ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ನಡುತಿಟ್ಟಿನ ಅಗ್ರಮಾನ್ಯ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಐರೋಡಿ ಗೋವಿಂದಪ್ಪ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಜನವರಿ 3 , 2014

ಬಡಗುತಿಟ್ಟಿನ ಸಂಪ್ರದಾಯ, ಪರಂಪರೆಯ ಬಗ್ಗೆ ಪ್ರೀತಿ ಇರುವ ಪ್ರೇಕ್ಷಕರು ತಟ್ಟನೆ ನೆನಪಿಸುವ ಮೊದಲ ಹೆಸರು ಐರೋಡಿ ಗೋವಿಂದಪ್ಪನವರದ್ದು. ಅವರನ್ನು ನೆನಪಿಸಿಕೊಂಡಾಗಲೆಲ್ಲಾ ನೆನಪಿಗೆ ಬರುವುದು ಅವರ ಹಾರಾಡಿ ಶೈಲಿಯ ಕಟ್ಟು ಮೀಶೆಯೊಂದಿಗಿನ ದೊಡ್ಡ ಗಾತ್ರದ ಅಟ್ಟೆ ನಿರ್ಮಿತ ಕಪ್ಪು ಹಾಗೂ ಕೆಂಪು ಮುಂಡಾಸು, ಅದೇ ಶೈಲಿಯ ಅವರ ಜಾಪು, ಛಾಪು, ಮಟಪಾಡಿ ಶೈಲಿಯ ಕಿರುಹೆಜ್ಜೆ, ಅತ್ಯಂತ ಏರುಶ್ರುತಿಯಲ್ಲೂ ಸುಮಧುರವಾದ ಅವರ ಕಂಠಸಿರಿಯಲ್ಲಿ ಮೂಡಿಬರುವ ಅವರ ಶ್ರುತಿಬಧ್ಧ ಪದ್ಯದ ಎತ್ತುಗಡೆ ಇವೇ ಮುಂತಾದ ಅಂಶಗಳು.

