ಐವತ್ತರ ಸಡಗರದಲ್ಲಿ ಬಡಗು ಬೆಡಗಿನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಜುಲೈ 27 , 2014
|
ಬಡಗುತಿಟ್ಟಿನ ಬಯಲಾಟ ಪರಂಪರೆಯಲ್ಲಿ ಸಮಕಾಲೀನವಾಗಿ ಎದ್ದು ಕಾಣುವ ಹೆಸರು ವಿಶ್ವನಾಥ ಗಾಣಿಗರದ್ದು. ಸಿದ್ದಿ ಹಾಗೂ ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಇವರೊಬ್ಬ ಶಿಷ್ಟ ಕಲಾವಿದರು. ಅವರಲ್ಲಿ ಬಹಳಷ್ಟು ಗಮನಿಸ ಬೇಕಾಗಿದ್ದು ವೇಷಗಾರಿಕೆಯ ಸೊಗಸು ಮತ್ತು ಮಾತುಗಾರಿಕೆಯ ಮೋಡಿ. ಇವೆಲ್ಲದರಲ್ಲೂ ಅವರ ಸೋದರಮಾವ ರಾಜ್ಯ ಪ್ರಶಸ್ತಿ ವಿಜೇತ ಕೋಡಿ ಶಂಕರಗಾಣಿಗರ ಪ್ರಭಾವವನ್ನು ಗುರುತಿಸಬಹುದು, ನೂರಕ್ಕೆ ನೂರು ಯಕ್ಷಗಾನ ಶೈಲಿಯಲ್ಲಿ ಧ್ವನಿವರ್ಧಕವಿಲ್ಲದೆ ಬಹುದೂರ ಕೇಳಿಸುವ ಕಂಠ, ವ್ಯಾಕರಣಬಧ್ಧ ಪ್ರೌಢ ಶೈಲಿಯ ಮಾತುಗಾರಿಕೆ, ಸ್ಪಷ್ಟ ಉಚ್ಛಾರ, ನಿರರ್ಗಳ, ನಿರಾಯಾಸ, ನಿರಾತಂಕವಾಗಿ ಹರಿದು ಬರುವ ಮಾತುಗಾರಿಕೆ, ಶ್ರೇಷ್ಟ ನಿರೂಪಣಾ ಸಾಮರ್ಥ್ಯದಿಂದ ಗಾಣಿಗರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ.
|
ಬಾಲ್ಯ, ಯಕ್ಷಗಾನ ವ೦ಶದ ಬಳುವಳಿ
ಬಡಗುತಿಟ್ಟು ಯಕ್ಷಗಾನಕ್ಕೆ ಹಾರಾಡಿ ಕಲಾವಿದರ ಕೊಡುಗೆ ಅಪಾರ. ಈ ಪರಂಪರೆಯ ಪ್ರಾತಸ್ಮರಣೀಯರಾದ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಾಣ ಗಾಣಿಗರ ಮುಂತಾದ ಏಳು ತಲೆಮಾರಿನ ಕಲಾವಿದರ ವಂಶದಿಂದ ಬಂದ ಇವರು ರಾಮ ಗಾಣಿಗರ ಮೊಮ್ಮಗ, ಹಾಗೂ ಕುಷ್ಟ ಗಾಣಿಗರ ಅಳಿಯನಾದ ಕೋಡಿ ಶಂಕರ ಗಾಣಿಗರ ಸೋದರಳಿಯ. ಅಳಿಯಕಟ್ಟಿನ ಸಾದ್ಯತೆಯಂತೆ ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದಿದೆ.
