ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಬಲಿಪ್ಪಜ್ಜನಿಗೆ 75 ಅಂತೆ!!!!

ಲೇಖಕರು :
ರಾಜ್ ಕುಮಾರ್
ಶನಿವಾರ, ಜನವರಿ 11 , 2014

ಯಕ್ಷಗಾನ ಎಂದರೆ ಪರಂಪರೆಯಿಂದ ಬಂದ ಜಾನಪದ ಕಲೆ. ಈ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯ ಉತ್ತರದಾಯಿತ್ವದಿಂದ ಕಲೆಯ ರೂವಾರಿಯಾಗಿ ಮೆರೆದವರು ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು. ಯುಕ್ಷಗಾನದಲ್ಲಿ ಹಾಡುಗಾರಿಕೆಯಿಂದ ರಂಗಸ್ಥಳದ ಸೂತ್ರಧಾರನಾಗಿ ಅತ್ಯುನ್ನತ ಸ್ಥಾನ ಭಾಗವತರದ್ದು. ಹಾಗಾಗಿ ಇಲ್ಲಿ ಆ ಸ್ಥಾನದಲ್ಲಿ ಇದ್ದವರನ್ನು “ ಭಾಗವತ್ರೆ....” ಅಂತ ಗೌರವದಿಂದ ಸಂಭೋಧಿಸುವುದು ಕೂಡ ಒಂದು ಪರಂಪರೆಯ ಅಂಗ. ಆದರೆ ಹೀಗೆ ಕರೆಯುವಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಸಂಭೋಧಿಸಿ ಕರೆಯುವಂತಹ ಸ್ಥಾನ ವ್ಯಕ್ತಿತ್ವ ಗಳಿಸಿಕೊಂಡಿದ್ದರೆ ಅದು ಬಲಿಪ್ಪರು ಮಾತ್ರ. ಯಾಕೆಂದರೆ ಇವರನ್ನು ಭಾಗವತ ಎಂದು ಕರೆದರೆ ಅದಕ್ಕೆ ಯಕ್ಷಗಾನ ಪ್ರಪಂಚಕ್ಕೆ ಹೊರತಾಗಿಯೂ ಆಕ್ಷೇಪ ಇರಲಾರದು. ಬಲಿಪ್ಪಜ್ಜ ಗಳಿಸಿ ಉಳಿಸಿಕೊಂಡ ಸ್ಥಾನ ಅಂಥದ್ದು. ನಮ್ಮ ಬಲಿಪ್ಪಜ್ಜ!!! ನಾವೆಲ್ಲ ನಮ್ಮ ಅಪ್ಪನ ಅಪ್ಪನನ್ನು ಅಥವಾ ಅಮ್ಮನ ಅಪ್ಪನನ್ನು ಇಷ್ಟು ಪ್ರೀತಿಯಿಂದ ಕರೆಯುದಿಲ್ಲವೋ ಅಂತ ನಮ್ಮ ಅನುಮಾನ. ಆ ಅಜ್ಜನಿಗೆ ಈಗ ಎಪ್ಪತ್ತೈದರ ಹರಯ. ಎಡಕೈಯಿಂದ ಪಂಚೆಯನ್ನು ಮುದ್ದೆ ಮಾಡಿ ಸ್ವಲ್ಪವೇ ಎತ್ತಿ ಹಿಡಿದು ರಂಗಸ್ಥಳಕ್ಕೆ ಏರುವ ಈ ಭಾಗವತರು ಅದೇ ಭಂಗಿಯಲ್ಲಿ ಒಂದು ಸಲ ಹಿಂತಿರುಗಿ ತನ್ನ ಯಕ್ಷ ಬದುಕನ್ನು ಅವಲೋಕಿಸಿದರೆ ಛೇ .. ಅದೆಂತಹ ಅನುಭವ ಇದ್ದೀತು? ಆಶ್ಚರ್ಯದಿಂದಲೇ ಮನಸ್ಸು ಭಾವುಕವಾಗಿಬಿಡುತ್ತದೆ. ಕಣ್ಣುಗಳು ಮುಚ್ಚಿಕೊಂಡು ನಮ್ಮ ನೆನಪುಗಳನ್ನು ಕೆದಕುವಂತೆ ಮಾಡುತ್ತದೆ. ಇಂತಹ ಒಂದು ವ್ಯಕ್ತಿತ್ವ ಇರುವುದಕ್ಕೆ ಸಾಧ್ಯವೇ?