ಸಾಲಿಗ್ರಾಮ ಮೇಳದ ಮೂವರು ಮೇರು ಭಾಗವತರಾದ ಮರವಂತೆ ನರಸಿಂಹದಾಸರು, ನೆಲ್ಲೂರು ಮರಿಯಪ್ಪಾಚಾರ್ ಹಾಗೂ ಗುಂಡ್ಮಿ ಕಾಳಿಂಗ ನಾವುಡರ ಭಾಗವತಿಕೆಯ ಪೌರಾಣಿಕ ಪ್ರಸಂಗಳಲ್ಲಿ ಈ ಮೂವರ ಪದ್ಯಕ್ಕೂ ಐರೋಡಿಯವರ ಎತ್ತುಗಡೆ ದಂದ್ವ ಭಾಗವತಿಕೆಯ ನೆನಪನ್ನು ಇಂದಿಗೂ ಅನೇಕ ಕಲಾಭಿಮಾನಿಗಳು ನೆನಪಿಸುತ್ತಾರೆ. ಕರ್ಣಾರ್ಜುನದ ಕರ್ಣನಾಗಿ “ ಅತುಳ ಬಲ ನೆಡೆತಂದು. ಮಗನೇ ನಿನ್ನ ಪೋಲ್ವರಾರಿ” ಇರಬಹುದು, ಜಾಂಬವನಾಗಿ “ಯಾರೋ ಎನ್ನಯ ಗುಹೆಯನು” ಇರಬಹುದು, ಮಾರ್ತಾಂಡ ತೇಜನಾಗಿ “ಲಾಲಿಸು ಮುನಿಪಾಲ” ಇರಬಹುದು ಇಲ್ಲೆಲ್ಲಾ ಅವರ ಶ್ರುತಿಬದ್ದ ಪದ್ಯದ ಎತ್ತುಗಡೆ ಶೋತೃಗಳಿಗೆ ಕರ್ಣಾನಂದ ನೀಡುತಿತ್ತು. ಅವರೊಬ್ಬ ಸಮರ್ಥ ಭಾಗವತರಾಗಿದ್ದುದೇ ಇದಕ್ಕೆ ಕಾರಣವಿರಬಹುದು. ತಂದೆ ಬೂದ ಭಾಗವತರು ಸಹ ಗೋಳಿಗರಡಿ ಮೇಳದ ಸ್ಥಾಪಕ ಭಾಗವತರಾಗಿ ದುಡಿದವರು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಕರಾವಳಿ ಕರ್ನಾಟಕದ ಬಹುಸಂಖ್ಯಾಕ್ಯ ಬಿಲ್ಲವ ಸಮಾಜದ ಬೂದ ಭಾಗವತ ಮತ್ತು ಗೌರಿಯಮ್ಮ ದಂಪತಿಗಳ ಪುತ್ರನಾಗಿ 1945ರಲ್ಲಿ ಜನಿಸಿದ ಗೋವಿಂದಪ್ಪನವರ ಮನೆಯ ಕೃಷಿ ಭೂಮಿ ಹೆಸರಿಗೆ ಮಾತ್ರ. ತಂದೆಯವರಿಗೆ ಬೇಸಗೆಯ ಗೋಳಿಗರಡಿ ಮೇಳದ ಸಂಪಾದನೆ ಮಾತ್ರ ಆರ್ಥಿಕ ಮೂಲ. ಎಷ್ಟೋ ಬೇಸಗೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಆಟ ಆಡದೇ ಇದ್ದ ದಿನಗಳು ಅದೆಷ್ಟೋ. ಇಂತಹ ಬಡತನದಲ್ಲಿ ಇವರು ಸಾಸ್ತಾನದ ಪಾಂಡೇಶ್ವರ ಶಾಲೆಯಲ್ಲಿ ಪ್ರಾಥಮಿಕ ಅಬ್ಯಾಸ ಮಾಡಿದರು. ಅಲ್ಲಿ ಅಧ್ಯಾಪಕರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರು ಮತ್ತು ಬಸವ ಮಾಸ್ತರರು ಯಕ್ಷಗಾನದಲ್ಲಿ ನುರಿತವರೇ ಆಗಿದ್ದು ಬಾಲಕನ ಯಕ್ಷಗಾನ ಆಸಕ್ತಿ ಗಮನಿಸಿ ಐದನೇ ತರಗತಿಯಲ್ಲಿ ಕರ್ಣಾರ್ಜುನ ಭೀಮನ ಪಾತ್ರ ನೀಡಿ ಪ್ರೋತ್ಸಾಹಿಸಿದರು. ಕಾಂತಪ್ಪ ಮಾಸ್ತರರೇ ಇವರ ಅಧೀಕೃತ ಗುರುಗಳು ಕೂಡ. ನಿರೀಕ್ಷೆಗೂ ಮೀರಿ ಅಚ್ಚುಕಟ್ಟಾಗಿ ಆ ಪಾತ್ರ ನಿರ್ವಹಿಸಿ ಸಭೆಯಿಂದ ಶಹಬ್ಬಾಸ್'ಗಿರಿ ಗಿಟ್ಟಿಸಿಕೊಂಡರು. ಗುರುಗಳಿಂದ ನೀನು ಬಹುದೊಡ್ಡ ಕಲಾವಿದನಾಗುವಿ ಎಂದು ಹರಸಿಕೊಂಡ ಗೋವಿಂದಪ್ಪ ಹಿಂದಿರುಗಿ ನೋಡದೇ ದಿನದಿಂದ ಬೆಳೆಯುತ್ತಾ ಸಾಗಿದರು.

