ಮೂರೂ ತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿ ಪುಂಡರೀಕಾಕ್ಷ ಉಪಾಧ್ಯಾಯ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಜುಲೈ 24 , 2014
|
ಎಪ್ಪತ್ತೆರಡರ ಇಳಿ ಹರೆಯದಲ್ಲೂ ದೇವಿ ಮಹಾತ್ಮೆಯ ದೇವಿಯಾಗಿ ಆಸ್ತೀಕರ, ಭಾವುಕ ಕಲಾರಸಿಕರ ಹೃದಯದಲ್ಲಿ ಭಕ್ತಿಭಾವ ಚಿಮ್ಮಿಸುವ ಪುಂಡರೀಕಾಕ್ಷ ಉಪಾದ್ಯಾಯರು ಸ್ತ್ರೀವೇಷದ ಮೂಲಕ ಕಳೆದ ಐದು ದಶಕಗಳ ಕಾಲ ಉತ್ತರದ ಕಾರವಾರದಿಂದ ದಕ್ಷಿಣದ ಕಾಸರಗೋಡಿನವರೆಗೆ ಅಪಾರ ಕಲಾಭಿಮಾನಿಗಳ ಪ್ರೀತಿ ಅಭಿಮಾನಕ್ಕೆ ಪಾತ್ರರಾದವರು. ಕನ್ನಡ ತುಳು ಭಾಷೆ, ತೆಂಕು ಬಡಗುತಿಟ್ಟು ಹೀಗೆ ಎರಡೂಕಡೆ ಸೈ ಎಣಿಸಿಕೊಂಡ ಇವರು ಸದ್ಯ ಕಳೆದ 22 ವರ್ಷಗಳಿಂದ ಕಟೀಲು ಮೇಳದ ಪ್ರದಾನ ಸ್ತ್ರೀವೇಷಧಾರಿಯಾಗಿ ಗುರುತಿಸಿಕೊಂಡಿದ್ದಾರೆ. ಸರಳ ಸಜ್ಜನ, ನಿರಾಡಂಬರ ವ್ಯಕ್ತಿತ್ವದ ಇವರು ಯಜಮಾನರ ಮತ್ತು ಕಲಾವಿದರ ವಲಯದಲ್ಲಿ ಸರ್ವರಿಗೂ ಪ್ರೀತಿಯ ಹಾಗೂ ಗೌರವದ ವ್ಯಕ್ತಿ.
|
ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ
ಕಾಸರಗೋಡು ತಾಲೂಕಿನ ವೈನಾಡಿನಲ್ಲಿ 1942ರಲ್ಲಿ ಕೃಷ್ಣ ಉಪಾದ್ಯಾಯ, ಭಾರತಿಯಮ್ಮನವರ ಸುಪುತ್ರನಾಗಿ ಜನಿಸಿದ ಉಪಾದ್ಯಾಯರು ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿ ತನ್ನ 15ನೇ ವಯಸ್ಸಿನಲ್ಲಿ ಯಕ್ಷರಂಗ ಪ್ರವೇಶಿಸಿದರು. ಇದು ಆ ಕಾಲದಲ್ಲಿ ಅವರ ಬಹುದೊಡ್ಡ ಶೈಕ್ಷಣಿಕ ಸಾಧನೆ. ಗುರು ಕಾಂತಪ್ಪ ಮಾಸ್ತರ್ ಮತ್ತು ತೋನ್ಸೆ ಜಯಂತ ಕುಮಾರರಲ್ಲಿ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನೂ, ಶಿರಿಯಾರ ಮಂಜುನಾಯ್ಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ನೀಲಾವರ ಮಹಾಬಲ ಶೆಟ್ಟರಿಂದ ನಡುತಿಟ್ಟಿನ ಕುಣಿತವನ್ನೂ, ಕೋಳ್ಯೂರು ರಾಮಚಂದ್ರ ರಾವ್, ಮಲ್ಪೆ ರಾಮದಾಸ ಸಾಮಗ, ದಾಮೋದರ ಮಂಡೆಚ್ಚ, ಬಲಿಪ ನಾರಾಯಣ ಭಾಗವತರಿಂದ ತೆಂಕಿನ ನಡೆಯನ್ನೂ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಗಜಾನನ ಹೆಗಡೆ ಕೆರೆಮನೆ ಶಂಭು ಹೆಗಡೆಯವರಿಂದ ಬಡಾಬಡಗಿನ ರಂಗತಂತ್ರವನ್ನೂ ಕಲಿತು ಮೂರೂ ತಿಟ್ಟುಗಳ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.
