ಬಡಗು ಪರಂಪರೆಯ ಹಿರಿಯ ಕಲಾವಿದ ಹೊಳೆಮಗೆ ನಾಗಪ್ಪ ಹಾಸ್ಯಗಾರ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಆಗಸ್ಟ್ 19 , 2014
|
ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಹಾಸ್ಯಗಾರರ ಸಾಲಿನಲ್ಲಿ ಕೇಳಿಬರುವ ಹಿರಿಯ ಹೆಸರು ಹೊಳೆಮಗೆ ನಾಗಪ್ಪ ಹಾಸ್ಯಗಾರರದ್ದು. ಕಲಾಭಿಮಾನಿಗಳಿಂದ ಹೊಳೆಮಗೆ ಹಾಸ್ಯಗಾರರೆಂದೆ ಕರೆಯಲ್ಪಡುವ ಇವರದ್ದು ಹಾಸ್ಯ ಪರಂಪರೆಯಲ್ಲಿ ಹಿರಿಯ ಹೆಸರು. ವಿದುಷ ವಿದೂಷಕನಾಗಿ ಬಡಗು ರಂಗಸ್ಥಳವನ್ನು ದೀರ್ಘಕಾಲ ಆಳಿದ ಇವರು ಯಕ್ಷಗಾನ ರಂಗದಲ್ಲಿ ನಗೆ ವ್ಯಂಜನದ ರಮ್ಜನೆಯನ್ನು ಕಲಾರಸಿಕರಿಗೆ ಉಣಬಡಿಸಿದವರು.
ಕಪ್ಪಗಿನ ತೆಳ್ಳನೆ ಪಾದರಸದ ವ್ಯಕ್ತಿತ್ವದ ಇವರು ತಮ್ಮ ಚುರುಕು ಸ್ಪಷ್ಟ ಮಾತು, ಹಾವ-ಭಾವ, ಹಾಸ್ಯಕೊಪ್ಪುವ ಸ್ವರಭಾವದಿಂದ ಹಾಸ್ಯ ಪಾತ್ರಕ್ಕೆ ಜೀವತುಂಬಿ ಖ್ಯಾತಿ ಪಡೆದವರು. ಸುದೀರ್ಘ 55 ವರ್ಷ ಬಡಗುತಿಟ್ಟು ಹಾಸ್ಯ ಪಾತ್ರಕ್ಕೆ ಗಣನೀಯ ಕೊಡುಗೆ ನೀಡಿದ ಇವರು ಎಲ್ಲಿಯೂ ಪ್ರಚಾರ ಬಯಸದ ಎಲೆಮರೆಯ ಕಾಯಿಯಂತೆ ಬದುಕುತಿದ್ದಾರೆ.
|
ಸುಸಂಸ್ಕ್ರತ ಪಾತ್ರ ಪೋಷಣೆ
ಹಾಸ್ಯಗಾರರಲ್ಲಿ ಪ್ರಮುಖವಾಗಿ ಎರಡು ವಿಧ. “ಏನಕೇನಾ ಪ್ರಕಾರೇಣಾ” ಎಂಬಂತೆ ಏನಾದರೂ ಮಾಡಿ ಪ್ರೇಕ್ಷಕರನ್ನು ನಗಿಸಿದರೆ ಸಾಕು ಎಂಬ ಧೋರಣೆಯಿಂದ ಅಶ್ಲೀಲ ನುಡಿಗಳನ್ನು ಆಡುತ್ತಲೇ ಇರುವವರು ಮೊದಲನೆ ವರ್ಗಕ್ಕೆ ಸೇರಿದರೆ ರಂಗಧರ್ಮವನ್ನು ಮೀರದೆ ಸಭ್ಯತೆಯ ಎಲ್ಲೆ ಮೀರದೆ ಸುಸಂಸ್ಕ್ರತವಾಗಿ ತನ್ನ ಪಾತ್ರ ಪೋಷಣೆ ಮಾಡುತ್ತಾ ತನ್ಮೂಲಕವಾಗಿ ಪ್ರೇಕ್ಷಕರನ್ನು ಗೆಲ್ಲುವುದಕ್ಕೆ ಯತ್ನಿಸುವವರು ಎರಡನೇ ವರ್ಗ. ಈ ವರ್ಗಕ್ಕೇ ಸೇರಿದ ಹಿರಿಯ ಕಲಾವಿದರಲ್ಲಿ ಮುಂಚೂಣಿಯಲ್ಲಿರುವವರು ಹೊಳೆಮಗೆ ಹಾಸ್ಯಗಾರರು.
