ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಅಗ್ರಮಾನ್ಯ ಪುರುಷ ವೇಷಧಾರಿ ಹಳ್ಳಾಡಿ ಮಂಜಯ್ಯ ಶೆಟ್ಟಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಏಪ್ರಿಲ್ 14 , 2014

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ‘ಅಭಿನವ ಶಿರಿಯಾರ ಮಂಜು’ ಎಂದು ಖ್ಯಾತರಾದ ಹಳ್ಳಾಡಿ ಮಂಜಯ್ಯ ಶೆಟ್ಟರು‌, ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ, ಬಡಗುತಿಟ್ಟಿನ ಅಗ್ರಶ್ರೇಣಿಯ ಪುರುಷ ವೇಷಧಾರಿಯಾದ ಇವರು ತನ್ನ ವೃಧ್ಧಾಪ್ಯದಲ್ಲಿ ಅಕಾಡೆಮಿಯ ಗೌರವ ಪಡೆದವರು.

ಹಳ್ಳಾಡಿಯವರಲ್ಲಿ ಬಹವಾಗಿ ಗಮನಿಸಬೇಕಾಗಿದ್ದು ವೇಷಗಾರಿಕೆಯ ಸೊಗಸು ಮತ್ತು ಮಾತುಗಾರಿಕೆಯ ಮೋಡಿ. ಇವೆಲ್ಲದರಲ್ಲಿಯೂ ಅವರಿಗೆ ಸಮಕಾಲೀನರಾದ ಶಿರಿಯಾರ ಮಂಜುನಾಯ್ಕರ ಪ್ರಭಾವವನ್ನು ಕಾಣ ಬಹುದಾಗಿದೆ. ಪಾರಿಜಾತ ಪ್ರಕರಣದ ಕೃಷ್ಣನಿರಲಿ, ರತಿ ಕಲ್ಯಾಣ, ಜಾಂಬವತಿ ಕಲ್ಯಾಣ ಹೀಗೆ ಯಾವುದೇ ಪ್ರಸಂಗದ ಕೃಷ್ಣನಿರಲಿ ಅಲ್ಲಿ ಶಿರಿಯಾರದವರ ವೇಷದ ಮೋಡಿಯನ್ನು ಹಳ್ಳಾಡಿಯವರಲ್ಲಿ ಗುರುತಿಸಬಹುದು. ಕಾಕತಾಳೀಯವಾಗಿ ಶಿರಿಯಾರ, ಹಳ್ಳಾಡಿ ಕೂಡು ಗ್ರಾಮವಾಗಿದ್ದು ಇವರಿಬ್ಬರು ಮಹಾನ್ ಕಲಾವಿದರ ಹೆಸರು ಸಹ ಒಂದೇ ಆಗಿದೆ. ಹಾಗಲ್ಲದೆ ಇವರೀರ್ವರೂ ಸಮಕಾಲಿನರು. ಇಬ್ಬರು ಸಹ ಯಕ್ಷಗಾನದಲ್ಲಿ ಜೀವಿತದಲ್ಲೆ ದಂತಕತೆಯಾದವರು.

