ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷಗಾನೀಯ ಕಂಠದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಏಪ್ರಿಲ್ 13 , 2014

ಬಡಗುತಿಟ್ಟಿನ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟರಿಗೆ ಈ ವರ್ಷ ತನ್ನ ಯಕ್ಷ ತಿರುಗಾಟದ ಮೂವತ್ತರ ಸಂಭ್ರಮ. ಸರಿದಾರಿಯಲ್ಲಿ ಸಾಗಿಬಂದ ಕಲಾವಿದ ಯಾವೊತ್ತೂ ಬಡವನಾಗಲಾರ, ಕಲಾವಿದನಾದವನಿಗೆ ಸಾಮಾಜಿಕ ಹೊಣೆಗಾರಿಕೆ ಇದೆ, ತತ್ವ, ಆದರ್ಶ ನೈತಿಕತೆ ಸಚ್ಚಾರಿತ್ಯ, ಶಿಸ್ತು ಕಲಾವಿದನಾದವ ಮೈಗೂಡಿಸಿಕೊಂಡಿರಬೇಕು, ಕಲಾವಿದನ ಹಗಲು ವ್ಯವಹಾರ, ನಡೆತೆಗಳು ಅವರ ಬೆಳವಣಿಗೆಗೆ ಸಹಾಯಕವಾಗಿರಬೇಕೆಂಬ ಅಂಶವನ್ನು ಮನಗಂಡು ಕಲಾಸೇವೆ ಮಾಡಿದ ಕಲಾವಿದರಿವರು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಕುಟು೦ಬ

ಪ್ರಸ್ತುತ ಶ್ರೀ ಪೆರ್ಡೂರು ಡೇರೆ ಮೇಳದ ಪ್ರದಾನ ಕಲಾವಿದರಲ್ಲಿ ಒಬ್ಬರಾದ ಇವರು ಬಡಾಬಡಗುತಿಟ್ಟಿಗೆ ಮಹಾನ್ ಕಲಾವಿದರನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಕೋಳಿಗಾರ ಎಂಬಲ್ಲಿ ಸುಸಂಸ್ಕ್ರತ ಹವ್ಯಕ ಬ್ರಾಹ್ಮಣ ಕುಟುಂಬದ, ತಿಮ್ಮಣ್ಣ ಭಟ್ ಮತ್ತು ಗಿರಿಜಮ್ಮ ದಂಪತಿಯ ಪುತ್ರನಾಗಿ ಜನಿಸಿದ ಶ್ರೀಪಾದ ಭಟ್ಟರಿಗೆ ಯಕ್ಷಗಾನ ತಂದೆಯಿಂದ ಬಂದ ಬಳುವಳಿ. ಅವರ ತಂದೆ ತಿಮ್ಮಣ್ಣ ಭಟ್ಟರು ಸ್ವತಹ ಕಲಾವಿದರಾಗಿದ್ದು ಕೊಳಗಿಬೀಸ್, ಕಮಲಶಿಲೆ, ಭರತನಹಳ್ಳಿ ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದವರು. ದ್ವಿತೀಯ ಪಿ. ಯು. ಸಿ ವರೆಗೆ ವಿದ್ಯಾಬ್ಯಾಸ ಪಡೆದು ಸುಶಿಕ್ಷಿತ ಕಲಾವಿದನೆಂಬ ಹಣೆಪಟ್ಟಿಯೊಂದಿಗೆ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಯಕ್ಷಕಲಾ ತಪಸ್ವಿ ಹೊಸ್ತೋಟ ಮಂಜುನಾಥ ಬಾಗವತರ ಶಿಷ್ಯನಾಗಿ, ಹೆಜ್ಜೆಗಾರಿಕೆ ಕಲಿತ ಇವರು ಎರಡು ವರ್ಷ ಸಹ್ಯಾದ್ರಿ, ಸಿರಸಿ ಮೇಳಗಳಲ್ಲಿ ದುಡಿದರು.

1985ರಲ್ಲಿ ವೃತ್ತಿ ಮೇಳವಾದ ಪಂಚಲಿಂಗೇಶ್ವರ ಮೇಳಕ್ಕೆ ಒಡ್ಡೋಲಗ ವೇಷದಾರಿಯಾಗಿ ಸೇರ್ಪಡೆಗೊಂಡರು. ಹಿರಿಯ ಕಲಾವಿದರಾದ ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಬಾಗವತರು, ಕೊಳಗಿ ಅನಂತ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣ ಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಮುಂತಾದವರಿಂದ ಮಾರ್ಗದರ್ಶನ ಪಡೆದು ಪರಿಪೂರ್ಣ ಕಲಾವಿದರಾಗಿ ಬೆಳೆದರು. ತಮ್ಮ ಆಳ್ತನ, ನಿಲುವು, ಅಪೂರ್ವವಾದ ಯಕ್ಷಗಾನೀಯ ಕಂಠ ಮಾದುರ್ಯ, ಶ್ರುತಿಬದ್ದತೆ, ಪ್ರತ್ಯುತ್ಪನ್ನಮತಿತ್ವ ಇವುಗಳಿಂದ ಕಥಾನಾಯಕ, ಪ್ರತಿನಾಯಕ ಪಾತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು.