ಇವರು ಶಾಲೆಬಿಟ್ಟ ಮೊದಲ ವರ್ಷವೇ ನಿಂತುಹೋಗಿದ್ದ ಗೋಳಿಗರಡಿ ಮೇಳಕ್ಕೆ ಬಾಲ ಕಲಾವಿದರಾಗಿ ಸೇರಿಕೊಂಡರು. ಯಕ್ಷಗಾನದಲ್ಲಿ ಪರಿಪೂರ್ಣತೆ ಸಾಧಿಸುವಾತ ಕೋಡಂಗಿ ವೇಷ ದಿಂದಲೇ ಹೊರಡಬೇಕು. ನಿತ್ಯ ವೇಷ, ಸ್ತ್ರೀವೇಷ, ಒಡ್ಡೋಲಗ ವೇಷ ಹಾಕಬೇಕು. ನಂತರ ಪುಂಡುವೇಷಗಳಲ್ಲೂ ಪಳಗಬೇಕು. ಗೋಳಿಗರಡಿ ಮೇಳದಲ್ಲಿ ದೀರ್ಘಕಾಲ ಹೀಗೆ ಹಂತ ಹಂತವಾಗಿ ಮೇಲೇರಿದರು. ಬಡಗುತಿಟ್ಟಿನಲ್ಲಿ ದೊಡ್ಡ ಹೆಸರು ಮಾಡಿದ ನಗರ ಜಗನ್ನಾಥ ಶೆಟ್ಟಿ, ಬೇಗಾರು ಪದ್ಮನಾಭ, ಕುಕ್ಡೆ ರಾಮಣ್ಣ ಶೆಟ್ಟಿ, ಮೆಟ್ಕಲ್ ಕೃಷ್ಣಯ್ಯ ಶೆಟ್ಟಿ, ಎಮ್. ಕೆ ರಮೇಶಾಚಾರ್ಯ, ತೀರ್ಥಳ್ಳಿ ಗೋಪಾಲಾಚಾರ್ ಮುಂತಾದವರು ಈ ಮೇಳದಲ್ಲಿ ಗೆಜ್ಜೆ ಕಟ್ಟಿದವರು ದುಡಿದವರು. ಈ ಮೇಳದ ರಂಗ ಎನ್ನುವವರ ಹಿರಣ್ಯ ಕಶ್ಯಪು ವೇಷ ಹಾರಾಡಿ ರಾಮಗಾಣಿಗರಿಗೆ ಅತ್ಯಂತ ಪ್ರೀಯವಾಗಿತ್ತಂತೆ. ಗೋಳಿ ಗರಡಿ ಮೇಳದಲ್ಲಿ ತಂದೆ ಬೂದ ಭಾಗವತರು, ಸಂಗೀತಗಾರ ಗೋವಿಂದ ಪೂಜಾರಿ ಮದ್ದಳೆಗಾರ ಬೈಕಾಡಿ ಶ್ರೀನಿವಾಸ, ಕಲಾವಿದರಾದ ಹರಾಡಿ ತಿಮ್ಮಣ್ಣ ಹರಾಡಿ ತುಕ್ಕಣ್ಣ, ತೌಡ ಪೂಜಾರಿ, ಸುಂದರ ಅಮೀನ್, ಎಂ. ಕೆ ರಮೇಶಾಚಾರಿ, ಕೆಮ್ಮಣ್ಣು ರುಕ್ಕಣ್ನ ಮುಂತಾದ ಹಿರಿಯ ಕಲಾವಿದರ ಒಡನಾಟದಿಂದ ಐರೋಡಿಯವರು ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. ಸುಮಾರು 25 ವರ್ಷ ಗೋಳಿಗರಡಿ ಮೇಳದಲ್ಲಿ ಪುಂಡುವೇಷಧಾರಿಯಾಗಿ, ಪುರುಷವೇಷಧಾರಿಯಾಗಿ ಬಬ್ರುವಾಹನ, ಲವಕುಶ, ಪುಷ್ಕಳ. ಅಭಿಮನ್ಯು ಅಲ್ಲದೇ ಕೋಟಿ ಚನ್ನಯದ ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎಣಿಸಿಕೊಂಡರು.

ಐರೋಡಿ ಗೋವಿಂದಪ್ಪ
ಜನನ : 1945
ಜನನ ಸ್ಥಳ : ಐರೋಡಿ
ಉಡುಪಿ ತಾಲೂಕು ಹಾಗೂ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ನಡುತಿಟ್ಟಿನ ಅಗ್ರಮಾನ್ಯ ಕಲಾವಿದ, ಸವ್ಯಸಾಚಿಯಾಗಿ ಹಲವಾರು ಮೇಳಗಳಲ್ಲಿ ದುಡಿಮೆ

ಪ್ರಶಸ್ತಿಗಳು:
ಕರ್ನಾಟಕ ರಾಜ್ಯ ಪ್ರಶಸ್ತಿ
ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ.
ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ
ಉಡುಪಿ ಯಕ್ಷಗಾನ ಕಲಾಕ್ಷೇತ್ರ ಸುವರ್ಣೋತ್ಸವ ಪ್ರಶಸ್ತಿ
ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯರಾಗೀಯು ಅವರು ಸೇವೆ ಸಲ್ಲಿಸಿದ್ದಾರೆ.


ಕಲಾಸೇವೆ

1977ರಲ್ಲಿ ಬಡಗಿನ ಪ್ರತಿಷ್ಟಿತ ಮೇಳವಾದ ಸಾಲಿಗ್ರಾಮ ಮೇಳದಿಂದ ಕರೆಬಂದಿದ್ದು ಅವರ ಕಲಾಜೀವನಕೊಂದು ಹೊಸ ತಿರುವು ನೀಡಿತು. ಮೇಳದ ಯಜಮಾನರಾದ ಸೋಮನಾಥ ಹೆಗ್ಡೆಯವೆರಿಗೆ ಮೇಳಕ್ಕೆ ಸೇರಿಸಿಕೊಳ್ಳುವಂತೆ ಹಿರಿಯರಾದ ಎಂ. ಎಂ. ಹೆಗ್ಡೆಯವರಿಂದ ಸಲಹೆ. ಐರೋಡಿಯವರಿಗೆ ಮುಜುಗುರ ಮತ್ತು ಅಳುಕಿದ್ದರೂ ಯಜಮಾನರು ಧೈರ್ಯ ತುಂಬಿ ಭರವಸೆಯ ಮಾತನ್ನಾಡಿದರು. ಸಾಲಿಗ್ರಾಮ ಮೇಳದಲ್ಲಿ ಅಸಾಮಾನ್ಯ ಕಲಾವಿದರಾಗಿದ್ದ ಮರವಂತೆ ನರಸಿಂಹದಾಸ ಭಾಗವತರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ, ಕೆಮ್ಮಣ್ಣು ಆನಂದ, ನೆಲ್ಲೂರು ಮರಿಯಪ್ಪಾಚಾರ್ ಅವರ ಗಜಗಟ್ಟಿ ಹಿಮ್ಮೇಳ, ಶಿರಿಯಾರ ಮಂಜುನಾಯಕ್, ಮುರೂರು ದೇವರು ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಜಲವಳ್ಲಿ ವೆಂಕಟೇಶ ರಾವ್, ಅರಾಟೆ ಮಂಜುನಾಥ ಹಿರಿಯ ಕಲಾವಿದರಿದ್ದ ಸಾಲಿಗ್ರಾಮ ಮೇಳಕ್ಕೆ ಇವರ ಸೇರ್ಪಡೆಯಾಯ್ತು. ಆ ವರ್ಷದ ರಾಜ ನರ್ತಕಿ ಪ್ರಸಂಗದ ಮುಸ್ಲೀಮ್ ಬಾದಶಹನ ಅವರ ವೇಷ ಹೊಸ ಪ್ರಸಂಗದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿತು. ಅಲ್ಲದೇ ಹೊಸ ಪ್ರಸಂಗದಲ್ಲೂ ತಾನು ಸೈ ಎಣಿಸಿಕೊಂಡರು.

