ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಉಭಯತಿಟ್ಟು ಮಹಾರಥಿ ಕಡತೋಕ ಮ೦ಜುನಾಥ ಭಾಗವತ

ಲೇಖಕರು :
ಡಾ. ಎಂ. ಪ್ರಭಾಕರ ಜೋಶಿ
ಮ೦ಗಳವಾರ, ಆಗಸ್ಟ್ 13 , 2013

ತೆಂಕು-ಬಡಗು ಎರಡರಲ್ಲೂ ಸಮನ್ವಯವಾಗಿ ಯುಗಪ್ರವರ್ತಕರೆನಿಸಿ ಕೊಂಡ ಅಸಾಮಾನ್ಯ ಕಲಾವಿದ. ಮಂಜ ಭಾಗವತರೆಂದು ಮನೆಮಾತಾಗಿದ್ದ, ಕಂಚಿನ ಕಂಠದ ಭಾಗವತರೆಂಬ ಅಭಿದಾನಕ್ಕೆ ಪಾತ್ರರಾಗಿದ್ದ ಕಡತೋಕ ಮಂಜುನಾಥ ಭಾಗವತ ಯಕ್ಷಗಾನ ಕಂಡ ಒಬ್ಬ ಬಹುಮುಖ ಪ್ರತಿಭೆಯ ಅಪರೂಪದ ಕಲಾವಿದ. ಪ್ರಸಿದ್ಧ ಭಾಗವತರಾಗಿದ್ದ ತಂದೆ ಕುಮಟಾ ಬಳಿಯ ಕಡತೋಕದ ಭಾಗವತ ವೆಂಕಟರಮಣ ಯಾಜಿ, ನಟವರರಾದ ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ ಅವರ ಶಿಷ್ಯನಾಗಿ, ಗುರು ಮಾಂಬಾಡಿ ಭಾಗವತರಲ್ಲೂ ತರಬೇತಿ ಪಡೆದು- ಬಾಲ್ಯದಲ್ಲೇ ವಿಸ್ಮಯಕರ ಪ್ರತಿಭೆ ಎನಿಸಿದಲ್ಲಿಂದ, ಮುಂದೆ ಆರು ದಶಕ ಕಾಲ ಯಕ್ಷಗಾನದಲ್ಲಿ ಅನ್ಯಭಿನ್ನವಾದ ಸಾಧಕನಾಗಿ ರಂಗವನ್ನಾಳಿದ ಕಡತೋಕ, ತೆಂಕು- ಬಡಗು ಎರಡೂ ತಿಟ್ಟುಗಳಲ್ಲಿ ಸಮಾನ ಪ್ರಭುತ್ವ ಹೊಂದಿದ ಭಾಗವತ. ಇಡಿಯ ರಂಗದ ಮೂರು ತಲೆಮಾರುಗಳ ಕಲಾವಿದರನ್ನು ಕುಣಿಸಿ ಮೆರೆಸಿದ ಪ್ರೇರಕ, ನಿರ್ದೇಶಕ.

ನಿರಾಯಾಸದ ಏರುಶ್ರುತಿಯ ಆಕರ್ಷಕ, ಹೆಣ್ಣು ಕಂಠ, ಸ್ವಚ್ಛ, ಸ್ಪಷ್ಟ ಉಚ್ಚಾರ, ಖಚಿತ ಲಯಜ್ಞಾನ, ಛಂದಸ್ಸಿನ ಕಟ್ಟುನಿಟ್ಟಾದ ಪ್ರಭುತ್ವ, ಸಾಹಿತ್ಯ ಶುದ್ಧಿ, ಉತ್ಕೃಷ್ಟವೆನಿಸಿದ ಭಾವಪ್ರಕಾಶನ ಸಾಮರ್ಥ್ಯ, ರಂಗನಡೆಯ ಹಿಡಿತ, ಪರಿಪಕ್ವವಾದ ರಾಗವಿಧಾನ, ಕಾವ್ಯಗಳ ಅಧ್ಯಯನದ ಹಿನ್ನೆಲೆ, ಸಮಗ್ರ ಪ್ರಸಂಗಾನುಭವ, ಮೋಹಕ ಮಾಧುರ್ಯ, ನಟನಾ ಹದವರಿತು ಕುಣಿಸುವ ಜಾಣ್ಮೆ, ಚಮತ್ಕಾರ, ಕಲಾತ್ಮಕ ವಿಷಮ ನಡೆ- ಎಲ್ಲದರಲ್ಲೂ ಹಿಡಿತವಿದ್ದ ಕಡತೋಕ ಓರ್ವ ಸರ್ವಾಂಗ ಸಮರ್ಥ ನಿರ್ದೇಶಕ- ಭಾಗವತ. ಉತ್ತರ ಕರ್ನಾಟಕದ ರಂಗಪಡೆಯನ್ನು ತೆಂಕುತಿಟ್ಟಿಗೆ ಸಮನ್ವಯಗೊಳಿಸಿ, ತೆಂಕಿನ ರಂಗಕೃತಿಗಳಿಗೆ ಹೊಸರೂಪ ನೀಡಿದ ಇವರು ಅಭಿನಯಕ್ಕೆ ಪೋಷಕರಾಗಿ ಹಾಡುವ ಇವರ ಸಿದ್ಧಿ ವಿರಳ ಪಂಕ್ತಿಯದು.

ಪ್ರತಿಯೊಬ್ಬ ವೇಷಧಾರಿಯ ಹದವರಿತು ಕುಣಿಸುವ, ಅರ್ಥವನ್ನು ಪೇರಿಸಿ, ಕಲಿಸಿ ನಿರ್ಮಿಸುವ ಕಡತೋಕ ಕಲಾವಿದ- ನಿರ್ಮಾಪಕ. ಕುರಿಯ ವಿಠಲ ಶಾಸ್ತ್ರಿ, ಶೇಣಿ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಕುಂಬ್ಳೆ, ಚಂದ್ರಗಿರಿ, - ಇಂತಹ ನಟರಿಂದ ತೊಡಗಿ, ಅಭ್ಯಾಸಿ ಹವ್ಯಾಸಿಗಳತನಕ ಎಲ್ಲರನ್ನೂ ಮೆರೆಸಿ ಕುಣಿಸುವ ಕಡತೋಕ- ಸಹಜಸಿದ್ಧಿ, ಸತತ ಸೃಜನಶೀಲ ಸಾಧನೆ ಬೆರೆತ ಕಲಾವಿದ ಶ್ರೇಷ್ಠ. ಇವರು ರಂಗದಲ್ಲಿದ್ದರೆ ಹಿಮ್ಮೇಳ, ಮುಮ್ಮೇಳಕ್ಕೆ ಹಬ್ಬ. ರಸಿಕನಿಗೆ ಸ್ಪಂದನ. ತನ್ನ ಸುತ್ತ ಉಲ್ಲಾಸದ ವಾತಾವರಣ ನಿರ್ಮಿಸುವ ಮಂಜುನಾಥರು, ರಂಗದ ಹಾಸ್ಯರಸಕ್ಕೂ ಹೊಸರೂಪವಿತ್ತವರು.

ಬಾಲ್ಯ , ಶಿಕ್ಷಣ

ಶಂಭು ಹಾಗೂ ಗೌರಿ ದಂಪತಿಯ ಮೂರನೆ ಮಗನಾಗಿ ಚೌಕಗ್ರಾಮ ಕಡತೋಕದಲ್ಲಿ 1929ರಲ್ಲಿ ಜನಿಸಿದ ಮಂಜುನಾಥ ಭಾಗವತರಾಗಿದ್ದ ತನ್ನ ತಂದೆಯ ತಾಳದ ಲಯಕ್ಕೆ ಮನಸೋತರು.

ಅವರಿಗೆ ಪತ್ನಿ ಗೋದಾವರಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.

