ಯಕ್ಷಧ್ರುವ ಪಟ್ಲ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ರಾಜ : ಪೆರುವಾಯಿ ನಾರಾಯಣ ಶೆಟ್ಟಿ
ಲೇಖಕರು : ಎಲ್. ಎನ್. ಭಟ್ ಮಳಿಯ
ಶನಿವಾರ, ಮೇ 28 , 2016
ಯಕ್ಷಗಾನ ಕಲಾಕ್ಷೇತ್ರದಲ್ಲಿ ಮುಂಚೂಣಿಯ ಕಲಾವಿದರಾಗಿ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಪೆರುವಾಯಿ ನಾರಾಯಣ ಶೆಟ್ಟಿ. ಜಾಬಾಲಿ, ಅರುಣಾಸುರ, ರಕ್ತಬೀಜ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು, ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ "ಪೆರುವಾಯಿ ಶೈಲಿ' ಎಂಬ ಹೊಸ ಹಾದಿಯನ್ನು ನಿರ್ಮಿಸಿದ ಕೀರ್ತಿವಂತ.
ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ
ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ. ಬಂಟ್ವಾಳ ತಾಲೂಕು ಪೆರುವಾಯಿ ಇವರ ಹುಟ್ಟೂರು. ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ಇವರ ತಂದೆ-ತಾಯಿ.
ಶೆಟ್ಟರ ವಿದ್ಯಾಭ್ಯಾಸ 6ನೇ ತರಗತಿಯವರೆಗೆ ಮಾತ್ರ. ಆದರೆ, "ತುಳಸೀ ಜಲಂಧರ'ದ ಜಲಂಧರ, "ತಾಮ್ರ ಧ್ವಜ ಕಾಳಗ'ದ ತಾಮ್ರಧ್ವಜ, "ಕಟೀಲು ಕ್ಷೇತ್ರ ಮಹಾತ್ಮೆಯ ಅರುಣಾಸುರ ಮೊದಲಾದ ಪಾತ್ರಗಳಲ್ಲಿ ಅವರ ಅರ್ಥ ವಿಶ್ಲೇಷಣೆಯನ್ನು ಕೇಳಿದವರಿಗೆ ಶಾಲಾ ವಿದ್ಯಾಭ್ಯಾಸಕ್ಕೂ ಜ್ಞಾನಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದು ಅರಿವಾಗಿ ಅಚ್ಚರಿಯಾಗದೆ ಇರದು. ಎಳೆ ವಯಸ್ಸಿನಲ್ಲೆ ಯಕ್ಷಗಾನದತ್ತ ಆಕರ್ಷಿತರಾದ ಶೆಟ್ಟರು ಕುಂಡಾವು ಮೇಳದಲ್ಲಿ ರಂಗಪ್ರವೇಶ ಮಾಡಿದರು. ಬಾಯಾರು ಐತಪ್ಪ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್, ಅಳಿಕೆ ರಾಮಯ್ಯ ರೈ ಈ ಗುರುತ್ರಯರಿಂದ ಯಕ್ಷಗಾನ ಅಭ್ಯಾಸ ಮಾಡಿಕೊಂಡರು. ಇವರಿಗೆ ಕರುವೊಳು ದೇರಣ್ಣ ಶೆಟ್ಟಿ ಗೆಜ್ಜೆ ನೀಡಿ ಪ್ರೋತ್ಸಾಹಿಸಿದವರು.
ಕುರಿಯ ವಿಠಲ ಶಾಸ್ತ್ರಿಯವರಿ೦ದ ಭೇಷ್
ಕುರಿಯ ವಿಠಲ ಶಾಸ್ತ್ರಿಯವರ ನೇತೃತ್ವದ ಯಕ್ಷಗಾನ ತಂಡದಿಂದ ಕುರುಕ್ಷೇತ್ರ ಎಂಬ ಕಥಾನಕದ ಪ್ರದರ್ಶನವನ್ನು ಹಿರಿಯ ಸಂಶೋಧಕಿ ಮಾರ್ಥಾ ಆಸ್ಟನ್ ಏರ್ಪಡಿಸಿದ್ದರು. ಯಕ್ಷಗಾನದ ಬಗ್ಗೆ ಅಧ್ಯಯನಾರ್ಥವಾಗಿ ಕೈಗೊಂಡ ಈ ಪ್ರದರ್ಶನದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ಟರ ಅಭಿಮನ್ಯುವಿನ ಪಾತ್ರಕ್ಕೆ ಸಾರಥಿಯಾಗಿ ಪೆರುವಾಯಿ ನಾರಾಯಣ ಶೆಟ್ಟರು ವೇಷ ಮಾಡಿದ್ದರು. ಇವರ ಪ್ರತಿಭೆಯನ್ನು ಮೆಚ್ಚಿಕೊಂಡ ವಿಠಲ ಶಾಸ್ತ್ರಿಯವರು ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದ್ದು ಅವರ ಜೀವನದಲ್ಲಿ ದೊರೆತ ಬಹುದೊಡ್ಡ ತಿರುವು.
