ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಕರ್ನಾಟಕ ರಾಜ್ಯದ ಅಘೋಷಿತ ಸಾಂಸ್ಕೃತಿಕ ರಾಯಭಾರಿ - ಡಾ.ಎಂ.ಮೋಹನ ಆಳ್ವ

ಲೇಖಕರು : ಧನಂಜಯ, ಮೂಡುಬಿದಿರೆ
ಭಾನುವಾರ, ಜನವರಿ 12 , 2014

ಸಂಸೃತಿ ಚೈತನ್ಯ ಡಾ.ಎಂ.ಮೋಹನ ಆಳ್ವ ನಿಜಕ್ಕೂ ಒಂದು ಪವಾಡ. ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿ ಕಲೆ, ಸಾಹಿತ್ಯದಲ್ಲಿ ಯಾವುದೇ ರೀತಿಯ ಹಿನ್ನೆಲೆ ಇಲ್ಲದೆ ಆರ್ಥಿಕವಾಗಿ ಕೂಡ ಈ ಎಲ್ಲಾ ವಿಷಯಗಳಿಗೆ ಅಷ್ಟೊಂದು ಪ್ರೋತ್ಸಾಹ ಇಲ್ಲದೇ ಇದ್ದರೂ, ಇಷ್ಟೆಲ್ಲ ಸಾಧನೆಯನ್ನು ಒಬ್ಬ ವ್ಯಕ್ತಿ ಮಾಡುವುದೆಂದರೆ ಅದು ಪವಾಡವಲ್ಲದೆ ಇನ್ನೇನು. ಬಹುಶ: ಕಳೆದು ಹೋದ ಅಲ್ಲಾವುದ್ದೀನನ ಅದ್ಬುತ ದೀಪ ಇವರಿಗೆ ಸಿಕ್ಕಿರಬೇಕು. ಆದುರಿಂದಲೇ ಇವರು ಇಷ್ಟೊಂದು ಸಾಧನೆಗಳನ್ನು ಮಾಡುತ್ತಿದ್ದಾರೆ ಎ೦ದೆನಿಸುತಿದೆ. ಎಲ್ಲಾ ವಿಷಯಗಳಲ್ಲಿ ಕಿರಿಯರೊಂದಿಗೆ ಕಿರಿಯರಾಗಿ ಹಿರಿಯರೊಂದಿಗೆ ಹಿರಿಯರಾಗಿ ತಮ್ಮ ಕೆಲಸಗಳನ್ನು ಮಾಡುತ್ತಾ ಜೊತೆಗಿದ್ದವರನ್ನೂ ಕೂಡ ತಮ್ಮೊಡನೆ ಪಾಲ್ಗೊಳ್ಳುವಂತೆ ಮಾಡುವ ಕಲೆ ಇವರಿಗೆ ಸಿದ್ದಿಸಿದೆ.

ಬಾಲ್ಯ , ಶಿಕ್ಷಣ

ಮಿಜಾರುಗುತ್ತು ಆನಂದ ಆಳ್ವ -ಸುಂದರಿ ಆಳ್ವರ ಕೊನೆಯ ಪುತ್ರರಾಗಿ 1952ರ ಮೇ 31ರಂದು ಜನಿಸಿದ ಮೋಹನ ಆಳ್ವರು ಮೂಲತಃ ಆಯುರ್ವೇದ ವೈದ್ಯರು. ಮೂಡುಬಿದಿರೆಯಲ್ಲಿ ಪುಟ್ಟ ಕ್ಲಿನಿಕ್ ತೆರೆದು ರೋಗಿಗಳಿಗೆ ಮದ್ದು ನೀಡಲಾರಂಭಿಸಿದ್ದ ಅವರು ವೃತ್ತಿಯ ಜತೆಗೆ ಪ್ರವೃತ್ತಿಯನ್ನೆಲ್ಲ ನಿರಂತರ ವಿಸ್ತರಿಸಿಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಸಾಮಾಜಿಕ , ಸಾಂಸ್ಕೃತಿಕ ಚಿಕಿತ್ಸಕನಾಗಿ ಬೆಳೆದಿದ್ದಾರೆ. ಅವರ ಸಾಹಿತ್ಯ ಪ್ರೇಮ, ಸಾಂಸ್ಕೃತಿಕ ಸಂಘಟನೆ,ಶಿಸ್ತು, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೀಗೆ ಸೃಜನ ಶೀಲತೆಯ ಔಷದ ಸೇವಿಸಿ ಜೀವನೊಲ್ಲಾಸವನ್ನುಂಡವರ ಸಂಖ್ಯೆ ಲೆಕ್ಕಕ್ಕೆ ಸಿಗುವುದು ಕಷ್ಟವಿದೆ.ವಿರಾಸತ್, ನುಡಿಸಿರಿಗಳ ಮೂಲಕ ಇನ್ನೊಂದೆಡೆ ಶಿಕ್ಷಣ, ಆರೋಗ್ಯ,ಕ್ರೀಡೆ ಹೀಗೆ ಬಹುಮುಖೀ ಸಾಧಕರಾಗಿ ರಾಜ್ಯದ ಅಘೋಷಿತ ಸಾಂಸ್ಕೃತಿಕ ರಾಯಭಾರಿಯಂತಿರುವ ಡಾ. ಮೋಹನ ಆಳ್ವರ ಸೇವೆ, ಸಾಧನೆ ನಿಜಕ್ಕೂ ರಾಷ್ಟ್ರಮಟ್ಟಕ್ಕೊಂದು ಮಾದರಿ.

ಎಲ್ಲವೂ ಇವರ ತಂದೆ ಕೃಷಿಕ ಮಿಜಾರುಗುತ್ತು ಆನಂದ ಆಳ್ವರು ಎಣಿಸಿದಂತೆ ನಡೆದಿದ್ದರೆ ಅವರ ಕೊನೇಯ ಮಗ ಮೋಹನ ತಮ್ಮ ಕೃಷಿ ಕೆಲಸದ ಉತ್ತರಾಧಿಕಾರಿಯಾಗಿ ಜತೆಗೆ ಹಳ್ಳಿಜನರಿಗೆ ಮದ್ದು ನೀಡುವ ಆಯುರ್ವೇದದ ಡಾಕ್ಟ್ರಾಗಿರಬೇಕಿತ್ತು. ಆದರೆ ತನ್ನೊಳಗಿನ ಕಲಾಸಕ್ತಿಗೆ ಶರಣಾದ ಮೋಹನ ಆಳ್ವರು ತನ್ನದೇ ಹಾದಿ ತುಳಿದರು.. ಬೆಳೆದರು.. ಸಾಧಕರಾಗಿ ಅರಳಿದರು. ನಿಜಕ್ಕೂ ಅವರ ಜೀವನ ಸಾಧನೆ ಒಂದು ಅಪರೂಪದ ಯಶೋಗಾಥೆ.

ಮೋಹನ ಆಳ್ವರು ಹುಟ್ಟು ಕೃಷಿಕರು. ಅವರಿಗೆ ಉಳುಮೆ ಗೊತ್ತು. ಬರೇ ಹೊಲವಲ್ಲ. ಜೀವನದಲ್ಲಿ ಇದಿರಾದ ಬಹುಬಗೆಯ "ಕ್ಷೇತ್ರ"ಗಳಲ್ಲೂ ಅವರು ಉಳುಮೆ ಮಾಡುತ್ತ ಬಂದವರು. ಕನಸುಗಳನ್ನು ಬಿತ್ತಿದವರು, ನೆಟ್ಟವರು. ಉತ್ತಮ ಫಲ, ಫಸಲು ಪಡೆದವರು. ಇದರ ಸತ್ಪಲ ತಮಗೆ ಮಾತ್ರವಲ್ಲ ಲೋಕದ ಮಂದಿಗೂ ಲಭಿಸುವಂತೆ ಮಾಡುತ್ತಲೇ ಇರುವ ದೊಡ್ಡ ಗುಣ ಆಳ್ವರಲ್ಲಿ ಕಾಣುತ್ತಿದೆ. ಹಿಡಿದದ್ದೇ ಹಾದಿ, ಹೋದದ್ದೇ ಗುರಿ ಎಂಬಂಥ ಸ್ಥಿತಿ. ಹಾಗಾಗಿಯೇ ಅವರು ವೈದ್ಯರಾಗಲು ಮನಸ್ಸು ಮಾಡಿದ್ದು ಕೊಂಚ ವಿಳಂಬವಾಗಿಯೇ. ಆದರೆ, ಅಯುರ್ವೇದ ವೈದ್ಯರಾಗಿ ಉಡುಪಿ ಎಸ್ ಡಿ ಎಂ. ಆಯುರ್ವೇದ ಕಾಲೇಜಿನಿಂದ 1981ರಲ್ಲಿ ಹೊರಬೀಳುವಾಗ ಅಳ್ವರ ಕೈಯಲ್ಲಿ ರ‍್ಯಾ೦ಕ್ ಇತ್ತು !

