ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಉಭಯ ತಿಟ್ಟುಗಳ ಮೋಹಕ ಸ್ತ್ರೀವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಮಾರ್ಚ್ 13 , 2014

ಯಕ್ಷಗಾನ ರಂಗದಲ್ಲಿ ರೂಪ, ಸ್ವರಬಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ನೇರ ದ್ರಷ್ಟಾಂತ ಸದ್ಯ ತೆಂಕು-ಬಡಗುತಿಟ್ಟಿನ ಅಗ್ರಶ್ರೇಣಿಯ ಸ್ತ್ರೀವೇಷಧಾರಿಯಾಗಿ ಮೆರೆಯುತ್ತಿರುವ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು. ಮೂಲತ: ಬಡಾಬಡಗು ತಿಟ್ಟಿನ ಗಂಡು ಮೆಟ್ಟಿನ ನೆಲ ಉತ್ತರ ಕನ್ನಡದ ಹೊನ್ನಾವರದವರಾದ ಇವರು ಯಕ್ಷಗಾನದ ಮೂರು ತಿಟ್ಟುಗಳಲ್ಲಿ ಪರಿಪೂರ್ಣ ಕಲಾವಿದರಾಗಿ ತನ್ನ ನೈಜ ಪ್ರತಿಭೆಯನ್ನು ಪ್ರಕಟಪಡಿಸುತ್ತಿರುವವರು. ಸ್ನಾತಕೋತ್ತರ ಪದವೀಧರನೊಬ್ಬನಲ್ಲಿ ಕಲೆ ಮೇಳೈಸಿಕೊಂಡಾಗ ಆ ಕಲಾವಿದ ಹೇಗೆ ಪರಿಪೂರ್ಣನಾಗಿ ಮೆರೆಯಬಹುದು ಎನ್ನುವುದಕ್ಕೆ ನೇರ ದೃಷ್ಟಾಂತ ಸುಬ್ರಹ್ಮಣ್ಯ ಹೆಗಡೆಯವರು. ಕನ್ನಡ ಸ್ನಾತಕೋತ್ತರ ಪದವೀದರರಾಗಿ ಯಕ್ಷರಂಗ ಪ್ರವೇಶಿಸಿದ ಹೆಗಡೆಯವರು ಅಂತಹ ಒಂದು ಅಪರೂಪದ ಮತ್ತು ಅಪೂರ್ವ ಪ್ರತಿಭಾ ಸಂಗಮ. ಸ್ತ್ರೀಸಹಜವಾದ ಒನಪು ವೈಯ್ಯಾರ, ಶರೀರ ಶಾರೀರ, ಸ್ವರಭಾರಗಳ, ಸರ್ವ ಅಂಗಗಳಲ್ಲಿ ಉತ್ಕೃಷ್ಟತೆ ಹೊಂದಿದ ಇವರಲ್ಲಿ ಸ್ನಾತಕೋತ್ತರ ಪದವಿಯೂ ಮೇಳೈಸಿ ಇವರೊಬ್ಬ ಪರಿಪೂರ್ಣ ಕಲಾವಿದನಾಗುವಲ್ಲಿ ಸಹಕರಿಸಿದವು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಬಡಾಬಡಗುತಿಟ್ಟಿನ ಯಕ್ಷಗಾನ ಲೋಕಕ್ಕೆ ಮೇರು ಕಲಾವಿದರನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಯಲಗುಪ್ಪ ಎಂಬ ಗ್ರಾಮದಲ್ಲಿ ವಿಷ್ಣು ಹೆಗಡೆ, ಇಂದಿರಾ ಹೆಗಡೆಯೆಂಬ ಸುಸಂಸ್ಕೃತ ಹವ್ಯಕ ಬ್ರಾಹ್ಮಣ ದಂಪತಿಗಳ ದ್ವೀತೀಯ ಪುತ್ರನಾಗಿ 1973ರಲ್ಲಿ ಜನಿಸಿದ ಹೆಗಡೆಯವರು ಎಲ್ಲಾ ಯಕ್ಷಗಾನ ಕಲಾವಿದರಂತೆ ವಿದ್ಯಾಬ್ಯಾಸವನ್ನು ಅರ್ಧಕ್ಕೆ ನಿಲ್ಲಿಸದೆ, ಸ್ನಾತಕೊತ್ತರ ಪದವಿಯನ್ನು ಗಳಿಸಿ, ಸ್ವಯಂ ಪ್ರೇರಿತರಾಗಿ ಶ್ರೀ ಕೆರೆಮನೆ ಶಂಭು ಹೆಗಡೆಯವರ ಗುಣವಂತೆಯ ಶ್ರೀಮಯ ಕಲಾಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದ ದಶಾವಾತಾರಿ ಹೆರಂಜಾಲು ವೆಂಕಟರಮಣ ಗಾಣಿಗರಿಂದ ನಾಟ್ಯ ತಾಳ ಕಲಿತು ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. ಸ್ವತ: ಸ್ತ್ರೀವೇಷಧಾರಿಯಾಗಿದ್ದ ಗಾಣಿಗರು ತನ್ನಲ್ಲಿದ್ದ ಸ್ತ್ರೀವೇಶಕ್ಕೆ ಬೇಕಾದ ಎಲ್ಲ ಅಂಗಗಳನ್ನು ಶಿಷ್ಯನಿಗೆ ತನ್ನ ಶಿಷ್ಯನಿಗೆ ಧಾರೆಯೆರೆದರು ಎನ್ನುವುದನ್ನು ಹೆಗಡೆಯವರು ಕೃತಜ್ಜತೆಯಿಂದ ಸ್ಮರಿಸುತ್ತಾರೆ.

