ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಡಗುತಿಟ್ಟಿನ ಹಿರಿಯ ಬಣ್ಣದ ವೇಷದಾರಿ - ಎಳ್ಳಂಪಳ್ಳಿ ಜಗನ್ನಾಥ ಆಚಾರ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಸೆಪ್ಟೆ೦ಬರ್ 2 , 2013

ಬಣ್ಣದ ವೇಷದಿಂದ ಬಡವಾಗಿರುವ ಬಡಗುತಿಟ್ಟಿಗೆ ಎಳ್ಳಂಪಳ್ಳಿಯ ಜಗನ್ನಾಥ ಆಚಾರ್ಯರು ಏಕಮೇವ ಆಶಾಕಿರಣ.ಯಕ್ಷಗಾನದಲ್ಲಿ ಭಾಗವತಿಕೆ,ಹಿಮ್ಮೇಳ ಪರಿಕರ, ಮುಮ್ಮೇಳದ ವಿವಿದ ರೀತಿಯ ವೇಷಗಳು ಇಂದು ಬಹಳಷ್ಟು ಸುಧಾಹರಣೆಯೊಂದಿಗೆ ಆಕರ್ಷಣೀಯವಾಗಿ ಬೆಳೆಯುತಿದ್ದರೂ ಬಡಗುತಿಟ್ಟಿನ ಮಟ್ಟಿಗೆ ಬಣ್ಣದ ವೇಷದ ಪ್ರಾಮುಖ್ಯ ನಶಿಸುತ್ತಿದೆ ಎನ್ನುವುದು ಖೇದಕರ.ತೆಂಕು ತಿಟ್ಟಿಗೆ ಹೋಲಿಸಿದಾಗ ಬಡಗಿನಲ್ಲಿ ಬಣ್ಣದ ವೇಷದಾರಿಗಳು ಬೆರಳೆಣಿಕೆಯಷ್ಟು ಮಾತ್ರ.ಇಂತಹ ಕಾಲಘಟ್ಟದಲ್ಲಿ ಹಿರಿಯ ಬಣ್ಣದ ವೇಷದಾರಿ, ಯಕ್ಷಲೋಕದಲ್ಲಿ ಸುದೀರ್ಘ ನಲವತ್ತ ಒಂದು ಸಂವತ್ಸರಕಾಲ ಬಣ್ಣದ ವೇಷದಾರಿಯಾಗಿ ಮೆರೆದ ಆಚಾರ್ಯರು ನಮ್ಮ ಗಮನಸೆಳೆಯುತ್ತಾರೆ.

ಬಡಗು ತಿಟ್ಟು ಯಕ್ಷಪರಂಪರೆಗೆ ಅನರ್ಘ್ಯರತ್ನದಂತ ಕಲಾವಿದರನ್ನು ನೀಡಿದ ಉಡುಪಿ ತಾಲೂಕಿನ ನೀಲಾವರ ಸಮೀಪದ ಎಳ್ಳಂಪಳ್ಳಿ ಎಂಬ ಕುಗ್ರಾಮದಲ್ಲಿ ಮದ್ಯಮ ವರ್ಗದ ವಿಶ್ವಕರ್ಮ ಸಮಾಜದ ಶೀನ ಆಚಾರ್ ಮತ್ತು ಅಕ್ಕಯ್ಯ ದಂಪತಿಗಳ ಮಗನಾದ ಅಚಾರ್ಯರು ಕಡು ಬಡತನದಲ್ಲಿ ಬೆಳೆದ ಕಾರಣ 5ನೇ ತರಗತಿ ವಿದ್ಯೆಗೆ ತಿಲಾಂಜಲಿ ನೀಡಿ ಬಾಲಗೋಪಾಲರಾಗಿ ಶ್ರೀ ಮ೦ದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಆಗ ಮೇಳದಲ್ಲಿದ್ದ ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ,ಪೇತ್ರಿ ಮಾದುನಾಯಕರಿಂದ ಪ್ರಾಥಮಿಕ ಅಬ್ಯಾಸ ಮಾಡಿದ ಇವರು, ಪರಿಪೂರ್ಣರಾಗಬೇಕೆಂಬ ಉತ್ಕಟಾಕ್ಷೆಯಿಂದ ಉಡುಪಿ ಸಮೀಪದ ಹಿರಿಯರೊಬ್ಬರಲ್ಲಿ ಅದೇ ಮಳೆಗಾಲ ಮನೆಕೆಲಸಕ್ಕೆ ಸೇರಿಕೊಂಡು ಅಲ್ಲಿ ವಿಧ್ಯಾರ್ಥಿಯಾಗಿದ್ದ ದಿ. ರಾಮ ನಾಯರಿಯವರಲ್ಲಿ ಯಕ್ಷಗಾನ ವಿದ್ಯಾಭ್ಯಾಸ ಮಾಡಿದರು.ನಂತರ ಉಡುಪಿ ಯಕ್ಷಗಾನ ಕೇಂದ್ರದ ಖಾಯಂ ಸದಸ್ಯನಾಗಿ ಗುರು ವೀರಭದ್ರ ನಾಯಕ್ ,ನೀಲಾವರ ರಾಮಕ್ರಷ್ಣಯ್ಯ , ಹಿರಿಯಡಕ ಗೋಪಾಲ ರಾಯರಿಂದ ಯಕ್ಷಗಾನದ ತಾಳ ಹೆಜ್ಜೆಗಾರಿಕೆಯಲ್ಲಿ ಪರಿಪೂರ್ಣತೆ ಸಾದಿಸಿದರು.ವೀರಭದ್ರ ನಾಯಕರ ನೆಚ್ಚಿನ ಶಿಷ್ಯನಾಗಿ ಮಟ್ಪಾಡಿ ಶೈಲಿಯ ಪ್ರಾತಿನಿಧಿಕರಾಗಿ ಗುರುತಿಸಲ್ಪಟ್ಟರು.

ಸುಮಾರು 1980ರಲ್ಲಿ ಪ್ರಸಿದ್ದ ಕಲಾವಿದರಿಂದ ಮೆರೆಯುತಿದ್ದ ಸಾಲಿಗ್ರಾಮ ಮೇಳ ಸೇರಿದ ಅಚಾರ್ಯರನ್ನು ಆಗಿನ ವ್ಯವಸ್ಥಾಪಕರಾಗಿದ್ದ ಸೋಮನಾಥ ಹೆಗ್ದೆಯವರು ಎರಡನೇ ವೇಷದ ಎದುರಿನ ಬಣ್ಣದ ವೇಷದಾರಿಯ ಸ್ಥಾನದಲ್ಲಿ ಕೂರಿಸಿ ಅಧಿಕೃತ ಬಣ್ಣದ ವೇಷದಾರಿಯನ್ನಾಗಿ ಗೌರವಿಸಿದ್ದನ್ನು ಆಚಾರ್ಯರು ಕೃತಜ್ಞತೆಯಿಂದ ನೆನೆಯುತ್ತಾರೆ.ಅಲ್ಲಿ ಜಲವಳ್ಳಿ ವೆಂಕಟೇಶರಾವ್ ಅವರ ಎದುರಿಗೆ ಕುಳಿತು ಬಣ್ಣದ ಸಾಲಿನ ಎಲ್ಲಾ ವೇಷಗಳನ್ನು ಮಾಡಿ ಸೈ ಎಣಿಸಿಕೊಂಡ ಇವರನ್ನು ಸ್ವತಹ ಕಾಳಿಂಗ ನಾವಡರೇ ಮುಕ್ತ ಕಂಠದಿಂದ ಹೊಗಳಿ ಆಗಿನ ಬಣ್ಣದ ವೇಷದಾರಿ ಸಕ್ಕಟ್ಟುವಿನವರ ಉತ್ತರಾಧಿಕಾರಿಯೆಂದು ಘೋಷಿಸಿದ್ದರು. ಅಲ್ಲಿನ ಮೂರು ವರ್ಷದ ತಿರುಗಾಟದ ನಂತರ ಮ೦ದಾರ್ತಿ ಮೇಳದಲ್ಲಿ ಕೆಂಪು ಮುಂಡಾಸಿನ ವೇಷದೊಂದಿಗೆ ಬಣ್ಣದ ವೇಷಗಳನ್ನು ಮಾಡುತ್ತಾ ಮುಂದಿನ ವ್ರತ್ತಿ ಜೀವನದಲ್ಲಿ ಬಣ್ಣದ ವೇಷದಾರಿಯಾಗೀಯೇ ಗುರುತಿಸಿಕೊಂಡು ಜನಪ್ರಿಯರಾದರು.

