ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹಾರಾಡಿ ಮನೆತನದ ಕೊನೆಯ ಕೊಂಡಿ : ಹಾರಾಡಿ ಸರ್ವೋತ್ತಮ ಗಾಣಿಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಒಕ್ಟೋಬರ್ 27 , 2013

ಹಾರಾಡಿ ಇಂದು ಯಕ್ಷಗಾನದ ವಲಯಕ್ಕೆ ಸಂಬಂಧಿಸಿದ ಹಾಗೆ ಊರ ಹೆಸರಾಗಿ ಉಳಿದಿಲ್ಲ. ಅದೊಂದು `ವ್ಯಕ್ತಿ ನಾಮ`. ಹಾರಾಡಿ ಎಂಬ ಮೂರಕ್ಷರವು ಯಕ್ಷಪ್ರಿಯರ ಮೈ ರೋಮಾಂಚನಗೊಳಿಸುವಷ್ಟು ಧೃಡವಾದದ್ದು. ಬಡಗುತಿಟ್ಟು ಯಕ್ಷಗಾನದಲ್ಲಿ ಹಾರಾಡಿ ತಿಟ್ಟು ಎನ್ನುವ ಹೊಸ ಶೈಲಿಯನ್ನು ಹುಟ್ಟು ಹಾಕಿದ ಕೀರ್ತಿ ಈ ಕುಟುಂಬಕ್ಕಿದೆ. ಹಾರಾಡಿ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗರು ತಮ್ಮ ಜೀವಿತದಲ್ಲೆ ದಂತಕಥೆಯಾದವರು. ಅವರ ಸಂತತಿಯಲ್ಲಿ ಯಕ್ಷಗಾನ ಇನ್ನೂ ಜೀವಂತವಾಗಿ ಉಳಿದಿದೆ. ಅಂತಹ ಅಪೂರ್ವ ಕಲಾವಿದರಲ್ಲಿ ಹಾರಾಡಿ ಸರ್ವ ಗಾಣಿಗರು ಹಾರಾಡಿ ಕುಟು೦ಬದ ಕೊನೆಯ ಕಲಾವಿದರಾಗಿ ಇಂದು ರಂಗದಲ್ಲಿ ಗುರುತಿಸಲ್ಪಡುತ್ತಾರೆ. ಎಲ್ಲಾ ಹಿರಿಯ ಹಾರಾಡಿ ಕಲಾವಿದರ ಹಾಗೆ ಶ್ರಿ ಮ೦ದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಈಗ ಸೇವೆ ಸಲ್ಲಿಸುತಿದ್ದಾರೆ.

ದಿಗ್ಗಜರ ಒಡನಾಟ

ಸುಮಾರು 56 ವರ್ಷ ಪ್ರಾಯದ ಸರ್ವ ಗಾಣಿಗರು ತಮ್ಮ ಪೂರ್ವಜರ ನೆನಪನ್ನು ಮೆಲುಕು ಹಾಕುತ್ತಾರೆ. ಯಕ್ಷಗಾನಕ್ಕೆ ಎಲ್ಲಾ ಪ್ರಕಾರದ ವೇಷಧಾರಿಗಳು ಹಿಮ್ಮೇಳದವರನ್ನು ನೀಡಿದ ಈ ವಂಶದಲ್ಲಿ ಜನಿಸಿದ ಕೋರೆ ಮುಂಡಾಸು ಖ್ಯಾತಿಯ ಇವರ ಮಾವ ಹಾರಾಡಿ ಮಹಾಬಲ ಗಾಣೀಗರು ಮೇಳ ಸೇರುವಾಗ ಸುಮಾರು ಇಪ್ಪತ್ತು ಮಂದಿ ಇವರ ಮನೆತನದವರು ರಂಗಸ್ಠಳದಲ್ಲಿದ್ದರು. ಇವರ ಮನೆತನವೇ ಯಕ್ಷಗಾನದ ಮನೆತನ. ಅಲ್ಲದೆ ಇವರ ಉದ್ಯೋಗವು ಇದೇ ಆಗಿತ್ತು. ಅಳಿಯ ಸಂತಾನ ಪರಂಪರೆಯ ಮಹಾಬಲ ಗಾಣಿಗರ ಮಾವ ಹಾರಾಡಿ ರಾಮ ಗಾಣಿಗರು ಯಕ್ಷಗಾನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ತಂದವರು. ರಾಮಗಾಣಿಗರ ಮಾವ ಶೇಷಗಾಣಿಗರು ಅವರ ಮಾವ ಮಂಜ ಗಾಣಿಗರು ಹೀಗೆ ಏಳು ತಲೆಮಾರಿನವರು ಯಕ್ಷಗಾನ ರಂಗವನ್ನು ಆಳಿದವರು. ಇವರೆಲ್ಲರೂ ಎರಡನೇ ವೇಷಧಾರಿಗಳಾಗಿ ಈ ರಂಗಕ್ಕೆ ಕೀರ್ತಿ ತಂದವರು. ಇಂತಹ ಮಹಾನ್ ಕುಟುಂಬದ ಸದಸ್ಯರಾಗಿ ಸರ್ವ ಗಾಣಿಗರು ಗುರುತಿಸಲ್ಪಡುತ್ತಾರೆ.