ಬಾಲ್ಯದ ಬಡತನದ ನಡುವೆಯೂ ಮುಲ್ಕಿ ಪಾಸು ಮಾಡಿದ ಭಾಗವತರು ತಮ್ಮ ಹದಿಹರೆಯದ ವಯಸ್ಸಿನಲ್ಲೇ ಜೀವನೋಪಾಯವನ್ನರಸಿ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಹೋಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಕನ್ನಡ ಜಾಣ ಪರೀಕ್ಷೆಯನ್ನೂ ಪಾಸು ಮಾಡಿ ಅದೇ ಶಿಕ್ಷಕ ವೃತ್ತಿಯನ್ನು ಘಟ್ಟದ ಕೆಳಗಿನ ತಾಲ್ಲೂಕುಗಳಲ್ಲಿಯೂ ಮುಂದುವರಿಸಿದರಾದರೂ ಅವರೊಳಗೆ "ಭಾಗವತನ ತಾಳ" ಅನುರಣಿಸುತ್ತಲೇ ಇತ್ತು. ಮುಂದೆ ಇವರು ಪೂರ್ಣಾವಧಿಯ ಭಾಗವತರಾದರು. ಮುಲ್ಕಿ, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಸುದೀರ್ಘ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದರು.

ಕೆಲಕಾಲ ಅಧ್ಯಾಪಕರಾಗಿ ದುಡಿದು, ಕರ್ಕಿ, ಕೆರೆಮನೆ, ಕೋಳಗಿಬೀಸ್ ಮೇಳಗಳಲ್ಲಿ ತಿರುಗಾಟ ನಡೆಸಿ, ಮುಲ್ಕಿ, ಕೂಡ್ಲು ಮೇಳಗಳಿಗೆ ಬಂದು ಆ ಬಳಿಕ ಮೂರು ದಶಕಗಳಿಗೂ ಮಿಕ್ಕಿ ಶ್ರೀಧರ್ಮಸ್ಥಳ ಮೇಳದ ಭಾಗವತರಾಗಿ ಇತಿಹಾಸ ನಿರ್ಮಿಸಿದ ಕಡತೋಕ- "ಭಾಗವತಿಕೆ" ಎಂಬುದಕ್ಕೆ ಹೊಸ ಹೊಳವು, ಹೊಸ ಆಯಾಮ, ಹೊಸ ವ್ಯಾಖ್ಯೆ ನೀಡಿದ ಪ್ರತಿಭಾವಂತ.

ಕಲಾಸೇವೆ

ಭಾಗವತಿಕೆಯ ಪರಂಪರೆಯಲ್ಲಿ ಶಾಸ್ತ್ರೀಯ ಸಂಗೀತದ ರಾಗಗಳ ಸಾಧ್ಯತೆಯನ್ನು ಅನ್ವೇಷಿಸಿ ಸಂಪ್ರದಾಯವಾದಿಗಳು ಹುಬ್ಬೇರಿಸುವಂತೆ ಮಾಡಿದ್ದ ತಂದೆ ಶಂಭು ಭಾಗವತರಂತೆ ಮಂಜ ಭಾಗವತರೂ ಯಕ್ಷಗಾನ ಭಾಗವತಿಕೆಯ ಪರಂಪರೆಯ ನೆಲೆಗೆ ಹೊಸತನದ ಕಸಿ ಮಾಡಿ ಯುವ ಪ್ರೇಕ್ಷಕರನ್ನು ಸೆಳೆಯುವುದರ ಜೊತೆಗೆ ಪಂಡಿತರ ಪ್ರಶಂಸೆಗೂ ಪಾತ್ರರಾದ ಸಮಕಾಲೀನ ಕಲಾವಿದ.

