ನಳ ದಮಯ೦ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಸೆಪ್ಟೆ೦ಬರ್ 17 , 2013
|
ಯಕ್ಷಗಾನದಲ್ಲಿ ಸ೦ಪೂರ್ಣ ರಸಾನುಭವ ಹೊ೦ದಿರುವ ನಳ-ದಮಯ೦ತಿ ಪ್ರಸ೦ಗವು ತೆ೦ಕು ಹಾಗೂ ಬಡಗು ತಿಟ್ಟುಗಳಲ್ಲಿ ಬಹುವಾಗಿ ಪ್ರದರ್ಶನಗೊಡಿರುತ್ತದೆ. ಸಾಮನ್ಯವಾಗಿ ಹಾಸ್ಯ ಪಾತ್ರಗಳನ್ನು ಹಾಸ್ಯ ಕಲಾವಿದರೇ ನಿರ್ವಹಿಸಿದರೂ, ಈ ಪ್ರಸ೦ಗದ ಬಾಹುಕನ ಪಾತ್ರವನ್ನು ಮೇಳದ ಪ್ರಧಾನ ಕಲಾವಿದರೂ ಅಭಿನಯಿಸುತ್ತಿರುವುದು ಈ ಪ್ರಸ೦ಗದ ವೀಶೇಷ.
ಪ್ರಸ೦ಗ ಕತೃ :
ಕಥಾ ಸಾರಾ೦ಶ
ನಿಷಧ ದೇಶದಲ್ಲಿ ನಳನೆಂಬ ಮಹಾರಾಜನಿದ್ದ. ಅವನು ರೂಪವಂತನೂ ಗುಣವಂತನೂ ಶೂರನೂ ಆಗಿದ್ದನು. ಹಾಗೆಯೇ ವಿದರ್ಭ ದೇಶದಲ್ಲಿ ಭೀಮಕನೆಂಬ ರಾಜನಿದ್ದನು. ಅವನಿಗೆ ಅಪ್ರತಿಮ ಸುಂದರಿಯಾದ ದಮಯಂತಿ ಎಂಬ ಮಗಳಿದ್ದಳು.
|
ಒಂದು ದಿನ ನಳ ಉದ್ಯಾನದಲ್ಲಿ ತಿರುಗಾಡುತ್ತಿದ್ದಾಗ ಹೊಂಬಣ್ಣದ ಹಂಸವೊಂದನ್ನು ಹಿಡಿದುಕೊಂಡ. ಅದು ``ಮಹಾರಾಜ, ನನ್ನನ್ನು ಬಿಟ್ಟುಬಿಡು. ನಾನು ದಮಯಂತಿಯ ಬಳಿಗೆ ಹೋಗಿ ನಿನ್ನ ವಿಷಯ ಹೇಳ್ತೇನೆ" ಎಂದಿತು. ಆ ಹಂಸ ಹಾರಿ ಹೋಗಿ ದಮಯಂತಿಯ ಬಳಿ ಇಳಿದು ನಳನ ಶೌರ್ಯರೂಪಗಳನ್ನು ವರ್ಣಿಸಿ ``ಅವನನ್ನೇ ಮದುವೆಯಾಗು" ಎಂದಿತು.
ಇತ್ತ ಭೀಮಕ ಮಹಾರಾಜ ಮಗಳಿಗೆ ಸ್ವಯಂವರ ಏರ್ಪಡಿಸಿದ್ದ. ಲೋಕದ ಎಲ್ಲ ಕಡೆಗಳಿಂದ ರಾಜರು ಬರಲಾರಂಭಿಸಿದರು. ದೇವಲೋಕದಿಂದ ಇಂದ್ರ, ಆಗ್ನಿ, ವರುಣ, ಯಮರೂ ಬಂದರು. ನಳನೂ ಆಗಮಿಸಿದ. ದಮಯಂತಿ ಹಾರ ಹಿಡಿದು ನಳನ ಬಳಿಗೆ ಬಂದಾಗ ದೇವತೆಗಳೂ ನಳನಂತೆಯೇ ರೂಪ ಧರಿಸಿದರು. ಆದರೆ ದಮಯಂತಿ ಪ್ರಾರ್ಥಿಸಿಕೊಂಡಮೇಲೆ ಅವರು ನಿಜರೂಪ ತಳೆದರು. ದಮಯಂತಿ ನಳನಿಗೆ ಮಾಲೆ ಹಾಕಿದಳು. ದೇವತೆಗಳು ನಳಬೇಕೆಂದಕಡೆ ಬೆಂಕಿ ಮತ್ತು ನೀರು ಬರುವುದೆಂದು ಅನುಗ್ರಹಿಸಿ ಮಾಯವಾದರು.