ಕಲಿಕೆ ಹಂಬಲ

ಕಲಿಕೆಯ ಹಂಬಲ ಮೋಹನ ಆಳ್ವರನ್ನು ಏನೇನೆಲ್ಲವನ್ನು ಕಲಿಯಲು ಉತ್ತೇಜಿಸಿತು ಎಂದರೆ ಈಗಿನ ಮಕ್ಕಳು ಬೆಕ್ಕಸ ಬೆರಗಾಗಬೇಕು. ಆಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯಾಚಾರ್ಯ ಮಾಸ್ಟರ್ ವಿಠಲ್ ಅವರಿಂದ ಭರತನಾಟ್ಯ ಕಲಿತರು. ಪ್ರಸ್ತುತ ಪಡಿಸಿದ್ದು ಕೆಲವೇ ಕೆಲವು ನೃತ್ಯಗಳಾದರೂ ಅದರೊಳಗಿನ ಸೂಕ್ಷ್ಮ ಭಾವ ಪ್ರಸ್ತುತಿಯ ಮೋಡಿಗೆ ಯಾರಾದರೂ ಮಾರು ಹೋಗಲೇ ಬೇಕು. ಈಗಲೂ ಆಳ್ವರು ಗೆಜ್ಜೆ ಕಟ್ಟಿ ಕುಣಿಯುವ ಹುಮ್ಮಸ್ಸುಳ್ಳವರು. ಉಡುಪಿಯಲ್ಲಿರುವಾಗ ಸಂಧ್ಯಾ ಪೈ ಅವರಿಂದ ಇಕೆಬಾನ ಕಲಿತರು. ಬೋನ್ಸಾಯ್ಯನ್ನೂ ಪರಿಚಯಿಸಿಕೊಂಡರು, ರಂಗೋಲಿಯನ್ನೂ ಕೈ ವಶಮಾಡಿಕೊಂಡರು. ಬಿ. ಆರ್. ನಾಗೇಶ್, ಉದ್ಯಾವರ ಮಾಧವ ಆಚಾರ್ಯರೇ ಮೊದಲಾದವರಿಂದ ನಾಟಕರಂಗದಲ್ಲೂ ಮಿಂಚಿದರು. ವಿದ್ಯಾರ್ಥಿಯಾಗಿರುವಾಗಲೇ ಸಾಲ ಮಾಡಿ ಲಾರಿಯನ್ನು ಬಾಡಿಗೆಗೆ ಓಡಿಸುವ ವ್ಯವಹಾರವನ್ನೂ ನಡೆಸಿದರು. ಕಲೆ, ಕ್ರೀಡೆ ಅದು ಇದು ಇನ್ನೊಂದು ಮತ್ತೊಂದು ಎಲ್ಲವನ್ನೂ ಕರಗತ ಮಾಡಿಕೊಳ್ಳುತ್ತಲೇ ಮುನ್ನಡೆದರು. ಇಂಥದ್ದೆಲ್ಲ ಸಾಧ್ಯವಾಗುವುದು ಮೋಹನ ಆಳ್ವ ಎಂಬ ದಿಟ್ಟ ಸಾಹಸಿ, ಎಲ್ಲದಕ್ಕೂ ತೆರೆದುಕೊಳ್ಳುವ ಮನಸ್ಸುಳ್ಳವರಿಗೆ ಮಾತ್ರವೇನೋ.

ಆಯುರ್ವೇದ ಪದವಿಯ ಅಂತಿಮ ವರ್ಷದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಳ್ವರು ಪಡೆದ ಪ್ರಶಸ್ತಿಗಳ ಸಂಖ್ಯೆ ನೂರಕ್ಕೂ ಅಧಿಕ! ಇಂಗ್ಲೆಂಡಿನ ಅಕ್ಸ್ ಫರ್ಡ್ ವಿವಿ ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ "ಬೆಸ್ಟ್ ಟ್ಯಾಲೆಂಟೆಡ್ ಯೂತ್ (1980)" ಎಂದು ಸಾರಿದ್ದು ಸಣ್ಣ ಸಂಗತಿಯೇನಲ್ಲ.

ಡಾ.ಎಂ.ಮೋಹನ ಆಳ್ವ
ಜನನ : ಮೇ 31, 1952
ಜನನ ಸ್ಥಳ : ಮಿಜಾರುಗುತ್ತು, ಮಿಜಾರು ಅ೦ಚೆ
ಮೂಡಬಿದಿರೆ, ಮ೦ಗಳೂರು
ಕರ್ನಾಟಕ ರಾಜ್ಯ

ವೃತ್ತಿ, ಪ್ರವೃತ್ತಿ, ಸಾಧನೆ:
ಸಾಮಾನ್ಯ ಕೃಷಿಕರೊಬ್ಬರ ಅಸಾಮಾನ್ಯ ಸಾಧನೆಗೆ ಜ್ವಲ೦ತ ಉದಾಹರಣೆ. ''ಆಳ್ವಾಸ್ ವಿದ್ಯಾಸ೦ಸ್ಥೆ`` ಹಾಗೂ ``ಆಳ್ವಾಸ್ ವಿರಾಸತ್ ನುಡಿಸಿರಿ``ಗಳಿ೦ದ ಮೂಡಬಿದಿರೆಯನ್ನು ಪ್ರಪ೦ಚಕ್ಕೆ ಪರಿಚಯಿಸಿದ ಸಾಧಕ. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸ್ಥಾಪಕ.

ಪ್ರಶಸ್ತಿಗಳು:
 • 1980 - ಜಗತ್ತಿನ ಯುವ ಅತ್ಯುತ್ತಮ ಪ್ರತಿಭೆ, ಆಕ್ಸ್ಫರ್ಡ್ ಯೂನಿವರ್ಸಿಟಿ , ಯು.ಕೆ.
 • 1998 - ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
 • 2000 - ಆರ್ಯಭಟ ರಜತ ಪ್ರಶಸ್ತಿ
 • 2005 - ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
 • 2001 - ಶ್ರೀ.ಎ೦.ವಿಶ್ವೇಶ್ವರಯ್ಯ ಪ್ರಶಸ್ತಿ
 • ಶಿವರಾಮ ಕಾರ೦ತ ಪ್ರಶಸ್ತಿ, ಡಾ. ಪಿ.ಎಸ್. ಶ೦ಕರ ವೈದ್ಯಶ್ರೀ ಪ್ರಶಸ್ತಿಗಳೂ ಸೇರಿದ೦ತೆ ಹಲಾವ್ರು ಸ೦ಘ-ಸ೦ಸ್ಥೆಗಳಿ೦ದ ಪ್ರಶಸ್ತಿಗಳು ಹಾಗೂ ಸನ್ಮಾನ.


ವಿಳಾಸ:


ಸುದೂರ ದೃಷ್ಟಿ

ಮೋಹನ ಆಳ್ವರು ತಮ್ಮ ಮನಸ್ಸು ಮಾಡಿದ್ದರೆ ನಗರದಲ್ಲಿ ವೃತ್ತಿ ಜೀವನ ಪ್ರಾರಂಭಿಸಬಹುದಿತ್ತು. ಆದರೆ ಹುಟ್ಟೂರು ಮತ್ತು ಸಮೀಪದ ದೊಡ್ಡ ಊರು ಮೂಡುಬಿದಿರೆಯ ಬಗ್ಗೆ ಮೋಹನನಿಗೆ ಅದೇನೋ ಮೋಹ. ಹಾಗಾಗಿ ಮೂಡುಬಿದಿರೆಯಲ್ಲಿ ಪುಟ್ಟ ಕ್ಲಿನಿಕ್ ಆರಂಭಿಸಿದ ಮೋಹನ ಆಳ್ವರು ಮಿಜಾರಿನಲ್ಲಿ ಆಯುರ್ವೇದ ಔಷಧಿ ತಯಾರಿಕಾ ಘಟಕ " ಆಳ್ವಾ ಫಾರ್ಮಸಿ’ ಆರಂಭಿಸಿಯೇ ಬಿಟ್ಟರು. ಮೂಡುಬಿದಿರೆಯಲ್ಲಿ ಹೇಳಿಕೊಳ್ಳುವ ಆಸ್ಪತ್ರೆಯಾಗಲೀ ವಿವಿಧ ವಿಷಯಗಳಲ್ಲಿ ತಜ್ಙರಾದ ವೈದ್ಯರಾಗಲೀ ಇರದ ಮೂವತ್ತು ವರ್ಷಗಳ ಹಿಂದೋಡುವ ಆ ಕಾಲದಲ್ಲಿ ಆಳ್ವರು ದೊಡ್ಡ ಮನಸ್ಸು ಮಾಡಿ ’ಆಳ್ವಾಸ್ ಹೆಲ್ತ್ ಸೆಂಟರ್ ’ ಆರಂಭಿಸಿದ್ದು ದೊಡ್ಡ ಸಂಗತಿ. ಇವತ್ತು ಸುವ್ಯವಸ್ಥಿತವಾಗಿ ಆಸವ, ಅರಿಷ್ಟ, ಲೇಹ್ಯ, ಕಷಾಯಗಳು, ತೈಲ, ಚೂರ್ಣಗಳನ್ನು ತಯಾರಿಸುವ ಆಳ್ವಾ ಫಾರ್ಮಸಿಯ 21ಕ್ಕೂ ಅಧಿಕ ಉತ್ಪನ್ನಗಳು ಭಾರತದಾದ್ಯಂತ ಮಾತ್ರವಲ್ಲ ಜಪಾನ್, ಸ್ವಿಟ್ಸರ್ ಲ್ಯಾಂಡ್, ಲಂಡನ್, ಮಧ್ಯಪ್ರಾಚ್ಯ ದೇಶಗಳಿಗೂ ರಫ್ತಾಗುತ್ತಿರುವುದು ಮೂಡುಬಿದಿರೆಯವರಿಗೆ ಹೆಮ್ಮೆಯ ಸಂಗತಿ; ಉದ್ಯಮಶೀಲ ಸ್ವದೇಶೀ ಚಿಂತಕರಿಗೆ ಅಧ್ಯಯನ ಯೋಗ್ಯ ವಿಷಯ.