ತಾನು ನಗದೆ ಇತರರನ್ನು ನಗಿಸುವುದೇ ಹಾಸ್ಯ ಕಲಾವಿದರ ಧ್ಯೇಯ ಎಂಬುದನ್ನು ಮನಗಂಡ ಇವರ, ಇತ್ತೀಚಿಗೆ ರಂಗದಿಂದ ಮರೆಯಾಗುತ್ತಿರುವ ಕೀಚಕ ವಧೆಯ ಚಿಕ್ಕನ ಪಾತ್ರ ಮತ್ತು ಚಿತ್ರಸೇನ ಕಾಳಗದ ಬ್ರಾಹ್ಮಣನ ಪಾತ್ರವೆರಡೇ ಸಾಕು ಇವರ ರಂಗ ಕೌಶಲ್ಯವನ್ನು ನಿರ್ಣಯಿಸಲು. ತನ್ನ ಸುದೀರ್ಘ ಕಾಲದ ತಿರುಗಾಟದಲ್ಲಿ ಇವರು ನಿರ್ವಹಿಸಿದ ವಾಲ್ಮೀಕಿ ವೃಧ್ಧ ಬ್ರಾಹ್ಮಣ, ನಾರದ, ಅಲ್ಲದೆ ಪ್ರಾಹ್ಲಾದ ಚರಿತ್ರೆಯ ದಡ್ಡ, ಹಾವಾಡಿಗ, ಗಾರುಡಿ, ವಿಜಯ, ಕಾಶಿಮಾಣಿ, ರಕ್ಕಸದೂತ ಇವುಗಳು ಹೊಳೆಮಗೆಯವರಿಂದ ಹೊಸ ಸೃಷ್ಟಿ ಪಡೆದಿದ್ದವು.
ಜೋಡಾಟದ ಹಾಸ್ಯ ಪಾತ್ರಗಳಿಗೆ ನಾನಾ ರೀತಿಯ ಗಿಮಿಕ್ಸ್ ಗಳನ್ನು ಸಂಯ್ಯೋಜಿಸಿ ಎದುರು ಮೇಳದ ಹಾಸ್ಯವನ್ನು ಕಾಣದಂತೆ ಮಾಡುವಲ್ಲಿ ಇವರು ನಿಸ್ಸೀಮರು. ಕಿತ್ತು ತಿನ್ನುವ ಬಡತನದಿಂದ ಮೇಲೆಬಂದ ಇವರು ಎಂದಿಗೂ ರಂಗದಲ್ಲಿ ಇದನ್ನು ತೋರಗೊಟ್ಟವರಲ್ಲ.
ಬಾಲ್ಯ, ಶಿಕ್ಷಣ ಮತ್ತು ಪಾದಾರ್ಪಣೆ
ಕುಂದಾಪುರ ತಾಲೂಕು ಕಳವಿನ ಬಾಗಿಲು ಹೊಳೆಮಗೆ ಎಂಬ ಕುಗ್ರಾಮದಲ್ಲಿ ದೊಟ್ಟನಾಯ್ಕ ಮತ್ತು ಚಂದು ಮೊಗೇರ್ತಿ ಎಂಬ ದಂಪತಿಗಳ ಬಡ ಮೊಗವೀರ ಜನಾಂಗದಲ್ಲಿ ಜನಿಸಿದ ನಾಗಪ್ಪನವರಿಗೆ ಈಗ ಸರಿಸುಮಾರು 66ರ ಹರೆಯ.
|
ಹೊಳೆಮಗೆ ನಾಗಪ್ಪ ಹಾಸ್ಯಗಾರ |
 |
ಜನನ |
: |
1947 |
ಜನನ ಸ್ಥಳ |
: |
ಹೊಳೆಮಗೆ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಮಾರಣಕಟ್ಟೆ, ಅಮೃತೇಶ್ವರಿ, ಸೌಕೂರು, ಕಳುವಾಡಿ, ಕಮಲಶಿಲೆ, ಹಾಲಾಡಿ, ಮಡಾಮಕ್ಕಿ, ಪೆರ್ಡೂರು, ಬಗ್ವಾಡಿ, ನೀಲಾವರ, ದರ್ಮಸ್ಥಳ ಮೇಳಗಳಲ್ಲಿ 55 ವರ್ಷ ಪರಿಶುಧ್ಧ ಹಾಸ್ಯಗಾರನಾಗಿ ಗಣನೀಯ ಕೊಡುಗೆ ತಿರುಗಾಟ
|
|
|
ಆದರೆ ಇವರನ್ನು ಯಾವುದೇ ಸಂಸ್ಥೆ ಯಾ ಸರಕಾರ ಯಾವುದೇ ಸನ್ಮಾನ ಅಥವಾ ಮಾಸಾಸನ ನೀಡಿ ಗೌರವಿಸಿಲ್ಲ ಎನ್ನುವುದೇ ದೌರ್ಬಾಗ್ಯ. ಕಡುಬಡತನದಲ್ಲೇ ಬೆಳೆದ ಇವರು ಪರಿಸರದಲ್ಲಿ ನಡೆಯುತಿದ್ದ ಬಯಲಾಟದಿಂದ ಮನಸೂರೆಗೊಂಡು, ಯಕ್ಷಗಾನ ವೃತ್ತಿ ಬದುಕಿಗೆ ಮನಮಾಡಿದ ಇವರು 13ರರ ಹರೆಯದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿದರು.
