ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಅಪ್ರತಿಮ ಚೆಂಡೆ ಮಾಂತ್ರಿಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಸೆಪ್ಟೆ೦ಬರ್ 18 , 2014

ಯಕ್ಷಗಾನದ ಮೇರು ಪ್ರತಿಭೆ, ಚೆಂಡೆ ಮಾಂತ್ರಿಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಚೆಂಡೆ ಮದ್ದಳೆ ವಾದಕರಾಗಿ ಮಾತ್ರವಲ್ಲದೆ, ಯಕ್ಷಗಾನ ಪ್ರತಿಭೆಗಳನ್ನೂ ರೂಪಿಸಿದ ಕೀರ್ತಿ ಚಿಪ್ಪಾರರದ್ದು. ಅವರು ಚೆಂಡೆ ಹಿಡಿದು ರಂಗಸ್ಥಳಕ್ಕೆ ಪ್ರವೇಶಿಸಿದರೆಂದರೆ ಪ್ರೇಕ್ಷಕರು ತನ್ಮಯ. ಚಿಪ್ಪಾರರ ಚೆಂಡೆ ವಾದನಕ್ಕೆ ಎಂತಹ ಅರಸಿಕನೂ ತಲೆದೂಗಲೇ ಬೇಕು. ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆ ಮಾಂತ್ರಿಕರೆಂದೇ ಖ್ಯಾತಿ ಪಡೆದ ಚಿಪ್ಪಾರು ಜೀವನದ ಕೊನೆಯುಸಿರಿನವರೆಗೂ ಚೆಂಡೆಯೊಡನೆ ಬಾಂಧವ್ಯ ಬೆಳೆಸಿಕೊಂಡಿದ್ದರು. ಅರ್ಥಾತ್ ಚೆಂಡೆ ಮಾಂತ್ರಿಕ ಜಗತ್ತಿಗೆ, ಯಕ್ಷಗಾನ ಕ್ಷೇತ್ರಕ್ಕೆ ಚೆಂಡೆ ಬಾರಿಸುತ್ತಲೇ ವಿದಾಯ ಹೇಳಿದರು.

ಯಕ್ಷಗಾನದ ಮೇರುಗಿರಿಯನ್ನು ಏರಿದವರು ಚಿಪ್ಪಾರು. ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದ ಚಿಪ್ಪಾರು ಸಮಸ್ತ ಕಲೆಯನ್ನೇ ಬೆಳಗಿದ್ದು ಮಾತ್ರವಲ್ಲದೆ, ಹಲವಾರು ಪ್ರತಿಭೆಗಳನ್ನೂ ರೂಪಿಸಿದ್ದಾರೆ. ಯಕ್ಷಗಾನಕ್ಕೆ ಅಂಬೆಗಾಲಿಡುವವರಿಗೆ ಗುರುವಾಗಿ, ತಮ್ಮ ಸಮಕಾಲೀನರಿಗೆ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಅದರಿಂದಾಗಿಯೇ ಚಿಪ್ಪಾರು ಇಂದು ಅತ್ಯುನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ.

ಬಾಲ್ಯ ಮತ್ತು ಶಿಕ್ಷಣ

ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಜನಿಸಿದ್ದು 1928ರ ಏಪ್ರಿಲ್ 2ರಂದು, ಕೇರಳದ ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು ಎಂಬಲ್ಲಿ. ತಂದೆ ಮರಿಮಯ್ಯ ಬಲ್ಲಾಳ್ ಮದ್ದಳೆ ವಾದಕರು. ಚಿಪ್ಪಾರು ವಿದ್ಯಾಭ್ಯಾಸ ಮಾಡಿದ್ದು 6ನೇ ತರಗತಿ ವರೆಗೆ ಮಾತ್ರ. ಇವರು ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ ಅನುಭವಿಸಿದವರು. ವಿದ್ವಾನ್ ಕೇಶವ ಭಟ್ ಚಿಪ್ಪಾರರ ಮೊದಲ ಗುರು. ನಂತರ ಮಾಂಬಾಡಿ ನಾರಾಯಣ ಭಾಗವತರು ಮತ್ತು ಕುದ್ರಕೋಡ್ಲು ರಾಮಭಟ್ ಅವರಿಂದ ಪಾಠ ಹೇಳಿಸಿಕೊಂಡರು. ವಿದ್ವಾನ್ ಬಾಬು ರೈ ಅವರಿಂದ ಮೃದಂಗ ವಾದನವನ್ನು ಕಲಿತರು. ಇದೇ ವೇಳೆ, ನಿಡ್ಲೆ ನರಸಿಂಹ ಭಟ್ಟರ ಮದ್ದಳೆ ವಾದನಕ್ಕೆ ಮಾರುಹೋದ ಚಿಪ್ಪಾರು, ಅವರಿಂದ ಮದ್ದಳೆ ವಾದನವನ್ನೂ ಕಲಿತರು. ನಂತರ, ಸ್ಥಳೀಯ ಯುವಕ ವೃಂದದೊಂದಿಗೆ ಮದ್ದಳೆವಾದಕರಾಗಿ ಊರೂರು ಸುತ್ತಿದ ಚಿಪ್ಪಾರು ಧರ್ಮಸ್ಥಳ ಮೇಳಕ್ಕೆ ಸೇರಿದರು.

ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಸೇವೆ

ಯಕ್ಷಗಾನದ ಮಹಾನ್ ಪ್ರತಿಭೆ ಕುರಿಯ ವಿಠಲ ಶಾಸ್ತ್ರಿಗಳಿಂದ ಯಕ್ಷಗಾನದ ಎಲ್ಲಾ ಆಯಾಮಗಳನ್ನೂ ತಿಳಿದುಕೊಂಡ ಚಿಪ್ಪಾರು 40 ವರ್ಷಕ್ಕೂ ಹೆಚ್ಚು ಕಾಲ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದರು. ಅಗರಿ, ಬಲಿಪ ನಾರಾಯಣ ಭಾಗವತ, ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಇರಾ ಗೋಪಾಲಕೃಷ್ಣ ಭಟ್ಟ , ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಗಣಪತಿ ಭಟ್ಟ, ದಿನೇಶ್ ಅಮ್ಮಣ್ಣಾಯ ಮೊದಲಾದ ಹಿರಿ-ಕಿರಿಯ ಭಾಗವತರೊಂದಿಗೆ ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆ ವಾದಕರಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು, ಹಿಮ್ಮೇಳಕ್ಕೆ ನವೀನ ರೂಪವನ್ನು ಕೊಟ್ಟಿದ್ದೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.

ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹಿರಿಯ- ಕಿರಿಯ ಕಲಾವಿದರಿಗೆಲ್ಲ ಚೆಂಡೆ ಮದ್ದಲೆ ಸಾಥ್ ನೀಡಿ ಅವರೆಲ್ಲರ ಪದ್ಯಗಳು ಮೆರೆಸುವಂತೆ ಮಾಡಿದ ಖ್ಯಾತಿ ಇವರದ್ದು. ದಿವಂಗತ ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಕಡತೋಕ -ಬಲ್ಲಾಳರ ಜೋಡಿ ಯಕ್ಷರಂಗ ಕಂಡ ಅದ್ಭುತ .

ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್
ಜನನ : ಏಪ್ರಿಲ್ 2, 1928
ಜನನ ಸ್ಥಳ : ಚಿಪ್ಪಾರು, ಬಾಯಾರು
ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ

ಕಲಾಸೇವೆ:
ಅಪ್ರತಿಮ ಚೆ೦ಡೆ-ಮದ್ದಳೆ ವಾದಕರಾಗಿ 60 ವರ್ಷಗಳ ಕಾಲ ಮೂಲ್ಕಿ, ಧರ್ಮಸ್ಥಳ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು:
ಕರ್ನಾಟಕ ಜನಪದ ಪ್ರಶಸ್ತಿ ಕೇರಳ ಅಕಾಡೆಮಿ ಪ್ರಶಸ್ತಿ ಶೇಣಿ ಪ್ರಶಸ್ತಿ

ಮರಣ ದಿನಾ೦ಕ : ಏಪ್ರಿಲ್ 27, 2009

ರಷ್ಯಾ ಅಧ್ಯಕ್ಷರಿಂದ ಶಹಬ್ಬಾಶ್!

ಚಿಪ್ಪಾರು ಚೆಂಡೆ ವಾದನವೆಂದರೆ ಕೇಳಬೇಕೆ? ಆಟದಲ್ಲಿ ಚಿಪ್ಪಾರು ಚೆಂಡೆವಾದಕರೆಂದರೆ ಅಲ್ಲಿ ಜನಸಾಗರ. ಅವರ 'ಉರುಳಿಕೆ' ಕೇಳಲೆಂದೇ ಕಾದು ಕುಳಿತ ಮಂದಿಯ ಮನಸ್ಸನ್ನು ಕ್ಷಣದಲ್ಲೇ ಗೆದ್ದು ಬಿಡುತ್ತಿದ್ದರು ಚಿಪ್ಪಾರು. 1958ರಲ್ಲಿ ರಷ್ಯಾ ಅಧ್.ಕ್ಷರ ಭಾರತ ಪ್ರವಾಸ ವೇಳೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿಪ್ಪಾರರ ಚೆಂಡೆ ವಾದನ. ರಷ್ಯಾ ಅಧ್ಯಕ್ಷರು ಚೆಂಡೆ ವಾದನ ಕೇಳುವುದರಲ್ಲೇ ತಲ್ಲೀನ. ಕೊನೆಗೆ ಚಿಪ್ಪಾರರಿಗೊಂದು ಶಹಬ್ಬಾಶ್! ಅಷ್ಟು ಅದ್ಭುತವಾಗಿ ಚಿಪ್ಪಾರು ಚೆಂಡೆ ಬಾರಿಸುತ್ತಿದ್ದರು.

ಅನಾಯಾಸೇನ ಮರಣಂ .. ವಿನಾ ದೈನ್ಯೇನ ಜೀವನಂ

ಚಿಪ್ಪಾರು ಅವರ ಪುತ್ರ ಮರಿಮಯ್ಯ ಬಲ್ಲಾಳರು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರು. ತಂದೆ ಹಾಕಿದ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲಾ ಸೇವಕ. ಧರ್ಮಸ್ಥಳ ಮೇಳದಿಂದ ನಿವೃತ್ತಿ ಹೊಂದಿದ ಬಳಿಕ ಹವ್ಯಾಸಿ ಕಲಾವಿದರಾಗಿ ಚಿಪ್ಪಾರು ಕಲಾ ಸೇವೆ ಮಾಡುತ್ತಿದ್ದರು. 80 ವರ್ಷದ ಇಳಿವಯಸ್ಸಿನಲ್ಲೂ ಚಿಪ್ಪಾರು ಚೆಂಡೆ ವಾದನ ಕುಗ್ಗಿರಲಿಲ್ಲ.

ಸದಾ ಸ್ಥಿತಪ್ರಜ್ಞರಂತೆ ಕಾಣುತ್ತಿದ್ದ ಬಲ್ಲಾಳರು ಸಂತೃಪ್ತ ಜೀವನವನ್ನು ನಡೆಸಿದವರು. ಎಡನೀರು ಮೇಳದ ಆಟಕ್ಕೋಸ್ಕರ ಬೆಂಗಳೂರು ನಗರಕ್ಕೆ ಬಂದಿದ್ದ ಇವರು ಚೌಕಿ ಪೂಜೆಯಾಗುತ್ತಿದ್ದಂತೆ ನಮ್ಮನ್ನು ಬಿಟ್ಟು ಅಗಲಿದರು . ಅನಾಯಾಸೇನ ಮರಣಂ .. ವಿನಾ ದೈನ್ಯೇನ ಜೀವನಂ ... ಎಂಬಂತೆ ಸುಖ ಮರಣವನ್ನು ಪಡೆದ ಇವರು ಧನ್ಯರು. ಕಲಾಸೇವೆ ಮಾಡುತ್ತಲೇ ಇಹಲೋಕವನ್ನು ತ್ಯಜಿಸಿದ್ದೇ ಅವರ ಶ್ರೇಷ್ಠತೆಗೆ ಸಾಕ್ಷಿ.

ಕುಟುಂಬ ಮತ್ತು ಪ್ರಶಸ್ತಿ

ಪತ್ನಿ ಮತ್ತು ಮೂವರು ಪುತ್ರರು. ಪುತ್ರ ಮರಿಮಯ್ಯ ಬಲ್ಲಾಳರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರು.

ಕರ್ನಾಟಕ ಜನಪದ ಪ್ರಶಸ್ತಿ, ಕೇರಳ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಚಿಪ್ಪಾರರನ್ನು ಅರಸಿಕೊಂಡು ಬಂದಿವೆ. ದೂರದರ್ಶನದಲ್ಲಿ ಪ್ರಪ್ರಥಮ ಪ್ರದರ್ಶನ ನೀಡಿದ ಕೀರ್ತಿ ಚಿಪ್ಪಾರರದ್ದು.****************

ಚಿಪ್ಪಾರು ಬಲ್ಲಾಳರ ಕೆಲವು ದೃಶ್ಯಾವಳಿಗಳು

ಚಿಪ್ಪಾರು ಬಲ್ಲಾಳರ ಕೊನೆಯ ಪ್ರದರ್ಶನದ ದೃಶ್ಯವಾಳಿ

ಚಿಪ್ಪಾರು ಬಲ್ಲಾಳರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು )ಕೃಪೆ : http://dheemkita.blogspot.in, http://ballirenayya.blogspot.in, http://noopurabhramari.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Raghuram(9/22/2014)
This is very nice article Sir, I request kindly send the copy of the above collection if it possible from your side.
Mohanchandra Panjigar (9/19/2014)
ಜೊತೆಗೆ ಇವರು ಒಳ್ಳೆಯ ಮದ್ದಲೆ ನುಡಿಸುವವರೂ ಆಗಿದ್ದರು......ಎಂಬುದನ್ನೂ..ಕೇಳಿದ್ದೇನೆ....
K Gopalakrishna Karanth (9/19/2014)
Nimage nanna anantha vandsnegalu
Sandeep Ballal K (9/19/2014)
superb
ukumar Posadigumpe (9/19/2014)
Really great .. ..
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