ಎರಡನೇ ಪುಂಡು ವೇಷಧಾರಿಯಾಗಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾಮಂಡಳಿಯಲ್ಲಿ ಸೇವೆ ಸಲ್ಲಿಸುವ ಸುಯೋಗ ಇವರದಾಯಿತು. ಕಟೀಲು ಮೇಳವೊಂದರಲ್ಲಿಯೇ 23 ವರ್ಷ ತಿರುಗಾಟ ಮಾಡಿದ ಇವರಿಗೆ ದೇವಿ ಮಹಾತ್ಮೆಯ ರಕ್ತಬೀಜ, ಕಟೀಲು ಕ್ಷೇತ್ರ ಮಹಾತ್ಮೆಯ ಅರುಣಾಸುರ, ವಿಶೇಷವಾಗಿ ಗದಾಯುದ್ಧದ ಕೌರವ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಪೊಳಲಿ ರಾಜರಾಜೇಶ್ವರಿ ಮೇಳದಲ್ಲಿ (ತೆಂಕು-ಬಡಗು ಎರಡೂ ಶೈಲಿಯ ಆ ಕಾಲದ ಮೇಳ) ಕೂಡ ಇವರು 13 ವರ್ಷ ಸೇವೆ ಸಲ್ಲಿಸಿದ್ದಾರೆ.
ಪೆರುವಾಯಿ ನಾರಾಯಣ ಶೆಟ್ಟಿ
ಜನನ
:
1942
ಜನನ ಸ್ಥಳ
:
ಪೆರುವಾಯಿ, ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಮೇಳಗಳಲ್ಲಿ 4 ದಶಕಗಳ ಕಾಲ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ``ಯಕ್ಷರಂಗದ ರಾಜ`` ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು ತಾಳಮದ್ದಳೆಯಲ್ಲಿಯೂ ಯಶಸ್ವೀ ಅರ್ಥಧಾರಿ.
ತಾಳಮದ್ದಳೆಯಲ್ಲಿಯೂ ಯಶಸ್ವೀ ಅರ್ಥಧಾರಿ
ಶ್ರೀಕೃಷ್ಣ ಲೀಲೆಯ ಕಂಸನನ್ನೂ ಚೆನ್ನಾಗಿ ಮಾಡುವ ನಾರಾಯಣ ಶೆಟ್ಟರದು ಗಾಂಭೀರ್ಯದ, ಭಾವ ಪ್ರಧಾನ, ಪ್ರತ್ಯುತ್ಪನ್ನಮತಿತ್ವದ ಉತ್ತಮ ವೇಷ. ಒಳ್ಳೆಯ ಅರ್ಥಗಾರಿಕೆ. ಕಿರಿಯ ಬಲಿಪ ಭಾಗವತರ ಭಾಗವತಿಕೆಯಲ್ಲಿ ಗದಾಯುದ್ಧದ ಕೌರವನಾಗಿ ಪೆರುವಾಯಿ ನಾರಾಯಣ ಶೆಟ್ಟರಿಗೆ ಒಳ್ಳೆಯ ಹೆಸರು ಪ್ರಾಪ್ತವಾಯಿತು. ಸುಯೋಧನನ ಪಾತ್ರದ ವಿಶೇಷತೆಗಳನ್ನು ಚೆನ್ನಾಗಿ ಬಲ್ಲ ಪೆರುವಾಯಿಯವರು ಆ ಬಗ್ಗೆ ಅಧ್ಯಯನಾತ್ಮಕ, ಚಿಂತನಯೋಗ್ಯ ವಿಚಾರಗಳನ್ನು ಮಂಡಿಸುತ್ತಾರೆ.
ತಾಳಮದ್ದಳೆಯಲ್ಲಿಯೂ ಯಶಸ್ವೀ ಅರ್ಥಧಾರಿಯಾಗಿ ವಿವಿಧ ಪಾತ್ರಗಳ ನಿರ್ವಹಣೆಯಲ್ಲಿ ಶೆಟ್ಟರು ನಿಸ್ಸೀಮರು. ಸಂಧಾನದ ಕೌರವ, ಶರಸೇತು ಬಂಧನದ ಹನುಮಂತ, ಅರ್ಜುನ, ಕರ್ಣಾರ್ಜುನದ ಕರ್ಣ, ಅತಿಕಾಯ ಮೋಕ್ಷದ ಅತಿಕಾಯ ಹೀಗೆ ಎಲ್ಲ ಬಗೆಯ ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ.
ಪ್ರಸಿದ್ಧ ಯುವ ಕಲಾವಿದ, ಅರ್ಥಧಾರಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಪೆರುವಾಯಿ ಅವರಿಂದ ಪ್ರೋತ್ಸಾಹಿಸಲ್ಪಟ್ಟ ಪ್ರತಿಭೆ. ಹವ್ಯಾಸಿ ಕಲಾವಿದರಾಗಿ ಪ್ರಸಿದ್ಧಿ ಪಡೆದಿರುವ ತಜ್ಞ ವೈದ್ಯ ಡಾ| ಭಾಸ್ಕರಾನಂದ ಕುಮಾರ್ ಅವರು ನಾರಾಯಣ ಶೆಟ್ಟರ ಕೌರವನ ಪಾತ್ರವನ್ನು ಮೆಚ್ಚಿಕೊಳ್ಳುತ್ತಾರೆ.
