ಕುಂದಾಪುರ ತಾಲೂಕು ಬಸ್ರೂರು ಸಮೀಪ ಮಾರ್ಗೋಳಿ ಎಂಬಲ್ಲಿ 1927ರಂದು ನರಸಿಂಹ ಸೇರೆಗಾರ್ ಹಾಗೂ ಸುಬ್ಬಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಸೇರೆಗಾರರು ತನ್ನ ಸ್ತ್ರೀ ಸಹಜ ಆಳಂಗ ಶರೀರ-ಶಾರೀರ, ಒನಪು ವೈಯಾರದಿಂದ ಸ್ವರ ಮತ್ತು ಅಪೂರ್ವ ಶ್ರುತಿಬದ್ದತೆಯಿಂದ ಬಹುಬೇಗ ಅದ್ವೀತೀಯ ಸ್ತ್ರೀ ವೇಷಧಾರಿಯಾಗಿ ಮೂಡಿಬಂದರು. ತಮ್ಮ 13ನೇ ವಯಸ್ಸಿನಲ್ಲಿ ಆಗ ಅಪ್ರತಿಮ ಸ್ತ್ರೀವೇಷದಾರಿ ಕೊಕ್ಕರ್ಣೆ ನರಸಿಂಹ ಕಾಮತರ ಶಿಷ್ಯತ್ವ ಸ್ವೀಕರಿಸಿ ಅವರಿಂದ ಹೆಜ್ಜೆಗಾರಿಕೆ ಕಲಿತರು. ಕಾಮತರ ಶಶಿಪ್ರಭೆ ಪಾತ್ರದಿಂದ ಪ್ರೇರೇಪಿತರಾದ ಸೇರೆಗಾರರ ಶಶಿಪ್ರಭೆ ಪಾತ್ರ ಮಂದೆ ಯಕ್ಷಗಾನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿತು.
ಶ್ರೀ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಅಲ್ಲಿಯೇ ನರಸಿಂಹ ಕಾಮತರ ಗರಡಿಯಲ್ಲಿ ಪಳಗಿ ಉತ್ತಮ ಸ್ತ್ರೀ ವೇಷದಾರಿಯಾಗಿ ಮೂಡಿಬಂದರು. ಬಳಿಕ ಎಂ. ಎಂ. ಹೆಗ್ಡೆಯವರ ಮಾರಣಕಟ್ಟೆ ಮೇಳ ಸೇರಿದ ಇವರಿಗೆ ಗುರು ವೀರಭದ್ರ ನಾಯಕರ ಶಿಷ್ಯತ್ವ ಲಬಿಸಿತು. ಮರವಂತೆ ನರಸಿಂಹ ದಾಸರು ವೀರಭದ್ರ ನಾಯಕರು, ಉಡುಪಿ ಬಸವ, ಮೊಳಹಳ್ಳಿ ಹೆರಿಯ, ಮುಂತಾದ ಹಿರಿಯರ ಒಡನಾಟ ದೊರೆಯಿತು. ರಂಗಸ್ಥಳವೇ ಪಾಠ ಶಾಲೆಯಾಯಿತು. ಮಂದಾರ್ತಿ ಮೇಳದಲ್ಲಿ ಹಾರಾಡಿ ನಾರಾಯಣ ಗಾಣಿಗರ ಸ್ತ್ರೀವೇಷಕ್ಕೆ ಮಾರಣಕಟ್ಟೆ ಮೇಳದಲ್ಲಿ ಗೋವಿಂದ ಸೇರೆಗಾರರ ಸ್ತ್ರೀವೇಷ ಜೋಡಾಟದಲ್ಲಿ ಪ್ರತಿಸ್ಪರ್ದಿಯಾಗಿರುತಿತ್ತು. ಬಳಿಕ ಸೌಕೂರು ಅಮೃತೇಶ್ವರಿ, ಪೆರ್ಡೂರು ಇಡಗುಂಜಿ ಸಾಲಿಗ್ರಾಮ ಕಮಲಶಿಲೆ ಮುಂತಾದ ಮೇಳಗಳಲ್ಲಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದಾರೆ.
