಆಗೆಲ್ಲಾ ಅಣ್ಣಪ್ಪರು.

'' ನೀವು ಇಷ್ಟೆಲ್ಲಾ ದೂರ ಬರಬಾರದು. ನಿಮಗೆ ನಾಳೆ ಅಂಗಡಿಯಲ್ಲಿ ವ್ಯಾಪಾರ ಮಾಡಲಿಕ್ಕಿಲ್ಲವೇ ? `` ಎಂದು ನಯವಾಗಿ ಗದರಿಸುತ್ತಿದ್ದರು. ಆದರೂ ``ಕಂಪಣ ಮೂಲ್ಯ`` ನನಗೆ ಮರೆಯಲು ಆಗುತ್ತಿರಲಿಲ್ಲ. ಅಣ್ಣಪ್ಪರು ಬೈಯುತ್ತಾರೆಂದು, ಎಷ್ಟೋ ಬಾರಿ, ಚೌಕಿಗೆ ಹೋಗದೇ ``ದಳವಾಯಿ ದುಗ್ಗಣ್ಣ`` ಪ್ರಸಂಗ ನೋಡಿ, ಅಣ್ಣಪ್ಪರಲ್ಲಿ ಮಾತಾಡದೇ ಹೋದದ್ದು ಉಂಟು.

ಅಣ್ಣಪ್ಪರ ಇನ್ನೊಂದು ಶ್ರೇಷ್ಟ ಪಾತ್ರ ``ಬೊಳ್ಳಿಗಿಂಡೆ`` ಪ್ರಸಂಗದ ಕೇಚು. ಅರಸನ ಮಗನಾದರೂ ಹೆಡ್ಡನ ಪಾತ್ರವದು. ಇಡೀ ಸಭೆಯನ್ನು ಈ ಪಾತ್ರದ ಮೂಲಕ ಅಣ್ಣಪ್ಪರು ರಂಜಿಸುತ್ತಿದ್ದರು. ರಾ.ಸಾಮಗ, ಕೊಳ್ಳ್ಯೂರು, ಅಣ್ಣಪ್ಪರ ಜೋಡಿ ಸಂಭಾಷಣೆ ಈ ಪ್ರಸಂಗದ ಜೀವಾಳವಾಗಿತ್ತು. ``ಕಾಡಮಲ್ಲಿಗೆ`` ಯ ಸ್ವಾಮಿನಿಷ್ಟ ಚೋಂಕ್ರ, ಕೌಡೂರ ಬೊಮ್ಮಯ್ಯದ ಪೋಷಕ ಪಾತ್ರವಾದ ಬೊಮ್ಮಯ್ಯ ಎಲ್ಲಾ ಅಣ್ಣಪ್ಪರ ಹೆಸರನ್ನು ಆಗಸದೆತ್ತರಕ್ಕೆ ಏರಿಸಿದ ಪಾತ್ರಗಳು.

