ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣ ಹಾಸ್ಯಗಾರ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಏಪ್ರಿಲ್ 11 , 2014

ಬಡಗುತಿಟ್ಟಿನ ಸಾಂಪ್ರದಾಯದ ಒಲುಮೆಯುಲ್ಲ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹೆಸರು ಕುಂಜಾಲು ರಾಮಕೃಷ್ಣರದ್ದು. ತನ್ನ ಪರಂಪರೆಯ ಶೈಲಿಯ ಹಾಸ್ಯದಿಂದ ಸಹಸ್ರಾರು ಪ್ರೇಕ್ಷಕರನ್ನು ಸೆರೆಹಿಡಿದ ಇವರು ರಸಿಕರಿಂದ ಹಾಸ್ಯಚಕ್ರವರ್ತಿ ಎಂಬ ಅನ್ವರ್ಥ ನಾಮ ಪಡೆದವವರು. ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದ ಇವರು ಬದುಕಿಗಾಗಿ ಪಟ್ಟ ಬವಣೆ ವರ್ಣಿಸಲಸದಳ. ಸಹಸ್ರಾರು ಪ್ರೇಕ್ಷಕರಿಂದ ಅನುಕಂಪಕ್ಕೆ ಒಳಗಾದ ಇವರಿಗೆ ಸ್ಪಂದಿಸಿದ ಸಂಘ ಸಂಸ್ಥೆಗಳು, ವ್ಯಕ್ತಿಗಳು ಸಾವಿರಾರು ಮಂದಿ.

ಹಾಸ್ಯಪ್ರಿಯರಿಗೆ ತೆನಾಲೀ ಎನ್ನುವಷ್ಟೇ ಪ್ರಸಿದ್ದ ಯಕ್ಷಗಾನ ಹಾಸ್ಯಪ್ರಿಯರಿಗೆ ಕುಂಜಾಲು ಎನ್ನುವ ಹೆಸರು. ಈ ಈರ್ವರು ಮಹನೀಯರು ಹಾಸ್ಯ ಲೋಕಕ್ಕೆ ಕೊಟ್ಟ ಕಾಣಿಕೆ ಅಪಾರ. ಬ್ರಹ್ಮಾವರ ಸಮೀಪದ ಈ ಪುಟ್ಟ ಗ್ರಾಮ ಯಕ್ಷಗಾನ ನಕ್ಷೆಯಲ್ಲಿ ದೊಡ್ದ ಹೆಸರು ಪಡೆಯಲು ಕಾರಣ ಯಕ್ಷಲೋಕದ ಹಾಸ್ಯರಾಜ ಕುಂಜಾಲು ರಾಮಕೃಷ್ಣ ನಾಯಕ್. ಬಡಗುತಿಟ್ಟು ಸಾಂಪ್ರದಾಯದ ಹಾಸ್ಯಪ್ರಿಯರಿಗೆ ಹಾಸ್ಯಗಾರರ ಸಾಲಿನಲ್ಲಿ ಕಂಡುಬರುವ ಅಗ್ರಮಾನ್ಯ ಹೆಸರು ಕುಂಜಾಲಿನವರದ್ದು. ಹಾಸ್ಯ ಪಾತ್ರಗಳಲ್ಲಿ ಗತ್ತು ಗಾಂಬೀರ್ಯವನ್ನು ಸಾದರಪಡಿಸಿ ಸಭ್ಯತೆಯಿಂದ ಸಭಿಕರ ಮನ ಸೂರೆಗೊಂಡ ಕೆಲವೇ ಕೆಲವು ಕಲಾವಿದರಲ್ಲಿ ಕುಂಜಾಲಿನವರೂ ಸಹ ಒಬ್ಬರು. ತನ್ನ ವಿಶಿಷ್ಟ ಧ್ವನಿ, ವೈವಿಧ್ಯಮಯ ಅಂಗಚಲನೆ, ವಿಶಿಷ್ಟವಾದ ಹಾಸ್ಯಭಂಗಿಯಿಂದ ಸುಮಾರು ನಾಲ್ಕು ದಶಕಗಳ ಕಾಲ ಹಾಸ್ಯ ಚಕ್ರವರ್ತಿಯಾಗಿ ಮೆರೆದವರು.

