ಬಾಲ್ಯ ಹಾಗೂ ಕಲಾಸೇವೆ
ಪಾರಂಪರಿಕ ವರ್ಚಸ್ಸಿನ ಬಡಗುತಿಟ್ಟಿನ ಹಾರಾಡಿ ಮತ್ತು ಮಟ್ಪಾಡಿ ತಿಟ್ಟುಗಳ ಪ್ರಾತಿನಿದಿಕರಾಗಿ ಗುರುತಿಸಿಕೊಂಡ ಆನಂದ ಶೆಟ್ಟರು ಬಡಗು ತಿಟ್ಟಿನ ಖ್ಯಾತ ಕಲಾವಿದ ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮತ್ತು ಚಂದಮ್ಮ ಶೆಡ್ತಿ ದಂಪತಿಗಳ ಪುತ್ರನಾಗಿ ಜನಿಸಿದರು. ಕೇವಲ ಐದನೇ ತರಗತಿ ವಿದ್ಯಾಬ್ಯಾಸ ಮಾಡಿದ ಇವರಿಗೆ ತಂದೆಯೇ ಯಕ್ಷಗಾನಕ್ಕೆ ಪ್ರೇರಣೆ ಮತ್ತು ಗುರು. ತೀರ್ಥರೂಪರ ಗುರುತನವೇ ಯಕ್ಷಯಾತ್ರೆಗೆ ನಾಂದಿಯಾಯಿತು. ಆನೆಗುಡ್ದೆ ವಿನಾಯಕ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿದ ಶೆಟ್ಟರು ತಂದೆಯೊಂದಿಗೆ ಕೊಡವೂರು ಮೇಳಕ್ಕೆ ಪಾದಾರ್ಪಣೆ ಮಾಡಿದರು.
ಪ್ರಧಾನ ಪುರುಷ ವೇಷಧಾರಿಯಾಗಿ ರೂಪುಗೊಂಡ ಇವರು ಮಂದಾರ್ತಿ ಮೇಳದಲ್ಲಿ ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್, ಶಿರಿಯಾರ ಮಂಜು ನಾಯಕ್, ಅರಾಟೆ ಮಂಜು ನಾಯ್ಕ್, ಹಳ್ಳಾದಿ ಮಂಜಯ್ಯ ಶೆಟ್ಟಿ, ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ, ಬೆಲ್ತೂರು ರಾಮ ಬಳೆಗಾರ್, ಉಡುಪಿ ಬಸವ, ಮತ್ಯಾಡಿ ನರಸಿಂಹ ಶೆಟ್ಟಿ, ವಂಡ್ಸೆ ಮುತ್ತ ಗಾಣಿಗ ಮುಂತಾದ ಬಯಲಾಟದ ಘಟಾನುಘಟಿಗಳೊಂದಿಗೆ ತಿರುಗಾಟ ಮಾಡಿದರು. ಪ್ರಧಾನ ಪುರುಷ ವೇಷಗಳಾದ ಅರ್ಜುನ, ಪುಷ್ಕಳ. ಸುಧನ್ವ, ಕೃಷ್ಣ, ಮಾರ್ತಾಂಡತೇಜ, ಎರಡನೇ ವೇಷಗಳಾದ ವೀರಮಣಿ, ಜಾಂಬವ, ಬಲರಾಮ, ಕಮಲಭೂಪ, ಯಯಾತಿ, ದಕ್ಷ, ಬೀಷ್ಮ ಮುಂತಾದ ಪಾತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ ಇವರು ಜೋಡಾಟದಲ್ಲಿ ರಂಗಸ್ಥಳದ ಹುಲಿಯಾಗಿ ಗರ್ಜಿಸಿದರು. ಜೋಡಾಟದಲ್ಲಿ ಮಂಡಿ ತಿರುಗುವುದರಲ್ಲಿ ದಾಖಲೆ ನಿರ್ಮಿಸಿದರು. ಸುದೀರ್ಘ ಕಾಲ ಮಾರಣಕಟ್ಟೆ, ಸಾಲಿಗ್ರಾಮ, ಅಮೃತೇಶ್ವರಿ, ಗೋಳಿಗರಡಿ, ಪೆರ್ಡೂರು ಹೀಗೆ 40 ವರ್ಷ ತಿರುಗಾಟ ಮಾಡಿದ ಇವರು ದೀರ್ಘಕಾಲ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.
ಪ್ರಶಸ್ತಿ , ಪುರಸ್ಕಾರಗಳು
ನಡು ಬಡಗಿನ ಸಾಂಪ್ರದಾಯಿಕ ವೇಷ ವೈವಿದ್ಯದಲ್ಲ್ ತನ್ನದೇ ವಿಶಿಷ್ಟ ಛಾಪು ಮೂಡಿಸಿದ ಶೆಟ್ಟರು ಸಮಕಾಲೀನ ರಂಗಭೂಮಿಗೆ ಒಗ್ಗದೇ ಸನಾತನ ಕಲಾಸಾರವನ್ನೇ ಗಂಬೀರವಾಗಿ ಹೀರಿಕೊಂಡು ಬೆಳೆದ ಶಿಷ್ಟ ಕಲಾವಿದರು. ಸುಮಾರು 70 ವರ್ಷ ಪ್ರಾಯದ ಶೆಟ್ಟರಿಗೆ ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ಜಾಗತಿಕ ಬಂಟ ಪ್ರತಿಷ್ಟಾನದ ಪ್ರಶಸ್ತಿ, ಮಸ್ಕತ್ ಕಲಾಬಿಮಾನಿಗಳ ಸನ್ಮಾನ ಸಹಿತ ಹಲವಾರು ಸನ್ಮಾನಗಳು ಲಬಿಸಿವೆ. ಮಂದಾರ್ತಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಮೇಳಕ್ಕೂ ಯಕ್ಷಗಾನ ಕಲೆಗೂ ಘನತೆಯನ್ನು ತಂದಿತ್ತ ಹಾರಾಡಿ ರಾಮಗಾಣಿಗ ಪ್ರಶಸ್ತಿ ಮಜ್ಜಿಗೆಬೈಲು ಆನಂದಶೆಟ್ಟರಿಗೆ ಯೋಗ್ಯವಾಗಿಯೇ ಸಂದಿದೆ.
|
ಮಜ್ಜಿಗೆಬೈಲು ಆನಂದ ಶೆಟ್ಟಿ |
 |
ಜನನ |
: |
1942 |
ಜನನ ಸ್ಥಳ |
: |
ಮಜ್ಜಿಗೆಬೈಲು, ಬಿಲ್ಲಾಡಿ ಗ್ರಾಮ
ಉಡುಪಿ ತಾಲೂಕು & ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ |
: |
ಮಾರಣಕಟ್ಟೆ, ಸಾಲಿಗ್ರಾಮ, ಅಮೃತೇಶ್ವರಿ, ಗೋಳಿಗರಡಿ, ಪೆರ್ಡೂರು, ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ದುಡಿಮೆ. |
ಪ್ರಶಸ್ತಿಗಳು:
- 2013ನೇ ವರ್ಷದ ಹಾರಾಡಿ ರಾಮಗಾಣಿಗ ಪ್ರ
- ಜಾಗತಿಕ ಬಂಟ ಪ್ರತಿಷ್ಟಾನದ ಪ್ರಶಸ್ತಿ
- ಮಸ್ಕತ್ ಕಲಾಬಿಮಾನಿಗಳ ಸನ್ಮಾನ ಸಹಿತ ಹಲವಾರು ಸನ್ಮಾನಗಳು
- ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ
|
|
|