ನಳನೂ ದಮಯಂತಿಯೂ ನಿಷಧದಲ್ಲಿ ಸುಖವಾಗಿ ಇದ್ದರು. ಆಗ ಕಲಿಯೆಂಬ ಕೆಟ್ಟ ಮನುಷ್ಯನೊಬ್ಬ ಬಂದು ಪುಷ್ಕರ ಎಂಬುವವನನ್ನು ನಳನಿಗೆದುರಾಗಿ ಪಗಡೆ ಆಡಲು ಪ್ರೇರೇಪಿಸಿದ. ಆಟದಲ್ಲಿ ನಳ ತನ್ನ ಸಮಸ್ತ ಐಶ್ವರ್ಯವನ್ನೂ ಕಳೆದುಕೊಂಡ, ಕಡೆಗೆ ತುಂಡು ಬಟ್ಟೆಯಲ್ಲಿ ಹೆಂಡತಿಯೊಡನೆ ಊರು ಬಿಟ್ಟು ಕಾಡು ಸೇರಿದ.
``ದಮಯಂತಿ, ನನ್ನೊಡನೆ ನೀನ್ಯಾಕೆ ಕಷ್ಟಪಡಬೇಕು? ನಿನ್ನ ತಂದೆಯ ಮನೆಗೆ ಹೋಗು" ಎಂದ. ಆದರೆ ದಮಯಂತಿ ಒಪ್ಪಲಿಲ್ಲ. ಆದ್ದರಿಂದ ಅವಳನ್ನು ತಾನು ಬಿಟ್ಟು ಹೊರಟು ಹೋದರೆ ಹೇಗಾದರೂ ಅವಳು ತಂದೆಯ ಸೇರುವಳೆಂದು ನಳ ಯೋಚಿಸಿದ. ರಾತ್ರಿ ದಮಯಂತಿ ಮಲಗಿದ್ದಾಗ ಅವಳನ್ನು ಬಿಟ್ಟು ಹೊರಟುಹೋದ.
ಬೆಳಗಾಗೆದ್ದು ತಾನು ಒಂಟಿಯಾಗಿರುವುದನ್ನು ಗಮನಿಸಿ ದಮಯಂತಿ ``ಮಹಾರಾಜ ನೀನೆಲ್ಲಿ ಹೋದೆ?" ಎಂದು ಬೊಬ್ಬೆ ಹಾಕಿದಳು. ನಳನನ್ನು ಹುಡುಕುತ್ತಾ ಕಲ್ಲು, ಮುಳ್ಳುಗಳನ್ನು ತುಳಿದು ನಡೆದಳು. ಕಡೆಗೆ ಯಾತ್ರಿಕರ ಗುಂಪೊಂದು ಸಿಕ್ಕಿ ಅವರ ಜೊತೆಯಲ್ಲಿ ತನ್ನ ತಂದೆಯ ಮನೆ ಸೇರಿದಳು.
