ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಯಕ್ಷಗಾನದ ಹಿರಿಯ ಮೊಳಹಳ್ಳಿ ಹೆರಿಯ ನಾಯ್ಕರು

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಜುಲೈ 20 , 2014

ಸುಧನ್ವ, ಅರ್ಜುನ, ಪುಷ್ಕಳನ ಪಾತ್ರದಲ್ಲಿ ಬಂದರೆ ಹಾರಾಡಿ ಕುಷ್ಟ ಗಾಣಿಗರ ಜಾಪು, ತಾಮ್ರದ್ವಜನಾಗಿ ಅತಿಕಾಯನಾಗಿ ಬಂದರೆ ವೀರಭದ್ರ ನಾಯಕರ ಕುಣಿತ. ಶ್ರೀ ಕೃಷ್ಣನಾಗಿ ದೇವವ್ರತ ಪರಶುರಾಮನಾಗಿ ಬಂದರೆ ಶಿರಿಯಾರ ಮಂಜುನಾಯಕರ ಲಾಲಿತ್ಯಪೂರ್ಣ ಕುಣಿತ ಶ್ರುತಿಬದ್ದ ಮಾತುಗಾರಿಕೆ. ಈ ಮೂವರನ್ನು ಒಮ್ಮೆಲೆ ನೋಡಬೇಕಾದರೆ ಹಿರಿಯ ಕಲಾವಿದ ಸುಮಾರು ಅರವತ್ತರ ದಶಕದಲ್ಲಿ ಬಡಗುತಿಟ್ಟು ರಂಗಸ್ಠಳವನ್ನು ಆಳಿದ ಮೊಳಹಳ್ಳಿ ಹೆರಿಯನಾಯಕರ ವೇಷವನ್ನು ನೋಡಬೇಕು. ಸುಮಾರು 76 ವರ್ಷ ಪ್ರಾಯದ ಹೆರಿಯ ನಾಯ್ಕರು ಹಾರಾಡಿ ಮಟ್ಟ್ಪಾಡಿ ತಿಟ್ಟುಗಳೆರಡರ ಪ್ರಾತಿನಿಧಿಕ ಕಲಾವಿದರು. ಹಾರಾಡಿ ರಾಮ ಗಾಣಿಗರು ಕುಷ್ಟ ಗಾಣಿಗರು, ವೀರಭದ್ರನಾಯ್ಕರು ಶಿರಿಯಾರ ಮಂಜು ನಾಯ್ಕರು, ಕೋಟ ವೈಕುಂಠ. ಉಡುಪಿ ಬಸವ, ಕೋಡಿ ಶಂಕರ ಗಾಣಿಗ, ಹೆರಂಜಾಲು ಸುಬ್ಬಣ್ಣ ಗಾಣಿಗ, ಅರಾಟೆ ಮಂಜುನಾಥನಂತವರ ಒಡನಾಡಿಯಾದ ಇವರು ರಂಗವೇರಿದರೆ ವಯಸ್ಸೇ ಮರತು ಹೋಗುತ್ತದೆ ಎನ್ನುವುದು ಬಲ್ಲವರ ಅಭಿಪ್ರಾಯ.

ಕುಂದಾಪುರ ತಾಲೂಕಿನ ಮೊಳಹಳ್ಳಿಯಲ್ಲಿ ಬಡ ಮೊಗವೀರ ಕುಟುಂಬದ ಚಿಕ್ಕ ನಾಯ್ಕ ಮತ್ತು ಮುತ್ತು ದಂಪತಿಗಳ ಪುತ್ರನಾಗಿ ಜನಿಸಿದ ನಾಯ್ಕರು ಗೆಜ್ಜೆ ಕಟ್ಟಿದಾಗ ಅವರಿಗೆ ಕೇವಲ ಹದಿನೈದು ವರ್ಷ ಪ್ರಾಯ. ಕಲಿಯುವ ಆಸೆ ಇದ್ದರೂ ಬಡತನದಿಂದ ಅವರ ಆಸೆ ನೆರವೇರಲಿಲ್ಲ. ಬಯಲಾಟ ಇದ್ದಲ್ಲಿಗೆ ಹೋಗಿ ರಾತ್ರಿ ನೆಡೆಯುವ ಆಟಕ್ಕೆ ಮನಸ್ಸನ್ನು ಒಪ್ಪಿಸಿ ಮರುದಿನ ಮೀನುಗಾರಿಕೆಯಲ್ಲೆ ತೊಡಗಿಕೊಳ್ಳುತಿದ್ದರು. ಯಕ್ಷಗಾನಕ್ಕೆ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡ ನಾಯ್ಕರು ಹಿರಿಯ ಬಾಗವತ ದಿ. ನಾರಯಣಪ್ಪ ಉಪ್ಪೂರಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡು ಅವರ ವಿಶ್ವಾಸಗಳಿಸಿ ತಾಳ, ಲಯ, ಹೆಜ್ಜೆಗಾರಿಕೆಯನ್ನು ಕಲಿತು ಕೇವಲ ನಾಲ್ಕಾಣೆ ಸಂಬಳಕ್ಕೆ ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದರು. ಯಕ್ಷಗಾನದಲ್ಲಿ ಮೇಲ್ದರ್ಜೆಗೇರಿದ ಎಷ್ಟೋ ಮಂದಿ ಕಲಾವಿದರ ಹಾಗೆ ಕೋಡಂಗಿಯಾಗಿ ರಂಗ ಪ್ರವೇಶ ಮಾಡಿದ ಇವರು ಖ್ಯಾತ ಪುರುಷ ವೇಷದಾರಿಯಾಗಿ ಹೊರ ಹೊಮ್ಮಿದ್ದು ಒಂದು ದಂತಕತೆ.