ಬಡಗುತಿಟ್ಟಿನ ಡೇರೆಮೇಳವಾದ ಸಾಲಿಗ್ರಾಮದಲ್ಲಿ 3 ವರ್ಷ ತಿರುಗಾಟ ಮಾಡಿದ ಇವರು ಅಲ್ಲಿ ಬಹುಬೇಡಿಕೆಯ ಕಲಾವಿದರಾಗಿದ್ದು ಯಜಮಾನರಾಗಿದ್ದ ಪಳ್ಳಿ ಸೋಮನಾಥ ಹೆಗಡೆಯವರ ನೆಚ್ಚಿನ ಕಲಾವಿದರಾಗಿದ್ದರು. ಮರವಂತೆ ನರಸಿಂಹ ದಾಸರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಕೆಮ್ಮಣ್ಣು ಆನಂದರ ಗಜಗಟ್ಟಿ ಹಿಮ್ಮೇಳದಲ್ಲಿ ಕುಮಟಾ ಗೋವಿಂದ ನಾಯ್ಕ್, ಮೂರೂರು ದೇವರು ಹೆಗಡೆ, ಶಿರಿಯಾರ ಮಂಜುನಾಯ್ಕ್, ಅರಾಟೆ ಮಂಜುನಾಯ್ಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ಮೂರೂರು ದೇವರು ಹೆಗಡೆ, ನೀಲಾವರ ಮಹಾಬಲ ಶೆಟ್ಟಿ, ರಾಮನಾಯರಿ ಮುಂತಾದ ಅಂದಿನ ಖ್ಯಾತನಾಮರೊಂದಿಗೆ ಕಲಾಸೇವೆ ಸಲ್ಲಿಸಿದ ಕೀರ್ತಿ ಇವರದು.
ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ``ವೀರ ವಜ್ರಾಂಗ`` ಪ್ರಸಂಗದಲ್ಲಿ ಇವರ ಮತ್ತು ದಿ. ಹಳ್ಳಾಡಿ ಮಂಜಯ್ಯ ಶೆಟ್ಟರ ಜೋಡಿವೇಷ ಅಪಾರ ಪ್ರೇಕ್ಷಕರನ್ನು ರಂಜಿಸಿ ತಿರುಗಾಟದುದ್ದಕ್ಕೂ ಪ್ರದರ್ಶಿಸಲ್ಪಡುತಿತ್ತು. ``ವಸಂತಸೇನೆ`` ಸಹ ಆ ಕಾಲದ ಬಹು ಪ್ರಸಿದ್ದ ಪ್ರಸಂಗ. ಬಳಿಕ ಇಡಗುಂಜಿ ಮೇಳದಲ್ಲಿ ಪೌರಾಣಿಕ ಪ್ರಸಂಗಳಲ್ಲಿ ವಿಶೇಷ ಪರಿಣತಿ ಪಡೆಯುವಲ್ಲಿ ಅಲ್ಲಿ ಅವರು ಮೂರುವರ್ಷ ಕೆರೆಮನೆ ಬ೦ಧುಗಳು ಗೋಡೆ ನಾರಯಣ ಹೆಗಡೆ, ಕೊಕ್ಕಡ ಈಶ್ವರ ಭಟ್, ನೆಬ್ಬೂರು ಭಾಗವತರೊಂದಿಗಿನ ತಿರುಗಾಟ ಸಹಕಾರಿಯಾಯಿತು.