ಹಾಸ್ಯಗಾರರಲ್ಲಿ ಪ್ರಮುಖವಾಗಿ ಎರಡು ವಿಧ. “ಏನಕೇನಾ ಪ್ರಕಾರೇಣ” ಎಂಬಂತೆ ಏನಾದರೂ ಮಾಡಿ ಪ್ರೇಕ್ಷಕರನ್ನು ನಗಿಸಿದರೆ ಸಾಕು ಎಂಬ ಧೋರಣೆಯಿಂದ ಅಶ್ಲೀಲ ನುಡಿಗಳನ್ನು ಆಡುತ್ತಲೇ ಇರುವವರು ಮೊದಲನೇ ವರ್ಗಕ್ಕೆ ಸೇರಿದರೆ, ರಂಗಧರ್ಮವನ್ನು ಮೀರದೇ ಸಭ್ಯತೆಯ ಎಲ್ಲೆ ಮೀರದೆ ಸುಸಂಸ್ಕತವಾಗಿ ತನ್ನ ಪಾತ್ರ ಪೋಷಣೆ ಮಾಡುತ್ತಾ ತನ್ಮೂಲಕ ಪ್ರೇಕ್ಷಕರನ್ನು ಗೆಲ್ಲುವುದಕ್ಕೆ ಯತ್ನಿಸುವವರು ಎರಡನೇ ವರ್ಗ. ಈ ಎರಡನೇ ವರ್ಗಕ್ಕೆ ಸೇರಿದ ಕಲಾವಿದರಲ್ಲಿ ಮುಂಚೂಣಿಯಲ್ಲಿ ಇರುವವರು ಕುಂಜಾಲಿನವರು. ತಾನು ನಗದೇ ಇತರರನ್ನು ನಗಿಸುವುದು ಹಾಸ್ಯ ಕಲಾವಿದರ ಗುಟ್ಟು ಎಂಬುದನ್ನು ಮನಗಂಡು ಹಾಸ್ಯರತ್ನ ಎಂಬ ಕಿರೀಟವನ್ನು ಕಲಾಭಿಮಾನಿಗಳ ಮೂಲಕ ತನ್ನ ಶಿರಕ್ಕೇರಿಸಿಕೊಂಡು ದಕ್ಷೀಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆ ಮಾತಾದ ಕಲಾವಿದರಿವರು.

ಬಾಲ್ಯ, ಶಿಕ್ಷಣ ಮತ್ತು ಪಾದಾರ್ಪಣೆ

ಉಡುಪಿ ತಾಲೂಕು ಬ್ರಹ್ಮಾವರ ಸಮೀಪ ಕುಂಜಾಲಿನಲ್ಲಿ ಪದ್ಮನಾಭ ನಾಯಕ್ ಮತ್ತು ಶಾರದಾ ಬಾಯಿ ದಂಪತಿಯ ಸುಪುತ್ರನಾಗಿ ಜನಿಸಿದ ಇವರು ಕುಂಜಾಲು ಶಾಲೆಯಲ್ಲಿ ಏಳನೇ ತರಗತಿ ಅಬ್ಯಾಸ ಮಾಡಿ ನವರಾತ್ರಿ ಹೂವಿನ ಕೋಲಿನ ಕಲಾವಿದರಾಗಿ ಪ್ರಸಿದ್ದ ಭಾಗವತ ಗೋರ್ಪಾಡಿ ವಿಠಲ ಪಾಟೀಲರ ತಂಡದಲ್ಲಿ ತಿರುಗಾಟ ಮಾಡಿದರು. ಅವರಲ್ಲೇ ತಾಳ ಹಾಗೂ ಲಯದ ನಿಘಂಟನ್ನು ಅಭ್ಯಯಿಸಿದ್ದರಿಂದ ಅವರನ್ನೇ ತನ್ನ ಗುರು ಎಂದು ಅಭಿಮಾನದಿಂದ ಹೇಳುತ್ತಾರೆ. ತಾನು ಹಾಸ್ಯ ಕಲಾವಿದನಾಗಿ ಬೆಳೆಯಲು ಬಡಗುತಿಟ್ಟಿನ ಪ್ರಸಿದ್ದ ಹಾಸ್ಯಗಾರ ಕೊರಗಪ್ಪ ದಾಸರೇ ಕಾರಣ ಅಲ್ಲದೇ ತಾನು ಪರಿಪೂರ್ಣ ಕಲಾವಿದನಾಗಿ ಬೆಳೆಯಲು ಗುರು ವೀರಭದ್ರ ನಾಯಕರೇ ಕಾರಣ ಎನ್ನುವ ಇವರು ನಾಯಕರ ಒದೆತವೇ ನನಗೆ ವರವಾಗಿ ಪರಿಣಮಿಸಿತು ಎಂದು ವಿನಮ್ರವಾಗಿ ಹೇಳುತ್ತಾರೆ.