|
ನಳ ದಮಯ೦ತಿ |
 |
ಪ್ರಮುಖ ಪಾತ್ರಗಳು |
: |
ನಳ
ದಮಯ೦ತಿ
ಭೀಮಕ
ಋತುಪರ್ಣ
ಬಾಹುಕ
ಕಾರ್ಕೊಟಕ
ಇಂದ್ರ
ಆಗ್ನಿ
ವರುಣ
ಯಮ
|
|
|
ಇತ್ತ ದಮಯಂತಿಯನ್ನು ಬಿಟ್ಟು ಹೋದ ನಳನಿಗೆ ಉರಿಯುತ್ತಿದ್ದ ಬೆಂಕಿ ಕಾಣಿಸಿತು. ಅದರೊಳಗಿನಿಂದ ``ನಳ ಮಹಾರಾಜ, ನನ್ನನ್ನು ರಕ್ಷಿಸು" ಎಂದು ಯಾರೋ ಕೂಗಿದ ಹಾಗೆ ಕೇಳಿಸಿತು. ನಳ ಬೆಂಕಿಯೊಳಗೆ ನುಗ್ಗಿ ಕಾರ್ಕೊಟಕ ಎಂಬ ಹಾವನ್ನು ಹೊರಗೆತ್ತಿಕೊಂಡು ಬಂದ. ಹಾವು ಅವನನ್ನು ಕಚ್ಚಿ ಅವನ ರೂಪವನ್ನು ವಿಕಾರಗೊಳಿಸಿತು. ``ನಳನೇ ನಿನ್ನನ್ನು ಯಾರೂ ಗುರುತು ಹಿಡಿಯಬಾರದೆಂದು ಈ ರೀತಿ ಮಾಡ್ದೆ. ನೀನೀಗ ಅಯೋಧ್ಯಾ ದೇಶದ ಋತಪರ್ಣನೆಂಬ ರಾಜನಲ್ಲಿಗೆ ಹೋಗಿ ಅವನ ಸಾರಥಿಯಾಗು. ಮುಂದೆ ನಿನ್ನ ಹೆಂಡತಿ ನಿನಗೆ ಸಿಗ್ತಾಳೆ. ನಿನ್ನ ಮೊದಲ ರೂಪ ಬೇಕಾದಾಗ ನನ್ನನ್ನು ನೆನದು ಈ ವಸ್ತ್ರಗಳನ್ನು ಹೊದ್ದುಕೋ" ಎಂದು ಹೇಳಿ ವಸ್ತ್ರಗಳನ್ನು ಕೊಟ್ಟು ಮಾಯಾವಾಯಿತು.
|
ಸೂರಿಕುಮೇರು ಗೋವಿ೦ದ ಭಟ್ ಬಾಹುಕನ ವೇಷದಲ್ಲಿ
|
ನಳ ಋತುಪರ್ಣನಲ್ಲಿಗೆ ಹೋಗಿ ಸಾರಥಿಯಾದ.
ಇತ್ತ ದಮಯಂತಿ ನಳನನ್ನು ಹುಡುಕಿಸಲು ವಿವಿಧ ಪ್ರಯತ್ನಗಳನ್ನು ಮಾಡಿದಳು. ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಜನ ಸೇರಿರುವಡೆ ನಿಂತು ``ಅಯ್ಯಾ ಜೂಜುಗಾರ, ರಾತ್ರಿಯ ವೇಳೆ ನಿದ್ದೆ ಮಾಡ್ತಿದ್ದ ಹೆಂಡತಿಯನ್ನೇಕೆ ಬಿಟ್ಟುಹೋದೆ?" ಎಂದು ಕೇಳಬೇಕೆಂದು ನಿಯಮಿಸಿ ಭಟರನ್ನು ಕಳುಹಿಸಿದಳು. ಋತುಪರ್ಣನ ರಾಜ್ಯಕ್ಕೆ ಹೋದ ಭಟರು ಮಾತ್ರ ``ತಾಯಿ ಋತುಪರ್ಣನ ಸಾರಥಿಯಾದ ಕುರೂಪಿಯೊಬ್ಬ ನಿನ್ನ ಪ್ರಶ್ನೆಗೆ ಉತ್ತರ ಕೊಟ್ಟ" ಎಂದರು. ದಮಯಂತಿಗೆ ಅವನೇ ನಳನಿರಬಹುದು ಎಂಬ ಸಂಶಯ ಮೂಡಿತು. ಬೇರೆ ದೂತರನ್ನು ಕರೆಸಿ, ``ನೀವೀಗಲೇ ಋತುಪರ್ಣನಲ್ಲಿಗೆ ಹೋಗಿ, ನಾಳೆಯದಿನವೇ ದಮಯಂತಿ ಮತ್ತೆ ಮದುವೆಯಾಗ್ತಾಳೆ, ತಾವೂ ಸ್ವಯಂವರಕ್ಕೆ ಬರಬೇಕು" ಎಂದು ಕರೆದು ಬರುವಂತೆ ಹೇಳಿದಳು.