ಉಡುಪಿ ಜಿಲ್ಲೆಯ ಶಿರಿಯಾರ ಸಮೀಪ ಹಳ್ಳಾಡಿ ಗ್ರಾಮದಲ್ಲಿ ಮಧ್ಯಮವರ್ಗದ ಬಂಟ ಸಮುದಾಯದ ಗೋವಿಂದ ಶೆಟ್ಟಿ ದೇವಮ್ಮ ದಂಪತಿಗಳ ಸುಪುತ್ರನಾಗಿ 1932ರಲ್ಲಿ ಜನಿಸಿದ ಇವರು ಹಳ್ಳಾಡಿ ಗ್ರಾಮದಲ್ಲಿ ಪ್ರಾಥಮಿಕ ಅಬ್ಯಾಸಮಾಡಿ 1948ರಲ್ಲಿ ಖ್ಯಾತ ಬಯಲಾಟ ಮೇಳವಾದ ಮಂದಾರ್ತಿಯಲ್ಲಿ ಗೆಜ್ಜೆ ಕಟ್ಟಿದರು. ಬಡಗುತಿಟ್ಟಿನ ದಂತಕಥೆಗಳಾದ ಹಾರಾಡಿ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗರು, ಕುಂಜಾಲು ಶೇಷಗಿರಿ ಕಿಣಿ, ಜಾನುವಾರು ಕಟ್ಟೆಯವರು ಮಂದಾರ್ತಿ ಮೇಳದಲ್ಲಿ ಮೆರೆಯುತಿದ್ದ ಕಾಲವದು. ಅವರೆಲ್ಲರ ಒಡನಾಟ ದೊರೆತದ್ದು ಮಾತ್ರವಲ್ಲದೆ ಬಡಗುತಿಟ್ಟಿನ ‌ಇನ್ನೋರ್ವ ದಶಾವತಾರಿ ವೀರಭದ್ರ ನಾಯಕ್, ಹಾಗೂ ಖ್ಯಾತ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಸೇರೆಗಾರರ ಶಿಷ್ಯತ್ವವೂ ದೊರೆತು ಮಟ್ಪಾಡಿ ಶೈಲಿಯ ಪ್ರಾತಿನನಿಧಿಕ ಕಲಾವಿದರಾಗಿ ಮೂಡಿಬಂದರು.

ಚುರುಕು ನಡೆಯ ಸುಧನ್ವ, ಬಬ್ರುವಾಹನ, ಲವಕುಶ, ಶ್ವೇತಕುಮಾರ, ಅಭಿಮನ್ಯು, ಅಲ್ಲದೆ ಯಯಾತಿ, ಅರ್ಜುನ, ಕೃಷ್ಣ ಮುಂತಾದ ಪಾತ್ರಗಳಲ್ಲಿ ಬಹು ಬೇಗ ಸೈ ಎಣಿಸಿಕೊಡರೂ ಅವರಿಗೆ ಆ ಕಾಲದಲ್ಲಿ ಪ್ರಸಿಧ್ಧಿಯನ್ನು ತಂದು ಕೊಟ್ಟ ಪಾತ್ರ ರುಕ್ಮಾಂಗದ ಚರಿತ್ರೆಯ ಧರ್ಮಾಂಗದ, ಬೀಷ್ಮ ವಿಜಯದ ಪರಶುರಾಮ, ಪಾರಿಜಾತದ ಕೃಷ್ಣ ಮತ್ತು ನಳಚರಿತ್ರೆಯ ಋುತುಪರ್ಣ. ಅಂದಿನ ಮಂದಾರ್ತಿ ಮೇಳದಲ್ಲಿ ಹಳ್ಳಾಡಿಯವರ ಋುತುಪರ್ಣ, ಕೊರಗಪ್ಪ ಹಾಸ್ಯಗಾರರ ಭಾಹುಕ, ಅರಾಟೆಯವರ ದಮಯಂತಿ, ಜಾನುವರುಕಟ್ಟೆ ಭಾಗವತರ ಹಾಡುಗಾರಿಕೆ ಅಪಾರ ಜನಮನ್ನಣೆ ಪಡೆದಿತ್ತು. ಎಂಬತ್ತರ ದಶಕದಲ್ಲಿ ಮಣಿಪಾಲದ ಗೋಲ್ಡನ್ ಜುಬಿಲಿ ಹಾಲ್ನಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ಬೀಷ್ಮನಿಗೆ ಪರಶುರಾಮನಾಗಿ ಅಭಿನಯಿಸಿದ ಹಳ್ಳಾಡಿಯವರ ಅಭಿನಯಕ್ಕೆ ಮೆಚ್ಚಿ ಸ್ವತ: ಮಹಾಬಲ ಹೆಗಡೆಯವರೆ ಶಹಬ್ಬಾಸ್'ಗಿರಿ ನೀಡಿದ್ದರು. ರಂಗದಲ್ಲಿ ಪರಶುರಾಮನಾಗಿ ಹಳ್ಳಾಡಿಯವರು ಬೀಷ್ಮನನ್ನು ಹೊಗಳಿದರೆ ಚೌಕಿಯಲ್ಲಿ ಹೆಗಡೆಯವರು ಹಳ್ಳಾಡಿಯವರನ್ನು ಮನಸಾರೆ ಹರಸಿದ್ದರು‌. ಉತ್ತರ ಕನ್ನಡದ ಕಲಾವಿದರು ಮೆಚ್ಚುತ್ತಿದ್ದ ಕಲಾವಿದರಲ್ಲಿ ಹಳ್ಳಾಡಿ ಹಾಗು ಶಿರಿಯಾರದವರು ಪ್ರಮುಖರು.