ಸರ್ವ ಗಾಣಿಗರು ಬಾಲಗೋಪಾಲರಾಗಿ ರಂಗದಲ್ಲಿ ಕಾಣಿಸಿಕೊಳ್ಳುವ ಕಾಲವೇ ಯಕ್ಷಗಾನದ ಸುವರ್ಣಯುಗವಾಗಿತ್ತು. ಖ್ಯಾತಿವೆತ್ತ ವೇಷಧಾರಿಗಳಿದ್ದ ಬಡಗುತಿಟ್ಟು ಎರಡು ಪ್ರಬಲ ಶೈಲಿಗಳಿಂದ ಕಂಗೊಳಿಸುತಿತ್ತು. ಒಂದು ಹಾರಾಡಿ ತಿಟ್ಟು ಮತ್ತೊಂದು ಮಟ್ಪಾಡಿ ತಿಟ್ಟು. ಮಟ್ಪಾಡಿ ತಿಟ್ಟಿನಲ್ಲಿ ಗುರು ವೀರಭದ್ರನಾಯಕರು, ಶ್ರೀನಿವಾಸ ನಾಯಕರು ಚಂದು ನಾಯಕರಿದ್ದರೆ ಹಾರಾಡಿ ತಿಟ್ಟಿನಲ್ಲಿ ಪ್ರಬಲರಾದ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗರು, ಮಹಾಬಲ ಗಾಣಿಗರು. ಭಾಗವತ ಅಣ್ಣಪ್ಪ ಗಾಣಿಗರೆ ಮುಂತಾದವರಿದ್ದರು. ಇವರೆಲ್ಲರ ಸಹವಾಸ ಸರ್ವ ಗಾಣಿಗರು ಪರಿಪೂರ್ಣ ಕಲಾವಿದರಾಗಿ ಬೆಳೆಯಲು ಸಹಕಾರಿಯಾಯಿತು.

