ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಡಗುತಿಟ್ಟಿನ ಐಸಿರಿ ಐರ್ ಬೈಲು ಆನಂದ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಸೆಪ್ಟೆ೦ಬರ್ 11 , 2013

ಬಡಗುತಿಟ್ಟಿನ ಮದ್ಯಪ್ರಾಂತ್ಯದ ಬಯಲಾಟದ ರಂಗಸ್ಥಳದ, ಸಮಕಾಲೀನ ಐವತ್ತರ ವಯೋಮಿತಿಯ ಆಸುಪಾಸಿನ ಎರಡನೇ ವೇಷದಾರಿಗಳಾದ ಉಪ್ಪುಂದ ನಾಗೇಂದ್ರ, ನರಾಡಿ ಬೋಜರಾಜ ಶೆಟ್ಟಿ, ಆಜ್ರಿ ಗೋಪಾಲಗಾಣಿಗ, ಕೋಡಿ ವಿಶ್ವನಾಥಗಾಣಿಗ ಮುಂತಾದವರ ಸಾಲಿನಲ್ಲಿ ಗುರುತಿಸಲ್ಪಡುವ ಇನ್ನೊಂದು ಹೆಸರು ಐರ್ ಬೈಲು ಆನಂದ ಶೆಟ್ಟಿಯವರದ್ದು. ಮದ್ಯಮ ತಿಟ್ಟಿನ ಗಾಂಬೀರ್ಯಬದ್ದ ರಂಗನೆಡೆಯಲ್ಲಿ ವಿಜ್ರಂಭಿಸುವ ಇವರಲ್ಲಿ ಗುರು ವೀರಭದ್ರ ನಾಯಕರ ಮಟ್ಪಾಡಿ ತಿಟ್ಟಿನ ಕುಣಿತವನ್ನು ಗಮನಿಸಬಹುದು.

ಇವರು ಯಕ್ಷಗಾನ ನ್ರತ್ಯ ಅಭ್ಯಾಸ ಮಾಡಿದ್ದು ವೀರಭದ್ರ ನಾಯ್ಕರ ಶಿಷ್ಯರಾದ ಹಾರಾಡಿ ಸರ್ವೋತ್ತಮ ಗಾಣಿಗರಲ್ಲಿ ಮಾತ್ರವಲ್ಲದೇ, ಮಾರಣಕಟ್ಟೆ ಮೇಳದಲ್ಲಿ ವೀರಭದ್ರ ನಾಯ್ಕರ ನ್ರತ್ಯ ಶೈಲಿಯನ್ನು ಬಾಲಕಲಾವಿದನಾಗಿ ಅದೇ ಮೇಳದಲ್ಲಿ ನಾಯ್ಕರ ನ್ರತ್ಯದ ಸೂಕ್ಷ್ಮಾತಿಸೂಕ್ಷ್ಮವನ್ನು ಅರಿತುಕೊಂಡವರು. ಹರಾಡಿ ಶೈಲಿಯ ಗತ್ತು ಗಾಂಬೀರ್ಯ, ಜಾಪು, ವೀರಭದ್ರ ನಾಯ್ಕರ ನ್ರತ್ಯ ಶೈಲಿ ಇವರ ವಿಶೇಷತೆ. ನಾಯ್ಕರ ಇನ್ನೋರ್ವ ಶಿಷ್ಯ ಖ್ಯಾತ ಸ್ತ್ರೀ ವೇಷದಾರಿ ಮಾರ್ಗೋಳಿ ಗೋವಿಂದ ಸೇರೆಗಾರರ ಒಡನಾಟವೂ ದೊರೆತು ಇವರ ಮಾತಿನ ಶೈಲಿ ಇನ್ನಷ್ಟು ಪಕ್ವಗೊಂಡಿತು. ಇಂದಿನವರೆಗೂ ಸುದೀರ್ಘ 35 ವರ್ಷ ಮಾರಣಕಟ್ಟೆ ಒಂದೇ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಗ್ಗಳಿಕೆ ಇವರದ್ದು.

