ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನದ ಶ್ರೇಷ್ಠತೆ ಪ್ರಸಾರವಾಗಲಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜನವರಿ 12 , 2014
ಜನವರಿ 12, 2014

ಯಕ್ಷಗಾನದ ಶ್ರೇಷ್ಠತೆ ಪ್ರಸಾರವಾಗಲಿ

ಕುಮಟಾ : ಯಕ್ಷಗಾನ ಕೇವಲ ಪ್ರದರ್ಶನದ ಸರಕಾಗದೇ ಅದರೊಳಗಿನ ಶ್ರೇಷ್ಠತೆಗಳು ಪ್ರಸಾರವಾಗಬೇಕು. ಕಲೆಯ ಆರಾಧನೆಯಾಗಬೇಕು. ಪೀಳಿಗೆಯಿಂದ ಪೀಳಿಗೆಗೆ ಯಕ್ಷಗಾನ ವಿಕಾರ ಮಾಡದೇ ವಿಕಾಸ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಹೊಸ್ತೋಟ ಮಂಜುನಾಥ ಭಾಗವತ ಹೇಳಿದರು. ಹವ್ಯಕ ಸಭಾಭವನದಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಮಹಿಳಾ ಯಕ್ಷಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಸಂಶೋಧನೆ ಎಂದರೆ ಬೇರು ಅಗೆಯುವ ಕೆಲಸವಲ್ಲ. ಪ್ರದರ್ಶನದ ಮೂಲಕ ಗಿಡ ಬಳ್ಳಿಗಳ ಕುರಿತು ತಿಳಿಯುವುದು ಕೂಡಾ ಆಗಿದೆ. ಇಂಥ ಹೊಸ ವಿಚಾರಗಳು ಯಕ್ಷರಂಗಕ್ಕೆ ಅಗತ್ಯವಿದೆ ಎಂದು ಯಕ್ಷಗಾನ ಸಂಶೋಧನಾ ಕೆಂದ್ರದ ಕಾರ್ಯ ಶ್ಲಾಘಿಘಿಸಿದರು.

ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಅವರೆ ಬರೆದ ಗೀತಾನುಸಂಧಾನ ಕೃತಿಯ ಕುರಿತು ವಿವರಿಸಿದ ಅವರು, ಕರ್ತವ್ಯವನ್ನು ಮಾಡಬೇಕು. ಕರ್ತುತ್ವವನ್ನು ಅಲ್ಲಗಳೆಯಬೇಕೆಂಬ ಗೀತಾಸಾರದಡಿ ಸ್ವರ್ಣವಲ್ಲೀ ಶ್ರೀಗಳ ಗೀತಾ ಅಭಿಯಾನದಿಂದ ಪ್ರೇರಣೆಗೊಂಡು ಗೀತಾನುಸಂಧಾನ ರಚನೆ ಮಾಡಿದ್ದೇನೆ. ಫಲಪ್ರದವಾದ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕತೆ ಗೀತೆಯ ಪ್ರಸ್ತುತಿಯಾಗಿದೆ ಎಂದರು.

ಉದ್ಘಾಟಿಸಿ ಮಾತನಾಡಿದ ಯಕ್ಷಗಾನ ಸಂಶೋಧಕ, ವಿಮರ್ಶಕ ಡಾ|ಎಂ.ಪ್ರಭಾಕರ ಜೋಶಿ, ದಕ್ಷಿಣ ಕನ್ನಡದ ಬಡಗುತಿಟ್ಟಿನ ಪುನರುಜ್ಜೀವನದಲ್ಲಿ ಉತ್ತರ ಕನ್ನಡದ ಯಕ್ಷಗಾನದ ದೊಡ್ಡ ಪಾಲಿದೆ. ಯಕ್ಷಗಾನದ ವ್ಯಕ್ತಿತ್ವ ಹಾಗೂ ಆತ್ಮವೆರಡೂ ಉ.ಕ ಮತ್ತು ದ.ಕ.ದೊಳಗೆ ಸಮ್ಮಿಳಿತವಾಗಿದೆ ಎಂದರು. ಯಕ್ಷಗಾನ ಇಂದು ವಿಕಾಸ ಹಾಗೂ ವಿಕಾರದ ನಡುವೆ ಒದ್ದಾಡುತ್ತಿದೆ. ಯಕ್ಷಗಾನಕ್ಕೆ ವೈವಿಧ್ಯತೆಯ ಜೊತೆಗೆ ಸಮಾನತೆಯೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಯಕ್ಷಗಾನ ಸಂಭ್ರಮ ಕಾರ್ಯಕ್ರಮ ಸ್ಥಿರ-ಚರಾಂಶಗಳನ್ನು ಒಳಗೊಂಡ ಯಕ್ಷಗಾನದ ಸಂರಕ್ಷಣೆ, ಸಂವರ್ಧನೆ ಹಾಗೂ ವಿಸ್ತರಣೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಜಿ.ಎಲ್‌. ಹೆಗಡೆ ಮಾತನಾಡಿ, ಯಕ್ಷಗಾನದ ಸಂವರ್ಧನೆ ಹಾಗೂ ವಿಕಸನದಲ್ಲಿ ಮಹಿಳೆಯರು ಕೂಡಾ ನೇತೃತ್ವ ವಹಿಸಬೇಕಾದ ಅಗತ್ಯವಿದೆ ಎಂದರು.