ಹರಿವಾಣ ನೃತ್ಯದ ಪ್ರಯೋಗ

ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿ ಯಕ್ಷಕೈಂಕರ್ಯಕ್ಕೆ ತೊಡಗಿದ ಹೆಗಡೆಯವರು ಬಳಿಕ ಮಾರಣಕಟ್ಟೆ, ಕಮಲಶಿಲೆ ಮತ್ತು ಮಂದಾರ್ತಿ, ಬಯಲಾಟ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ದುಡಿಯುವಾಗಲೇ ಪ್ರೇಕ್ಷಕರಿಂದ ಗುರುತಿಸಲ್ಪಟ್ಟರು. ಬಳಿಕ ಡೇರೆ ಮೇಳವಾದ ಪೆರ್ಡೂರು ಮೇಳ ಸೇರಿ ಅಲ್ಲಿನ ಶಿವರಂಜಿನಿ ಪ್ರಸಂಗದ ಶಿವರಂಜಿನಿಯ ನೃತ್ಯದ ಮೂಲಕ ಮನೆಮಾತಾದರು. ನೃತ್ಯ ಸಂಗೀತ ಪ್ರದಾನವಾದ ಈ ಪ್ರಸಂಗದಲ್ಲಿ ದಾರೇಶ್ವರರ ಸುಮಧುರ ಹಾಡುಗಾರಿಕೆಯಲ್ಲಿ ದುರ್ಗಪ್ಪ ಗುಡಿಗಾರರ ಮದ್ದಳೆಯ ನಿನಾದಕ್ಕೆ ಇವರ ನರ್ತನ ಭರತನಾಟ್ಯ ಕಲಾವಿದರನ್ನು ನಾಚಿಸುವಷ್ಟು ರಂಜಿಸಿತ್ತು. ಬಳಿಕ ಸಾಲಿಗ್ರಾಮ ಮೇಳ ಸೇರಿದ ಇವರು ಅಲ್ಲಿ ಪ್ರದರ್ಶಿಸಿ ಜಯಭೇರಿ ಪಡೆದ ಈಶ್ವರಿ-ಪರಮೇಶ್ವರಿ ಪ್ರಸಂಗದ ಪರಮೇಶ್ವರಿಯಾಗಿ ಮನೆಮಾತಾದರು. ಇದುವರೆಗೆ ಯಕ್ಷಗಾನದಲ್ಲಿ ಪ್ರಚಲಿತವಿಲ್ಲದ ಹರಿವಾಣ ನೃತ್ಯ ಜನಮನ ರಂಜಿಸಿದ್ದು ಮಾತ್ರವಲ್ಲದೆ ಹರಿವಾಣ ನೃತ್ಯಕಾಗಿಯೆ ಜನ ಮುಗಿಬೀಳುವುದರೊಂದಿಗೆ ಹರಿವಾಣ ನೃತ್ಯದ ಪ್ರತ್ಯೇಕ ಕಾರ್ಯಕ್ರಮಗಳೇ ನೆಡೆಯತೊಡಗಿದವು. ಅನೇಕ ವೃತ್ತಿಪರ ಮೇಳಗಳಲ್ಲಿ ಕಾರ್ಯನಿರ್ವಹಿಸಿ ಈಗ ಹೊಸನಗರ ಮೇಳದಲ್ಲಿ ತಿರುಗಾಟದಲ್ಲಿದ್ದಾರೆ.
ಸುಬ್ರಹ್ಮಣ್ಯ ಹೆಗಡೆ, ಯಲಗುಪ್ಪ
ಜನನ : ಜೂನ್ 8, 1973
ಜನನ ಸ್ಥಳ : ಯಲಗುಪ್ಪ, ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