ಮಾರಣಕಟ್ಟೆ, ಪೆರ್ಡೂರು, ಕೊಲ್ಲೂರು, ಸಾಲಿಗ್ರಾಮ, ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು‌ ಅತೀ ಹೆಚ್ಚು ಕಾಲ ತಿರುಗಾಟ ನಡೆಸಿದ್ದು ಬೋಜರಾಜ ಹೆಗ್ಡೆಯವರ ಮಂದಾರ್ತಿ ಮೇಳದಲ್ಲಿ. ಆಗ ಹೆಚ್ಚಿಗೆ ಹರಕೆ ಆಟ ಇಲ್ಲದ ಕಾಲದಲ್ಲಿ ಬಹುದೂರ ನಡೆದುಕೊಂಡು ಹೋಗಿ ಆಟ ಮಾಡಿ ಬರುವುದು ಸಾಮಾನ್ಯವಾಗಿತ್ತು. ಆ ಕಾಲದಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ ಹಾಗು ಹಾರಾಡಿ ಅಣ್ಣಪ್ಪ ಗಾಣಿಗರ ಹಿಮೇಳದಲ್ಲಿ ಕೋಡಿ ಶಂಕರ ಗಾಣಿಗರ ಎರಡನೆ ವೇಷ, ಹೆರಂಜಾಲು ಸುಬ್ಬಣ್ಣ ಗಾಣಿಗರ ಸ್ತ್ರೀವೇಷ, ಮಜ್ಜಿಗೆಬೈಲು ಆನಂದ ಶೆಟ್ಟರು ಮತ್ತು ನಾಯ್ಕರ ಪುರುಷಗಳು, ಜೊತೆ ವೇಷದಾರಿಗಳಾಗಿ ಶೃ೦ಗೇರಿ ಭಾಸ್ಕರ ಶೆಟ್ಟಿ ಮತ್ತು ಬೆಲ್ತೂರು ರಮೇಶನವರ ಕೂಡುವಿಕೆಯಿಂದ ಅಂದಿನ ಮಂದಾರ್ತಿ ಮೇಳ ಗಜಗಟ್ಟಿ ಮೇಳವೆಣಿಸಿತ್ತು.

ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುವ ಪದಕ್ಕೆ ಸರಿಯಾಗಿ ಅರ್ಥ ಹೇಳುವ ಕಲೆಯನ್ನು ಸ್ವಯಂಸಾಮರ್ಥ್ಯದಿಂದ ದಕ್ಕಿಸಿಕೊಂಡ ನಾಯ್ಕರು ನಿರ್ವಹಿಸಿದ ಸುಧನ್ವ, ಅರ್ಜುನ, ಚಿತ್ರಕೇತು, ತಾಮ್ರಧ್ವಜ, ಬಬ್ರುವಾಹನ ಮುಂತಾದ ಪಾತ್ರಗಳು ಯಕ್ಪರಂಗದಲ್ಲಿ ಅಚ್ಚೊತ್ತಿದೆ. ಚಿತ್ರಸೇನ ಕಾಳಗ, ಕರ್ಣಾರ್ಜುನ, ಐರಾವತ ಪ್ರಸಂಗಗಳ ಅರ್ಜುನನ ಪಾತ್ರ ಇವರಿಗೆ ಖ್ಯಾತಿ ತಂದಿವೆ. ಮೀನಾಕ್ಪಿ ಕಲ್ಯಾಣದ ನಂದಿ ಇವರ ವಿಶೇಷ ಪಾತ್ರವಾಗಿದ್ದು "ಕೇಳು‌ಎನ್ನಯ ಒಡೆಯ" ಕೋರೆತಾಳದ ಪದ್ಯ ಇವರ ಕಿರು ಹೆಜ್ಜೆ ಯಕ್ಪಗಾನದಲ್ಲಿ ದಾಖಲಿಸಬೇಕಾದದ್ದು.