ಉಡುಪಿ ಯಕ್ಷಗಾನ ಕೇಂದ್ರ ಸೇರಿದ ಇವರು ಗುರು ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರಿಂದ ಶಿಷ್ಯತ್ವ ಸ್ವೀಕರಿಸಿ ಪಾರಂಪರಿಕ ಯಕ್ಷ ಶಿಕ್ಷಣ ಪಡೆದು ಸಂಪನ್ನ ಕಲಾವಿದರಾದರು. ಬೇಲ್ತೂರು ಕುಷ್ಟನವರಿಂದ ಹೆಜ್ಜೆಗಾರಿಕೆ ಕಲಿತು ಹಿರಿಯ ಹಾಸ್ಯಗಾರರಾದ ವಂಡ್ಸೆ ನಾಗಯ್ಯ ಶೆಟ್ಟರ ಒಡನಾಡಿಯಾಗಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಮಾರಣಕಟ್ಟೆ ಮೇಳದಲ್ಲಿ 12 ವರ್ಷ ತಿರುಗಾಟ ಮಾಡಿ ಬಳಿಕ ಅಮೃತೇಶ್ವರಿ, ಸೌಕೂರು, ಕಳುವಾಡಿ, ಕಮಲಶಿಲೆ, ಹಾಲಾಡಿ, ಮಡಾಮಕ್ಕಿ, ಪೆರ್ಡೂರು, ಬಗ್ವಾಡಿ, ನೀಲಾವರ ಹೀಗೆ 53 ವರ್ಷ ತಿರುಗಾಟ ಮಾಡಿದ ಇವರು ತೆಂಕಿನ ದರ್ಮಸ್ಥಳ ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿ ಉಭಯತಿಟ್ಟಿನ ಸಮರ್ಥ ಹಾಸ್ಯಗಾರರಾಗಿ ಮೂಡಿಬಂದಿದ್ದಾರೆ.
ಜೋಡಾಟದ ಹುಲಿ
ಹಾಸ್ಯ ಭೂಮಿಕೆಗೊಪ್ಪುವ ಆಳಂಗ ಭಾಷೆ, ದ್ವನಿ, ಹಾವ-ಭಾವ ನ್ರತ್ಯ ಅಭಿನಯದಿಂದ ಸೊಗಯಿಸುವ ನಾಗಪ್ಪನವರು ರಂಗವೇರಿದರೆ ಅಪಾರ ಪ್ರೇಕ್ಷಕ ವಲಯವಲ್ಲದೆ ಇದಿರು ಪಾತ್ರಧಾರಿಯು ಪಕ್ಕನೆ ತುಟಿಯಗಲಿಸಿ ನಕ್ಕು ಬಿಡುವ ಸನ್ನಿವೇಷ ಸೃಷ್ಟಿಯಾಗುತ್ತದೆ. ಬಬ್ರುವಾಹನ ದೂತ, ಕೌಂಡ್ಲೀಕ ದೂತನ ಪಾತ್ರಗಳನ್ನು ಜೋಡಾಟಗಳಲ್ಲಿ ವಿಶಿಷ್ಟವಾಗಿ ಬಿಂಬಿಸುವ ಇವರು ಜೋಡಾಟದ ಹುಲಿಯೇಂದೇ ಖ್ಯಾತರು. ಯಕ್ಷಗಾನದಲ್ಲಿ ಹಾಸ್ಯವೆಂದರೆ ಕೇವಲ ಪ್ರೇಕ್ಷಕರನ್ನು ನಗಿಸುವುದು ವಿನಹ ಕತೆಯ ನಡೆಗೆ ಆತನ ಪಾತ್ರ ಪೂರಕವಲ್ಲ ಎನ್ನುವ ಭಾವನೆಯಿದ್ದ ಕಾಲದಲ್ಲಿ, ಹೊಸ ಪ್ರಸಂಗ ಮತ್ತು ಕ್ಷೇತ್ರ ಮಹಾತ್ಮೆಗಳಲ್ಲಿ ಅವರ ಪೂರಕ ಅಭಿನಯದಿಂದ ಆ ಭಾವನೆಯನ್ನು ಹೋಗಲಾಡಿಸಿದವರು. ಉಡುಪಿಯ ಯಕ್ಷಗಾನ ಕೇಂದ್ರ ನಡೆಸಿದ ಹಾಸ್ಯಪಾತ್ರಗಳ ದಾಖಲೀಕರಣದಲ್ಲಿ ತನ್ನ ವಿಶಿಷ್ಟ ಹಾಸ್ಯ ಪಾತ್ರದಿಂದ ವಿದ್ವಾಂಸರ ಮನಗೆದ್ದ ಇವರಿಗೆ ದಾಖಲಿಸುವಂತ ಯಾವುದೇ ಗೌರವ ಪ್ರಶಸ್ತಿ ದೊರೆತಿಲ್ಲದಿದ್ದುದು ದೌರ್ಬಾಗ್ಯವೇ ಸರಿ. ನಿರಂತರ ಆರು ದಶಕಗಳಿಂದ ಕಲಾ ಸೇವೆ ಗೈದಿರುವ ಇವರನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಾಗಿದೆ.
|
|
|