ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಣ್ಣದ ವೇಷದ ಮೇರು ಕಲಾವಿದ ಪೇತ್ರಿ ಮಾದು ನಾಯ್ಕ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಡಿಸೆ೦ಬರ್ 2 , 2013

ಕಲಾವಿದನೊಬ್ಬನ ಕಲಾಪ್ರತಿಭೆ ಅಗಾಧವಾಗಿದ್ದಲ್ಲಿ ಜನ ಅವನ ಪ್ರತಿಭೆಯನ್ನು ಗೌರವಿಸುತ್ತಾರೆಯೆ ವಿನಹ ಜಾತಿಯನ್ನಲ್ಲ ಎನ್ನುವುದಕ್ಕೆ ಯಕ್ಷಗಾನ ರಂಗದಲ್ಲಿ ಮಾದು ನಾಯ್ಕರು ಬೆಳೆದು ಬಂದದ್ದೆ ಸಾಕ್ಷಿ. ಜಾತಿಯಲ್ಲಿ ಹಿಂದುಳಿದವರಾದರೂ ತಮ್ಮ ಅದ್ಭುತ ಕಲಾಪ್ರತಿಭೆಯಿಂದ ಸಮಾಜದ ಎಲ್ಲಾ ವರ್ಗದ ಜನರ ಹೃದಯವನ್ನು ಗೆದ್ದವರು ಮಾದು ನಾಯ್ಕರು. ಗಿರಿಜನ ಪಂಗಡದ ಮರಾಠಿ ಜನಾಂಗದವರಾದ ಇವರಲ್ಲಿ ಯಕ್ಷಗಾನ ಕಲೆ ಪುಟಿದೆದ್ದದ್ದು ಆಶ್ಚರ್ಯವಲ್ಲ. ಯಾಕೆಂದರೆ ಯಕ್ಷಗಾನದ ಮದ್ದಳೆಯ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿ ಮದ್ದಳೆ ವಾದನದಲ್ಲಿ ಕ್ರಾಂತಿ ಮೂಡಿಸಿದ ಗುರು ಬೇಳಂಜೆ ತಿಮ್ಮಪ್ಪ ನಾಯ್ಕರು ಮಾದು ನಾಯ್ಕರ ಸೋದರ ಮಾವ. ಹಾಗಾಗಿ ಈ ಕಲೆ ಅವರ ಮೂಲಕ ಮಾದು ನಾಯ್ಕರಿಗೆ ದಕ್ಕಿದೆ.

ಬಾಲ್ಯ ಹಾಗೂ ಕಲಾಸೇವೆ

ಬಡಗುತಿಟ್ಟು ಯಕ್ಷಗಾನಕ್ಕೆ ಅಪ್ರತಿಮ ಕಲಾವಿದರನ್ನು ನೀಡಿದ ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪ ಪೇತ್ರಿ ಎಂಬಲ್ಲಿ ವಾಮನ ನಾಯ್ಕ್-ಮೈದಾ ಬಾಯಿ ದಂಪತಿಗಳ ಪುತ್ರನಾಗಿ 1940ರಲ್ಲಿ ಜನಿಸಿದ ನಾಯ್ಕರು ಆರನೇ ತರಗತಿ ವಿದ್ಯಾಭ್ಯಾಸ ಮಾಡಿ ಮಾವ ತಿಮ್ಮಪ್ಪ ನಾಯ್ಕರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದರು. ಆ ಕಾಲದ ಪ್ರಸಿಧ್ಧ ಭಾಗವತ ರಾಮಚಂದ್ರ ಸಾಮಂತರು ಇವರನ್ನು ಪಳಗಿಸಿದವರು. ತಮ್ಮ 14ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಸುಮಾರು 30 ವರ್ಷ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ ತಿರುಗಾಟ ಮಾಡಿ 1963ರಿಂದ ಸತತ 12 ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನಂತರ 1963ರಿಂದ ಉಡುಪಿಯ ಯಕ್ಷಗಾನ ಕೇಂದ್ರದ ಮೂಲಕ ಯಕ್ಷರಂಗದ ತಿರುಗಾಟ ನೆಡೆಸಿದರು. ಡಾ|| ಕಾರಂತರ ಮೂಲಕ ಯಕ್ಷರಂಗದ ಕಲಾವಿದರೊಂದಿಗೆ ನಾಯ್ಕರು ಆ ಕಾಲದಲ್ಲಿ ತಮ್ಮ ಪ್ರತಿಭೆಯನ್ನು ವಿದೇಶಕ್ಕೆ ಕೊಂಡೊಯ್ದಿದ್ದಾರೆ. ದುಬೈ, ಕೆನಡ, ಜಪಾನ್, ರಷ್ಯಾ, ಇಟೆಲಿ, ಮೊದಲಾದ ದೇಶಗಳಲ್ಲಿ ಇವರು ಬಾಹುಕ, ಘಟೋತ್ಕಜ, ಶೂರ್ಪನಖೆ, ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಂಡು ವಿದೇಶಿಯರನ್ನು ಬೆಕ್ಕಸ ಬೆರಗಾಗಿಸಿದ್ದಾರೆ. ತನ್ನ ಪ್ರತಿಭೆ ವಿದೇಶದಲ್ಲಿ ಪಸರಿಸಲು ಸಹಕರಿಸಿದ್ಸ ಕಾರಂತರು ಮತ್ತು ಸಹಕಲಾವಿದರ ಬಗ್ಗೆ ನಾಯ್ಕರಿಗೆ ಅಪಾರ ಅಭಿಮಾನವಿದೆ.