20 ವರ್ಷಗಳ ಕಾಲ ಗುಂಡಬಾಳ, ಮಾರಣಕಟ್ಟೆ, ಕಮಲಶಿಲೆ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ಮತ್ತು ಹೊಸನಗರ ಮೇಳಗಳಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ದುಡಿಮೆ.
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ಸ್ತ್ರೀವೇಷಧಾರಿಯೊಬ್ಬ ರಂಗದಲ್ಲಿ ಭಾಗವತರಿಗೆ ಸರಿಸಮನಾಗಿ ಪದ್ಯ ಎತ್ತುಗಡೆ ಮಾಡುವ ಹೊಸ ಸಂಪ್ರದಾಯವೇ ಯಕ್ಷಗಾನದಲ್ಲಿ ಪ್ರಾರಂಭವಾಯಿತು. ಶ್ರುತಿಬದ್ದವಾಗಿ ಅವರು ಪದ್ಯ ಎತ್ತುಗಡೆ ಮಾಡುವುದಲ್ಲದೆ ತಾರಕದಲ್ಲಿ ಭಾಗವತರೊಂದಿಗೆ ಅವರು ಹಾಡುವ ಪದ್ಯಗಳು ಕರ್ಣಾನಂದ ನೀಡುತಿದ್ದವು. ಅದಕ್ಕೆ ಸಾಕ್ಷಿಯಾಗಿ ಈಶ್ವರಿ ಪರಮೇಶ್ವರಿ ಪ್ರಸಂಗದಲ್ಲಿ ಅವರು ಹಿರಿಯ ಏರುಶ್ರುತಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗರೊಂದಿಗೆ ಅಪರೂಪದ ವಾಸಂತಿರಾಗದ ಜಂಪೆ ತಾಳದ ಕ್ಲಿಷ್ಟಕರ ಬಂದವಿರುವ “ ತಡವಾಗಿ ಹೋಯ್ತು ಗೆಳೆಯಾ. ” ಪದ್ಯ ಇಂದಿಗೂ ಕೂಡ ನೂರಾರು ಅಭಿಮಾನಿಗಳ ಮೊಬೈಲ್ ಗಳಲ್ಲಿ ರಿಂಗ್ ಟೋನ್ ಆಗಿ ಬಳಕೆಯಾಗುತ್ತಿರುವುದು. ಭರತ ನಾಟ್ಯ, ಹಿಂದುಸ್ಥಾನಿ ಸಂಗೀತ ಶಾಸ್ತ್ರೀಯ ಸಂಗೀತಗಳ ಪ್ರಾಥಮಿಕ ಅಭ್ಯಾಸ ಮಾಡಿದ ಇವರು ಸ್ತ್ರೀತ್ವದ ನೈಜತೆಯನ್ನು ಪಾತ್ರದಲ್ಲಿ ಬಿಂಬಿಸುವಲ್ಲಿ ಯಶಸ್ಸು ಸಾದಿಸಿದ್ದಾರೆ. ತೆಂಕುತಿಟ್ಟಿನಲ್ಲೂ ಪರಿಪೂರ್ಣ ಕಲಾವದನಾಗಿ ಬೇಳೆದ ಇವರು ಸದ್ಯ ತೆಂಕುತಿಟ್ಟಿನ ಹೊಸನಗರ ಮೇಳದ ಸ್ತ್ರೀವೇಷಧಾರಿಯಾಗಿ ದುಡಿಯುತಿದ್ದಾರೆ.