ವೀರಾವೇಷದ ಕಸೆಸ್ತ್ರೀವೇಷಗಳಲ್ಲಿ ವಿಶೇಷ ಹೆಸರು ಮಾಡಿದ ಇವರ ವೀರಮಣಿ ಕಾಳಗದ ಮದನಾಕ್ಷಿ, ಶಶಿಪ್ರಭೆ, ಬ್ರಮರಕುಂತಲೆ, ಮೀನಾಕ್ಷಿ, ಪ್ರಮೀಳೆ ಪದ್ಮಗಂದಿನಿ ಮುಂತಾದ ಪಾತ್ರಗಳಲ್ಲಿ ಇವರನ್ನು ಸರಿಗಟ್ಟುವವರಿಲ್ಲ. ಮೈರಾವಣ ಕಾಳಗದ ದುರ್ದುಂಡಿ, ಚಿತ್ರಾಂಗದೆ, ಕಯಾದು, ಸೀತೆ ಮುಂತಾದ ಪಾತ್ರಗಳು ಇವರಿಗೆ ವಿಶೇಷ ಹೆಸರು ತಂದುಕೊಟ್ಟ ಪಾತ್ರಗಳು. ತೆರೆಕುಣಿತ, ರಥಕುಣಿತ, ಪ್ರಯಾಣ ಕುಣಿತಗಳಲ್ಲಿನ ಚುರುಕುತನ, ವೈವಿದ್ಯತೆ, ಠೀವಿ ಝೇಂಕಾರಗಳನ್ನು ಇವರ ಕಸೆವೇಷಗಳಲ್ಲಿ ವಿಶೇಷವಾಗಿ ಗಮನಿಸಬಹುದಾಗಿದೆ.
ಪುರುಷವೇಷವನ್ನೂ ಮಾಡಬಲ್ಲ ಇವರು ಹೊಸ ಪ್ರಸಂಗದಲ್ಲೂ ತನ್ನತನ ಮೆರೆದಿದ್ದಾರೆ ಹೊಸ ಸಾಮಾಜಿಕ ಪ್ರಸಂಗವಾದ. ಯಕ್ಷಲೋಕ ವಿಜಯದ ವಾಸಂತಿ ಇವರಿಗೆ ಹೆಸರುತಂದುಕೊಟ್ಟ ಪಾತ್ರ. ಹಲವಾರು ಶಿಷ್ಯರನ್ನು ತಿದ್ದಿದ ಇವರ ಶಿಷ್ಯರಲ್ಲಿ ದಿ. ನೀಲಾವರ ಮಹಾಬಲ ಶೆಟ್ಟಿ. ಕಕ್ಕುಂಜೆ ಅನಂತ ಕುಲಾಲ್. ಐರ್ ಬೈಲು ಆನಂದ ಶೆಟ್ಟಿ, ಅರಾಟೆ ಮಂಜುನಾಥ, ಉಪ್ಪಿನಕುದ್ರು ಆನಂದ, ದಯಾನಂದ ನಾಗೂರ್ ಪ್ರಮುಖರು. ಉಡುಪಿ ಯಕ್ಷಗಾನ ಕಲಾರಂಗದ ಡಾ. ಬಿ. ಬಿ. ಶೆಟ್ಟಿ ಪ್ರಶಸ್ತಿ, ಕುಂದಾಪುರ ಎಂ. ಎಂ. ಹೆಗಡೆ ಪ್ರಶಸ್ತಿ ಮಂದಾರ್ತಿ ಕ್ಷೇತ್ರದ ಸನ್ಮಾನ ಸಹಿತ ಹಲವಾರು ಸನ್ಮಾನದಿಂದ ಪುರಸ್ಕ್ರತರಾದ ಸೇರೆಗಾರರಿ ತ್ರಿಕಣ್ಣೇಶ್ವರಿ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ.
|
ಮಾರ್ಗೋಳಿ ಗೋವಿಂದ ಸೇರೆಗಾರ್ |
 |
ಜನನ |
: |
1927 |
ಜನನ ಸ್ಥಳ |
: |
ಮಾರ್ಗೋಳಿ, ಬಸ್ರೂರು, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಅಪ್ರತಿಮ ಸ್ತ್ರೀವೇಷಧಾರಿಯಾಗಿ 50 ವರ್ಷಗಳ ಕಾಲ ಮಂದಾರ್ತಿ, ಸೌಕೂರು, ಅಮೃತೇಶ್ವರಿ, ಪೆರ್ಡೂರು, ಇಡಗುಂಜಿ, ಸಾಲಿಗ್ರಾಮ, ಕಮಲಶಿಲೆ ಮೇಳಗಳಲ್ಲಿ ಕಲಾಸೇವೆ.
|
ಪ್ರಶಸ್ತಿಗಳು:
- ಉಡುಪಿ ಯಕ್ಷಗಾನ ಕಲಾರಂಗದ ಡಾ. ಬಿ. ಬಿ. ಶೆಟ್ಟಿ ಪ್ರಶಸ್ತಿ
- ಕುಂದಾಪುರ ಎಂ. ಎಂ. ಹೆಗಡೆ ಪ್ರಶಸ್ತಿ ಮಂದಾರ್ತಿ ಕ್ಷೇತ್ರದ ಸನ್ಮಾನ
- ತ್ರಿಕಣ್ಣೇಶ್ವರಿ ಪ್ರಶಸ್ತಿ
|
|
|