ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಇಡಗುಂಜಿ ಮೇಳಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಧನಸಹಾಯ ನಿರಾಕರಣೆ

ಲೇಖಕರು :
ಕಟೀಲು ಸಿತ್ಲ ರಂಗನಾಥ ರಾವ್
ಭಾನುವಾರ, ಜೂನ್ 19 , 2016

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ಈ ಚಾರಿತ್ರಿಕವಾದಂತಹ ಯಕ್ಷಗಾನ ಸಂಸ್ಥೆಯನ್ನು ಯಕ್ಷಗಾನ ಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿಯನ್ನು ಗಳಿಸಿರುವ ದಿ|| ಕೆರೆಮನೆ ಶಿವರಾಮ ಹೆಗಡೆಯವರು 1934 ರಲ್ಲಿ ಸ್ಥಾಪಿಸಿದರು.

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಸ೦ಸ್ಥಾಪಕ ದಿ|| ಕೆರೆಮನೆ ಶಿವರಾಮ ಹೆಗಡೆಯವರು
ಡಾ|| ಶಿವರಾಮ ಕಾರಂತರು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಕೃಷಿಯನ್ನು, ತಮ್ಮ ಪರಿಕಲ್ಪನೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡುವ ಮುನ್ನವೇ ಸ್ಥಾಪನೆಯಾಗಿರುವ ಸ್ವಾಯತ್ತತೆಯ ಸಂಸ್ಥೆಯಿದು. ಯಾವುದೇ ದೇವಳದ ಅಥವಾ ಇನ್ನಿತರ ಸಂಸ್ಥೆಯ ಅಧಿಕಾರದ ವ್ಯಾಪ್ತಿಗೆ ಒಳಪಡದೇ ಇರುವ ಸ್ವಾಯತ್ತ ಸಂಸ್ಥೆಯಾಗಿ ಅಂದಿನಿಂದ ಇಂದಿನವರೆಗೂ ಯಕ್ಷಗಾನಕ್ಕೆ ಬೇಕಾಗಿ ಅನವರತ ಪ್ರಯತ್ನಶೀಲತೆಯಿಂದ ಕಾರ್ಯಪ್ರವೃತ್ತವಾಗಿದೆ. ದಿ|| ಕೆರೆಮನೆ ಶಿವರಾಮ ಹೆಗಡೆಯವರು ಈ ಮೇಳದ ಪ್ರದರ್ಶನವನ್ನು ಕರ್ನಾಟಕದೆಲ್ಲೆಡೆ ನೀಡಿ ಜನಮನ್ನಣೆಯನ್ನು ಪಡೆದಿರುವವರು. ಅವರ ಸಾಧನೆಯನ್ನು ಪರಿಗಣಿಸಿ 1965 ರಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. 1970 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವತಿಯಿಂದ ಪ್ರಶಸ್ತಿಯನ್ನು ನೀಡಲಾಗಿತ್ತು. 1985 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಲಾಗಿತ್ತು.

ದಿ|| ಕೆರೆಮನೆ ಶಿವರಾಮ ಹೆಗಡೆಯವರ ಮಗ ದಿ|| ಕೆರೆಮನೆ ಶಂಭು ಹೆಗಡೆಯವರು ಮುಂದೆ ಈ ಸಂಸ್ಥೆಯನ್ನು ಮುನ್ನಡೆಸಿದರು. ದಿ|| ಕೆರೆಮನೆ ಶಂಭು ಹೆಗಡೆಯವರೂ ಕೂಡ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯ ಜತೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಸಾಧನೆಯ ಮುಖೇನ ಗಳಿಸಿಕೊಂಡವರು. ದಿ|| ಕೆರೆಮನೆ ಶಂಭು ಹೆಗಡೆಯವರು ಇದೇ ಸಂಸ್ಥೆಯ ಅಂಗಸಂಸ್ಥೆಯ ರೂಪದಲ್ಲಿ ಶ್ರೀಮಾಯ ಯಕ್ಷಗಾನ ಕಲಾಕೇಂದ್ರವನ್ನು ಸ್ಥಾಪಿಸಿ ಯಕ್ಷಗಾನ ನಾಟ್ಯ, ಅಭಿನಯ, ಭಾಗವತಿಕೆ ಇತ್ಯಾದಿ ಯಕ್ಷಗಾನದ ಸರ್ವ ಅಂಗಗಳ ವಿದ್ಯೆಯನ್ನು ನೀಡಲಾರಂಭಿಸಿದರು. ಒಂದು ಸರಕಾರ, ಹಲವು ಮೇಳಗಳುಳ್ಳ ಮೇಳದ ಯಜಮಾನ ಸ್ಥಾನದಲ್ಲಿರುವ ದೇವಳಗಳು ಮಾಡಬೇಕಾದ ಕಾರ್ಯವನ್ನು ಒಬ್ಬ ವ್ಯಕ್ತಿ ಒಂದು ಸಂಸ್ಥೆಯನ್ನು ರೂಪೀಕರಿಸಿಕೊಂಡು ಮಾಡುವುದು ಸಾಧಾರಣದ ಮಾತಲ್ಲವೇ ಅಲ್ಲ.