ಮೂರೂ ತಿಟ್ಟುಗಳ ಪರಿಪೂರ್ಣ ಕಲಾವಿದ

ಪೌರಾಣಿಕ ಪ್ರಸಂಗಗಳಲ್ಲಿ ಯಾರದ್ದೇ ಅನುಕರಣೆ ಇಲ್ಲದೆ ಸ್ವಂತ ಛಾಪನ್ನು ಮೂಡಿಸಿದ ಇವರು, ಪೆರ್ಡೂರು ಮೇಳದಲ್ಲಿ ದಿ ರಾಮ ನಾಯರಿ, ತೀರ್ಥಳ್ಳಿ ಗೋಪಾಲಾಚಾರ್, ಥಂಡಿಮನೆ ಶ್ರೀಪಾದ ಹೆಗಡೆ, ಜಲವಳ್ಳಿ ವಿದ್ಯಾದರ ರಾವ್, ಸಾಲಿಗ್ರಾಮ ಮೇಳದಲ್ಲಿ ಬಳ್ಕೂರು ಕೃಷ್ಣಯಾಜಿ, ಹುಡುಗೋಡು ಚಂದ್ರಹಾಸ, ಕಣ್ಣಿಮನೆ ಗಣಪತಿ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ, ಶಶಿಕಾಂತ ಶೆಟ್ಟಿ, ಹೊಸನಗರ ಮೇಳದಲ್ಲಿ ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ಸೀತಾರಾಮ ಕುಮಾರ್, ಸಂಪಾಜೆ ಶೀನಪ್ಪ ರೈ, ಉಜಿರೆ ಅಶೋಕ ಭಟ್, ಅಂಬಾಪ್ರಸಾದ್ ಮುಂತಾದ ಘಟಾನುಘಟಿ ಕಲಾವಿದರೊಂದಿಗೆ ಅವರು ಅಭಿನಯಿಸಿದ ಅಂಬೆ, ಯೋಜನಗಂದಿ, ಸರೇಂದ್ರಿ, ಸುದೀಷ್ಣೆ, ದಮಯಂತಿ, ಚೇದೀರಾಣಿ, ಮುಂತಾದ ವಿಭಿನ್ನ ಪಾತ್ರಗಳು ಚಂದ್ರಮತಿ ದಾಕ್ಷಾಯಿಣಿ, ಸುಭದ್ರೆ, ಮೋಹಿನಿ ಮಾಯಾ ಶೂರ್ಪನಖಿ, ಮಾಯಾ ಹಿಡಿಂಬಿ ಮುಂತಾದ ಪಾತ್ರಗಳು ತನ್ನದೆ ಸೃಷ್ಟಿ ಎಂಬಷ್ಟು ಖ್ಯಾತಿ ಗಳಿಸಿತ್ತು. ಬಡಗಿನ ಬಯಲಾಟ ಮೇಳಗಳಲ್ಲಿ ಐರಬೈಲು ಆನಂದ ಶೆಟ್ಟಿ, ನರಾಡಿ ಭೋಜರಾಜ ಶೆಟ್ಟಿ, ಐರೋಡಿ ಗೋವಿಂದಪ್ಪ ಆರ್ಗೋಡು ಮೋಹನದಾಸ ಶೆಣೈ ಮುಂತಾದ ನಡುತಿಟ್ಟಿನ ಕಲಾವಿದರೋಂದಿಗೆ ಅವರು ಅಭಿನಯಿಸಿದ ಕಸೆ ಪ್ರದಾನ ವೇಷಗಳು ಪ್ರಮೀಳೆ, ಮೀನಾಕ್ಷಿ, ಪದ್ಮಗಂದಿ, ಮದನಾಕ್ಷಿ, ತಾರಾವಳಿ, ಶಶಿಪ್ರಭೆ, ಬ್ರಮರಕುಂತಳೆ ಮುಂತಾದ ಪಾತ್ರಗಳು ಅಪಾರ ಜನಮೆಚ್ಚುಗೆ ಪಡೆದು ಇವರೊಬ್ಬ ಮೂರೂ ತಿಟ್ಟುಗಳ ಪರಿಪೂರ್ಣ ಕಲಾವಿದರೆಂದು ಗುರುತಿಸಲ್ಪಟ್ಟರು.

