ಕಾಳಿಂಗ ನಾವಡರು ಸೃಷ್ಟಿಸಿದ ಭಾಗವತಿಕೆಯ ಹೊಸ ಶೈಲಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಮೇ 23 , 2016
|
ಯಕ್ಷಗಾನ ಭಾಗವತಿಯಲ್ಲಿ ಕ್ರಾಂತಿ ಮೂಡಿಸಿದ 25 ವರ್ಷದ ಹಿಂದೆ ನಮ್ಮನ್ನಗಲಿದ, ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ಥಕ ಕಾಳಿಂಗ ನಾವಡರು ಯಕ್ಷಗಾನ ಭಾಗವತಿಕೆಗೆ ಹೊಸದೊಂದು ಶೈಲಿಯನ್ನು ಹುಟ್ಟು ಹಾಕಿದವರು. ತಮ್ಮ ಕಂಚಿನ ಕಂಠದಿಂದ ಹೊಸ ಹೊಸ ಯಕ್ಷಗಾನೇತರ ರಾಗಗಳನ್ನು ಪರಿಚಯಿಸಿದ ಇವರು ಭೈರವಿ, ಮಧ್ಯಮಾವತಿ, ಮೋಹನ, ಬಿಲಹರಿ, ಸಾವೇರಿ, ಕಾಂಬೋದಿ ಮುಂತಾದ ಹಳೆಯ ರಾಗಗಳಿಗೆ ಹೊಸ ಸಂಚಾರ ನೀಡಿದವರು. ಚಾಂದ್, ಬೇಹಾಗ್, ಬಹುದಾರಿ, ಚಾರುಕೇಶಿ, ಅಬೇರಿ , ರೇವತಿ ಮುಂತಾದ ಯಕ್ಷಗಾನದಲ್ಲಿ ಬಳಕೆಯಾಗದ ರಾಗಗಳನ್ನು ಬಳಸಿಕೊಂಡು ಯಕ್ಷಗಾನಕ್ಕೆ ಹೊಸ ಹಿಮ್ಮೇಳಾಸಕ್ತರನ್ನು ಮುಖ್ಯವಾಗಿ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡರು, ನಾಗಶ್ರೀ ಪ್ರಸಂಗದ ``ನೀಲಾ ಗಗನದೊಳು ಮೇಘಗಳು``, ಚಲುವೆ ಚಿತ್ರಾವತಿಯ ``ಧರಣಿಮಂಡಲ ಮದ್ಯದೊಳಗೆ`` ಚೈತ್ರಪಲ್ಲವಿಯ ``ರಾಗಾನುರಾಗಿಣಿ`` ಮುಂತಾದ ಹೊಸ ಮಾದರಿಯ ಪದ್ಯಗಳನ್ನು ಹೊಸ ಹೊಸ ರಾಗದಲ್ಲಿ ಜನರಂಜಿಸುವಂತೆ ಹಾಡುತಿದ್ದರು .
|
ಕಾಳಿಂಗ ನಾವಡರು ಗುರು ಉಪ್ಪೂರರಿಗೆ ನಮಸ್ಕರಿಸುತ್ತಿದ್ದಾರೆ
|
ನಾವಡರು ಹೇಗೆ ತನ್ನ ಗುರುಗಳಾದ ನಾರ್ಣಪ್ಪ ಉಪ್ಪೂರರ ಮಾರ್ವಿ ಶೈಲಿಯ ಭಾಗವತಿಕೆ ಮತ್ತು ತಂದೆ ರಾಮಚಂದ್ರ ನಾವಡರ ಕುಂಜಾಲು ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡರು ಎನ್ನುವುದು ಅವರ ಹೊಸ ಶೈಲಿಯ ಉಗಮಕ್ಕೆ ಕಾರಣವಾಯಿತು. ಆರಂಭದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶೈಲಿಯಲ್ಲಿ ಹಾಡುತಿದ್ದ ಅವರು ಕ್ರಮೇಣ ತಂದೆಯವರ ಕುಂಜಾಲು ಶೈಲಿಗೆ ಹೊರಳಿಕೊಂಡರು. ಆಗ ಮಾರ್ವಿ ಹಾಗು ಕುಂಜಾಲು ಶೈಲಿಯ ಸುಂದರ ಸಂಗಮವಾಗಿ ಹೊಸ ಶೈಲಿಯ ಉಗಮವಾಯಿತು ಅದೇ ನಾವಡರ ಶೈಲಿ, ಇಂದು ಅನೇಕರು ಕುಂಜಾಲು ಶೈಲಿಯಲ್ಲಿ ಹಾಡಿದರೆ ಉಪ್ಪೂರರ ಶೈಲಿಯಲ್ಲಿ ಹಾಡಲಾರರು. ಉಪ್ಪೂರರ ಶೈಲಿಯ ಭಾಗವತರು ಕುಂಜಾಲು ಶೈಲಿಯಲ್ಲಿ ಹಾಡಲಾರರು. ನಾವಡರಂತ ಕೆಲವೇ ಕೆಲವರಿಗೆ ಮಾತ್ರ ಇದು ಸಾಧ್ಯವಾಗಿದೆ. ನಾವಡರು ಅತಿಯಾಗಿ ಮೆಚ್ಚುತಿದ್ದ ಕರ್ಣಾರ್ಜುನ ಕಾಳಗ, ದೌಪದಿ ಪ್ರತಾಪ, ಕೃಷ್ಣಾರ್ಜುನ, ರತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ಜಾಂಬವತಿ ಕಲ್ಯಾಣಕ್ಕೆ ಹೆಚ್ಚು ಪ್ರಚಲಿತವಿದ್ದ ಕುಂಜಾಲು ಶೈಲಿಯನ್ನೂ, ಚೂಡಾಮಣಿ, ರಾಮಾಂಜನೇಯ, ಭಸ್ಮಾಸುರ ಮುಂತಾದ ಪ್ರಸಂಗಗಳಿಗೆ ಮಾರ್ವಿ ಶೈಲಿಯನ್ನೂ ಬಳಸುತಿದ್ದರು.