ಮಂಡಳಿಯ ಅಂಗಸಂಸ್ಥೆ ``ಶ್ರೀಮಾಯ ಯಕ್ಷಗಾನ ಕಲಾಕೇಂದ್ರ`ದ ಸ೦ಸ್ಥಾಪಕ ದಿ|| ಕೆರೆಮನೆ ಕೆರೆಮನೆ ಹೆಗಡೆಯವರು
ದಿ|| ಕೆರೆಮನೆ ಶಂಭು ಹೆಗಡೆಯವರಂತೂ ಯಕ್ಷಗಾನದ ತಮ್ಮ ತತ್ವ ನಿಷ್ಠೆಗಳನ್ನು ಎಂತಹಾ ಸಂಕಷ್ಟದ ಸಮಯದಲ್ಲಿಯೂ ಬಿಟ್ಟುಕೊಡಲಿಲ್ಲ. ಯಕ್ಷಗಾನದ ಅಭ್ಯುದಯವನ್ನು ಮಾತ್ರವೇ ಮುಖ್ಯ ಹಾಗೂ ಮೂಲ ಉದ್ದೇಶವಾಗಿಟ್ಟುಕೊಂಡು ಆರ್ಥಿಕವಾದ ಸಂಕಷ್ಟವನ್ನು ಅನುಭವಿಸಿದವರು. ಅಂತಹಾ ಆರ್ಥಿಕ ಸಂಕಷ್ಟದಲ್ಲಿಯೂ ಕೂಡ ಹಣಸಂಪಾದನೆಗಾಗಿ ಈ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಬಲಿಕೊಡದೇ, ಬಲು ಕಷ್ಟದಿಂದ ಮತ್ತು ಅಷ್ಟೇ ಮುತುವರ್ಜಿಯಿಂದ ಈ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದವರು ಎನ್ನುವುದನ್ನು ಶ್ರೀ ಗುರುರಾಜ ಮಾರ್ಪಳ್ಳಿಯವರು ತಮ್ಮ ಸಂದರ್ಶನದಲ್ಲಿ ಹೇಳಿರುವುದು ನನಗೆ ನೆನಪಿಗೆ ಬರುತ್ತದೆ.

ಪ್ರಸ್ತುತ ಕೆರೆಮನೆ ಶಿವಾನಂದ ಹೆಗಡೆಯವರು ಈ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. University of California, Los Angeles, ನಿಂದ ನಡೆದ Asia-Pacific Performance Exchange (APPEX) ಕಾರ್ಯಕ್ರಮದಲ್ಲಿ ಭಾರತ ದೇಶದಿಂದ ಆಯ್ಕೆಯಾದ ಈರ್ವರು ಕಲಾವಿದರಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರು ಒಬ್ಬರು. ಕೆರೆಮನೆ ಶಿವಾನಂದ ಹೆಗಡೆಯವರು ಕಥಕ್ ನಾಟ್ಯವನ್ನು ಖ್ಯಾತ ಕಥಕ್ ನೃತ್ಯಪಟು ಮಾಯಾ ರಾವ್ ಅವರಿಂದ ಅಭ್ಯಸಿಸಿಯೂ ಇದ್ದಾರೆ. ಇಂದೀಗ ಕೆರೆಮನೆ ಶಿವಾನಂದ ಹೆಗಡೆಯವರು ಈ ಸಂಸ್ಥೆಯನ್ನು ತನ್ನ ಅಜ್ಜ ಮತ್ತು ತಂದೆಯವರಷ್ಟೇ ಕಾಳಜಿಯಿಂದ ಯಕ್ಷಗಾನ ಕಲೆಯ ಹಿತಾಸಕ್ತಿಗೆ ಮಾರಕವಾಗುವ ಯಾವುದೇ ರಾಜಿಯನ್ನು ಮಾಡದೇ ಅಜ್ಜ ಮತ್ತು ತಂದೆಯವರ ಆದರ್ಶವನ್ನೇ ಮುಂದಿಟ್ಟುಕೊಂಡು ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾ ಮುನ್ನಡೆಸುತ್ತಿದ್ದಾರೆ.