ಅಪೂರ್ವವಾದ ಏರುಶ್ರುತಿಯ ``ಥಂಡಿಮನೆ ಶೈಲಿ``

ಕಂಸ, ಯಮ, ಹಿರಣ್ಯಕಶ್ಯಪು, ಮಾಗಧ, ಕೌರವ ಮುಂತಾದ ಖಳ ಪಾತ್ರಗಳು ಅವರ ಅಪೂರ್ವವಾದ ಏರುಶ್ರುತಿಯ ಸ್ವರಕ್ಕೆ ಹೊಂದಿಕೊಳ್ಳುವ ಪಾತ್ರಗಳಾಗಿದ್ದು, ಇದು ಅವರ ಟ್ರಂಪ್ ಕಾರ್ಡ್ ಪಾತ್ರಗಳಾಗಿವೆ. ಲಂಕಾದಹನದ ಆಂಜನೇಯ, ರತ್ನಾವತಿ ಕಲ್ಯಾಣದ ಭದ್ರಸೇನ, ಕಾರ್ತವೀರ್ಯ, ಜಮದಗ್ನಿ, ಬೀಷ್ಮ, ವಾಲಿ, ಬಲರಾಮ, ಪರಶುರಾಮ ಮುಂತಾದ ಧೀಮಂತ ಪಾತ್ರಗಳಿಗೆ ಜೀವ ತುಂಬುದರೊಂದಿಗೆ ``ಥಂಡಿಮನೆ ಶೈಲಿ`` ಎಂಬ ಹೊಸ ಶೈಲಿಯನ್ನೇ ಹುಟ್ಟುಹಾಕಿದವರು.

ಸಿರಸಿ ಮೇಳದಲ್ಲಿ ಗೋಡೆ ನಾರಾಯಣ ಹೆಗಡೆ, ರಾಮದಾಸ ಸಾಮಗ, ಎಂ. ಎ ನಾಯಕ್ ಮುಂತಾದ ಹಿರಿಯ ಕಲಾವಿದರ ಒಡನಾಡಿಯಾಗಿ ಪರಿಪಕ್ವವಾಗಿ ಬೆಳೆದ ಇವರು ನಂತರ 7 ವರ್ಷ ಸಾಲಿಗ್ರಾಮ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ಕಾಣಿಸಿಕೊಂಡರು. ಯಾಜಿ, ಕೊಂಡದಕುಳಿ, ಹಳ್ಳಾಡಿ ಜಯರಾಮ ಶೆಟ್ಟಿ ಮುಂತಾದ ಕಲಾವಿದರೊಂದಿಗೆ ಅಲ್ಲಿ ಅವರು ಯಶಸ್ಸಿನ ತುತ್ತ ತುದಿ ಏರಿದ್ದರು.

ಥಂಡಿಮನೆ ಶ್ರೀಪಾದ ಭಟ್
ಜನನ : ಜುಲೈ 20,
ಜನನ ಸ್ಥಳ : ಕೋಳಿಗಾರ, ಸಿರಸಿ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಪಂಚಲಿಂಗೇಶ್ವರ, ಸಿರಸಿ, ಸಾಲಿಗ್ರಾಮ, ಮಂದಾರ್ತಿ, ಪೆರ್ಡೂರು ಮೇಳಗಳಲ್ಲಿ 30 ವರ್ಷಗಳಿ೦ದ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿಗಳು:
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


