ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕೊಪ್ಪದಮಕ್ಕಿಯ ಕೋಗಿಲೆ - ಜಟ್ಟಿ ಈರಪ್ಪ ಭಾಗವತರು

ಲೇಖಕರು :
ಗಣೇಶ ಕೊಲಕಾಡಿ
ಸೋಮವಾರ, ಜೂನ್ 9 , 2014

ಸಹೃದಯಿ ಸಹನಾಶೀಲ ಸರ್ವ ಸಮರ್ಪಣಾ ಭಾವದ, ಸಶಕ್ತ ಕ್ರಾಂತಿಯ ಕಲಾಯೋಗಿಯಾಗಿ, ತನ್ನ ಮಧುರ ಕಂಠಶ್ರೀ, ಸಣ್ತೀಪೂರ್ಣ ಶೈಲಿಯಿಂದ ಬಡಗುತಿಟ್ಟಿನ ಯಕ್ಷಗಾನ ಸಾಮ್ರಾಜ್ಯವನ್ನು ಆಳಿದ ಕೊಪ್ಪದಮಕ್ಕಿಯ ಕೋಗಿಲೆ ಜಟ್ಟಿ ಈರಪ್ಪ ಭಾಗವತರು ಇತ್ತೀಚೆಗೆ ನಾದೈಕ್ಯ ರಾದರು. ಕಲಾನೈಪುಣ್ಯದ ಸುಮೇರುವಾಗಿ, ಸಂಗಡಿಗರ ಸಡಗರವಾಗಿ, ಯಕ್ಷಗಾನದ ಸಕಲಾಂಗಗಳ ಸದಮಲ ಚೇತನವಾಗಿ ಸದಾಚಾರ ಸಂಪನ್ನ ಭಾಗವತರೆಂದು ನೆಗಳ್ತೆಯನ್ನು ಪಡೆದಿದ್ದವರು ಜಟ್ಟಿ ಈರಪ್ಪ ಭಾಗವತರು.

ಉತ್ತರಕನ್ನಡ ಜಿಲ್ಲೆಯ ಮಂಕಿ ಗ್ರಾಮದ ಕೊಪ್ಪದಮಕ್ಕಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸುದೀರ್ಘ‌ ಇತಿಹಾಸವನ್ನು ಹೊಂದಿದೆ. ಇಲ್ಲಿನ ಶ್ರೀಮತಿ ದೇವಿಯವರ ಕುಟುಂಬದ ಜಟ್ಟಿ ಮತ್ತು ದುರ್ಗಿ ದಂಪತಿಯ ಮಗನೇ ಜಟ್ಟಿ ಈರಪ್ಪ ಭಾಗವತರು. ಭಾಗವತರ ಅಜ್ಜಿ ಶ್ರೀಮತಿ ದೇವಿಯವರು ನಾಟಿವೈದ್ಯೆಯಾಗಿ ತುಂಬ ಪ್ರಸಿದ್ಧರಾಗಿದ್ದರು. ಕುಂಬಜ್ಜಿಯೆಂದೇ ಮನೆಮಾತಾಗಿದ್ದ ಇವರಿಂದಾಗಿ ಇವರ ಮನೆ ತನಕ್ಕೆ ಸಮಾಜದಲ್ಲಿ ಬಹು ಗೌರವವಿತ್ತು. ಮನೆಯಲ್ಲಿ ರಾಮಾಯಣ, ಮಹಾಭಾರತ ಪ್ರವಚನಗಳು ಹಿರಿಯರ ಕಾಲದಿಂದಲೂ ನಿರಂತರವಾಗಿ ನಡೆಯುತ್ತಿದ್ದವು. ಇದಕ್ಕೆ ಅವರ ಮನೆಯಲ್ಲಿ ದೊರೆತಿರುವ 375 ವರ್ಷಗಳಷ್ಟು ಹಳೆಯ ತಾಳೆಗರಿಯ ಗ್ರಂಥಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಸಾರಸ್ವತ ಸಾಂಸ್ಕೃತಿಕ ವಾತಾವರಣದಿಂದಾಗಿಯೇ ಜಟ್ಟಿ ಭಾಗವತರು ಒಬ್ಬ ಮಹಾನ್‌ ಕಲಾವಿದರಾಗಿ ಅರಳಿ ಬೆಳೆಯಲು ಸಾಧ್ಯವಾಯಿತು.

