ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ರಾಜಾಂಗಣದಲ್ಲಿ ರಂಜಿಸಿದ ಧಾರೇಶ್ವರ ಯಕ್ಷಬಳಗದವರ ಶ್ರೀ ಕೃಷ್ಣ ಅಷ್ಟಾಹ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಜುಲೈ 16 , 2016
ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಬಡಗುತಿಟ್ಟಿನ ಹಿರಿಯ ಭಾಗವತ ಧಾರೇಶ್ವರರ ಸಾರಥ್ಯದಲ್ಲಿ ಧಾರೇಶ್ವರ ಬಳಗದವರು ಎಂಟು ದಿನ ಉಡುಪಿ ರಾಜಾಂಗಣದಲ್ಲಿ ಪ್ರದರ್ಶಿಸಿದ ಶ್ರೀ ಕೃಷ್ಣನ ಬಾಲಲೀಲೆಯಿಂದ ಆರಂಬಿಸಿ ಪ್ರಭುದ್ದ ರಾಜಕಾರಿಣಿಯಾದ ಶ್ರೀಕೃಷ್ಣ, ಕೌರವ ಪಾಂಡವರ ನಡುವೆ ಸಂದಾನ ನಡುಸುವವರೆಗೆ ವಿವಿಧ ಪ್ರಸಂಗಗಳು ಹಲವಾರು ದಾಖಲಿಸುವ ಅಂಶಗಳೊಂದಿಗೆ ಸಹ್ರದಯ ಯಕ್ಷಗಾನಾಭಿಮಾನಿಗಳ ಮನತಣಿಸುವಲ್ಲಿ ಯಶಸ್ವಿಯಾಯಿತು. ಕರಪತ್ರ ಹಾಗಲ್ಲದೆ ಪ್ರತಿದಿನದ ಪ್ರದರ್ಶನದಂದು ಆಯಾ ಪ್ರಸಂಗವನ್ನು ರಚಿಸಿದ ಹಿರಿಯ ಪ್ರಸಂಗಕರ್ತರನ್ನು ನೆನಪಿಸುವುದರೊಂದಿಗೆ ಬಡಗುತಿಟ್ಟಿನಲ್ಲಿ ಛಾಲ್ತಿ ಇರುವ ಬಾಲಗೋಪಾಲ, ಒಡ್ಡೋಲಗ ಕ್ರಮವನ್ನು ಮೊದಲ ಹಾಗೂ ಕೊನೆಯ ದಿನದಂದು ಕಥೆಗೆ ಪೂರಕವಲ್ಲದಿದ್ದರೂ ದೇವೇಂದ್ರನ ಪಡೆ ಸಹಿತ ಒಡ್ಡೋಲಗ ಕ್ರಮದಿಂದ ತೋರಿಸಲಾತು. ಉಡುಪಿ ಮಟ್ಟಿಗೆ ಈ ವರೆಗೆ ಹಲವಾರು ಯಕ್ಷಗಾನ ಸಪ್ತಾಹಗಳು ನೆಡೆದರೂ ಎಂಟು ದಿನ ಪರ್ಯಂತ ಒಂದೇ ತಂಡದವರ ಅಷ್ಟಾಹ ಕಾರ್ಯಕ್ರಮ ಪ್ರಾಯಶ: ಇದೇ ಮೊದಲಿರಬೇಕು.

