ಯಕ್ಷರಂಗದ ಭೀಷ್ಮ ಬಳ್ಕೂರು ಕೃಷ್ಣಯಾಜಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಮಾರ್ಚ್ 9 , 2014
|
ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದನಾಗಿ, ಪೌರಾಣಿಕ ಪ್ರಸಂಗದ ಗಂಡು ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ, ಪೌರಾಣಿಕ ಹಾಗೂ ಆದುನಿಕ ಪ್ರಸಂಗಗಳ ಪ್ರೇಕ್ಷಕರ ಮನೆಮಾತಾದ ಮೇರು ಕಲಾವಿದ ಬಳ್ಕೂರು ಕೃಷ್ಣ ಯಾಜಿಯವರು. ಪ್ರಸಂಗದ ಪ್ರದಾನ ಪಾತ್ರಗಳಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ರಂಗದ ಹಿಡಿತ ಮತ್ತು ಗತ್ತುಗಾರಿಕೆಯನ್ನು ಇವರ ವೇಷಗಳಲ್ಲಿ ಗುರುತಿಸಬಹುದಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಡಗುಂಜಿ ಮೇಳದಲ್ಲಿ ಕೆರೆಮನೆ ಬ೦ಧುಗಳ ಮತ್ತು ಕುಂಜಾಲು ಹಾಸ್ಯಗಾರರಿಂದನಾನು ಸಾಕಷ್ಟು ಕಲಿತಿದ್ದೇನೆ ಎಂದು ಯಾಜಿಯವರು ವಿನಮ್ರರಾಗಿ ನುಡಿಯುತ್ತಾರೆ.
|
ನಿರಂತರ 40 ವರ್ಷ ಬಡಗುತಿಟ್ಟು ರಂಗಸ್ಥಳವನ್ನು ಆಳಿದ ಇವರನ್ನು ರಂಗದ ರಾಜನೆಂದೇ ಜನ ಗುರುತಿಸಿದ್ದಾರೆ. ರಂಗಸ್ಥಳದಲ್ಲಿ ಒಂದೇ ರಾತ್ರಿಯಲ್ಲಿ ರಾಮನೂ ಆಗಬಲ್ಲ, ರಾವಣನೂ ಆಗಬಲ್ಲ, ಕೃಷ್ಣನೂ ಆಗಬಲ್ಲ ಕಂಸನೂ ಆಗಬಲ್ಲ, ಭೀಷ್ಮನೂ ಆಗಬಲ್ಲ ಪರಶುರಾಮ, ಸಾಲ್ವನೂ ಆಗಬಲ್ಲ, ಸ೦ಧಾನದ ಕೃಷ್ಣ ಕೌರವ ಎರಡು ಆಗಬಲ್ಲ, ಋತುಪರ್ಣನೂ ಆಗಬಲ್ಲ, ಬಾಹುಕನೂ ಆಗಬಲ್ಲ, ಸಮಗ್ರ ಭೀಷ್ಮದ ಮೂರೂ ಭೀಷ್ಮನಾಗಿ ವಿಭಿನ್ನವಾಗಿ ಅಭಿನಯಿಸಬಲ್ಲ ಸಮಕಾಲೀನ ಬೆರಳೆಣಿಕೆಯ ಕಲಾವಿದರಲ್ಲಿ ಯಾಜಿಯವರೂ ಒಬ್ಬರು ಎನ್ನುವುದನ್ನು ಪ್ರೇಕ್ಷಕರು ಒಪ್ಪಬಹುದಾದ ಸತ್ಯ. ಭೀಷ್ಮ ವಿಜಯದ ಭೀಷ್ಮ, ದರ್ಮಾಂಗದ ದಿಗ್ವಿಜಯದ ಭರತ, ಶನೀಶ್ವರ ಮಹಾತ್ಮೆಯ ವಿಕ್ರಮಾದಿತ್ಯ, ಹೀಗೆ ಪಾತ್ರ ಯಾವುದೇ ಇರಲಿ ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಶಿಷ್ಟ ಕಲಾವಿದರಿವರು.
ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ
ಬಡಗುತಿಟ್ಟು ಯಕ್ಷಗಾನಕ್ಕೆ ಅಗ್ರಮಾನ್ಯ ಕಲಾವಿದರನ್ನು ನೀಡಿದ ಉ. ಕ. ಜಿಲ್ಲೆಯ ಕುಮಟಾ ತಾಲೂಕಿ ವಾಲಗಳ್ಳಿ ಎಂಬ ಕುಗ್ರಾಮದಲ್ಲಿ 1956ರಲ್ಲಿ ಜನಿಸಿದ ಯಾಜಿಯವರು ಪ್ರೌಢ ಶಿಕ್ಷಣವನ್ನು ಪಡೆದು ಇಡಗುಂಜಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಮಾಡಿದರು 1975ರಲ್ಲಿ ಸಾಲಿಗ್ರಾಮ ಮೇಳ ಸೇರಿ, ಬಳಿಕ ಎಂಟು ವರ್ಷ ಇಡಗುಂಜಿ ಮೇಳದಲ್ಲಿ ತಿರುಗಾಟ ನೆಡೆಸಿ ಪುನಹ 1990ರಲ್ಲಿ ಸಾಲಿಗ್ರಾಮ ಮೇಳ ಸೇರಿದ ಅವರು ಅಂದಿನಿಂದ ಇಂದಿನವರೆಗೆ ಅದೇ ಮೇಳದಲ್ಲಿ 2012ರ ವರೆಗೆ ಸೇವೆ ಸಲ್ಲಿಸುತಿದ್ದಾರೆ.
ತನ್ನ ಆಕಾರಬದ್ದ ವೇಷದ ಸೊಬಗು, ಸುಂದರ ಶರೀರ, ಶಾರೀರದಿಂದ ಅವರು ಪುರುಷ ವೇಷ ಎರಡನೇ ವೇಷ ಹಾಗು ಪುಂಡು ವೇಷಗಳಿಗೆ ಬಹುಬೇಗ ಹೊಂದಿಕೊಳ್ಳುತ್ತಾರೆ. ಕೇದಿಗೆ ಮುಂದಲೇ ಮತ್ತು ಕಿರೀಟವೆರಡಕ್ಕು ಹೊಂದಿಕೊಳ್ಳುವ ಆಳ್ತನವಿರುವುದರಿಂದ ಅವರು ಜಾಂಬವತಿ ಕಲ್ಯಾಣದ ಜಾಂಬವನೂ ಆಗಬಲ್ಲರು, ಕೃಷ್ಣನೂ ಆಗಬಲ್ಲರು, ಸುಭದ್ರಾ ಕಲ್ಯಾಣದ ಕೃಷ್ಣನೂ ಆಗಬಲ್ಲರು ಬಲರಾಮನೂ ಆಗಬಲ್ಲರು. ರಂಗದ ನಿಲುವು, ಚಲನೆ, ನೆಡೆಯಲ್ಲಿ ಸ್ವಂತಿಕೆಯ ಛಾಪು, ಗತ್ತುಗಾರಿಕೆ, ಹೆಚ್ಚೂ ಅಲ್ಲದ ಕಡಿಮೇಯೂ ಅಲ್ಲದ ಸಮತೂಕದ ಮಾತು ಔಚಿತ್ಯಕ್ಕೆ ತಕ್ಕ ಅಭಿನಯ, ಅದಿಕವಲ್ಲದ ಕುಣಿತ ರಂಗದಲಿ ಅಚ್ಚುಕಟ್ಟು, ಸುಸ್ಫಷ್ಟವಾದ ಮಾತು, ಅಪಾರ ಪ್ರತ್ಯುತ್ಪನ್ನ ಮತಿತ್ವ, ಶ್ರುತಿಬದ್ದತೆ, ಶಿಸ್ತು ಬದ್ದತೆಯಿಂದ ಅಬಿವ್ಯಕ್ತಿ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳುವ ಜಾಗರೂಕತೆ ಇವುಗಳು ಯಾಜಿಯವರ ಆಸ್ತಿಗಳಾಗಿದೆ.