ಈಶ್ವರ ಭಾಗವತರ ಮಾವ ಕೊಪ್ಪದಮಕ್ಕಿಯ ರಾಮ ಭಾಗವತರು ಹಾಗೂ ಮದ್ದಳೆಗಾರ ಮಾದೇವ ಅಣ್ಣಪ್ಪ ಮೊಗೇರ ಬಾಲ್ಯದಲ್ಲಿ ಇವರ ಒಲವು ಯಕ್ಷಗಾನದತ್ತ ಹರಿಯಲು ಪ್ರೇರಕ ಶಕ್ತಿಯಾದರು. ಬಾಲಕ ಈಶ್ವರ, ತೆಂಗಾರಿನ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಅನಂತರ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹೇಳಿ ಯಕ್ಷಗಾನದತ್ತ ಮುಖ ಮಾಡಿದರು. ಮಂಕಿ ಓಕ್ತೇಶ್ವರದ ಸುಬ್ಟಾ ಭಟ್ಟರು, ಕೊಜಕ್ಕೇಶ್ವರದ ಬಸವಯ್ಯ ಆಚಾರಿ ಹಾಗೂ ಬಸ್ತಿ ಶೆಟ್ಟರು ನೀಡಿದ ಅನುಭವದಿಂದ ವಿಕಸಿಸಿದ ಈಶ್ವರ ಭಾಗವತರು ಮುರುಡೇಶ್ವರದ ಬಾಬು ಶೆಟ್ಟರಿಂದ ಯಕ್ಷಗಾನದ ತಾಳ ಅಭ್ಯಾಸವನ್ನು ಮಾಡಿದರು. ಅನಂತರ ಮೂಡಕಣಿ ವಾಸು ಅವರು ಬೈಲೂರಿನಲ್ಲಿ ಸುದೀರ್ಘ‌ಕಾಲ ಇವರಿಗೆ ನಾಟ್ಯ, ಪದ್ಯದ ಸೂಕ್ಷ್ಮ ವಿಚಾರಗಳನ್ನು ಕಲಿಸಿದರು. ಇದಾದ ಮೇಲೆ ವೆಂಕಟರಮಣ ಯಾಜಿ ಮಾವಿನಕೇರಿ ಇವರಿಗೆ ಯಕ್ಷಗಾನ ಸಂಗೀತವನ್ನು ಕಲಿಸಿ, ಯಕ್ಷಗಾನದ ಒಬ್ಬ ಪರಿಪೂರ್ಣ ಭಾಗವತನಾಗುವುದಕ್ಕೆ ಕಾರಣರಾದರು.