ರಸ ಭಾವಗಳ ಪರಿಪೂರ್ಣ ಪೋಷಣೆಯಲ್ಲಿ ಹಳ್ಳಾಡಿಯವರು ತೋರಿಸುತಿದ್ದ ಪ್ರತಿಭೆ ಅಸಾದಾರಣ. ‘ಹರನೆ ನೀನು’ ಎಂದು ವ್ಯಂಗ್ಯವಾಗಿ ಭರತ ಚಕ್ರವರ್ತಿಯನ್ನು ಮಾತನಾಡಿಸುವ ಧರ್ಮಾಂಗದನಿರಬಹುದು, ‘ಆವರಾಯನಾತ್ಮಭವನೋ’ ಎಂದು ಅರ್ಜುನನು ಕೇಳಿದಾಗ ಕೋಪಾವಿಷ್ಟನಾಗುವ ಬಬ್ರುವಾಹನನಿರಬಹುದು, ‘ತಿಳಿದೆನು ನಿನ್ನಯ ಚಿತ್ತದೊಮ್ಮೆಲವನು’ ಎಂಬಲ್ಲಿನ ಭಕ್ತಿ ಪರಾಕಾಷ್ಟೆಯ ಸುದನ್ವನಿರಲಿ, ‘ಮಲಗಿರುವ ಪಿತನನ್ನು ಎಬ್ಬಿಸಿದ ಗಾಂಗೇಯ’ ಎಂಬಲ್ಲಿನ ದು:ಖತಪ್ತನಾದ ದೇವವ್ರತನಿರಲಿ, ಕರಗಳ ಮುಗಿಯುತ ನಿಂದಿಹ ಮುನಿಗಳ ಎಂಬಲ್ಲಿನ ಪರಶುರಾಮನಿರಲಿ, ‘ಪುರಜನರ ನುಡಿಕೇಳಿ ಹರಿಯು ತನ್ನಯ ಮನದಿ’ ಎಂಬಲ್ಲಿನ ರುಕ್ಮಾವತಿ ಕಲ್ಯಾಣದ ಯೋಚನಾಮಗ್ನನಾದ ಹರಿಯಿರಲಿ ಅಲ್ಲೆಲ್ಲೂ ಅವರ ಅಭಿನಯ ಸಾಮರ್ಥ್ಯ, ಮಾತುಗಾರಿಕೆ, ಸನ್ನಿವೇಷ ನಿರ್ಮಾಣಗಳು ವರ್ಣನಾತೀತ.