ಕುಂಜಾಲು ಶೇಷಗಿರಿ ಕಿಣಿಯವರಿಂದ ಪ್ರಾರಂಭಗೊಂಡ ಕುಂಜಾಲು ಶೈಲಿಯನ್ನು ನೀಲಾವರ ರಾಮಕೃಷ್ಣಯ್ಯ, ಗೋರ್ಪಾಡಿ ವಿಠಲ ಪಾಟೀಲ್, ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್ ಸಮರ್ಥವಾಗಿ ರೂಡಿಸಿಕೊಂಡರು. ಅದೇ ಪರಂಪರೆಯಲ್ಲಿ ಹಾಡಿ ಮಂದಾರ್ತಿ ಮೇಳದಲ್ಲಿ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರು ನಾವಡರ ತಂದೆ ರಾಮಚಂದ್ರ ನಾವಡರು. ಇಲ್ಲಿ ಛಾಲು ಕುಣಿತಗಳು ಕಡಿಮೆ ಇದ್ದು ಮದ್ದಳೆಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ಇರಲಿಲ್ಲ. ತಂದೆ ಶ್ರೀನಿವಾಸ ಉಪ್ಪೂರರಿಂದ ಬಳುವಳಿಯಾಗಿ ಬಂದ ಮಾರ್ವಿ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ನಾರ್ಣಪ್ಪ ಉಪ್ಪೂರರು ಮದ್ದಳೆಗಾರ ಭೇಳಂಜೆ ತಿಮ್ಮಪ್ಪ ನಾಯ್ಕರು ಮತ್ತು ದುರ್ಗಪ್ಪ ಗುಡಿಗಾರರೊಂದಿಗೆ ಯಕ್ಷಗಾನ ಭಾಗವತಿಕೆಗೆ ಹೊಸ ಆವಿಷ್ಕಾರ ಮಾಡಿದರು. ಕುಣಿತದಲ್ಲಿ ನಿಪುಣರಾದ ಕೆರೆಮನೆ ಕಲಾವಿದರು, ಚಿಟ್ಟಾಣಿಯವರು, ವೀರಭದ್ರ ನಾಯ್ಕರು ,ಶಿರಿಯಾರ ಮಂಜುನಾಯ್ಕರು, ಕೋಟ ವೈಕುಂಠ ಮುಂತಾದವರು ಈ ಶೈಲಿಯನ್ನು ಸಮರ್ಥವಾಗಿ ರಂಗದಲ್ಲಿ ತೋರ್ಪಡಿಸಿದರು.