ರಂಗ ಸಂಗಮ

ಮೂಡುಬಿದಿರೆಯಲ್ಲಿ 28 ವರ್ಷಗಳ ಹಿಂದೆ " ಹೊಸ ಸಾಂಸ್ಕೃತಿಕ ಎಚ್ಚರಕ್ಕಾಗಿ’ ಸಮಾನ ಮನಸ್ಕರನ್ನು ಒಂದುಗೂಡಿಸಿ "ರಂಗ ಸಂಗಮ’ವನ್ನು ಹುಟ್ಟು ಹಾಕಿ ತೀರಾ ಸಾಂಕೇತಿಕ ಮೊತ್ತದಲ್ಲಿ ವಿಶ್ವ ವಿಖ್ಯಾತ ಕಲಾವಿದರ/ತಂಡಗಳ ಕಾರ್ಯಕ್ರಮ ವೀಕ್ಷಣೆಗೆ ಸಾಧ್ಯ ಮಾಡಿಕೊಟ್ಟದ್ದು ಡಾ. ಮೋಹನ ಆಳ್ವರು. ಇಂದಿಗೆ ಸುಮಾರು 26 ವರ್ಷಗಳ ಹಿಂದೆ ಮೋಹನ ಆಳ್ವರು "ಏಕಲವ್ಯ ಕ್ರೀಡಾ ಸಂಸ್ಥೆ" ಆರಂಭಿಸಿ, ಒಂದಷ್ಟು ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ, ವಸತಿ, ತರಬೇತಿ, ಅಹಾರ ಮತ್ತಿನ್ನೊಂದು ಎಲ್ಲ ಕೊಡಿಸಲು ಮುಂದಾದ ಕಾಲ ಆಗ ಆಳ್ವರ ಕೈಯಲ್ಲಿ ಏನಿತ್ತು? ಹಣಕಾಸು ಪರಿಸ್ಥಿತಿ ಹೇಗಿತ್ತು ಎಂಬುದನ್ನು ಬಲ್ಲವರೇ ಬಲ್ಲರು. ಆದರೆ ಅವರಲ್ಲಿ ಸಂಕಲ್ಪ ಶಕ್ತಿ ಇತ್ತು. ಈ ಸಂಕಲ್ಪ ಶಕ್ತಿ, ಮನಸ್ಸು ಆಳ್ವರನ್ನು ಇಂದಿನ ಸ್ಥಿತಿಗೇರಿಸಿ ನಿಲ್ಲಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಸ್ಪಿಕ್ ಮೆಕೆ ವಿರಾಸತ್

ವಿದ್ಯಾರ್ಥಿವಲಯದೊಳಗೆ ದೇಶೀಯ ಸಾಂಸ್ಕೃತಿಕ ವೈಭವವನ್ನು ಉಣಬಡಿಸುವ ಸ್ಪಿಕ್ ಮೆಕೆ ವಿರಾಸತ್ ನ್ನು, ಯಾವುದೇ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕುವ ಮುನ್ನವೇ, ಮಹಾವೀರ ಕಾಲೇಜಿನ ಆಶ್ರಯದಲ್ಲಿ ನಡೆಸತೊಡಗಿದ್ದು, ಕಾಲ ಸರಿದಂತೆ ಸಾರ್ವಜನಿಕರ ಪ್ರವೇಶ ಹೆಚ್ಚಾದ ಕಾರಣ ಸ್ಪಿಕ್ ಮೆಕೆಯೊಂದಿಗೆ ಸಂಸರ್ಗ ನೀಗಿಕೊಂಡು "ಅಳ್ವಾಸ್ ವಿರಾಸತ್ ’ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ನಾಂದಿ ಹಾಡಿದ್ದು, ಊರು ಪರವೂರುಗಳ ಕಲಾಭಿಮಾನಿಗಳಿಗೆ ಉನ್ನತ ಸಾಂಸ್ಕೃತಿಕ ಕಲಾಪಗಳನ್ನು ವೀಕ್ಷಿಸುವ ಭಾಗ್ಯ ಪ್ರಾಪ್ತಿಯಾದದ್ದು ಎಲ್ಲವೂ ಡಾ. ಅಳ್ವರ ಕಾರುಬಾರಿನ ಕಥೆ.

ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್

1995ರಿಂದ ಪ್ರಾರಂಭವಾದ ಅಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಲಕ ಕೇವಲ 28 ವಿದ್ಯಾರ್ಥಿಗಳೊಂದಿಗೆ ಎರಡು ಕೋರ್ಸ್ ಗಳಲ್ಲಿ ಆರಂಭ ಕಂಡ ಆಳ್ವಾಸ್ ಕಾಲೇಜು ಈಗ ತನ್ನ ಆವರಣದಲ್ಲಿ 18 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಜ್ಞಾನ ಸಂಗಮ, ಸ್ಥಳೀಯರೂ ಸೇರಿದಂತೆ ದೇಶ ವಿದೇಶದ ವಿದ್ಯಾರ್ಥಿಗಳ ಸಂಗಮ. ಹೈಸ್ಕೂಲಿನಿಂದ ಹೈಯರ್ ಎಜುಕೇಶನ್ವರೆಗಿನ ವರೆಗೆ ಒಂದೇ ಸೂರಿನಡಿ ಕಲಿಕೆಗೆ ಅವಕಾಶ. ಹತ್ತಿರ ಹತ್ತಿರ 18,000 ವಿದ್ಯಾರ್ಥಿಗಳಿಲ್ಲಿದ್ದಾರೆಂದರೆ ಪ್ರಾಯ: ದೇಶದಲ್ಲೇ ಒಂದು ದಾಖಲೆ. ಅದರಲ್ಲೂ ಪಿಯುಸಿಯಲ್ಲೇ 8,000 ಮಂದಿ ಒದುತ್ತಿರುವುದು ಇನ್ನೊಂದು ದಾಖಲೆ. ಕಲಿಕೆ, ಕಲೆ, ಕ್ರೀಡೆ ಮೊದಲಾದ ವಿಭಾಗಗಳಲ್ಲಿ ಆರ್ಹ ಫಲಾನುಭವಿಗಳಾಗಿರುವ ಸುಮಾರು 3,000 ಮಂದಿಗೆ ಉಚಿತ ಶಿಕ್ಷಣದ ಸೌಭಾಗ್ಯ. ಆಳ್ವರು ದತ್ತು ಸ್ವೀಕರಿಸಿರುವ ಕ್ರೀಡಾ ವಿದ್ಯಾರ್ಥಿಗಳು ಸ್ವರಾಜ್ಯ ಮೈದಾನಕ್ಕೆ ನಿತ್ಯ ಬೆಳಗು-ಬೈಗು ಜೀವ ತುಂಬುವುದನ್ನು ನೋಡಲೇ ಬೇಕು.

ಪರೀಕ್ಷಾ ಫಲಿತಾಂಶದಲ್ಲಿ, ಕ್ರೀಡೆಯಲ್ಲಿ, ಸಾಂಸ್ಕೃತಿಕ ಉತ್ಸವಗಳಲ್ಲಿ ಆಳ್ವಾಸ್ ಮುಂಚೂಣಿಯಲ್ಲಿದ್ದರೆ ಅದು ಆಳ್ವರ ತಪಸ್ಸಿನ ಫಲ. ಕನಿಷ್ಠ ತಾಲೂಕು ಕೇಂದ್ರವೂ ಅಲ್ಲದ ಮೂಡುಬಿದಿರೆಯನ್ನು ಶಿಕ್ಷಣದಲ್ಲಿ ಮಿನಿ ಭಾರತವಾಗಿ ರೂಪಿಸಿ ಜ್ಞಾನಕಾಶಿಯನ್ನಾಗಿಸಿದ, ಸಾಂಸ್ಕೃತಿಕ ಲೋಕದ ಕ್ರಾಂತಿಯ ಮೂಲಕ ಜಗದಗಲ ಮೂಡುಬಿದಿರೆಯ ಕೀರ್ತಿಯನ್ನು ಬೆಳಗಿಸಿದ ಹಿರಿಮೆ ಆಳ್ವರದ್ದು.