ಧಾರವಾಡ ಆಕಾಶವಾಣಿ ಕೇಂದ್ರದ ದಿವಾಕರ ಹೆಗಡೆ, ಸುಖೀ ಹೆಗಡೆ ಆಸ್ಟ್ರೇಲಿಯಾ ಉಪಸ್ಥಿತರಿದ್ದು ಮಾತನಾಡಿದರು.

ನಂತರ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಮಹಿಳಾ ಯಕ್ಷಗಾನ ತಂಡಗಳು ಸ್ಪರ್ಧಾತ್ಮಕ ಪ್ರದರ್ಶನ ನೀಡಿದರು. ಜಲವಳ್ಳಿಯ ಕಲಾಧರ ಮಹಿಳಾ ಬಳಗದಿಂದ ಗದಾಯುದ್ಧ, ಬೆಂಗಳೂರಿನ ಯಕ್ಷಸಿರಿ ತಂಡದಿಂದ ಮಾಗಧ ವಧೆ, ಬೆಂಗಳೂರಿನ ಶ್ರೀ ಕಾಳಿಂಗ ಯಕ್ಷಕಲಾ ವೈಭವದಿಂದ ವೀರ ಅಭಿಮನ್ಯು, ನವಿಲಗೋಣದ ಶ್ರೀ ಸಿದ್ಧಿವಿನಾಯಕ ಕಲಾಸಂಘದಿಂದ ಹರಿಭಕ್ತಿಪಾರಮ್ಯ ಹಾಗೂ ಶಿರಸಿ ಬೈರುಂಭೆ ಗಡಿಗೆಹೊಳೆಯ ಶ್ರೀವಿದ್ಯಾ ಸಂಸ್ಕೃತಿ ಸಂಘದಿಂದ ಗದಾಪರ್ವ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಿತು. ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಮಮತಾ.ಜಿ, ದಿವಾಕರ ಹೆಗಡೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಜ. 12 ರಂದು ರವಿವಾರ ಬೆಳಿಗ್ಗೆ 10-30 ರಿಂದ ಆರಂಭಿಸಿ ಸಾಗರದ ಶ್ರೀಮಹಾಮ್ಮಾಯಿ ಮಂಡಳಿಯಿಂದ ಭೀಷೊ¾àತ್ಪತ್ತಿ, ಬೆಂಗಳೂರು ಯಕ್ಷಕಲಾ ಅಕಾಡೆಮಿಯಿಂದ ಚಕ್ರವ್ಯೂಹ, ಶಿವಮೊಗ್ಗದ ಶ್ರೀಮಾತಾ ಯಕ್ಷಕಲಾ ಟ್ರಸ್ಟಿನಿಂದ ಜ್ವಾಲಾ ಪ್ರತಾಪ, ಚಿಕ್ಕಮಗಳೂರಿನ ಹಳುವಳ್ಳಿಯ ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸುದರ್ಶನ ಗರ್ವಭಂಗ ಹಾಗೂ ಬೆಂಗಳೂರಿನ ಸಿರಿಕಲಾ ಮೇಳದಿಂದ ಸುಧನ್ವಾರ್ಜುನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ನಂತರ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ಮಾತಾ ಕೋಲಾಹಲ ಎಂಬ ಯಕ್ಷಗಾನದ ಪ್ರಾಯೋಗಿಕ ಪ್ರದರ್ಶನವನ್ನು ಧಾರವಾಡದ ಯಕ್ಷಮಂಡಲದವರು ಆಡಿತೋರಿಸಲಿದ್ದಾರೆ.

ಕೃಪೆ : http://kannada.yahoo.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