|
ಗುಂಡ್ಮಿ ರಾಮಚಂದ್ರ ನಾವಡರು, ಹಿರಿಯಡ್ಕ ಗೋಪಾಲ ರಾವ್ ರವರೊಂದಿಗೆ ಕಾಳಿಂಗ ನಾವಡರು
|
ಉಪ್ಪೂರರ ಶೈಲಿಯಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶ ಇರುವುದರಿಂದ ಉತ್ತರ ಕನ್ನಡದ ಕಲಾವಿದರು ಇದನ್ನು ಹೆಚ್ಚು ನೆಚ್ಚಿಕೊಂಡರು. ಶೇಷಗಿರಿ ಕಿಣಿ ಮತ್ತು ರಾಮಚಂದ್ರ ನಾವಡರ ಕುಂಜಾಲು ಶೈಲಿಯಲ್ಲಿ ಆಲಾಪಣೆಯ ಸೊಬಗಿದೆ. ಇಲ್ಲಿ ಹಿರಿಯಡ್ಕ ಗೋಪಾಲ ರಾಯರು, ಸುರಗಿಕಟ್ಟೆ ಬಸವಗಾಣಿಗರು ಪದ್ಯಕ್ಕಷ್ಟೇ ಮದ್ದಳೆ ನುಡಿಸುತಿದ್ದರು. ಹಾಗಾಗಿ ಇವೆರಡು ಬೇರೆ ಬೇರೆ ಶೈಲಿಗಳು. ಕಾಳಿಂಗ ನಾವಡರ ಇನ್ನೊಂದು ವಿಶೇಷ ಕಪ್ಪು ಮೂರರ ಶ್ರುತಿಗಿಂತಲೂ ಮೇಲೆ ಹಾಡಬಲ್ಲರು ಬಿಳಿ ಎರಡರ ಕೆಳಗೂ ಹಾಡಬಲ್ಲರು. ಕೆಲವರಿಗೆ ಏರು ಶ್ರುತಿ ಹೊರತು ಇಳಿಯಲ್ಲಿ ಹಾಡಲಾರರು ಇನ್ನು ಕೆಲವರು ಏರುಶ್ರುತಿಯಲ್ಲಿ ಹಾಡಲಾರರು. ಮಾರ್ವಿ ಶೈಲಿಯನ್ನು ತೆಂಕುತಿಟ್ಟಿನ ಬಲಿಪರ ಶೈಲಿಗೆ ಹೋಲಿಸಬಹುದು.
ಕುಂಜಾಲು ಶೈಲಿಯಲ್ಲಿ ಕರ್ನಾಟಕಿ ಸಂಗೀತದ ಛಾಯೆ ಇದೆ. ನಾವಡರು ಗುರುಗಳ ಮಾರ್ವಿ ಶೈಲಿಯನ್ನು ಬಳಸಿಕೊಂಡು ಕರ್ನಾಟಕಿ ಸಂಗೀತದ ಲೇಪ ಮಾಡಿ ಹೊಸ ಶೈಲಿಗೆ ಕಾರಣೀಕರ್ತರಾದರು. ಉಪ್ಪೂರರು ತನ್ನ ಅಪೂರ್ವವಾದ ಬಾಯಿತಾಳದ ಮೂಲಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೋಟ ವೈಕುಂಠ, ಎಂ. ಎ. ನಾಯ್ಕ, ಮುಂತಾದ ಅನೇಕ ಕಲಾವಿದರಲ್ಲಿ ಹುದುಗಿದ್ದ ಪ್ರತಿಬೆಯನ್ನು ಹೊರಗೆಳೆದರೆ ನಾವಡರು ಐರೋಡಿ ಗೋವಿಂದಪ್ಪ, ರಾಮ ನಾಯರಿ, ಅರಾಟೆ ಮಂಜುನಾಥ, ಶಿರಿಯಾರ ಮಂಜುನಾಯ್ಕ್, ಬಳ್ಕೂರ ಕೃಷ್ಣಯಾಜಿ, ಕೊಂಡದಕುಳಿ, ಗೋಪಾಲ ಆಚಾರ್ಯ, ಕಿನ್ನಿಗೋಳಿ, ಹಳ್ಳಾಡಿ, ಜಲವಳ್ಳಿ, ನಗರ ಜಗನ್ನಾಥ ಶೆಟ್ಟಿ, ಕುಮ್ಟಾ ಗೋವಿಂದ ನಾಯಕ್ ಮುಂತಾದವರ ಪ್ರಸಿದ್ದಿಗೆ ಕಾರಣರಾದರು. ಕರ್ಣಾರ್ಜುನ ಕಾಳಗ, ದೌಪದಿ ಪ್ರತಾಪ, ಜಾಂಬವತಿ ಕಲ್ಯಾಣ ಮುಂತಾದ ಪ್ರಸಂಗಗಳಲ್ಲಿ ಅವರ ಪದ್ಯ ಜಾನುವಾರುಕಟ್ಟೆಯವರ ಪದ್ಯವನ್ನು ಹೋಲುತ್ತಿರುವುದನ್ನು ಗಮನಿಸಬಹುದು.
ಆದರೆ ನಾವಡರ ಹೊಸ ಶೈಲಿ ಬಡಗುತಿಟ್ಟಿನ ಇನ್ನೊಂದು ಮೂರನೇ ಹೊಸ ಶೈಲಿ ಎಂದು ಎಲ್ಲಿಯೂ ದಾಖಲಾಗದಿದ್ದದ್ದು ಯಕ್ಷಗಾನದ ದೌರ್ಭಾಗ್ಯವೇ ಸರಿ.
*********************
ಚಿತ್ರ ಕೃಪೆ : ಸುದೇಶ್ ಶೆಟ್ಟಿ
|
|
|