ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಅಗರಿ ಶೈಲಿಯ ಹಿರಿಯ ಭಾಗವತ ಅಗರಿ ರಘುರಾಮ ಭಾಗವತ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಫೆಬ್ರವರಿ 23 , 2014

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಬಲಿಪರ ಶೈಲಿ, ಮಂಡೆಚ್ಚರ ಶೈಲಿ, ಕಡತೋಕರ ಶೈಲಿ, ಪದ್ಯಾಣರ ಶೈಲಿಗಳಂತೆ ಪ್ರತ್ಯೇಕ "ಅಗರಿ ಶೈಲಿ'ಯನ್ನು ಹುಟ್ಟು ಹಾಕಿದವರು ಅಗರಿ ಶ್ರೀನಿವಾಸ ಭಾಗವತರು. ಯಕ್ಷ ಬ್ರಹ್ಮರೆಂದೇ ಖ್ಯಾತರಾದ ಅವರು ಅನೇಕ ಪೌರಾಣಿಕ ಪ್ರಸಂಗಗಳನ್ನು ರಚಿಸಿ ಯಕ್ಷಗಾನ ರಂಗಕ್ಕೆ ನೀಡಿದವರು. ಅವರ ಕಿರಿಯ ಪುತ್ರ ತಂದೆಯಂತೆ ಪ್ರಸಂಗರಚನೆಯಲ್ಲಿ ತೊಡಗಿದರೆ ಹಿರಿಯ ಪುತ್ರ ರಘುರಾಮ ಭಾಗವತರು ತಂದೆಯಿಂದಲೇ ಪ್ರೇರಿತರಾಗಿ ಅಗರಿ ಶೈಲಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದವರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಸಮೀಪದ ಕುಪ್ಪೆಪದವಿನಲ್ಲಿ ಯಕ್ಷಲೋಕದ ಪ್ರಾತಃಸ್ಮರಣೀಯ ಭಾಗವತ ಅಗರಿ ಶ್ರೀನಿವಾಸ ರಾವ್‌ ಮತ್ತು ರುಕ್ಮಿಣಿಯಮ್ಮ ದಂಪತಿಯ ಹಿರಿಯ ಪುತ್ರನಾಗಿ 1935ರಲ್ಲಿ ಜನಿಸಿದ ರಘುರಾಮ ಭಾಗವತರು, ಸುರತ್ಕಲ್‌ನ ವಿದ್ಯಾದಾಯಿನಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು ಸರಕಾರಿ ಉದ್ಯೋಗದಲ್ಲಿದ್ದವರು. ತಂದೆಯವರ ಹಾಡುಗಾರಿಕೆಯಿಂದ ಪ್ರಭಾವಿತರಾಗಿ ತಾನೂ ಅವರಂತೆ ಶ್ರೇಷ್ಠ ಭಾಗವತನಾಗಬೇಕೆಂಬ ಹಂಬಲದಿಂದ ಹಿರಿಯರ ವಿರೋಧದ ನಡುವೆಯೂ ಸರಕಾರಿ ಉದ್ಯೋಗವನ್ನು ತ್ಯಜಿಸಿ ಏಕಲವ್ಯನಂತೆ ತಂದೆಯವರ ಹಾಡುಗಾರಿಕೆಯ ಮರ್ಮವನ್ನೂ ರಂಗತಂತ್ರವನ್ನೂ ಕರಗತ ಮಾಡಿಕೊಂಡು ತಂದೆಯವರಿದ್ದ ಸುರತ್ಕಲ್‌ ಮೇಳಕ್ಕೆ ಸೇರಿಯೇ ಬಿಟ್ಟರು.

1963ರ ಸುಮಾರಿಗೆ ದಿವಾಣ ಭೀಮ ಭಟ್‌, ಅಡೂರು ಶಿವರಾವ್‌ ಮುಂತಾದವರ ಹಿಮ್ಮೇಳ, ದೊಡ್ಡ ಸಾಮಗರು, ಪುತ್ತೂರು ನಾರಾಯಣ ಹೆಗಡೆ, ಪಾತಾಳ ವೆಂಕಟರಮಣ ಭಟ್‌, ಗೋವಿಂದ ಭಟ್‌ ಮುಂತಾದ ಕಲಾವಿದರಿದ್ದ ಮೇಳಕ್ಕೆ ಇವರು ಭಾಗವತರಾಗಿ ಹಿರಿಯ ಅಗರಿ ಭಾಗವತರು ತುಳು ಪ್ರಸಂಗದಲ್ಲಿ ಪದ್ಯ ಹೇಳುವುದಿಲ್ಲ ಎಂಬ ಗಟ್ಟಿ ನಿಲುವು ತಾಳಿದ್ದೇ ಕಾರಣವಾಗಿತ್ತು. ಕೋಟಿ ಚೆನ್ನಯ, ತುಳುನಾಡ ಸಿರಿ ಮುಂತಾದ ತುಳು ಪ್ರಸಂಗಗಳಿಗೆ ಅನಿವಾರ್ಯ ಭಾಗವತರಾಗಿ ಮೂಡಿಬಂದ ಇವರು 1963ರಿಂದ ತಂದೆಯವರು ಕೂಡ್ಲು ಮೇಳಕ್ಕೆ ಸೇರ್ಪಡೆಯಾದ್ದರಿಂದ ಸುರತ್ಕಲ್‌ ಮೇಳದ ಪ್ರಧಾನ ಭಾಗವತರಾದರು. ಆ ಒಂದೇ ಮೇಳದಲ್ಲಿ ಸುದೀರ್ಘ‌ 35 ವರ್ಷಗಳ ಕಾಲ ತಿರುಗಾಟ ಮಾಡಿದರು. ಸುರತ್ಕಲ್‌ ಮೇಳದ ಕೊನೆಯ ತಿರುಗಾಟದವರೆಗೂ ಪದ್ಯಾಣ ಗಣಪತಿ ಭಟ್‌ ಮತ್ತು ಕಡಬ ನಾರಾಯಣ ಆಚಾರ್ಯರ ಸಹವರ್ತಿಯಾಗಿ ಮೇಳದ ಉನ್ನತಿಗಾಗಿ ಶ್ರಮಿಸಿ, ಮೇಳದ ವ್ಯವಸ್ಥಾಪಕರಾದ ಕಸ್ತೂರಿ ವರದರಾಯ ಪೈ ಬಂಧುಗಳ ಪ್ರೀತಿಗೆ ಪಾತ್ರರಾದವರು.

ಸಾಹಿತ್ಯ ಶುದ್ಧಿ, ಸಂಗೀತ ಸಿದ್ಧಿಗಳಿಂದ ಶ್ರುತಿ, ರಾಗ, ಲಯಗಳಿಂದ ಸಮೃದ್ಧವಾದ ಹಾಡುಗಾರಿಕೆಯಲ್ಲಿ ಮತ್ತು ಸಮರ್ಥ ನಿರ್ದೇಶನದಲ್ಲಿ ಸರಿಸುಮಾರು ಮೂರುವರೆ ದಶಕಗಳ ಕಾಲ ಸುರತ್ಕಲ್‌ ಮೇಳವನ್ನು ಮುನ್ನಡೆಸಿದ ಇವರು ಆಗ ಪದ್ಯಾಣ ಗಣಪತಿ ಭಟ್‌ ಮುಂತಾದ ಯುವಕಲಾವಿದರ ಸಹಕಾರದಲ್ಲಿ ಶೇಣಿ -ಸಾಮಗರಂಥ ಹಿರಿಯರು, ತೆಕ್ಕಟ್ಟೆ, ಕುಂಬಳೆ, ಕೋಳ್ಯೂರು, ಪುತ್ತೂರು ನಾರಾಯಣ ಹೆಗ್ಡೆ, ವೀರಭದ್ರ ನಾಯಕ್‌, ಜಲವಳ್ಳಿ ವೆಂಕಟೇಶರಾವ್‌, ಅರಾಟೆ ಮಂಜುನಾಥ, ಎಂ. ಕೆ. ರಮೇಶಾಚಾರ್‌, ವೇಣೂರು ಸುಂದರ ಆಚಾರ್‌, ಶಿವರಾಮ ಜೋಗಿ, ಕೊಕ್ಕಡ ಈಶ್ವರ ಭಟ್‌, ಪೆರೋಡಿ ನಾರಾಯಣ ಭಟ್‌ ಮುಂತಾದ ಘಟಾನುಘಟಿಗಳನ್ನು ರಂಗದಲ್ಲಿ ಕುಣಿಸಿ ಸುರತ್ಕಲ್‌ ಮೇಳದ ಗಲ್ಲಾ ಪೆಟ್ಟಿಗೆ ತುಂಬಿಸುವಲ್ಲಿ ಗಣನೀಯ ಕೊಡುಗೆ ನೀದ್ದಾರೆ.

