ಕುಂದಾಪುರ ತಾಲೂಕಿನ ಯಕ್ಷಗಾನದ ಆಡೊಂಬಲವಾದ ಹಳ್ಳಾಡಿ ಸಮೀಪ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ 1929ರಲ್ಲಿ ರಾಮಣ್ಣ ಶೆಟ್ಟಿ ಮುತ್ತಕ್ಕ ಶೆಡ್ತಿ ದಂಪತಿಗಳ ಪುತ್ರನಾಗಿ ಮಧ್ಯಮ ವರ್ಗದ ಬಂಟ ಕುಟುಂಬದಲ್ಲಿ ಜನಿಸಿದ ಇವರ ಒಲವು ಯಕ್ಷಗಾನದತ್ತ ತಿರುಗಿದ್ದು ಅನೀರೀಕ್ಷಿತ. ಯಕ್ಷಗಾನ ರಂಗದ ಮಹಾನ್ ಕಲಾವಿದರ ಹಾಗೆ ಇವರ ವಿದ್ಯಾಭ್ಯಾಸ ಅರ್ಧಕ್ಕೇ ನಿಂತರೂ ಬಡಗುತಿಟ್ಟಿನ ಯಕ್ಷ ಸಾಮ್ರಾಜ್ಯಕ್ಕೆ ಇವರು ಸೂತ್ರಧಾರಿಯಾದರು.
ಗುರು ನಾರ್ಣಪ್ಪ ಉಪ್ಪೂರರಲ್ಲಿ ಶುಧ್ಧ ಸಾಂಪ್ರದಾಯದ ರಾಗ-ತಾಳ, ಮಟ್ಟು-ದಸ್ತುಗಳ ಪರಿಚಯ ಮಾಡಿಕೊಂಡ ಇವರು ಪ್ರಥಮವಾಗಿ ಮಲ್ಪೆ ಸಮೀಪದ ಕೊಡವೂರು ಮೇಳದಲ್ಲಿ ತಾಳ ಹಿಡಿದರು. ಮುಂದೆ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳ ಸೇರಿದ ಇವರು ಅಲ್ಲಿ ಭಾಗವತರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರಿಂದ ಕುಂಜಾಲು ಶೈಲಿಯ ಭಾಗವತಿಕೆ ಅಬ್ಯಾಸ ಮಾಡಿದರು. ಅವರಿಂದ ರಂಗತಂತ್ರ, ಆಟವಾಡಿಸುವ ಕಲೆ ಕರಗತ ಮಾಡಿಕೊಂಡ ಇವರು ಪುನಹ ತನ್ನ ಗುರುಗಳಿದ್ದ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಇಲ್ಲಿ ಅವರ ಭಾಗವತಿಕೆಯ ಮಟ್ಟುಗಳು ಗಟ್ಟಿಗೊಂಡವು.
ಬಳಿಕ ನೇರವಾಗಿ ಪ್ರಸಿದ್ದ ಬಯಲಾಟ ಮೇಳವಾದ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದ ಶೆಟ್ಟರು ಅಲ್ಲಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಬಡಗುತಿಟ್ಟಿನ ಅವಿಸ್ಮರಣೀಯ ಕಲಾವಿದರಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಕೊಕ್ಕರ್ಣೆ ನರಸಿಂಹ ಕಾಮತ್, ಕೊರ್ಗು ಹಾಸ್ಯಗಾರ, ಉಡುಪಿ ಬಸವ, ವೀರಭದ್ರ ನಾಯಕ್ ಹೀಗೆ ನಾವು ಕಾಣದ ಕೇಳಿದ ಮಹಾನ್ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗಿದೆ. ಮೂರು ತಲೆಮಾರಿನ ಕಲಾವಿದರನ್ನು ರಂಗದಲ್ಲಿ ದೀಗಣ ಹಾಕಿಸಿದ ಇವರು ಅಂದಿನ್ ಹಾರಾಡಿ ತಿಟ್ಟಿನ ಜಾಪು-ಛಾಪು, ಮಟ್ಪಾಡಿ ತಿಟ್ಟಿನ ನರ್ತನ ಆಂಗಿಕ ಚಲನೆ ಈಗಿನವರಲ್ಲಿಲ್ಲ ಎಂದು ವ್ಯಥೆ ಪಡುತ್ತಾರೆ. ಇದು ಇಂದು ಆಧುನೀಕರಣಗೊಂಡ ಯಕ್ಷಗಾನದ ಬಗ್ಗೆ ಬೇಸರದ ಭಾವವನ್ನು ಸೂಚಿಸುತ್ತದೆ.