ಹದಿನೈದು ವರ್ಷಕ್ಕೆ ತಾಳ ಕೈಗೆ

ಹದಿನೈದು ವರ್ಷದ ಯುವಕನಾಗಿದ್ದಾಗಲೇ ಹನ್ನೊಂದು ದಿನಗಳ ಕಾಲ ಕೊಪ್ಪದಮಕ್ಕಿಯಲ್ಲಿ ನಡೆದ ""ಭೀಷ್ಮ ಪ್ರಪಂಚ' ಎಂಬ ಪ್ರಸಂಗಕ್ಕೆ ಭಾಗವತರಾಗಿ ಜಟ್ಟಿ ಈರಪ್ಪ ಭಾಗವತರು ರಂಗ ಪ್ರವೇಶ ಮಾಡಿದರು. ಕಿಕ್ಕಿರಿದ ಜನಸಂದಣಿ ಇವರ ಹಾಡುಗಾರಿಕೆಯನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿತು. ಪ್ರಾರಂಭದಲ್ಲೇ ಪ್ರೌಢ ಭಾಗವತನ ಪ್ರದರ್ಶನವನ್ನು ನೀಡಿದ ಅವರ ಬದುಕು ಮುಂದೆ ಕಲೆಯ ವಿಷಯದಲ್ಲಿ ಅವಿಶ್ರಾಂತವಾಯಿತು. ಆ ಕಾಲದ ಯಕ್ಷಗಾನದ ತಾರಾಮೌಲ್ಯವುಳ್ಳ ಭಾಗವತರಾಗಿ ಮಿಂಚಿದ ಅವರು ಬಳ್ಕೂರು ಮೇಳ, ಹೊನ್ನಾವರದ ಗುಂಡಾಬಾಳ ಮೇಳ, ಕೊಡ್ಲಮನೆ ಮಹಾವಿಷ್ಣು ಯಕ್ಷಗಾನ ಮಂಡಳಿ ಮಂಕಿ, ಸಿದ್ಧಾಪುರ ತಾಲೂಕಿನ ಐಸೂರಿನ ವೀರಭದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಬೇಡ್ಕಣಿ ಮಾರುತಿ ಯಕ್ಷಗಾನ ಮಂಡಳಿ, ಹುಣಸೂರು ಮೇಳ, ಬೈಲೂರು ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿ, ಅನ್ನಪೂರ್ಣೇಶ್ವರಿ ಯಕ್ಷಗಾನ ಮಂಡಳಿ, ಉಳ್ಮಣ್ಣು ಮಹಾಗಣಪತಿ ಯಕ್ಷಗಾನ ಮಂಡಳಿ, ಭಟ್ಕಳ ಮೇಳ, ಗೋಳಿಗರಡಿ ಮೇಳ, ಬೈಲೂರಿನ ಕಾಸಗೇರಿಯ ಚಿಕ್ಕಮೇಳ ಮುಂತಾದ ಅನೇಕ ಮೇಳಗಳಲ್ಲಿ 75 ವರ್ಷಗಳ ಕಾಲ ತಿರುಗಾಟ ನಡೆಸಿದ ಕೀರ್ತಿ ಪಡೆದಿದ್ದಾರೆ.

ಕೊಪ್ಪದಮಕ್ಕಿ ಈರಪ್ಪ ಭಾಗವತರು
ಜನನ : 1919
ಜನನ ಸ್ಥಳ : ಕೊಪ್ಪದಮಕ್ಕಿ, ಮಂಕಿ ಗ್ರಾಮ
ಹೊನ್ನಾವರ ತಾಲ್ಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಸುಧೀರ್ಘ 75 ವರ್ಷಗಳ ಕಾಲ ಯಕ್ಷಗಾನ ಭಾಗವತರಾಗಿ, ಅಪಾರ ಶಿಷ್ಯರನ್ನು ರೂಪಿಸಿದ , ಜಾನಪದ ಹಕ್ಕಿ ಬಿರುದಾ೦ಕಿತ ಈರಪ್ಪ ಭಾಗವತರು ಯಕ್ಷಗಾನ ಕಲೆಯ ಮೌಲ್ಯವರ್ಧಕರು.

ಪ್ರಶಸ್ತಿಗಳು:
  • 2004ರಲ್ಲಿ ಅಕಾಡೆಮಿಯ ""ಯಕ್ಷ ಸಾಧನಾ ಪ್ರಶಸ್ತಿ
  • ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಪ್ರಶಸ್ತಿ
  • ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ
  • ಕೆರೆಮನೆ ಶಿವಾನಂದ ಹೆಗಡೆ ನೇತೃತ್ವದ ಯಕ್ಷಾಂಗಣ, ಯಕ್ಷರಕ್ಷಾ ಪ್ರಶಸ್ತಿ
  • ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  • ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ


ಮರಣ ದಿನಾ೦ಕ : ಮೇ 6, 2014
ಪ್ರಸಿದ್ಧ ಮದ್ದಳೆವಾದಕರಾಗಿದ್ದ ದುರ್ಗಪ್ಪ ಗುಡಿಗಾರರು ತಮ್ಮ 14ರಿಂದ 20 ವರ್ಷ ವಯಸ್ಸಿನವರೆಗೆ ಕೊಪ್ಪದಮಕ್ಕಿ ಈರಪ್ಪ ಭಾಗವತರೊಂದಿಗೆ ಮದ್ದಳೆಗಾರರಾಗಿ ಮಂಕಿ, ಬೈಲೂರು ಮುಂತಾದ ಮೇಳಗಳಲ್ಲಿ ಜತೆಯಾಗಿದ್ದರು ಎನ್ನುವುದು ಇಲ್ಲಿ ಗಮನಾರ್ಹ ಅಂಶ.