ಕುಂಜಾಲಿನವರಿಗೆ ಪ್ರಸಿಧ್ಧಿ ತಂದುಕೊಟ್ಟ ಪಾತ್ರಗಳಲ್ಲಿ ಬೇಡರ ಕಣ್ಣಪ್ಪ ಪ್ರಸಂಗದ ಕಾಶಿ ಮಾಣಿಯ ಪಾತ್ರವೂ ಒಂದು. ಒಮ್ಮೆ ಕೊಲ್ಲೂರು ಮೇಳದಲ್ಲಿದ್ದಾಗ ವೀರಭದ್ರ ನಾಯಕರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಕಾಶಿ ಮಾಣಿ ಪಾತ್ರ ಮಾಡಬೇಕಾಗಿದ್ದ ಪ್ರಸಿದ್ದ ಹಾಸ್ಯಗಾರರಾದ ಕೊರಗಪ್ಪ ಹಾಸ್ಯಗಾರರು ರಜೆ ಮಾಡಿದ್ದರು. ಆಟ ಆಡಿಸುವ ಮುಂದಾಳುಗಳು ಅದೇ ಪ್ರಸಂಗ ಆಗಬೇಕೆಂದು ಪಟ್ಟು ಹಿಡಿದಿದ್ದರಿಂದ ಭಾಗವತ ಉಪ್ಪೂರರ ಮತ್ತು ವೀರಭದ್ರ ನಾಯಕರ ಮಾತಿಗೆ ಕಟ್ಟು‌ಬಿದ್ದು ಸಹ ವಿದೂಷಕನಾದ ಇವರು ಕಾಶೀಮಾಣಿಯಾಗಿ ರಂಗ ಪ್ರವೇಶ ಮಾಡಿದರು. ಪ್ರಥಮ ಪ್ರಯೋಗದಲ್ಲೇ ಪ್ರೇಕ್ಷಕರು ಒಪ್ಪಿದರು. ವೀರಭದ್ರ ನಾಯಕರು ಮುದ್ದಾಡಿದರು. ಅಂದಿನಿಂದ ಕಾಶಿಮಾಣಿ ಅವರಿಗೆ ಅನ್ವರ್ಥ ನಾಮವಾಯಿತು.

ಕುಂಜಾಲು ರಾಮಕೃಷ್ಣ ಹಾಸ್ಯಗಾರ್
ಜನನ : 1945
ಜನನ ಸ್ಥಳ : ಕುಂಜಾಲು, ಬ್ರಹ್ಮಾವರ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ತನ್ನ ವಿಶಿಷ್ಟ ಧ್ವನಿ, ವೈವಿಧ್ಯಮಯ ಅಂಗಚಲನೆ, ವಿಶಿಷ್ಟವಾದ ಹಾಸ್ಯಭಂಗಿಯಿಂದ ಸುಮಾರು ನಾಲ್ಕು ದಶಕಗಳ ಕಾಲ ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ 40 ವರ್ಷಕ್ಕೂ ಮಿಕ್ಕಿ ಹಾಸ್ಯ ಚಕ್ರವರ್ತಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿಗಳು:
  • ರಾಜ್ಯೋತ್ಸವ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