ನೂರಕ್ಕೆ ನೂರು ಯಕ್ಷಗಾನ ಶೈಲಿಯಲ್ಲಿ ಬಹುದೂರ ಕೇಳಿಸುವ ಕಂಠ, ವ್ಯಾಕರಣಬಧ್ಧ ಪ್ರೌಡ ಶೈಲಿ, ಶುಧ್ಧ, ಸ್ಪಷ್ಟ ಉಚ್ಚಾರ, ನಿರರ್ಗಳ, ನಿರಾಯಸ, ನಿರಾತಂಕವಾಗಿ ಹರಿದು ಬರುವ ಮಾತುಗಾರಿಕೆ, ಶ್ರೇಷ್ಟ ನಿರೂಪಣಾ ಸಾಮರ್ಥ್ಯದಿಂದ ಶೆಟ್ಟರು‌ ಇತರರಿಗಿಂತ ಬಿನ್ನವಾಗಿ ಕಾಣುತ್ತರೆ. ಮಧ್ಯ ಪ್ರಾಂತ್ಯದ ಮೊಳಹಳ್ಳಿ ಹೆರಿಯ, ನೀಲಾವರ ಮಹಾಬಲ ಶೆಟ್ಟಿ, ನರಾಡಿ ಬೋಜರಾಜ ಶೆಟ್ಟಿ, ಕೋಟ ಸುರೇಶನವರಲ್ಲಿ ಈ ಶೈಲಿಯನ್ನು ಗುರುತಿಸಬಹುದು.

ಹಳ್ಳಾಡಿ ಮಂಜಯ್ಯ ಶೆಟ್ಟಿ
ಜನನ : 1932
ಜನನ ಸ್ಥಳ : ಹಳ್ಳಾಡಿ ಗ್ರಾಮ, ಶಿರಿಯಾರ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಮಂದಾರ್ತಿ, ಸಾಲಿಗ್ರಾಮ, ಅಮೃತೇಶ್ವರಿ, ಪೆರ್ಡೂರು, ಕೊಲ್ಲೂರು, ಸೌಕೂರು ಮೇಳಗಳಲ್ಲಿ 60 ವರ್ಷಗಳ ಕಾಲ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿಗಳು:
  • ಪ್ರತಿಷ್ಟಿತ ಹಾರಾಡಿ ರಾಮ ಗಾಣಿಗ ಪ್ರಶಸ್ತಿ
  • ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ
  • ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


ಮರಣ ದಿನಾ೦ಕ : 2012
ದೀರ್ಘಕಾಲದ ಮಂದಾರ್ತಿ ಮೇಳದ ಕಲಾಸೇವೆಯಲ್ಲದೆ ನಿರಂತರ 55 ವರ್ಷ ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ, ಕೊಲ್ಲೂರು, ಸೌಕೂರು ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಶಿರಿಯಾರ ಮಂಜುನಾಯ್ಕರ ಯಜಮಾನಿಕೆಯ ಪೆರ್ಡೂರು ಮೇಳದಲ್ಲೂ ತಿರುಗಾಟ ಮಾಡಿ ತಮ್ಮ 75ರ ಇಳೀ ವಯ್ಸಸ್ಸಿನಲ್ಲಿ ನಿವೃತ್ತರಾದರು. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮ ಗಾಣಿಗರಾದಿಯಾಗಿ ಆ ಕಾಲದ ಹಿರಿಯರೊಂದಿಗೆ ತಿರುಗಾಟ ಮಾಡಿದ ಕೀರ್ತಿ ಇವರಿಗಿದೆ. ಮದ್ದಳೆಯ ಮಾಂತ್ರಿಕ ಬೇಳಂಜೆ ತಿಮ್ಮಪ್ಪ ನಾಯ್ಕರಿಂದ ಚಂಡೆ ಮದ್ದಳೆ ಅಭ್ಯಾಸ ಮಾಡಿದ ಇವರು ಹಿಮ್ಮೇಳದಲ್ಲೂ ನಿಷ್ಣಾತರು. ಡಾ.ಕಾರಂತರು ಇವರ ಪ್ರತಿಭೆಯನ್ನು ಗುರುತಿಸಿ ತಮ್ಮ ಯಕ್ಷಗಾನ ಬ್ಯಾಲೆಯಲ್ಲೂ ಇವರಿಗೆ ಅವಕಾಶ ನೀಡಿದ್ದರು.