ದಿ|| ಕೆರೆಮನೆ ಶಿವರಾಮ ಹೆಗಡೆಯವರ ಕಾಲಘಟ್ಟದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಕಪ್ಪೆಕೆರೆ ಮಹಾದೇವ ಹೆಗಡೆ ಮೊದಲಾದ ಯಕ್ಷಗಾನದ ಅದ್ಭುತ ಪ್ರತಿಭೆಗಳ ಉಗಮಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಗೋವಿಂದ ನಾಯ್ಕ, ಕೋನಳ್ಳಿ, ಉಪ್ಪುಂದ ನಾಗೇಂದ್ರ ರಾವ್, ಮಂಕಿ ಈಶ್ವರ ನಾಯ್ಕ ಇಂತಹ ಅಪೂರ್ವ ಕಲಾವಿದರೂ ಈ ಸಂಸ್ಥೆಯ ಗರಡಿಯಲ್ಲಿ ಪಳಗಿ ಬೆಳಗಿದವರು ಮತ್ತು ಬೆಳಗುತ್ತಿರುವವರು.

ಈ ಸಂಸ್ಥೆ ಭಾರತದಾದ್ಯಂತ ಅನೇಕಾನೇಕ ಯಕ್ಷಗಾನ ಪ್ರದರ್ಶನಗಳನ್ನು ಕಳೆದ 5 ರಿಂದ 6 ದಶಕಗಳಿಂದ ನೀಡುತ್ತಿದೆ. ಅಮೇರಿಕಾ, ಇಂಗ್ಲೆಂಡು, ಫ಼್ರಾನ್ಸ್, ಸ್ಪೈನ್, ಚೀನಾ ದಕ್ಷಿಣ ಏಶ್ಯಾದ ಹಲವು ರಾಷ್ಟ್ರಗಳು ಮುಂತಾಗಿ ವಿದೇಶಗಳಲ್ಲಿಯೂ ಈ ಸಂಸ್ಥೆ ಯಕ್ಷಗಾನದ ಪ್ರದರ್ಶನಗಳನ್ನು ಪ್ರಾತ್ಯಕ್ಷಿಕೆಗಳನ್ನು ನೀಡಿದೆ. Indian Council for Cultural Relations ನ ಸಹಯೋಗದೊಂದಿಗೆ 2000 ದಲ್ಲಿ ದಕ್ಷಿಣ ಏಷ್ಯಾದ ಪ್ರವಾಸವನ್ನು ಕೈಗೊಂಡು ಅನೇಕ ಪ್ರದರ್ಶನಗಳನ್ನೂ, ಪ್ರಾತ್ಯಕ್ಷಿಕೆಗಳನ್ನೂ ನೀಡಿದೆ.

ಪ್ರಸ್ತುತ, ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಕೆರೆಮನೆ ಶಿವಾನಂದ ಹೆಗಡೆಯವರು
ಇಷ್ಟು ಮಾತ್ರವಲ್ಲದೇ ಈ ಸಂಸ್ಥೆಯಿಂದ ಅನೇಕ ಯಕ್ಷಗಾನಕ್ಕೆ ಮೀಸಲಾದ ಕಾರ್ಯಕ್ರಮಗಳು ನಿರಂತರ ನಡೆಯುತ್ತಲೇ ಇರುತ್ತದೆ. ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ದರ್ಶಿಸಿರಿ yakshaganakeremane.com ಮತ್ತು wikipedia

