``ಗಾನ ಗಂಧರ್ವ`` ಪದ್ಯಾಣ ಗಣಪತಿ ಭಟ್ಟರಿಗೆ 60ರ ಸಂಭ್ರಮದ ಸನ್ಮಾನ
ಲೇಖಕರು : ಉದಯವಾಣಿ
ಭಾನುವಾರ, ಜೂನ್ 5 , 2016
|
ಸುಮಾರು 70ರ ದಶಕದಲ್ಲಿ ಯಕ್ಷಗಾನದ ಭವಿಷ್ಯದ ಬಗ್ಗೆ ಕಾಡುತ್ತಿದ್ದ ಚಿಂತನೆ ಪ್ರಸಕ್ತ ದಿನಗಳಲ್ಲೂ ಕಾಣಿಸುತ್ತಿದೆ. ಹೀಗಾಗಿ ಯಕ್ಷಗಾನದ ಮುಂದಿನ ಪರಂಪರೆಗೆ ಯಾರು ಎಂಬ ಬಗ್ಗೆ ನಮ್ಮೊಳಗೆ ಗಂಭೀರ ಚಿಂತನೆ ಮಾಡುವ ಆವಶ್ಯಕತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಯಕ್ಷಗಾನದ ಹಿರಿಯ, ಪ್ರಸಿದ್ಧ ಭಾಗವತ "ಗಾನ ಗಂಧರ್ವ' ಪದ್ಯಾಣ ಗಣಪತಿ ಭಟ್ಟರಿಗೆ 60ರ ಸಂಭ್ರಮದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ (ಜೂ. 4, ಜೂ. 5) ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ದ್ವಿದಿನ ಕಲೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಬ್ಬ ಪ್ರಸಿದ್ಧ ಕಲಾವಿದ ಪ್ರಸಕ್ತ ನಿವೃತ್ತಿಯಾದರೆ ಅಥವಾ ಮೇಳವನ್ನು ಬಿಟ್ಟು ಹೋದರೆ ಆ ಮೇಳವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಇನ್ನೋರ್ವ ಯಾರು ಎಂಬ ಬಗ್ಗೆ ಇಂದು ಬಹಳಷ್ಟು ಯೋಚನೆ ಮಾಡಬೇಕಾ ಗಿದೆ. ಯಕ್ಷಗಾನದ ಬಗ್ಗೆ ತುಡಿತ/ಆಸಕ್ತರಿಗೆ ಅಭ್ಯಸಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈ ಹಿಂದೆ ಆರಂಭಿ ಸಿದ್ದ ಯಕ್ಷಗಾನ ಕಲಾ ಕೇಂದ್ರ ಇಂದು ಆಸಕ್ತ ಹಾಗೂ ಪ್ರೌಢಿಮೆಯ ವಿದ್ಯಾರ್ಥಿಗಳ ಕೊರತೆ ಎದುರಿಸಿ ಕಳೆದ 2 ವರ್ಷಗಳಿಂದ ಮುಚ್ಚಿದೆ. ಹೀಗಾಗಿ ಯಕ್ಷಗಾನಕ್ಕೆ ಮುಂದೆ ಯಾರು ಎಂಬ ಅಪಾಯ ಬಾರದ ಹಾಗೆ ಹವ್ಯಾಸಿ ಕಲಾವಿದರು/ಅತಿಥಿ ಅಥವಾ ಆಸಕ್ತ ಕಲಾವಿದರು ಇನ್ನಷ್ಟು ಹೆಚ್ಚಾಗಿ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುವ ತುಡಿತವನ್ನು ತೋರಬೇಕು ಎಂದವರು ಕರೆ ನೀಡಿದರು.