ತೆ೦ಕು ತಿಟ್ಟಿನಲ್ಲೂ ಅಪ್ರತಿಮ ಸ್ತ್ರೀಪಾತ್ರಧಾರಿಯಾಗಿ ಪ್ರಸಿಧ್ಧಿ
ಬಳಿಕ ತೆಂಕಿನ ಕರ್ನಾಟಕ ಡೇರೆ ಮೇಳ ಸೇರಿದ್ದು ಅವರ ತೆಂಕುತಿಟ್ಟು ಯಕ್ಷಗಾನ ತಿರುಗಾಟದ ಸುವರ್ಣಯುಗ ನಿರಂತರ 13 ವರ್ಷ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರ ನೆಚ್ಚಿನ ಕಲಾವಿದರಾಗಿ, ಮೇರು ಕಲಾವಿದರ ಒಡನಾಡಿಯಾಗಿ ಪ್ರಸಿದ್ದಿ ಪಡೆದ ಇವರು ತುಳು ಹಾಗು ಕನ್ನಡ ಪ್ರಸಂಗಗಳಿಗೆ ಜೀವತುಂಬಿದ್ದಾರೆ. ದಾಮೋದರ ಮಂಡೆಚ್ಚರು, ದಿನೇಶ ಅಮ್ಮಣ್ಣಾಯರಂತ ಭಾಗವತರ ಹಿಮ್ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಮಿಜಾರು ಅಣ್ಣಪ್ಪ ಮುಂತಾದ ಕಲಾವಿದರೊಂದಿಗೆ ಕರ್ನಾಟಕ ಮೇಳದಲ್ಲಿ ಅನೇಕ ತುಳು ಪ್ರಸಂಗಗಳಲ್ಲಿ ನಾಯಕಿ ಪಾತ್ರ ಮಾಡಿ ಜನಮನ್ನಣೆ ಗಳಿಸಿದ್ದರು.
|
ಪುಂಡರೀಕಾಕ್ಷ ಉಪಾದ್ಯಾಯ |
 |
ಜನನ |
: |
1942 |
ಜನನ ಸ್ಥಳ |
: |
ವೈನಾಡು, ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ
|
ಕಲಾಸೇವೆ:
ತೆ೦ಕು, ಬಡಗು ಹಾಗೂ ಬಡಾಬಡಗು ಮೂರೂ ತಿಟ್ಟಿನಲ್ಲಿ ಅಪ್ರತಿಮ ಸ್ತ್ರೀವೇಷಧಾರಿಯಾಗಿ ೫೦ ವರ್ಷಗಳಿಗೂ ಮಿಕ್ಕಿ ಸಾಲಿಗ್ರಾಮ, ಕರ್ನಾಟಕ ಹಾಗೂ ಕಟೀಲು ಮೇಳಗಳಲ್ಲಿ ದುಡಿಮೆ.
|
ಪ್ರಶಸ್ತಿಗಳು:
- ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ಪ್ರಶಸ್ತಿ
- ಕಲ್ಕೂರ ಪ್ರತಿಷ್ಠಾನದ ಯಕ್ಷ ಸಿರಿ ಪ್ರಶಸ್ತಿ
- ಉಡುಪಿ ಕಲಾರ೦ಗದ ಕೋಟ ವೈಕು೦ಠ ಪ್ರಶಸ್ತಿ
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
|
|
|