ಹೊತ್ತು ಕಳೆಯುತ್ತಿದ್ದಂತೆ ಒಂದೆಡೆ ಗಾನ ಸುಧೆ, ಇನ್ನೊಂದೆಡೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವ ಮಕ್ಕಳು, ಗಂಡು ಕಲೆ ಯಕ್ಷಗಾನವನ್ನೂಕಲಿಯುವ ಹೆಣ್ಣು ಮಕ್ಕಳು, ನಿರಂತರ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿರುವ ಸಾಂಸ್ಕೃತಿಕ ಪ್ರತಿಭೆಗಳು, ಕ್ರೀಡೆಯ ಮಕ್ಕಳು ಹೀಗೆ ಕಾಲೇಜಿನ ಗಂಟೆ ಬಾರಿಸಿದ ನಂತರವೂ ಆಳ್ವಾಸ್ ಕ್ಯಾಂಪಸ್ ನಲ್ಲಿ ನಿರಂತರ ಕಾರ್ಯಕ್ರಮಗಳು.

ಕರ್ಣಾಟಕಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ, ಕಥಕ್, ಮಣಿಪುರಿ, ಒಡಿಸ್ಸಿ, ಶ್ರೀಲಂಕಾ ಮೊದಲಾದ ಶಾಸ್ತ್ರೀಯ ನೃತ್ಯಗಳು, ಆಂಧ್ರಪ್ರದೇಶದ ಬಂಜಾರ, ಕರ್ನಾಟಕದ ವೀರಗಾಸೆ, ಕಂಸಾಳೆ, ಕೇರಳದ ಒಪ್ಪನ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಧೋಲ್ ಚಲೋ, ಪ. ಬಂಗಾಳ ಪುರೂಲಿಯ ಛಾವೋ ಇಂಥ ಜಾನಪದ ನೃತ್ಯಗಳು, ಈಶಾನ್ಯ ಭಾರತದ ಸಮರ ಕಲೆ, ವಾದನ ವೈವಿಧ್ಯ, ನಾಟಕ, ತೆಂಕು ಬಡಗು ಯಕ್ಷಗಾನ-ಹೀಗೆ ವಿದ್ಯಾರ್ಥಿಗಳಿಗೆ ಪರಿಣತರಿಂದ ತರಬೇತಿ ಕೊಡಿಸಿ ವೃತ್ತಿಪರರಿಗೂ ಸರಿಮಿಗಿಲೆನಿಸುವ ತಂಡಗಳನ್ನು ರೂಪಿಸುವ ಕಾರ್ಯ ಇಲ್ಲಿ ನಡೆಯುತ್ತಲೇ ಇದೆ.

ದೇಶಪ್ರಸಿದ್ಧರಾದ ಆಶೀಂಬಂಧು ಭಟ್ಟಾಚಾರ್ಯ, ನಿರುಪಮಾ ರಾಜೇಂದ್ರ, ಬೀಜಾಯಿನಿ ಸತ್ಪತಿ, ಚೀನೀ ಬಸು ಮೆಹತಾ, ಚಂದ್ರಶೇಖರ ನಾವಡ, ದೀಪಕ್ ಕುಮಾರ್ ಪುತ್ತೂರು, ದಿವ್ಯಸೇನ ಚೆನ್ನೈ, ಮಂಟಪ ಪ್ರಭಾಕರ ಉಪಾಧ್ಯ , ಜೀವನ್ ರಾಂ ಸುಳ್ಯ , ಸುಜಾತಾ ಮೊದಲಾದವರು ಇಲ್ಲಿ ಗುರುಗಳಾಗಿ ಯುವ ಕಲಾವಿದರನ್ನು ತಯಾರು ಮಾಡಿದ್ದಾರೆ. ಹೀಗೆ ತಯಾರಾದ ಯುವ ಕಲಾಭ್ಯಾಸಿಗಳು ನಾಡಿನೆಲ್ಲೆಡೆ ಅಷ್ಟೇ ಏಕೆ ದೂರದ ಗಲ್ಫ್ ರಾಷ್ಟ್ರಗಳಲ್ಲೂ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಹಾಗಾಗಿ ಸಂಜೆಯ ನಂತರವೂ ಇಲ್ಲಿನ ಕಾಲೇಜಿನ ಆವರಣ ಬರೇ ಕಾಂಕ್ರೀಟು ಕಟ್ಟಡಗಳ ಸಮುಚ್ಛಯವಾಗಿ ಉಳಿಯದೇ ಜೀವಕಳೆಯಿಂದ ಬೆಳಗುತ್ತಲೇ ಇರುತ್ತದೆ.

ಯಕ್ಷಗಾನ ಕಲೆಯ ಆರಾಧಕ , ಮಹಾಪೋಷಕ

ರಾಷ್ಟ್ರೀಯ ಗಾನ-ನೃತ್ಯ ವೈಭವ, ಕನ್ನಡ ನಾಡು ನುಡಿಯ ಜೀವನಾಡಿಗಳನ್ನು ಅಚ್ಚುಕಟ್ಟಾಗಿ ಅನಾವರಣಗೊಳಿಸುವ ಪರಿಯಿಂದ ಮನೆ ಮಾತಾಗಿರುವ ಆಳ್ವಾಸ್ ನುಡಿಸಿರಿಯೂ ತನ್ನೆಲ್ಲಾ 9 ಸಮ್ಮೇಳನ ಹಾಗೂ ಈಗೀನ ವಿಶ್ವನುಡಿಸಿರಿ ವಿರಾಸತ್ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಅಗ್ರಸ್ಥಾನವನ್ನು ನೀಡಿದೆ. ಯಕ್ಷಗಾನದ ವಿವಿಧ ಮಗ್ಗುಲಗಳನ್ನು ಪಾರಂಪರಿಕ ರೀತಿಯಲ್ಲಿ ಸಾದರಪಡಿಸುವುದು ಮಾತ್ರವಲ್ಲ, ಯಕ್ಷಗಾನದ ಹೊಸ ಸಾಧ್ಯತೆಗಳನ್ನು, ಯಕ್ಷಗಾನ ಹೊಸತನದ ಮೂಲಕ ಯಾವ ರೀತಿ ಆಕರ್ಷಿಸಬಹುದು ಎನ್ನುವುದಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ನುಡಿಸಿರಿ, ವಿರಾಸತ್ ಹಾಗೂ ಯಕ್ಷಗಾನದ ಏಳಿಗೆಗೆ ನಡೆಸುತ್ತಿರುವ ಇತರ ಕೆಲಸಗಳೇ ಮಾದರಿ. ಯಕ್ಷಗಾನದ ವಿವಿಧ ಮಗ್ಗುಲಗಳನ್ನು ಪಾರಂಪರಿಕ ರೀತಿಯಲ್ಲಿ ಸಾದರಪಡಿಸುವುದು ಮಾತ್ರವಲ್ಲ, ಯಕ್ಷಗಾನದ ಹೊಸ ಸಾಧ್ಯತೆಗಳನ್ನು, ಯಕ್ಷಗಾನ ಹೊಸತನದ ಮೂಲಕ ಯಾವ ರೀತಿ ಆಕರ್ಷಿಸಬಹುದು ಎನ್ನುವುದಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ನುಡಿಸಿರಿ, ವಿರಾಸತ್ ಹಾಗೂ ಯಕ್ಷಗಾನದ ಏಳಿಗೆಗೆ ನಡೆಸುತ್ತಿರುವ ಇತರ ಕೆಲಸಗಳೇ ಮಾದರಿ.