ಮರಣ ದಿನಾ೦ಕ : ಜೂನ್ 12, 2014

ಕಲಾಸೇವೆ

ಗುರು ವೀರಭದ್ರ ನಾಯಕರೊಂದಿಗೆ ಸಾಲಿಗ್ರಾಮ ಮೇಳ ಸೇರಿದಾಗ ಅಲ್ಲಿ ನಾರ್ಣಪ್ಪ ಉಪ್ಪೂರರು ಬೇಳಂಜೆ ತಿಮ್ಮಪ್ಪ ನಾಯಕರು ಕೆರೆಮನೆ ಬ೦ಧುಗಳು, ಶಿರಿಯಾರ ಮಂಜು ನಾಯ್ಕರು, ಬೆಲ್ತೂರು ರಮೇಶ ಮುಂತಾದ ಅತಿರಥ ಮಹಾರಥ ಕಲಾವಿದರಿದ್ದರು. ಆಗ ಅಲ್ಲಿ ಜಯಬೇರಿ ಬಾರಿಸುತಿದ್ದ ``ಸಮಗ್ರ ಬೀಷ್ಮ`` ಪ್ರಸಂಗದಲ್ಲಿನ ಇವರ ಕಂದರನ ಪಾತ್ರ ವೀರಭದ್ರ ನಾಯ್ಕರ ಶಂತನು, ಶಿರಿಯಾರ ಮಂಜುನಾಯ್ಕರ ದೇವವ್ರತ, ಬೆಲ್ತೂರು ರಮೇಶರ ಮಂತ್ರಿ, ಹೆರಂಜಾಲು ವೆಂಕಟರಮಣ ಗಾಣಿಗರ ಯೋಜನಗಂಧಿ ಅಪಾರ ಜನಮನ್ನಣೆ ಗಳಿಸಿತ್ತು. ಮಹಾಬಲ ಹೆಗಡೆಯವರ ದುಷ್ಟಬುದ್ದಿಗೆ ಇವರ ಕಪ್ಪದ ದೂತ ಸಹ ಖ್ಯಾತ ಜೋಡಿಯಾಗಿತ್ತು.

ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯೊಂದಿಗೆ ಇವರು ನಿರ್ವಹಿಸಿದ ಹರಿಶ್ಚಂದ್ರದ ನಕ್ಷತ್ರಿಕ, ಉತ್ತರ ಕುಮಾರ, ಭೀಷ್ಮ ವಿಜಯ ಮತ್ತು ದಕ್ಷಯಜ್ಜದ ವೃಧ್ಧ ಬ್ರಾಹ್ಮಣ, ಗದಾಯುಧ್ಧದ ಬೇವಿನಚರ, ಸುಹಾಶಿನಿ ಪರಿಣಯದ ಹೆಡ್ದ ಮುಂತಾದ ಪಾತ್ರಗಳು ಇವರದ್ದೇ ಸೃಷ್ಟಿ ಎನ್ನುವಷ್ಟು ಪ್ರಸಿಧ್ಧಿ ಪಡೆದಿವೆ. ದೀರ್ಘ ಕಾಲ ಉ. ಕದ ಇಡಗುಂಜಿ ಮೇಳದಲ್ಲಿ ತಿರುಗಾಟ ಮಾಡಿದ ಇವರ ಮೇಳದ ತಿರುಗಾಟದಲ್ಲಿ ಬಹುಪಾಲು ತಿರುಗಾಟ ಕೆರೆಮನೆ ಬ೦ಧುಗಳೊಂದಿಗೆ. ಹೊಸ ಪ್ರಸಂಗಗಳಲ್ಲೂ ಸಹ ಸೈ ಎಣಿಸಿಕೊಂಡ ಇವರು ಶಿರಸಿ ಮೇಳದ ಬಾಗ್ಯ ಭಾರತಿ ಪ್ರಸಂಗದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರೊಂದಿಗೆ ನಿರ್ವಹಿಸಿದ ಮರ್ತಪ್ಪ- ಚರ್ಡಪ್ಪರ ಜೋಡಿ ವೇಷ ಅಪಾರ ಜನ ಮನ್ನಣೆ ಪಡೆದಿತ್ತು. ಇಡಗುಂಜಿ ಮೇಳದಲ್ಲಿ ದಮಯಂತಿ ಕಲ್ಯಾಣ ಪ್ರಸಂಗದಲ್ಲಿ ಮಹಾಬಲ ಹೆಗಡೆಯವರ ರುತುಪರ್ಣ, ಶಂಭು ಹೆಗಡೆಯವರ ಬಾಹುಕನಿಗೆ ಸಣ್ಣ ಪಾತ್ರವಾದ ಸುದೇವ ಬ್ರಾಹ್ಮಣನಾಗಿ ಇವರ ಅಭಿನಯ ಪ್ರೇಕ್ಷಕರ ಮನಕರಗಿಸುತಿತ್ತು.