ಭಾಗವತಿಕೆಯಲ್ಲಿ ನವರಸಭಾವಗಳನ್ನು ಚಿಮ್ಮಿಸಿದ ಕಡತೋಕ ತನ್ನ 27ನೆ ವರ್ಷದಲ್ಲೇ `ಕಾಳಿದಾಸ~ ಪ್ರಸಂಗ ರಚಿಸಿ, ಪದ್ಯದ ಭಾಷೆ, ಛಂದಸ್ಸಿಗಿಂತಲೂ ರಂಗದ ಯಶಸ್ಸಿಗೆ ಮಹತ್ವಕೊಟ್ಟು ಉತ್ತಮ ಪ್ರಸಂಗ ಕತೃವೆಂಬ ಪ್ರಶಂಸೆಗೆ ಪಾತ್ರರಾದರು. ಮಹಾಬ್ರಾಹ್ಮಣ, ಗುರುದಕ್ಷಿಣೆ ಮೊದಲಾದ ಪ್ರಸಂಗಗಳು ಕೂಡ ಭಾಗವತರ ಉತ್ತಮ ಸೃಜನಶೀಲತೆಗೆ ಸಾಕ್ಷಿಯಾದವು.

ಕಡತೋಕ ಮಂಜುನಾಥ ಭಾಗವತ
ಜನನ ದಿನಾ೦ಕ : 1929
ಜನನ ಸ್ಥಳ : ಚೌಕ ಗ್ರಾಮ , ಕಡತೋಕ , ಹೊನ್ನಾವರ ತಾಲೂಕು , ಉತ್ತರ ಕನ್ನಡ ಜಿಲ್ಲೆ , ಕರ್ನಾಟಕ ರಾಜ್ಯ
ಕಲಾಸೇವೆ : ಯಕ್ಷಗಾನದ ಬಡಗು ಹಾಗೂ ತೆಂಕು ತಿಟ್ಟುಗಳೆರಡರಲ್ಲೂ , ಕರ್ಕಿ, ಕೆರೆಮನೆ, ಕೋಳಗಿಬೀಸ್ , ಮುಲ್ಕಿ, ಕೂಡ್ಲು ಶ್ರೀ ಧರ್ಮಸ್ಥಳ ಮೇಳಗಳಲ್ಲಿ ಭಾಗವತರಾಗಿ ದುಡಿಮೆ
ಪ್ರಶಸ್ತಿಗಳು:
  • ಯಕ್ಷಮ೦ಗಳ ಪ್ರಶಸ್ತಿ 2011
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1993
  • ಪಾರ್ತಿಸುಬ್ಬ ಪ್ರಶಸ್ತಿ
ಮರಣ ದಿನಾ೦ಕ : ಅಕ್ಟೋಬರ್ 31, 2011
ಆರಂಭದಲ್ಲಿ ರಂಗದ ಮೇಲೆ ಯಕ್ಷಗಾನದ ಪಾತ್ರಗಳನ್ನು ಹಾಕಿದ್ದ ಇವರಲ್ಲಿನ "ಭಾಗವತ"ನನ್ನು ಮತ್ತೆ ಎಚ್ಚರಿಸಿ ಪ್ರತಿಭೆ ಅರಳಲು ಕಾರಣರಾದ ಗುರು ಖ್ಯಾತ ಕಲಾವಿದ ಕೆರೆಮನೆ ಶಿವರಾಮ ಹೆಗಡೆ.

ಕುಣಿಯುತ್ತಿರುವ ಕಲಾವಿದನ ಹಿಂದಿನ ಆಯಾಮವನ್ನು ನೋಡಿ ಕಲಾವಿದನ ಮನಸ್ಸಿನೊಂದಿಗೆ ಅನುಸಂಧಾನ ನಡೆಸುತ್ತಿದ್ದ ಈ ಹಿನ್ನೆಲೆಯ ಕಲಾವಿದ ತೆಂಕುತಿಟ್ಟಿನ ಕುರಿಯ ವಿಠಲ ಶಾಸ್ತ್ರಿ, ಕೊಳಿಯೂರು ರಾಮಚಂದ್ರ, ಬಡಗುತಿಟ್ಟಿನ ಪರಮಯ್ಯ ಹಾಸ್ಯಗಾರ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದ ಮಹಾನ್ ಕಲಾವಿದರಿಗೂ ಭಾಗವತರಾಗಿ ಸಹಕರಿಸಿ ಅವರ ಯಶಸ್ಸಿಗೆ ತಮ್ಮ ಪಾಲಿನ ಕೊಡುಗೆ ನೀಡಿದ್ದಾರೆ.