ಗುರುಕುಲ ಪದ್ಧತಿಯ ಮಾದರಿಯಲ್ಲಿ ಈ ಸಂಸ್ಥೆಯಲ್ಲಿ ಯಕ್ಷಗಾನ ಶಿಕ್ಷಣವನ್ನೂ ನೀಡಲಾಗುತ್ತಿದೆ. ಇಂದೀಗ ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗಾನವನ್ನು ಕಲಿಸಿಕೊಡುವ ಕೇಂದ್ರಗಳೇ ಇಲ್ಲವಾಗುತ್ತಿದೆ. ನನಗೆ ತಿಳಿದಿರುವಂತೆ ಸದ್ಯ ಇರುವುದು ನಾಲ್ಕು ಕೇಂದ್ರಗಳು. ಒಂದು ತೆಂಕುತಿಟ್ಟಿನ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಮತ್ತು ಬಡಗುತಿಟ್ಟಿನಲ್ಲಿ , ಅದೂ ಉತ್ತರಕನ್ನಡದಲ್ಲಿ ಗುರುಕುಲ ಪದ್ಧತಿಯಲ್ಲಿರುವ ಕೆರೆಮನೆಯವರ ಶ್ರೀಮಾಯ ಯಕ್ಷಗಾನ ಕಲಾಕೇಂದ್ರ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಡುಪಿ ಮತ್ತು ಹಂಗಾರಕಟ್ಟೆ ಯಕ್ಷಗಾನ ಕೇಂದ್ರ. ಯಕ್ಷಗಾನವನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂದೆಲ್ಲ ಬೊಬ್ಬಿಡುವ ನಾವು ಇಂತಹ ಕೇಂದ್ರಗಳನ್ನು ಉಳಿಸಿಕೊಳ್ಳುವಲ್ಲಿ ಮತ್ತು ಬೆಳೆಸುವಲ್ಲಿ ಎಳ್ಳಿನಿತೂ ಮುತುವರ್ಜಿಯನ್ನು ವಹಿಸುತ್ತಿಲ್ಲ.

ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇಂತಹ ಸರಕಾರದ ಸಂಸ್ಥೆಗಳೂ ಕೂಡ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವ ಇಂತಹ ಸಂಸ್ಥೆಗಳಿಗೆ ನೀಡುವ ಅಲ್ಪ ಸಹಾಯವನ್ನೂ ವಿಳಂಬಗೊಳಿಸಿದರೆ ಅಥವಾ ಪೂರ್ವಸೂಚನೆಯಿಲ್ಲದೆ ನಿಲ್ಲಿಸಿದರೆ ನಷ್ಟವಾಗುವುದು ಯಾರಿಗೆ ಎನ್ನುವ ಕುರಿತು ಚಿಂತಿಸಬೇಕಿದೆ. ಈ ಸಂಸ್ಥೆಗಳನ್ನು ಬಹಳ ಕಷ್ಟಪಟ್ಟು ನಡೆಸುತ್ತಿರುವುದು ಈ ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದಕ್ಕಾಗಿ ಎನ್ನುವ ಗಂಭೀರವಾದ ಅಂಶವನ್ನು ನಾವು ಅರಿತುಕೊಳ್ಳಬೇಕು. ಯಕ್ಷಗಾನ ಕಲೆ ಉಳಿದು ಬೆಳೆಯಬೇಕಿದ್ದಲ್ಲಿ ಇಂತಹ ಸಂಸ್ಥೆಗಳು ಜೀವಂತವಾಗಿರಬೇಕು. ಇದಕ್ಕೆ ಸರಕಾರದ ಧನಸಹಾಯ ಅತೀ ಅವಶ್ಯ. ಜತೆಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರ್ಥಿಕವಾಗಿ ಬಲಾಢ್ಯವಾದ, ಸುಧೃಢವಾದ ಸಂಘ-ಸಂಸ್ಥೆಗಳೂ ಕೂಡ ಕೈಜೋಡಿಸಿದರೆ ಇನ್ನಷ್ಟು ಬೆಳವಣಿಗೆಯನ್ನು ಯಕ್ಷಗಾನ ಕ್ಷೇತ್ರ ಕಂಡೀತು.

*********************


ಫೋಟೋ ಕೃಪೆ : ಅ೦ತರ್ಜಾಲದ ಯಕ್ಷಾಭಿಮಾನಿಗಳು

ಲೇಖನ ಕೃಪೆ : yaksharangabykateelusitla.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