ಕಾಲ ಮಿತಿ; ಜನತೆ ಒಪ್ಪಿದ್ದಾರೆ
200 ವರ್ಷಗಳ ಇತಿಹಾಸವನ್ನು ಪಾಲಿಸಿಕೊಂಡು ಬಂದ ಧರ್ಮಸ್ಥಳ ಮೇಳದ ಯಕ್ಷಗಾನವನ್ನು ಈಗ ಕಾಲಮಿತಿಗೆ ಪರಿವರ್ತನೆಗೊಳಿಸ ಲಾಗಿದೆ. ವಿಶೇಷ ಅಂದರೆ ಈ ಸಂದರ್ಭ ದಲ್ಲಿ ಯಾವುದೇ ಹಂತದಲ್ಲಿ ಯಾವ ರೂಪದಲ್ಲಿ ಕೂಡ ಸಮಸ್ಯೆ ಎದುರಾಗ ಲಿಲ್ಲ. ಪ್ರದರ್ಶನದ ಪರಿವರ್ತನೆಯನ್ನು ಜನರು ಗೌರವಿಸಿದ್ದಾರೆ ಎಂದವರು ಹೇಳಿದರು.
ವೈಯಕ್ತಿಕ ನಡೆ ನುಡಿ ಹಾಗೂ ತನ್ನದೇ ಶೈಲಿಯ ಹಾಡುಗಾರಿಕೆಯ ಮೂಲಕ ಪದ್ಯಾಣ ಗಣಪತಿ ಭಟ್ ಅವರು ಯಕ್ಷಗಾನದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಕಾರ್ಯ ಎಂದು ಡಾ| ಹೆಗ್ಗಡೆ ಅವರು ಅಭಿನಂದಿಸಿದರು.
ನಾದ/ಲಯಬದ್ಧ ಭಾಗವತ: ಸುಬ್ರಹ್ಮಣ್ಯ ಶ್ರೀ
ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸಂಗೀತ ಹಾಗೂ ಸಾಹಿತ್ಯ ಪ್ರಕಾರಗಳ ಮೂಲಕವಾಗಿ ಮನುಷ್ಯ ತನ್ನ ವ್ಯಕ್ತಿತ್ವ ಚೇತನವನ್ನು ಕಾಣಲು ಸಾಧ್ಯ. ರಾಗದಲ್ಲಿ ಬದ್ಧತೆ, ನಾದದಲ್ಲಿ ಲಯಬದ್ಧತೆಯನ್ನು ಕಾಯ್ದುಕೊಂಡು ಯಕ್ಷಗಾನದಲ್ಲಿ ಪದ್ಯಾಣ ಅವರು ನಡೆಸಿದ ಸಂಗೀತ ಲೋಕ ಅತಿ ಮಧುರ ಎಂದರು.
ಪದ್ಯಾಣ ಗಣಪತಿ ಭಟ್ಟ ಹಾಗೂ ಶೀಲಾ ಗಣಪತಿ ಭಟ್ಟ ದಂಪತಿಯನ್ನು ಪೇಟ, ಶಾಲು, ಸ್ಮರಣಿಕೆ ಸೇರಿದಂತೆ 6,06,060 ರೂ. ನಗದು ಬಹುಮಾನ ದೊಂದಿಗೆ ಸಮ್ಮಾನಿಸಲಾಯಿತು.
ಸಚಿವ ಅಭಯಚಂದ್ರ ಜೈನ್ ಸಾಕ್ಷéಚಿತ್ರ ಬಿಡುಗಡೆ ಮಾಡಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ. ಶ್ಯಾಮ್ ಭಟ್, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.
ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಸಮ್ಮಾ ನಿತರ ಪರಿಚಯ ಮಾಡಿದರು. ನಾ. ಕಾರಂತ ಪೆರಾಜೆ ಅವರು ಅಭಿನಂದನ ಗ್ರಂಥ ಪರಿಚಯ ಮಾಡಿದರು. ಶೇಣಿ ಮುರಳಿ ಸಾಕ್ಷéಚಿತ್ರ ಪರಿಚಯ ಮಾಡಿದರು. ಟಿ. ಮಹಾಬಲೇಶ್ವರ ಭಟ್ಟ ತೋಡುಗುಳಿ ವಂದಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ಕೃಪೆ :
udayavani
*********************
|
|
|