ಕಾಲೇಜು ಕಟ್ಟಡದ ಸ್ವಾಗತಗೋಪುರದಲ್ಲಿ ಸ್ವಾಗತಿಸುವ ಶೈಲಿಯ ಯಕ್ಷಗಾನದ ಮೂರ್ತಿ ಸಹಿತ ತೆಂಕು ಹಾಗೂ ಬಡಗುತಿಟ್ಟುಗಳ ಏಳು ಮೂರ್ತಿಗಳನ್ನು ಇಡಲಾಗಿದೆ. ಇವೆಲ್ಲವೂ ವರ್ಷದ ಎಲ್ಲ ಸಮಯದಲ್ಲೂ ಕ್ಯಾಂಪಸ್ ನಲ್ಲೇ ಇದ್ದು ರಾಜ್ಯ, ದೇಶ ಹಾಗೂ ವಿದೇಶಿಗರನ್ನು ಆಕರ್ಷಿಸುತ್ತದೆ. ಇವೆಲ್ಲವೂ ಸಕಾರಗೊಂಡದ್ದು ಹಿಂದಿನ ನುಡಿಸಿರಿಯಲ್ಲೇ ಎನ್ನುವುದು ಗಮನಾರ್ಹ ಅಂಶ. ಆಳ್ವಾಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ವಿರಾಸತ್, ನುಡಿಸಿರಿ ಕಾರ್ಯಕ್ರಮಗಳಲ್ಲಿ ವೇದಿಕೆಯ ಶೃಂಗಾರ, ಗಣ್ಯರಿಗೆ ನೀಡುವ ಸ್ಮರಣಿಕೆಗಳ ಆಕಾರವೆಲ್ಲ ಯಕ್ಷಗಾನ ಕಿರೀಟ ಮಾದರಿಯಲ್ಲಿರುತ್ತದೆ. ಕೆಲವೊಂದು ಸಣ್ಣಪುಟ್ಟ ಕಾರ್ಯಕ್ರಮದಲ್ಲಿ ವೇದಿಕೆಯು ಯಕ್ಷಗಾನದ ಮುಖವರ್ಣಿಕೆ, ಕಿರೀಟ ಹಾಗೂ ಇತರ ಸೂಚಕಗಳಿರುವುದು ಕಂಡುಬರುತ್ತದೆ. ಆಮಂತ್ರಣ ಪತ್ರಿಕೆಗಳ ವಿನ್ಯಾಸಲ್ಲೂ ಯಕ್ಷಗಾನದ ಸ್ಪಶ್ರ್ಯ ಇದ್ದೇ ಇರುತ್ತದೆ. ಯಕ್ಷಗಾನವನ್ನು ಸಕಾರತ್ಮಕವಾಗಿ, ಯುವಜನರಿಗೆ ಯಾವ ರೀತಿಯಲ್ಲಿ ತಲುಪಿಸಬಹುದು ಎನ್ನುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಡಾ.ಆಳ್ವ ಅಷ್ಟೇ ನಾಜೂಕಕಾಗಿ ಅನುಷ್ಠಾನಕ್ಕೆ ತರುತ್ತಿದ್ದಾರೆ.

ಆಳ್ವಾಸ್ ಧೀಂಕಿಟ

ಪ್ರಯೋಗಗಳ ಮೂಲಕ ಯಕ್ಷಗಾನಕ್ಕೊಂದು ಹೊಸ ಆಕರ್ಷಣೆ ನೀಡುವುದು ಮಾತ್ರವಲ್ಲ, ತನ್ನ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಯಕ್ಷಗಾನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ` ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಂತರ್ ಕಾಲೇಜಿನಿಂದ ಹಿಡಿದು ರಾಜ್ಯಮಟ್ಟದ ವಿವಿಧ ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ನ ವಿದ್ಯಾರ್ಥಿಗಳು ಪ್ರದರ್ಶನ ನೀಡಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿರಿಯ ಕಲಾವಿದ ಹಾಗೂ ಯುವ ಕಲಾವಿದ ನಡುವಿನ ಕೊಂಡಿಯಾಗಿರುವ ಆಳ್ವಾಸ್ ನುಡಿಸಿರಿಯಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿ ವೃತ್ತಿಪರ ಕಲಾವಿದರ ರೀತಿಯಲ್ಲಿ ಪ್ರದರ್ಶನ ನೀಡಿದ್ದಾರೆ. ನುಡಿಸಿರಿಯಂತೆಯೇ ಈ ಅಧ್ಯಯನ ತಂಡವು ದಶಮಾನೋತ್ಸವದ ಹೊಸ್ತಿಲಿದ್ದು ಸುಮಾರು 250 ವಿದ್ಯಾರ್ಥಿಗಳು ತೆಂಕು ಹಾಗೂ ಬಡಗುತಿಟ್ಟುಗಳಲ್ಲಿ ನುರಿತ ಯಕ್ಷಗಾನ ಗುರುಗಳಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿಶ್ವನುಡಿಸಿರಿಯ ಸಾಂಸ್ಕೃತಿಕ ಪ್ರವಾಸದಲ್ಲಿ ಯಕ್ಷಗಾನ ನೃತ್ಯ ವೈಭವ , ರೂಪಕಗಳನ್ನೂ ಕೆಂದ್ರದ ವಿದ್ಯಾರ್ಥಿಗಳು ಗಲ್ಭ್ ರಾಷ್ಟ್ರಗಳಲ್ಲಿ ಪ್ರದರ್ಶಿಸಿದ್ದಾರೆ.

ಅಪೂರ್ವ ಸಂಗ್ರಹಗಳು

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅಪೂರ್ವ ಸಂಗ್ರಹಗಳು ಡಾ.ಮೋಹನ್ ಆಳ್ವರಲ್ಲಿದೆ. 2000 ಕ್ಕೂ ಅಧಿಕ ಯಕ್ಷಗಾನದ ಛಾಯಾಚಿತ್ರಗಳು ಕೂಡ ಸಂಗಹದಲ್ಲಿದೆ. ಮಾತ್ರವಲ್ಲ ಯಕ್ಷಗಾನದ ವಿವಿಧ ಗೊಂಬೆಗಳೂ ಇಲ್ಲಿವೆ. ಒಟ್ಟಿನಲ್ಲಿ ಯಕ್ಷಗಾನದಲ್ಲಿ ಅಧ್ಯಯನ ಮಾಡುವವರಿಗೆ ಪೂರಕವಾದ ವಿಷಯಗಳು ಡಾ.ಆಳ್ವರ ಯಕ್ಷಗಾನ ಸಂಗ್ರಹದ ಬತ್ತಳಿಕೆಯಲ್ಲಿದೆ. ಸ್ವತಃ ಆಳ್ವರು ಕೂಡ ಯಕ್ಷಗಾನದಲ್ಲೂ ಬಣ್ಣ ಹಚ್ಚಿರೊಂದಿಗೆ ಯಕ್ಷಗಾನದ ಏಳಿಗೆ ಮಾಡುತ್ತಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ನುಡಿಸಿರಿ

ಮಂಗಳೂರಿನಲ್ಲಿ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶಿಷ್ಟ ವೇದಿಕೆ ಶೃಂಗಾರಲ್ಲಿ ಕರಾವಳಿಯ ಛಾಪು ಒತ್ತಿದ ಆಳ್ವರು ಮುಂದೆ 2003ರಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 71ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ ಭೂತೋ --ಎಂಬಂತೆ ನಡೆಸಿಕೊಟ್ಟದ್ದು ಒಂದು ವಿಶಿಷ್ಟ ದಾಖಲೆ. ಮುಂದೆ ಅಳ್ವಾಸ್ ಬ್ಯಾನರಿನಲ್ಲಿಯೇ " ನುಡಿಸಿರಿ- ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ: ನಡೆಸಲು ಮುಂದಾದದ್ದು ಇನ್ನೊಂದು ದಾಖಲೆ. ಶಿಸ್ತು, ಸಂಘಟನಾ ಚತುರತೆಗೆ, ಚೆಲುವಿಗೆ, ಸುವ್ಯವಸ್ಥೆಗೆ ಇನ್ನೊಂದು ಹೆಸರಾಗಿ ಮಾದರಿ ಕನ್ನಡ ನುಡಿ ಸಮ್ಮೇಳನ ನಡೆಯಲಾರಂಭಿಸಿರುವುದು ಮತ್ತೊಂದು ದಾಖಲೆ.