ಬಾಲ್ಯ ಹಾಗೂ ಶಿಕ್ಷಣ

ಕುಂದಾಪುರ ತಾಲೂಕು ಐರ್ ಬೈಲು ಎಂಬಲ್ಲಿ 1961ರಲ್ಲಿ ರಾಮಣ್ಣ ಶೆಟ್ಟಿ, ನರಸಮ್ಮ ಶೆಡ್ತಿ ದಂಪತಿಗಳ ಪುತ್ರನಾಗಿ ಜನಿಸಿದ ಶೆಟ್ಟರು 7ನೇ ತರಗತಿ ವಿದ್ಯಾಬ್ಯಾಸಮಾಡಿ ತನ್ನ 15ನೇ ವಯಸ್ಸಿನಲ್ಲಿ ಕಲಾಜೀವನಕ್ಕೆ ಕಾಲಿರಿಸಿದರು. ಸುತ್ತಮುತ್ತ ನೆಡೆಯುತಿದ್ದ ಬಯಲಾಟಗಳಿಂದ ಆಕರ್ಷಿತರಾದ ಇವರು ಬಾಲ್ಯದಲ್ಲಿಯೇ ಬಣ್ನದ ಬದುಕಿನ ರಂಗಿನ ಹೊಂಗನಸು ಕಂಡಿದ್ದರು. ಹಾರಾಡಿ ಗಾಣಿಗ ಕಲಾವಿದರಿಂದ ನ್ರತ್ಯ ಅಭಿನಯ ಕಲೆಯನ್ನು ಕಲಿತು ಸ್ವಂತ ಸಾದನೆ ಪರಿಶ್ರಮದಿಂದ ಸಶಕ್ತ ಕಲಾವಿದನಾಗಿ ರೂಪುಗೊಂಡವರು. ಬಡಗುತಿಟ್ಟಿನ ಯಕ್ಷಗಾನದಲ್ಲೇ ಅಪರೂಪವೆಂಬಂತೆ ಒಂದೇ ಮೇಳದಲ್ಲಿ ಕೋಡಂಗಿಯಾಗಿ, ಕಟ್ಟು ವೇಷದಾರಿಯಾಗಿ, ಪುರುಷ ವೇಷದಾರಿಯಾಗಿ, ಹೀಗೆ ಹಂತ ಹಂತವಾಗಿ ಮೇಲೇರಿ ಮಾರಣಕಟ್ಟೆ ಮೇಳದಲ್ಲಿ ಪ್ರದಾನ ವೇಷದಾರಿಯಾಗಿ ಮೂಡಿ ಬಂದವರಿವರು. ಇದಕ್ಕೆಲ್ಲಾ ಮೇಳದ ಆಗಿನ ವ್ಯವಸ್ಥಾಪಕರಾಗಿದ್ದ ಎಂ. ಎಂ. ಹೆಗ್ಡೆಯವರೇ ಕಾರಣ, ಅವರ ಗರಡಿಯಲ್ಲಿ ಪಳಗಿದ್ದರಿಂದಲೇ ನಾನು ಈ ಮಟ್ತಕ್ಕೆ ಬೆಳೆಯಲು ಕಾರಣ ಎಂಬುದನ್ನು ಶೆಟ್ಟರು ವಿನಮ್ರರಾಗಿ ನೆನಪಿಸುತ್ತಾರೆ. ಯಕ್ಷಗಾನ ವಲಯದಲ್ಲಿ ಎಂ. ಎಂ. ಹೆಗ್ಡೆಯವರ ಪಟ್ಟದ ಶಿಷ್ಯನೆಂದೇ ಗುರುತಿಸಲ್ಪ ಶಿಷ್ಟ ಕಲಾವಿದರಿವರು.