ಉತ್ತರಕನ್ನಡ ಜಿಲ್ಲೆಯಾದ್ಯಂತ ಕಾಲ್ನಡಿಗೆಯಲ್ಲಿಯೇ ಸಂಚರಿಸಿ, ಅರ್ಥಾಭಿಲಾಷಿಯಾಗದೆ ಅಲ್ಲಲ್ಲಿ ಜನರನ್ನು ಸಂಘಟಿಸಿ, ಅತ್ಯುತ್ತಮ ಪ್ರದರ್ಶನ ನೀಡಿ, ಯಕ್ಷಗಾನ ಕ್ಷೇತ್ರದಲ್ಲಿ ಮೌನ ಕ್ರಾಂತಿಯನ್ನೇ ಮಾಡಿದ ಮಹಾಪುರುಷ ಜಟ್ಟಿ ಈರಪ್ಪ ಭಾಗವತರು. ವಿನಯ, ಸೌಜನ್ಯ, ಸದಾಚಾರ ಸಂಪನ್ನರಾದ ಅವರು ಎಲ್ಲರಿಗೂ ಅಚ್ಚುಮೆಚ್ಚು.

ಸದಾ ಕಲಿಯುತ್ತಾ, ಕಲಿಸುವ ಬಗ್ಗೆ ಚಿಂತಿಸುತ್ತಾ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ ಇವರು ಅರ್ಥ ಸರಸ್ವತಿಯ ಮೂರ್ತ ರೂಪವೇ ಆಗಿದ್ದರು. ಐವತ್ತು ಪ್ರಸಂಗಗಳು ಇವರಿಗೆ ಕಂಠಪಾಠವಾಗಿದ್ದವು. ಜಾತಿಯ ಭೂತ ತಾಂಡವವಾಡುತ್ತಿದ್ದ ಆ ಕಾಲದಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ ಅವನ್ನೆಲ್ಲಾ ಮೀರಿ ನಿಂತು ವಿಜೃಂಭಿಸಿದ ಭಾಗವತರಿವರು. ಶ್ರದ್ಧೆ, ಸಾಧನೆ ನಿರಂತರ ಅಭ್ಯಾಸದಿಂದ ಯಾರೂ ಏನನ್ನೂ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟವರು.

ಕೊಪ್ಪದಮಕ್ಕಿಯ ಮಾದೇವಿಯವರು ಇವರ ಸಹಧರ್ಮಿಣಿ. ಈ ದಂಪತಿಗೆ ಒಂದು ಗಂಡು ಹಾಗೂ ಐವರು ಹೆಣ್ಣು ಮಕ್ಕಳು. ತೀರಾ ಬಡತನದಿಂದ ಕಂಗೆಟ್ಟ ಕುಟುಂಬ ಅದಾಗಿತ್ತು. ಆಗ ಇಡೀ ಮೇಳಕ್ಕೆ ಸಿಗುವ ವೀಳ್ಯ 45 ರೂಪಾಯಿ. ಮೇಳದ ಪ್ರಧಾನ ಭಾಗವತರಿಗೆ ಮೂರು ರೂಪಾಯಿ ಸಿಗುತ್ತಿತ್ತು. ಇಷ್ಟು ವಿತ್ತದಿಂದ ತುಂಬಿದ ಸಂಸಾರವನ್ನು ಪೋಷಿಸಲು ಆಗುತ್ತಿರಲಿಲ್ಲ. ಆದರೂ ಛಲ ಬಿಡದೆ ಮಹಾಯೋಗಿಯಂತೆ ಮುನ್ನಡೆದು ಬಡಗುತಿಟ್ಟಿನ ರಂಗಭೂಮಿ ಎಂಬ ವಿಯಾದ್‌ ವಿಸ್ತೀರ್ಣವನ್ನು ತನ್ನ ತ್ರಿವಿಕ್ರಮ ಹೆಜ್ಜೆಗಳನ್ನು ಇರಿಸುತ್ತಾ ಅಳೆದ, ಬೆಳೆದ ಮಹಾನ್‌ ಸಾಧಕ, ಮಹಾಶಕ್ತಿಯಾದ ಈರಪ್ಪ ಭಾಗವತರು ಯಕ್ಷಗಾನ ಪ್ರಪಂಚದ ವಿಶ್ವಕೋಶವಾಗಿಯೇ ವಿಕಸಿಸಿದ ಪರಿ, ಬೆಡಗು ಬಿನ್ನಣಗಳು ಒಂದು ವಿಶಿಷ್ಟ ವಿಸ್ಮಯ.

ಶಂಭು ಹೆಗಡೆಯವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಈ ಮಹಾನ್‌ ಸಾಧಕನಿಗೆ 2004ರಲ್ಲಿ ಅಕಾಡೆಮಿಯ ""ಯಕ್ಷ ಸಾಧನಾ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದ್ದರು. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ತು, ಕೆರೆಮನೆ ಶಿವಾನಂದ ಹೆಗಡೆ ನೇತೃತ್ವದ ಯಕ್ಷಾಂಗಣ, ಯಕ್ಷರಕ್ಷಾ, ಯಕ್ಷಗಾನ ಅಕಾಡೆಮಿ ಮುಂತಾದ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ.

ಉಡುಪಿಯ ಯಕ್ಷಗಾನ ಕಲಾರಂಗದ ದೃಷ್ಟಿ ಹರಿಯದ ಕಲಾವಿದರ ಮನೆಯಂಗಳವಿಲ್ಲ. ಮುರುಡೇಶ್ವರದಲ್ಲಿ ದಿವ್ಯ ಏಕಾಂತದಲ್ಲಿ ತಪೋನಿರತರಾಗಿದ್ದ ಈ ತಪಸ್ವಿಯನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಿರುವುದು ಯಕ್ಷಗಾನ ಕಲಾರಂಗದ ಕಾರ್ಯ ಪ್ರವೃತ್ತಿಗೆ, ಹಿರಿತನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಇದರಿಂದ ಉಡುಪಿಯ ಜನರು ಮತ್ತೂಮ್ಮೆ ಜಟ್ಟಿ ಈಶ್ವರ ಭಾಗವತರನ್ನು ನೆನಪಿಸಿಕೊಳ್ಳುವಂತಾಯಿತು.

ಯಕ್ಷಧಾಮದಲ್ಲಿ ಕೊನೆಯ ದಿನಗಳು

ಭಾಗವತರಿಗೆ 2010ರಲ್ಲೊಮ್ಮೆ ಕಾಲಿನ ನೋವು ಕಾಣಿಸಿಕೊಂಡಿತು. ಅದು ಗ್ಯಾಂಗ್ರಿನ್‌ ಆಗಿ ಪರಿವರ್ತನೆ ಗೊಂಡು ಯಾವ ಚಿಕಿತ್ಸೆಗೂ ಬಗ್ಗದೆ, ಗುಣಪಡಿಸಲಾಗದ ಸವಾಲಾಗಿ ಭಾಗವತರು ಕಂಗಾಲಾದಾಗ ಅವರಿಗೆ ಅರ್ತಿಯ ಆಸರೆಯಾಗಿ ಜೀವನ ಭರವಸೆಯನ್ನು ನೀಡಿದವರು ಹೃದಯ ವೈಶಾಲ್ಯದ ಅಪೂರ್ವ ಸಾಧಕ, ಯಕ್ಷಗಾನ ಕಲಾ ಸಂಘಟಕ ಡಾ| ಐ. ಆರ್‌. ಭಟ್‌ ಮುರುಡೇಶ್ವರ. ಯಕ್ಷಗಾನದ ಮೂಲಕ ಆ ವ್ಯಾಧಿಯನ್ನು ಗುಣಪಡಿಸಬಹುದೆಂದು ಭಾಗವತರನ್ನು ತಮ್ಮ "ಯಕ್ಷಧಾಮ'ಕ್ಕೆ ಕರೆಸಿಕೊಂಡು, ಅವರಿಗೆ ನೆಲೆಗೊಟ್ಟರು. ಐದು ವರ್ಷಗಳ ಕಾಲ ಮನೆಯಲ್ಲಿ ಏಕಾಂಗಿಯಾಗಿ ಕರೆದುಕೊಂಡಿದ್ದ ಕಲಾ ಪ್ರಪಂಚವನ್ನು ಮತ್ತೂಮ್ಮೆ ಭಾಗವತರ ಕಣ್ಣು ಮುಂದಿರಿಸಿದರು. ಆಗ ಮತ್ತೆ ಭಾಗವತರಿಂದ ಯಕ್ಷಕಹಳೆ ಮೊಳಗಿತು. ಮುರುಡೇಶ್ವರ ನಾದಮಯವಾಯಿತು. ಆ ನಾದಕ್ಕೆ ಐ. ಆರ್‌. ಭಟ್ಟರ ಆರೈಕೆಯೇ ಆಧಾರಷಡ್ಜವಾಗಿ ಭಾಗವತರ ಜೀವನ ವೀಣೆಗೆ ಅಂಟಿಕೊಂಡಿದ್ದ ಅನಾರೋಗ್ಯದ ಕ್ಲಾಂತಿಯ ಕಿಲುಬನ್ನು ಕಿತ್ತು ಮತ್ತೆ ಸುಖದ ಶ್ರವ್ಯಗಾನ ಅನುರಣನಗೊಂಡಿತು.