ನಂತರ ಮೇಳದ ಭಾಗವತರಾದ ಕಾಳಿಂಗ ನಾವಡರು ಗೋವಿಂದಪ್ಪನವರನ್ನು ಪರಿಪೂರ್ಣವಾಗಿ ಬಳಸಿಕೊಂಡವರು. ಅವರ ಭಾಗವತಿಕೆಯಲ್ಲಿ ಕುಣಿದಿರುವುದು ನನ್ನ ಯೋಗ ಅವರಲ್ಲಿ ಕೃಪಣತೆ, ಕುಬ್ಜತೆ ಇರಲಿಲ್ಲ. ಮಾತೃ ವಾತ್ಸಲ್ಯಮಯಿಯಾದ ಅವರು ಕಲಾವಿದರನ್ನು ಮೆರೆಯಿಸುತಿದ್ದರು. ಈ ಮಟ್ಟಕ್ಕೆ ತಾನೇರಲು ನಾವುಡರು ಕಾರಣ ಎಂದು ಇವರು ನೆನಪಿಸಿಕೊಳ್ಳುತ್ತಾರೆ. ಸರ್ವಾಂಗದಲ್ಲಿ ತನ್ನನ್ನು ದುಡಿಸಿಕೊಂಡ ಅವರು ತೃಪ್ತರಾದಾಗ ಮನಸಾರೆ ಶ್ಲಾಘಿಸುತಿದ್ದ ಅವರ ಭಾಗವತಿಕೆಯಲ್ಲಿ ಕೃಷ್ಣಾರ್ಜುನ-ಭೀಷ್ಮ ಪರ್ವ-ಕರ್ಣಾರ್ಜುನ ಪ್ರಸಂಗಗಳ ನೂರಾರು ಪ್ರಯೋಗ ಕಂಡ ಅರ್ಜುನ-ಭೀಷ್ಮ-ಕರ್ಣನ ಪಾತ್ರಗಳು ಅಪಾರ ಜನಮನ್ನಣೆ ಪಡೆದದ್ದನ್ನು ನೆನಪಿಸಿಕೊಳ್ಳುತ್ತಾರೆ.

