ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕೆರೆಯ ನೀರನು ಕೆರೆಗೆ ಚೆಲ್ಲಿ : ಚಿಟ್ಟಾಣಿ ಕಲಾಮ೦ದಿರ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಡಿಸೆ೦ಬರ್ 19 , 2013
ಯಕ್ಷರಂಗದ ಮೇರು ಕಲಾವಿದ 80ರ ಹೊಸ್ತಿಲಲ್ಲಿರುವ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮನೆತುಂಬ ಪ್ರಶಸ್ತಿ, ಪುರಸ್ಕಾರ, ಫಲಕಗಳು ಹರಡಿಕೊಂಡಿವೆ. ಅವುಗಳನ್ನು ಸರಿಯಾಗಿ ಜೋಡಿಸಿಡಲೂ ಸಾಧ್ಯವಾಗದಷ್ಟು ತುಂಬಿಕೊಂಡಿವೆ. ಇನ್ನು ಮುಂದೆ ಅವುಗಳೆಲ್ಲ ಪದ್ಮಶ್ರೀ ಚಿಟ್ಟಾಣಿ ಕಲಾಮಂದಿರದಲ್ಲಿ ಕಂಗೊಳಿಸಲಿವೆ. ಚಿಟ್ಟಾಣಿ ಅವರಿಗೆ ದೊರೆತ ಪ್ರಶಸ್ತಿ, ಪುರಸ್ಕಾರಗಳು ಅಂದವಾಗಿ, ವ್ಯವಸ್ಥಿತವಾಗಿ ಪ್ರದರ್ಶನಗೊಳ್ಳಲಿವೆ.

ಚಿಟ್ಟಾಣಿ ಅವರ ಮನೆಯಲ್ಲಿ ಎರಡು ಶೋಕೇಸ್‌ಗಳಿವೆ. ಅವುಗಳೆಲ್ಲ ಭರ್ತಿಯಾಗಿವೆ. ಮತ್ತೆ ಪ್ರಶಸ್ತಿ ಫಲಕಗಳನ್ನು ಗೋಡೆಗೆ ಅಂಟಿಸಲು ಆರಂಭಿಸಿದರು. ಗೋಡೆಯೂ ಸಾಲದಾಯಿತು. ಈಗ ನೆಲದ ಮೇಲೆ ಸ್ಮರಣಿಕೆಗಳನ್ನು, ಪ್ರಶಸ್ತಿಗಳನ್ನು ಅನಿವಾರ್ಯವಾಗಿ ಇಡುವ ಪರಿಸ್ಥಿತಿ ಉಂಟಾಗಿದೆ. ನೆಲದ ತುಂಬ ಹರಡಿಕೊಳ್ಳುತ್ತಿವೆ. ಚಿಟ್ಟಾಣಿ ಅವರಿಗೆ ಇವುಗಳನ್ನೆಲ್ಲ ಎಲ್ಲಿ ಇಡಬೇಕೆನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು.

ಕಲಾಮಂದಿರ ನಿರ್ಮಾಣದ ಯೋಜನೆ:

ಯಕ್ಷಗಾನ ತಮಗೆ ಎಲ್ಲವನ್ನೂ ಕೊಟ್ಟಿದೆ. ತಾವು ಯಕ್ಷಗಾನಕ್ಕಾಗಿ ಏನಾದರೂ ಕೊಡಬೇಕು ಎಂದು, ಅದರಲ್ಲೂ ಚಿಟ್ಟಾಣಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ ಮೇಲೆ ಇನ್ನಷ್ಟು ಸನ್ಮಾನ, ಸತ್ಕಾರ, ಪುರಸ್ಕಾರಗಳು ಬಂದವು. ಸ್ಮರಣಿಕೆಗಳು, ಪ್ರಶಸ್ತಿ ಫಲಕಗಳು ನಿರಂತರವಾಗಿ ಬಂದವು. ಪದ್ಮಶ್ರೀ ಪುರಸ್ಕಾರ, ವಿವಿಧ ಸಂಘ ಸಂಸ್ಥೆಗಳು ನೀಡಿದ ಸ್ಮರಣಿಕೆಗಳು, ಅಭಿಮಾನಿಗಳು ನೀಡಿದ ಕೊಡುಗೆಗಳು, ಸರ್ಕಾರ, ವಿವಿಧ ಇಲಾಖೆಗಳು ನೀಡಿದ ಸ್ಮರಣಿಕೆಗಳು ಹೀಗೆ ಚಿಟ್ಟಾಣಿ ಅವರ ಮನೆಯಲ್ಲಿ ಅದೆಷ್ಟೋ ಪ್ರಶಸ್ತಿ, ಪುರಸ್ಕಾರಗಳು ಕಾಣಬಹುದು.

ಜನತೆ, ಸಂಘ ಸಂಸ್ಥೆಗಳು ಪ್ರೀತಿಯಿಂದ ನೀಡಿದ ಸ್ಮರಣಿಕೆಗಳನ್ನು ನೆಲದ ಮೇಲೆ ಇಡುವುದು ಚಿಟ್ಟಾಣಿ ಅವರಿಗೆ ಅದೇಕೋ ಸರಿ ಕಾಣಲಿಲ್ಲ. ಹೀಗಾಗಿ ಚಿಟ್ಟಾಣಿ ಒಂದು ಗೋಡೆಯನ್ನು ನಿರ್ಮಿಸುವ ಯೋಚನೆ ಮಾಡಿದರು. ಅದನ್ನು ಯಲ್ಲಾಪುರದ ಪ್ರಮೋದ ಹೆಗಡೆ ಸೇರಿದಂತೆ ಕೆಲವರಲ್ಲಿ ಪ್ರಸ್ತಾಪವನ್ನೂ ಇಟ್ಟರು. ಆಗ ಹುಟ್ಟಿಕೊಂಡಿದ್ದು ಚಿಟ್ಟಾಣಿ ಕಲಾಮಂದಿರದ ರೂಪುರೇಷೆ. ರು. 50 ಲಕ್ಷ ವೆಚ್ಚದಲ್ಲಿ ಕಲಾ ಮಂದಿರ ನಿರ್ಮಿಸಲು ಯೋಜನೆ ರೂಪಿಸಲಾಯಿತು. ಪದ್ಮಶ್ರೀ ಚಿಟ್ಟಾಣಿ ಯಕ್ಷಕಲಾ ಕೇಂದ್ರ ಟ್ರಸ್ಟ್‌ ನೋಂದಣಿಯಾಗಿದೆ. ಈ ಟ್ರಸ್ಟ್‌ ಹೆರಂಗಡಿ ಗ್ರಾಮದ ಗುಡೇಕೆರಿಯಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಲಾಮಂದಿರ ನಿರ್ಮಿಸಲಿದೆ. 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಕೇಂದ್ರಕ್ಕೆ ಚಿಟ್ಟಾಣಿ ಕುಟುಂಬ ಭೂಮಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ 206 ರ ಪಕ್ಕದಲ್ಲಿ ಶರಾವತಿಯ ಹಿನ್ನೋಟದಲ್ಲಿ ಅಡಿಕೆ, ತೆಂಗಿನ ತೋಟದ ಆವರಣದಲ್ಲಿ ನಿರ್ಮಾಣವಾಗುವ ಕಲಾಮಂದಿರ ಚಿಟ್ಟಾಣಿ ಪರಂಪರೆ, ಶೈಲಿ, ಸಾಮರ್ಥ್ಯವನ್ನು ಕೇಂದ್ರವಾಗಿಟ್ಟುಕೊಂಡು ಯಕ್ಷಗಾನ ಕಲಿಯುವ, ಕಲಿಸುವ, ಅಧ್ಯಯನ ಮಾಡುವವರಿಗೆ ಉಪಯುಕ್ತವಾಗಲಿದೆ.

ಈ ಕಲಾಮ೦ದಿರದ ಬಗ್ಗೆ ಪ್ರಮೋದ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಲ್ಲಿ ಪ್ರಸ್ತಾಪಿಸಿದಾಗ ದೇಶಪಾಂಡೆ ಸರ್ಕಾರದಿಂದ ರು. 10 ಲಕ್ಷ ಕೊಡುವುದಾಗಿ ಭರವಸೆ ನೀಡಿದರು. ಕೆನರಾ ಬ್ಯಾಂಕ್ ರು. 2 ಲಕ್ಷ ಕೊಡುಗೆ ನೀಡುವುದಾಗಿ ಭರವಸೆ ನೀಡಿತು. ವಿವಿಧ ಜನಪ್ರತಿನಿಧಿಗಳೂ ಧನಸಹಾಯಕ್ಕೆ ಮುಂದೆ ಬಂದರು. ಶುಕ್ರವಾರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀ, ಬಂಗಾರಮಕ್ಕಿಯ ಮಾರುತಿ ಗುರೂಜಿ ಈ ಕಲಾಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ.