ಸ್ವರಾಜ್ಯ ಮೈದಾನಕ್ಕೆ ಕಾಯಕಲ್ಪ

ಮಿಲಿಟರಿ ಗ್ರೌಂಡ್ ಎಂದೇ ಹೆಸರಾಗಿದ್ದ, ಹಿಂದಿನ ಬಂಗ್ಲೆ ಗುಡ್ಡೆ ಯಾನೆ ಸ್ವಾತಂತ್ಯ್ರಾನಂತರದ ಸ್ವರಾಜ್ಯ ಮೈದಾನ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಸಮತಟ್ಟಾಗಿ 400 ಮೀ. ಓಟದ ಟ್ರ್ಯಾಕ್ ನೊಂದಿಗೆ ಹೊಸ ಕ್ರೀಡಾಂಗಣವಾಗಿ ಮಾರ್ಪಾಡಾದದ್ದು ಒಂದು ಅದ್ಭುತ ಬದಲಾವಣೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಷಷ್ಟಬ್ದದ ಸಂದರ್ಭ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ 60 ಲಕ್ಷ ರೂ. ಅನುದಾನ ಹಂತ ಹಂತವಾಗಿ ಒದಗಿ ಬಂದದ್ದು, ಕ್ರೀಡಾ ಇಲಾಖೆಗೆ ಮೈದಾನ ಒಪ್ಪಿಸಲ್ಪಟ್ಟದ್ದು, ಇಲಾಖೆಯ ಮಲ್ಟಿ ಜಿಮ್ ಮೊನ್ನೆ ಮೊನ್ನೆ ಅರಂಭವಾದದ್ದು, ಸಚಿವರಾಗಿದ್ದ ಅಪ್ಪಚ್ಚು ರಂಜನ್, ಸಚಿವ ಅಭಯಚಂದ್ರರ ಉಮೇದಿನಿಂದ ಇನ್ನಷ್ಟು "ಲಕ್ಷ/ಕೋಟಿ" ರೂ. ಒದಗಿಬರುವ ಲಕ್ಷಣದಿಂದಾಗಿ ಸಿಂಥೆಟಿಕ್ ಟ್ರ್ಯಾಕ್, ಸ್ವಿಮ್ಮಿಂಗ್ ಪೂಲ್, ಮಕ್ಕಳ ಉದ್ಯಾನ/ಆಟದ ಅಂಗಣ, ಸ್ಕೌಟ್ ಭವನ, ಹಿರಿಯರ ವಾಕಿಂಗ್ ಟ್ರ್ಯಾಕ್ ಇನ್ನೇನೆಲ್ಲವನ್ನೂ ಈ ಸ್ವರಾಜ್ಯ ಮೈದಾನ ಪಡೆದುಕೊಳ್ಳುವ ದಿನಗಳು ಸನ್ನಿಹಿತವಾಗಲಿರುವುದೇ ಮೊದಲಾದ ಬೆಳವಣಿಗೆಗಳ ಮೂಲ ಕಾರಣ ಡಾ. ಮೋಹನ ಆಳ್ವರೇ.

ಮೂಡುಬಿದಿರೆಯಂಥ ಪುಟ್ಟ ನಗರದಲ್ಲಿ ನಡೆದ "ಮಿ. ಇಂಡಿಯಾ " ದೇಹದಾಢ್ರ್ಯ ಸ್ಪರ್ಧೆಗೆ ಅಮೇರಿಕದ ದೇಹದಾಢ್ರ್ಯ ಪಟು ಅಗಮಿಸಿದ್ದು, ಸ್ವರಾಜ್ಯ ಮೈದಾನದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರ್ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡೋತ್ಸವಗಳು ನಡೆಯುವಂತಾಗಿರುವುದು ,. ಕಾರ್ಗಿಲ್ ಯೋಧ ಲ್ಯಾನ್ಸಿ ಮೆಂದ ಅವರಿಗೆ ಸಾರ್ವಜನಿಕ ಸಮ್ಮಾನ, ಇನ್ನಿಲ್ಲವಾದ ರಂಗಭೂಮಿಯ ಮಹಾನ್ ಚೇತನ ಕೆ.ವಿ. ಸುಬ್ಬಣ್ಣ, ದೀನ ದು:ಖಿತರ, ಅಶಕ್ತರ ಆಶಾಕಿರಣ ಮದರ್ ಥೆರೆಸಾ, ಹಿಂದಿನ ಭಟ್ಟಾರಕ ಶ್ರೀಗಳ ಸಂಸ್ಮರಣೆ, ಊರ ಆದರ್ಶ ಶಿಕ್ಷಕ, ಯಕ್ಷಗಾನ ಅರ್ಥಧಾರಿ ವಿದ್ವಾನ್ ಕೆ. ಕಾಂತ ರೈ -- ಇಂಥ ವ್ಯಕ್ತಿತ್ವಗಳ ಸಂಸ್ಮರಣೆ, ಇಫ್ತಾರ್ ಕೂಟ, ಕರಾವಳಿಯ ಸಾಧಕ ಶಿಕ್ಷಕರಿಗೆ ಸಮ್ಮಾನ, ನುಡಿಸಿರಿಯಲ್ಲಿ, ಚಿತ್ರಸಿರಿಯಲ್ಲಿ, ವಿರಾಸತ್ ನಲ್ಲಿ ಕ್ರೀಡೋತ್ಸವಗಳಲ್ಲಿ ನಾಡು ನುಡಿ ಕಲೆ ಕ್ರೀಡೆಗಳಲ್ಲಿ ವಿಶಿಷ್ಟ ಸಾಧನೆಗೈದಿರುವ ಮಂದಿಗೆ ಪ್ರಶಸ್ತಿ ಪ್ರದಾನ ..ಇಫ್ತಾರ್ ಕೂಟ, ದೀಪಾವಳಿ, ಓಣಂ ಆಚರಣೆಗಳ ಮೂಲಕ ಹಬ್ಬಗಳ ಮಹತ್ವವನ್ನು ಯಥಾಯೋಗ್ಯ ಸೂಕ್ತವಾಗಿ ಸಾರುವ, ಸಾಮರಸ್ಯ ಭಾವ ಬಿಂಬಿಸುವ ಕಲಾಪಗಳು .ಇಲ್ಲಿ ನಡೆದಿರುವ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ.

ಆನಂದಮಯ ಆರೋಗ್ಯಧಾಮ

ಮಿಜಾರು ಶೋಭಾವನದಲ್ಲಿ ಗಿಡಮೂಲಿಕೆಗಳನ್ನು ಬೆಳೆಸುವ ಕಾರ್ಯ ಬಹಳ ಗಂಭೀರವಾಗಿ ನಡೆಯುತ್ತಿದೆಯಾದರೆ ಇನ್ನೊಂದೆಡೆ ಆಳ್ವಾಸ್ ಆನಂದಮಯ ಆರೋಗ್ಯ ಧಾಮದಲ್ಲಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿಯೇ ಮೊದಲಾದ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಆರೋಗ್ಯ ಭಾಗ್ಯವನ್ನು ಪರಿಣತರಿಂದ ಒದಗಿಸಲಾಗುತ್ತಿದೆ.

ಅಳ್ವರು ವೃದ್ಧಾಶ್ರಮ, ಮದ್ಯವ್ಯಸನ ವರ್ಜನ ಕೇಂದ್ರ ತೆರೆಯುವುದರಲ್ಲಿದ್ದಾರೆ. ಸದ್ದಿಲ್ಲದೆ ಅದೆಷ್ಟೋ ಎಚ್ಐವಿ ಪೀಡಿತರಿಗೆ ತಮ್ಮದೇ ಸೂತ್ರದಲ್ಲಿ ಆಳ್ವರು ಚಿಕಿತ್ಸೆ ನೀಡುತ್ತಲೇ ಇದ್ದಾರೆ. ಆಳ್ವರು ಸ್ವಂತ ಆಸಕ್ತಿಯಿಂದ ಕಲೆ ಹಾಕಿದ ದೇಶದ ಜಾನಪದ ವಸ್ತುಗಳ ಮೌಲ್ಯ ಮಾಪನ ಕೊಂಚ ಕಷ್ಟ. ಮೂಡುಬಿದಿರೆಯಿಂದ ಮಿಜಾರುವರೆಗಿನ ಹಾದಿಯುದ್ದಕ್ಕೂ ಬಹಳ ಕಷ್ಟ ಕಾಲದಲ್ಲೂ ನೆಟ್ಟ ಗಿಡಗಳು ಮರವಾಗಿ ಬೆಳೆದಿವೆ - ಆಳ್ವರ ಪರಿಸರ ಪ್ರೀತಿಯನ್ನು ಸಾರುತ್ತ. ಮೂಡುಬಿದಿರೆಯಲ್ಲಿ "ಮೋಹಿನಿ ಅಪ್ಪಾಜಿ ನಾಯಕ್ ವಿಶೇಷ ಮಕ್ಕಳ ಶಾಲೆ"ಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಆಳ್ವರು ಇದುವರೆಗೆ 50ಕ್ಕೂ ಅಧಿಕ ಅನಾಥ ಮಕ್ಕಳನ್ನು ಸಾಕಿ ಸಲಹಿ ಯೋಗ್ಯರ ಮಡಿಲಿಗೊಪ್ಪಿಸಿದ್ದಾರೆ. ಅಳ್ವಾಸ್ ಹೆಲ್ತ್ ಸೆಂಟರ್ ನಲ್ಲಿರುವ ಚಿಕಿತ್ಸಾ ಕ್ರಮದಿಂದಾಗಿ 6000ಕ್ಕೂ ಅಧಿಕ ವಿಷ ಜಂತು ಕಡಿತದ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು ಕೇವಲ 2 ಅಥವಾ 3 ಪ್ರಕರಣಗಳು ಕೈ ಮೀರಿ ಹೋಗಿವೆ.

