ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಣ್ಮರೆಯಾದ ಅಗ್ರಮಾನ್ಯ ಕಲಾವಿದ ಕೋಡಿ ಶಂಕರ ಗಾಣಿಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಸೆಪ್ಟೆ೦ಬರ್ 12 , 2016

ಶ್ರೀ. ಕ್ಷೇತ್ರ ಮಂದಾರ್ತಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಮೇಳಕ್ಕೂ ಯಕ್ಷಗಾನ ಕಲೆಗೂ ಘನತೆಯನ್ನು ತಂದಿತ್ತು, ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ಗಳಿಸಿಕೊಟ್ಟ ರಾಷ್ಟಪ್ರಶಸ್ತಿ ವಿಜೇತ ದಿ. ಹಾರಾಡಿ ರಾಮ ಗಾಣಿಗರ ಮುಂದಿನ ತಲೆಮಾರಿನವರಾಗಿ ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ರಾಮಗಾಣಿಗರಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿದ ಅದೇ ಕುಟುಂಬದ ಸದಸ್ಯ ಕೋಡಿ ಶಂಕರಗಾಣಿಗರು ಇನ್ನಿಲ್ಲವಾಗಿದ್ದಾರೆ.

ಸಿಧ್ಧಿ ಹಾಗು ಪ್ರಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ ಕೋಡಿ ಶಂಕರ ಗಾಣಿಗರು, ಸುಮಾರು ಅರವತ್ತು ಸಂವತ್ಸರಕ್ಕೂ ಅಧಿಕ ಕಾಲ ವೇಷಧಾರಿಯಾಗಿ, ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ಸೇವೆ ಸಲ್ಲಿಸಿರುವ ಮಹಾನ್ ಕಲಾವಿದರು. ಬಡಗುತಿಟ್ಟಿನ ಯಕ್ಷಗಾನದ ದಂತ ಕಥಯಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗರ ಸಂಬಂದಿಯಾದ ಇವರಲ್ಲಿ ಯಕ್ಷಗಾನದ ರಕ್ತ ಸಹಜವಾಗಿ ಹರಿದಿದೆ.

ಬಾಲ್ಯ, ಶಿಕ್ಷಣ ಹಾಗೂ ಕಲಾಸೇವೆ

ಬ್ರಹ್ಮಾವರದ ಯಕ್ಷಗಾನದ ಅಡೋಂಬಲ ಹಾರಾಡಿಯಲ್ಲಿ ಬಚ್ಚ ಗಾಣಿಗ ಮತ್ತು ಕಾವೇರಿಯಮ್ಮ ದಂಪತಿಗಳ ಸುಪುತ್ರನಾಗಿ 1932ರಲ್ಲಿ ಜನಿಸಿದ ಗಾಣಿಗರಿಗೆ ಈಗ 79ರ ಹರೆಯ. ಗಾಣಿಗರು ಎರಡು ವರ್ಷದ ಮಗುವಾಗಿರುವಾಗ ತಂದೆ ಮಾರಣಕಟ್ಟೆ ಮೇಳದಲ್ಲೆ ತೀರಿಕೊಂಡಾಗ ಆದಿಮನೆ ಕೋಡಿಯಲ್ಲಿ ನೆಲೆ ನಿಲ್ಲಬೇಕಾಯಿತು. ಹಾರಾಡಿ ರಾಮ ಗಾಣಿಗರ ಅಣ್ಣನ ಮಗನಾದ ಇವರು ಇನ್ನೋರ್ವ ಪುರುಷ ವೇಷಧಾರಿ ಕುಷ್ಟ ಗಾಣಿಗರ ಸೋದರಳಿಯ. ಹೀಗೆ ಹಾರಾಡಿ ಮನೆತನದ ದೊಡ್ಡ ದೊಡ್ಡ ಕಲಾವಿದರು ಇವರ ಬಂಧುಗಳೇ ಅಗಿರುವುದರಿಂದ ಯಕ್ಷಗಾನ ಮಾತೆ ಇವರನ್ನು ಕೈ ಬೀಸಿ ಕರೆದಳು.

ಐದನೇ ತರಗತಿ ವಿಧ್ಯಾಭ್ಯಾಸಕ್ಕೆ ಮಂಗಳ ಹಾಡಿದ ಇವರು ಯಕ್ಷಗಾನದ ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರರಿಂದ ಗೆಜ್ಜೆ ಕಟ್ಟಿಸಿ ಕೊಂಡರು. ಹಾರಾಡಿ ಬಾಬು ಗಾಣಿಗ, ಬಸವ ಗಾಣಿಗ, ಸುರಗಿಕಟ್ಟೆ ಬಸವ ಗಾಣಿಗ, ಹಾರಾಡಿ ಮಹಾಬಲ ಗಾಣಿಗ, ಸರ್ವಗಾಣಿಗ ಹೀಗೆ ದೊಡ್ಡ ಕಲಾವಿದರೆಲ್ಲ ಇವರ ಬಂಧುಗಳೇ ಅದುದರಿಂದ ಈ ವೃತ್ತಿಯಲ್ಲಿ ಮುಂದುವರಿಯಲು ಇವರಿಗೆ ಅನುಕೂಲವಾಯಿತು. ಮೊದಲ 15 ವರ್ಷ ಸ್ತ್ರೀವೇಷಧಾರಿಯಾಗಿ, ಬಳಿಕ 15 ವರ್ಷ ಪುರುಷವೇಷಧಾರಿಯಾಗಿ ನಂತರ 30 ವರ್ಷ ಎರಡನೆ ವೇಷಧಾರಿಯಾಗಿ ಬಡಗಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದರು.