ಕೆರೆಮನೆ ಕುಟು೦ಬದ ಆದರ್ಶ

ಕೆರೆಮನೆ ಶಂಭು ಹೆಗಡೆಯವರು ಯಕ್ಷಗಾನದಿಂದ ಪಡೆದದ್ದಕ್ಕೆ ಪ್ರತಿಯಾಗಿ ಗುಣವಂತೆಯಲ್ಲಿ ದಿ| ಶಿವರಾಮ ಹೆಗಡೆ ರಂಗಮಂದಿರ ಆರಂಭಿಸಿದರು. ಶಿವಾನಂದ ಹೆಗಡೆ ದಿ| ಶಂಭು ಹೆಗಡೆ ಬಯಲು ಮಂದಿರ ಸ್ಥಾಪಿಸಿ, ಯಕ್ಷಗಾನ ಮಾತ್ರವಲ್ಲ ಜಗತ್ತಿನ ಎಲ್ಲ ಜನಪದ ಕಲೆಗಳ ಪ್ರದರ್ಶನಾಂಗಣ ಆಗಬೇಕು ಎಂದು ಯಕ್ಷಗಾನದ ಕ್ಷಿತಿಜವನ್ನು ವಿಸ್ತರಿಸಿದ್ದಾರೆ. ತಲೆಯ ಮೇಲೆ ವೇಷದ ಪೆಟ್ಟಿಗೆ ಹೊತ್ತುಕೊಂಡು ಹಳ್ಳಿಗಳಿಗೆ ತಿರುಗಿ ಆಟ ಆಡುತ್ತಿದ್ದ ಶಿವರಾಮ ಹೆಗಡೆ ಕಾಲದಿಂದ ವಿಮಾನದಲ್ಲಿ ಓಡಾಡುವ ಶಿವಾನಂದ ಹೆಗಡೆ ಕಾಲದವರೆಗೆ ಈ ಕುಟುಂಬ ಪ್ರಾಪಂಚಿಕ ಲಾಭ, ಸುಖಗಳಿಗಿಂತ ಕಲಾ ಸೇವೆಗೆ ಹೆಚ್ಚಿನ ಆದ್ಯತೆ ಕೊಟ್ಟಿವೆ. ಇದೇ ಮಾರ್ಗದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಯುವಕರಂತೆ ಕಲಾಮಂದಿರ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದಾರೆ. ಜೀವನದುದ್ದಕ್ಕೂ ಕಠಿಣ ಸವಾಲುಗಳನ್ನು ಎದುರಿಸಿ ಕಲಾಶಕ್ತಿಯನ್ನು ಕಾಪಾಡಿಕೊಂಡು ಬಂದವರು ಆ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯಾಗುವುದು ಕಲಾ ಇತಿಹಾಸದಲ್ಲಿ ವಿರಳವಾದ ಉದಾಹರಣೆ.

ಮಾಜಿ ರಾಷ್ಟ್ರಾಧ್ಯಕ್ಷೆ ಶ್ರೀಮತಿ ಪ್ರತಿಭಾ ಪಾಟೀಲರವರಿ೦ದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುತ್ತಿರುವ ಶ್ರೀ ಚಿಟ್ಟಾಣಿ ರಾಮಚ೦ದ್ರ ಹೆಗಡೆಯವರು.
ಚಿಟ್ಟಾಣಿ ರಾಷ್ಟ್ರದ ಸರ್ವೋಚ್ಚ ಪದ್ಮ ಪ್ರಶಸ್ತಿಯನ್ನು ಗಳಿಸುವವರೆಗೆ ಬೆಳೆದರು. ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಕಲಾವಿದರನ್ನಾಗಿ ಬೆಳೆಸಿದರು. ಅಪಾರ ಖ್ಯಾತಿಯನ್ನು ಗಳಿಸಿದರು. ಈಗಲೂ ತಾರಾ ಮೌಲ್ಯವನ್ನು ಉಳಿಸಿಕೊಂಡಿದ್ದಾರೆ. ಚಿಟ್ಟಾಣಿ ಯಕ್ಷಗಾನದಿಂದ ಪಡೆದಿದ್ದಕ್ಕೆ ಕೊಟ್ಟದ್ದೇನು ಎಂಬ ಪ್ರಶ್ನೆ ಹಲವರ ತಲೆ ತಿನ್ನುತ್ತಿತ್ತು. ಚಿಟ್ಟಾಣಿ ಯಾವುದೇ ವೇಷ ಮಾಡಲಿ ಗಲ್ಲಾಪೆಟ್ಟಿಗೆ ತುಂಬುವುದು ಗ್ಯಾರಂಟಿ ಎಂಬುದು ಇಂದಿಗೂ ಸತ್ಯ. ಸಾವಿರಾರು ಸಹಾಯಾರ್ಥ ಯಕ್ಷಗಾನಗಳಿಂದ ಚಿಟ್ಟಾಣಿ ಸಮಾಜಕ್ಕೆ ನೆರವಾಗಿದ್ದಾರೆ.