ಮಾತುಗಾರಿಕೆಯ ಮೋಡಿ

ಯಲಗುಪ್ಪರಲ್ಲಿ ಬಹಳವಾಗಿ ಗಮನಿಸಬಹುದಾದದ್ದು ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆಯ ಸೊಬಗು. ಇವೆಲ್ಲದರಲ್ಲೂ ಕೆರೆಮನೆ ಶಂಭು ಹೆಗಡೆಯವರ ಪ್ರಭಾವವನ್ನು ಗುರುತಿಸಬಹುದಾಗಿದೆ. ಶಂಭು ಹೆಗಡೆಯವರ ಕಾಲಮಿತಿಯ ಯಕ್ಷಗಾನದಲ್ಲಿ ಇವರು ನಿರ್ವಹಿಸುತಿದ್ದ ಕೃಷ್ಣನ ಪಾತ್ರದಲ್ಲಿ ಆ ಸೊಬಗನ್ನು ಗುರುತಿಸಬಹುದಾಗಿದೆ. ಗದಾಯುಧ್ಧ ಪ್ರಸಂಗದಲ್ಲಿ ಹೆಗಡೆಯವರ ಕೌರವನಿಗೆ ಇವರ ಕೃಷ್ಣ ಬಹುಕಾಲ ಮೆರೆದಿತ್ತು. ನೂರಕ್ಕೆ ನೂರು ಯಕ್ಷಗಾನ ಶೈಲಿಯಲ್ಲಿ ಬಹುದೂರ ಕೇಳಿಸುವ ಇವರ ಕಂಠ, ವ್ಯಾಕರಣ ಶುಧ್ಧ ಪ್ರೌಢ ಶೈಲಿ ಸ್ಪಷ್ಟ ಉಚ್ಚಾರ, ನಿರಾಯಾಸ, ನಿರಾತಂಕ, ನಿರರ್ಗಳವಾಗಿ ಹರಿದು ಬರುವ ಮಾತುಗಾರಿಕೆ, ಶ್ರೇಷ್ಠ ನಿರೂಪಣಾ ಸಮರ್ಥ್ಯದಿಂದ ಹೆಗಡೆಯವರು ಇತರರಿಗಿಂತ ಬಿನ್ನವಾಗಿ ಕಾಣುತ್ತಾರೆ.