ಸವ್ಯಸಾಚಿ ಕಲಾವಿದ
ಮಲಗಿರುವ ಪಿತನನ್ನು ಎಬ್ಬಿಸುತ ಗಾಂಗೇಯ ಎನ್ನುವಲ್ಲಿ ದೇವವ್ರತನ ಪಿತ್ರಭಕ್ತಿ, ಬಂದೆಯ ಇನವಂಶವಾರಿದಿ ಎನ್ನುವಲ್ಲಿ ಶ್ರೀರಾಮನ ಭಾತೃಪ್ರೇಮ, ತಿಳಿದೆನು ನಿನ್ನಯ ಚಿತ್ತದುಮ್ಮಳಿಕೆಯ ನಿಜದೊಲವ ಎನ್ನುವಲ್ಲಿ ಸುಧನ್ವನ ದೈವಭಕ್ತಿ, ಸರಸಿಜಾಂಬಕಿಯರೆ ಕೇಳಿ ಎನ್ನುವಲ್ಲಿ ಆಜನ್ಮ ಬ್ರಹ್ಮಚಾರಿಯೊಬ್ಬ ಪರಸ್ತ್ರೀಯನ್ನು ಮಾತನಾಡಿಸುವ ಪರಿ, ಗುರುವೆ ನಿನ್ನೊಳು ಸಮರಗೈವೆನು ಎನ್ನುವಲ್ಲಿ ಪರಶುರಾಮರಲ್ಲಿ ಭೀಷ್ಮನ ಗುರುಭಕ್ತಿ, ಹೀಗೆ ಯಾಜಿಯವರ ವಿಭಿನ್ನ ಪಾತ್ರಗಳನ್ನು ನೋಡಿದವರಿಗೆ ಅಲ್ಲೆಲ್ಲಾ ಅವರ ಅಭಿನಯ ಚಾತುರ್ಯ ಎದ್ದು ಕಾಣುವುದು ಮಾತ್ರವಲ್ಲದೇ ಯಾಜಿಯವರಿಗೆ ಯಾಜಿಯವರೇ ಹೋಲಿಕೆ ಎನ್ನಬಹುದಾಗಿದೆ.
|
ಬಳ್ಕೂರು ಕೃಷ್ಣಯಾಜಿ |
 |
ಜನನ |
: |
1956 |
ಜನನ ಸ್ಥಳ |
: |
ವಾಲಗಳ್ಳಿ, ಕುಮಟಾ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
40 ವರ್ಷಗಳ ಕಾಲ ಅಮೃತೇಶ್ವರಿ, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ದುಡಿಮೆ.
2012ರಿ೦ದ ``ಯಾಜಿ ಯಕ್ಷ ಮಿತ್ರ ಮಂಡಳಿ``ವತಿಯಿಂದ ``ಯಾಜಿ ಯಕ್ಷ ಮಿತ್ರ`` ಪ್ರಶಸ್ತಿಯನ್ನು ಅಶಕ್ತ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದಾರೆ
|
ಪ್ರಶಸ್ತಿಗಳು:
ಕೆ.ಎಸ್. ನಿಡಂಬೂರು ಪ್ರಶಸ್ತಿ
ನೂರಕ್ಕೂ ಅಧಿಕ ಸನ್ಮಾನ, ಪ್ರಶಸ್ತಿ
ಸಾಲಿಗ್ರಾಮ ಮೇಳದಿಂದ ನೀಡುವ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ
|
|
|
ಅದ್ಬುತವಾದ ಲಯಸಿಧ್ಧಿ, ಶ್ರುತಿಬದ್ದತೆ, ಶೃ೦ಗಾರ, ಕರುಣ, ಭಕ್ತಿ, ಬೀಭತ್ಸ, ಹಾಸ್ಯ ಮುಂತಾದ ನವರಸಗಳನ್ನು ರಸವತ್ತಾಗಿ ಅಭಿನಯಿಸುವ ಅವರ ಅಭಿನಯ ಸಾಮರ್ಥ್ಯ ವರ್ಣಿಸಲಸದಳ. ರಂಗದ ಗಾ೦ಭೀರ್ಯ ಮತ್ತು ಗತ್ತುಗಾರಿಕೆಯೊಂದಿಗೆ ಅವರು ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಯಲಗುಪ್ಪ ಸುಬ್ರಮಣ್ಯ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ, ಶಶಿಕಾಂತ ಶೆಟ್ಟಿ, ಮುಂತಾದ ಹಿರಿಯ ಕಿರಿಯ ಕಲಾವಿದರೊಂದಿಗೆ ಅವರು ಅಭಿನಯಿಸಿದ ಪೌರಾಣಿಕ ಪ್ರಸಂಗದ ಪಾತ್ರಗಳು ಅಪಾರ ಜನ ಮನ್ನಣೆ ಗಳಿಸಿವೆ.
ಅಗ್ರಗಣ್ಯರ ಒಡನಾಟ
ಬಡಾಬಡಗಿನ ಉತ್ತರಕನ್ನಡ ಶೈಲಿಯ ಕಲಾವಿದರಾದ ಇವರು ನಡುತಿಟ್ಟಿನ ಮೇರು ಕಲಾವಿದರಾದ ಶಿರಿಯಾರ ಮಂಜು ನಾಯಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ಅರಾಟೆ ಮಂಜುನಾಥ, ಕೋಟ ವೈಕುಂಠ, ಐರೋಡಿ ಗೋವಿಂದಪ್ಪ, ಎಂ. ಎ. ನಾಯಕ್, ತೀರ್ಥಳ್ಳಿ ಗೋಪಾಲಾಚಾರ್, ರಾಮ ನಾಯರಿ, ಹೊಸಂಗಡಿ ರಾಜೀವ ಶೆಟ್ಟಿ, ಆರ್ಗೋಡು ಮೋಹನದಾಸ ಶೆಣೈ, ಮುಂತಾದ ಕಲಾವಿದರೊಂದಿಗೆ ಅಷ್ಟೇ ಸಮರ್ಥವಾಗಿ ಹೊಂದಿಕೊಂಡವರು. ಎರಡು ವಿಭಿನ್ನ ಶೈಲಿಗಳ ಹೊಂದಾಣಿಕೆಗೆ ಯಾಜಿಯವರು ಒಂದು ಉತ್ತಮ ಉದಾಹರಣೆ. ಹಾಸ್ಯಕಲಾವಿದರನ್ನು ರಂಗದಲ್ಲಿ ಸಮರ್ಥವಾಗಿ ದುಡಿಸಿಕೊಂಡು ಅವರು ಕಾಣಿಸಿಕೊಳ್ಳುವಲ್ಲಿ ಯಾಜಿಯವರ ಕೊಡುಗೆ ಅಪಾರ ಎನ್ನುವುದು ಹಿರಿಯ ಹಾಸ್ಯ ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ಕುಂಜಾಲು ರಾಮಕೃಷ್ಣರ ಮನದಾಳದ ಅನಿಸಿಕೆ. ಹಿರಿಯ ಭಾಗವತರಾದ ನೆಬ್ಬೂರು ನಾರಾಯಣ ಭಾಗವತ, ಮರವಂತೆ ನರಸಿಂಹದಾಸ, ನಾರ್ಣಪ್ಪ ಉಪ್ಪೂರ, ನೆಲ್ಲೂರು ಮರಿಯಪ್ಪಾಚಾರ್, ಮುಂತಾದ ಭಾಗವತರ ಹಾಡುಗಾರಿಕೆಯಲ್ಲಿ ಅಭಿನಯಿಸಿದ ಅವರು ಮುಂದಿನ ಪೀಳಿಗೆಯ ಗುಂಡ್ಮಿ ಕಾಳಿಂಗ ನಾವಡ, ವಿದ್ವಾನ್ ಗಣಪತಿ ಭಟ್, ಕೊಳಗಿ ಕೇಶವ ಹೆಗಡೆ, ಹೆರಂಜಾಲು ಗೋಪಾಲ ಗಾಣಿಗ, ರಾಘವೇಂದ್ರ ಮಯ್ಯ ಮುಂತಾದವರ ಹಿಮ್ಮೇಳಕ್ಕೂ ಅಷ್ಟೇ ಸಲೀಸಾಗಿ ಹೊಂದಿಕೊಂಡಿದ್ದಾರೆ. ಮಾರವಿ ಏಕತಾಳ ಮತ್ತು ಜಂಪೆ ತಾಳದ ಪದ್ಯಗಳನ್ನು ಹೆಜ್ಜೆಹಾಕಿ ಪದ್ಯ ಎತ್ತುಗಡೆ ಮಾಡುವ ಅವರ ಲಯಸಿಧ್ಧಿ ಅಸಾಧಾರಣ. ಈ ನೆಲೆಯಲ್ಲಿ ಬಡಗುತಿಟ್ಟಿನ ಪರಂಪರೆಯಲ್ಲಿ ಅವರು ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಾರೆ.
ಆಧುನಿಕ ಪ್ರಸಂಗಳಲ್ಲಿ ಪೌರಾಣಿಕ ನೆಲೆಗಟ್ಟನ್ನು ಮೀರದೆ ಅಭಿನಯಿಸಿದ ಯಾಜಿಯವರು ಆ ವಿಭಾಗದಲ್ಲೂ ಸೈ ಎಣಿಸಿಕೊಂಡಿದ್ದಾರೆ. ನಾಗಶ್ರೀ ಪ್ರಸಂಗದ ಶಿಥಿಲ, ಚೆಲುವೆ ಚಿತ್ರಾವತಿಯ ಹೇಮಾಂಗದ, ಸತಿ ಶೀಮಂತಿನಿ, ರಂಗನಾಯಕಿ, ಧರ್ಮ-ಸಂಕ್ರಾಂತಿ, ಚೈತ್ರಪಲ್ಲವಿ ಮುಂತಾದ ಪ್ರಸಂಗದ ಅವರ ಪಾತ್ರಗಳು ಪೌರಾಣಿಕ ನೆಲೆಗಟ್ಟಿನಲ್ಲಿ ಗಟ್ಟಿಯಾಗಿ ನಿಂತಿವೆ. ದ್ವಂದ್ವ ಭಾವಗಳುಳ್ಳ ಈಶ್ವರೀ ಪ್ರರಮೇಶ್ವರಿ, ಅಗ್ನಿನಕ್ಷತ್ರ ಮುಂತಾದ ಪ್ರಸಂಗಗಳ ಕ್ಲಿಷ್ಟಕರ ಪಾತ್ರಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದ್ದು ಅವರ ಹೊಸಪ್ರಸಂಗಗಳ ಅಭಿನಯ ಸಿಧ್ಧಿಗೆ ಸಾಕ್ಷಿಯಾಗಿ ನಿಂತಿವೆ.