ಜನಪ್ರಿಯತೆಯಲ್ಲಿ ಚಿಟ್ಟಾಣಿಯವರನ್ನು ಮೀರಿಸಿದ ಯಕ್ಷಗಾನ ಕಲಾವಿದರಿಲ್ಲ ಎಂಬುದಕ್ಕೆ ಅವರ ಮನೆಯಲ್ಲಿ ರಾಶಿ ರಾಶಿಯಾಗಿರುವ ಅಭಿನಂದನಾ ಪತ್ರ, ಸ್ಮರಣಿಕೆ, ಶಾಲು, ಸಿಡಿ, ಡಿವಿಡಿಗಳು ಸಾಕ್ಷಿಯಾಗಿವೆ. ಪದ್ಮಶ್ರೀ ದೊರೆತು ಎರಡು ವರ್ಷವಾದರೂ ಸನ್ಮಾನ, ಆಟದ ಸರಣಿ ನಿಂತಿಲ್ಲ. ಚಿಟ್ಟಾಣಿಯವರನ್ನು ಗುರುತಿಸಿ, ಗೌರವಿಸಿದ ಎಲ್ಲ ಸುವಸ್ತುಗಳಿಗೆ ಮಂದಿರದಲ್ಲಿ ಯೋಗ್ಯ ಸ್ಥಾನ ದೊರೆಯಲಿದೆ. ಮೊದಲಿನಂತೆ ಪ್ರೇಕ್ಷಕರನ್ನು ರಂಜಿಸಲು ಆಗುತ್ತಿಲ್ಲ ಎಂಬ ಅಸಮಾಧಾನ ಇದ್ದರೂ ಚಿಟ್ಟಾಣಿ ಕರೆಯನ್ನು ನಿರಾಕರಿಸುವುದಿಲ್ಲ. ಒಮ್ಮೆ ರಂಗಕ್ಕೆ ಬಂದರೆ ಸಾಕು ಎಂದು ಕರೆದೊಯ್ದರೆ ಸಹವೇಷಧಾರಿಗಳಾದ ಮಗ, ಮೊಮ್ಮಗನಿಗಿಂತ ಹೆಚ್ಚು ಕುಣಿಯುತ್ತಾರೆ, ಮಂಡಿ ತಿರುಗುತ್ತಾರೆ. ಇಂತಹ ಚಿಟ್ಟಾಣಿಯಿಂದ ಗುರುಕುಲ ಪದ್ಧತಿಯಲ್ಲಿ ಕಲಿಯುವವರಿಗೆ ಕಲಾಮಂದಿರದಲ್ಲಿ ಅವಕಾಶವಿದೆ. ಚಿಟ್ಟಾಣಿ ಬದುಕಿನ ಎಲ್ಲ ನೋವು, ನಲಿವುಗಳನ್ನು, ಸಾಧನೆ, ಸಲಕರಣೆಗಳನ್ನು ಒಂದೆಡೆ ದರ್ಶನ ಮಾಡಿಸಿ ಹೊಸ ತಲೆಮಾರಿಗೆ ಸ್ಫೂರ್ತಿ, ಧೈರ್ಯ ತುಂಬುವಂತೆ ಕಲಾಮಂದಿರಕ್ಕೆ ರೂಪ ಕೊಡಬೇಕು ಎಂದು ಟ್ರಸ್ಟ್‌ ಬಯಸಿದೆ. ಕಲೆಯನ್ನು ಕಲಿಸುವ ಇಂತಹ ಇತರ ಎಲ್ಲ ಸಂಸ್ಥೆಗಳಿಗಿಂತ ಭಿನ್ನವಾಗಿ, 250 ಜನ ಸೇರುವ ಸಭಾಗೃಹದೊಂದಿಗೆ ಕಲಾಮಂದಿರ ನಿರ್ಮಾಣಕ್ಕೆ ಚಿಟ್ಟಾಣಿ ಕುಟುಂಬ ಟೊಂಕ ಕಟ್ಟಿದೆ. ಅಭಿಮಾನಿಗಳು ನೆರವಾಗುತ್ತಿದ್ದಾರೆ. ಯಾರೇ ಎಷ್ಟೇ ಕೊಟ್ಟರೂ ಸಂತೋಷ ಅನ್ನುತ್ತಾರೆ ಚಿಟ್ಟಾಣಿ.ಕೃಪೆ : http://kannada.yahoo.com , http://www.kannadaprabha.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