ವೃತ್ತಿ ಹಾಗೂ ಕಲಾಸೇವೆ

ಆನಂದ ಶೆಟ್ಟರು ಮಾರಣ ಕಟ್ಟೆ ಮೇಳ ಸೇರುವಾಗ ಮೇಳವು ಘಟಾನುಘಟಿ ಕಲಾವಿದರ ಕೂಟವಾಗಿತ್ತು. ಶಿಸ್ತು ಕೂಟದ ಶ್ರಂಗಾರ ವ್ಯವಸ್ಥೆ ರಂಗದ ಶ್ರಂಗಾರ ಎಂಬ ದ್ಯೇಯ ವಾಕ್ಯವನ್ನು ರಂಗದ ಹೊರಗೂ ಒಳಗೂ ಪಾಲಿಸುತಿದ್ದ ದಕ್ಷ ಯಜಮಾನರಾದ ಎಂ. ಎಂ. ಹೆಗ್ಡೆಯವರ ಯಜಮಾನಿಕೆಯಲ್ಲಿ. ಗುರು ವೀರಭದ್ರ ನಾಯಕ್, ಉಡುಪಿ ಬಸವ, ಮಾರ್ಗೋಳಿ ಗೋವಿಂದ ಸೇರೆಗಾರ್, ವಂಡ್ಸೆ ನಾರಾಯಣ ಗಾಣಿಗ, ಮೊಳಹಳ್ಳಿ ಹೆರಿಯ, ಅರಾಟೆ ಮಂಜುನಾಥ ಮುಂತಾದವರ ವೇಷಗಳನ್ನು ಬಾಲಕಲಾವಿದನಾಗಿ ನೋಡುವ ಅವಕಾಶ ಅವರಿಗೆ ದೊರೆಯಿತು. ಮಾರಣಕಟ್ಟೆ ಮೇಳವೇ ಅವರಿಗೆ ಗುರುಕುಲವಾಯಿತು. ಕಂಡು ಕೇಳಿ ತಿಳಿದದ್ದೇ ಅವರ ಬಂಡವಾಳವಾಯಿತು. ಬಾಗವತ ಶಿರೋಮಣಿಗಳಾದ ಮರವಂತೆ ದಾಸರು, ಮರಿಯಪ್ಪ ಆಚಾರ್ಯರು ಮುಂತಾದವರ ಹಿಮ್ಮೇಳವೂ ಅದಕ್ಕೆ ಪೂರಕವಾಯಿತು. ಅಂದಿನ ಹಿರಿಯ ಬಾಗವತರಿಂದ ಇಂದಿನ ಕಿರಿಯ ಬಾಗವತರಾದ ಉಮೇಶ ಸುವರ್ಣ, ರಾಘವೇಂದ್ರ ಆಚಾರ್, ಮಂಜುನಾಥ ಕೊಠಾರಿ, ಕೃಷ್ಣದಾಸ ವರೆಗಿನ ಎರಡು ತಲೆಮಾರಿನ ಹಿಮ್ಮೇಳಕ್ಕೆ ಹೊಂದಿಕೊಂಡ ಕೀರ್ತಿ ಅವರದ್ದು. ಹಾರಾಡಿ ಕಲಾವಿದರ ಮ೦ದಾರ್ತಿ ಮೇಳದ ತಿರುಗಾಟ ಬಿಟ್ಟರೆ ಒಂದೇ ಮೇಳದಲ್ಲಿ ದೀರ್ಘಕಾಲದ ತಿರುಗಾಟ ಮಾಡಿದ ಕೀರ್ತಿ ಇವರದ್ದೆನ್ನಬಹುದು. .

ಐರ್ ಬೈಲು ಆನಂದ ಶೆಟ್ಟಿ
ಜನನ : 1961
ಜನನ ಸ್ಥಳ : ಐರ್ ಬೈಲು
ಕುಂದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಮಾರಣ ಕಟ್ಟೆ , ಮ೦ದಾರ್ತಿ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ದುಡಿಮೆ.