ತಾಳಮದ್ದಲೆ ಭಾಗವತರಾಗಿ ಅವರು ನೀಡುವ ಪ್ರೇರಣೆ, ಪೋಷಣೆಗಳ ಸಿರಿ ಸೊಗಡು ಅನುಭವಿಸಿಯೇ ತಿಳಿಯಬೇಕು. ಗದ್ಯಪದ್ಯಗಳ ಸೊಗಸಿನ ಸಮನ್ವಯವನ್ನು ಆಶ್ಚರ್ಯಕರವಾಗಿ ಸಾಧಿಸುವ ಕಡತೋಕ ನಿಜಾರ್ಥ ವಾಙ್ಮಯ ಭಾಗವತ. ಜೋಡಾಟಗಳಲ್ಲೂ ಪ್ರವೀಣ. ದಣಿವರಿಯದ ದುಡಿಮೆಗಾರ. ಚಾಲೆಂಜ್ ತೆಗೆದುಕೊಳ್ಳುವ ಧೀರ.

ಹಿರಿಯ ಭಾಗವತ ಬಲಿಪರು ಸಲುಗೆಯಿಂದ ಪ್ರಶಂಸಿಸುವಂತೆ `ಕಡತೋಕ ಓರ್ವ ಉತ್ಪಾತ ಭಾಗವತ. ಏನೂ ಮಾಡಿಯಾರು!'. ಅವರೊಂದಿಗೆ ಹಿಮ್ಮೇಳದಲ್ಲಿ ದುಡಿದ ಕುದ್ರೆಕೂಡ್ಲ ರಾಮಭಟ್, ಧರ್ಮಶಾಲಾ ಮಹಾಬಲೇಶ್ವರ, ದುರ್ಗಪ್ಪ ಗುಡಿಗಾರ, ಚಿಪ್ಪಾರು ಬಲ್ಲಾಳ, ನೆಡ್ನೆ ನರಸಿಂಹ ಭಟ್ಟರಂತಹವರ ಅಚ್ಚುಮೆಚ್ಚು ಕಡತೋಕ.

ಮದ್ದಲೆಗಾರರ ಪರಿಶ್ರಮವನ್ನು ಕಾಣಿಸುವ ಭಾಗವತಿಕೆ ಅವರದು. ಕಥಾ ನಿರ್ವಹಣೆ, ನೃತ್ಯ ವಿಭಾಗ, ಬಾಯಿ ತಾಳ, ಕಾವ್ಯ ಪದ್ಯಗಳ ಬಳಕೆಗಳಲ್ಲಿ ಹಲವು ಪ್ರಯೋಗಗಳನ್ನು ನಡೆಸಿದವರು. ಇಪ್ಪತ್ತು ಪ್ರಸಂಗಗಳನ್ನು ಬರೆದಿದ್ದಾರೆ. ಅನೇಕ ಪ್ರಸಂಗಕರ್ತರ ರಚನೆಗಳನ್ನು ಹಾಡಿ ಮೆರೆಸಿದ್ದಾರೆ. ತೀರಾ ಹೊಸ ಪ್ರಸಂಗವನ್ನಾದರೂ ಸಲೀಸಾಗಿ ಹಾಡಬಲ್ಲ ಭಾಗವತರವರು.