ಯಾಜಿ ಯಕ್ಷ ಮಿತ್ರ ಪ್ರಶಸ್ತಿ
ನಿರಂತರ 38 ವರ್ಷಗಳ ಕಲಾಸೇವೆಯಲ್ಲಿ ಯಕ್ಷಗಾನದಿಂದ ತಾನು ಪಡೆದದ್ದನ್ನು ಹೋಲಿಸಿದರೆ ಸಮಾಜಕ್ಕೆ ನೀಡಿದ್ದು ಕಡಿಮೆ ಎಂದು ವಿನಮ್ರರಾಗಿ ನುಡಿಯುವ ಸಜ್ಜನ ಕಲಾವಿದರಾದ ಇವರು ಕೆರೆಯ ನೀರನು ಕೆರೆಗೆ ಚೆಲ್ಲುವ ಕಿರುಪ್ರಯತ್ನವಾಗಿ ಕಳೆದ ಕೆಲವು ವರ್ಷಗಳಿ೦ದ ``ಯಾಜಿ ಯಕ್ಷ ಮಿತ್ರ ಮಂಡಳಿ``ವತಿಯಿಂದ ``ಯಾಜಿ ಯಕ್ಷ ಮಿತ್ರ`` ಪ್ರಶಸ್ತಿಯನ್ನು ಅಶಕ್ತ ಕಲಾವಿದರನ್ನು ಗುರುತಿಸಿ ತನ್ನಿಂದಾದ ಸಹಾಯ ಹಸ್ತವನ್ನು ನೀಡುವ ಆದರ್ಶ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಯಕ್ಷಗಾನ ಪೌರಾಣಿಕ ಕಥಾವಸ್ತುವನ್ನು ಹೊಂದಿರಬೇಕು, ನೈತಿಕತೆ, ಆದರ್ಶ, ಯಕ್ಷಗಾನ ಕಥಾವಸ್ತುವಿನ ತಿರುಳಾಗಿರಬೇಕು, ಆದರೆ ಪ್ರೇಕ್ಷಕರ ಅಭಿರುಚಿಗನುಗುಣವಾಗಿ ಬದಲಾಗಬೇಕಾದುದು ಕಲಾವಿದನ ಅನಿವಾರ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಕಲಾಸಂಸ್ಥೆಯ ಅಳಿವು ಉಳಿವಿನ ದೃಷ್ಟಿ, ಪ್ರೇಕ್ಷಕರ ಅಭಿರುಚಿಗೆ ಪ್ರಸ್ತುತ ಗಿಮಿಕ್ ಗಳು ಅನಿವಾರ್ಯವಾದರೂ ಯಕ್ಷಗಾನದ ಮೂಲ ಸ್ವರೂಪವನ್ನು ಉಳಿಸುವಲ್ಲಿ ಪೂರಕವಲ್ಲ ಎನ್ನುವುದು ಇವರ ಪ್ರಾಮಾಣಿಕ ಅನಿಸಿಕೆ. ತನ್ನ ಯಕ್ಷ ಕೈಂಕರ್ಯದಲ್ಲಿ ನೂರಕ್ಕೂ ಅಧಿಕ ಸನ್ಮಾನ, ಪ್ರಶಸ್ತಿ, ಬಿರುದುಗಳನ್ನು ಬಾಚಿಕೊಂಡಿರುವ ಅವರಿಗೆ ಉಡುಪಿಯ ಹರ್ಷ ಗೃಹೋಪಯೋಗಿ ಸಾಮಗ್ರಿಗಳ ಸಂಸ್ಥೆಯ ಸಹಯೋಗದಲ್ಲಿ ನೀಡಲ್ಪಡುವ ಕೆ. ಎಸ್. ನಿಡಂಬೂರು ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ
****************
ಬಳ್ಕೂರು ಕೃಷ್ಣಯಾಜಿಯವರ ಕೆಲವು ಭಾವಚಿತ್ರಗಳು
ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ರಾಘವೇ೦ದ್ರ ಮಯ್ಯ ಯಾಜಿ ಮತ್ತು ಯಾಜಿಯವರ ಶ್ರೀಮತಿಯವರೊ೦ದಿಗೆ
ತಮ್ಮ ತಾರುಣ್ಯದಲ್ಲಿ ಶ್ರೀ ಯಾಜಿಯವರು.
ಶಿಲೆಯಲ್ಲರಳಿದ ಯಾಜಿಯರವ ಚಿತ್ರ
|
|
|