ದಮಯಂತಿಯನ್ನು ಮದುವೆಯಾಗುವ ಆಶೆಯಿಂದ ಋತುಪರ್ಣ ಹೊರಟ. ನೂರುಗಾವುದ ದೂರವನ್ನು ಒಂದೇ ದಿನದಲ್ಲಿ ಕ್ರಮಿಸಿದನು ಸಾರಥಿ ನಳ. ಅವರು ರಾಜಧಾನಿ ತಲುಪಿದಾಗ ಮದುವೆಯ ಸಿದ್ಧತೆಗಳಿಲ್ಲದುದನ್ನು ಕಂಡು ಋತುಪರ್ಣನಿಗೆ ಆಶ್ಚರ್ಯವಾಯಿತು. ಭೀಮಕರಾಜ ಅತಿಥಿಗಳನ್ನು ಅರಮನೆಯಲ್ಲಿ ಉಳಿಸಿಕೊಂಡ.
ಕುರೂಪಿ ಸಾರಥಿಯನ್ನು ನೋಡಿ ದಮಯಂತಿಗೆ ನಿರಾಶೆ ಆಯಿತು. ಅವನ ಕೊಠಡಿಗೆ ಬೆಂಕಿಯನ್ನೂ ನೀರನ್ನೂ ಕೊಡಬಾರದೆಂದು ಆಜ್ಞೆ ಮಾಡಿದಳು. ಆದರೆ ನಳ ಬರಿದಾದ ಬಿಂದಿಗೆಯನ್ನು ಬಗ್ಗಿಸುತ್ತಲೇ ನೀರು ಸುರಿಯಿತು. ಹುಲ್ಲನ್ನು ತಿರುಚಿದ ಕೂಡಲೇ ಬೆಂಕಿ ಬಂತು. ದಮಯಂತಿ ಅವನ ಮುಂದೆ ನಿಂತು ``ನೀನ್ಯಾರು ? ನಿಜ ಹೇಳು" ಎಂದಳು. ನಳನು ಸರ್ಪಕೊಟ್ಟ ವಸ್ತ್ರಗಳನ್ನು ಧರಿಸಿದೊಡನೆ ಮೊದಲಿನ ರೂಪ ಪಡೆದ. ದಮಯಂತಿ ಅವನನ್ನು ಬಿಗಿದಪ್ಪಿದ್ದಳು.
ತಂದೆತಾಯಿಯರ ಅನುಮತಿ ಪಡೆದು ನಳ, ದಮಯಂತಿಯರು ಮತ್ತೆ ನಿಷಧ ರಾಜ್ಯಕ್ಕೆ ಹೋದರು. ಪುಷ್ಕರನನ್ನು ಜೂಜಿನಲ್ಲಿ ಸೋಲಿಸಿ ಮತ್ತೆ ಸಮಸ್ತ ರಾಜ್ಯವನ್ನೂ ನಳಮಹಾರಾಜ ಪಡೆದ. ಮುಂದೆ ನಳ ದಮಯಂತಿಯರು ನೂರು ಕಾಲ ಸುಖವಾಗಿ ಬಾಳಿ ಬದುಕಿದರು.
ಕೃಪೆ : http://www.sirinudi.org
|
|
|