ಬಲಿಪ ನಾರಾಯಣ ಭಾಗವತ
( ಚಿತ್ರ ಕೃಪೆ : ರಾಮ್ ನರೇಶ್, ಮ೦ಚಿ )
ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನ ಪ್ರಸಂಗಗಳಾದ ಪಂಚವಟಿ, ಅತಿಕಾಯ ಮೋಕ್ಷ, ಇಂದ್ರಜಿತು ಕಾಳಗ ಮುಂತಾದ ಪ್ರಸಂಗಗಳ ಪದಗಳು ಬಲಿಪ್ಪರಿಗೇ ಮೀಸಲಾರಿಗಿಸಿದವುಗಳು. ವಾಲಿ ಮೋಕ್ಷ ಎಂದರೆ ನೆನಪಾಗುವುದು ಬಲಿಪ್ಪರು. ಇಲ್ಲಿಂದಲೇ ಆರಂಭವಾಗುತ್ತದೆ ಪರಂಪರೆಯ ಸೇನಾಪತಿತ್ವ. ನೆನಪಿನ ಪ್ರಕಾರ ನಲ್ವತ್ತು ವರ್ಷಗಳ ಮೊದಲು ಇದೇ ಪ್ರಸಂಗಗಳ ಪದ ಕೇಳಿ ಯಕ್ಷಗಾನದ ಹುಚ್ಚು ಹಿಡಿಸಿಕೊಂಡದ್ದು ಯಾಕೆ ಅಂತ ಸೋಜಿಗವಾದರೆ, ಅದೇ ಪದಗಳು “ ಏತಕೇ ಮರುಳಾಹೇ ತಾತಾ...” ಅಂತ ಈಗಲೂ ಅದೇ ಬದಲಾವಣೆ ಇಲ್ಲದೆ ಆಲಾಪಿಸುವುದನ್ನು ಅಜ್ಜನ ಕಂಠದಲ್ಲಿ ಕೇಳುವಾಗ ಯಾಕೆ ಎಂಬುದಕ್ಕೆ ಉತ್ತರ ಸುಲಭದಲ್ಲಿ ಸಿಗುತ್ತದೆ.

ದಶಕದ ಹಿಂದಿನ ಮರುಳಿಗೂ ಈಗಿನ ಮರುಳಿಗೂ ವೆತ್ಯಾಸವೇ ಇಲ್ಲ. ಎಂತೆಂತಹ ಗಾಯಕರು ಅದೆಷ್ಟು ಸಲ ’ರೀ ಟೇಕ್ ಮಾಡಿ ’ ಕೊನೆಯಲ್ಲಿ ಧ್ವನಿ ಮುದ್ರಿಸಿದ ಹಾಡನ್ನು ಅದೇ ರೀತಿ ಪುನಃ ಹಾಡುವಾಗ ಸಾಮ್ಯತೆಯಲ್ಲಿ ಬಹಳಷ್ಟು ವೆತ್ಯಾಸವನ್ನು ತೋರುತ್ತಾರೆ. ಆದರೆ ಬಲಿಪ್ಪಜ್ಜನದ್ದು ಅದೇ ’ ಏತಕೇ ಮರುಳಾಹೆ ತಾತ...” ಇದು ಸಾಧ್ಯವಾಗುವುದಾದರೂ ಹೇಗೆ ಅದೇ ಬಲಿಪ್ಪರ ಯಕ್ಷಗಾನದ ಮೇಲಿನ ಶ್ರದ್ದೆ. ಕಲೆಯ ಬಗೆಗಿರುವ ಆ ಶ್ರಧ್ಹಾಭಕ್ತಿ, ಯಕ್ಷಗಾನ ಪರಂಪರೆಯನ್ನು ಎರಡೂ ಕೈಯಲ್ಲೂ ಜತನದಿಂದ ಅವುಚಿ ಹಿಡಿದುಕೊಂಡ ಪರಿಯದು. ಪ್ರಭಾಕರ ಜೋಷಿಯವರು ಹೇಳುವ ಮಾತುಂಟು, “ಬಲಿಪ್ಪರನ್ನು ಲಂಡನ್ ಅಥವಾ ಇನ್ನೇಲ್ಲೋ ಒಂದಷ್ಟು ವರ್ಷ ಯಕ್ಷಗಾನದ ಸುಳಿವು ಇಲ್ಲದಂತೆ ಇರಿಸಿ, ಕೊನೆಯಲ್ಲಿ ಆ ದೇಶದ ರಾಷ್ಟ್ರ ಗೀತೆಯನ್ನು ಹಾಡುವುದಕ್ಕೆ ಕೊಟ್ಟರೂ ಅದು ಯಕ್ಷಗಾನ ರೂಪದಲ್ಲೇ ಇದ್ದೀತೆ ಹೊರತು ಬೇರೆ ಅಲ್ಲಿ ಸುಳಿಯಲಾರದು.” ಬಲಿಪ್ಪರ ಯಕ್ಷಗಾನ ಸಂಬಂಧಕ್ಕೆ ಇದಕ್ಕಿಂತಲೂ ಸೂಕ್ತವಾದ ಅಂಗೀಕಾರ ಸಿಗಲಾರದು.