ಕೋಟ ಶಿವರಾಮ ಕಾರಂತರ ಯಕ್ಷರಂಗ ಸೇರಿಕೊಂಡ ಆಚಾರ್ಯರು ಅವರ ಕಟ್ಟು ನಿಟ್ಟಿನ ಕ್ರಮಬದ್ದ ಮಾರ್ಗ ದರ್ಶನದಲ್ಲಿ ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ ವೇಷಭೂಷಣ, ನೆಡೆಗಳ ಕುರಿತಾದ ಸಮಗ್ರ ಅದ್ಯಯನ ಸಾದ್ಯವಾಗಿ ಪರಿಪೂರ್ಣ ಬಣ್ಣದ ವೇಷದಾರಿಯಾಗಿ ಕಾರಂತರೊಂದಿಗೆ ಹಾಂಕಾಂಗ್, ಸ್ವಿಜರ್ಲೇ೦ಡ್, ರಷ್ಯಾ ಮುಂತಾದ ರಾಷ್ಟಗಳಲ್ಲಿ ಬಣ್ಣದ ಆರ್ಭಟ ಮೆರೆಸಿದರು.ಪಂಚವಟಿಯ ಶೂರ್ಪನಖಾ, ಹಿಡಿಂಬಾ ವಿವಾಹದ ಹಿಡಿಂಬೆ ಮತ್ತು ಹಿಡಿಂಬಾಸುರ, ಶ್ವೇತ ಕುಮಾರದ ದುರ್ಜಯಾಸುರ, ವಿದ್ಯುನ್ಮತಿ ಕಲ್ಯಾಣದ ಕಾಲಜಂಗ ಮತ್ತು ವೃತ್ತಜ್ವಾಲೆ.ಘೋರಭೀಷಣ, ಮೇಘಸ್ಥನಿ, ಘಟೋತ್ಕಜ, ವೀರಭದ್ರ , ತಮಾಲಕೇತ ಮುಂತಾದ ಬಣ್ಣ ಹಾಗು ಒತ್ತು ಬಣ್ಣದ ವೇಷಗಳು ಆಚಾರ್ಯರಿಗೆ ಕೀರ್ತಿ ತಂದ ಬಣ್ಣದ ವೇಷಗಳು. ಲೀಲಾ ಉಪಾದ್ಯರ ನೇತ್ರತ್ವದಲ್ಲಿ ಪ್ರಾನ್ಸ್ ಮುಂತಾದ ಹೊರದೇಶಗಳಲ್ಲೂ ಬಣ್ಣದ ಸೊಗಸನ್ನು ಮೆರೆಯಿಸಿದ್ದಾರೆ.

ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ
ಜನನ :  
ಜನನ ಸ್ಥಳ : ಎಳ್ಳ೦ಪಳ್ಳಿ ಗ್ರಾಮ, ನೀಲಾವರ
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಮ೦ದಾರ್ತಿ , ಸಾಲಿಗ್ರಾಮ ಸೇರಿದ೦ತೆ ಹಲವು ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ದುಡಿಮೆ.