ಹಲವಾರು ತಿರುಗಾಟವನ್ನು ರಾಮ ಗಾಣಿಗರ ಯಜಮಾನಿಕೆಯಲ್ಲಿ ನಡೆಸಿದ ಶೆಟ್ಟರು ತಮ್ಮ ಬಹುತೇಕ ತಿರುಗಾಟವನ್ನು ವಿದ್ಯುದ್ದೀಪವಿಲ್ಲದೆ ದೊಂದಿ ಬೆಳಕಿನಲ್ಲಿ, ಧ್ವನಿವರ್ದಕವಿಲ್ಲದೆ ಕಳೆದವರು. ಇದೊಂದು ಕೊರತೆಯೋ ಲೋಪವೋ ಎಂದು ಆಗ ಅವರಿಗೆ ಅನಿಸಿದ್ದಿಲ್ಲ. ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರಿಗೆ ಸುಧನ್ವಾರ್ಜುನ, ಮೈರಾವಣ ಕಾಳಗ, ಅತಿಕಾಯ, ಕರ್ಣಾರ್ಜುನ ಪ್ರಸಂಗವೆಂದರೆ ಅಚ್ಚುಮೆಚ್ಚು. ವೀರಭದ್ರ ನಾಯಕರ ಅತಿಕಾಯ, ಶಿರಿಯಾರ ಮಂಜು ನಾಯ್ಕರ ದೇವವ್ರತ, ಕೊರ್ಗು ಹಾಸ್ಯಗಾರರ ಬಾಹುಕ, ಹಳ್ಳಾಡಿ ಮಂಜಯ್ಯ ಶೆಟ್ಟರ ಋತುಪರ್ಣ, ಉಡುಪಿ ಬಸವನವರ ಚಿತ್ರಸೇನ, ಕೊಕ್ಕರ್ಣೆ ನರಸಿಂಹನವರ ಶಶಿಪ್ರಭೆ, ಹಾರಾಡಿ ರಾಮನವರ ಹಿರಣ್ಯಕಶ್ಯಪು, ಕರ್ಣ, ಜಾಂಬವ, ಕುಷ್ಟಗಾಣಿಗರ ಪುಷ್ಕಳ, ಅರ್ಜುನ, ನಾರಾಯಣ ಗಾಣಿಗರ ಕಯಾದು ಕೃಷ್ಣ ಮುಂತಾದ ಪಾತ್ರಗಳನ್ನು ರಂಗದಲ್ಲಿ ಕುಣಿಸಿದ ತೃಪ್ತಿ ಇವರಿಗಿದೆ.
ಜೋಡಾಟದಲ್ಲಿಯೂ ನಿಷ್ಣಾತರಾದ ಇವರು ವಿಪರ್ಯಾಸವೆಂಬಂತೆ ತಮ್ಮ ಗುರು ಉಪ್ಪೂರರ ಎದುರಿಗೆ ಪದ್ಯ ಹೇಳಬೇಕಾಗಿ ಬಂದಿದ್ದು ವಿಶೇಷ ಅಲ್ಲಿಯೂ ಸಹ ಗುರುವಿನಿಂದ ಸೈ ಎಣಿಸಿಕೊಂಡ ಇವರು ಇಂದಿಗೂ ಸಹ ಎಲೆಮರೆಯ ಕಾಯಿಯಂತೆ ತಮ್ಮ ಕಂಠಸಿರಿಯನ್ನು ವಿಕೃತಗೊಳಿಸದೆ ಲಯಬದ್ದವಾಗಿ ಹಾಡಬಲ್ಲರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಅವರ ಪದ್ಯವನ್ನು ಕೇಳುವ ಸೌಜನ್ಯ ತಾಳ್ಮೆ ಯಾರಿಗಿದೆ. ಸರಿಸುಮಾರು ಅರ್ಧ ಶತಮಾನಗಳ ಕಾಲ ಬಯಲು ಗದ್ದೆಯ ನಾಲ್ಕು ಕಂಬದ ನಡುವೆ ಬಡಗುತಿಟ್ಟನ್ನು ಶ್ರೀಮಂತಗೊಳಿಸಿದ ಶೆಟ್ಟರ ಖಾಸಗಿ ಬದುಕು ಮಾತ್ರ ಶ್ರೀಮಂತವಾಗಲಿಲ್ಲ ಎನ್ನುವುದೆ ದೌರ್ಭಾಗ್ಯ ನರಸಿಂಹ ಶೆಟ್ಟರನ್ನು ಹುಡುಕಿಕೊಂಡು ಬಂದ ಸನ್ಮಾನ ಪ್ರಶಸ್ತಿಗಳು ಹಲವಾರು. ಮಂದಾರ್ತಿ ಕ್ಷೇತ್ರದ ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದಲ್ಲಿ ದಿ. ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ ಇವರಿಗೆ ಸಂದಿದೆ. ಸೀತಾನದಿ ಪ್ರಶಸ್ತಿ. ಕುಂದಾಪುರದ ಎಂ. ಎಂ. ಹೆಗ್ಡೆ ಪ್ರಶಸ್ತಿ. ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ ಅಲ್ಲದೆ ಕಳೆದ ಸಾಲಿನ ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಇವೆರಿಗೆ ಸಂದಿದೆ. ಕಳೆದ ವರ್ಷದ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಸಹ ಇವರಿಗೆ ಸಂದಿದೆ.
|
ಮತ್ಯಾಡಿ ನರಸಿಂಹ ಶೆಟ್ಟಿ |
 |
ಜನನ |
: |
1929 |
ಜನನ ಸ್ಥಳ |
: |
ಮತ್ಯಾಡಿ ಗ್ರಾಮ, ಹಳ್ಳಾಡಿ
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರು ಕೊಡವೂರು, ಮಂದಾರ್ತಿ, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ 50 ವರ್ಷಗಳ ಕಾಲ ಮೇರು ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.
|
ಪ್ರಶಸ್ತಿಗಳು:
- ಮಂದಾರ್ತಿ ಕ್ಷೇತ್ರದ ಹಾರಾಡಿ ರಾಮ ಗಾಣಿಗ ಪ್ರಶಸ್ತಿ
- ಉಡುಪಿ ಯಕ್ಷಗಾನ ಕಲಾರಂಗದಲ್ಲಿ ದಿ. ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ
- ಸೀತಾನದಿ ಪ್ರಶಸ್ತಿ
- ಕುಂದಾಪುರದ ಎಂ. ಎಂ. ಹೆಗ್ಡೆ ಪ್ರಶಸ್ತಿ
- ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ
- ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
- ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ
|
|
|