ಮೂರು ವಿಭಿನ್ನ ಸನ್ನಿವೇಶಗಳಲ್ಲಿ ಬೀಷ್ಮ ವಿಜಯದ ಅಂಭೆಯ ಅಬಿನಯವಿರಲಿ, ಪತಿಯಲ್ಲಿ ವಿನಯದಿಂದ ಬಿನ್ನಹಮಾಡುವ “ನೋಡಿರಿ ದ್ವಜರು ಪೋಪುದನು” ಅನ್ನುವಲ್ಲಿನ ದಾಕ್ಷಾಯಿಣಿ ಇರಲಿ, “ಮಗನೇ ನಿ ಮತಿಗೆಟ್ಟು ನೆಡೆವರೆ” ಎನ್ನುವಲ್ಲಿ ಮಗನಿಗೆ ಕೋಪದಿಂದ ಬುದ್ದಿ ಮಾತು ಹೇಳುವ ಚಿತ್ರಾಂಗದೆ ಇರಲಿ “ಚಂದದಿಂದ ಬಂದಳಾಬ್ದ್ದಲೋಚನೆ” ಎಂಬಲ್ಲಿ ಶೃ೦ಗಾರ ಭಾವದ ಮಾಯಾ ಶೂರ್ಪನಖೆ ಇರಲಿ ಧೀರ ನೀನಾರು ತವ ಊರಾವುದು” ಎನ್ನುವಲ್ಲಿ ನಳನ ಇರವನ್ನು ಕೇಳುವ ದಮಯಂತಿ ಇರಬಹುದು, “ನೀರಾ ನಿನಗೆ ನಮಸ್ಕಾರ” ಎನ್ನುವಲ್ಲಿ ಪತಿಯಲ್ಲೆ ಧುರವನ್ನು ಬಯಸುವ ದ್ರೌಪದಿ ಪ್ರತಾಪದ ದ್ರೌಪದಿ ಇರಲಿ, ಇಲ್ಲೆಲ್ಲ ಇವರ ಅಭಿನಯ ಪ್ರೇಕ್ಷಕರನ್ನು ಆಯಾ ಭಾವಗಳಲ್ಲಿ, ಸನ್ನಿವೇಷಗಳಲ್ಲಿ ಮುಳುಗಿಸುತ್ತದೆ. ಯಾವುದೇ ಶ್ರುತಿಗಳಲ್ಲಿ ಹೊಂದಿಕೊಂಡು ಮಾತನಾಡುವ ಅವರ ಶ್ರುತಿ ಬದ್ದತೆ ಅಮೋಘ. ಹಾಗಾಗಿ ವಿವಿದ ಮೇಳಗಳಲ್ಲಿ ಏರು ಹಾಗು ಇಳಿ ಶ್ರುತಿಯ ಭಾಗವತರ ಸ್ವರಕ್ಕೆ ಹೊಂದಿಕೊಂಡು ಅವರು ಎತ್ತುಗಡೆ ಮಾಡುತಿದ್ದ ಪದ್ಯಗಳು ಹಿಮ್ಮೇಳ ಪ್ರೀಯರನ್ನು ರಂಜಿಸುವಲ್ಲಿ ಯಶಸ್ವಿಯಾಗುತಿತ್ತು. ಸುಬ್ರಮಣ್ಯ ದಾರೇಶ್ವರ, ಸುರೇಶ ಶೆಟ್ಟಿ, ಹೆರಂಜಾಲು ಗೋಪಾಲ ಗಾಣಿಗ, ರಾಘವೇಂದ್ರ ಮಯ್ಯ, ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಬ್ರಹ್ಮೂರು ಶಂಕರ ಭಟ್, ಪ್ರಪುಲ್ಲಚಂದ್ರ ಮುಂತಾದ ಭಾಗವತರೊಂದಿಗೆ ರಂಗದಲ್ಲಿ ಇವರ ಹಾಡುಗಾರಿಕೆ ವಿಶಿಷ್ಟ ರಸಸನ್ನಿವೇಶವನ್ನು ಸೃಷ್ಟಿಸಿ ಸಂಗೀತಾಸಕ್ತರನ್ನು ರಂಜಿಸುತಿತ್ತು.

****************

ಯಲಗುಪ್ಪರವರ ಕೆಲವು ಭಾವಚಿತ್ರಗಳು

( ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ, ಪ್ರಕಾಶ್ ಹೆಗ್ಡೆ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು )




ಇತ್ತೀಚಿನ ಸನ್ಮಾನ ಸಮಾರ೦ಭವೊ೦ದರಲ್ಲಿ ಆರ್ಗೋಡು ಮೋಹನದಾಸ್ ಶೆಣೈ ಯವರೊ೦ದಿಗೆ









ತನ್ನ ಸುಪುತ್ರನೊ೦ದಿಗೆ ಯಲಗುಪ್ಪನವರು



ಹೊಸನಗರ ಮೇಳದಲ್ಲಿ ದಿವಾಕರ ರೈ ಸ೦ಪಾಜೆಯವರೊ೦ದಿಗೆ






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
padmanabh(10/23/2015)
i am the fan of yalaguppa i realy like hi stree vesha
raju B(1/23/2015)
really very good sthree veshadhari all the best
Radhakrishna Bhat P(7/13/2014)
ivarobba utthama sthree veshadhari, star kalavida.
Naravi Vittal Hegde(3/14/2014)
Shriyutha Yelagupparu Snathakkottara Padaveedhararendu gotte iralilla.Nijakkoo aprathima sthree veshadhaari.
Ravichandra Chembu(3/14/2014)
Halavu veshagalige hosa roopa kotta amuulya swattu




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