ಅರುವ ಕೊರಗಪ್ಪ ಶೆಟ್ಟರ ಋತುಪರ್ಣನಿಗೆ, ಅಣ್ಣಪ್ಪರ ಬಾಹುಕ ನನಗೆ ಅತೀ ಮೆಚ್ಚುಗೆಗೆ ಪಾತ್ರವಾದ ಇನ್ನೊಂದು ಪಾತ್ರ. ( ಹಿಂದೆ ಅಳಿಕೆ ರಾಮಯ ರೈಗಳ ಋತುಪರ್ಣನಿಗೆ ಅಣ್ಣಪ್ಪರ ಬಾಹುಕ ತುಂಬಾ ಪ್ರಸಿಧ್ಧಿಯಾಗಿತ್ತು.) ನಾನೊಮ್ಮೆ ಬಜ್ಪೆಯ ನಮ್ಮ ಸಂಘದ ಬಯಲಾಟಕ್ಕೆ ಅಣ್ಣಪ್ಪರನ್ನು ಕರೆಸಿ ಸಂಮಾನ ಮಾಡಿದ್ದೆ. ``ಭೀಷ್ಮವಿಜಯ ``ಪ್ರಸಂಗ. ನನ್ನದ್ದು ಭೀಷ್ಮ, ಅಣ್ಣಪ್ಪರ ವೃಧ್ಧ ಬ್ರಾಹ್ಮಣ. ನಾನು ಬ್ರಾಹ್ಮಣನನ್ನು ಕರೆಸಿ, ``ಅಯ್ಯಾ ಬ್ರಾಹ್ಮಣೋತ್ತಮರೇ, ಈ ಕೆಲಸಕ್ಕೆ ನೀವೇ ಅರ್ಹರು. ನಿಮ್ಮ ಪ್ರಾಯ ಹಾಗೂ ಯೋಗ್ಯತೆ ನೋಡಿ ಕೆಲವರು ನಿಮ್ಮನ್ನು 'ಅಣ್ಣಾ' ಎಂತಲೂ, ಕೆಲವರು ' ಅಪ್ಪಾ ' ಎಂತಲೂ, ಕೆಲವರು ಎರಡನ್ನೂ ಸೇರಿಸಿ ``ಅಣ್ಣಪ್ಪ ``ಎಂತಲೂ ಕರೆಯುತ್ತಾರೆ ಒಟ್ಟಿನಲ್ಲಿ ನಮ್ಮ ಸಭೆಯಲ್ಲಿ ನೀವೇ ಹಿರಿಯರು ``ಎಂದೆ. ಸಬೆ ನೆಗಾಡಿತು. ಆಗ ಅಣ್ಣಪ್ಪರು ಹೌದು ಆಚಾರ್ಯರೇ, ಕೊಡುವವರು ಹಾಗೂ ಕೂಡುವವರು ನೀವೇ ಇರುವಾಗ ನನಗೇನು ತೊಂದರೆ ``ಎಂದಾಗ ಸಭೆಯಿಡೀ ನಕ್ಕಿತು. ( ಕುಡ್ವ ಶಬ್ದವನ್ನು ಸ್ವಲ್ಪ ತಿರುಗಿಸಿ ಹೇಳಿ ಹಾಸ್ಯರಸ ಸೃಷ್ಟಿಸಿದ್ದರು. )

ಇನ್ನೊಮ್ಮೆ ಬಜ್ಪೆಯಲ್ಲಿ ``ಮಾಗಧವಧೆ`` ಶೇಣಿಯವರ ಮಾಗಧ, ಅಣ್ಣಪ್ಪರ ವಿಪ್ರ ಕೃಷ್ಣ, ನಾನು ಹಾಗೂ ನನ್ನ ತಮ್ಮ ಸತೀಶ ಕುಡ್ವನದ್ದು ಬ್ರಾಹ್ಮಣ ವೇಷದ ಭೀಮಾರ್ಜುನರು. ಅಣ್ಣಪ್ಪರು , ಶೇಣಿಯವರ ಮಾಗಧನಲ್ಲಿ ಮಾತಾಡುತ್ತಾ, ಇವರಿಬ್ಬರೂ ನನ್ನ ಶಿಷ್ಯಂದಿರು. ನೀನು ಏನೇ ಮಾತಾಡಲಿದ್ದರೂ ನನ್ನಲ್ಲೇ ಮಾತಾಡು.ಮಾತಾಡುವ ಜನರಲ್ಲ ಇವರು ``ಎಂದು ಶೇಣಿಯವರಿಗೆ ಸೂಚ್ಯವಾಗಿ ತಿಳಿಸಿ ನಮ್ಮ ಮರ್ಯಾದೆ ಉಳಿಸಿದ್ದರು.