ಬಲಿಪ್ಪರ ಪದಗಳ ಶಕ್ತಿ ಯಕ್ಷ್ಗಗಾನವನ್ನು ತುಂಬಿಕೊಂಡಿದೆ. ಅದು ಎಲ್ಲ ಕಸವನ್ನು ಸೋಸಿ ತೆಗೆದ ಮಾಲಿನ್ಯರಹಿತ ಪರಿಶುದ್ದ ಯಕ್ಷಗಾನ ಶೈಲಿ. ಬೇರೆ ಯಾವುದೇ ಪದಗಳನ್ನು ಕೇಳಬಹುದು. ಆದರೆ ಇವರ ಪದಗಳ ಪ್ರಭಾವವೇ ಬೇರೆ. ಅದು ಆಳಕ್ಕಿಳಿದು ಮಾಡುವ ಯಕ್ಷಮೋಹ ಅದು ಯಕ್ಷ ಸಮ್ಮೋಹನ ಅಂತಲೇ ಹೇಳಬಹುದು, ಅದು ಗಾಢವಾದ ಪರಿಣಾಮ ಬೀರುತ್ತದೆ. ಬೇರೆ ಯಾವ ಹಾಡುಗಾರಿಕೆಯೂ ಇವರ ಸ್ಥಿರತೆಯನ್ನು ಅಲುಗಾಡಿಸಿ ಪ್ರಭಾವ ಬೀರಲಾರದು. ಯಾಕೆಂದರೆ ಈ ಪರಂಪರೆಗೆ ಶತಮಾನದ ಇತಿಹಾಸ ಬೇರು ಆಳಕ್ಕೆ ಮುಟ್ಟಿಯಾಗಿದೆ.