ಬಡಗು ತಿಟ್ಟುವಿನಿಂದ ತೆಂಕು ತಿಟ್ಟುವಿಗೆ ಬಂದ ರೀತಿ, ತೆಂಕು ತಿಟ್ಟುವಿನ ಗುರು ಮಾಂಬಾಡಿ ನಾರಾಯಣ ಭಟ್ಟರ ಬಗ್ಗೆ ಮತ್ತೆ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾಗಿ ಮೆರೆದಾಡಿದ ಬಗೆ, ಒಂದೊಂದೇ ಮಜಲುಗಳ ಸವಿವರಣೆಯನ್ನು ನೀಡುತ್ತಾ ಆತ್ಮ ಕಥೆ ಅಂತರಾಳವನ್ನು ಅನಾವರಣಗೊಲಿಸುತ್ತ ಸಾಗುತ್ತದೆ. ಯಕ್ಷಗಾನದ ಹಿರಿಯ ಕುರಿಯ ವಿಠಲ ಶಾಸ್ತ್ರಿಗಳ ಸಹಕಾರ ಮತ್ತು ನಿರ್ದೇಶನವನ್ನು ಮನಸಾ ಸ್ಮರಿಸುತ್ತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನಿಡ್ಲೆ ನರಸಿಂಹ ಭಟ್ಟರ ಜತೆಗಿನ ಕಲಾ ಜೀವನವನ್ನು ಈ ಇಳಿ ವಯಸ್ಸಿನಲ್ಲೂ ಮರೆಯದೆ ನೆನಪಿಗೆ ತರುತ್ತ ಅವರ ಸಹಕಾರವನ್ನು ಹೃದಯದಿಂದ ಸ್ಮರಿಸುತ್ತಾರೆ. ತೆಂಕು ತಿಟ್ಟುವಿನಲ್ಲಿ ಅಗ್ರಮಾನ್ಯ ಭಾಗವತರಾಗಿ ಮೆರೆದಾಡುವುದಕ್ಕೆ ಇವರ ಸಹಕಾರ ಇಲ್ಲವಾಗಿರುತ್ತಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂಬ ಮನದಾಳದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಬಹುಶಃ ಬಲ್ಲಾಳರೊಂದಿಗಿನ ಇವರ ಭಾಗವತಿಕೆ ಹೊಸ ಹೊಸ ತಂತ್ರಗಳು ಹೊಸ ಆವಿಷ್ಕಾರಗಳು ಯಕ್ಷ ಲೋಕ ಎಂದಿಗೂ ಮರೆಯದು.

ಸಾಹಿತ್ಯ ಹಾಗೂ ಪ್ರಶಸ್ತಿಗಳು

"ಯಕ್ಷಗಾನ" ಪತ್ರಿಕೆಯನ್ನು ಆರಂಭಿಸಿ ಅದರ ಸಂಪಾದಕರಾಗಿಯೂ ಕೆಲಸ ಮಾಡಿದ್ದ ಕಡತೋಕ ಯಕ್ಷಗಾನದ ದಾಖಲೀಕರಣದಲ್ಲೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಇಪ್ಪತ್ತರ ಹರೆಯಲ್ಲಿ ಶಿರಸಿಯಲ್ಲಿ "ಯಕ್ಷಗಾನ" ಪತ್ರಿಕೆ ಆರಂಭಿಸಿ ಕಲಾ ಪತ್ರಿಕೋದ್ಯಮದಲ್ಲಿ ಅಧ್ಯಾಯ ನಿರ್ಮಿಸಿದವರು ಅವರು. (ಈಗ ಈ ಪತ್ರಿಕೆ "ಯಕ್ಷರಂಗ"ವೆಂಬ ಹೆಸರಿನಲ್ಲಿ ಅವರ ಪುತ್ರನಿಂದ ಪ್ರಕಾಶಿತವಾಗುತ್ತಿದೆ). ಹಲವು ಲೇಖನಗಳನ್ನು ಕಡತೋಕ ಬರೆದಿದ್ದಾರೆ. ಕಾರ್ಯಕ್ರಮ ಸಂಘಟಕರಾಗಿಯೂ ದುಡಿದು, ಹಲವು ಕಲಾವಿದರನ್ನು ಸಂಮಾನಿಸಿ ಹೃದಯವಂತಿಕೆ ಮೆರೆದ ಕಡತೋಕ ಕ್ರಿಯಾಶೀಲ. ಪಾದರಸ ಪ್ರತಿಭೆ. ಸ್ನೇಹಶೀಲ.