ಬಾಲ್ಯ, ವೃತ್ತಿ ಹಾಗೂ ಕಲಾಸೇವೆ

ಉಡುಪಿ ಜಿಲ್ಲೆಯ ಹಾರಾಡಿ ಎಂಬ ಹಳ್ಳಿಯಲ್ಲಿ 7-7-1955ರಲ್ಲಿ ಕಷ್ಣ ಗಾಣಿಗ ಗೋಪಮ್ಮ ದಂಪತಿಯ ಪುತ್ರನಾಗಿ ಜನಿಸಿದ ಸರ್ವ ಗಾಣಿಗರು ಖ್ಯಾತ ಕಲಾವಿದ ಹಾರಾಡಿ ಮಹಾಬಲ ಗಾಣಿಗರ ಸಹೋದರಳಿಯ. ನಾಲ್ಕನೆ ತರಗತಿ ವಿದ್ಯಾಭ್ಯಾಸ ಪಡೆದ ಇವರು ಸುತ್ತಮುತ್ತಲು ಯಕ್ಷಗಾನದ ವಾತಾವರಣ ದಟ್ಟವಾಗಿರುವುದರಿಂದ, ತಮ್ಮ ಮನೆತನವೂ ಯಕ್ಷಗಾನವೇ ಅದ್ದರಿಂದ ಮಾವನ ಪ್ರೇರಣೆಯಿಂದ ರಂಗದೀಕ್ಷೆ ಪಡೆದರು. ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಸೇರಿಕೊಂಡ ಇವರು ಗುರು ವೀರಭದ್ರ ನಾಯಕರು, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲ ರಾಯರಿಂದ ಶಾಸ್ತ್ರೋಕ್ತ ರಂಗ ಶಿಕ್ಷಣ ಪಡೆದು ಕೊಂಡರು. ಆ ಕಾರಣದಿಂದ ಹಾರಾಡಿ ಕಲಾವಿದರಾದರೂ ಇವರಲ್ಲಿ ಮಟ್ಪಾಡಿ ತಿಟ್ಟಿನ ಕುಣಿತದ ಶೈಲಿಯನ್ನು ಗುರುತಿಸಬಹುದಾಗಿದೆ. ಗುರುವಿನಿಂದ ಬಂದ ಮಟ್ಪಾಡಿ ಶೈಲಿಯ ಕುಣಿತ ನಿಲುವು, ವಂಶ ಪಾರಂಪರೆಯಿಂದ ಬಂದ ಹಾರಾಡಿ ಶೈಲಿಯ ಛಾಪು, ಗತ್ತು ಗಂಭೀರತೆ ಹೀಗೆ ಎರಡು ತಿಟ್ಟುಗಳ ಪ್ರಾತಿನಿಧಿಕ ಕಲಾವಿದರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ.

ಹಾರಾಡಿ ಸರ್ವೋತ್ತಮ ಗಾಣಿಗ
ಜನನ : ಜುಲೈ 7, 1955
ಜನನ ಸ್ಥಳ : ಹಾರಾಡಿ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ : ಮ೦ದಾರ್ತಿ, ಮಾರಣ ಕಟ್ಟೆ, ಅಮೃತೇಶ್ವರಿ, ಸಾಲಿಗ್ರಾಮ, ಸೌಕೂರು ಮುಂತಾದ ಮೇಳಗಳಲ್ಲಿ ಸುಮಾರು ನಾಲ್ಕು ದಶಕಕ್ಕೂ ಅಧಿಕ ಕಾಲ ಪ್ರಧಾನ ಕಲಾವಿದರಾಗಿ ದುಡಿಮೆ.
ಪ್ರಶಸ್ತಿಗಳು:
ಹಾರಾಡಿ-ಮಟಪಾಡಿ ದತ್ತಿನಿಧಿ ಪುರಸ್ಕಾರ ಸೇರಿದ೦ತೆ ಹಲವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು.
ತನ್ನ 14ನೇ ವಯಸ್ಸಿಗೆ ರಂಗ ಪ್ರವೇಶ ಮಾಡಿದ ಇವರು ಮ೦ದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಬಡಗುತಿಟ್ಟಿನ ಶ್ರೇಷ್ಟ ಮಟ್ಟದ ಪುರುಷ ವೇಷಧಾರಿಯಾಗಿ ಗುರುತಿಸಿಕೊಂಡ ಇವರು ಮಾರಣ ಕಟ್ಟೆ, ಅಮೃತೇಶ್ವರಿ, ಸಾಲಿಗ್ರಾಮ, ಸೌಕೂರು ಮುಂತಾದ ಮೇಳಗಳಲ್ಲಿ ಸುಮಾರು ನಾಲ್ಕು ದಶಕಕ್ಕೂ ಅಧಿಕ ಕಾಲ ಕಲಾ ವ್ಯವಸಾಯ ಮಾಡಿದ್ದರೆ. ಆಕರ್ಷಕವಾದ ವೇಷಾಲಂಕಾರ, ಪರಿಶುದ್ದವಾದ ಬಾಷಾ ಪ್ರೌಡಮೆ. ರಂಗಾನುಬವ, ಪುರಾಣ ಪ್ರಜ್ಜ್ನೆ ಖಚಿತ ಲಯಗಾರಿಕೆ, ಸಂಪ್ರದಾಯದ ಪರಿಪೂರ್ಣ ಹೆಜ್ಜೆಗಾರಿಕೆಯಿಂದ ಶ್ರ್ರೇಷ್ಟ ಮಟ್ಟದ ಕಲಾವಿದನೆಂದು ಗುರುತಿಸಲ್ಪಟ್ಟ ಇವರ ಕರ್ಣಾರ್ಜುನದ ಅರ್ಜುನ, ವೀರಮಣಿ ಕಾಳಗದ ಪುಷ್ಕಳ ಪಾರಿಜಾತದ ಕೃಷ್ಣ ಮುಂತಾದ ಪುರುಷ ವೇಷವಲ್ಲದೆ, ಭೀಮ, ಕೌರವ, ರಾವಣ, ಸುದನ್ವ, ಬಲರಾಮ ಮುಂತಾದ ಪಾತ್ರಗಳು ಸಹ ಅಷ್ಟೇ ಪರಿಪೂರ್ಣ. ಹೊಸ ಪ್ರಸಂಗದಲ್ಲು ಸಹಜ ಅಭಿನಯ ನೀಡುವ ಇವರ ಸತಿ ಸುಶೀಲೆಯ ದುರ್ಜಯ, ರತ್ನಶ್ರಿ, ರೂಪಶ್ರಿ, ಬನಶಂಕರಿ ಪ್ರಸಂಗಗಳ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. ಎಪ್ಪತ್ತರ ದಶಕದಲ್ಲಿ ಮ೦ದಾರ್ತಿ ಮೇಳದಲ್ಲಿ ಮರವಂತೆ ಶೀನದಾಸರು, ನೆಲ್ಲೂರು ಮರಿಯಪ್ಪಾಚಾರರ ಹಿಮ್ಮೇಳದಲ್ಲಿ ಕೋಡಿ ಶಂಕರ ಗಾಣಿಗರು, ಮೊಳಹಳಿ ಹೆರಿಯ, ಹೆರಂಜಾಲು ಸುಬ್ಬಣ್ಣ ಗಾಣಿಗರ ಸಹವರ್ತಿಯಾಗಿ ಗರಿಷ್ಟ ಸಾಧನೆಯನ್ನು ತೋರಿದ್ದರು.