ಇದೆಲ್ಲ ಯಕ್ಷಗಾನದ ಅನ್ವರ್ಥಗುಣಗಳಾದರೆ ’ಬಲಿಪ್ಪರು ’ ಎಂದಾಕ್ಷಣ ಸುತ್ತಿ ಸುಳಿವ ವಿಶಿಷ್ಟ ಗುಣವಿಶೇಷಗಳಿವೆ. ಸದಾ ಶಾಂತ ಸ್ವಭಾವ, ಪ್ರತಿಯೋಂದನ್ನು ತನ್ನ ನೋಟದಲ್ಲಿ ಪರಮಾರ್ಶಿಸುವ ಚಿಕಿತ್ಸಕ ಚಿಂತನೆಗಳು, ಪುಟ್ಟ ಮಕ್ಕಳೊಂದಿಗೂ ಬಿಗುಮಾನವಿಲ್ಲದೆ ಬೆರೆಯುವ ಮಕ್ಕಳ ಮನಸ್ಸು, ಶಿಸ್ತು ಸಂಯಮ ಎಲ್ಲವೂ ಅವರನ್ನು ಸನ್ಮಸ್ಸಿನ ಶಿಖರಗಾಮಿಗಳಾಗಿ ಮಾಡಿದ್ದರೆ ಪ್ರಚಲಿತದಲ್ಲಿ ಮುಗ್ಘ ಮಾನವ ಎಂದು ಕರೆಸಲ್ಪಡುವ ಅವರ ಮುಗ್ಧತೆ ’ಬಲಿಪ್ಪರು’ ಎನ್ನುವುದಕ್ಕೆ ಅನ್ವರ್ಥವಾಗಿದೆ. ಆದರೂ ಈ ಮುಗ್ಧ ಮನಸ್ಸಿನೊಡನೆ ಒಂದೆರಡು ಘಂಟೆ ಕಳೆದರೆ ನಿಮ್ಮನ್ನು ಚಕಿತರನ್ನಾಗಿ ಮಾಡುವಷ್ಟು ವಿಷಯಗಳನ್ನು ತನ್ನದೇ ಶೈಲಿಯಲ್ಲಿ ತೆರೆದಿಡುತ್ತಾರೆ. ಆವಾಗ ಬಲಿಪ್ಪರು ಮುಗ್ಧರು ಅಂತ ಒಪ್ಪಿಕೊಳ್ಳುವುದಿಲ್ಲ. ಅವರು ಪ್ರಪಂಚವನ್ನು ಕಂಡ ರೀತಿಯದು. ವ್ಯವಹಾರ ಚತುರತೆ ಮೇಲ್ನೊಟಕ್ಕೆ ನಿಮಗೆ ಗೋಚರಿಸದಿರಬಹುದು ಆದರೆ ಅಂತರಂಗದಲ್ಲಿ ಸಿಗುವ ಸಂತೃಪ್ತ ಗೆಲುವು ಅದು ಅವರದ್ದೇ ಆಗಿರುತ್ತದೆ. ತನ್ನ ಮನೆಯ ಸಮೃದ್ಧ ಕುಟುಂಬದಲ್ಲಿ ಹಿರಿಯರಾಗಿದ್ದು ಇಂದಿಗೂ ಮರಿಮಕ್ಕಳೊಂದಿಗೆ ಅವರಿಗಿರುವ ಅತ್ಮೀಯತೆ ಆ ಕಾಳಜಿ, ಮಕ್ಕಳು ಮರಿಮಕ್ಕಳೂ ಒಂದೇ ಮನೆಯಲ್ಲಿ ಅತ್ಮೀಯವಾಗಿ ಸಾಗುವ ಅವರ ಕೌಟುಂಬಿಕ ಜೀವನ ಯಶಸ್ವೀ ಕುಟುಂಬ ಜೀವನದ ದ್ಯೋತಕ. ಇಷ್ಟೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಬಲಿಪ್ಪಜ್ಜನಿಗೆ ಈಗ ಎಪ್ಪತ್ತೈದರ ಹರಯ. ಈ ಇಳಿವಯಸ್ಸಿನಲ್ಲೂ ಯಕ್ಷಗಾನದ ಅವರ ಹುಮ್ಮಸ್ಸು ನೋಡಬೇಕು. ಅಭಿಮಾನಿಗಳು ಕರೆದು ಎರಡು ಪದದ ಅದೂ ವೀರ ರಸದ ಏರಿ ಪದಗಳ ಬೇಡಿಕೆ ಇಟ್ಟರೆ, ಇವರು ನಾಲ್ಕು ಪದ ಹಾಡಿ ಸಾಕೋ ಅಂತ ಕೇಳಿ ಅಭಿಮಾನಿಗಳ ಹೃದಯಕ್ಕೆ ಸದ್ದಿಲ್ಲದೇ ಲಗ್ಗೆ ಹಾಕುತ್ತಾರೆ.

ಐವತ್ತಕ್ಕೂ ಮಿಕ್ಕೆ ವರ್ಷಗಳನ್ನು ರಂಗಸ್ಥಳದಲ್ಲಿ ಜಾಗಟೆ ಹಿಡಿದು ಕಳೆದಿದ್ದಾರೆ. ಅದೆಂತಹ ರಂಗಾನುಭವಗಳು? ಗಾಬರಿಯಾಗುತ್ತದೆ. ಒಂದೆರಡು ಘಂಟೆ ಅವರೊಂದಿಗೆ ಕಳೆದರೆ ಗಂಧ ತೇದು ಪರಿಮಳ ಹರಡಿದಂತೆ ನೆನಪಿನ ಸುರುಳಿಗಳು ಬಿಚ್ಚತೊಡಗುತ್ತವೆ. ಬಲಿಪ್ಪಜ್ಜನ ಮನಸ್ಸು ಮಾತ್ರ ಮುಗ್ಧ, ಅವರು ಪ್ರಪಂಚವನ್ನು ಕಂಡ ದೃಷ್ಟಿ ಮುಗ್ದವಲ್ಲ ಎಂದನಿಸುತ್ತದೆ. ಕಲಾಪ್ರಪಂಚವೆಂದರೆ ಸಹಜವಾಗಿ ಮತ್ಸರ ಈರ್ಷ್ಯೆ ರಾಜಕೀಯ ವಿವಾದಗಳಿಂದ ತುಂಬಿರುತ್ತದೆ. ಆದರೆ ಇಷ್ಟು ಸುದೀರ್ಘ ಕಲಾ ಜೀವನದಲ್ಲಿ ಬಲಿಪ್ಪಜ್ಜ ಇದೆಲ್ಲದರಿಂದಲೂ ದೂರವಾಗಿ ನಿಂತವರು. ಇಂದಿಗೂ ಬಲಿಪ್ಪರು ಅಜಾತ ಶತ್ರುಗಳು ಎಂದರೆ ಅತಿಶಯವಲ್ಲ. ಸುಮ್ಮನೇ ಮುಖಸ್ತುತಿಗೆ ಹೇಳುವ ಮಾತಲ್ಲವದು. ಅದು ವಾಸ್ತವಕ್ಕೆ ಹಿಡಿದ ಕನ್ನಡಿ.