ಒಂದೇ ಪ್ರಸಂಗವನ್ನು ಎರಡು ಮೇಳಗಳ ಕಲಾವಿದರು ಅಕ್ಕ ಪಕ್ಕದ ವೇದಿಕೆಯಲ್ಲಿ ಪ್ರಸ್ತುತಪಡಿಸುವ ವಿಶಿಷ್ಟ ಕಲಾಪ್ರಕಾರವಾದ ಜೋಡಾಟದಲ್ಲಿ ಹೆರಿಯನವರು ಎತ್ತಿದ ಕೈ. ಇತ್ತೀಚೆಗೆ ಉದುಪಿಯಲ್ಲಿ ನಡೆದ ಜೋಡಾಟದಲ್ಲಿ ಕರ್ಣಾರ್ಜುನದ ಅರ್ಜುನನ ಇವರ ಪಾತ್ರ ಎಪ್ಪತ್ತರ ಹರೆಯದಲ್ಲೂ ಇಪ್ಪತ್ತರವರನ್ನು ನಾಚಿಸುವನಂತಿತ್ತು. ಈಗ ಎಪ್ಪತ್ತೈದರ ಇಳಿ ವಯಸ್ಸಿನಲ್ಲೂ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡುತ್ತಿರುವರು ದಿ. ಎಮ್. ಎಮ್. ಹೆಗ್ಡೆಯವರನ್ನು ಕೃತಜ್ಙತೆಯಿಂದ ಸ್ಮರಿಸುತ್ತಾರೆ ಇವರ ಪುತ್ರ ಉದಯಕುಮಾರ ಮತ್ತು ಸಹೋದರ ಸ೦ಬ೦ಧಿ ಕೋಟ ಸುರೇಶ ಬಂಗೇರ ಬಡಗುತಿಟ್ಟಿನ ಉದಯೋನ್ಮುಖ ಕಲಾವಿದರು.

ರಾಷ್ಟ್ರೀಯ ಮೀನುಗಾರರ ಸಮ್ಮೇಳನದಲ್ಲಿ ಸನ್ಮಾನ ಕರಾವಳಿ ಯಕ್ಷಗಾನ ಸಮ್ಮೇಳನದ ಸನ್ಮಾನ ಉಡುಪಿ ಯಕ್ಷಗಾನ ಕಲಾರಂಗದ ಬಿ. ವಿ. ಆಚಾರ್ಯ ಪ್ರಶಸ್ತಿ, ಮಂದಾರ್ತಿ ಕ್ಷೇತ್ರದ ಹಾರಾಡಿ ರಾಮ ಗಾಣಿಗರ ಜನ್ಮ ಶತಮಾನೋತ್ಸವ ಸಂಧರ್ಭದಲ್ಲಿ ಸನ್ಮಾನ, ಹೀಗೆ ನೂರಾರು ಸನ್ಮಾನ ಪಡೆದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಮಾತ್ರ ಕನಸಿನ ಬುತ್ತಿಯಾಗಿದೆ. ಆದರೆ ಕರ್ನಾಟಕ ಬಯಲಾಟ ಅಕಾಡಮಿ ಪ್ರಶಸ್ತಿ ಇವರಿಗೆ ಯೋಗ್ಯವಾಗಿ ಸಂದಿದೆ.

ಮೊಳಹಳ್ಳಿ ಹೆರಿಯ ನಾಯ್ಕ
ಜನನ : 1938
ಜನನ ಸ್ಥಳ : ಮೊಳಹಳ್ಳಿ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಸೌಕೂರು, ಪೆರ್ಡೂರು, ಕೊಲ್ಲೂರು, ಸಾಲಿಗ್ರಾಮ, ಮಂದಾರ್ತಿ ಹಾಗೂ ಪ್ರಸ್ತುತ ಮಾರಣಕಟ್ಟೆ ಮೇಳಗಳಲ್ಲಿ 62 ವರ್ಷಗಳ ಕಾಲ ಪ್ರಧಾನ ಕಲಾವಿದರಾಗಿ ಸೇವೆ.

ಪ್ರಶಸ್ತಿಗಳು:
  • ಕರ್ನಾಟಕ ಬಯಲಾಟ ಅಕಾಡಮಿ ಪ್ರಶಸ್ತಿ
  • ಯಕ್ಷಗಾನ ಕಲಾರಂಗದ ಬಿ. ವಿ. ಆಚಾರ್ಯ ಪ್ರಶಸ್ತಿ
  • ಶ್ರೀರಾಮವಿಠ್ಠಲ ಪ್ರಶಸ್ತಿ
  • ಬೆ೦ಗಳೂರಿನ ಯಕ್ಷಮಿತ್ರಕೂಟದ ರಂಗಸ್ಥಳ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ

ಮರಣ ದಿನಾ೦ಕ : ಜನವರಿ 19, 2015
ಸಮಾರ೦ಭವೊ೦ದರಲ್ಲಿ ಸನ್ಮಾನಿಸಲ್ಪಡುತ್ತಿರುವ ಹೆರಿಯ ನಾಯ್ಕರು

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