ಕುಟು೦ಬ, ಸನ್ಮಾನ , ಪ್ರಶಸ್ತಿಗಳು
ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಒಳಗೊಂಡ ಸಂಸಾರ ಇವರದು. ಬಾಕ್ರಬೈಲು ಪಾತೂರಿನಲ್ಲಿ ನೆಲೆಸಿದ್ದಾರೆ. 74ರ ಹರೆಯದ ನಾರಾಯಣ ಶೆಟ್ಟರು ಕೃಷಿಯೊಂದಿಗೆ ಯಥಾಸಾಧ್ಯ ಕಲಾಸೇವೆ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಶಿಸ್ತುಬದ್ಧ ನಾಟ್ಯ, ಅಭಿನಯ, ಅರ್ಥ ಗಾರಿಕೆ, ಯಕ್ಷಗಾನ ರಾಜವೇಷದ ಬಹುಮುಖ ಗಳನ್ನು ಪ್ರಕಟಿಸಬಲ್ಲ ಗೌರವಾರ್ಹ ನಾರಾಯಣ ಶೆಟ್ಟರನ್ನು ಅನೇಕ ಸಂಘಸಂಸ್ಥೆಗಳು ಅಭಿನಂದಿಸಿವೆ. ಉಡುಪಿಯ ತುಳುಕೂಟ ಈ ವರ್ಷದ ರಾಮದಾಸ ಸಾಮಗ ನೆಂಪುದ ಪ್ರಶಸ್ತಿಯೂ ಸೇರಿದ೦ತೆ ಕರ್ನಾಟಕ ಯಕ್ಷಗಾನ ಅಕಾಡೆಮಿ, ಬಂಟರ ಸಂಘ ಬೆಂಗಳೂರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ, ಕಲಾರಂಗ ಉಡುಪಿಯ ಗೌರವ, ಅಖೀಲ ಭಾರತ ತುಳು ಕೂಟ, ಕಾವೂರು ವತಿಯಿಂದ ಸಮ್ಮಾನ, ಯಕ್ಷಸಿಂಧೂರ ವಿಟ್ಲ ಇವರಿಂದ ಸಮ್ಮಾನ ನಡೆದಿದೆ.
2016ನೇ ಸಾಲಿನ ಚೊಚ್ಚಲ ``ಯಕ್ಷಧ್ರುವ ಪಟ್ಲ ಪ್ರಶಸ್ತಿ ``
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನೀಡಲಾಗುವ 2016ನೇ ಸಾಲಿನ ಚೊಚ್ಚಲ ಒ೦ದು ಲಕ್ಷ ರೂ. ನಗದನ್ನು ಹೊಂದಿರುವ ಪಟ್ಲ ಪ್ರಶಸ್ತಿಯನ್ನು ಮೇ.22ರಂದು ಮಂಗಳೂರು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ನೀಡಲಾಯಿತು. ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ‘ಯಕ್ಷರಂಗದ ರಾಜ’ ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ಯೋಗ್ಯವಾಗಿಯೆ ಸ೦ದಿದೆ.
****************
ಪೆರುವಾಯಿ ನಾರಾಯಣ ಶೆಟ್ಟಿಯವರ ಕೆಲವು ವಿಡಿಯೊಗಳು
ಕಟೀಲು ಸಿತ್ಲ ರ೦ಗನಾಥ ರಾವ್ ನಡೆಸಿಕೊಟ್ಟ ವಿಡಿಯೊ ಸ೦ದರ್ಶನ
ಶಿಶುಪಾಲನ ಪಾತ್ರದಲ್ಲಿ ಅಬ್ಬರದ ಪ್ರವೇಶ
ದೇವಿ ಮಹಾತ್ಮೆಯ ರಕ್ತಬೀಜನ ಪಾತ್ರದಲ್ಲಿ
****************
ಪೆರುವಾಯಿ ನಾರಾಯಣ ಶೆಟ್ಟಿಯವರ ಕೆಲವು ಛಾಯಾ ಚಿತ್ರಗಳು ( ಕೃಪೆ :ಮಧುಸೂಧನ ಅಲೆವೂರಾಯ, ಕಟೀಲು ಸಿತ್ಲ ರ೦ಗನಾಥ ರಾವ್ ಹಾಗೂ ಅ೦ತರ್ಜಾಲದ ಅನಾಮಿಕ ಮಿತ್ರರು )
2016ನೇ ಸಾಲಿನ ಚೊಚ್ಚಲ ``ಯಕ್ಷಧ್ರುವ ಪಟ್ಲ ಪ್ರಶಸ್ತಿ `` ಸನ್ಮಾನ ಸಮಾರ೦ಭದಲ್ಲಿ
ಹಿರಿಯ ಕಲಾವಿದ ಕು೦ಬ್ಳೆ ಸು೦ದರ ರಾವ್ ಸನ್ಮಾನಿಸುತ್ತಿರುವುದು.
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.