ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಹಾಸ್ಯಗಾರರಿಂದ ``ಗದಾಯುದ್ದ`` ಪ್ರಸಂಗದ ಪ್ರಧರ್ಶನ ಸಾಧುವೇ?

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಡಿಸೆ೦ಬರ್ 4 , 2013

ಮಹಾಭಾರತ ಕುರುಕ್ಷೇತ್ರ ಯುದ್ದದ ಪರ್ವಗಳಲ್ಲಿ ಗದಾಪರ್ವವು ವಿಶಿಷ್ಟವೂ ಅರ್ಥಪೂರ್ಣವೂ ಆದ ಕಥಾ ಪ್ರಸಂಗ. ಮಹಾಭಾರತದುದ್ದಕ್ಕೂ ಖಳನಾಯಕನೆಂದು ಬಿಂಬಿಸಲ್ಪಟ್ಟ ಕೌರವನ ಉದಾತ್ತ ಗುಣವಿಶೇಷಣಗಳೂ, ಕರುಣಾಜನಕ ಸನ್ನಿವೇಶಗಳು, ಇಲ್ಲಿ ಬಹಳ ಸುಂದರವಾಗಿ ಅಭಿವ್ಯಕ್ತವಾಗಿದೆ. ರನ್ನ ಮಹಾಕವಿಯ "ಗದಾಯುದ್ದ" ಕಾವ್ಯವನ್ನು ನಮ್ಮ ಯಕ್ಷಗಾನ ಕವಿಗಳು, ಕಲಾವಿದರು ಯಥಾವತ್ತಾಗಿ ರಂಗಕ್ಕೆ ತಂದಿದ್ದಾರೆ. ಈ ಮಹಾ ಕಾವ್ಯದಲ್ಲಿ ಕುರುಕುಲ ಶಿಖಾಮಣಿಯ ಛಲದಂಕತನ, ಉದಾತ್ತ ಮನೋಭಾವ, ಅಲ್ಲದೆ ತನ್ನ ವೈರಿಗಳಾದ ಪಾಂಡವರನ್ನು ಕೊನೆಯ ಕ್ಷಣದಲ್ಲಿ ಅವನು ನೆನಪಿಸುವ ರೀತಿ, ಹೆಣದ ರಾಶಿಯ ಮೇಲೆ ನಡೆದು ವೈಶಂಪಾಯನ ಸರೋವರದೆಡೆಗೆ ಹೋಗುವಾಗ ತನ್ನವರೆಲ್ಲರ ಶವಗಳನ್ನು ಬಿಟ್ಟು ವೈರಿಪಾಳ್ಯದ ಅಭಿಮನ್ಯುವಿನ ಶವವನ್ನು ನೋಡಿ ಪಶ್ಚಾತ್ತಾಪ ಪಡುವುದು, ಕರ್ಣನ ಶವದ ಬಳಿ ಕಣ್ಣೀರಿಡುವುದು, ಸಂಜಯನಲ್ಲಿ ತನ್ನ ಜೀವಿತದ ಕೊನೆಯ ಕಾಲದ ಚಿಂತನೆಗಳನ್ನು ತಿಳಿಸುವುದು, ಮುಂತಾದ ಸನ್ನಿವೇಶಗಳು ಕರುಣಾರಸದ ಪರಾಕಾಷ್ಟತೆಗಳು. ಪ್ರಬುದ್ಧ ಕಲಾವಿದರು ಈ ಪಾತ್ರದಲ್ಲಿ ಕಾಣಿಸಿಕೊಂಡಾಗ ಈ ಎಲ್ಲಾ ಭಾವನೆಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸಲು ಸಾಧ್ಯವಾಗುತ್ತದೆ. ಇಲ್ಲಿ ಬರುವ ಸಂಜಯ, ಅಶ್ವತ್ತಾಮ, ಭೀಮ, ಬೇಹಿನಚರರು. ಶ್ರೀಕೃಷ್ಣ ಪಾಂಡವರು ಪ್ರತಿಯೊಂದು ಪಾತ್ರಕ್ಕೂ ಅದರದ್ದೆ ಆದ ಘನತೆ ಗಾಂಭೀರ್ಯ ವಿಶೇಷತೆ ಇದೆ . ದಿ|| ಕೆರೆಮನೆ ಶಿವರಾಮ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೆ. ಗೋವಿಂದ ಭಟ್, ಡಿ ಮನೋಹರ ಕುಮಾರ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಜಲವಳ್ಳಿ ವಿದ್ಯಾಧರ ರಾವ್ ಇವರೆಲ್ಲ ತಮ್ಮ ಇತಿ ಮಿತಿಯೊಳಗೆ ಗದಾಯುದ್ದದ ಧುರ್ಯೋಧನನ ಪಾತ್ರಕ್ಕೆ ಪಾತ್ರೋಚಿತ ನ್ಯಾಯ ಒದಗಿಸಿದ್ದಾರೆ. ದಿ. ಕಾಳಿಂಗ ನಾವುಡರ ಭಾಗವತಿಕೆಯಲ್ಲಿನ ಗೋಡೆಯವರ ಕೌರವನ ಪಾತ್ರವಿರುವ ಧ್ವನಿಸುರುಳಿ ದಾಖಲೆಯ ಮಾರಾಟವನ್ನು ಕಂಡಿದೆ. ರನ್ನ ಮಹಾ ಕವಿಯ ಕಾವ್ಯವನ್ನೇ ಗೋಡೆಯವರು ಯಥಾವತ್ತಾಗಿ ರಂಗಕ್ಕೆ ತಂದಿದ್ದಾರೆ.

ಗೋಡೆಯವರ ಕೌರವನ ಪಾತ್ರ
ಆದರೆ ಇತ್ತೀಚಿಗೆ ಕೇವಲ ಹಣ ಗಳಿಸುವ ಉದ್ದೇಶದಿಂದ ಕೆಲವು ಕಂಟ್ರಾಕ್ಟುದಾರರು "ಹಾಸ್ಯಗಾರರಿಂದಲೇ ಗದಾಯುದ್ಧ ಪ್ರಸಂಗ ಪ್ರದರ್ಶನ" ಎಂದು ಜಾಹೀರಾತು ನೀಡಿ ಪ್ರದರ್ಶನ ನೀಡುತ್ತಿದ್ದಾರೆ. ಇದು ಅತ್ಯಂತ ಕಳಪೆಯು, ಹಾಸ್ಯಾಸ್ಪದವೂ ಆಗಿದ್ದು ಕೇವಲ ಒಂದು ವರ್ಗದ ಪ್ರೇಕ್ಷಕರನ್ನು ತಲುಪಲು ಮಾತ್ರ ಸಾಧ್ಯವಾಗುತ್ತದೆ. ಆಧುನಿಕ ಯುಗದಲ್ಲಿ ಹಾಸ್ಯರಸಕ್ಕೆ ಬಹಳಷ್ಟು ಬೇಡಿಕೆ ಇದೆ. ಇದರಿಂದ ಹಾಸ್ಯಗಾರರ ಬೇಡಿಕೆಯೂ ಹೆಚ್ಚಿದೆ. ಹಗಲಿಡಿ ದಣಿದು ಮನೋರಂಜನೆಗಾಗಿ ಬಂದ ಪ್ರೇಕ್ಷಕನಿಗೆ ಹಾಸ್ಯ ಅನಿವಾರ್ಯ. ಒಪ್ಪತಕ್ಕದ್ದೇ . ಯಾಕೆಂದರೆ ಪ್ರೇಕ್ಷಕರು ಬರುವುದು ಮನರಂಜನೆಗಾಗಿ. ಆದರೂ ಅದಕ್ಕೆ ಕೆಲವು ಇತಿ ಮಿತಿಗಳು ಇರಬೇಕಾಗುತ್ತದೆ. ಪ್ರತಿ ಪ್ರಸಂಗದಲ್ಲೂ ಹಾಸ್ಯಗಾರರಿಗಾಗಿಯೇ ಪಾತ್ರವನ್ನು ಪ್ರಸಂಗ ಕರ್ತರು ಸೃಷ್ಟಿಸಿದ್ದಾರೆ. ಹೀಗಿದ್ದೂ ಗದಾಯುಧ್ದದಂತ ಗಂಭೀರ ಸನ್ನಿವೇಶವಿರುವ ಪ್ರಸಂಗಗಳನ್ನು ಹಾಸ್ಯಗಾರರಿಂದ ಪ್ರದರ್ಶಿಸುವುದು ಎಷ್ಟು ಸಮಂಜಸ? ಭೀಮ ಕೌರವರ ಕೆಳಮಟ್ಟದ ಸಂವಾದ, ಕೌರವನ "ಕಪಟ ನಾಟಕ. . . " ಪದ್ಯಕ್ಕೆ ಬೇಕಾಬಿಟ್ಟಿ ಕೃಷ್ಣನನ್ನು ಕೌರವನು ಹಾಸ್ಯಾಸ್ಪದವಾಗಿ ಬಯ್ಯುವುದು ಇತ್ಯಾದಿ ಹಾಸ್ಯ ಸಂಭಾಷಣೆಗಳು ಸಾಧುವೇ? ರಂಗದಲ್ಲಿ ಭಾವಪೂರ್ಣವಾಗಿ ಹಾಡುವ ವಾತವರಣ ಇಲ್ಲದಿರುವಾಗ ಭಾಗವತರಾದರೂ ಯಾವ ಭಾವದಿಂದ ಇಲ್ಲಿನ ಪದ್ಯಗಳನ್ನು ಹಾಡಬಹುದು?

ಹಾಸ್ಯಗಾರರು ಕೌರವನಾಗಿ ಬಂದಾಗ ಆ ಪಾತ್ರವನ್ನು ಪ್ರೇಕ್ಷಕನು ಕೇಕೆ ಹಾಕಿ ನಗುವಾಗ ಹಿಮ್ಮೇಳದವರು "ಇತ್ತ ಕುರುಕ್ಷೇತ್ರದೊಳು" ಪದ್ಯವನ್ನು ಯಾವ ರಾಗದಲ್ಲಿ ಯಾವ ಭಾವದಲ್ಲಿ ಹಾಡದಬಹುದು? ಕೇವಲ ಪ್ರೇಕ್ಷಕನಿಗೊಸ್ಕರ ಇಂತಹ ಗಿಮಿಕ್ಸ್ ಬೇಕೇ?. ಯಾವ ಹಾಸ್ಯ ಕಲಾವಿದನೂ ಮನಪೂರ್ವಕವಾಗಿ ಇದನ್ನು ಒಪ್ಪಲಾರ. ಅಲ್ಲದೆ ಸ್ವಂತ ಆಟಗಳಲ್ಲಿ ಈ ಪ್ರಸಂಗ ಪ್ರದರ್ಶಿಸಿಸಲಿಲ್ಲ ಅಂದ ಮೇಲೆ ಯಜಮಾನರು ಇದರಲ್ಲಿ ಆಸಕ್ತರಲ್ಲ ಎಂದಾಯಿತು. ಹಾಗಿದ್ದಲ್ಲಿ ಕೇವಲ ಪ್ರೇಕ್ಷಕರಿಗೊಸ್ಕರ ಆತ್ಮವಂಚನೆ ಮಾಡಿಕೊಂಡು ಯಾಕೆ ಇಂತಹ ಪ್ರದರ್ಶನ ನೀಡಬೇಕು. ಕಲಾ ಮಾಧ್ಯಮದ ಬಗ್ಗೆ ಪ್ರೀತಿ ಇರುವ ಯಾವೊಬ್ಬ ಹಾಸ್ಯಗಾರನು ಮನಪೂರ್ವಕವಾಗಿ ಇದನ್ನು ಒಪ್ಪಲಾರ. ಒಪ್ಪುವುದಕ್ಕೆ ಅವರು ಕೊಡುವ ಕಾರಣ "ಅನಿವಾರ್ಯತೆ" ಇಂತಹ ಅನಿವಾರ್ಯತೆಯನ್ನು ನಾವು ಪ್ರೇಕ್ಷಕರು ಯಾಕೆ ಸೃಷ್ಟಿಸಬೇಕು? ಪ್ರೇಕ್ಷಕ ಕೇಳುವುದನ್ನೆಲ್ಲ ಕೊಡುತ್ತಾ ಹೋದರೆ ಯಕ್ಷಗಾನ ಯಕ್ಷಗಾನವಾಗಿ ಉಳಿದೀತೆ?