ಮನಸ್ಸು ಕಟ್ಟುವ ಮೂಲಕ ಊರು ಬೆಳಗುವ ಕಾಯಕ: ಆಳ್ವರದು ಮನಸ್ಸು ಕಟ್ಟುವ ಕೆಲಸ. ಅದನ್ನವರು ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆಗಳೇ ಮೊದಲಾದ ಕ್ಷೇತ್ರಗಳ ಮೂಲಕ ಸಾಧಿಸಿ ತೋರಿಸುತ್ತಿದ್ದಾರೆ. ಮನಸ್ಸುಗಳು ಒಡೆಯುತ್ತಿರುವ ಇಂದಿನ ದಿನಗಳಲ್ಲಿ ಆಳ್ವರು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಬಂದವರು ಇಲ್ಲಿ ಓದುತ್ತಿರುವಂತೆಯೇ ಈ ಮೂಡುಬಿದಿರೆಯ ಅಭಿವೃದ್ಧಿಯ ದಿಕ್ಕನ್ನೇ ಬದಲಿಸುವಂತಾಗಿದೆ. ಹೋಟೆಲ್, ಬೇಕರಿ, ಜವುಳಿ, ಫ್ಯಾನ್ಸಿ, ಪುಸ್ತಕ, ದಿನಬಳಕೆಯ ವಸ್ತು ಮಾರಾಟ, ಭೂ ವ್ಯವಹಾರ, ಬ್ಯಾಂಕಿಂಗ್, ಸೇರಿದಂತೆ ಅಸಂಖ್ಯ ವ್ಯವಹಾರಗಳು ವೇಗದ ಬೆಳವಣಿಗೆ ಕಂಡಿವೆ.

ಒಂದು ಕಾಲದಲ್ಲಿ ಜನ ಓಡಾಡಲೂ ಹೆದರುತ್ತಿದ್ದ ಹಂಡೇಲು ಬಳಿಯ ಗುಡ್ಡ ಪ್ರದೇಶವಿಂದು ವಿದ್ಯಾಗಿರಿಯಾಗಿ ಮೂಡುಬಿದಿರೆಯ ಪ್ರಗತಿಯ ಮೂಲನೆಲವಾಗಿ ಪರಿಣಮಿಸಿದೆ. ಅದಕ್ಕಾಗಿ ಮೂಡುಬಿದಿರೆಗೆ ಮೂಡುಬಿದಿರೆಯೇ ಡಾ. ಎಂ. ಮೋಹನ ಆಳ್ವರಿಗೆ ಕೃತಜ್ಙವಾಗಿದೆ.

ವೇದಿಕೆ ಶೃಂಗಾರಕ್ಕೆ ಹೊಸ ಭಾಷ್ಯ

ಮಂಗಳೂರಿನಲ್ಲಿ 66ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ವೇದಿಕೆಯನ್ನು ಕರಾವಳಿಯ ಸಾಂಸ್ಕೃತಿಕ ಸೊಬಗಿನ ಚಿತ್ರಣದೊಂದಿಗೆ ರೂಪಿಸಲು ಹಲವಾರು ಕಲಾವಿದರು, ಸನ್ ಮಿತ್ರರೊಡಗೂಡಿ ಅದೆಷ್ಟೋ ಬಿಳಿ ಹಾಳೆಗಳಲ್ಲಿ ಚಿತ್ತಾರ ಮೂಡಿಸಿ ಮೂಡಿಸಿ ಕೊನೆಗೂ ಗೋಪಾಡ್ಕರ್, ಡೇವಿಡ್ ಮೊದಲಾದ ಕಲಾವಿದರ ಸಹಕಾರದಲ್ಲಿ ಆಳ್ವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದಿನಕ್ಕೊಂದು ಬಗೆಯ ವೇದಿಕೆ ಶೃಂಗಾರವನ್ನು ಪ್ರಸ್ತುತ ಪಡಿಸಿದಾಗ, ಸಾವಿರ ಕಂಬದ ಬಸದಿ ಆವರಣದಲ್ಲಿ ನಡೆಯುತ್ತಿದ್ದ "ವಿರಾಸತ್" ವೇದಿಕೆಗಳನ್ನು ದಿನಕ್ಕೊಂದು ಬಗೆಯ ಪರಿಕಲ್ಪನೆಯಿಂದ ರೂಪಿಸಿದಾಗ, ರಾತೋ ರಾತ್ರಿ ಕಲಾವಿದರು, ಕುಶಲಕರ್ಮಿಗಳ ಜತೆ ತಾವೂ ನಿದ್ದೆಗೆ ವಿರಾಮ ಹೇಳಿ ಬೆಳಗಾಗುವಾಗ ಹೊಸ ವೇದಿಕೆಯನ್ನು ನಿರ್ಮಿಸಿದಾಗ ನೋಡುಗರು "ಅಬ್ಬಬ್ಬ (ಅಯ್ಯಯ್ಯ) ಎಂಚ ಪೊರ್ಲಾಂಡೆಂದು ..’ಮೆಚ್ಚುಗೆ ವ್ಯಕ್ತಪಡಿಸಿದಾಗ ಮೈಯುಬ್ಬಿಸಿಕೊಂಡ ಆಳ್ವರು ಮತ್ತೆ ತಮ್ಮ "ನಿತ್ಯಂ ಪೊಸತು" ಐಡಿಯಾಗಳಿಂದ ದೂರ ಸರಿಯಲಿಲ್ಲ.

ವಿರಾಸತ್, ನುಡಿಸಿರಿ ವೇದಿಕೆಗಳಲ್ಲಿ ಆಳ್ವರ ವಿಶಿಷ್ಟ ಪರಿಕಲ್ಪನೆಗಳು ಮಿಂಚತೊಡಗಿದವು. ಮೂಡುಬಿದಿರೆ ಮಾತ್ರವಲ್ಲ ದೂರದೂರುಗಳ ಮಂದಿಯೂ ಪ್ರಭಾವಿತರಾಗಿ ಆಳ್ವರನ್ನು, ಆಳ್ವರ ತಂಡವನ್ನು ಬರಮಾಡಿಕೊಂಡರು. ದೊಡ್ಡ ದೊಡ್ಡ ಸಮ್ಮೇಳನಗಳಿಗೆ ಆಳ್ವಾಸ್ ನದ್ದೇ ವೇದಿಕೆ ಎಂಬಂಥ ಬೇಡಿಕೆಯ ಸನ್ನಿವೇಶ ನಿರ್ಮಾಣವಾಗತೊಡಗಿತು. ಇಂಥ ಹಲವಾರು ಕಲಾ ತಂಡಗಳ ಅಲ್ಲಲ್ಲಿ ಹುಟ್ಟಿಕೊಂಡವು. ಇದ್ದ ಸಾದಾ ಪರದೆ, ಮೇಲ್ಕಟ್ಟುಗಳಿಗೆ ಜನ ಎಂದೋ ವಿದಾಯ ಹೇಳಿಯಾಯಿತು. "ಪೊಸತೆಂಚಿನ ಉಂಡು, ಕೆಟಲಾಗ್ ತೂಕ" ಎಂದು ವೃತ್ತಿಪರ ಶಾಮಿಯಾನ ಸಂಸ್ಥೆಗಳಲ್ಲಿ ಜನ ಕೇಳುವಂತಾಯಿತು. ವೇದಿಕೆ ಶೃಂಗಾರವೂ ಹತ್ತು ಮಂದಿಗೆ ಊಟದ ಹಾದಿ ತೋರಿಸಿಕೊಟ್ಟಿತು- ಕರಾವಳಿಯಾದ್ಯಂತ.ಸೌಂದರ್ಯ ಪ್ರಜ್ಙೆ ಎಂಬುದು ಹವ್ಯಾಸಕ್ಕಷ್ಟೇ ಎಂಬುದು ಮರೆಯಾಗಿ ಯಶಸ್ವೀ ವೃತ್ತಿಯಾದ ಬಗೆ ಇದು.