ಕೊಂಡದಕುಳಿ ರಾಮಚ೦ದ್ರ ಹೆಗಡೆ
ಮೊದಲ ದಿನದ ಪ್ರಸಂಗ ಶ್ರೀ ಮಟ್ಟಿ ವಾಸುದೇವ ಪ್ರಭು ವಿರಚಿತ ``ಶ್ರೀಕೃಷ್ಣಜನ್ಮ-ಕಾಳಿಂಗ ಮರ್ದನ``. ಬಡಗುತಿಟ್ಟಿನ ಮಟ್ಟಿಗೆ ಅಷ್ಟೊಂದು ಛಾಲ್ತಿ ಅಲ್ಲದ ಪ್ರಸಂಗವಾದರೂ ಮೇರು ಕಲಾವಿದರಾದ ಕೊಂಡದಕುಳಿಯವರ ಮೆರವಣಿಗೆ ಕಂಸ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರ ದೇವಕಿ, ಮಾಲ್ಕೋಡು ಉದಯ ಹೆಗಡೆಯವರ ವಸುದೇವ, ಹಳಾಡಿ ಜಯರಾಮ ಶೆಟ್ಟರ ಸೆರಮನೆ ದೂತ ಪಾತ್ರಗಳು ಪ್ರಸಂಗ ಕಳೆಗಟ್ಟುವಲ್ಲಿ ಯಶಸ್ವಿಯಾಯಿತು. ಕಾಳಿಂಗ ಮರ್ದನದಲ್ಲಿ ಶ್ರೀ ಕೃಷ್ಣ, ಬಾಲಕೃಷ್ಣನಾಗಿ ಕಾಣಿಸಿಕೊಂಡಿದ್ದರೆ ಚೆನ್ನಾಗಿರುತಿತ್ತು. ಪಾತ್ರದಲ್ಲಿ ಕೊಂಚ ಬೆಳಸು ಕಾಣುತಿದ್ದರೂ ಮಾತುಗಾರಿಕೆ ಕುಣಿತ ಕಳೆಗಟ್ಟಿತ್ತು.

ಮರುದಿನದ ಪಾರ್ತಿಸುಬ್ಬನ ``ಪೂತನಿ ಸಂಹಾರ`` ಪ್ರಸಂಗದಲ್ಲೂ ಅದೇ ಕೃಷ್ಣ ಮುಂದುವರಿದಿದ್ದು ಬಾಲಲೀಲೆಗಳು ಉತ್ತಮವಾಗಿ ಮೂಡಿಬಂತು. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರ ಮಾಯಾಪೂತನಿಗೆ ಹಿಂದೋಳ ರಾಗದಲ್ಲಿ ಧಾರೇಶ್ವರರ ಪದ್ಯಕ್ಕೆ ಎನ್. ಹೆಗಡೆಯವರ ಏಳು ಮದ್ದಳೆವಾದನ ಹಿಮ್ಮೇಳಾಸಕ್ತರನ್ನು ರಂಜಿಸಿತು. ``ಕಂಸ ವಧೆ`` ಮೂಲ ಪಠ್ಯ ಗುಂಡು ಸೀತಾರಾಮ ರಾವ್ ಅವರ ``ಮಧುರಾ ಮಹೀಂದ್ರ``ದ ಉತ್ತರಾರ್ದ. ಬಹು ಕಾಲದ ಹಿಂದೆ ಅಮೃತೇಶ್ವರಿ ಡೇರೆ ಮೇಳದಲ್ಲಿ ಹಲವಾರು ಪ್ರದರ್ಶನ ಕಂಡಿತ್ತು. ಕನಿಷ್ಟ ಅವಧಿಯಲ್ಲಿ‌ ಉತ್ಕ್ರಷ್ಟವಾದ ಪ್ರದರ್ಶನವಾಗುವಲ್ಲಿ ಮೂವರು ಮೇರು ಕಲಾವಿದರಾದ ತೀರ್ಥಳ್ಳಿ, ಉಪ್ಪುಂದ ಹಾಗು ಸಾಮಗರ ಕೊಡುಗೆ ಅಪಾರ. ಅಕ್ರೂರ ನೇರವಾಗಿ ಕೃಷ್ಣನನ್ನು ಬೇಟಿಯಾಗಿ “ಲಕ್ಷ್ಮೀ ಮನೋಹರನು ಅಕ್ರೂರನನು ಕಂಡು” ಎಂಬಲಿಂದ ಆರಂಭಿಸಿ ಗೋಪಾಲ ಆಚಾರ್ಯರು ಕೃಷ್ಣನಾಗಿ ವಿಶಿಷ್ಟ ಶೈಲಿಯ ಜಂಪೆತಾಳದ ನೃತ್ಯ ರಂಜಿಸಿದರು. “ಶ್ರೀಪತಿಯೆ ಅರಿಯೆಯ ಅಪೇಕ್ಷಿಸುವೆಯ. ” ಪದ್ಯಕ್ಕೆ ಎಂ. ಎಲ್. ಸಾಮಗರ ಅಭಿನಯ ಮಲ್ಪೆ ಶಂಕರನಾರಾಯಣ ಸಾಮಗರು ಬೀಷ್ಮ ವಿಜಯದ ಪರಶುರಾಮನಾಗಿ ಅಭಿನಯಿಸುವ ಕ್ರಮವನ್ನು ನೆನಪಿಸಿತು. ಸಾಮಗರು ನೃತ್ಯಕ್ಕಿಂತ ಅಭಿನಯಕ್ಕೆ ಹೆಚ್ಚಿನ ಪ್ರಾಶಸ್ಯ ನೀಡಿದ್ದು ಅಕ್ರೂರನ ಪಾತ್ರಕ್ಕೆ ಔಚಿತ್ಯಪೂರ್ಣವಾಗಿತ್ತು. ವಧೆಯ ಕಂಸನಾಗಿ ಉಪ್ಪುಂದ ನಾಗೇಂದ್ರ ಅವರು ಗರಿಷ್ಟ ಸಾದ್ಯತೆಯನ್ನು ತೋರ್ಪಡಿಸಿದರು. ಮಂತ್ರವಾದಿಯಾಗಿ ಹಳ್ಳಾಡಿ ಜಯರಾಮ ಶೆಟ್ಟರು ಅದ್ಭುತ ಅಭಿನಯ ನೀಡಿದರೂ ಎದುರು ಪಾತ್ರಧಾರಿಯ ಸ್ಪಂದನ ತುಸು ಕಡಿಮೆ ಎಣಿಸಿ ಅಪಾರ ರಂಗತಂತ್ರವುಳ್ಳ ಭಾಗವತರು ಹಾಸ್ಯ ಪಾತ್ರಧಾರಿಗೆ ಸ್ಪಂದಿಸಿದ್ದರಿಂದ ಸಭೆಗೆ ಗೊತ್ತಾಗದ ಹಾಗೆ ನೋಡಿಕೊಂಡರು. ಒಟ್ಟಾರೆ ಕೆಲವು ದೋಷಗಳ ಮಧ್ಯೆಯೂ ಪ್ರಸಂಗ ಕಳೆಗಟ್ಟಿತು.

ಮೂರನೇ ದಿನದ ಶ್ರೀ ಕೃಷ್ಣ ವಿವಾಹ ಭಾಗದಲ್ಲಿ ಮೊದಲದಿನ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ``ರುಕ್ಮಿಣಿ ಕಲ್ಯಾಣ``ವನ್ನು ಆರಿಸಿಕೊಳ್ಳಲಾಗಿತ್ತು. ಬೀಷ್ಮಕನ ಒಡ್ಡೋಲಗದಿಂದ ಆರಂಬಿಸಿದ ಕಥಾಭಾಗದಲ್ಲಿ ಬೀಷ್ಮಕನಾಗಿ ಸುಜಯೀಂದ್ರ ಹಂದೆಯವರು “ಆದುದಿ ಷೋಡಸ ವರುಷ ರುಕ್ಮಿಣಿಗೀಗ” ಪದ್ಯಕ್ಕೆ ನಡು ಬಡಗಿನ ವಿಶಿಷ್ಟ ಕಿರುಹೆಜ್ಜೆ ಪ್ರದರ್ಶಿಸಿ ಒಟ್ಟು ಕಾರ್ಯಕ್ರಮದಲ್ಲಿ ಇದೊಂದು ಬೇರೆಯೇ ಆಗಿ ಕಾಣಿಸಿ ಪ್ರೇಕ್ಷಕರಿಗೆ ಹೊಸದೊಂದು ನೃತ್ಯ ಸಾದ್ಯತೆಯನ್ನು ತೋರ್ಪಡಿಸಿತು. ಕೃಷ್ಣನಾಗಿ ತೀರ್ಥಳ್ಳಿ ಗೋಪಾಲ ಆಚಾರ್ಯ ರುಕ್ಮಿಣಿಯಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಬ್ರಾಹ್ಮಣನಾಗಿ ಶ್ರೀಧರ ಹೆಗಡೆಯವರು. ಎಲ್ಲಿಯೂ ಅಶ್ಲೀಲತೆಯ ಎಳೆಯೂ ಬಾರದೆ ಅತ್ಯಂತ ಮೇಲ್ಮಟ್ಟದ ಹಾಸ್ಯ ಪ್ರಜ್ನೆಯಿಂದ ಶ್ರೀಧರ ಭಟ್ಟ್ ಅವರ ಬ್ರಾಹ್ಮಣ ಬಹುಕಾಲ ನೆನಪಲ್ಲಿ ಉಳಿಯುವಂತಹುದು. ಸಾಂದರ್ಭಿಕ ಉಪಕಥೆ, ಅಪಾರ ಪ್ರತ್ಯುತ್ಪನ್ನತೆ ಅವರ ಹೆಚ್ಚುಗಾರಿಕೆ. ಮುಂದಿನ ದಿನದ ಪ್ರಸಂಗ ಪಾಂಚಜನ್ಯ. ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರ ``ವಿಷಮ ಸಮರಂಗ`` ಪ್ರಸಂಗದ ಪೂರ್ವಾರ್ದ ಇದಾಗಿದ್ದು ಶ್ರೀ ಕೃಷ್ಣನಾಗಿ ಕೊಂಡದಕುಳಿ, ಉದ್ದವನಾಗಿ ಶ್ರೀಧರ ಹೆಗಡೆ ಪಂಚಜನನಾಗಿ ಉದಯ ಹೆಗಡೆ, ಕಾಣಿಸಿಕೊಂಡರೆ ಶೃ0ಗಾರದ ಅಸಿಕೆಯಾಗಿ ಯಲಗುಪ್ಪ, ಮೃತ್ಯುಮಾಲಿನಿಯಾಗಿ ಸುಧೀರ್ ಉಪ್ಪುರ್ ಅದ್ಭುತ ಅಭಿನಯ ನೀಡಿದರು . ಧಾರೇಶ್ವರರ ರೂಪಕತಾಳದ “ಕಂಡಳಾಗ ಮಾರಜನಕನ” ಹಿಂದುಸ್ಥಾನಿ ಸಂಗೀತ ಮಿಶ್ರಿತ ಭಾವಪೂರ್ಣ ಪದ್ಯಕ್ಕೆ ಯಲಗುಪ್ಪರ ಗರಿಷ್ಟ ಸಮಯದ ಕುಣಿತ ರಂಜಿಸಿತು. ಬೋಳ್ಗೆರೆ ಗಜಾನನ ಭಂಡಾರಿಯವರ ಏರುಮದ್ದಳೆ ಸಾಥಿ ಕರ್ಣಾನಂದ ನೀಡಿತ್ತು.

ತೀರ್ಥಳ್ಳಿ ಗೋಪಾಲಾಚಾರ್
ಕೃಷ್ಣ ವಿವಾಹದ ಮುಂದಿನ ಪ್ರಸಂಗ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ, ಬಡಗಿನ ವಿವಿಧ ಮೇಳಗಳಲ್ಲಿ ಅತೀ ಹೆಚ್ಚು ಪ್ರದರ್ಶನಗೊಂಡ ಛಾಲ್ತಿಯ ಪ್ರಸಂಗ `` ಜಾಂಬವತಿ ಕಲ್ಯಾಣ ``. ವಿಶಿಷ್ಟ ಛಂದೋಬಂದದಿಂದ ಸುಲಲಿತ ಸಾಹಿತ್ಯದಿಂದ ಕೂಡಿದ ಈ ಪ್ರಸಂಗ ವಿವಿಧ ಹರಕೆ ಮೇಳಗಳಿಗೆ ಬೆಳಗಿನ ಜಾವದ ಪ್ರಸಂಗವಾಗಿ ಪ್ರಸಿದ್ದಿ ಪಡೆದಿದೆ. ಕೃಷ್ಣನಾಗಿ ತೀರ್ಥಳ್ಳಿ ಗೋಪಾಲಾಚಾರ್, ಜಾಂಬವನಾಗಿ ಕೊಂಡದಕುಳಿ, ಬಲರಾಮನಾಗಿ ಉದಯ ಹೆಗಡೆ, ನಾರದನಾಗಿ ಅಶೋಕ ಭಟ್, ಪ್ರಸಂಗಕ್ಕೆ ಸಂಪೂರ್ಣ ನ್ಯಾಯ ಒದಗಿಸಿ ಈ ಪ್ರಸಂಗ ಸಪ್ತಾಹದಲ್ಲೇ ಅತೀ ಉತ್ತಮ ಪ್ರದರ್ಶನವೆನ್ನಬಹುದು. ಧಾರೇಶ್ವರರ ಮಧುರ ಕಂಠದಿಂದ ಮೂಲ ಜಂಜೂಟಿ ಆಷ್ಟತಾಳದಲ್ಲಿದ್ದ “ಜನನೀ ಜನಕರಾಣೆ ನಾನು” ಪದ್ಯವನ್ನು ಮಧ್ಯ ಮಾವತಿ ರಾಗ ತ್ರಿವುಡೆ ತಾಳದಲ್ಲಿ ಹಾಡಿ ಕರ್ಣಾನಂದ ನೀಡಿದರು. ತಾಳದಿಂದ ತಾಳಕ್ಕೆ ಹೋಗುವಾಗಿನ ಆಲಾಪಣೆ “ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ” ಭಾವಗೀತೆಯನ್ನು ನೆನಪಿಸುತಿತ್ತು. ಜಾಂಬವ ಕೃಷ್ಣರ ಸಂಭಾಷಣೆಯ ಭಾಗವು ಅತ್ಯಂತ ಉತ್ತಮವಾಗಿತ್ತು.