ಸವ್ಯಸಾಚಿ ಕಲಾವಿದ

ಯಕ್ಷಗಾನ ಕಲಾವಿದರಿಗೆ ಇರಬೇಕಾದ ತುಂಬು ಮುಖ ದೊಡ್ಡ ಮುಂಡಾಸು ಕಟ್ಟಿಕೊಂಡು ರಂಗದ ಮೇಲೆ ಲೀಲಾಜಾಲವಾಗಿ ಕಸುಬು ಮಾಡಬಲ್ಲ ತ್ರಾಣ, ಯಕ್ಷಗಾನದ ಪಾತ್ರಗಳೇ ಆಗಿಬಿಡುವಲ್ಲಿ ಶ್ರದ್ದೆ-ತನ್ಮಯತೆ ಇವೆಲ್ಲವೂ ಗೋವಿಂದಪ್ಪನವರಿಗೆ ಇರುವುದರಿಂದ ಕರ್ಣನ ಪಾತ್ರ ಚೆನ್ನಾಗಿ ಮೂಡಿಬಂತು. ಮುಂದೆ ಅದೇ ಖಾಯಂ ಆಗಿ ಗೋವಿಂದಪ್ಪನವರ ಕರ್ಣ, ಶಿರಿಯಾರ ಮಂಜುನಾಯ್ಕರ ಅರ್ಜುನ ಜನ ಜನಿತವಾಯ್ತು. ಇಂದಿಗೂ ಕರ್ಣಾರ್ಜುನ ಕಾಳಗ ಪ್ರಸಂಗಕ್ಕೆ ಐರೋಡಿಯವರು ಅನಿವಾರ್ಯ ಕಲಾವಿದರಾಗಿದ್ದಾರೆ. ಸಾಲಿಗ್ರಾಮ ಮೇಳದಲ್ಲಿ ಇವರ ಎರಡನೆ ವೇಷ ಅರಾಟೆಯವರ ಸ್ತ್ರೀವೇಷ ಅಪಾರ ಪ್ರೇಕ್ಷಕರನ್ನು ರಂಜಿಸಿತು, ಇವರ ಮಾರ್ತಾಂಡತೇಜ ಅರಾಟೆಯವರ ಶಶಿಪ್ರಭೆ, ಭೀಮ-ದ್ರೌಪದಿ, ಶತ್ರುಘ್ನ-ಮದನಾಕ್ಷಿ, ಭೀಷ್ಮ-ಅಂಬೆ, ಮೀನಾಕ್ಷಿ-ಈಶ್ವರ , ಯಯಾತಿ-ದೇವಯಾನಿ ಮುಂತಾದ ಪಾತ್ರಗಳು ಯಶಸ್ವಿ ಜೋಡಿ ವೇಷವಾಗಿದ್ದವು. ಬಳಿಕ ಮೂಲ್ಕಿ, ಪೆರ್ಡೂರು , ಹಿರಿಯಡ್ಕ, ಅಮೃತೇಶ್ವರಿ ಅಲ್ಲದೇ ತೆಂಕಿನ ಕುಂಬಳೆ ಮೇಳದಲ್ಲೂ ಕುಣಿದು ತೆಂಕಿನಲ್ಲೂ ದೀಗಣ ಹಾರಿಸಿದ್ದರು.

ಯಕ್ಷಗಾನದಲ್ಲಿ ಶುದ್ದತೆಯನ್ನೂ ಬದ್ದತೆಯನ್ನೂ ಕಾಪಾಡಿಕೊಂಡ ಬಯಲಾಟ ಮೇಳವಾದ ಅಮೃತೇಶ್ವರಿ ಮೇಳದಲ್ಲಿ ಅವರು ನಿರ್ವಹಿಸಿ ಪರಂಪರೆಯ ಪ್ರೇಕ್ಷಕರನ್ನು ಸೆಳೆದುಕೊಂಡ ಲವಕುಶದ ವಿಭೀಷಣ, ಯಯಾತಿ ಮಾರ್ತಾಂಡತೇಜ, ವಾಲಿ, ಕರ್ಣ-ಅರ್ಜುನ ಪಾತ್ರಗಳು ಅಪಾರ ಜನಮನ್ನಣೆ ಪಡಿದಿವೆ. ಕರ್ಣನ ಪಾತ್ರದಂತೆ ಯಾವುದೇ ಪ್ರಸಂಗದ ಅರ್ಜುನನ ಪಾತ್ರವನ್ನು ಸಹ ಅದೇ ತಾದ್ಯಾತ್ಮಕತೆಯಿಂದ ನಿರ್ವಹಿಸುವ ಇವರು ತಾನೋಬ್ಬ ಎರಡನೇ ವೇಷಧಾರಿ ಮಾತ್ರವಲ್ಲದೇ ಪರಿಪೂರ್ಣ ಪುರುಷ ವೇಷಧಾರಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೊಸ ಪ್ರಸಂಗದಲ್ಲೂ ಹಿಂದೆ ಬೀಳದ ಇವರು ಸಾಲಿಗ್ರಾಮ ಮೇಳದಲ್ಲಿ ನಾಗಶ್ರೀ, ಶ್ರೀದೇವಿ ಬನಶಂಕರಿ, ಚೆಲುವೆ ಚಿತ್ರಾವತಿ, ರತಿರೇಖಾ, ರಾಜನರ್ತಕಿ ಪ್ರಸಂಗದ ಪಾತ್ರಗಳೂ ಪೆರ್ಡೂರು ಮೇಳದಲ್ಲಿ ಪದ್ಮಪಲ್ಲವಿಯ ರುದ್ರ ನಂದನ, ಚಾರು ಚಂದ್ರಿಕೆ, ಮೂಲ್ಕಿ ಮೇಳದಲ್ಲಿ ಸೀತಾ ಪಾರಮ್ಯ, ವೃಂದಾ ಪರಂಜಯ, ಮಾತೃ ಮೋಕ್ಷ ಪ್ರಸಂಗದ ವಿವಿಧ ಪಾತ್ರಗಳೇ ಸಾಕ್ಷಿ. ತಾನೊಬ್ಬ ಕಲಾವಿದನಾಗಿ ಕಾಣಿಸಿಕೊಳ್ಲಲು ಕಾರಣವಾದ ಗೋಳಿಗರಡಿ ಮೇಳ ರಂಗದಲ್ಲಿ ತನ್ನನ್ನು ಸಮರ್ಥವಾಗಿ ಬಳಸಿಕೊಂಡ ಕಾಳಿಂಗ ನಾವಡರು, ಆ ಕಾಲದಲ್ಲಿ ತನ್ನನ್ನು ಡೇರೆಮೇಳಕ್ಕೆ ಸೇರಿಸಿಕೊಂಡ ಯಜಮಾನ ಸೋಮನಾಥ ಹೆಗ್ಡೆಯವರನ್ನು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಸಾಲಿಗ್ರಾಮ ಮೇಳದವರು ಸ್ಥಾಪಿಸಿದ ಪಳ್ಳಿ ಸೋಮನಾಥ ಹೆಗ್ಡೆ ಸ್ಮಾರಕ ಪ್ರಶಸ್ತಿ ಕೂಡ ಪ್ರಥಮವಾಗಿ ಉಡುಪಿ ಜಿಲ್ಲೆಯಿಂದ ಇವರಿಗೆ ಸಂದಿದೆ.