ಇಷ್ಟಾಗಿಯೂ ಹಾಸ್ಯಗಾರರಿಂದಲೇ ಪ್ರದರ್ಶಿಸಿಸಬಹುದಾದ "ಚಂದ್ರಾವಳಿ ವಿಲಾಸ", "ಬೇಡರ ಕಣ್ಣಪ್ಪ", "ಸುಹಾಸಿನಿ ಪರಿಣಯ" ಹಾಗಲ್ಲದೆ "ಭಸ್ಮಾಸುರ ಮೋಹಿನಿ" ಸಹ ಪ್ರದರ್ಶಿಸಿಸಬಹುದು. ಹೇಳಿ ಕೇಳಿ ಭಸ್ಮಾಸುರ ಇಲ್ಲಿ ಹುಂಬ, ಈಶ್ವರ ಇಲ್ಲಿ ಬೋದಳೆ ಶಂಕರ. ಯಾವ ಭಾವನೆಯು ಇಲ್ಲದ ಈ ಪ್ರಸಂಗವನ್ನು ಹಾಸ್ಯಗಾರರಿಂದ ಚೆನ್ನಾಗಿ ಮಾಡಿಸಬಹುದು. ಆದರೆ ಮಹಾನ್ ಕವಿಗಳಿಂದ ರಚಿತಗೊಂಡ "ಗದಾಯುದ್ದ"ದಂತಹ ಪ್ರಸಂಗಗಳನ್ನು ಹಾಸ್ಯಗಾರರಿಂದ ಹಾಸ್ಯಾಸ್ಪದವಾಗಿ ಪ್ರದರ್ಶಿಸುವುದು ಎಷ್ಟು ಸಮಂಜಸ?


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
madhusudana.a(12/4/2013)
ಇದಕ್ಕೊ೦ದು ಅಪವಾದ ನಯನ ಕುಮಾರ್ ಅವರು. ಹಾಸ್ಯಗಾರರಾಗಿ ಇ೦ತಹ ಪ್ರದರ್ಶನಗಳನ್ನು ಖ೦ಡಿಸುತಿದ್ದರು ಮತ್ತು ಭಾಗವಸಿದ್ದು ಕಮ್ಮಿ. ಹಾಸ್ಯಗಾರ ಎಷ್ಟು ಗ೦ಭೀರ ಪಾತ್ರ ಮಾಡಿದರೂ ಪ್ರೇಕ್ಷಕ ಅದರಲ್ಲಿ ಹಾಸ್ಯವನ್ನೇ ನಿರೀಕ್ಷಿಸುತ್ತಾನೆ. ಕೌರವನ೦ತ ಪಾತ್ರದಲ್ಲಿ ಹಾಸ್ಯ ತ೦ದರೆ ಅದು ಎಷ್ಟು ಸರಿ ಎ೦ಬುದು ಅವರ ವಿಚಾರವಗಿತ್ತು.
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