ಮೂಡುಬಿದಿರೆಗೊಂದು ಕನ್ನಡ ಭವನ

71ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಉಳಿಕೆ ಹಣದಲ್ಲಿ ಸ್ವರಾಜ್ಯ ಮೈದಾನದಲ್ಲಿ ಒಂದು ಕನ್ನಡ ಭವನವನ್ನು ನಿರ್ಮಿಸುವ ಯೋಜನೆ ಹಾಗೇ ಬಿದ್ದು ಹೋಯಿತು. ಆಗಿದ್ದ ಸರಕಾರವೇ ಸ್ಪಂದಿಸಬೇಕಾಗಿದ್ದ ರೀತಿಯಲ್ಲಿ ಸ್ಪಂದಿಸದ ಕಾರಣ ಬರಬಹುದಾಗಿದ್ದ ಮೊತ್ತವೂ "ತೀರ್ಥ"ದಂತೆ ತೊಟ್ಟಿಕ್ಕಿದ ಕಾರಣ ಸಂಗ್ರಹವಾದ ಮೊತ್ತ ಅಲ್ಲಿಂದಲ್ಲಿಗೆ ಎಂಬಂತಾಗುವಾಗ ವರುಷ ಕಳೆದಿತ್ತು. ಈಗ ಹತ್ತು ವರ್ಷಗಳೇ ಸಂದಿವೆ. ವಿಶ್ವ ನುಡಿಸಿರಿ ವಿರಾಸತ್ನ ನೆನಪಿಗಾಗಿ 5 ಕೋಟಿ ರೂ. ವೆಚ್ಚದಲ್ಲಿ ಸ್ವರಾಜ್ಯ ಮೈದಾನದಲ್ಲಿ ಸರ್ವಾಂಗ ಸುಂದರ ಕನ್ನಡ ಭವನವನ್ನು ನಿರ್ಮಿಸಲು ಆಳ್ವರು ದೃಢಸಂಕಲ್ಪ ತಳೆದಿದ್ದಾರೆ. ಮೂಡುಬಿದಿರೆಯವರು ಈ ಬಾರಿ ನುಡಿಸಿರಿಗಾಗಿ ಏನು ಕೊಟ್ಟರೂ ಅದು ಈ ಭವನಕ್ಕೆ ಎಂದು ಮನಸ್ಸು ಬಿಚ್ಚಿ ಕೊಡುವಂತಾಗಲಿ , ಆಗ ಈ ಭವನ ಮೈದಳೆಯುವುದು ಖಂಡಿತ" ಎಂದು ಅವರು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿರುವುದನ್ನು ಮೂಡುಬಿದಿರೆಯವರು ಅರ್ಥಮಾಡಿಕೊಂಡರೆ ಚೆನ್ನು.

ಹೇಳುವವರಿರಬಹುದು; ಅವರಿಗೇನು, ಬೇಕಾದಷ್ಟು ಉಂಟು; ಹಣ ಬರುವ ಮಾರ್ಗಗಳಿವೆ. ಹಾಗಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತ ಬಂದಿದ್ದಾರೆ....... ಆದರೆ, ಎಲ್ಲ ಇದ್ದೂ ಏನೂ ಮಾಡದವರೂ ಇದ್ದಾರೆ. ಆಳ್ವರಿಗಿಂತ ಎಷ್ಟೋ ಪಾಲು ಸಂಪನ್ಮೂಲ ಇರುವವರು ಆಳ್ವರಿಗಿಂತ ಮುಂದೆ ಸಾಗಬೇಕಿತ್ತು, ಸಾಗಲಾಗಿಲ್ಲ. ಏಕೆಂದರೆ ಅವರೊಳಗೆ "ಮೋಹನ ಆಳ್ವ" ಎಂಬ ಸಂಕಲ್ಪ ಶಕ್ತಿ ಇಲ್ಲ. ಆಳ್ವರೊಳಗೆ ದೈಹಿಕ , ಮಾನಸಿಕ ಆರೋಗ್ಯದ ಕಾಳಜಿಯ ನರ್ಸಿಂಗ್ ಗುಣವಿದೆ. ಅವರ ಮಾತಿನಲ್ಲಿ ಮದ್ದಿಗಿಂತಲೂ ಮಿಗಿಲಾದ ಔಷಧೀಯ ಗುಣವಿದೆ ಎನ್ನುವುದಂತೂ ನಿಜವೇ. ಕೇವಲ ಆರೋಗ್ಯದ ಸಂಗತಿ ಅಲ್ಲ; ನಮ್ಮನ್ನು ಕಾಡುವ ಯಾವುದೇ ಸಮಸ್ಯೆಯ ಬಗ್ಗೆ ಮೋಹನ ಆಳ್ವರ ಪುರುಸೊತ್ತು ನೋಡಿ ಒಂದರ್ಧ ಗಂಟೆ ಮಾತನಾಡಿ ಹೋದರೆ ಸಮಸ್ಯೆ ಹೇಗೆ ಮಂಜಿನಂತೆ ಕರಗಿ ನೀರಾಗುತ್ತದೆ, ಕನಿಷ್ಟ ಪರಿಹಾರದ ಮಾರ್ಗವಾದರೂ ಗೋಚರಿಸುತ್ತದೆ ಎಂಬುದನ್ನು ಅನುಭವಿಸಿದವರೇ ಬಲ್ಲರು. ಮೂಡುಬಿದಿರೆ ಇವತ್ತು ಈ ರೀತಿ ಬೆಳಗುತ್ತಿರುವುದು ಹೌದಾದರೆ ಅದಕ್ಕೆ ಡಾ. ಮೋಹನ ಆಳ್ವರೇ ಕಾರಣ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲವಲ್ಲ.

ಪ್ರಶಸ್ತಿಗಳು

ರಾಜೀವ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯರಾಗಿ (1997-2003, 2009-12), ಸಿಂಡಿಕೇಟ್ ಸದಸ್ಯರಾಗಿ (2006-09) ರಾಜ್ಯಪಾಲರಿಂದ ನೇಮಕವಾದ ಆಳ್ವರು ನವದೆಹಲಿಯ ಸಿಸಿಐಎಂ (ಸೆಂಟ್ರಲ್ ಕೌನ್ಸಿಲ್ ಫಾರ್ ಇಂಡಿಯನ್ ಮೆಡಿಸಿನ್) ಸದಸ್ಯ (2007-2011)ರಾಗಿ ನಿಯುಕ್ತರಾದವರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1998), ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ (2005), ಆರ್ಯಭಟ ಪ್ರಶಸ್ತಿ (2000), ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ (2001), 70ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿ- ಕನ್ನಡ ಶ್ರೀ ಪ್ರಶಸ್ತಿ (2002) ಗಳಿಸಿರುವ ಮೋಹನ ಆಳ್ವರು ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ (2010)ಗೆ ಭಾಜನರಾಗಿದ್ದಾರೆ. ಮೋಹನ ಆಳ್ವರಿಗೆ ಪೇಜಾವರ ಶ್ರೀಗಳು "ವಿಜಯಶ್ರೀ ಪ್ರಶಸ್ತಿ" (2008), ತೋಂಟದಾರ್ಯ ಸ್ವಾಮೀಜಿಯವರು "ಬಸವಶ್ರೀ ಪ್ರಶಸ್ತಿ" , ಮಂತ್ರಾಲಯದ ಸ್ವಾಮೀಜಿಯವರು "ಶ್ರೀ ಶ್ರೀ ವಿಜಯೀಂದ್ರ ಪುರಸ್ಕಾರ" ನೀಡಿ ಗೌರವಿಸಿದ್ದಾರೆ. ಸಾಲು ಸಾಲು ಮಾನ ಸಮ್ಮಾನಗಳು ಹರಿದುಬರುತ್ತಲೇ ಇವೆ. ತೀರಾ ಇತ್ತೀಚೆಗೆ ಕೋಟದ "ಕಾರಂತ ಹುಟ್ಟೂರ ಪ್ರಶಸ್ತಿ’ ಅವರಿಗೆ ಲಭಿಸಿದೆ.

ಡಾಕ್ಟರೇಟ್ ಪ್ರಬಂಧಗಳಿಗೆ ಆಕರ

ಈಗಾಗಲೇ ಡಾ. ಮೋಹನ ಆಳ್ವರ ಬಗ್ಗೆ ಇಸ್ಮಾಯಿಲ್ ಮೂಡುಶೆಡ್ಡೆ ಅವರು "ಮೋಹನ ರಾಗ’ , ಡಾ. ನರೇಂದ್ರ ರೈ ದೇರ್ಲ ಅವರು " ಬಹುಮುಖ ಪ್ರತಿಭಾ ಸಂಪನ್ನ ಡಾ. ಮೋಹನ ಆಳ್ವ’ , ಎಚ್.ಎನ್. ರಾಜಶ್ರೀ ಅವರು ’ ಸಂಸ್ಕೃತಿ ಚೈತನ್ಯ ಡಾ. ಮೋಹನ ಆಳ್ವ’ ಎಂಬ ಕೃತಿಗಳನ್ನು ರಚಿಸಿದ್ದಾರೆ. 2009ರ ಜನವರಿಯ ತರಂಗ ವಾರಪತ್ರಿಕೆಯಲ್ಲಿ ಯು.ಬಿ. ರಾಜಲಕ್ಷ್ಮೀ ಅವರ "ಆಳ್ವಾಸ್ ವಿರಾಸತ್ ನುಡಿಸಿರಿ, ಕ್ರೀಡೋತ್ಸವ, ಶಿಕ್ಷಣ ಪ್ರತಿಷ್ಠಾನಗಳ ಅಧ್ವರ್ಯು ಡಾ. ಮಿಜಾರುಗುತ್ತು ಮೋಹನ ಆಳ್ವ’ ಎಂಬ ಮುಖಪುಟ ಲೇಖನ ಪ್ರಕಟವಾಗಿದೆ. ಒಂದಲ್ಲ ಹಲವಾರು ಡಾಕ್ಟರೇಟ್ ಪ್ರಬಂಧಗಳಿಗೆ ಡಾ. ಎಂ. ಮೋಹನ ಆಳ್ವರು ಆಕರ.

****************ಕೃಪೆ : www.nammabedra.com    www.nammabedra.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