ಪ್ರಶಸ್ತಿಗಳು:
ಜಾಗತಿಕ ಬಂಟ ಪ್ರತಿಷ್ಟಾನದ ಪ್ರಶಸ್ತಿ , ಎಂ. ಎಂ. ಹೆಗ್ಡೆ ಪ್ರತಿಷ್ಟಾನದ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು
ಎರಡನೇ ವೇಷಕ್ಕೆ ಸಮುಚಿತವಾಗುವಂತಹ ಆಳಂಗ, ಗಾಂಬೀರ್ಯ, ಸ್ವರತ್ರಾಣ, ಶೈಲೀಕೃತ ನ್ರತ್ಯ, ಅಭಿನಯ ವಿದಾನ, ಭಾವಾಭಿವ್ಯಕ್ತಿಗಳಿಂದ ನಾಯಕ, ಪ್ರತಿನಾಯಕ ಪಾತ್ರಗಳೆರಡಕ್ಕೂ ಹೊಂದಿಕೊಳ್ಳಬಲ್ಲ ಶರೀರ ಶಾರೀರ ಇರುವ ಇವರನ್ನು ಹಗಲು ನೋಡಿದ ಯಾರೂ ರಾತ್ರಿ ರಂಗಸ್ಥಳದಲ್ಲಿ ಗುರುತಿಸಲಾರರು. ಅತ್ಯಂತ ಮಿತಬಾಷಿಯಾಗಿ, ಮ್ರದು ಸ್ವಬಾವದ ಇವರು ರಾತ್ರಿ ಖಳನಾಯಕನಾಗಿ ಬಂದರೇ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುವ ಅಭಿನಯ ಚಾತುರ್ಯದಿಂದ ಎಂತವರನ್ನೂ ಮೋಡಿಮಾಡಬಲ್ಲರು, ಕರ್ಣಾರ್ಜುನನ ಕಾಳಗದಲ್ಲಿ ಕರ್ಣನೂ ಆಗಬಲ್ಲ, ಅರ್ಜುನನೂ ಆಗಬಲ್ಲ, ಶಲ್ಯನೂ ಆಗಬಲ್ಲ, ಕೀಚಕವಧೆಯ ಕೀಚಕನಾಗಲಿ, ವಲಲನಾಗಲಿ, ಗದಾಯುದ್ದದ ಕೌರವನಾಗಲಿ, ಭೀಮನಾಗಲಿ, ಚಿತ್ರಾಕ್ಷಿ ಕಲ್ಯಾಣದ ರಕ್ತಜಂಘನಿರಲಿ ರುದ್ರಕೋಪನಿರಲಿ, ರಾಮನಿರಲಿ, ರಾವಣನಿರಲಿ, ಆಯಾ ಪಾತ್ರಕ್ಕೆ ಗರಿಷ್ಟ ಮಟ್ಟದ ನ್ಯಾಯ ಒದಗಿಸುವಲ್ಲಿ ಶೆಟ್ಟರು ಎಲ್ಲಿಯೋ ಸೋತಿಲ್ಲ. ಇವರ ಕಂಸ, ಕಾಲನೇಮಿ, ಶುಂಬಾಸುರ, ಮೂಖಾಸುರ ದುರ್ಜಯಾಸುರ ಭಸ್ಮಾಸುರ ಮುಂತಾದ ಪಾತ್ರಗಳು ಕಲಾರಸಿಕರ ಮನಮುದಗೊಳಿಸುವಲ್ಲಿ ವಿಶೇಷ ಯಶಸ್ಸು ಸಾದಿಸಿವೆ.