ಪ್ರಶಸ್ತಿಗಳು:
ಪ್ರತಿಷ್ಟಿತ ಸೀತಾನದಿ ಪ್ರಶಸ್ತಿ ,ಗೋಪರಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು
ಎಳ್ಳಂಪಳ್ಳಿಯವರು ಮುಖವರ್ಣಿಕೆ ಬಗ್ಗೆ ಬಹು ಎಚ್ಚರವಹಿಸುವ ಕಲಾವಿದರು. ದಿನವೂ ಹುಳಿ ಅಕ್ಕಿಹಿಟ್ಟಿನ ಚಿಟ್ಟೆ ಇಡುವ ಕ್ರಮ ಇವರದ್ದು. ಸುಮಾರು ಐದು ಗಂಟೆಗಳ ಕಾಲ ಚೌಕಿಯಲ್ಲಿ ಕುಳಿತು ಮುಖವರ್ಣಿಕೆಯಲ್ಲಿ ತೊಡಗುವ ಇವರ ಶ್ರದ್ದೆ ತಾಳ್ಮೆ ಇತರರಿಗೆ ಅನುಕರಣೀಯ. ಹಿರಿಯ ಬಣ್ಣದ ವೇಷದಾರಿ ದಿ. ಸಕ್ಕಟ್ಟು ಲಕ್ಶ್ಮೀನಾರಾಯಣಯ್ಯನವರ ರಂಗಪ್ರವೇಶದ ಪೂರ್ವದ ಕೂಗು, ರಂಗದಲ್ಲಿ ಅವರ ಅಭಿನಯವನ್ನು ನೆನಪಿಸುವ ಬಡಗಿನ ಏಕಮಾತ್ರ ಬಣ್ಣದ ವೇಷದಾರಿಯೆಂದು ಇವರನ್ನು ಎಲ್ಲಾ ಅಂಗಗಳಲ್ಲೂ ಗುರುತಿಸಬಹುದು.ಸಹಜ ಆಸಕ್ತಿ, ನಿರಂತರ ಶ್ರಮದಿಂದ ಸುಮಾರು 41 ವರ್ಷ ಬಡಗಿನ ಬಣ್ಣದ ಲೋಕವನ್ನು ಶ್ರೀಮಂತ ಗೊಳಿಸಿದ ಆಚಾರ್ಯರು ಅದಿಕ ವೇತನದೊಂದಿಗೆ ಇತರ ವೇಷಗಳಿಗೂ ಕರೆಬಂದಾಗ ತನ್ನ ಬಣ್ಣದ ವೇಷದ ಆಸಕ್ತಿ ಬಿಡದೆ ಆದರ್ಶಪ್ರಾಯರಾಗಿದ್ದಾರೆ. ಸಂಪ್ರದಾಯ ಮತ್ತು ಆದುನೀಕತೆಯ ಕೊಂಡಿಯಂತಿರುವ ಇವರು ಆಸಕ್ತ ತರುಣರು ಬಂದಲ್ಲಿ ಬಣ್ಣದ ವೇಷದ ಸೂಕ್ಷ್ಮಾತಿಸೂಕ್ಷ್ಮವನ್ನು ಕಲಿಸಿಕೊಡುವ ಇರಾದೆ ಹೊಂದಿದ್ದಾರೆ. ಬಡಗುತಿಟ್ಟಿನಲ್ಲಿ ನಶಿಸುತ್ತಿರುವ ಬಣ್ಣದ ವೇಷದ ಪರಂಪರೆಯ ಏಕಮೇವ ಕಲಾವಿದರಾದ ಎಳ್ಳಂಪಳ್ಳಿಯವರಿಗೆ ಪ್ರತಿಷ್ಟಿತ ಸೀತಾನದಿ ಪ್ರಶಸ್ತಿ ,ಗೋಪರಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ನಾಡಿನಾದ್ಯಂತ ಯೋಗ್ಯವಾಗಿಯೇ ಸಂದಿದೆ.
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಆದರ್ಶ್(10/9/2014)
ಒಳ್ಳೆಯ ಲೇಖನ.ತುಂಬಾ ಸಂತೋಷವಾಯ್ತು.
s.v.uday kumar shetty(9/3/2013)
thanks for introducing senior artist
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