ಬದುಕಿನ ಯಾತ್ರೆ ಕೊನೆಗೊಳಿಸಿದ ಹಾಸ್ಯ ರತ್ನ

ಆದರೂ ಇಂದು ಜೀವನ ಎಂಬುದನ್ನು ಸಾರ್ಥಕಗೊಳಿಸ ಬೇಕಾದುದು ಮಾನವನ ಕರ್ತವ್ಯ. ಅಣ್ಣಪ್ಪರು ಇದನ್ನು ನಿಜವಾಗಿಯೂ ಮಾಡಿ ತೋರಿಸಿದವರು. ಯಕ್ಷರಂಗದಲ್ಲಿ ಹಾಸ್ಯಕ್ಕೆ ತಾರಾಮೌಲ್ಯ ತಂದವರು , ತುಳು ಜಾನಪದ ಪ್ರಸಂಗಗಳ ಹಾಸ್ಯ ಪಾತ್ರಗಳಿಗೆ ಜೀವಂತ ಚಿತ್ರಣ ಕೊಟ್ಟು ಅಜರಾಮರವಾದವರು. ಸಾವಿರಾರು ಸಂಮಾನ ಪಡೆದು, ಲಕ್ಷಾಂತರ ಅಭಿಮಾನಿಗಳ ಮನ ಗೆದ್ದವರು ಅಣ್ಣಪ್ಪರು. ತಮ್ಮ ಕಲಾಚೈತ್ರ ಯಾತ್ರೆಯಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನ ಯಾಜಮಾನ್ಯತೆಯಲ್ಲಿ ತಿರುಗಾಟ ನಡೆಸಿದ ಏಕೈಕ ಯಕ್ಷಗಾನ ಕಲಾವಿದರು ಅಣ್ಣಪ್ಪರು ಮಾತ್ರ ಎಂಬುದು ಬಹುಷಃ ಯಕ್ಷಪ್ರಪಂಚದ ಮಟ್ಟಿಗೆ ದಾಖಲೆಯೇ ಹೌದು.

ಮುಖ್ಯಪ್ರಾಣ ಕಿನ್ನಿಗೋಳಿ, ಮಿಜಾರು ತಿಮ್ಮಪ್ಪ ರಂಥವರನ್ನು ಶಿಷ್ಯರನ್ನಾಗಿ ರೂಪಿಸಿದ ಅಣ್ಣಪ್ಪರು ಯಕ್ಷರಸಿಕರ ಕಣ್ಮಣಿ.

ಇದೀಗ ಮಿಜಾರಲ್ಲಿ ತಮ್ಮ ಮಗನಾದ ಉದ್ಯಮಿ ಸದಾಶಿವರ ಮನೆಯಲ್ಲಿ ನೆಲೆಸಿರುವ ಅಣ್ಣಪ್ಪರು ಮೊನ್ನೆ (ಎಪ್ರಿಲ್ 3 ರ೦ದು) ಹೃದಯಾಘಾತದಿ೦ದ ನಿಧನರಾಗಿದ್ದು, ತಾನೂ ನಕ್ಕು, ಪ್ರೇಕ್ಷಕರನ್ನೂ ನಗಿಸಿದ ಅಣ್ಣಪ್ಪರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಆ ಯಕ್ಷ ಕಲಾಮಾತೆಯಲ್ಲಿ ಪ್ರಾರ್ಥಿಸೋಣ.

****************

ಮಿಜಾರು ಅಣ್ಣಪ್ಪರವರ ಕೆಲವು ದೃಶ್ಯಾವಳಿಗಳು









****************

ಮಿಜಾರು ಅಣ್ಣಪ್ಪರವರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ರಾಜ್ ಸಕ್ಕಟ್ಟು, ಶಾ೦ತಾರಾಮ ಕುಡ್ವ ಹಾಗೂ ಅ೦ತರ್ಜಾಲದಲ್ಲಿ ಲಭಿಸಿದ ಸ೦ಗ್ರಹದಿ೦ದ)


ಕಲಾರಸಿಕರ ಸೂರೆಗೊ೦ಡ ಮಲ್ಪೆ ರಾಮದಾಸ ಸಾಮಗ, ಕೋಳ್ಯೂರು ರಾಮಚ೦ದ್ರ ರಾವ್ ಮತ್ತು ಮಿಜಾರು ಅಣ್ಣಪ್ಪನವರ ಅಪರೂಪದ ಭಾವಚಿತ್ರ




ಇತ್ತೀಚಿನ ಸಮಾರ೦ಭವೊದರಲ್ಲಿ ಸನ್ಮಾನ ಸಮಾರ೦ಭವೊ೦ದರಲ್ಲಿ







ಕೋಳ್ಯೂರು ರಾಮಚ೦ದ್ರ ರಾವ್ ಮತ್ತು ಮಿಜಾರು ಅಣ್ಣಪ್ಪ


****************



ಕೃಪೆ : ಪ್ರಸ್ತುತ ಲೇಖನವು ’ಕಣಿಪುರ’ ಯಕ್ಷಗಾನ ಮಾಸಪತ್ರಿಕೆಯಲ್ಲಿ ಪ್ರಕಟಗೊ೦ಡಿರುತ್ತದೆ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