ಬಡಗುತಿಟ್ಟಿನ ಮೇರು ಪುರುಷ ವೇಷದಾರಿಗಳಾದ ಶಿರಿಯಾರ ಮಂಜು ನಾಯಕ್, ಮತ್ತು ಮೊಳಹಳ್ಳಿ ಹೆರಿಯ ನಾಯ್ಕರ ಒಡನಾಡಿಯಾದ ಇವರು ಅಪೂರ್ವವಾದ ಕಿರುಹೆಜ್ಜೆಯನ್ನು ಬ್ರಹ್ಮಾವರ ಶೈಲಿಯ ಕಟ್ಟುಮೀಶೆಯೊಂದಿಗೆ ಪ್ರದರ್ಶಿಸಿದಾಗ ಈ ಹಿರಿಯ ಕಲಾವಿದರನ್ನು ನೆನಪಿಸುವ ಚಾಕಚಕ್ಯತೆಯನ್ನು ಗಮನಿಸಬಹುದು. ನಿಲುವು ನೆಡೆಯಲ್ಲಿ ಸ್ವಂತಿಕೆಯ ಛಾಪು, ಗತ್ತುಗಾರಿಕೆ, ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಔಚಿತ್ಯಕ್ಕೆ ತಕ್ಕ ಅಭಿನಯ ಸುಸ್ಪಷ್ಟವಾದ ಮಾತು, ರಂಗದಲ್ಲಿ ಅಚ್ಚುಕಟ್ಟು, ಅಪೂರ್ವವಾದ ಪ್ರತ್ಯುತ್ಪನ್ನಮತಿತ್ವದಿಂದ ಶೆಟ್ಟರ ಎರಡನೇ ವೇಷಗಳಾದ ಭೀಷ್ಮ, ಯಯಾತಿ, ವಾಲಿ, ರಾಮ, ಜಾಂಬವ ಮುಂತಾದ ಪಾತ್ರಗಳು ಇತರರಿಗಿಂತ ಭಿನ್ನವಾಗಿ ಕಾಣಿಸುತ್ತವೆ. ರಾಜ ಪಾತ್ರದಿಂದ ಖಳನಾಯಕನವರೆಗೆ ಪ್ರತೀಪಾತ್ರಕ್ಕೂ ಸ್ವಂತ ಶೈಲಿಯಿಂದ ಯಾವುದೇ ಅನುಕರಣೆ ಇಲ್ಲದೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ ಇವರ ಬೀಷ್ಮ, ವೀರಮಣಿ, ಕರ್ಣ, ದುಷ್ಟಬುದ್ದಿ, ರುಕ್ಮ, ಬಲರಾಮ ಮುಂತಾದ ಎರಡನೇ ವೇಷಗಳು, ಪುಷ್ಕಳ, ಅರ್ಜುನ, ಸುದನ್ವ, ಕೃಷ್ಣ, ಮುಂತಾದ ಪುರುಷ ವೇಷಗಳು, ಅಲ್ಲದೇ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ ಕಂಹಾಸುರನ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿವೆ. ಮೂಕಾಸುರನಾಗಿ ಮಾತನಾಡಲಾಗದೆ ಶ್ರೀ ದೇವಿಮೂಕಾ೦ಬಿಕೆಕೆಯಲ್ಲಿ ವಿನೀತನಾಗಿ ಚಡಪಡಿಸುತ್ತಾ ಭಕ್ತಿ ಬಾವದಿಂದ ದೇವಿಯಲ್ಲಿ ಭಿನ್ನವಿಸಿಕೊಳ್ಳುವ ಅವರ ಅಭಿನಯ ಸಾಮಥ್ರ್ಯಕ್ಕೆ ಸ್ವತಹ ಯಕ್ಷಗಾನ ವಿಮರ್ಶಕರಾದ ಎಂ. ಎಂ. ಹೆಗ್ಡೆಯವರೇ ಶಹಬ್ಬಾಸ್ಗಿರಿ ನೀಡಿದ್ದಾರು. ಹೊಸ ಪ್ರಸಂಗಗಳಲ್ಲಿ ಹೊಸತನವನ್ನು ನೀಡುವ ಇವರ ಸತೀ ಸುಶೀಲೆ ಪ್ರಸಂಗದ ದುರ್ಜಯ, ನಾಗಶ್ರೀಯ ಶಿಥಿಲ, ಪಾಪಣ್ಣ ವಿಜಯದ ಉಗ್ರಸೇನ, ಬನಶಂಕರಿಯ ಚಮೂರ ಮುಂತಾದ ಪಾತ್ರಗಳು ಜನ ಮನ್ನಣೆ ಪಡೆದಿವೆ.