ಇಂತಹ ಬಲಿಪ್ಪಜ್ಜನಿಗೆ ಎಪ್ಪತ್ತೈದು ತುಂಬಿತೆಂದರೆ, ಸಂಭ್ರಮದಿಂದ ತಮ್ಮ ಕರ್ತವ್ಯ ನಿರ್ವಹಿಸಲು ಟೊಂಕ ಕಟ್ಟಿ ಹೊರಟಿದ್ದಾರೆ ನೋಡಿ ಸ್ವಕ್ಷೇತ್ರ ಮೂಡಬಿದ್ರೆಯ ಅಭಿಮಾನಿಗಳು. . “ ಬಲಿಪ ನಾರಾಯಣ ಭಾಗವತ 75” ಎಂಬ ಶಿರೋನಾಮೆಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಯಕ್ಷಗಾನ ಪ್ರಪಂಚದ ಮಹನೀಯರು ಊರ ಪರವೂರ ಅಭಿಮಾನಿಗಳು, ಯಕ್ಷಗಾನ ರಸಿಕರು ಒಂದಾಗಿ ಈ ಕಾರ್ಯದಲ್ಲಿ ತೊಡಗಿ ದೀಪದ ಮೊದಲ ಎಳೆಯನ್ನು ಉರಿಸಿ ಆಗಿದೆ. ಸಂಪೂರ್ಣ ದೀಪ ಉರಿಯಲು ಅಭಿಮಾನಿಗಳು ಹಸ್ತ ಚಾಚಿ ಭಾಗವತರ 75 ನ್ನು ಸ್ಮರಣೀಯವಾಗಿಸಬೇಕು. ಭಗವತ್ ವಚನವನ್ನು ತಲುಪಿಸುವವನು ಭಾಗವತ ಎಂದರೂ ಸರಿಯೆ. ಗಡಿಯಾರದ ಮುಳ್ಳಿನಂತೆ ಉದಾತ್ತ ಧ್ಯೇಯೋದ್ದೇಶಗಳನ್ನು ತಮಗರಿಯದೇ ತಮ್ಮ ನಡೆ ನುಡಿಯಲ್ಲಿ ತೋರಿಕೊಟ್ಟ ಆ ಸನ್ನಡತೆ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸೋಣ. ನಮ್ಮೆದೆಯ ಅಭಿಮಾನಕ್ಕೆ ನಾವು ಮೌಲ್ಯ ಕಟ್ಟುವ ಹಾಗಿಲ್ಲ. ಆದರೂ ಅಷ್ಟೋ ಇಷ್ಟೋ ಒಂದು ಆಟದ ಹುಚ್ಚಿಗೆ ವ್ಯಯಿಸುತ್ತೇವೆ ಎಂಬ ಭಾವಕ್ಕಿಂತ ಮಿಗಿಲಾಗಿ ಇನ್ನೇನೋ ನಿರ್ವಿಕಲ್ಪ ಭಾವವೊಂದಿದೆ ಎಂದು ಕೈ ಯಲ್ಲ ಬೆರಳ ತುದಿಯಿಂದಲಾದರೂ ಯೋಜನೆಗೆ ಸಹಾಯ ಹಸ್ತ ಚಾಚುವ.*****************************

ಸ೦ಪೂರ್ಣ ವಿವರ...ಸ೦ಪೂರ್ಣ ವಿವರ...
ಕೃಪೆ : http://yakshachintana.blogspot.in/


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