ಮಗ,ಗೋಪಾಲಕೃಷ್ಣ ಭಾಗವತ ಅವರ ನಿರೂಪಣೆಯಲ್ಲಿ "ಯಕ್ಷವನ ವಿಹಾರ" ಎಂಬ ತಮ್ಮಆತ್ಮಕಥನವನ್ನು ಬರೆದಿರುವ ಮಂಜುನಾಥ ಭಾಗವತನ `ಹೊಸ ತಲೆಮಾರಿನ ಕಲಾವಿದರಲ್ಲಿ ಸುಪ್ತವಾಗಿ ಮುಂದುವರಿಯುವ ಪರಂಪರೆಯ ಅಂಶಗಳು ಹಿರಿಯ ಕಲಾವಿದನೊಬ್ಬ ಬಿಟ್ಟು ಹೋಗಬಹುದಾದ ಆಸ್ತಿ ಹಾಗೂ ಆತನನ್ನು ಶಾಶ್ವತವಾಗಿ ನೆನಪಿಸುವ ಸ್ಮರಣಿಕೆಗಳು” ಎಂದು ಹೇಳಿಕೊಂಡಿದ್ದಾರೆ.

ಯಕ್ಷಗಾನದ ಬಡಗು ಹಾಗೂ ತೆಂಕು ತಿಟ್ಟುಗಳೆರಡರಲ್ಲೂ ಪ್ರಬುದ್ಧ ಭಾಗವತರಾಗಿದ್ದ ಮಂಜುನಾಥ ಭಾಗವತ ರಾಜ್ಯೋತ್ಸವ, ಪಾರ್ಥಿ ಸುಬ್ಬ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದರು.

ನಿಧನ

ಕಡತೋಕ ಮಂಜುನಾಥ ಭಾಗವತ ಅವರು ಹಳದೀಪುರ-ಅಗ್ರಹಾರ ಸಮೀಪದ ಕುಂಬಾರಕೇರಿಯ ತಮ್ಮ ನಿವಾಸದಲ್ಲಿ ಭಾನುವಾರ ಅಕ್ಟೋಬರ್ 31, 2011ರ ಮಧ್ಯರಾತ್ರಿ ನಿಧನ ಹೊಂದಿದರು.

ಪಾಂಡಿತ್ಯ, ಪರಿಣಾಮ, ನಾವಿನ್ಯ, ಕಲಾ ಸೌಂದರ್ಯ, ವಿಭಿನ್ನ ಸಾಧನೆಗಳಲ್ಲಿ ದೀರ್ಘಕಾಲ ಔನ್ನತ್ಯ ಸಾಧಿಸಿದ ಮಂಜು ಭಾಗವತ, "ಕಡತೋಕ" ಎಂದು ರಸಿಕರ ಮನೆ ಮಾತಾದ ಮಂಜುನಾಥ ಶಂಭು ಭಾಗವತರ ನಿಧನ- ಒಂದು ದೊಡ್ಡ ಕಲಾನಿಧಿಯ ಅಗಲಿಕೆ. ಅವರಿಗೆ ಪರ್ಯಾಯವಿಲ್ಲ.ಕೃಪೆ : http://www.prajavani.net

****************

ಕಡತೋಕ ಮ೦ಜುನಾಥ ಭಾಗವತರವರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು )

ಕಾಳಿ೦ಗ ನಾವಡ ಮತ್ತು ಕಡತೋಕ ಮ೦ಜುನಾಥ ಭಾಗವತ
ಶ೦ಭು ಹೆಗಡೆಯವರು ಮತ್ತು ಕಡತೋಕ ಮ೦ಜುನಾಥ ಭಾಗವತ
ನಾರ್ಣಪ್ಪ ಉಪ್ಪೂರ ಮತ್ತು ಕಡತೋಕ ಮ೦ಜುನಾಥ ಭಾಗವತ
ಕಡತೋಕ ಮ೦ಜುನಾಥ ಭಾಗವತ, ನಾರ್ಣಪ್ಪ ಉಪ್ಪೂರ ಮತ್ತು ಕಾಳಿ೦ಗ ನಾವಡ

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