ಸರಿ ಸುಮಾರು 70ರಿಂದ 90ರ ದಶಕದವರೆಗೆ ಹೆಚ್ಚಾಗಿ ಪ್ರದರ್ಶಿಸಿಸಲ್ಪಡುತಿದ್ದ ಜೋಡಾಟಗಳಲ್ಲಿ ಎದುರು ಮೇಳಕ್ಕೆ ಶೆಟ್ಟರು ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳುತಿದ್ದರು. ಜೋಡಾಟದ ವಿಬೀಷಣ, ಕೌಂಡ್ಲೀಕ, ಕೀಚಕ ಮುಂತಾದ ವೇಷಗಳ ಗಜಗಾತ್ರದ ಅಟ್ಟೆಮುಂಡಾಸು ಜೋಡಾಟ ಪ್ರೀಯರನ್ನು ರಂಜಿಸಿತ್ತು. ನಾಡಿನ ಪ್ರಮುಖ ಪತ್ರಿಕೆಗಳ ಅಂಕಣಗಳಲ್ಲಿ ಅವರ ವಿಶಿಷ್ಟ ಗಜಗಾತ್ರದ ಮುಂಡಾಸುಗಳು ರಂಜಿಸಿದ್ದವು. ವೇಷಗಾರಿಕೆ, ಕುಣಿತವೇ ಪ್ರದಾನವಾದ ಜೋಡಾಟದಲ್ಲೂ ಸಹ ಅವರು ಮಾತುಗಾರಿಕೆಯನ್ನು ಗೌಣವಾಗಿರಿಸಿದವರಲ್ಲ. ಪ್ರಸಂಗದ ಸದಾಶಯವನ್ನು ಎಂದೂ ಬಿಡದೆ ಕಡೆದು ನಿಲ್ಲಿಸಿದ ಬಿಂಬದ ಸ್ವರೂಪವನ್ನು ಸುಲಲಿತವಾಗಿ ಗಲಾಟೆಯ ಮದ್ಯದಲ್ಲೂ ಪ್ರೇಕ್ಷಕರಿಗೆ ದಾಟಿಸುವ ಜಾಣ್ಮೆ ಅವರಲ್ಲಿದೆ. ಸುಂದರವಾದ ವಾಖ್ಯರಚನೆ, ಚಂದವಾದ ಶೈಲಿ, ಆಕರ್ಷಕವಾದ ನಿರೂಪಣೆ, ವಿಷಯ ಸಂಪತ್ತು ಇವೆಲ್ಲವನ್ನು ಪಾತ್ರೋಚಿತವೆನಿಸುವಂತೆ ಹಿತಮಿತಗೊಳಿಸಿ ಜೋಡಾಟದ ಎರಡು ಮೇಳಗಳ ಚಂಡೆಗಳ ಅಬ್ಬರದ ನಡುವೆ ಪ್ರಸ್ತುತ ಪಡಿಸುತಿದ್ದ ಜಾಣ್ಮೆ ಪಂಡಿತಪಾಮರರೆಂಬ ಬೇದವಿಲ್ಲದೆ ಎಲ್ಲರನ್ನು ಮೋಡಿ ಮಾಡುತಿತ್ತು. ಚೂಡಾಮಣಿ ಪ್ರಸಂಗದಲ್ಲಿ ಸುಂದರ ರಾವಣನಾಗಿ ``ಮಾರನಸ್ತ್ರ ತಾಗಿಬಿಗುವೇರಿತಲ್ಲೇ ಜಾಣೆ`` ಪದ್ಯಕ್ಕೆ ಅವರು ಸೀತೆಯನ್ನು ವರ್ಣಿಸುವ ವಿಧಾನವೊಂದೇ ಸಾಕು ಅವರ ಸುಂದರ ಮಾತುಗಾರಿಕೆಯ ಮಾದರಿಗೆ.