ಹೊಸ ಪ್ರಸಂಗ ಡೇರೆ ಮೇಳಗಳ ಮೇಲೆ ಸವಾರಿ ಮಾಡಿದಾಗಲೂ ಶೆಟ್ಟರು‌ ಬೀತರಾಗಲಿಲ್ಲ. ಸಾಲಿಗಾಮ ಮೇಳದಲ್ಲಿ 80ರ ದಶಕದಲ್ಲಿ ಸೀತಾನದಿ ಗಣಪಯ್ಯ ಶೆಟ್ಟರ ‘ವೀರ ವಜ್ರಾಂಗ’ ಪ್ರಸಂಗ ಜಯಭೇರಿ ಪಡೆದಾಗ ಅಲ್ಲಿನ ಮುಖ್ಯ ಪಾತ್ರ ‘ವಜ್ರಾಂಗ’ನ ನಿರ್ವಹಣೆ ಶೆಟ್ಟರಿಂದ ಮಾತ್ರ ಸಾಧ್ಯವಾಯಿತು. ಪೆರ್ಡೂರು ಮೇಳದಲ್ಲಿ ಕಡತೋಕ ಕೃಷ್ಣ ಭಾಗವತ ಮತ್ತು ಕಾಳಿಂಗ ನಾವಡರ ಭಾಗವತಿಕೆಯಲ್ಲಿ ‘ಲೋಲಾಕ್ಷಿ’ ವಿಜಯಶ್ರೀ, ‘ಜಲಕನ್ಯೆ’ ಮುಂತಾದ ಹೊಸ ಪ್ರಸಂಗಗಳಲ್ಲಿ, ಕುಮಟಾ ಗೋವಿಂದ ನಾಯಕ್, ವಾಸುದೇವ ಸಾಮಗ, ಮಂಟಪ ಪ್ರಾಭಾಕರ ಉಪಾದ್ಯ, ಹೊನ್ನಪ್ಪ ಗೋಕರ್ಣ ಮುಂತಾದ ಖ್ಯಾತ ನಾಮರೊಂದಿಗೆ ಇವರ ಪಾತ್ರ ನಿರ್ವಹಣೆ ಶ್ರೇಷ್ಟ ಮಟ್ಟದ್ದಾಗಿತ್ತು.

ಬಡಗುತಿಟ್ಟಿನ ಪರಿಪೂರ್ಣ ಸಾಂಪ್ರದಾಯದ ಹಾಸ್ಯಗಾರ ಸದ್ಯ ಸಾಲಿಗ್ರಾಮ ಮೇಳದ ಸದಸ್ಯ ಹಳ್ಳಾಡಿ ಜಯರಾಮ ಶೆಟ್ಟರನ್ನು ತಿದ್ದಿ ತೀಡಿ ಈ ರಂಗಕ್ಕೆ ತಂದ ಕೀರ್ತಿ ಇವರಿಗಿದೆ. ಮಂದಾರ್ತಿ ಕ್ಷೇತ್ರ ನೀಡುವ ಪ್ರತಿಷ್ಟಿತ ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗೆ ಭಾಜನರಾದ ಇವರಿಗೆ ಕಳೆದ ಸಾಲಿನ‌ ಅಕಾಡೆಮಿ ಪ್ರಶಸ್ತಿ ಸಹಜ ಸಂದಿದೆ. ಕಳೆದ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ. ಗುಣಪಡಿಸಲಾಗದ ಕಾಯಿಲೆಯಿಂದ ಸ್ವರವನ್ನು ಕಳೆದುಕೊಂಡ ಅವರು ತನ್ನ 80ರ ಹರೆಯದಲ್ಲಿ ಇಹಲೋಕ ತ್ಯಜಿಸಿದರು. ಬಡಗುತಿಟ್ಟಿನ ಮಟ್ಪಾಡಿ ಶೈಲಿಯ ಕೊಂಡಿಯಂತಿದ್ದ ಹಳ್ಳಾಡಿಯವರ ನಿಧನದಿಂದ ಬಡಗುತಿಟ್ಟು ಬಡವಾಗಿದೆ.****************

ಹಳ್ಳಾಡಿ ಮಂಜಯ್ಯ ಶೆಟ್ಟಿಯವರ ಕೆಲವು ಭಾವಚಿತ್ರಗಳುShare

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