ಶ್ರುತಿಬದ್ದ ಪದ್ಯದ ಎತ್ತುಗಡೆ

ಎರಡನೇ ವೇಷದ ಪಟ್ಟಕ್ಕೆ ಬಹು ಬೇಗನೇ ಏರಿದ ಐರೋಡಿಯವರನ್ನು ಬಡಗುತಿಟ್ಟು ಬಯಲಾಟ ಪರಂಪರೆಯಲ್ಲಿ ಅಗ್ರಮಾನ್ಯ ಎರಡನೇ ವೇಷಧಾರಿಯಾಗಿ ಜನ ಗುರುತಿಸಿದ್ದಾರೆ. ಇವರ ವೇಷಗಳಲ್ಲಿ ಹರಾಡಿ ತಿಟ್ಟನ್ನು ಜನ ಗುರುತಿಸುತ್ತಾರೆ. ಯಾವ ವೇಷವೇ ಇರಲಿ ಅದನ್ನು ಊನವಿಲ್ಲದ ಹಾಗೆ ಮಾಡಿ ತೋರಿಸುವುದು ಹಾರಾಡಿಯವರ ವೈಶಿಷ್ಟ್ಯ. ಹರಾಡಿ ರಾಮಗಾಣಿಗರ ವೇಷವೆಂದರೆ ಉಂಗುರ ಹಾಕಿ ಉಂಗುರ ತೆಗೆಯಬಹುದು ಎನ್ನುದು ಒಂದು ಅಂಬೋಣ. ಇದರರ್ಥ ಬುಡದಿಂದ ತುದಿಯ ತನಕ ಕಿಂಚಿತ್ತೂ ಊನವಿಲ್ಲದ ಹಾಗೆ. ಐರೋಡಿಯವರ ವೇಷದಲ್ಲೂ ಅದೇ ವೈಶಿಷ್ಟ್ಯ, ಛಾಪು-ಜಾಪು. ಅಭಿನಯ ಮತ್ತು ಜಾಪಿನ ಹದವಾದ ಮಿಶ್ರಣ, ಹುಬ್ಬುಗಳ ಚಲನೆ ಕೂಡ ನೃತ್ಯದ ಒಂದು ಭಾಗವೇ ಆಗಿದೆ. ಮಾತುಗಾರಿಕೆಯಲ್ಲೂ ಅದೇ ಹಾರಾಡಿಯವರ ದಾರಿಯೇ. ಅದೊಂದು ಸಾಹಿತ್ಯಕ ಆಡು ಭಾಷೆ. ಕುಂದಾಪುರ ಆಡುಭಾಷೆಯಂತೆ ಹಾರಾಡಿಯವರ ಮಾತು ಹಸಿಗೋಡೆಗೆ ಹರಳು ಇಟ್ಟಂತೆ.