ದಿಗ್ಗಜರ ಒಡನಾಟ

ಮರವಂತೆ ದಾಸದ್ವಯರು, ಜಾನುವಾರುಕಟ್ಟೆ ಭಾಗವತರು, ನಾರ್ಣಪ್ಪ‌ ಉಪ್ಪೂರರು, ಅಂಪಾರು ವೈದ್ಯರು, ಗುಂಡ್ಮಿ ರಾಮಚಂದ್ರ ನಾವಡರು, ಕಾಳಿಂಗ ನಾವಡರು, ಗೋರ್ಪಾಡೀ ವಿಠಲ ಪಾಟೀಲರು, ಮರಿಯಪ್ಪಾಚಾರ್, ಮತ್ಯಾಡಿ ನರಸಿಂಹ ಶೆಟ್ಟರು, ನೀಲಾವರ ರಾಮಕೃಷ್ಣಯ್ಯ, ಕಡತೋಕ ಭಾಗವತರು ಹೀಗೆ ವಿಭಿನ್ನ ಶೈಲಿಯ ಭಾಗವತರ ತಾಳಕ್ಕೆ ಹೆಜ್ಜೆ ಹಾಕಿದ ನಾಯ್ಕರ ಒಡನಾಡಿ ಕಲಾವಿದರಲ್ಲಿ ಹರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ವೀರಭದ್ರ ನಾಯ್ಕ್, ಮಹಾಬಲ ಗಾಣಿಗ, ಉಡುಪಿ ಬಸವ, ಮಾರ್ಗೋಳಿ ಗೋವಿಂದ ಸೇರೆಗಾರ್, ಹೆರಂಜಾಲು ಸಹೋದರರು, ಮೊಳಹಳ್ಳಿ ಹೆರಿಯ, ಅರಾಟೆ ಮಂಜುನಾಥ, ಹಳ್ಳಾಡಿ ಮಂಜಯ್ಯ ಶೆಟ್ಟಿ, ನಗರ ಜಗನ್ನಾಥ ಶೆಟ್ಟಿ, ಶಿರಿಯಾರ ಮಂಜುನಾಯ್ಕರು, ಕೆರೆಮನೆ ಬ೦ಧುಗಳು, ಚಿಟ್ಟಾಣಿ, ಕುಮ್ಟಾ ಗೋವಿಂದ ನಾಯ್ಕರು ಪ್ರಮುಖರು. ವಿಶೇಷವಾಗಿ ಹೊಸ ಪ್ರಸಂಗದ ಖಳ ಪಾತ್ರಗಳಿಗೆ ಜೀವತುಂಬಿದ ಇವರು ಮಂದಾರ್ತಿ ಮೇಳದಲ್ಲಿ ಅಬಿನಯಿಸುತಿದ್ದ ಶ್ರೀದೇವಿ ಬನಶಂಕರಿಯ ಚಮೂರನ ಪಾತ್ರ ಅಪಾರ ಜನಮನ್ನಣೆ ಗಳಿಸಿದೆ.

ದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಮೆರೆದ ‌ಇವರ ಮೈರಾವಣ, ಕಾಲಜಂಘ, ತಾರಕಾಸುರ, ಹಿಡಿಂಬಾಸುರ, ಹಿಡಿಂಬೆ ಮುಂತಾದ ಪಾತ್ರಗಳು ಜನಮನ್ನಣೆ ಪಡಿದಿವೆ. ಹಾರಾಡಿ ಮಹಾಬಲ ಗಾಣಿಗರ ನಂತರ ಜೋಡಿ ಕೋರೆ ಮುಂಡಾಸನ್ನು ರಂಗದಲ್ಲಿ ಪ್ರದರ್ಶಿಸಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಪೇತ್ರಿ ಮಾದು ನಾಯ್ಕ್
ಜನನ : 1940
ಜನನ ಸ್ಥಳ : ಪೇತ್ರಿ ಗ್ರಾಮ, ಬ್ರಹ್ಮಾವರ
ಉಡುಪಿ ತಾಲೂಕು & ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ದುಡಿಮೆ.
ಪ್ರಶಸ್ತಿಗಳು:
  • ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ
  • ಸಾಹಿತ್ಯ ಸಮ್ಮೇಳನ ಪ್ರಶಸ್ತಿ
  • ಮಂದಾರ್ತಿ ಕ್ಷೇತ್ರ ಸನ್ಮಾನ
  • ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ
  • ಚೆನ್ನೈ ರಾಷ್ಟ್ರೀಯ ಜಾನಪದ ಸಹಾಯ ಕೇಂದ್ರ ನೀಡುವ ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ

ಪ್ರಶಸ್ತಿ , ಪುರಸ್ಕಾರಗಳು

ಸುಮಾರು 75 ಸಂಘಟನೆಯಿಂದ ಸಮ್ಮಾನಿತರಾದ ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ. ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಮಂದಾರ್ತಿ ಕ್ಷೇತ್ರ ಸನ್ಮಾನ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚೆನ್ನೈ ರಾಷ್ಟ್ರೀಯ ಜಾನಪದ ಸಹಾಯ ಕೇಂದ್ರ ನೀಡುವ ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ಸಂದಿವೆ. ಇವರ ಬಂದುಗಳಾದ ಬೇಳಂಜೆ ಸುಂದರ ನಾಯ್ಕ್, ಮತ್ತು ಬೇಳಂಜೆ ಜಯಂತ ನಾಯ್ಕರು ಬಡಗುತಿಟ್ಟಿನ ಖ್ಯಾತ ಸ್ರೀವೇಷಧಾರಿಯಾಗಿಯೂ ಮಹಾಬಲ ನಾಯ್ಕರು ಖ್ಯಾತ ಪುಂಡು ವೇಷಧಾರಿಯಾಗಿ ವಿವಿದ ಮೇಳಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀ ಮಂದಾರ್ತಿ ಕ್ಷೇತ್ರದ ಬಗ್ಗೆ ಅಪಾರ ಅಭಿಮಾನವುಳ್ಳ ಮಾದು ನಾಯ್ಕರು ಪ್ರತೀವರ್ಷ ದೇವರಸೇವೆ ಆಟಕ್ಕೆ ತಪ್ಪದೆ ಹಾಜರಿರುತ್ತಾರೆ. ಬಣ್ಣದ ವೇಷಧಾರಿಯಾಗಿ ಸಕ್ಕಟ್ಟಿನವರ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡ ಮಾದು ನಾಯ್ಕರಿಗೆ ಸಕ್ಕಟ್ಟು ಪ್ರಶಸ್ತಿ ಯೋಗ್ಯವಾಗೀಯೇ ಸಂದಿದೆ.

******************


2013ರ ಸಾಲಿನ ಸಕ್ಕಟ್ಟು ಲಕ್ಷ್ಮಿನಾರಾಯಣಯ್ಯನವರ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರ೦ಭ
ಜೋಡಿ ಕೋರೆ ಮುಂಡಾಸಿನಲ್ಲಿ ಪೇತ್ರಿ ಮಾದು ನಾಯ್ಕ್Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Radhakrishna Shetty - Kudkunje(6/9/2016)
Madhava Naik ravara aatavannu nanu 7 class nalliruvaga nodiddene. Evarobbaru aboothapoorva kalavida. Devaru avarige olle aarogya mattu bhagyavannu nidali. Radhakrishna Shetty Kudkunje - 9481101814
Rajesh Bhat(12/3/2013)
ಕಲೆಗೆ ಜಾತಿ ಭೇದವಿಲ್ಲ. ಗುಣಾಃಪೂಜ್ಯಾ ಸ್ಥಾನಂ ಗುಣಿಷು ನ ಚ ಲಿಂಗಂ ನ ಚ ವಯಃ ಎಂಬ ಮಾತಿನಂತೆ ಒಳ್ಳೆಯ ಕಲೆ ಯಾರಲ್ಲಿದ್ದರೂ ಒಳ್ಳೆಯದೇ.ಅಪರೂಪ ದ ಕಲಾವಿದರ ನ್ನು ಪರಿಚಯಿಸಿದ್ದಅದಕ್ಕೆಧನ್ಯವಾದಗಳು
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