ಯಕ್ಷಗಾನ ರಂಗಸ್ಥಳದಲ್ಲಿ ಅಪರೂಪವೆಣಿಸಿದ ಅನೇಕ ಪ್ರೇಕ್ಷಕರು ನೋಡದ ಪ್ರಸಂಗ ಹೊಸ್ತೋಟ ಮಂಜುನಾಥ ಭಾಗವತರ ಶತದನ್ವ. ಶಮಂತಕ ಮಣಿಯ ಉತ್ತರಾರ್ದದಲ್ಲಿ ಬರುವ ಈ ಪ್ರಕರಣದಲ್ಲಿ ಜಾಂಬವನಿಂದ ಕೃಷ್ಣ ತಂದ ಶ್ಯಮಂತಕ ಮಣಿಯನ್ನು ಕೃತವರ್ಮನ ತಮ್ಮ ಸತ್ರಾಜಿತನ ಅಳಿಯ, ಅರೆಹುಚ್ಚ ಅಂಜುಬುರುಕ ಶತದನ್ವ ಬಯಸುವುದು, ಅದಕ್ಕಾಗಿ ಸತ್ರಾಜಿತನನ್ನು ಕೊಲ್ಲುವುದು ಕಥೆಯ ಜೀವಾಳ. ``ಕಂಸ ವಧೆ``ಯಲ್ಲಿ ಸಜ್ಜನನಾಗಿ ಕಾಣುವ ಅಕ್ರೂರ ಇಲ್ಲಿ ಮೋಸಗಾರ ಯಾದವೀ ಕಲಹಕ್ಕೆ ನಾಂದಿಯಾದ ಶ್ಯಮಂತಕ ಮಣಿಯ ಸುತ್ತ ಹೆಣೆದ ಈ ಕಥೆಯು ಶತದನ್ವ ಪಾತ್ರಧಾರಿಗೆ ಒಂದು ಸವಾಲು. ಚಂದ್ರಹಾಸದ ಮದನ, ಉತ್ತರ ಕುಮಾರನ ಪಾತ್ರದಂತೆ ಹೋಲುವ ಈ ಪಾತ್ರವನ್ನು ಕೊಂಡದಕುಳಿಯವರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಶರಣಾದವರನ್ನು ಕ್ಷಮಿಸಬೇಕೆಂಬುದು ಒಂದೆಡೆ, ಮಾವ ಸತ್ರಾಜಿತನನ್ನು ಕೊಂದವನನ್ನು ಕ್ಷಮಿಸುವುದು ನ್ಯಾಯವೇ ಎಂಬುವುದು ಇನ್ನೊಂದಡೆ, ಈ ರೀತಿಯ ದಂದ್ವದಲ್ಲಿ ಸಿಲುಕಿದ ಕೃಷ್ಣನಾಗಿ ತೀರ್ಥಳ್ಳಿಯವರು, ಯಾದವರ ಕಲಹದ ಹೇತು ಕಪಟಿ ಅಕ್ರೂರನಾಗಿ ಅಶೋಕ ಭಟ್ ಸತ್ಯಭಾಮೆಯಾಗಿ ಸುದೀರ್ ಉಪ್ಪೂರ್ ಪ್ರಸಂಗಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ
ಅಷ್ಟಾಹದ ಏಳನೇ ದಿನದ `` ಮೋಕ್ಷ ಸಂಪ್ರಾಪ್ತಿ`` ಯಲ್ಲಿ ಹೊಸತೋಟ ಮಂಜುನಾಥ ಭಾಗವತರ ``ನರಕಾಸುರ ಮೋಕ್ಷ `` ಭಾಗವನ್ನು ಆರಿಸಿಕೊಳ್ಳಲಾಗಿತ್ತು. ದೇವೇಂದ್ರನ ಪರಂಪರೆಯ ಒಡ್ಡೋಲಗದಿಂದ ಪ್ರಾರಂಬಿಸಿ ಸತ್ಯಬಾಮೆ ನಂದನವನದಲ್ಲಿ ಪಾರಿಜಾತಾಕಾಂಕ್ಷಿಯಾಗುವ ವರೆಗಿನ ಈ ಪ್ರಸಂಗದಲ್ಲಿ ನರಕಾಸುರನಾಗಿ ಕೊಂಡದಕುಳಿ, ಕೃಷ್ಣನಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಸತ್ಯಬಾಮೆಯಾಗಿ ಸುದೀರ್ ಉಪ್ಪೂರ್, ದೇವೇಂದ್ರನಾಗಿ ಉದಯ ಹೆಗಡೆ ಭಾಗವಹಿಸಿದರು. “ನೋಡಿ ನರಕನು ನಗುತಾಲೆಂದನು” ಪದ್ಯಕ್ಕೆ ಕೊಂಡದಕುಳಿಯವರು ಬಡಾಬಡಗಿನ ವಿವಿಧ ಭಾವಾಭಿನಯ ತೋರ್ಪಡಿಸಿದರೆ ಸ್ತ್ರೀ ಪಾತ್ರಧಾರಿ ಯಾದ ಯಲಗುಪ್ಪರ ಪುರುಷ ವೇಷ ಅಂದಿನ ಆಕರ್ಷಣೆಯಾಗಿತ್ತು. ಕೊನೆಯ ದಿನದ ಕಾರ್ಯಕ್ರಮದ ಮೊದಲು ನೆಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು ಏಳು ದಿನದ ಕಾರ್ಯಕ್ರಮ ನೋಡಿ ಮೆಚ್ಚುಗೆ ಸೂಚಿಸಿದ್ದು ಅಷ್ಟಾಹದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಪರಮಪೂಜ್ಯ ಪೇಜಾವರ ಸ್ವಾಮೀಜಿಯವರು ಭಾಗವಹಿಸಿದ ಪ್ರತಿಯೊಬ್ಬ ಕಲಾವಿದನಿಗೂ ಸ್ಮರಣಿಕೆಯಿತ್ತು ಗೌರವಿಸಿದರು. ಸಬಾ ಕಾರ್ಯಕ್ರಮದ ನಂತರ ಕೊನೆಯ ಪ್ರಸಂಗವಾಗಿ ರಾಜಕೀಯ ಚಾಣಾಕ್ಷ್ಯನಾಗಿ ಶ್ರೀಕೃಷ್ಣ ಅರ್ಥಾತ್ `` ಶ್ರೀ ಕೃಷ್ಣ ಸಂಧಾನ`` ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ದ್ರೌಪದಿಯಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಕೃಷ್ಣನಾಗಿ ಗೋಪಾಲ ಆಚಾರ್ಯ ಕೌರವನಾಗಿ ಕೊಂಡದಕುಳಿಯವರು ಧರ್ಮರಾಯನಾಗಿ ಮಾಳ್ಕೋಡು ಉದಯ ಹೆಗಡೆ, . ಬೀಮನಾಗಿ ರಾಘವೇಂದ್ರ ಪಡಿಯಾರ್ ಭಾಗವಹಿಸಿದ್ದರು. ವಿದುರನಾಗಿ ಖ್ಯಾತ ತಾಳಮದ್ದಳೆ ಅರ್ಥದಾರಿ ವಾಸುದೇವ ರಂಗಭಟ್ಟರು ಅಂದಿನ ವಿಶೇಷ ಆಕರ್ಷಣೆ. ವಿವಿಧ ಪ್ರಸಂಗಗಳಲ್ಲಿ ಪೋಷಕ ಪಾತ್ರಧಾರಿಗಳಾಗಿ ಮಂಜು ಹವ್ಯಕ, ವಿಘ್ನೇಶ್ವರ ಹಾವ್ಗೋಡಿ, ದಿನೇಶ ಕನ್ನಾರು, ಕು. ಹರ್ಷಿತಾ, ಕು. ಇಳಾ, ದಿನಕರ ನಡೂರು, ಜಯ ಅಂಬಲಪಾಡಿ, ಜಾಂಬವತಿ ಕಲ್ಯಾಣದ ಸಿಂಹವಾಗಿ ಪ್ರತಿಬಾವಂತ ಯುವ ಕಲಾವಿದ ಕೆಕ್ಕಾರು ಆನಂದ ಭಟ್ಟರು ವಿಶೇಷವಾಗಿ ಗಮನಸೆಳೆದರು. ಮೃಗೀಯ ವರ್ತನೆ, ಮುಗ್ದತೆ, ಬೇಟೆ, ಮುಂತಾದ ವಿವಿಧ ಭಂಗಿಗಳಲ್ಲಿಸಿಂಹನಾಗಿ ಭಟ್ಟರು ಕರ್ಕಿ ಹಾಸ್ಯಗಾರರನ್ನು ನೆನಪಿಸಿದರು.

ಎಂಟು ದಿನಗಳ ಅಷ್ಟಾಹದ ಯಶಸ್ಸಿಗೆ ಹಿಮ್ಮೇಳದ ಕೊಡುಗೆಯೂ ಅಪಾರ. ಧಾರೇಶ್ವರರೊಂದಿಗೆ ಕುಂಜಾಲು ಶೈಲಿಯ ಸಂಪ್ರದಾಯದ ಭಾಗವತ ಸದ್ಯ ಬಡಗುತಿಟ್ಟಿನ ಅಗ್ರಪಂಕ್ತಿಯ ಹವ್ಯಾಸಿ ಭಾಗವತ ಗುರು ಗೋರ್ಪಾಡಿ ವಿಠಲ ಪಾಟೀಲರ ಶಿಷ್ಯ ಮೂಡುಬೆಳ್ಳೆ ಚಂದ್ರಕಾಂತ ರಾವ್ ಅವರು ಅತ್ಯಂತ ಏರುಶ್ರುತಿಯಲ್ಲಿ ಭಾಗವತಿಕೆ ಮಾಡಿ ಹೆರಂಜಾಲು ಗೋಪಾಲಗಾಣಿಗರ ಶೈಲಿಯನ್ನು ನೆನಪಿಸಿದರು. ಸದ್ಯ ಕುಂಜಾಲು ಶೈಲಿಯ ಭಾಗವತಿಕೆ ಮಾಡಬಲ್ಲವರಲ್ಲಿ ಇವರೂ ಒಬ್ಬರು ಎನ್ನಬಹುದಾಗಿದೆ. ಪ್ರದರ್ಶನದುದ್ದಕ್ಕೂ ಗಮಣಿಸಬೇಕಾದದ್ದು ಯುವ ಚೆಂಡೆವಾದಕ ಧಾರೇಶ್ವರರ ಸುಪುತ್ರ ಕಾರ್ತಿಕೇಯನ ಚೆಂಡೆವಾದನ. ಮಳೆಗಾಲದ ಆಟಗಳಲ್ಲಿ ಬೇರೆ ಬೇರೆ ಮೇಳದ ಕಲಾವಿದರಿಗೆ ಚೆಂಡೆಬಾರಿಸುವುದು ವೃತ್ತಿ ಕಲಾವಿದರಿಗೆ ಒಂದು ಸವಾಲು. ಅತ್ಯಂತ ಚಿಕ್ಕ ವಯಸ್ಸಿನ ಈ ಯುವ ವಾದಕನಿಂದ ಯಕ್ಷಗಾನ ಹಿಮ್ಮೇಳ ಬಹಳಷ್ಟು ನಿರೀಕ್ಷಿಸಬಹುದು. ಬಡಗುತಿಟ್ಟಿನ ನೃತ್ಯ ವಿಭಾಗದಲ್ಲಿ ಅದರಲ್ಲೂ ಕೋರೆ, ಅಷ್ಟತಾಳ ಜಂಪೆ ತಾಳಗಳಲ್ಲಿ ವಿವಿಧ ಕಲಾವಿದರು ಹೊಸಹೊಸ ನೃತ್ಯ ಶೈಲಿ ಚಾಲು ಕುಣಿತ ಬಳಸೌತ್ತಿರುವ ಈ ಕಾಲಘಟ್ಟದಲ್ಲಿ ಮೇರು ಕಲಾವಿದರ ಹೆಜ್ಜೆಗನುಗುಣವಾಗಿ ಚೆಂಡೆ ನುಡಿಸಿದ್ದು ಇವರ ಹೆಚ್ಚುಗಾರಿಕೆ ಎನ್ನುವುದರೊಂದಿಗೆ ಬಡಗುತಿಟ್ಟಿನ ಚೆಂಡೆವಾದನಕ್ಕೆ ಇವರೊಂದು ಆಶಾಕಿರಣ ಎನ್ನಬಹುದಾಗಿದೆ. ಬೋಲ್ಗೆರೆ ಗಜಾನನ ಭಂಡಾರಿ ಹಾಗೂ ಎನ್. ಜಿ ಹೆಗಡೆ ಮದ್ದಳೆಯಲ್ಲಿ ಉತ್ತಮ ಸಾಥಿ ನೀಡಿದ್ದಾರೆ. ಬಾಲ ಗೋಪಾಲರಿಗೆ ಪದ್ಯ ಹೇಳಿದ ಕೆ. ಜಿ. ಮಂಜುನಾಥರ ಪದ್ಯದಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ರಾಗ ಸಂಚಾರವನ್ನು ಗುರುತಿಸ ಬಹುದಾಗಿದೆ.

ಹವ್ಯಾಸಿ ಕಲಾವಿದರು ವೃತ್ತಿ ಕಲಾವಿದರೊಂದಿಗೆ ಭಾಗವಹಿಸುವಾಗ ಹಲವಾರು ದೋಷಗಳು. ಎದುರು ಪಾತ್ರಧಾರಿಯೊಂದಿಗೆ ಸ್ಪಂದನದ ಕೊರತೆ ಸಾಮಾನ್ಯ. ಹವ್ಯಾಸಿ ಕಲಾವಿದರು ಎಷ್ಟೇ ಪರಿಪೂರ್ಣರಾದರೂ ವೃತ್ತಿ ಕಲಾವಿದರೊಂದಿಗೆ ಭಾಗವಹಿಸುವಾಗ ಎರಡು ಬಾರಿ ಯೋಚಿಸಬೇಕಾಗುತ್ತದೆ. ರಂಗದ ನಿಲುವು ಆಗಮನ ನಿರ್ಗಮನದಲ್ಲೇ ಪ್ಪ್ರೇಕ್ಷಕ ಅದನ್ನು ಗುರುತಿಸಬಲ್ಲ. ಸಾಕಷ್ಟು ಪೂರ್ವ ತಯಾರಿಯೂ ಈ ನಿಟ್ಟಿನಲ್ಲಿ ಬೇಕಾಗುತ್ತದೆ. ಒಟ್ಟಾರೆಯಾಗಿ ಎಂಟು ದಿನ ಶ್ರೀ ಕೃಷ್ಣನ ಜನ್ಮ-ಬಾಲ್ಯ-ವಿವಾಹ-ಪ್ರಭುದ್ದತೆಯ ಮೇಲೆ ಬೆಳಕು ಚೆಲ್ಲುವ ಎಂಟು ಕಥಾನಕಗಳು ಇಂತಹ ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ಯಶಸ್ವಿ ಪ್ರಯೋಗ ಎನ್ನಬಹುದು. ಈ ನಿಟ್ಟಿನಲ್ಲಿ ಶ್ರೀ ದಾರೇಶ್ವರ ಯಕ್ಷ ಬಳಗದ ಸರ್ವ ಸದಸ್ಯರೂ ಅಭಿನಂದನಾರ್ಹರು.






*********************



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