ನಿಷ್ಕಲ್ಮಷ ಹೃದಯದ, ನಿರಾಡಂಬರ ವ್ಯಕ್ತಿತ್ವದ ಸರಳ ಸಜ್ಜನರಾದ ಅವರು ಅದೆಷ್ಟೋ ಕಿರಿಯ ಕಲಾವಿದರನ್ನು ಮಾರ್ಗದರ್ಶನವಿತ್ತು ಉತ್ತಮ ಕಲಾವಿದರನ್ನಾಗಿ ರೂಪಿಸಿದ್ದಾರೆ. ರಂಗದಲ್ಲಿ ಪರಿಣಾಮಕಾರಿ ನಿರ್ದೇಶಕನಾಗಿ, ಹಿರಿಯ ಕಲಾವಿದರಿಗೆ ಗೌರವ ಕಿರಿಯರಿಗೆ ಪ್ರೀತಿ ತೋರಿಸಿ ಒಂದೇ ಮೇಳದಲ್ಲಿ ದೀರ್ಘ‌ಕಾಲ ಸೇವೆ ಸಲ್ಲಿಸಿದ ಅಗರಿಯವರ ಬದುಕು ಅನುಕರಣೀಯ, ಅವಿಸ್ಮರಣೀಯ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಿಂದ ಸಮ್ಮಾನಿತರಾದ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಲಭಿಸಿವೆ.

ಅಗರಿ ರಘುರಾಮ ಭಾಗವತರು
ಜನನ : 1935
ಜನನ ಸ್ಥಳ : ಕುಪ್ಪೆಪದವು, ಮೂಡುಬಿದರೆ
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
"ಅಗರಿ ಶೈಲಿ'ಯನ್ನು ಹುಟ್ಟು ಹಾಕಿದ ಅಗರಿ ಶ್ರೀನಿವಾಸ ಭಾಗವತರ ಹಿರಿಯ ಪುತ್ರ ರಘುರಾಮ ಭಾಗವತರು ತಂದೆಯಿಂದಲೇ ಪ್ರೇರಿತರಾಗಿ ಅಗರಿ ಶೈಲಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದವರು. ಸುದೀರ್ಘ‌ 35 ವರ್ಷಗಳ ಕಾಲ ಸುರತ್ಕಲ್‌ ಮೇಳದಲ್ಲಿ ತಿರುಗಾಟ ಮಾಡಿರುತ್ತಾರೆ.

ಪ್ರಶಸ್ತಿಗಳು:
  • ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿ
  • ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಕಲ್ಕೂರ ಪ್ರತಿಷ್ಠಾನದ ಪ್ರಶಸ್ತಿ
  • ಶೇಣಿ ಪ್ರಶಸ್ತಿ, ಕುರಿಯ ಪ್ರತಿಷ್ಠಾನ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


****************

ಅಗರಿ ರಘುರಾಮ ಭಾಗವತರಿ೦ದ ಚೌಕಿ ಪೂಜೆಯ ಸ್ತುತಿ
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Mahesh kakathkar(2/24/2014)
Maahiti poorna lekhana.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