ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
`ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ` - ರ೦ಗಸ್ಥಳದ ಗಾನ ಕೋಗಿಲೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಒಕ್ಟೋಬರ್ 7 , 2012

ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿಕಳೆದುಕೊಂಡು ದೂರಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವಡರು.

ನವೆಂಬರ್ ೧೯೮೮ ರಲ್ಲಿ ಬಹ್ರೈನ್ ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು.ಶ್ರೀ ಕಾಳಿಂಗ ನಾವಡರು ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು, ಆ ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ 'ಭಸ್ಮಾಸುರ ಮೋಹಿನಿ' ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿ, ಯಕ್ಷಗಾನಕ್ಕೆ ಅಷ್ಟೇನೂ ಆಸಕ್ತಿಯಿಲ್ಲದಿದ್ದ ಮುಂಬಯಿಯಲ್ಲಿ ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದ ಕೀರ್ತಿ ಇವರಿಬ್ಬರದು.ನಾವಡರ 'ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.........', 'ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ......' ಮುಂತಾದ ಪದ್ಯಗಳನ್ನು ಕೇಳಿದಾಗ ಇಂದಿಗೂ ಮೈ ನವಿರೇಳುತ್ತದೆ.


ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ನಾವುಡರು 'ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ' ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿದವರು. 1990ರಲ್ಲಿ ಕರ್ನಾಟಕ ಸರಕಾರ ಮರಣೋತ್ತರವಾಗಿ 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಹಾಗೆಯೇ ಯಕ್ಷಕಲಾರಸಿಕರಿಂದ 'ಕರಾವಳಿ ಕೋಗಿಲೆ', 'ರಸರಾಗ ಚಕ್ರವರ್ತಿ' ಮುಂತಾದ ಬಿರುದುಗಳು, ಸನ್ಮಾನಗಳು, ಪ್ರಶಸ್ತಿಗಳು ನಾವಡರಿಗೆ ಸಂದಿವೆ.

ಯಕ್ಷಗಾನ ಹಾಗೂ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ "ಕಲಾ ಕದಂಬ ಆರ್ಟ್ ಸೆಂಟರ್" ಸಂಸ್ಥೆ ಯಕ್ಷ ಸಾಧಕರಿಗೆ ಪ್ರತಿ ವರ್ಷ ‘ಕಾಳಿಂಗ ನಾವಡ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಬಾಲ್ಯ ಮತ್ತು ಶಿಕ್ಷಣ

"ಗಾನ ಕೋಗಿಲೆ" ಕಾಳಿಂಗ ನಾವಡರು (ಆಡು ಬಾಷೆಯಲ್ಲಿ ನಾವುಡ) ಹುಟ್ಟಿದ್ದು ಜೂನ್ ೬ ೧೯೫೮ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು.

ಕಾಳಿಂಗ ನಾವಡ
ಜನನ ದಿನಾ೦ಕ : ಜೂನ್ 6, 1958
ಜನನ ಸ್ಥಳ : ಗುಂಡ್ಮಿ , ಸಾಲಿಗ್ರಾಮ , ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ : ಕೋಟ ಶ್ರೀ ಅಮೃತೇಶ್ವರಿ ಮೇಳ, ಪೆರ್ಡೂರಿನ ವಿಜಯಶ್ರೀ ಮೇಳ, ಸಾಲಿಗ್ರಾಮ ಮೇಳದಲ್ಲಿ ಭಾಗವತರಾಗಿ ದುಡಿಮೆ.
ಪ್ರಶಸ್ತಿಗಳು : ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1990),
ಮರಣ ದಿನಾ೦ಕ : ಮೇ 27, 1990

ತಂದೆ ರಾಮಚಂದ್ರ ನಾವಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು. ಶ್ರೀ ನಾರಣಪ್ಪ ಉಪ್ಪೂರುರವರ ಜೊತೆಗೂಡಿ, ೧೯೭೨ ರಲ್ಲಿ, ಅಂದರೆ ಕೇವಲ ೧೪ ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದರು.

ವೃತ್ತಿ ಹಾಗೂ ಕಲಾಸೇವೆ

ಉಪ್ಪೂರರ ತಂಡವನ್ನು ಸೇರಿದ ನಾವಡರು ಸರಿಸುಮಾರು ೫-೬ ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. ೧೯೭೭ರಲ್ಲಿ ಪೆರ್ಡೂರಿನ ವಿಜಯಶ್ರೀ ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವಡರ ಭಾಗವತಿಕೆ ಜನಜನಿತವಾಯ್ತು. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು.

ತಮ್ಮ ಮೂವತ್ತೆರಡನೆಯ ವಯಸ್ಸಿಗೇ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವಡರು ವಿರಾಜಮಾನರಾದರು.೧೯೮೩ರಲ್ಲಿ ಶ್ರೀಮತಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ "ಆಗ್ನೇಯ ನಾವಡ" ಎಂಬ ಮಗನಿದ್ದಾರೆ.

ಮೇ ೨೭ ೧೯೯೦ ನೇ ಇಸವಿಯಲ್ಲಿ ೩೨ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ "ಕರಾವಳಿಯ ಗಾನಕೋಗಿಲೆ" ಗುಂಡ್ಮಿ ಕಾಳಿಂಗ ನಾವಡರಿಗೆ "ನಮನ".

ಕೃಪೆ : http://kn.wikipedia.com

ಈ ಲೇಖನಕ್ಕೆ ಸ೦ಪೂರ್ಣ ವಿವರಗಳು ಲಭ್ಯವಾಗಿಲ್ಲ. ಆಸಕ್ತರು ಯಾವುದೇ ಮೌಲ್ಯಯುತ ಮಾಹಿತಿಗಳನ್ನು ಕಳುಹಿಸಬೇಕಾಗಿ ವಿನ೦ತಿ.

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