ಕುಂದಾಪುರ ತಾಲೂಕಿನ ತ್ರಾಸಿ ಶ್ರೀನಿವಾಸ ಗಾಣಿಗ ಮತ್ತು ಲಕ್ಷ್ಮಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ನಾಲ್ಕನೇ ತರಗತಿ ವಿದ್ಯಾಬ್ಯಾಸ ಮುಗಿಸಿ ಕಡು ಬಡತನದಲ್ಲಿ ಏಳು ವರ್ಷ ಹೊಲಿಗೆ ಕೆಲಸ ನಿರ್ವಹಿಸಿದರು. ಬಣ್ಣದ ವೇಷದಾರಿ ಬೆಲ್ತೂರು ರಾಮ ಬಳೆಗಾರರ ಹೂವಿನ ಕೋಲಿನ ಕಲಾವಿದರಾಗಿ ಭಾಗವಹಿಸಿದ ಇವರಲ್ಲಿ ಯಕ್ಷಗಾನದ ಆಸಕ್ತಿ ಮೊಳೆಯತೊಡಗಿತು. ಇವರ ಆಸಕ್ತಿಯನ್ನು ಸಹಜವಾಗಿ ತಿಳಿದ ಹಾರಾಡಿ ಕಲಾವಿದರು ಹಾಗು ಮಾವ ಶಂಕರ ಗಾಣಿಗರು ಬಾಲಕನಿಗೆ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿಸಿದರು.
ಯಾವುದೇ ಗುರುಮುಖೇನದ ವಿದ್ಯೆ ಇಲ್ಲದೆ ನಾವುಂದ ಮಹಾಬಲ ಗಾಣಿಗ, ಹಾರಾಡಿ ಸರ್ವ ಗಾಣಿಗ, ಜಮದಗ್ನಿ ಶೀನ, ಆಲೂರು ಸುರೇಂದ್ರ ಮುಂತಾದವರಿಂದ ಕಂಡು ಕೇಳಿ ಕಲಿತದ್ದು ಇವರ ಹೆಚ್ಚುಗಾರಿಕೆ. ಯಾವುದೇ ಗುರುಮುಖೇನ ಕಲಿತವರಿಗೆ ಕಲಿಸುವಷ್ಟು ಸಾಮರ್ಥ್ಯ ಇವರಿಗಿದೆ. ನಿರಂತರ ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಕಳೆದ 21 ವರ್ಷದಿಂದ ಸೌಕೂರು ಮೇಳದ ಎರಡನೇ ವೇಷಧಾರಿ ಹಾಗೂ ಸಂಚಾಲಕರ ಪ್ರತಿನಿಧಿಯಾಗಿ ಸಹಕಲಾವಿದರ ಹಾಗೂ ಯಜಮಾನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಸವ್ಯಸಾಚಿ ಕಲಾವಿದ
ಕರ್ಣಾರ್ಜುನದ ಕರ್ಣ, ಜಾಂಬವತಿ ಕಲ್ಯಾಣದ ಜಾಂಬವ, ಪರ್ವದ ಬೀಷ್ಮ , ಅತಿಕಾಯ, ಅರ್ಜುನ, ಶಲ್ಯ,, ಸುಧನ್ವ, ರಾವಣ, ಜಮದಗ್ನಿ, ಈಶ್ವರ ಮುಂತಾದ ಪಾತ್ರಗಳಲ್ಲಿ ಹಾರಾಡಿ ಕಲಾವಿದರ ವೇಷದ ಸೊಗಸನ್ನು ಗುರುತಿಸಬಹುದಾಗಿದೆ. ಪಾರ್ಟಿನ ವೇಷಗಳನ್ನು ಅಷ್ಟೇ ಸೊಗಸಾಗಿ ಅಭಿನಯಿಸುವ ಇವರ ಕಾಲನೇಮಿ, ಕಂಸ, ಶುಂಭ, ಮದು-ಕೈಟಭ ಮುಂತಾದ ವೇಷಗಳು ಅಪಾರ ಜನ ಮನ್ನಣೆ ಗಲಿಸಿವೆ. ಹೊಸ ಪ್ರಸಂಗಗಳು ಯಕ್ಷಗಾನವನ್ನು ಆಕ್ರಮಿಸಿದಾಗಲೂ ಎದೆ ಗುಂದದ ಇವರ ನಾಗಶ್ರೀಯ ಶಿಥಿಲ, ಚಿತ್ರಾವತಿಯ ಹೇಮಾಂಗದ, ಧರ್ಮ ಸಂಕ್ರಾಂತಿ, ಮೇಘ ಮಯೂರಿ, ಭಾನು ತೇಜಸ್ವಿ ಮುಂತಾದ ಹೊಸ ಪ್ರಸಂಗಗಳ ವೇಷಗಳಿಗೆ ಜೀವ ತುಂಬಿದ್ದಾರೆ.