ಕಳೆದ 21 ವರ್ಷಗಳಿಂದ ಕಲ್ಲಾಡಿಯವರ ಸುಪುತ್ರ ದೇವಿಪ್ರಸಾದ ಶೆಟ್ರ ಸಂಚಾಲಕತ್ವದ ಕಟೀಲು ಮೇಳದ ಪ್ರದಾನ ಸ್ತ್ರೀವೇಷಧಾರಿಯಾಗಿ ದೇವಿ ಮಹಾತ್ಮೆಯ ದೇವಿಯಾಗಿ ಭಾವಪೂರ್ಣವಾಗಿ ಅಭಿನಯಿಸುವಾಗ ಪ್ರೇಕ್ಷಕರು ಭಕ್ತಿ ಭಾವುಕರಾಗಿ, ಮೂಕವಿಸ್ಮಿತರಾಗಿ ಅವರ ಅಭಿನಯವನ್ನು ನೋಡುವುದನ್ನು ಇಂದಿಗೂ ಗಮನಿಸಬಹುದಾಗಿದೆ. ಸಾಕ್ಷಾತ್ ಶ್ರೀದೇವಿಯೇ ಅವತರಿಸಿದಂತೆ ಅಭಿನಯಿಸುವ ಚಾಕಚಕ್ಯತೆ ಅವರಿಗಿದೆ. ಹಿರಿಯ ಬಾಗವತರಾದ ಬಲಿಪರು, ಕುಬಣೂರು ಶ್ರೀದರರಾಯರು, ಪುರುಷೋತ್ತುಮ ಪೂಂಜರಲ್ಲದೆ ಯುವ ಬಾಗವತರಾದ ಪಟ್ಲ ಸತೀಶ ಶೆಟ್ಟಿ, ಪ್ರಸಾದ ಬಲಿಪರೊಂದಿಗೂ ಅಭಿನಯಿಸಿ ಎರಡು ಪೀಳಿಗೆಯ ಹಿಮ್ಮೇಳಕ್ಕೆ ಹೊಂದಿಕೊಂಡಿದ್ದಾರೆ. ಪೌರಾಣಿಕ ಪ್ರಸಂಗದ ಸ್ತ್ರೀವೇಷಗಳಿಗೆ ಸಮಾನ ನ್ಯಾಯ ಒದಗಿಸಿದ ಇವರ ಸೈರೇಂದ್ರಿ-ಸುದೇಷ್ಣೆ, ದಮಯಂತಿ-ಚೇದೀರಾಣಿ, ಅಂಬೆ-ಯೋಜನಗಂದಿ, ಸೀತೆ, ದ್ರುಪದಿ ಚಂದ್ರಮತಿ, ದಾಕ್ಷಾಯಣಿ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿವೆ.
ಉಡುಪಿಯ ಯಕ್ಷಗಾನ ಕಲಾರಂಗ ಬಡಗುತಿಟ್ಟಿನ ಇನ್ನೋರ್ವ ಸ್ತ್ರೀವೇಷಧಾರಿ ಕೋಟ ವೈಕುಂಠರ ಹೆಸರಿನಲಿ ನೀಡುವ ವೈಕುಂಠ ಪ್ರಶಸ್ತಿ ಸಹಿತ ನಾಡಿನಾದ್ಯಂತ ಹಲವಾರು ಸನ್ಮಾನಗಳಿಗೆ ಬಾಜನರಾದ ಇವರು ಹಲವಾರು ಕಲಾವಿದರಿಗೆ ರಂಗಮಾಹಿತಿ, ಪಾತ್ರಮಾಹಿತಿ ನೀಡಿ ಗುರುಸ್ಥಾನವನ್ನೂ ಗಳಿಸಿದ್ದಾರೆ. ಪತ್ನಿ ಶಶಿಕಲಾ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯೊಂದಿಗಿನ ಸಂತ್ರಪ್ತ ಜೀವನ ಸಾಗಿಸುತ್ತಿರುವ ಉಪಾದ್ಯಾಯರು ಸದಾ ಹಸನ್ಮುಖಿಯಾಗಿ ಯಕ್ಷಗಾನ ವಲಯದ ಮೂರುತಿಟ್ಟುಗಳಲ್ಲಿ ಅಜಾತಶತ್ರುವಾಗಿ ಬೆಳೆದು ನಿಂತವರು
****************
ನಳದಮಯ೦ತಿಯ ಚ೦ದ್ರಮತಿಯಾಗಿ ಭಾವಪೂರ್ಣ ಅಭಿನಯ
ಪುಂಡರೀಕಾಕ್ಷ ಉಪಾದ್ಯಾಯರವರ ಕೆಲವು ಭಾವಚಿತ್ರಗಳು
( ಚಿತ್ರ ಕೃಪೆ : ಕಟೀಲು ಸಿತ್ಲ ರ೦ಗನಾಥ ರಾವ್ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು )
ಸಮಾರ೦ಭವೊದರಲ್ಲಿ ಸನ್ಮಾನ
|
|
|