ಒಮ್ಮೆ ಗುರುಗಳಾದ ಡಾ| ಎನ್‌. ನಾರಾಯಣ ಶೆಟ್ಟರ ಜತೆಗೆ ಜಟ್ಟಿ ಈರಪ್ಪ ಭಾಗವತರನ್ನು ಭೇಟಿ ಮಾಡಿದ್ದೆ. ಆಗ ಅವರಿಗೆ 93 ವರ್ಷ ವಯಸ್ಸು. ಆ ಹೊತ್ತಿನಲ್ಲಿ ಅವರು ಒಬ್ಬ ಅವಧೂತನಂತೆ ಕಾಣಿಸಿದ್ದರು. ಅವರಿಂದ ನಾವು ಅನೇಕ ಪದ್ಯಗಳನ್ನು ಹಾಡಿಸಿದೆವು. ಆ ಇಳಿ ವಯಸ್ಸಿನಲ್ಲಿಯೂ ಅವರ ಕಂಠದ ಮಾಧುರ್ಯಕ್ಕೆ ಬೆರಗಾಗಿ ಹೋಗಿದ್ದೆವು. ಅವರ ಹಾಡುಗಾರಿಕೆಯಲ್ಲಿ ಸಾಹಿತ್ಯ ಸು#ಟವಿತ್ತು. ಲಯದ ಖಚಿತ ಜ್ಞಾನ ಇತ್ತು. ಯಕ್ಷಗಾನ ಮಟ್ಟುಗಳ ಅಪಾರ ಅನುಭವವಿದ್ದ ಅವರು ಯಕ್ಷಗಾನೀಯವಾದ ಸ್ವರವಿನ್ಯಾಸದಿಂದ ಭಾವವನ್ನು ಅಭಿವ್ಯಕ್ತಿಸುತ್ತಿದ್ದ ಬಗೆ ಅನಿತರಸಾಧಾರಣವಾದದ್ದು.