ಪ್ರಶಸ್ತಿಗಳು

ಯಕ್ಷಗಾನೀಯ ಚೌಕಟ್ಟಿನ ಪಾತ್ರಗಳಿಗೆ ಭದ್ರ ಬುನಾದಿಯನ್ನು ಕೊಟ್ಟು ಬಯಲಾಟ ಪರಂಪರೆಯಲ್ಲಿ ನಿಜಾರ್ಥದಲ್ಲಿ ರಂಗಸ್ಥಳದ ರಾಜನೆಂದು ಖ್ಯಾತಿವೆತ್ತ ಶೆಟ್ತರು ರಾಜ್ಯ ಪ್ರಶಸ್ತಿವಿಜೇತ ಹಿರಿಯ ಯಜಮಾನರಾದ ಎಂ. ಎಂ. ಹೆಗ್ಡೆಯವರ ನಿರಂತರ ಶಿಸ್ತುಬದ್ದ ಯಜಮಾನಿಕೆಯಲ್ಲಿ ಬೆಳೆದವರು. ಶಿಸ್ತು ಕೂಟದ ಶ್ರಂಗಾರ ವ್ಯವಸ್ಥೆ ರಂಗದ ಶ್ರಂಗಾರ ಎಂಬ ಹೆಗ್ಡೆಯವರ ದ್ಯೇಯವಾಕ್ಯವನ್ನು ತನ್ನ ದೀರ್ಘಕಾಲದ ತಿರುಗಾಟದುದ್ದಕ್ಕೂ ಚಾಚೂ ತಪ್ಪದೇ ಪಾಲಿಸಿಕೊಂಡುಬಂದ ಸೌಮ್ಯ ಸ್ವಬಾವದ ನಿರಾಡಂಬರ ವ್ಯಕ್ತಿತ್ವದ ಆದರ್ಶ ಕಲಾವಿದರಿವರು. ತನ್ನ ಸುದೀರ್ಘ ಅವದಿಯ ತಿರುಗಾಟದಲ್ಲಿ 50ಕ್ಕೂ ಅದಿಕ ಸನ್ಮಾನಗಳಿಗೆ ಬಾಜನರಾದ ಇವರಿಗೆ ಹೊರರಾಜ್ಯ, ಮುಂಬೈ, ದೆಹಲಿಯಲ್ಲೂ ಸನ್ಮಾನ ಸಂದಿದೆ. 2011ರ ಸಾಲಿನ ಕುಂದಾಪುರದ ಎಂ. ಎಂ. ಹೆಗ್ಡೆ ಪ್ರತಿಷ್ಟಾನದ ಪ್ರಶಸ್ತಿಯೂ ಅವರ ಮುಡಿಗೇರಿತ್ತು. ಯಕ್ಷಗಾನ ಕಲಾಮಾತೆಯ ಸೇವೆಯನ್ನು ನಿಷ್ಟೆಯಿಂದ ಮಾಡುತ್ತಿರುವ ಇಂತಹ ಮಹಾನ್ ಕಲಾವಿದರಿಗೆ ಜಾಗತಿಕ ಬಂಟರ ಸಂಘದ ಪ್ರಶಸ್ತಿಯು ಯೋಗ್ಯವಾಗಿಯೇ ಸಂದಿದೆ.

ಮಂಗಳೂರಿನ ಜಾಗತಿಕ ಬಂಟ ಪ್ರತಿಷ್ಟಾನದಿಂದ ಪ್ರತಿ ವರ್ಷ ಪರ್ಯಾಯವಾಗಿ ತೆಂಕು ಮತ್ತು ಬಡಗುತಿಟ್ಟಿನ ಕಲಾವಿದರಿಗೆ, ಡಾ| ಡಿ. ಕೆ. ಚೌಟ ದತ್ತಿನಿದಿಯಿಂದ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಬಡಗುತಿಟ್ಟಿನ ಮದ್ಯ ಪ್ರಾಂತ್ಯದ ಮೇರು ಕಲಾವಿದ ಐರ್ ಬೈಲು ಆನಂದ ಶೆಟ್ತರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. 15000 ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ ಪ್ರಶಸ್ತಿ ಪ್ರದಾನ ಅಗೋಸ್ಟ್ 18ರಂದು ಮಂಗಳೂರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ.ವಿಡಿಯೊ : ಕಾರ್ತವೀರ್ಯನ ಪಾತ್ರದಲ್ಲಿ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