ಸೌಕೂರು ಮೇಳದಲ್ಲಿ ಪ್ರಥಮವಾಗಿ ಗೆಜ್ಜೆ ಕಟ್ಟಿದ ಗಾಣಿಗರು ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿದರೂ, ಎಲ್ಲಾ ಹಾರಾಡಿ ಕಲಾವಿದರ ರೀತಿ ಅವರ ಬಹುಪಾಲು ತಿರುಗಾಟ ಮಂದಾರ್ತಿ ಮೇಳದಲ್ಲಿ, ಅದೂ ಸಹ ಎರಡನೇ ವೇಷಧಾರಿಯಾಗಿ. ಅಲ್ಲಿ ಹಾರಾಡಿ ಶೈಲಿಯಲ್ಲಿ ಮೆರೆದ ಇವರ ಕರ್ಣಾರ್ಜುನದ ಕರ್ಣ, ಶಶಿಪ್ರಭಾ ಪರಿಣಯದ ಮಾರ್ತಾಂಡತೇಜ, ಲವಕುಶ ಕಾಳಗದ ವಿಭೀಷಣ, ಪ್ರಹ್ಲಾದ ಚರಿತ್ರೆಯ ಹಿರಣ್ಯಕಶ್ಯಪು, ಕೃಷ್ಣಾರ್ಜುನದ ಅರ್ಜುನ, ಜಾಂಬವ ಮುಂತಾದ ಪಾತ್ರಗಳು ಹಾರಾಡಿ ಕಲಾವಿದರ ಶೈಲಿಯನ್ನು ನೆನಪಿಸುತಿತ್ತು.

ದಿಗ್ಗಜರ ಒಡನಾಟ

ಸುಮಾರು 70ರ ದಶಕದಲ್ಲಿ ಮಂದಾರ್ತಿ ಬೋಜರಾಜ ಹೆಗ್ಡೆಯವರ ನೇತೃತ್ವದ ಮಂದಾರ್ತಿ ಮೇಳದಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ, ಹಾರಾಡಿ ಅಣ್ಣಪ್ಪ ಗಾಣಿಗ, ಸುರಗಿಕಟ್ಟೆ ಬಸವ ಗಾಣಿಗ ಬೇಳಂಜೆ ಕಾಮ ನಾಯಕ್, ತೀರ್ಥಳ್ಳಿ ಚಂದ್ರಾಚಾರಿಯವರ ಹಿಮ್ಮೇಳದಲ್ಲಿ ಗಾಣಿಗರ ಎರಡನೇ ವೇಷ, ಮೊಳಹಳ್ಳಿ ಹೆರಿಯ ನಾಯಕ ಮತ್ತು ಮಜ್ಜಿಗೆಬೈಲು ಆನಂದ್ ಶೆಟ್ಟರ ಪುರುಷ ವೇಷ, ಹೆರಂಜಾಲು ಸುಬ್ಬಣ್ಣ ಗಾಣಿಗರ ಸ್ತ್ರೀವೇಷ, ಶೃಂಗೇರಿ ಭಾಸ್ಕರ ಶೆಟ್ಟಿ, ಬೆಲ್ತೂರು ರಮೇಶ, ಹಾರಾಡಿ ಸರ್ವೋತ್ತಮ, ದಯಾನಂದ ನಾಗೂರು ಮುಂತಾದವರ ಕೂಡುವಿಕೆಯಿಂದ ಪ್ರದರ್ಶಿಸುತಿದ್ದ ಸತೀ ಸುಶೀಲೆ, ಯಕ್ಷಲೋಕ ವಿಜಯ, ರತ್ನಶ್ರೀ, ರೂಪಶ್ರೀ. , ಪುಷ್ಪವೇಣಿ ಪರಿಣಯ, ಹರ್ಷವರ್ಧನ ಚರಿತ್ರೆ ಮುಂತಾದ ಪ್ರಸಂಗಗಳು ಅಪಾರ ಜನ ಮನ್ನಣೆ ಗಳಿಸಿದ್ದವು.

