ಹೊನ್ನಾವರ ತಾಲೂಕಿನ ಹಡಿನಬಾಳ ಎಂಬಲ್ಲಿ 1950ರಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ದಂಪತಿಗಳ ಸುಪುತ್ರನಾಗಿ ಜನಿಸಿದ ಮಹಾದೇವ ಹೆಗಡೆಯವರಿಗೆ ಈಗ 61ರ ಹರೆಯ. ಪ್ರೌಡ ಶಿಕ್ಷಣ ಪಡೆದ ಇವರು ತನ್ನ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದ ಶಿಷ್ಟ ಕಲಾವಿದರು. ಹೆಗಡೆಯವರ ಕುಟುಂಬವೇ ಒಂದು ಯಕ್ಷಗಾನ ಮೇಳವೆಂಬಂತಿತ್ತು. ಇವರ ತಾಯಿಯ ತಂದೆ ಯಕ್ಷಗಾನದ ಮಹಾನ್ ಕಲಾವಿದರು. ಹಾಗಾಗಿ ಅಜ್ಜನ ವರ್ಚಸ್ಸು ಮೊಮ್ಮಗನ ಮೇಲೆ ಗಾಢ ಪರಿಣಾಮ ಬೀರಿತು. ಇವರ ಅಣ್ಣ ಕಪ್ಪೆಕೆರೆ ಸುಬ್ರಾಯ ಭಾಗವತರು ಹೆಸರಾಂತ ಭಾಗವತರಾಗಿದ್ದು ಅಮೃತೇಶ್ವರಿ ಮೇಳದಲ್ಲಿ ನಾರ್ಣಪ್ಪ ಉಪ್ಪೂರರ ಸಹವರ್ತಿಯಾಗಿದ್ದು ಹೆಸರು ಮಾಡಿದ್ದರು.
ಅಭಿನವ ಮಹಾಬಲ ಹೆಗಡೆಯವರೆಂದೇ ಯಕ್ಷಗಾನ ವಲಯದಲ್ಲಿ ಗುರುತಿಸಲ್ಪಟ್ಟ ಹೆಗಡೆಯವರನ್ನು ಮಹಾಬಲ ಹೆಗಡೆಯವರ ಉತ್ತರಾಧಿಕಾರಿಯಾಗಿ ಜನ ಗುರುತಿಸಿದ್ದಾರೆ. ಅವರ ರಂಗದ ನೆಡೆ, ಆಳ್ತನ ವೇಷದ ಆಕಾರ ನಿಲುವುಗಳಲ್ಲಿ ಮಹಾಬಲ ಹೆಗಡೆಯವರ ವೇಷದ ಛಾಯೆಯನ್ನು ಗುರುತಿಸಬಹುದಾಗಿದೆ. ಇದಕ್ಕೂ ಕಾರಣ ಇಲ್ಲದಿಲ್ಲ. ಸ್ವತಹ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿದ ಇವರು ಅವರೊಂದಿಗೆ ಇಡಗುಂಜಿ, ಶಿರಸಿ, ಕಮಲಶಿಲೆ, ಮುಂತಾದ ಮೇಳಗಳಲ್ಲಿ ದೀರ್ಘ ಕಾಲ ತಿರುಗಾಟ ಮಾಡಿದ್ದಾರೆ.
ಭೀಷ್ಮ, ಅಶ್ವತ್ಥಾಮ, ವಲಲ ಮುಂತಾದ ಇವರ ಪಾತ್ರಗಳು ಮಹಾಬಲ ಹೆಗಡೆಯವರ ಪಡಿಯಚ್ಚು ಎನ್ನಬಹುದಾಗಿದೆ. ನಾಯಕ ಪ್ರತಿನಾಯಕ ಎರಡೂ ಪಾತ್ರಗಳನ್ನು ಸಮಾನವಾಗಿ ತೆಗೆದುಕೊಂಡ ಇವರ ಭೀಮ, ವಲಲ, ಸುಗ್ರೀವ, ವಾಲಿ. ರಾಮ, ಮಹೋಗ್ರ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳು ಪ್ರೇಕ್ಷಕರ ಕಣ್ಣಲ್ಲಿ ಅಚ್ಚೊತ್ತಿದೆ. ಪ್ರಖರವಾದ ಪ್ರತ್ಯುತ್ಪನ್ನತೆ. ಪಾಂಡಿತ್ಯದ ಅರ್ಥಗಾರಿಕೆ, ಪಾತ್ರ ಪಂಚಾಂಗ, ಗ೦ಭೀರ ನಿಲುವುಗಳು ಪುರಾಣದ ಪಾತ್ರಗಳಿಗೆ ಹೊಸ ಹುಟ್ಟು ನೀಡಿದೆ.
ಸುದೀರ್ಘ 40 ವರ್ಷ ಕಲಾಸೇವೆ ಮಾಡಿರುವ ಇವರು ಸದ್ಯ ಬಡಗುತಿಟ್ಟಿನ ಮಂದಾರ್ತಿ ಒಂದನೇ ಮೇಳದ ಪ್ರಧಾನ ಎರಡನೆ ವೇಷದಾರಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಸದಾ ಹಸನ್ಮುಖಿಯಾದ ಇವರು ಸರ್ವ ಕಲಾವಿದರ ನೆಚ್ಚಿನ ಕಲಾವಿದರು. ಶಿರಸಿ ಮಾರಿಕಾಂಬ ಮೇಳವನ್ನು ಎರಡು ವರುಷ ಸಂಚಾಲಕರಾಗಿ ನಡೆಸಿದ ಇವರು ಯಜಮಾನಿಕೆಯ ಸಿಹಿ ಕಹಿಯನ್ನು ಸಹ ಉಂಡವರು. ಬಣ್ಣದ ವೇಷ ಸ್ತ್ರೀವೇಷಗಳನ್ನು ಸಹ ಮಾಡಿದ ಇವರು ಗುರುಗಳಾಗಿ ನೂರಾರು ಕಲಾವಿದರನ್ನು ರೂಪಿಸಿದ್ದಾರೆ. ಪತ್ನಿ ಶಾರದೆ ನಾಲ್ವರು ಗಂಡು ಮಕ್ಕಳ ಚೊಕ್ಕ ಸಂಸಾರ ಇವರದ್ದು. ಹೆಗಡೆಯವರ ಕಲಾಸಿರಿಗೆ ನಾಡಿನ ಹಲವಾರು ಸಂಘ ಸಂಸೆಗಳು ಬಿರುದು ನೀಡಿ ಸನ್ಮಾನಿಸಿವೆ.
|
ಕಪ್ಪೆಕೆರೆ ಮಹಾದೇವ ಈಶ್ವರ ಹೆಗಡೆ |
 |
ಜನನ |
: |
1950 |
ಜನನ ಸ್ಥಳ |
: |
ಹಡಿನಬಾಳ
ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ |
: |
ಇಡಗುಂಜಿ, ಶಿರಸಿ, ಕಮಲಶಿಲೆ, ಮುಂತಾದ ಮೇಳಗಳಲ್ಲಿ ದೀರ್ಘ ಕಾಲ ದುಡಿಮೆ. |
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
|
|
|