""ತಿರುಗಾಟ ನಡೆಸುತ್ತಿದ್ದಾಗ ಮೇಳದಲ್ಲಿ ಜಾತೀಯ ನೆಲೆಯಿಂದ ನಿಮಗೆ ಸಹಕಾರ ಹೇಗಿತ್ತು' ಎಂಬ ನಮ್ಮ ಪ್ರಶ್ನೆಗೆ, ""ನದಿಯೊಂದು ಹರಿಯುವಾಗ ಬೆಟ್ಟವೂ ಸಿಗ ಬಹುದು. ಪ್ರಪಾತಗಳೂ ಸಿಗಬಹುದು. ಅಡೆತಡೆಗಳು ಇದಿರಾಗದೆ ಹರಿಯುವ ನದಿ ಇದೆಯೇ? ನದಿಗೆ ಉದ್ದೇಶ ವೊಂದೇ- ಸಮುದ್ರವನ್ನು ಸೇರುವುದು. ನಮಗೂ ಉದ್ದೇಶ ವೊಂದೇ -ಕಲಾ ಸಮುದ್ರದಲ್ಲಿ ಲೀನವಾಗುವುದು. ನನ್ನ ಕಲಾ ಜೀವನದಲ್ಲಿ ಹೊಗಳಿದವರೂ ಇದ್ದಾರೆ. ಮತ್ಸರ ದಿಂದ ದೂರಿದವರೂ ಇದ್ದಾರೆ. ಅವರಿಗೆಲ್ಲ ನಾನು ಕೊಟ್ಟ ಉತ್ತರವೊಂದೇ - ಒಂದು ಮಂದಹಾಸ ಮಾತ್ರ. ನನ್ನ ಬಾಳಿನಲ್ಲಿ ಪೂರ್ಣ ಗುರುವಿನ ಸ್ಥಾನದಲ್ಲಿ ನಿಂತು ಮನೆ ಮಗನಂತೆ ಉದಾರ ಮನಸ್ಸಿನಿಂದ ತುತ್ತಿನಾಸರೆ ಕಲಿಸಿದ ವೆಂಕಟ್ರಮಣ ಯಾಜಿಯವರು ಬ್ರಾಹ್ಮಣರೇ. ಈಗ ನನ್ನ ಕೊನೆಯ ಕಾಲದಲ್ಲಿ ನನಗೆ ಆಧಾರವಾಗಿ ನಿಂತ ಐ.ಆರ್‌. ಭಟ್ಟರೂ ಬ್ರಾಹ್ಮಣರೇ. ಎಲ್ಲರಿಗೂ ಇವರಂತಹ ಔದಾರ್ಯ ವಿದ್ದರೆ ಪ್ರತಿಭೆಗಳಿಗೆ ಸಾವಿಲ್ಲ' ಎಂದು ಉತ್ತರಿಸಿದ್ದರು.

ಮುರುಡೇಶ್ವರದ ಯಕ್ಷಧಾಮದಲ್ಲಿ ಇದ್ದು ತನ್ನ ಅಪಾರ ಅನುಭವವನ್ನು ಅನೇಕರಿಗೆ ಧಾರೆ ಎರೆಯುತ್ತಾ ಕೊನೆಗಾಲವನ್ನು ನೆಮ್ಮದಿಯಿಂದ ಕಳೆದರು ಜಟ್ಟಿ ಈರಪ್ಪ ಭಾಗವತರು. ಮೇ ಮೂರನೇ ತಾರೀಕಿನಂದು ಪ್ರಸಿದ್ಧ ವೇಷಧಾರಿ ಕರ್ಕಿ ಸುಬ್ಬ ಅವರ ಪುತ್ರ ಮೋಹನ ಧಾರೇಶ್ವರ ಅವರ ಸಮ್ಮಾನ ಸಮಾರಂಭದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿ ಮಾತಾಡಿದ್ದರು. ಅದೇ ಅವರ ಕೊನೆಯ ಕಲಾ ಕಾರ್ಯಕ್ರಮ. ಅನಂತರದ ಎರಡು ದಿನಗಳಲ್ಲಿ ಭಾಗವತರು ಯಕ್ಷಧಾಮ ದಲ್ಲಿ ಸುಶ್ರಾವ್ಯವಾಗಿ ಹಾಡಿದ್ದರು, ಆನಂದಿಸಿದ್ದರು. ಮೇ 6ರಂದು ಬೆಳಗ್ಗೆ ತೀರಾ ಖನ್ನರಂತೆ ಕಂಡ ಅವರು ಬೆಳಗಿನ ಉಪಾಹಾರ ವನ್ನು ಸೇವಿಸಿ ಅಲ್ಲಿಯೇ ಬಿದ್ದರು, ಮತ್ತೆ ಮೇಲಕ್ಕೇಳದೆ ಮೌನದೊಳಗೆ ಮೌನವಾಗಿ ಹೋದರು. ಅವರ ಆತ್ಮ ನಿಶ್ಶಬ್ದದೊಳಗಿನ ಶಬ್ದವಾಗಿ, ಅನಂತದಲ್ಲಿ ಒಂದಾಗಿ ಅಕ್ಷರವಾಯಿತು.

(ಎರಡು ವರ್ಷಗಳ ಹಿಂದೆ ಜಟ್ಟಿ ಈರಪ್ಪ ಭಾಗವತರೊಂದಿಗೆ ನಡೆಸಿದ ಸಂದರ್ಶನ ಹಾಗೂ ಬಲ್ಲ ಮೂಲಗಳ ಆಧಾರದಿಂದ ಬರೆದ ನುಡಿಗೌರವ.)

ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