|
ಕೋಡಿ ವಿಶ್ವನಾಥ ಗಾಣಿಗ |
 |
ಜನನ |
: |
1963 |
ಜನನ ಸ್ಥಳ |
: |
ಕೋಡಿ, ಕುಂದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ ಮತ್ತು ಸೌಕೂರು ಮೇಳಗಳಲ್ಲಿ ಪ್ರಧಾನ ವೇಷಧಾರಿಯಾಗಿ ದುಡಿಮೆ.
|
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
|
|
|
ಮುಕ್ಕಾಲು ಅಡಿ ಎತ್ತರದ ಮುಂಡಾಸು ದಾಖಲೆ
ಇತ್ತೀಚಿಗೆ ಶಿವಮೊಗ್ಗದಲ್ಲಿ ನೆಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಯಕ್ಷಗಾನದಲ್ಲಿ ದಾಖಲೆ ಎನ್ನಬಹುದಾದ ಮೂರು ಮುಕ್ಕಾಲು ಅಡಿ ಎತ್ತರದ ಮೀನಾಕ್ಷಿ ಕಲ್ಯಾಣದ ಶೂರಸೇನನ ಮುಂಡಾಸು ಪ್ರದರ್ಶಿಸಿ ವಿಶಿಷ್ಟ ದಾಖಲೆ ಮಾಡಿದ ಸಂದರ್ಭದಲ್ಲಿ ಹಲವಾರು ಸಂಘಟನೆಗಳು ಅವರನ್ನು ಸನ್ಮಾನಿಸಿವೆ, ಅಟ್ಟೆಯಿಂದಲೇ ಮುಂಡಾಸು ಕಟ್ಟುವ ಕೆಲವೇ ಕಲಾವಿದರಲ್ಲಿ ಇವರೂ ಸಹ ಒಬ್ಬರು. ಯಕ್ಷಗಾನ ಕಲಾವಿದರಾಗಿ ಉತ್ತಮ ಸಂಘಟಕರಾಗಿ ಮಿತಬಾಷಿ, ಸ್ನೇಹ ಜೀವಿಯಾಗಿರುವ ಇವರಿಗೆ ಹಲವಾರು ಸನ್ಮಾನಗಳು ಸಂದಿವೆ. ಹಾರಾಡಿ ಕಲಾವಿದರ ಒಡನಾಡಿ ಮಿತ್ರರಾದ ಹೆಬ್ಬಾಡಿ ಕೊಂಡಾಳಬೆಟ್ಟು ಅನಂತ ಶೆಟ್ಟರ ಸಂಸ್ಮರಣಾ ಪ್ರಸಸ್ತಿ ಸಹಿತ ಹಲವಾರು ಪ್ರಸಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಕುಂದಾಪುರದಲ್ಲಿ ನಡೆಯುವ ಸಾರ್ವಜನಿಕ ಸನ್ಮಾನ ಇವರ ಕಿರೀಟಕ್ಕೊಂದು ಗರಿ ಮೂಡಿಸಿದೆ.
****************
ಕೋಡಿ ವಿಶ್ವನಾಥ ಗಾಣಿಗರವರ ಕೆಲವು ಭಾವಚಿತ್ರಗಳು
|
|
|