ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಲಿಪ ನಾರಾಯಣ ಭಾಗವತರು (ಹಿರಿಯ)

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಆಗಸ್ಟ್ 12 , 2013

ಕಾಸರಗೋಡು ತಾಲೂಕಿನ ಪಡ್ರೆ ಗ್ರಾಮದಲ್ಲಿ ಕರ‍್ಹಾಡ ಬ್ರಾಹ್ಮಣ ಕುಲದಲ್ಲಿ 1889ರ ವಿರೋಧಿ ಸಂವತ್ಸರದಲ್ಲಿ ಜನಿಸಿದ ಬಲಿಪ ನಾರಾಯಣ ಭಾಗವತರು ಆಧುನಿಕ ಶಾಲಾ ವಿದ್ಯಾಭ್ಯಾಸವಿಲ್ಲದೆಯೂ ಕನ್ನಡ ಭಾಷಾ ಸಾಹಿತ್ಯದಲ್ಲಿ, ಛಂದಸ್ಸಿನಲ್ಲಿ ಮತ್ತು ಸಂಗೀತದಲ್ಲಿ ಅಪಾರ ವಿದ್ವತ್ತನ್ನು ಗಳಿಸಿಕೊಂಡ, ಅತ್ಯಂತ ಪ್ರಭಾವಿ ಭಾಗವತರಾಗಿ ಇಪ್ಪತ್ತನೆ ಶತಮಾನದ ಪೂರ್ವಾರ್ಧದಲ್ಲಿ ಯಕ್ಷಗಾನ ರಂಗವನ್ನು ಆಳಿದವರು.

ಪಾಟಾಳಿ ಶಂಕರಭಾಗವತರು (ಬಣ್ಣದ ಗಾಂಧಿ ಮಾಲಿಂಗ ಅವರ ಅಜ್ಜ) ಮತ್ತು ಕೂಡ್ಲು ಸುಬ್ರಾಯ ಶ್ಯಾನುಭಾಗ ಭಾಗವತರಿಂದ ಕ್ರಮವತ್ತಾಗಿ ಯಕ್ಷಗಾನ ಸಂಗೀತವನ್ನು ಅಭ್ಯಾಸ ಮಾಡಿದ ಬಲಿಪ ಭಾಗವತರು 1966 (ನವೆಂಬರ್) ರಲ್ಲಿ ನಿಧನರಾಗುವವರೆಗೆ ತೆಂಕು ತಿಟ್ಟಿನ ಯಕ್ಷಗಾನ ಹಾಡುಗಾರಿಕೆಗೆ ಮಾದರಿಯಾಗಿದ್ದವರು. ಅವರು ಯಕ್ಷಗಾನದ ಪರಿಪೂರ್ಣ ಕಲಾವಿದರಾಗಿದ್ದರು. ಅಂದರೆ ಪ್ರಸಂಗ – ಹಾಡುಗಾರಿಕೆಗಳ ಮೇಲೆ ಮಾತ್ರವಲ್ಲ ಮದ್ದಳೆ ವಾದನ, ಚೆಂಡೆವಾದನ, ಹೆಜ್ಜೆಗಾರಿಕೆ ಮತ್ತು ಸಮಸ್ತ ರಂಗ ಪರಂಪರೆಗಳ ಬಗೆಗೆ ಅಧಿಕೃತವಾಗಿ ಹೇಳಬಲ್ಲವರಾಗಿದ್ದರು.

ಅವರಿದ್ದ ಆಟದಲ್ಲಾಗಲಿ, ಕೂಟದಲ್ಲಾಗಲಿ ಕ್ರಮಗೇಡು ಉಂಟಾಗಲಾರದೆಂಬ ಛಾತಿ ಅವರದಾಗಿತ್ತು. ಅವರು ಯಕ್ಷಗಾನ ರಂಗದ ಮಟ್ಟಿಗೆ ಬಲಿಪ (ತುಳುವಿನಲ್ಲಿ ಹುಲಿ) ರೇ ಆಗಿದ್ದರು. ಅವರು ಆಶುಕವಿಯಾಗಿದ್ದರು. ಸೂಕ್ಷ್ಮಗ್ರಾಹಿ ವೇಷಧಾರಿಗೆ ಹೆಚ್ಚಿನ ಅಭಿನಯದ ಅವಕಾಶ ಮಾಡಿಕೊಡಲು ಅಲ್ಲೆ ಸುಂದರವಾದ ಪದವನ್ನು ಹಾಡುತ್ತಲೇ ರಚಿಸಿಕೊಡುತ್ತಿದ್ದರು. ಹಾಡುಗಾರಿಕೆಯಲ್ಲಿ ಬಹುವಾದ ಪ್ರಯೋಗಶೀಲತೆಯನ್ನು ಮೆರೆದ ಪ್ರಸಂಗಕರ್ತ ಅವರು.