ತನ್ನನ್ನು ತಿದ್ದಿ ತೀಡಿದ ಹಿರಿಯ ಕಲಾವಿದರಾದ ವೀರಭದ್ರ ನಾಯಕ್, ವಿಠಲ ಪಾಟೀಲ್, ನಾರ್ಣಪ್ಪ ಉಪ್ಪೂರರನ್ನು ಸದಾ ಸ್ಮರಿಸುವ ಇವರು ಇಂದು ಕಲಾವಿದರಲ್ಲಿ ಒಬ್ಬರು ಇನ್ನೊಬ್ಬರಲ್ಲಿ ಕೇಳುವ ಪರಿಪಾಟ ಹೋಗಿದೆ ಎಂದು ಕಳವಳ ಪಡುತ್ತಾರೆ. ಈ ತಲೆಮಾರಿನ ಕಲಾವಿದರಲ್ಲಿ ಹಳ್ಳಾಡಿ ಜಯರಾಮ ಶೆಟ್ಟರ ದಾರಿ ನನ್ನದೇ ಆಗಿದ್ದು ರಾಜ ಹಾಸ್ಯ ಎಂದು ಪರಿಗಣಿಸಬಹುದು, ಶ್ರುತಿ ಬದ್ದತೆ ಅವರ ಆಸ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ನೋರ್ವ ಕಲಾವಿದ ರಮೇಶ ಭಂಡಾರಿ ಉತ್ತಮ ಕಲಾವಿದನಾಗಿದ್ದು ಹಿರಿಯ ಕಲಾವಿದ ಸಾಲ್ಕೋಡು ಗಣಪತಿ ಹೆಗಡೆಯವರ ಛಾಯೆಯನ್ನು ಗುರುತಿಸಬಹುದೆಂದು ಸಹ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.



****************

ಕುಂಜಾಲು ರಾಮಕೃಷ್ಣ ನಾಯಕ್ ರವರ ಕೆಲವು ಭಾವಚಿತ್ರಗಳು




















Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Ram Hegde(4/14/2014)
ಶ್ರೀ ಕುಂಜಾಲು ರಾಮಕೃಷ್ಣ ಅವರು ಖಂಡಿತವಾಗಿಯೂ' ಹಾಸ್ಯರಸ ಚಕ್ರವರ್ತಿ' ವಿದೂಷಕ ರತ್ನ' ಮುಂತಾದ ಬಿರುದು ಬಾವಲಿಗಳನ್ನು ದಕ್ಕಿಸಿಕೊಳ್ಳಬಲ್ಲ ಅಂತಃಸತ್ವವನ್ನು ಹೊಂದಿದ ಕಲಾವಿದ.ಅವರ ಹಾಸ್ಯಪೃಜ್ನೆ ಉನ್ನತ ಮಟ್ಟದ್ದು.ಚತುರಮತಿ.ಕೇವಲ ಮುಖಮುದ್ರೆ,ಅಂಗಚಲನೆ,ನೋಟಗಳಿಂದಲೇ ಹಾಸ್ಯವನ್ನು ಹುಟ್ಟಿಸಬಲ್ಲವರು.
Harish Kote Subbarao(4/12/2014)
ಒಳ್ಳೆಯ ಕಲಾವಿದ..ಪ್ರಬುದ್ಧ ಹಾಸ್ಯ..ಶಂಭು ಹೆಗಡೆಯವರ ಹರಿಶ್ಚಂದ್ರನ ಎದುರು ನಕ್ಷತ್ರಿಕ, ಸುಭದ್ರಾ ಕಲ್ಯಾಣದಲ್ಲಿ ಮಹಾಬಲ ಹೆಗಡೆಯವರ ಬಲರಾಮನಿಗೆ ವನಪಾಲಕ ಕೂಡ ಉತ್ತಮವಾಗಿ ಮಾಡುತ್ತಿದ್ದರು..ನಾರದ, ಮುನಿ ಮುಂತಾದ ವೇಷವಾದರೆ ಗಂಭೀರ ಅರ್ಥ.. ಪದ್ಯ ಎಲ್ಲ ಕಂಠಸ್ಥ ..ಎತ್ತುಕಡೆ ಕೂಡ ಮಾಡುತ್ತಿದ್ದರು




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