ವೃಷಸೇನ ಯುದ್ದದಲ್ಲಿ ಭೀಮ ಸೋತಾಗ ಹರಾಡಿ ಕುಷ್ಟ ಗಾಣಿಗರು ಅರ್ಜುನನಾಗಿ “ಕೃಷ್ಣಾ.. ಅಷ್ಟಾಗಬೇಕಿತ್ತಲ್ಲವೋ ನಿನಗೆ”( ಪದ:ಇಷ್ಟರಬಲುಮೆಯಂ ಕೊಟ್ಟವರಾರು) ಎನ್ನುವ ಮಾತು ವಾಕ್ಯ ಚಿಕ್ಕದಾದರೂ ಅರ್ಥಗರ್ಬಿತ. ಇದಕಿಂತ ಚಿಕ್ಕವಾಕ್ಯವನ್ನು ಇದೇ ಅರ್ಥ ಬರುವಂತೆ ಮಾಡುವುದು ಕಷ್ಟ ಸಾದ್ಯ. ಲವಕುಶ ಕಾಳಗದಲ್ಲಿ ವಿಭೀಷಣನಾಗಿ ರಾಮಗಾಣಿಗರು ಲವಕುಶರು ಸೀತೆಯ ಮಕ್ಕಳೆಂದು ತಿಳಿದಾಗ ಹೇಳುವ ಉದ್ಗಾರ ಭಾವನೆಗಳ ಮಿಶ್ರಣವನ್ನು ತೋರಿಸುತಿತ್ತು. ಇವೆಲ್ಲವನ್ನೂ ಐರೋಡಿಯವರ ವೇಷದಲ್ಲಿ ಗುರುತಿಸ ಬಹುದು. ಇವೆಲ್ಲಕಿಂತ ಮುಖ್ಯವಾದದ್ದು ಅವರ ಶ್ರುತಿಬದ್ದ ಪದ್ಯದ ಎತ್ತುಗಡೆ ಬಬ್ರುವಾಹನ ಕಾಳಗದ ಅರ್ಜುನನಾಗಿ “ಹಂಸಕೇತನಾದಿಗಳೆಲ್ಲಾ ಕೇಳಿ” ಭೀಷ್ಮ ಪರ್ವದ “ ಶ್ರೀ ಮನೋಹರ ಸ್ವಾಮಿ ಪರಾಕು” ವೀರಮಣಿ ಕಾಳಗದ “ಆವಕಡೆಗೈದಿದಿರಿ ನಿಮ್ಮಯ” ಪದ್ಯಗಳೇ ಸಾಕು ಅವರ ಬಾಮಿನಿ ಮತ್ತು ತಾಳದ ಪದ್ಯಗಳ ಎತ್ತುಗಡೆಯ ಮಾದರಿಗೆ. ಕಾಳಿಂಗ ನಾವಡರು ಮತ್ತು ನೆಲ್ಲೂರು ಮರಿಯಪ್ಪಾಚಾರ್ ಒಂದಿಗಿನ ಅವರ ಎತ್ತುಗಡೆ ಹೊಂದಾಣಿಕೆ ಇತರ ಭಾಗವತರೊಂದಿಗೆ ಮಾತ್ರ ಈ ಮಟ್ಟಿನ ಹೊಂದಾಣಿಕೆ ಆಗಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಜಗಮೆಚ್ಚಿದ ಕರ್ಣನ ಪಾತ್ರ

ಕಲಾವಿದ ಐರೋಡಿಯವರು ಹಾರಾಡಿ ಕಲಾವಿದರ ಪ್ರಭಾವದಲ್ಲಿ ಬೆಳೆದವರು. ಅಭಿನವ ರಾಮನೆಂಬಂತೆ ಗುರುತಿಸಿಕೊಂಡವರು. ಕೆಲವೊಂದು ಪಾತ್ರಗಳಲ್ಲಿ ಹಿರಿಯ ಕಲಾವಿದರ ಪಡಿಯಚ್ಚು ಮೂಡಿಸುವ ಇವರು‌ ಅನುಕರಣೆಯ ಕಲಾವಿದರಲ್ಲ. ಪಾತ್ರ, ರಂಗ, ಪ್ರಸಂಗ ಬಯಸಬಹುದಾದ ಪಾರಂಪರಿಕವಾದ ಸತ್ ಲಕ್ಷಣ, ಗುಣಗಳನ್ನು ಮಾತ್ರ ಅನುಸರಿಸಿ ಬೆಳೆದವರು. ಯಕ್ಷಗಾನ ರಂಗಭೂಮಿಯಲ್ಲಿ ಎರಡನೇ ವೇಷಧಾರಿಯೆನಿಸಿಕೊಳ್ಳುವ ಕಲಾವಿದನಿಗೆ ಇರಬೇಕಾದ ಎಲ್ಲಾ ಗುಣಲಕ್ಷಣಗಳು ಇವರಲ್ಲಿ ಕಾಣಬಹುದಾಗಿದೆ. ಇವರ ರಂಗದ ನಿಲುವುಗಳಲ್ಲಿ ವೀರಭದ್ರ ನಾಯಕರ ಭಂಗಿಯನ್ನೂ ಗುರುತಿಸಬಹುದಾಗಿದೆ. ಪಾತ್ರ ಹೇಗೆ? ವೇಷ ಹೇಗೆ ಎಂಬ ಕಲ್ಪನೆಯಲ್ಲಿ ವ್ಯವಹರಿಸುವ ಅವರು 67ರ ಈ ಇಳಿವಯಸ್ಸಿನಲ್ಲೂ ಕಿರೀಟ, ಮುಂಡಾಸು ಮತ್ತು ಕೇದಗೆ ಮುಂದಲೆಯ ವೇಷಗಳನ್ನು ಅಷ್ಟೇ ಸುಂದರವಾಗಿ ನಿರೂಪಿಸಬಲ್ಲರು. ಕರ್ಣಾರ್ಜುನ ಕಾಳಗ ಕರ್ಣನ ವೇಷದಲ್ಲಿ ಐರೋಡಿಯವರ ಪೂರ್ಣ ಪ್ರಮಾಣದ ಕಲಾವಂತಿಕೆ ಸಾಕಾರಗೊಂಡಿದೆ ಎನ್ನಬಹುದು. ಬಡಗಿನ ಎಲ್ಲಾ ಕಲಾವಿದರು, ಬಡಾಬಡಗಿನ, ಹಾಗೂ ತೆಂಕಿನ ಕಲಾವಿದರು ಸಹ ಇವರ ಕರ್ಣನ ವೇಷಕ್ಕೆ ಮಾರುಹೋಗಿದ್ದಾರೆ. ಆ ವೇಷ, ಭಾಷೆ, ನಿಲುವು, ನೋಟ, ಕುಣಿತ, ಅಭಿನಯ ಕಂಡಾಗ ನಿಜಕ್ಕೂ ಪೌರಾಣಿಕ ಲೋಕದ ಕರ್ಣ ಮತ್ತೆ ರಂಗಸ್ಥಳದಲ್ಲಿ ಜೀವಂತವಾದ ಅನುಭವ.