ಕೋಡಿ ಶಂಕರ ಗಾಣಿಗ
ಜನನ : 1932
ಜನನ ಸ್ಥಳ : ಹಾರಾಡಿ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಸೌಕೂರು, ಅಮೃತೇಶ್ವರಿ, ಮಾರಣಕಟ್ಟೆ, ಕಮಲಶಿಲೆ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ, ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ಸೇವೆ ಸಲ್ಲಿಸಿರುವ, ಸುಮಾರು ಅರವತ್ತು ಸಂವತ್ಸರಕ್ಕೂ ಅಧಿಕ ಕಾಲ ಕಲಾಸೇವೆಗೈದ ಮಹಾನ್ ಕಲಾವಿದರು.

ಪ್ರಶಸ್ತಿಗಳು:
ನಾಡಿನ ಹಲವು ಕಡೆ ಸನ್ಮಾನಿತರಾದ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉಡುಪಿ ಕಲಾರಂಗದ ಡಾ/ ಬಿ. ಬಿ. ಶೆಟ್ಟಿ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿಗಳು ಬಂದಿವೆ.

ಮರಣ ದಿನಾ೦ಕ : ಸೆಪ್ಟೆ೦ಬರ್ 1, 2016
ದೇವಿ ಮಹಾತ್ಮೆಯ ಶುಂಭಾಸುರ, ರೇಣುಕಾ ಮಹಾತ್ಮೆಯ ಜಮದಗ್ನಿ, ರುಕ್ಮಾಂಗದ ಚರಿತ್ರೆಯ ರುಕ್ಮಾಂಗದ ಗಾಣಿಗರಿಗೆ ಹೆಸರು ತಂದಿತ್ತ ಪಾತ್ರಗಳು. ಮುಂಡಾಸು ಹಾಗು ಪಾರ್ಟಿನ ವೇಷಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದ ಗಾಣಿಗರ ವೀರಮಣಿ, ಅಂಗಾರವರ್ಮ, ಚಿತ್ರಸೇನ, ಸುಲೋಚನ ಮುಂತಾದ ಮುಂಡಾಸಿನ ವೇಷಗಳು, ಕಂಸ, ಕಾಲನೇಮಿ ಭಸ್ಮಾಸುರ, ಮಧು, ಕೈಟಭ, ರಕ್ತಭೀಜ ಮುಂತಾದ ಪಾರ್ಟಿನ ವೇಷಗಲು ನೆನಪಿನಂಗಳದಿಂದ ಮಾಸಲಾರದವುಗಳು. ಜಮದಗ್ನಿಯಾಗಿ ಅರವತ್ತನಾಲ್ಕು ವಿದ್ಯೆಗಳನ್ನು ಪಟಪಟನೆ ಹೇಳುವುದರೊಂದಿಗೆ ರೇಣುಕೆಯನ್ನು ಶಿಕ್ಷಿಸುವುದನ್ನು ನೋಡಲು ರೋಮಾಂಚನವಾಗುತಿತ್ತು.

ಹಿರಿಯ ಕಲಾವಿದರಾದ ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಚಾರರು, ಹುಂಚದಕಟ್ಟೆ ಶ್ರೀನಿವಾಸ ಆಚಾರರು, ಉಡುಪಿ ಬಸವ , ಹಾರಾಡಿ ಹಾಗು ಮಟ್ಪಾಡಿ ತಿಟ್ಟುಗಳ ಎಲ್ಲ ಕಲಾವಿದರ ಒಡನಾಡಿಯಾದ ಇವರು ಜೋಡಾಟದಲೂ ಮೂರು ನಾಲ್ಕು ವೇಷ ಮಾಡಿ ತೀರ್ಪುಗಾರರಿಂದ ಸೈ ಎಣಿಸಿಕೊಂಡವರು.

ಪ್ರಶಸ್ತಿ ಪುರಸ್ಕಾರಗಳು

ಡಾ/ ಶಿವರಾಮ ಕಾರಂತರು ಅರವತ್ತರ ದಶಕದಲ್ಲಿ ನಿರೂಪಿಸಿದ ನೃತ್ಯ ನಾಟಕದಲ್ಲಿ ಅಂಬೆ, ಶಲ್ಯ, ಭೀಮ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಾಡಿನ ಹಲವು ಕಡೆ ಸನ್ಮಾನಿತರಾದ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉಡುಪಿ ಕಲಾರಂಗದ ಡಾ/ ಬಿ. ಬಿ. ಶೆಟ್ಟಿ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿಗಳು ಬಂದಿವೆ. ಇವರ ಸಹೋದರಳಿಯ ಕೋಡಿ ವಿಶ್ವನಾಥ ಗಾಣಿಗರು ಖ್ಯಾತ ಎರಡನೇ ವೇಷಧಾರಿಯಾಗಿದ್ದು ಸದ್ಯ ಸೌಕೂರು ಮೇಳದ ಕಲಾವಿದರು.

ದೀರ್ಘಕಾಲ ಬಡಗು ತಿಟ್ಟಿನ ರಂಗಸ್ಥಳವನ್ನು ಶ್ರೀಮಂತ ಗೊಳಿಸಿದ ಗಾಣಿಗರ ನಿದನದಿಂದ ಬಡಗುತಿಟ್ಟು ಬಡವಾಗಿದೆ

****************




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