ಅವರು ಇಪ್ಪತ್ತು ಪ್ರಸಂಗಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಅಹಲ್ಯಾ ಶಾಪ ಮತ್ತು ವಾನರಾಭ್ಯುದಯ , ಬ್ರಹ್ಮಕಪಾಲ, ಪ್ರಹ್ಲಾದ ಚರಿತ್ರೆ, ಶಶಿಪ್ರಭಾ ಪರಿಣಯ, ದೇವೀ ಮಹಾತ್ಮೆ, ಶಕುಂತಲಾ ಪರಿಣಯ, ಪದ್ಮಾವತೀ ಕಲ್ಯಾಣ, ಕಚ ದೇವಯಾನಿ, ಚಂದ್ರಹಾಸ, ಗದಾಪರ್ವ, ಸಮುದ್ರ ಮಥನ, ಜಲಂಧರ ಕಾಳಗ, ರುಕ್ಮಿಣೀ ಸ್ವಯಂವರ, ನರಕಾಸುರ ವಧೆ, ಗರುಡ ಗರ್ವಭಂಗ, ಕೃಷ್ಣಾರ್ಜುನ ಕಾಳಗ, ಉಷಾ ಪರಿಣಯ, ವೀರವರ್ಮ ಕಾಳಗ, ಸಿಂಹಧ್ವಜ ಕಾಳಗ.

ಬಲಿಪ ಭಾಗವತರ ಕೃತಿಗಳ ಕುರಿತು ಶ್ರೀ ಮಂಜೇಶ್ವರ ಗೋವಿಂದ ಪೈಯವರು ಹೇಳಿದ ಮಾತು ಇದು- ಶ್ರೀ ಬಲಿಪ ನಾಯಾಯಣ ಭಾಗವತರೆಂದರೆ ಕಳೆದ ಎಷ್ಟೋ ವರ್ಷಗಳಿಂದ ತಮ್ಮ ಜಾಗಟೆಯ ಬಾಜನೆಗೆ ಎಷ್ಟೋ ಯಕ್ಷಗಾನ ಪ್ರಸಂಗಗಳನ್ನು ಹಾಡಿ ಆಡಿಸಿರುವ ವಯೋವೃದ್ಧರು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯಲ್ಲಿ ಅವರೆಂದರೆ ಎತ್ತಿದ ಕೈ.
ಬಲಿಪ ನಾರಾಯಣ ಭಾಗವತ (ಹಿರಿಯ)
ಜನನ : 1889
ಜನನ ಸ್ಥಳ : ಪಡ್ರೆ ಗ್ರಾಮ
ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ
ಕಲಾಸೇವೆ : ಭಾಗವತಿಕೆ, ಮದ್ದಳೆ ವಾದನ, ಚೆಂಡೆವಾದನ, ಹೆಜ್ಜೆಗಾರಿಕೆ ಮತ್ತು ಸಮಸ್ತ ರಂಗ ಪರಂಪರೆಗಳ ಬಗೆಗೆ ಅಧಿಕೃತ ಮಾಹಿತಿ , 20ಕ್ಕೂ ಹೆಚ್ಚು ಪ್ರಸ೦ಗಗಳ ರಚನೆ.
ಮರಣ ದಿನಾ೦ಕ : ನವೆಂಬರ್, 1966


ಈ ಜಿಲ್ಲೆಯಲ್ಲಿ ಅವರನ್ನು ಕಂಡಿಲ್ಲದ, ಕೇಳಿಲ್ಲದ ಯಕ್ಷಗಾನ ಪ್ರೇಮಿಗಳು ಇರುವರಾದರೆ ತೀರ ಕಡಿಮೆ. ಅವರ ಹೆಸರನ್ನು ಅರಿಯದವರೆಂದರೆ ಪ್ರಾಯಶಃ ನಾಸ್ತಿ ಎನ್ನಬಹುದು. ಹೀಗಾಗಿ ಈ ಪ್ರಸಂಗಗಳು ಅಂಥವರೊಬ್ಬ ಯಕ್ಷಗಾನ ವಿಶಾರದರ ಕೃತಿಗಳೆಂಬುದರಿಂದ ಅವು ಉತ್ತಮವಾಗಿರಲೇಬೇಕು

ಬಲಿಪರ ರಚನೆ ಯಕ್ಷಗಾನ ಮಾರ್ಗದಂತೆ ತಿಳಿನುಡಿಯೇ. ಅವರ ರಚನೆಗಳ ಸಂಗೀತಮೌಲ್ಯ ಮೇಲ್ಮಟ್ಟದ್ದು. ಲಯದ ನಾಟ್ಯಕ್ಕೆ ಅಡಿಗಡಿಗೆ ಅನುವು ನೀಡುವ ಪದಪ್ರಯೋಗ ಅವರದು. ಭಾಷಾಶೈಲಿಯಂತು ತುಂಬ ಪರಿಷ್ಕಾರಯುತವಾದದ್ದು.

ಕೃಪೆ : http://kanaja.in/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Ishwara Bhat K(3/7/2016)
ಒಳ್ಳೆಯ ಲೇಖನ. ಸಿಂಹಧ್ವಜ ಕಾಳಗದ ಪ್ರತಿ ಇದ್ದರೆ ಅದನ್ನೂ ಪ್ರಕಟಿಸಿ.
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