ಕು೦ಟು೦ಬ ಜೀವನ

ನಿಜ ಜೀವನದಲ್ಲಿ ಆಕರ್ಷಕ ವ್ಯಕ್ತಿತ್ವ, ಮಿತಬಾಷಿ ಸ್ನೇಹಮಹಿಯಾದ ಇವರು ಹಿಂದಿನ ಕಲಾವಿದರಂತೆ ಜುಟ್ಟನ್ನು ಉಳಿಸಿಕೊಂಡ ಏಕಮಾತ್ರ ಕಲಾವಿದರು. ಸದಾ ಶುಭ್ರವಸನವಾದ ಜುಬ್ಬ ಶಾಲು, ತಲೆಯಲ್ಲಿ ಜುಟ್ಟು, ಮಂದಹಾಸ ಬೀರುವ ಇವರು ಸಮಕಾಲೀನ ಕಲಾವಿದರಿಗೆಲ್ಲಾ ಆದರ್ಶಪ್ರಾಯರು. ಡಾ ಕಾರಂತರು, ಬಿ, ವಿ. ಅಚಾರ್ಯರೊಂದಿಗೆ ವಿದೇಶ ಪ್ರಯಾಣ ಮಾಡಿದ ಇವರು ಹೆಚ್ಚನ ಪೌರಾತ್ಯ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿದ್ದಾರೆ. ವೃತಿರಂಗದಲ್ಲಿ ನೂರಾರು ಶಿಷ್ಯರನ್ನು ತಯಾರು ಮಾಡಿದ ಇವರ ಶಿಷ್ಯರು ಬೇರೆ ಬೇರೆ ಮೇಳಗಳಲ್ಲಿ ಸೇವೆ ಸಲ್ಲಿಸುತಿದ್ದಾರೆ. ಮಡದಿ ಲಲಿತ ಐವರು ಮಕ್ಕಳ ಸಂತೃಪ್ತ ಕುಟುಂಬ ಹೊಂದಿದ ಇವರ ಅಳಿಯ ಪ್ರವೀಣ ಗಾಣಿಗರು ಈ ರಂಗದ ಬರವಸೆಯ ಕಲಾವಿದರು. ಇವರನ್ನು ನಾಡಿನ ಹಲವಾರು ಸಂಘ ಸಂಸೆಗಳು ಸನ್ಮಾನಿಸಿವೆ.








Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