ಪ್ರಶಸ್ತಿ, ಪುರಸ್ಕಾರಗಳು

ಯಕ್ಷಗಾನ ರಂಗಭೂಮಿ ಎಷ್ಟೊಂದು ಸಿತ್ಯಂತರ ಅವಸ್ಥಾಂತರ ಕಂಡರೂ ಐರೋಡಿಯವರ ಯಕ್ಷಗಾನತನಕ್ಕೆ ಎಲ್ಲಿಯೂ ಪೆಟ್ಟು ಬೀಳಲಿಲ್ಲ. ನವೀನವಾದಿಗಳ ಇಚ್ಚೆಗೆ ತಕ್ಕಂತೆ ಹುಚ್ಚು ಹುಚ್ಚಾಗಿ ಕುಣಿದವರು ಅವರಲ್ಲ. ವಾಣಿಜ್ಯೋದ್ದೇಶದ ಡೇರೆ ಮೇಳದಲ್ಲಿ ಇದ್ದಾಗಲೂ ಹೊಸ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸುವಾಗಲೂ ತನ್ನ ಎಂದಿನ ಹಳೆಯ ಕ್ರಮವನ್ನು ಬಿಟ್ಟು ಕೊಟ್ಟವರಲ್ಲ. ಶಿಸ್ತಿನ ಸಿಪಾಯಿಯಾಗಿ ನೇಪಥ್ಯದಲ್ಲಿ ನಿಂತು ಯುವಕಲಾವಿದರನ್ನು ಪ್ರೋತ್ಸಾಹಿಸುವ ಮಾರ್ಗದರ್ಶಕ ಕಲಾವಿದರಾದ ಇವರನ್ನು ಎಲ್ಲಾ ತಿಟ್ಟುಗಳ ಮೇರು ಕಲಾವಿದರ ಪಂಕ್ತಿಗಳಲ್ಲಿ ಗುರುತಿಸಬಹುದು.

ಅವಿಭಜಿತ ದ. ಕ. ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾದ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ. ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ. ಉಡುಪಿ ಯಕ್ಷಗಾನ ಕಲಾಕ್ಷೇತ್ರ ಸುವರ್ಣೋತ್ಸವ ಪ್ರಶಸ್ತಿ. ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯರಾಗೀಯು ಅವರು ಸೇವೆ ಸಲ್ಲಿಸಿದ್ದಾರೆ. ಸದ್ಯ ನಿವೃತ್ತಿಯಲ್ಲಿರುವರ ಇವರು ಅತಿಥಿ ಕಲಾವಿದರಾಗಿ ವಿವಿಧ ಮೇಳಗಳಲ್ಲಿ ಕಾಣಿಸಿಕೊಳ್ಳುತಿದ್ದಾರೆ.

****************

ಐರೋಡಿ ಗೋವಿಂದಪ್ಪರವರ ಕೆಲವು ಭಾವಚಿತ್ರಗಳು
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Ganesh(6/6/2014)
Irodi Govindappa is the master in Yakshagana. People will never forget his role "KARNA". He is the only one person can make audience to cry by his role of Karna. He is awesome. Nobody can follow his role.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