ಹಳೆಯ ಪೌರಾಣಿಕ ಪಾತ್ರವಲ್ಲದೆ ಅಲ್ಲಿ ಅವರು ಅಬಿನಯಿಸಿದ ರಂಗನಾಯಕಿ ಪ್ರಸಂಗದ ಬೈರಾನ್ ಖಾನ್ ಎಂಬ ಮುಸ್ಲೀಮ್ ರಾಜನ ಪಾತ್ರ ಅಪಾರ ಜನಮನ್ನಣೆ ಪಡೆಯಿತು. ಬಳಿಕ ಒಂದು ವರ್ಷ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸಿದ್ದ ಬಯಲಾಟ ಮೇಳವಾದ ಮಂದಾರ್ತಿಯಲ್ಲಿ ಎರಡನೇ ವೇಷದಾರಿಯಾಗಿ ಸೇರ್ಪಡೆಗೊಂಡರು. ಅಲ್ಲಿ ಪ್ರದರ್ಶನಗೊಳ್ಳುತಿದ್ದ ಪೌರಾಣಿಕ ಪ್ರಸಂಗದ ಅವರ ಪಾತ್ರಗಳು ಜನಮನ್ನಣೆ ಪಡೆದಿದ್ದವು. ಕಳೆದ ಐದು ವರ್ಷದಿಂದ ಪೆರ್ಡೂರು ಮೇಳದ ಬಹುಬೇಡಿಕೆಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

30 ವರ್ಷಗಳ ರಂಗಭೂಮಿಯ ಆಳವಾದ ಅಭಿನಯ

ಅನೇಕ ದ್ವನಿಸುರುಳಿ, ಸಿ, ಡಿ. ಕ್ಯಾಸೆಟ್ಟ್ ಗಳಲ್ಲಿ. ವಿನೂತನ ಯಕ್ಷಪ್ರಯೋಗಗಳಲ್ಲಿ ಬಾಗವಹಿಸಿದ ಇವರು ಕೊಂಡದಕುಳಿ ಪೂರ್ಣಚಂದ್ರ ಮೇಳದ ಕಲಾವಿದನಾಗಿ ಯಕ್ಷನೃತ್ಯ ಕಾರ್ಯಕ್ರಮದಲ್ಲೂ ಬಾಗವಹಿಸಿದ್ದಾರೆ. ಹಲವಾರು ಸಮ್ಮಾನ ಗೌರವಗಳಿಗೆ ಭಾಜನರಾದ ಇವರು ಅಗ್ಗದ ಜನಪ್ರಿಯತೆಯ ಉದ್ದೇಶದಿಂದ ಕೇವಲ ಪ್ರಚಾರ, ಸೀಟಿ, ಚಪ್ಪಾಳೆ ಹೊಗಳಿಕೆಯ ಹಿಂದೆ ಬೀಳದೆ, ಶಿಸ್ತಿನ ಕಲಾವಿದನಾಗಿ ಸಾಗಿ ಬಂದಿದ್ದಾರೆ. ಹೊಸ ಕಾಲ್ಪನಿಕ ಐತಿಹಾಸಿಕ ಪ್ರಸಂಗ ಯಾವುದೇ ಇರಲಿ ಪೌರಾಣಿಕ ನೆಲೆಗಟ್ಟಿನಲ್ಲಿ ಯಕ್ಷಗಾನೀಯವಾಗಿ ಪ್ರದರ್ಶಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಕಲಾವಿದರಿವರು. ಪಾತ್ರ ಯಾವುದೇ ಇರಲಿ ಔಚಿತ್ಯ, ರಂಗಪ್ರಜ್ಞೆ, ಆಶಯ ಮೀರದೆ ಅಭಿನಯಿಸುವ ಕಲ್ಪನೆ, ರಂಗಭೂಮಿಯ ಮೇರು ಕಲಾವಿದರ ಒಡನಾಟ, 30 ವರ್ಷಗಳ ರಂಗಭೂಮಿಯ ಆಳವಾದ ಅಭಿನಯ ಇವರನ್ನು ಮೇರು ಕಲಾವಿದನನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿವೆ.

ತನ್ನ ವೃತ್ತಿ ಜೀವನಕ್ಕೆ ಯಾವೋತ್ತು ತೊಂದರೆ ಆಗಬಾರದೆಂಬ ನೆಲೆಯಲ್ಲಿ ಕುಂದಾಪುರ ಸಮೀಪ ಕುಂಬಾಶಿಯಲ್ಲಿ ಕಳೆದ 15 ವರ್ಷಗಳಿಂದ ಪತ್ನಿ ಸುನೀತಾ ಸಹಿತ ವಾಸವಾಗಿದ್ದಾರೆ.****************

ಥಂಡಿಮನೆ ಶ್ರೀಪಾದ ಭಟ್ ರವರ ಕೆಲವು ಭಾವಚಿತ್ರಗಳುShare

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Dr.S. Govindabhat(6/7/2014)
Good article.. good artist and very good personality.
Swagath(4/14/2014)
A very good article on a very good artist .
Naveen(4/14/2014)
ಬೈರಾನ್ ಖಾನ್ ಪಾತ್ರ ಧರ್ಮಸಂಕ್ರಾಂತಿ ಪ್ರಸಂಗದ್ದು ಅಲ್ಲವೇ?
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